ನಮ್ಮ ಮೊಬೈಲ್ ಫೋನ್ ಗಳು ಸ್ವಿಚ್ ಆಫ್ ಆಗಿವೆ, ಕಾರ್ನಾಡರದ್ದೂ ಕೂಡ …   

ದರ್ಶನ್ ಜಯಣ್ಣ 

ಕೆಲವು ದಿನಗಳಿಂದ ಗಿರೀಶ್ ಕಾರ್ನಾಡರು ಆವರಿಸಿಬಿಟ್ಟಿದ್ದಾರೆ. ಅವರ ಮಾತಿನ bluntness, ಪ್ರಖರತೆ ಮತ್ತು ಮುಖಚರ್ಯೆ they are his USP’s !

ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ನಾನು ಹೈಸ್ಕೂಲಿನಲ್ಲಿದ್ದೆ. ನಮ್ಮ ಕನ್ನಡ ಮಾಸ್ತರು “ಕಾರ್ನಾಡರಿಗೆ ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದಿದೆ ” ಎಂದಾಗ ನಾನು “ಸಾರ್, ಸಿನೆಮಾನೂ ಸಮಗ್ರ ಸಾಹಿತ್ಯಕ್ಕೆ ಬರುತ್ತಾ ?” ಅಂತ ಕೇಳಿದ್ದೆ ! ಅವರು ನಕ್ಕು “ಇಲ್ಲಪ್ಪ, ಅವರ ಒಂದು ಕೃತಿಗೆ ಪ್ರಶಸ್ತಿ ಕೊಡದೆ ಒಟ್ಟು ಬರವಣಿಗೆಯ ಕೆಲಸಕ್ಕಾಗಿ ಕೊಡುವುದಕ್ಕೆ ಹಾಗೆನ್ನುತ್ತಾರೆ “ಎಂದಾಗ ಸ್ವಲ್ಪ ಅರ್ಥವಾಗಿತ್ತು !

ಕಾರ್ನಾಡರ ಬಗ್ಗೆ ಒಂದು ಬೆರಗು ಸದಾ ಇತ್ತು. ಕಾರಣ, ಅವರು oxford ನಲ್ಲಿ ಓದಿದವರು, ಶಂಕರ್ ನಾಗ್  ಮತ್ತು ಅನಂತ್ ನಾಗರ ಗುರುಗಳು, ಮಾಲ್ಗುಡಿಯಲ್ಲಿನ ಸ್ವಾಮಿಯ ತಂದೆ, ಭರಣರ ನಾಗಮಂಡಲದ ಕರ್ತೃ, ಕನ್ನಡದಲ್ಲಿ ನಿರ್ದೇಶಕ ಮತ್ತು ನಟ. ಹಿಂದಿ, ತಮಿಳು ಮತ್ತು ತೆಲುಗಿನಲ್ಲೂ ನಟಿಸುತ್ತಾರೆ, ಕೊಂಕಣಿ, ಮರಾಠೀ ಮಾತನಾಡುತ್ತಾರೆ, ಇಂಗ್ಲೀಷಂತೂ ನಿರರ್ಗಳ ಹೀಗೆ !

ಅವರು ಬರೆದ ನಾಟಕಗಳನ್ನು ಓದಿದ್ದಕ್ಕಿಂತಾ ರಂಗದಮೇಲೆ ನೋಡಿದ್ದೇ ಹೆಚ್ಚು. ಅವುಗಳಲ್ಲಿ ನಾನು ನೋಡಿದ್ದು ತುಘಲಕ್, ಒಡಕಲು ಬಿಂಬ, ಯಯಾತಿ ಮತ್ತು ಹಯವದನ. ನಾನು ಓದಿದ ಅವರ ಏಕೈಕ ನಾಟಕ ಹಯವದನ ಅದಕ್ಕೆ ಮೂಲ ಕಾರಣವೆಂದರೆ ಅದರ ವಿಶಿಷ್ಟವಾದ ಮುಖಪುಟ! ದೇಹ ಮತ್ತು ಮನಸ್ಸಿನ ತಿಕ್ಕಾಟದ ಮೂಲ ಹಂದರವಿರುವ ಈ ನಾಟಕದಲ್ಲಿ ಸಿನಿಮೀಯ ರೀತಿಯ ಹಲವಾರು ದೃಶ್ಯಗಳನ್ನು ನಾನು ಊಹಿಸಿಕೊಂಡು ಖುಷಿಪಟ್ಟಿದ್ದೆ! ಆದರೆ ನಾಟಕ ಓದುವಾಗ ಪ್ರತೀ ಬಾರಿ ಅಡ್ಡಬರುತ್ತಿದ್ದ ಎಡಗಡೆಯ ಪಾತ್ರದ ಹೆಸರುಗಳು ಓದನ್ನು ಕಷ್ಟವಾಗಿಸಿದ್ದರಿಂದ ಮತ್ತೊಂದು ನಾಟಕ ಓದಲಿಲ್ಲ !It was a decision bound by laziness, nothing else !

ಅವರ ತುಘಲಕ್ ನಾಟಕವನ್ನು ರಂಗಶಂಕರದಲ್ಲಿ ನೋಡಿ ತುಂಬಾ ಬೆರಗಾಗಿದ್ದೆ. ನಾಟಕದಲ್ಲಿನ plots – subplots, ಆಳೆತ್ತರದ ತುಘಲಕ್ (ವೆಂಕಟೇಶ್ ಪ್ರಸಾದರ ಅದ್ಭುತ ಅಭಿನಯ), ಅವನ ತಿಕ್ಕಲುತನ, ಅದಕ್ಕೂ ಮಿಗಿಲಾದ ಶಾಣ್ಯಾತನ, ತುಮುಲಗಳು, ಅಭದ್ರತೆಗಳು, ಮಹತ್ವಾಕಾಂಕ್ಷೆಗಳು ಇವೆಲ್ಲಾ ನೋಡಿ ಈ ನಾಟಕವನ್ನು ಕೆಲವರು ಏಕೆ ವಿರೋಧಿಸುತ್ತಾರೆಂಬುದೇ ತಿಳಿಯಲಿಲ್ಲ ! ನನಗಂತೂ ತುಘಲಕ್ ವಿಚಿತ್ರವಾಗಿ ಮತ್ತು ಅವನ ಹೆಸರಿನ ನಡಾವಳಿಯ  ಅನ್ವರ್ಥವಾಗೆಯೇ ಕಂಡ !

ಅವರು ಬರೆದ “ಟಿಪ್ಪು ಸುಲ್ತಾನನ ಕನಸುಗಳು” ನಾಟಕದ  ಇಂಗ್ಲಿಷ್ ಅನುವಾದ “Dreams of Tippu sultan ” ನಲ್ಲಿ ನನ್ನ ಹಾಸ್ಟೆಲ್ಲಿನ ಗೆಳೆಯರು ಕೆಲವರು ಪಾರ್ಟು ಮಾಡಿದ್ದರು. ಅವರು ಆಗಾಗ ” we are going for rehearsals, Mr. Girish karnad is also coming” ಅನ್ನುತ್ತಿದ್ದುದ್ದು ನೆನೆಪು.

ಒಡಕಲು ಬಿಂಬ ನಾಟಕವನ್ನು ರಂಗಶಂಕರದಲ್ಲೇ ನೋಡಿದ್ದು. ವಸ್ತು ಮತ್ತು ಒಪ್ಪಿಸುವಿಕೆಯಲ್ಲಿ ಮಾಡಿದ್ದ ಅನನ್ಯ ಪ್ರಯೋಗ, ನಂತರ ಅದನ್ನು ಇಂಗ್ಲಿಷ್ಗೆ ಅಳವಡಿಸಿದ್ದು, ಅದರಲ್ಲೂ ಅರುಂಧತಿ ನಾಗ್ ರವರೇ ನಟಿಸಿದ್ದು ನೋಡಿದಾಗ ಅವರನ್ನು ಬಿಟ್ಟು ಬೇರೆ ಯಾರೂ ಈ ಪಾತ್ರ ಮಾಡಲಾರರು ಅನ್ನಿಸಿತು. ಕನ್ನಡದಲ್ಲಿ ಇದನ್ನು ಗಿರೀಶ್ ಕಾರ್ನಾಡ್ ಮತ್ತು ಕೆ ಎಮ್ ಚೈತನ್ಯ ನಿರ್ದೇಶಿಸಿದ್ದರೆ ಇಂಗ್ಲಿಷ್ ನಲ್ಲಿ ಅರುಂಧತಿ ರಾಜ ನಿರ್ದೇಶಿಸಿದ್ದರು ಅನಿಸುತ್ತದೆ.

ಕಾರ್ನಾಡರು “mathematics gave structure to my plays in-terms of logic and reasoning” ಅನ್ನುತ್ತಾರೆ. ಅದು ಅವರ ನಾಟಕದಲ್ಲಿ ಹೇರಳವಾಗಿ ಕಾಣಿಸುತ್ತದೆ. ಸೀನ್ ನಿಂದ ಸೀನ್ಗೆ ಆಗುವ ಟ್ರಾನ್ಸಿಷನ್ (ಬದಲಾವಣೆ) ಮತ್ತು ಮಾತುಗಳಲ್ಲಿನ crispiness ಇದಕ್ಕೆ ಸಾಕ್ಷಿ ಅನಿಸುತ್ತದೆ  !

ಕಾರ್ನಾಡರನ್ನು ನಾನು ಪ್ರತ್ಯಕ್ಷ ನೋಡಿದ್ದು ರಂಗಶಂಕರದಲ್ಲಿ. ಗೆಳೆಯ ಶ್ರೀಕಾಂತ ಕಾಲೇಜು ದಿನಗಳಲ್ಲಿ ಜೆ ಪಿ ನಗರದಲ್ಲಿರುತ್ತಿದ್ದ. ಆಗಷ್ಟೇ ರಂಗಶಂಕರ ಶುರುವಾಗಿತ್ತು.  ಅಲ್ಲಿಗೆ ಕಾರ್ನಾಡರು ತಮ್ಮ ಮನೆಯಿಂದ ನಡೆದೇ ಬರುತ್ತಾರೆ ಅನ್ನುತ್ತಿದ್ದ. ಮತ್ತೊಬ್ಬ ಗೆಳೆಯ ಕಾರ್ತೀಕ “ನಾವು ಸಣ್ಣವರಿದ್ದಾಗ ಕೋಟದಲ್ಲಿ ಶಾಲೆಗೆ ಹೋಗುವಾಗ ಶಿವರಾಮ ಕಾರಂತರು ಎದಿರಾಗುತ್ತಿದ್ದರು.  ಅವರು ನಮ್ಮನ್ನು ವಿಚಾರಿಸಿಕೊಂಡು ತಲೆ ಸವರಿಯೇ ಮುಂದೆ ಹೋಗುತ್ತಿದ್ದರು “ಎಂದಾಗ ಇಬ್ಬರ ಮೇಲೂ ಅಸೂಯೆಯಾಗಿತ್ತು !

ಇದಾದ  ಎಷ್ಟೋ ವರ್ಷಗಳ ನಂತರ ರಂಗಶಂಕರಕ್ಕೆ ಮೊದಲ ಬಾರಿ ಕಾಲಿಟ್ಟಾಗ, ಅಲ್ಲಿ ಮೊದಲು ಇದಿರಾದದ್ದು ಅವರ ಗಡುಸು  ಧ್ವನಿ.  “would you please switch-off your mobile phones so that there is no disturbance during the performance ” ಅಂತ ಇಂಗ್ಲೀಷಿನಲ್ಲಿ ಮತ್ತು ಅಷ್ಟೇ authoritative ಆಗಿ ಕನ್ನಡದಲ್ಲಿ  “ಪ್ರದರ್ಶನಕ್ಕೆ ವ್ಯತ್ಯಯ ಬರದಂತೆ ನಿಮ್ಮ ನಿಮ್ಮ ಮೊಬೈಲ್ …….. ”  ಎಂದು ಹೇಳಿ ಫೋನ್ ಗಳನ್ನ ಅಧುಮಿಸುತ್ತಿದ್ದರು !

ಕೆಲವು ನಾಟಕಗಳನ್ನು ಅವರು ಹಿಂದೆ ಕುಂತು ನೋಡುತ್ತಿದ್ದರು. ಆದರೆ ಮಧ್ಯದಲ್ಲಿ ಯಾವಾಗಲೋ ಇಲ್ಲವಾಗಿರುತ್ತಿದ್ದರು !

ಅವರು ಅಷ್ಟಾಗಿ ಯಾರೊಟ್ಟಿಗೂ ಹರಟಿದ್ದು ನಾನು ಕಂಡಿಲ್ಲ. ಅವರನ್ನೊಮ್ಮೆ ಗ್ರೀಟ್ ಮಾಡಿದಾಗ “neeru’s ನಲ್ಲಿ ಸಾಬೂದಾನ ವಡೆಗಾಗಿ ಇಬ್ಬರೂ ಕಾಯುತ್ತಿದ್ದೆವು ! ಅವರು ನಿಚ್ಚಳವಾದುದೊಂದು ನಗೆ ನಕ್ಕು ಸೀರಿಯಸ್ ಆಗಿಬಿಟ್ಟರು ಮತ್ತು ಒಬ್ಬರೇ ಕಲ್ಲು ಬೆಂಚಿನ ಮೇಲೆ ಕುಂತು ವಡೆ ಜೊತೆಗೆ ಚಹಾ ಕುಡಿದು ಎದ್ದು ಹೋಗಿ ಬಿಟ್ಟಿದ್ದರು !

ಅವರ ಎತ್ತರಕ್ಕೆ, ಹಾವ ಭಾವಕ್ಕೆ, ಕಣ್ಣ ಚುರುಕುತನಕ್ಕೆ, ಕನ್ನಡ ಮಾತನಾಡುವ ವಿಶೇಷ ಶೈಲಿಗೆ ಮಾರುಹೋಗಿದ್ದ ನಾನು ಅವರ “ಟಿಪ್ಪು ಸುಲ್ತಾನನ ಕನಸುಗಳು” ಪ್ರಕಟವಾದಾಗ ಅವರಿಗೂ ಸನ್ಮಾನ್ಯ ಎಸ್ ಎಲ್ ಭೈರಪ್ಪನವರಿಗೂ ಆದ ವಿಚಾರ ವಿನಿಮಯ, ವಾಗ್ವಾದಗಳನ್ನು ಗಮನಿಸಿದ್ದೆ.

ಅದಾದ ನಂತರದ ದಿನಗಳಲ್ಲಿ “ಟಿಪ್ಪು ಸುಲ್ತಾನ ಕಳೆದ ೪೦೦-೫೦೦ ವರ್ಷಗಳಲ್ಲಿ ಕರ್ನಾಟಕ  ಕಂಡ ಅಪ್ರತಿಮ ಕನ್ನಡಿಗ, ಅವನ ಹೆಸರನ್ನು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮರುನಾಮಕರಣ ಮಾಡಬೇಕು” ಎಂದಾಗ ಅದನ್ನು ಖಂಡಿಸಿ ಒಂದು ಟಿಪ್ಪಣಿ ಬರೆದಿದ್ದೆ. ಅದು ಸ್ವಲ್ಪ harsh ಆಗಿದ್ದುದರಿಂದ ಸಾವಿರಾರು ಜನ ಮರು ಹಂಚಿಕೊಂಡರು. ಅಲ್ಲಿ ಅವರ ಹೇಳಿಕೆಯನ್ನು ತಾರ್ಕಿಕವಾಗಿ ನಾನು ವಿಶ್ಲೇಷಿಸಿದ್ದೆ, ಆದರೆ, ಅದಕ್ಕೆ ಬಂದ ಕಾಮೆಂಟ್ಸ್ ನೋಡಿ ನಾನೇ ದಂಗಾಗಿದ್ದೆ. It was blasphemous towards Karnad !

ನನಗೆ ರಾತ್ರೋರಾತ್ರಿ ನೂರಾರು ಏಕರೀತಿಯ ಜನ ಮೆಸೇಜು ಮಾಡತೊಡಗಿದರು, friend request ಗಳು ಬರತೊಡಗಿದವು ! ಅವರಾರಿಗೂ ನನಗೆ ಕಂಡ ಕಾರ್ನಾಡರು ಕಾಣಲೇ ಇಲ್ಲ (ನಾನು ನನ್ನ ಟಿಪ್ಪಣಿಯನ್ನು ಇಂಗ್ಲಿಷ್ ನಲ್ಲಿ ಬರೆದು “Dear karnad sir, a few questions to you “ಅಂತ ಒಕ್ಕಣೆ ಕೊಟ್ಟದ್ದು ಯಾರಿಗೂ ಅರ್ಥವಾಗಲಿಲ್ಲ !. ಆದರೆ ಅವರ ಈ ಬಗೆಯ ಬಹಿರ್ದೆಸೆಗೆ ನನ್ನ ಬರಹವೇ ಕಾರಣವೆಂದೆನಿಸಿ ಮುಂದೆಂದೂ ಅಂತಹ ಸಾಹಸಕ್ಕೆ ನಾನು ಮುಂದಾಗಲಿಲ್ಲ !

ಈಗ ಕಾರ್ನಾಡರು ತಮ್ಮ ಎಂದಿನ ರೂಢಿಯಂತೆ ನಾಟಕದ ಮಧ್ಯದಲ್ಲೇ ಎದ್ದು ಹೋಗಿದ್ದಾರೆ, ನಾಟಕ ಮುಂದುವರಿದಿದೆ. ನಮ್ಮ ಮೊಬೈಲ್ ಫೋನ್ ಗಳು ಸ್ವಿಚ್ ಆಫ್ ಆಗಿವೆ, ಅವರದೂ ಕೂಡ …

‍ಲೇಖಕರು avadhi

June 16, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shrikant

    ಲೇಖನ ತುಂಬಾ ಚೆನ್ನಾಗಿದೆ.
    ಯಾವುದೇ ರಂಗವಾಗಲಿ, ಸ್ಪಷ್ಟ ನಿಲುವು ತುಂಬಾ ಮುಖ್ಯ. ಅದಕ್ಕೆ ಪೂರಕವಾದ ವ್ಯಕ್ತಿ, ವ್ಯಕ್ತಿತ್ವ ಕಾರ್ನಾಡ್.

    ಮೊಬೈಲ್ ಸ್ವಿಚ್ ಆಫ್ ಆಗಿರಬಹುದು ಆದರೆ ಅವರ ನಾಟಕಗಳ ಮೂಲಕ ಕಾರ್ನಾಡರ ಧ್ವನಿಯ ರಿಂಗ್ ಟೋನ್ ರಿಂಗಣಿಸುತ್ತಲೇ ಇರುತ್ತದೆ, ಸದಾ ಕಾಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: