ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿಯ L ಯಾರು ?

ಬಿ ಜಿ ಸಿದ್ಧಲಿಂಗಮೂರ್ತಿ

L ಕಾದಂಬರಿಯಾದರೂ, ಹೆಸರಿನಷ್ಟೇ ಕೌತುಕವನ್ನು ಎಲ್ಲಾ ಪಾತ್ರಗಳಲ್ಲೂ ಇಟ್ಟಿದೆ. ಅದಕ್ಕಾಗಿ ಓದಿದ ನಂತರವು ಏಕಾಂತದಲ್ಲಿ L ಕಾಡುತ್ತದೆ .

ಜೋಗಿಯವರು L ಎಂಬ ಕವಿಯ ಕಥೆಗೆ ಅದರದೇ ಅಸ್ಮಿತೆ, ಕೌತುಕ ತಂದು, ಓದುಗರಿಗೆ L ಎಂಬ ಕವಿಯ ಆವಿಷ್ಕಾರ ಮಾಡಲು ಬಿಟ್ಟು ಗೆದ್ದಿದ್ದಾರೆ. ಅಷ್ಟಕ್ಕೂ L ಬರಿ ಕವಿಯೆ, ಭಾವನೆಯೆ, ನಮ್ಮ ಸುಪ್ತ ಆಸ್ಮಿತೆಯೆ?

ವಾಹ್! ಈ ಕಾದಂಬರಿ ಓದಿದ ನಂತರ ಶೂನ್ಯತೆಯಲ್ಲಿ ಧನ್ಯತಾ ಭಾವ ಬಾರದಿರದು…
“ಒಂದು ಹಂತ ದಾಟಿದ ಮೇಲೆ ಸರಾಗವಾಗುತ್ತದೆ… ಕ್ರಮೇಣ ಅರ್ಥ ಕಳೆದುಕೊಳ್ಳುತ್ತಾ ಹೋಗುವ ಪ್ರಣಾಳಿಕೆಯಂಥ ಪದ್ಯದ ಹಾಗೆ ನಾನು ಗಂಭೀರವಾಗುತ್ತ ಹೋದೆ ”
ಮೇಲಿನ ಸ್ಥಿತಿ , ಸ್ಥಿತಿವಂತ ಸಾದಕನದು ಎಂದೆನಿಸಿದರೆ , ಅದು ಅವನ ಜಡತ್ವದ ಸಂಕೇತವಲ್ಲವೇ ಎಂದೂ ಅನಿಸಿರಲಾರದು.

ಜಾನಕಿ ಕಾಲಂ ಜೋಗಿ L ಅವರನ್ನು ಅವರೂ ನಿಲುಕಲರಾದ ಎತ್ತರಕ್ಕೆ ನಿಲ್ಲಿಸಿ ವಿಮರ್ಶಿಸಲು ಹೇಳಿದ್ದಾರೆ ? ಎಲ್ಲೂ ಜೋಗಿಯವರ ಕವಿತೆಗಳಿಗೂ L ಬಂದಿಯಾಗುವುದಿಲ್ಲ.

ಜೋಗಿಯವರದೇ ಒಂದು ಹಳೆಯ ಪ್ರಶ್ನೆಯಿದೆ. “ಲೇಖಕ ಶ್ರೇಷ್ಠನೋ, ಓದುಗ ಶ್ರೇಷ್ಠನೋ ?”, ಒಬ್ಬ ಲೇಖಕ ಒಮ್ಮೆ ತನ್ನ ಒಡಲಾಳದ ಬಯೋಗ್ರಫಿ ಅಥವಾ ಅವನ ಬಗೆಗಿನ ಕೌತುಕ ಬಿಟ್ಟುಕೊಟ್ಟರೆ ಈ ಜಿಜ್ಞಾಸೆ ಇರದೇ ಓದುಗರ ಸೋಲಿಸಿ ಗೆಲ್ಲಬಹುದೇನೋ ? L ಈ ರೀತಿ ಹಲವು ಜಿಜ್ಞಾಸೆ ತಂದು ಓದುಗರನ್ನು ಗೆಲ್ಲಿಸುವ , ಕಾಡಿ “ಮೋಹಿನಿ” ಸಬಲ್ಲಂತ ಕಾದಂಬರಿ.

ಜೋಗಿಯವರು ಕಾಯಿಸಿ ಓದಿಸುವ ಕಾದಂಬರಿಕಾರರಾಗುತ್ತಿರುವುದು ತೋರುತ್ತಿದೆ. ಇದೆ ಖುಷಿಯ ಸಂಗತಿ . ಅವರಿಗೆ ಎಂದಿಗೂ ಓದುಗರ ಸೆಳೆವ ಛಾತಿಯಿದೆ. ಈಗ ಓದುಗರನ್ನು ಬೇಯಿಸುವ ಯಜ್ಞ ಶುರುಮಾಡಿದ್ದಾರೆ . ಕೊನೆಗೆ ಗೆಲ್ಲುವುದು ಓದುಗರಾದ ನಾವೇ …

ಧನ್ಯವಾದಗಳು… L

===

ಜೋಗಿಯವರ L ಬಗ್ಗೆ ನಾನು ಬರೆದು ಕೊಂಡಿದ್ದು.

ವಿಷ್ಣು ಭಟ್ ಹೊಸ್ಮನೆ

L-
ನೀವು ಎಲ್ಲೇ ಇದ್ದರೂ ಎಲ್ಲೆಲ್ಲೋ ಇದ್ದರೂ ಒದುಗರೇ ಆಗಿದ್ದರೂ ಓದುಗರಲ್ಲದೇ ಇದ್ದರೂ ಒಮ್ಮೆ ಎಲ್ ನ್ನು ಓದಿ ಮತ್ತು  ಈಗಲೇ ಓದಿ. ಈ ಎಲ್ ಹೊಸ ಪರಿ ಮತ್ತು ಹೊಸ ಗರಿ!

ಇದರಲ್ಲೊಂದು ಮಾತಿದೆ, ‘ನನಗೆ ಮಕ್ಕಳಿಲ್ಲ. ಕವಿಯಾದ್ದರಿಂದ ಮಕ್ಕಳು ಸತ್ತರೆ ಎಷ್ಟು ದುಃಖವಾಗುತ್ತದೆ ಅನ್ನುವುದು ಗೊತ್ತಿದೆ.’ ಹಾಗಾದರೆ ಈ ಕವಿ ಏನೇನಲ್ಲಾ ಕಾಣುತ್ತಾನೆ ಮತ್ತು ಅದಕ್ಕಿಂತ ತೀವ್ರವಾಗಿ ಅನುಭವಿಸುತ್ತಾನೆ. ಮಕ್ಕಳಿಲ್ಲದೆಯೂ ಆತ ಆ ನೋವನ್ನು ಸಂಪೂರ್ಣವಾಗಿ ಅನುಭವಿಸಬಲ್ಲ. ಪದ್ಯ ಬರೆಯಬಲ್ಲ. ಈ ಎಲ್ ಬರೆಯಲೇ ಬೇಕು ಎಂದುಕೊಂಡಿದ್ದನ್ನು ಬರೆಯುತ್ತಾನೆ. ಬರೆಯಲೇ ಬಾರದು ಅಂದುಕೊಂಡಿದ್ದನ್ನೂ ಬರೆದು ನೋಯುತ್ತಾನೆ. ಬರೆಯದೇ ಇದ್ದದ್ದು ಮಾತ್ರ ತನ್ನದು ಎಂದುಕೊಂಡು ಸುಖವನ್ನು ಅರಸುತ್ತಾನೆ. ಈ ಎಲ್ ಬದುಕಿನ ಕವಿತೆ.

ಬದುಕು ಇಷ್ಟು ತೀವ್ರವಾದ ಕಥೆಯೂ ಆಗಿ ಕವನವೂ ಆಗಿ ತಟ್ಟಬಲ್ಲದು ಎಂಬುದನ್ನು ಬಿಡಿಸಿ ತೋರಿಸಿದ್ದು ಈ ಎಲ್. ಬದುಕಿನ ಪ್ರತಿಕ್ಷಣಗಳೂ ಕತೆಗಿಂತಲೂ ಹೆಚ್ಚಾಗಿ ಕಾಡುವ ಕವನಗಳಾ? ಎಂದೆನಿಸಿತು. ಅಪ್ಪನೆಂಬ ಬದುಕಿನ ಹುಟ್ಟು, ಲೀಲಾವತಿ ಎಂಬ ಪಯಣ ಮತ್ತು ನಾನು ಎಂಬ ಸಾವು. ಎಲ್ಲವೂ ಕಥೆಗಳೇ. ಇಲ್ಲಿ ಕವನವಾಗಿದೆ. ಎಲ್ ನ ಅಪ್ಪನಂತಹ ಅಪ್ಪಂದಿರು ಕಣ್ಮುಂದೆ ಬರುತ್ತಾರೆ. ಮಗನ ಯೌವ್ವನವನ್ನು ಕೊಂದಿರುತ್ತಾರೆ. ಅಮ್ಮ ಪರೋಕ್ಷವಾಗಿ ಹನಿಹನಿಯಾಗಿ ಈ ಯೌವ್ವನಕ್ಕೆ ವಿಷವಿಕ್ಕಿರುತ್ತಾಳೆ.

ಅದೇ ಸಮಯಕ್ಕೆ ಎಲ್ ಮತ್ತು ಎಲ್ ನಂತವರ ಯೌವ್ವನ ವಿಲವಿಲನೆ ಒದ್ದಾಡುತ್ತ ಸತ್ತಿರುತ್ತದೆ. ಎಲ್ ನ ಪ್ರೀತಿಯಂಥ ಪ್ರೀತಿ ಹುಟ್ಟುತ್ತದೆ. ಅವನೋ ಅವಳೋ ಪ್ರೀತಿಯನ್ನು ಹೇಳಿಕೊಂಡ ಕೂಡಲೇ ಪ್ರೀತಿ ಸಾಯುತ್ತದೆ. ಎಲ್ ಪ್ರೀತಿಗಾಗಿ ಹಂಬಲಿಸುತ್ತಾನೆ. ಹೇಳಿಕೊಳ್ಳದಿರುವ ಸುಖ ಅವನ ಆನಂದ. ಈ ಆನಂದ ಅವನೊಬ್ಬನದೇ ಅಲ್ಲ, ಪ್ರೀತಿಯನ್ನು ನಿವೇದಿಸಿಕೊಳ್ಳದೆ ಹಾಗೇ ಉಳಿಸಿಕೊಂಡ ಎಲ್ಲರದ್ದೂ. ಪ್ರೀತಿಯನ್ನು ಒಪ್ಪಿಸಿದ ಅಥವಾ ಒಪ್ಪಿಕೊಂಡ ಬಳಿಕ ಆತ/ಅವಳು ಬಂಧಿ!

ಎಲ್ ಎಂಬವ ಬದುಕಿನ ಬಿಂಬ. ಅಪ್ಪ-ಅಮ್ಮ ಕವನವಾಗುತ್ತಿದ್ದ ಕಾಲ ಮುಗಿಯುತ್ತಿದ್ದಂತೆ ಆ ಜಾಗಕ್ಕೆ ಅವಳು ಬಂದಳು. ಅವಳ ಜಾಗದಲ್ಲಿ ಸ್ವತಃ ಎಲ್ ಬರುವ ಹೊತ್ತಿಗೆ ಅವನು ಕವನ ಬರೆಯುವುದನ್ನೇ ನಿಲ್ಲಿಸುವ ಯೋಚನೆಗೆ ಬರುತ್ತಾನೆ. ಅವನು ಅಪ್ರಕಟಿತ ಕವನ.

ಎಲ್ ಎಂದರೆ ಲೋಕ, ಲೀಲೆ, ಲಯ, ಲಕ್ಷಣ, ಲವಲವಿಕೆ, ಲೋಭ, ಲಕ್ಷ್ಯ, ಲಾಲಿ, ಲಾಲಿತ್ಯ,….

***
ಎಲ್ ಓದುವಾಗ ಜೋಗಿಯವರ ಸಾವು ಎಂಬ ಕವನವನ್ನು ವಿಕಾಸ್ ನೇಗಿಲೋಣಿಯವರ ಫೇಸ್ಬುಕ್ ಗೊಡೆಯಲ್ಲಿ ಓದಿದ್ದು ನೆನಪಾಯಿತು. ಅಲ್ಲಿ ತಾನು ಹೇಗೆಲ್ಲಾ ಸತ್ತಿದ್ದೆ ಎಂಬುದನ್ನು ಜೋಗಿ ಹೇಳುತ್ತಾರೆ. ಅಂಥಾ ಸಾವು ನಮ್ಮೆಲ್ಲರಿಗೂ ಆಗಿದೆ ಮತ್ತು ಆಗುತ್ತಲೇ ಇದೆ. ಎಲ್ ಕೂಡ ಇಂತಹದೇ ಸಾವುಗಳಲ್ಲಿ ಸಾಯುತ್ತಲೇ, ಪ್ರೀತಿಯನ್ನು ಕಾಯುತ್ತಲೇ ಇರುತ್ತಾನೆ. ಪುಸ್ತಕದೊಳಗೂ; ನಮ್ಮೊಳಗೂ.

***
ನನಗೆ ಹೆಚ್ಚೇನೂ ಹೇಳಲು ಬಾರದು. ನಿಮ್ಮ ಬದುಕನ್ನು ಒಮ್ಮೆ ಇಡಿಯಾಗಿ ಕವನ ರೂಪದಲ್ಲಿ, ಅದೇ ತೀವ್ರತೆಯಲ್ಲಿ ನೋಡಿಕೊಳ್ಳಬೇಕಾದರೆ ಎಲ್ ನ್ನು ಓದಿ. ನನಗೆ ಎಲ್ ಮೇಲೆ ಪ್ರೀತಿ ಸಂಭವಿಸಿದೆ. ಅದರೆ ಅದನ್ನು  ನಾನು ಎಲ್ ಗೆ ಹೇಳಲಾರೆ!

ಜೋಗಿ ಸರ್, ನಿಮಗೆ ವಂದನೆ ಮತ್ತು ಸಾವಿಲ್ಲದ ಪ್ರೀತಿ.

‍ಲೇಖಕರು avadhi

16 June, 2019

1 Comment

  1. Jogi

    ಥ್ಯಾಂಕ್ಸ್ ಸರ್. ಬೇರೆಯೇ ಥರ ನೋಡಿದ್ದೀರಿ. ಚಿತ್ರಿಸಿದ್ದೀರಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading