ಜೆ ವಿ ಕಾರ್ಲೊ ಕಥೆ – ಪಕ್ಷಿ ಪಂಜರದೊಳಗಿಲ್ಲ ಭಾಗ -1

ಮೂಲ: ಸುಸಾನ್ ಗ್ಲಾಸ್ಪೆಲ್
ಕನ್ನಡಕ್ಕೆ: ಜೆ ವಿ ಕಾರ್ಲೊ

ಸುಸಾನ್ ಗ್ಲಾಸ್ಪೆಲ್ (Susan Glaspell, 1876-1948) ಅಮೆರಿಕಾದ ಪುಲಿಟ್ಝರ್ ಪ್ರಶಸ್ತಿ ವಿಜೇತೆ ಪತ್ರಕರ್ತೆ, ಸಾಹಿತಿ ಮತ್ತು ನಟಿಯಾಗಿ ಹೆಸರು ಮಾಡಿದವರು. ಹದಿನೈದು ನಾಟಕಗಳು, ಐವತ್ತಕ್ಕಿಂತ ಹೆಚ್ಚು ಸಣ್ಣ ಕತೆಗಳು, ಒಂಭತ್ತು ನಾಟಕಗಳು ಅವರ ಸಾಹಿತ್ಯ ಕೃಷಿ. ಅವರ ಹೆಚ್ಚಿನ ಬರಹಗಳು ಲಿಂಗ ತಾರತಮ್ಯದ ವಸ್ತುವನ್ನೊಳಗೊಂಡಿವೆ.

A Jury of Her Peers, ಸುಸಾನ್ ಪತ್ರಕರ್ತೆಯಾಗಿ, ಜಾನ್ ಹೊಸ್ಯಾಕ್ ಎಂಬುವವನ ಕೊಲೆಯನ್ನಾಧರಿಸಿ ವರದಿ ಮಾಡಿದ ಒಂದು ಘಟನೆಯನ್ನಾದರಿಸಿ ಹೆಣೆದ ಕತೆ. ‘ಹೆಣ್ಮಕ್ಕಳಿಗೆ ಏನು ಗೊತ್ತಾಗುತ್ತೆ?’ ಎಂಬ ಗಂಡಸರ ತಾತ್ಸಾರದ ನಡುವೆ, ತಮ್ಮ ಸ್ತ್ರೀ ಸಹಜ ತರ್ಕದಿಂದ ಇಬ್ಬರು ಗೃಹಿಣಿಯರು ಒಂದು ಕೊಲೆಯ ವಿಶ್ಲೇಷಣೆ ನಡಿಸಿ ಬಿಡಿಸುವ ಕತೆ ‘ಖಾಲಿ ಪಂಜರ’

ಭಾಗ 1

ಮಾರ್ತಾ ಮುಂಬಾಗಿಲು ತೆರಯುತ್ತಿದ್ದಂತೇ ಉತ್ತರದ ಕಡೆಯಿಂದ ಆರ್ಭಟಿಸಿ ನುಗ್ಗಿ ಬಂದ ಥಂಡಿ ಗಾಳಿಗೆ ಬೆಚ್ಚಿ ಬಿದ್ದು ರಪ್ಪನೇ ಬಾಗಿಲು ಮುಚ್ಚಿ ತನ್ನ ಉಣ್ಣೆಯ ಸ್ಕಾರ್ಪಾನ್ನು ತರಲು ಒಳಗೋಡಿದಳು. ತಲೆಯ ಸುತ್ತ ಸ್ಕಾರ್ಫನ್ನು ಬಿಗಿದುಕೊಂಡು ಒಮ್ಮೆ ಅಡುಗೆ ಮನೆಯ ಕಡೆಗೆ ದೃಷ್ಟಿ ಹಾಯಿಸಿದಳು. ಮಾರ್ತಾ, ಈ ಹೊತ್ತಿನಲ್ಲಿ ಮನೆಯಿಂದ ಹೊರಗೆ ಕಾಲಿಡುವ ಸಂಗತಿ ಖಂಡಿತವಾಗಿಯೂ ಜುಜುಬಿಯಾಗಿರಲಿಲ್ಲ. ಅವಳು ರೊಟ್ಟಿ ಬೇಯಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದು ಗೋಧಿ ಹಿಟ್ಟು ಅರ್ಧ ವಂದರಿ ಆಡಿದ್ದು, ಇನ್ನರ್ಧ ಹಾಗೇ ಇತ್ತು. ಕೈ ಹಿಡಿದಿದ್ದ ಕೆಲಸವನ್ನು ಅರ್ಧಕ್ಕೆ ಬಿಟ್ಟೋಗುವುದು ಅವಳ ಜಾಯಮಾನವಾಗಿರಲಿಲ್ಲ. ಆದರೆ ಅವಳಿಗೆ ಬೇರೆ ದಾರಿಯೇ ಇರಲಿಲ್ಲ. ಅವಳ ಗಂಡ ಹೇಲ್‌ನನ್ನು ಕರೆದೊಯ್ಯಲು ಪಟ್ಟಣದಿಂದ ಗಂಡಸರ ಒಂದು ಪಂಗಡವೇ ಮನೆ ಬಾಗಿಲಿಗೆ ಬಂದಿತ್ತು. ಅವರ ಹಿಂದೆಯೇ ಶೆರಿಫ್ (ಪೋಲಿಸ್ ಆಫೀಸರ್) ಕೂಡ ಓಡೋಡಿ ಬಂದಿದ್ದ. ಅವನು ಮಾರ್ತಾನೂ ಅವರೊಟ್ಟಿಗೆ ಬರಲೇ ಬೇಕೆಂದು ದುಂಬಾಲು ಬಿದ್ದಿದ್ದ. ಅವನ ಹೆಂಡತಿ ಇಷ್ಟೊಂದು ಗಂಡಸರ ಮಧ್ಯೆ ತಾನೊಬ್ಬಳು ಒಬ್ಬಂಟಿಯಾಗುತ್ತೇನೆ, ಆದ್ದರಿಂದ ಹೇಲನ ಹೆಂಡತಿ ಮಾರ್ತಾಳನ್ನೂ ಕರೆದುಕೊಂಡು ಬನ್ನಿ ನನ್ನ ಜೊತೆಗಾಗುತ್ತೆ ಅಂದಿದ್ದಳು. ವಿಷಯವೂ ಗಂಭೀರವಾಗಿತ್ತು. ಡಿಕ್ಸನ್ ಕೌಂಟಿಯಲ್ಲಿ ಇಂತಾ ಒಂದು ಘಟನೆ ಈ ಹಿಂದೆ ಜರುಗಿರಲಿಲ್ಲ. “ಮಾರ್ತಾ, ಎಲ್ರೂ ನಿನ್ನೇ ಕಾಯ್ತಾ ಇದಾರೆ ಕಣೇ. ಎಲ್ಲಾ ಬಿಟ್ಟು ಅಲ್ಲೇ ಬಿಟ್ಟು ಬೇಗ ಬಾರೆ! ಚಳೀಲಿ ನಮ್ಮನ್ನೆಲ್ಲಾ ಕಾಯ್ಸಾ ಬೇಡ!” ಎಂದು ಅವಳ ಗಂಡ ಕೂಗಿ ಹೇಳಿದ.

ರೊಂಯ್ಯನೇ ಬೀಸುತ್ತಿದ್ದ ಕುಳಿರ್ಗಾಳಿಯನ್ನು ಸೀಳಿ ಮಾರ್ತಾ ಮನೆಯಿಂದ ಹೊರಬರುತ್ತಿದ್ದಂತೆ ಮೂವರು ಗಂಡಸರು ಮತ್ತೊಬ್ಬ ಮಹಿಳೆ ಅವಳಿಗಾಗಿ ಒಂದು ಕುದುರೆ ಗಾಡಿಯಲ್ಲಿ ಕಾಯುತ್ತಾ ನಿಂತಿದ್ದರು.

ತಾನುಟ್ಟ ಬಟ್ಟೆಯನ್ನು ಮತ್ತೊಮ್ಮೆ ಸರಿಪಡಿಸಿಕೊಂಡೇ ಮಾರ್ತಾ ಕುದುರೆ ಗಾಡಿಯನ್ನು ಹತ್ತಿ ತನ್ನ ಪಕ್ಕದ ಮಹಿಳೆಯ ಮೇಲೆ ಸೂಕ್ಷ್ಮವಾಗಿ ಕಣ್ಣಾಡಿಸಿದಳು. ಶೆರಿಫನ ಹೆಂಡತಿ, ಮಿಸೆಸ್ ಪೀಟರ‍್ಸಳನ್ನು ಮಾರ್ತಾ ಹಿಂದಿನ ವರ್ಷ ಕೌಂಟಿ ಜಾತ್ರೆಯಲ್ಲಿ ನೋಡಿದ್ದಳು. ಆಕೆ ಒಬ್ಬ ಪೋಲಿಸ್ ಅಧಿಕಾರಿಯ ಮಡದಿ ಎಂಬಂತೆ ಅವಳಿಗೆ ಆಗಲೂ ಅನಿಸಿರಲಿಲ್ಲ.

ತುಂಬಾ ನಾಜೂಕು ಮತ್ತು ತೆಳ್ಳನೆಯ ಮೈಕಟ್ಟಿನ ಹೆಣ್ಣು. ಅವಳ ಧ್ವನಿಯೋ…ಮೆದುವೋ ಮೆದು! ಆದರೆ ಗಂಡ ಪೀಟರ‍್ಸ್, ಅವನ ಮೈಕಟ್ಟು, ಅಧಿಕಾರಯುತ ಗಡಸು ಧ್ವನಿಯಿಂದ ಪಕ್ಕಾ ಪೊಲೀಸ್ ಆಫಿಸರನಂತೆ ಕಾಣಿಸುತ್ತಿದ್ದ. ಒಳ್ಳೆಯವರಿಗೆ ಒಳ್ಳೆಯವನು, ಸ್ನೇಹಿತರೊಂದಿಗೆ ಸ್ನೇಹಿತ. ಇಂತಾ ಆಫಿಸರನೊಬ್ಬ ಈ ಅಪವೇಳೆಯಲ್ಲಿ ರೈಟ್ಸರ ಮನೆಗೆ ಹೋಗುತ್ತಿರುವುದು ಮಾರ್ತಾಳಿಗೆ ಯಾಕೋ ಸರಿಬರಲಿಲ್ಲ.

“ಈ ವರ್ಷ ನಮ್ಮ ಡಿಕ್ಸನ್ ಕೌಂಟಿಗೆ ಯಾವುದೋ ಶನಿ ಮೆಟ್ಟಿದಂತೆ ಕಾಣಿಸುತ್ತಿದೆ!” ತುಂಬಾ ಹೊತ್ತಿನ ಬಳಿಕ ಮಿಸೆಸ್ ಪೀಟರ್ ಬಾಯ್ಬಿಟ್ಟಳು. ಗಂಡಸರೆಲ್ಲಾ ಮಾತನಾಡುತ್ತಿದ್ದು ತಾವಿಬ್ಬರು ಯಾಕೆ ಮೂಕ ಪ್ರೇಕ್ಷಕರಾಗಿರಬೇಕೆಂದು ಮಿಸೆಸ್ ಪೀಟರ‍್ಸ್ ಭಾವಿಸಿದಳೆಂದು ಕಾಣಿಸುತ್ತದೆ.

ಮಾರ್ತಾ ಉತ್ತರಿಸುವ ಮುನ್ನವೇ ಕುದುರೆ ಗಾಡಿ ರಸ್ತೆಯ ಏರಿಯನ್ನು ಹತ್ತಿ ಇಳಿಯತೊಡಗಿತ್ತು. ಮುಂದೆಯೇ ರೈಟ್ಸ್ರವರ ಮನೆ ಕಾಣಿಸುತ್ತಿತ್ತಾದ್ದರಿಂದ ಮಾರ್ತಾ ಉತ್ತರಿಸುವ ಗೊಡವೆಗೇ ಹೋಗಲಿಲ್ಲ. ರೈಟ್ಸರ ಮನೆ ಮಾರ್ಚ್ ತಿಂಗಳ ಚಳಿಯಲ್ಲಿ ಒಬ್ಬಂಟಿಯಾಗಿ ಕಾಣಿಸುತ್ತಿತ್ತು. ಎಲ್ಲಾ ಕಾಲಗಳಲ್ಲಿಯೂ ಅದು ಅವರೆಲ್ಲರ ಮಟ್ಟಿಗೆ ಅದೊಂದು ಒಂಟಿ ಮನೆಯೇ ಆಗಿತ್ತು. ರೈಟ್ಸರ ಮನೆ ತಗ್ಗಿನಲ್ಲಿದ್ದು ಸುತ್ತಲೂ ದೈತ್ಯ ಪೋಪ್ಲಾರ್ ಮರಗಳು ಸುತ್ತುವರೆದಿದ್ದು ಮತ್ತಷ್ಟು ಏಕಾಂಗಿಯಾಗಿ ಕಾಣಿಸುತ್ತಿತ್ತು. ಬಹಳಷ್ಟು ಗಂಡಸರು ಇದೇ ಮೊದಲ ಭಾರಿ ರೈಟ್ಸರ ಮನೆ ನೋಡುತ್ತಿರುವುದು ಎನ್ನುವಂತೆ ಮಾತನಾಡುತ್ತಿದ್ದರು. ಸರ್ಕಾರಿ ವಕೀಲನಂತೂ ಗಾಡಿಯಿಂದ ಹೊರಬೀಳುವಂತ ಭಂಗಿಯಲ್ಲಿ ನೇತಾಡಿಕೊಂಡು ನೋಡತೊಡ “ಮಾರ್ತಾ, ನೀನು ನನ್ನೊಂದಿಗೆ ಹೊರಟು ಬಂದಿದ್ದಕ್ಕೆ ತುಂಬಾ, ತುಂಬಾ ಥ್ಯಾಂಕ್ಸ್ ಕಣಮ್ಮ!” ಮಿಸೆಸ್ ಪೀಟರ‍್ಸ್, ಅವರೆಲ್ಲಾ ರೈಟ್ಸ್ರವರ ಅಡುಗೆ ಮನೆಯ ಬಾಗಿಲಿನಿಂದ ಒಳಗೆ ಪ್ರವೇಶಿಸುವಾಗ ಹೇಳಿ ಆದರೂ ಹೊಸಿಲು ದಾಟಿ ಒಳಕ್ಕೆ ಹೋಗಲು ಮಾರ್ತಾಳಿಗೆ ಯಾವುದೋ ಅಳಕು ತಡೆಯುತ್ತಿತ್ತು. ಬಹಳ ಸಮಯದಿಂದ ಮಾರ್ತಾ ರೈಟ್ಸರ ಮನೆಗೆ ಕಾಲಿಟ್ಟಿರಲಿಲ್ಲ! ಮಿನ್ನಿ ಫೋಸ್ಟರಳನ್ನೊಮ್ಮೆ ಕಾಣಬೇಕೆಂದು ಅದೆಷ್ಟೋ ಭಾರಿ ಅನ್ನಿಸಿದ್ದರೂ ಏನೆಲ್ಲಾ ಏನೋ ಕೆಲಸಗಳು! ಇಪ್ಪತ್ತು ವರ್ಷಗಳಿಂದ ಆಕೆ ಎಲ್ಲರಿಗೂ ಮಿಸೆಸ್ ರೈಟ್ಸ್ ಅಂತ ಪರಿಚಿತಳಾಗಿದ್ದರೂ ಮಾರ್ತಾಳಾ ಮಟ್ಟಿಗೆ ಅವಳು ಮಿನ್ನಿ ಫಾಸ್ಟರೇ ಆಗಿದ್ದಳು. ಇವತ್ತು ಮಿನ್ನಿ ಫಾಸ್ಟರಳ ಮನೆಯನ್ನು ಹೊಕ್ಕಲು ಅವಳಿಗೆ ಸಂದರ್ಭ ಒದಗಿ ಬಂದಿತ್ತು.

ಗಂಡಸರೆಲ್ಲಾ ಮನೆಯ ಒಲೆಯ ಬಳಿ ಹೋದರು. ಹೆಣ್ಮಕ್ಕಳಿಬ್ಬರೂ ಅಡುಗೆ ಕೋಣೆಯ ಬಾಗಿಲ ಬಳಿಯೇ ನಿಂತರು. ಸರ್ಕಾರಿ ವಕೀಲ ಯುವ ಹೆಂಡರ‍್ಸನ್ ಅವರನ್ನೆಲ್ಲಾ ಒಲೆಯ ಬಳಿಗೆ ಕರೆದ.

ಮಿಸೆಸ್ ಪೀಟರ‍್ಸ್ ಒಂದಡಿ ಮುಂದೆ ಇಟ್ಟು ಹಿಂದಕ್ಕೆ ಸರಿಯುತ್ತಾ, ತನಗೇನೂ ಚಳಿಯಾಗುತ್ತಿಲ್ಲ ಎಂದಳು. ಅವರಿಬ್ಬರೂ ಬಾಗಿಲ ಬಳಿಯೇ ನಿಂತರು. ಅಡುಗೆ ಮನೆಯ ಕಡೆಗೆ ಅವರಿಬ್ಬರು ಕತ್ತೆತ್ತಿಯೂ ನೋಡಲ ಹೊತ್ತಿನ ಮುಂಚೆಯೇ ಪೊಲೀಸ್ ಆಫೀಸರ್ ತನ್ನ ಪೇದೆಗಳನ್ನು ಕಳಿಸಿ ಅಡುಗೆ ಮನೆಯಲ್ಲಿ ಬೆಂಕಿ ಹೊತ್ತಿಸಿ ಬೆಚ್ಚಗಿಟ್ಟಿಸಿದಿದ್ದಕ್ಕಾಗಿ ಗಂಡಸರೆಲ್ಲಾ ಶೆರಿಫ್ ಪೀಟರ್ಸನನ್ನು ಮನಸಾರೆ ಹೊಗಳತೊಡಗಿದರು. ಅವನು ಮುಗುಳ್ನಗುತ್ತಾ ಅವರ ವಂದನೆಗಳನ್ನು ಸ್ವೀಕರಿಸಿದ. ಎರಡೂ ಕೈಗಳನ್ನು ಉಜ್ಜುತ್ತಾ ಪೀಟರ‍್ಸ್ ಅವರನ್ನು ನೋಡುತ್ತಾ, ತನ್ನ ಅಧಿಕಾರಯುತ ಪೋಲಿಸ್ ಶೈಲಿಯಲ್ಲಿ, “ಮಿಸ್ಟರ್ ಹೇಲ್, ನಾವು ಇಲ್ಲಿರುವ ವಸ್ತುಗಳನ್ನು ಮುಟ್ಟುವ ಮೊದಲು, ನಿನ್ನೆ ನೀವು ಇಲ್ಲಿಗೆ ಬಂದಾಗ ಏನೆಲ್ಲಾ ನೋಡಿದಿರಿ ಎಂದು ಸರ್ಕಾರಿ ವಕೀಲರಿಗೆ ಹೇಳುತ್ತಿರಾ?” ಎಂದ ಸರ್ಕಾರಿ ವಕೀಲ ಅಡುಗೆ ಕೋಣೆಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದ. ಶೆರಿಫ್ ಪೀಟರ‍್ಸನ ಕಡೆಗೆ ತಿರುಗಿ, “ಇಲ್ಲಿಯ ವಸ್ತುಗಳನ್ನು ತಡವಿ, ಅಲ್ಲಿಲ್ಲಿ ಚದುರಿಸಿಲ್ಲ ತಾನೇ?” ಎನ್ನುತ್ತಾ, “ಈ ಕೋಣೆ ನಿನ್ನೆ ನೀವು ನೋಡಿ ಹೋದ ಸ್ಥಿತಿಯಲ್ಲಿಯೇ ಇದೆ ತಾನೆ?” ಎಂದು ಕೇಳಿದ.

ಕಪ್ ಬೋರ್ಡಿನಿಂದ ಪಾತ್ರೆಗಳನ್ನು ತೊಳೆಯುವ ಸಿಂಕಿನ ವರೆಗೆ ಪೋಲಿಸ್ ಆಫೀಸರ್ ಪೀಟರ‍್ಸ್ ಒಮ್ಮೆ ಸೂಕ್ಷ್ಮವಾಗಿ ಕಣ್ಣಾಡಿಸಿ,
“ಎಲ್ಲಾ ಇದ್ದಾಗೇ ಇದೆ.” ಎಂದ.

“ಆದರೂ, ಇಲ್ಲೊಬ್ಬ ಪೇದೆಯನ್ನು ಡ್ಯೂಟಿಗೆ ಇರಿಸಬೇಕಿತ್ತು.” ಎಂದ ಸರ್ಕಾರಿ ವಕೀಲ.
“ನಿನ್ನೆಯ ಬಗ್ಗೆ ಏನು ಹೇಳಲಿ ಜಾರ್ಜ್? ನೀನು ಬೇರೆ ಊರಲ್ಲಿರಲಿಲ್ಲ. ನಮ್ಮುಡುಗ ಫ್ರಾಂಕನಿಗೆ ನಾನು ಬೇರೊಂದು ಕೆಲಸದಲ್ಲಿ ಹೊರಗೆ ಕಳಿಸಿದ್ದೆ. ಆದರೂ, ಇಲ್ಲಿ ಏನೂ ಅಧ್ವಾನಗಳಾಗದಂತೆ ನಾನು ನೋಡಿಕೊಂಡಿದ್ದೇನೆ. ಎಲ್ಲವೂ ಇದ್ದ ಹಾಗೇ ಇದೆ,” ಎಂದ ಪೀಟರ‍್ಸ್.
“ಸಾಯ್ಲಿ ಬಿಡು. ಆದದ್ದು ಆಗೋಯ್ತು.” ಎನ್ನುತ್ತಾ ಅವನು ಮಿಸ್ಟರ್ ಹೇಲ್ ನ ಕಡೆಗೆ ತಿರುಗಿದ. “ಮಿಸ್ಟರ್ ಹೇಲ್, ನಿನ್ನೆ ಬೆಳಿಗ್ಗೆ ನೀವು ಇಲ್ಲಿಗೆ ಬಂದಾಗ ಏನನ್ನೆಲ್ಲಾ ಕಂಡಿರಿ?”

ಅಡುಗೆ ಮನೆಯ ಬಾಗಿಲ ಚೌಕಟ್ಟಿಗೆ ಒರಗಿ ನಿಂತಿದ್ದ ಮಿಸೆಸ್ ಹೇಲಾಳ ಹೃದಯ ಬಡಿದುಕೊಳ್ಳಲಾರಂಭಿಸಿತು. ಆಕೆಯ ಗಂಡ ಲೂಯಿಸ್ ಹೇಲನಿಗೆ ಮಾತನಾಡುತ್ತಾ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಸಲೀಸಾಗಿ ಜಿಗಿದು ಹೋಗುವ ಅಭ್ಯಾಸವಿತ್ತು! ಒಂದು ಸರಳ ಸಂಗತಿಯನ್ನು ಆದಷ್ಟು ಜಟಿಲವಾಗಿ ಹೆಣೆದು ಸಿಕ್ಕಿ ಒದ್ದಾಡುವ ಪೈಕಿಯವನು. ದೇವರೇ, ಅವನು ನೋಡಿದ್ದನ್ನು ನೇರವಾಗಿ, ಸರಳವಾಗಿ ಹೇಳುವ ಮಾತುಗಳನ್ನು ಅವನ ಬಾಯಿಗೆ ಕರುಣಿಸು ದೇವರೇ ಎಂದು ಬೇಡಿಕೊಳ್ಳತೊಡಗಿದಳು. ಏನೆಲ್ಲಾ ಹೇಳ ಹೋಗಿ ತನ್ನ ಗಂಡ ಪಾಪ ಮಿನ್ನಿ ಫೋಸ್ಟರಳಿಗೆ ಆಪತ್ತು ತರದಿದ್ದರೆ ಸಾಕು ಎಂದು ಮಾರ್ತಾಳ ಸ್ತ್ರೀ ಹೃದಯ ಆತಂಕಗೊಂಡಿತ್ತು. ಅವಳ ಗಂಡ ಕೂಡ ಒಮ್ಮೆಲೇ ಶುರು ಮಾಡಲಿಲ್ಲ. ನಿನ್ನೆಯ ಘಟನೆ ಬಗ್ಗೆ ಮೆಲುಕು ಹಾಕುತ್ತಾ ಅವನು ಅಸ್ವಸ್ಥನಾದಂತೆ ಕಂಡು ಬಂದ.

“ಮಿಸ್ಟರ್ ಹೇಲ್?..” ಸರ್ಕಾರಿ ವಕೀಲ ಅವನನ್ನು ಎಚ್ಚರಿಸಿದ.

“ನಿನ್ನೆ ಬೆಳಿಗ್ಗೆ ನಾನು ಮತ್ತು ಹ್ಯಾರಿ ಒಂದು ಲೋಡು ಆಲೂಗೆಡ್ಡೆಗಳನ್ನು ತುಂಬಿಕೊಂಡು ಪೇಟೆಯ ಕಡೆಗೆ ಹೊರಟಿದ್ದೆವು…” ಕೊನೆಗೂ ಮಿಸೆಸ್ ಮಾರ್ತಾಳ ಗಂಡ ಬಾಯ್ಬಿ ಹ್ಯಾರಿ, ಮಿಸೆಸ್ ಮಾರ್ತಾ ಹೇಲಾಳ ಮಗ. ಅವನು ಇಂದು ಇತರ ಗಂಡಸರ ಮಧ್ಯೆ ಇರಲಿಲ್ಲ. ಏಕೆಂದರೆ , ಹಿಂದಿನ ದಿನ ಲೋಡು ಮಾಡಿದ್ದ ಆಲೂಗೆಡ್ಡೆಗಳು ಪೇಟೆಯನ್ನು ತಲುಪಿರಲಿಲ್ಲ. ಅವುಗಳನ್ನು ಹ್ಯಾರಿ ಇಂದು ಪೇಟೆಯ ಕಡೆಗೆ ಬೆಳಿಗ್ಗೆಯೇ ತೆಗೆದು ಹೊರಟಿದ್ದ. ಸರ್ಕಾರಿ ವಕೀಲನಿಗೆ ಹೇಳಿಕೆ ಕೊಡಲು ಶೆರಿಫ್ ಪೀಟರ್ಸನ್ ಹೇಲನನ್ನು ಬೆಳ್ಳಂಬೆಳಿಗೆಯೇ ಎಳೆದು ತಂದಿದ್ದ. ಈ ಮಧ್ಯೆ ಮಾರ್ತಾಳಿಗೆ ಮತ್ತೊಂದು ತಲೆ ಬೇನೆ ಶುರುವಾಗಿತ್ತು. ಹ್ಯಾರಿ ಇವತ್ತಿನ ಚಳಿಗುಣವಾಗಿ ಸೂಕ್ತವಾದ ಬೆಚ್ಚನೆಯ ಉಡುಗೆಗಳನ್ನು ಧರಿಸಿರಲಿಲ್ಲ. ಆಕೆಯ ಮಾತೃ ಹೃದಯ ತಳಮಳಗೊಂಡಿತ್ತು. ಬಡಗಿನ ಈ ಕುಳರ‍್ಗಾಳಿಯಿಂದ ನನ್ನ ಮಗನನ್ನು ರಕ್ಷಿಸು ದೇವರೇ ಎಂದು ಅವಳ ಹೃದಯ ರೋಧಿಸತೊಡಗಿತ್ತು.

“…ನಿನ್ನೆ ನಾವು ಆಲೂಗೆಡ್ಡೆಯನ್ನು ಹೇರಿಕೊಂಡು ಹೋಗುತ್ತಿದ್ದಾಗ ಈ ತಗ್ಗಿನಲ್ಲಿ ಜಾನ್ ರೈಟನ ಮನೆ ನೋಡುತ್ತಿದ್ದಂತೆ ನನಗೆ ಟೆಲಿಪೋನ್ ವಿಷಯ ಜ್ಞಾಪಕಕ್ಕೆ ಬಂತು. ನಾನು ಹ್ಯಾರಿಗೆ, ಒಂದ್ನಿಮಿಷ, ನಾನು ಟೆಲಿಫೋನ್ ಬಗ್ಗೆ ಜಾನ್‌ನನ್ನು ವಿಚಾರಿಸಿಕೊಂಡು ಬರುತ್ತೇನೆ ಎಂದು ಕೆಳಗೆ ಇಳಿದೆ. ನಾನು ಟೆಲಿಫೋನ್‌ಗಾಗಿ ಅರ್ಜಿ ಹಾಕಿದ್ದೆ. ಈ ಸುಡುಗಾಡಿನಲ್ಲಿ ಒಂದು ಟೆಲಿಫೋನ್ ಇದ್ದರೆ ಒಳ್ಳೇದು ಅಂತ ಅನಿಸಿತ್ತು. ಆದರೆ ಈ ಟೆಲಿಫೋನ್ ಕಂಪನಿಗಳು ಒಂದೇ ಒಂದು ಸಂಪರ್ಕಕ್ಕೆ ಇಷ್ಟು ದೂರ ಲೈನ್ ಎಳೆಯುವುದು ದುಬಾರಿಯಾಗುತ್ತದೆ, ಮತ್ತಷ್ಟು ಗ್ರಾಹಕರನ್ನು ಹುಡುಕಿ ಕೊಡಿ ಎಂದು ಆ ಕೆಲಸ ನನಗೇ ವಹಿಸಿದ್ದರು. ಈ ಜಾನ್ ರೈಟ್ಸನೋ, ಮಹಾನ್ ಜಿಪುಣ! ಈ ಟೆಲಿಪೋನ್ ರಗಳೆ ಯಾರಿಗೆ ಬೇಕೋ ಮಾರಾಯಾ? ಅನಾವಶ್ಯ ಮಾತು, ಬೇಕಿಲ್ಲದ ರಗಳೆ ಎಂದು ತಳ್ಳಿ ಹಾಕಿದ್ದ. ಅವನ ಹೆಂಡತಿಯ ಬಳಿ ವಿಚಾರಿಸಿದರೆ ಏನಾದರೂ ಆಗಬಹುದು ಎಂದು ನಾನು ಭಾವಿಸಿದೆ. ಮೊದಲೇ ಮೈಲಿಗಟ್ಟಳೆ ದೂರದಲ್ಲಿ ಒಂದೊಂದೇ ಮನೆಗಳು.. ಗಂಡಸರು ಬಿಡಿ, ಹೆಣ್ಮಕ್ಕಳಿಗೆ ತಮ್ಮ ಸ್ನೇಹಿತೆಯರ, ಅಕ್ಕ-ತಂಗಿಯರ ಬಳಿ ಏನಾದರೊಂದು ವಿಷಯ ಮಾತನಾಡುವುದು ಇರುತ್ತೆ. ಈಕೆ ಏನಾದ್ರೂ ಜಾನ್ ರೈಟನ ಕಿವಿ ಹಿಂಡಿ ಒಪ್ಪಿಸಬಹುದೆಂಬ ದೂರದ ಆಸೆಯಿಂದ ಅಲ್ಲಿಗೆ ಹೋದೆ.”

ಮಿಸ್ಟರ್ ಹೇಲಾನ ಟೆಲಿಫೋನ್ ಪುರಾಣ ಯಾರಿಗೂ ಬೇಕಿರಲಿಲ್ಲ. ಮಿಸೆಸ್ ಹೇಲ್ ಅವನ ಗಮನವನ್ನು ತನ್ನೆಡೆಗೆ ಎಳೆಯಲು ಪ್ರಯತ್ನಿಸಿದಳು. ಆದರೆ ಅವನು ಮಡದಿಯ ಕಡೆಗೆ ನೋಡುತ್ತಲೇ ಇರಲಿಲ್ “ಅದು ಇರಲಿ. ಆಮೇಲೆ ಕೇಳೋಣ. ನೀವು ರೈಟ್ ಮನೆಯಲ್ಲಿ ಏನು ಕಂಡಿರಿ ಮೊದಲು ಹೇಳಿ.” ಎಂದ ಸರ್ಕಾರಿ ವಕೀಲ ಅಸಹನೆಯಿಂದ.

ಈ ಭಾರಿ ಹೇಲ್ ಕೊಂಚ ಯೋಚಿಸಿ, ಹೇಳತೊಡಗಿದ:

“ನಾನು ರೈಟ್ಸನ ಮನೆಗೆ ಹೋದಾಗ ಆ ಹೊತ್ತಿನಲ್ಲೂ ಯಾರೂ ಎದ್ದಿರುವಂತೆ ಕಾಣಿಸಲಿಲ್ಲ. ನಾನು ಬಾಗಿಲು ತಟ್ಟಿದೆ. ಉತ್ತರ ಬರಲಿಲ್ಲ. ಎಲ್ಲೆಡೆ ನಿಶ್ಶಬ್ಧ ಆವರಿಸಿತ್ತು. ಇಷ್ಟೊತ್ತೂ ಅವರು ಮಲಗಿರಲು ಕಾರಣವೇ ಇರಲಿಲ್ಲ. ಮತ್ತೂ ಜೋರಾಗಿ ಬಾಗಿಲು ಬಡಿದೆ. ಒಳಗಿಂದ ಯಾರೋ ನರಳಿದಂತೋ, ಏನೋ ಮಾತಾಡಿದಂತೋ ಭಾಸವಾಯಿತು. ಅದು ಏನೆಂದು ಈಗಲೂ ಗೊತ್ತಾಗುತ್ತಿಲ್ಲ. ಗಂಟೆ ಎಂಟು ಮೀರಿತ್ತು. ನಾನು ಬಾಗಿಲನ್ನು, ಇದೇ ಈಗ ಈ ಹೆಣ್ಮಕ್ಕಳು ನಿಂತಿರುವ ಬಾಗಿಲು ತಳ್ಳಿದೆ. ಅದು ತೆರೆದುಕೊಂಡಿತು. ಮಿಸೆಸ್ ರೈಟ್, ಆ ತೂಗು ಕುರ್ಚಿಯ ಮೇಲೆ ಕುಳಿತ್ತಿದ್ದಳು…

ಎಲ್ಲರ ದೃಷ್ಟಿ ಅಡುಗೆ ಮನೆಯಲ್ಲಿದ್ದ ಆ ತೂಗು ಕುರ್ಚಿಯ ಕಡೆಗೆ ಹೊರಳಿತು. ಮಾರ್ತಾಳಿಗೆ ಯಾಕೋ ಮಿನ್ನಿ ಫೋಸ್ಟರಳನ್ನು ಆ ಕುರ್ಚಿಯ ಮೇಲೆ ಕುಳಿತುಕೊಂಡಿರುವುದನ್ನು ಕಲ್ಪಿಸಿಕೊಳ್ಳಲು ಆಗಲೇ ಇಲ್ಲ. ಅದೂ ಇಪ್ಪತ್ತು ವರ್ಷ ಹಿಂದಿನ ಮಿನ್ನಿಯನ್ನು. ಕೆಂಪು ಬಣ್ಣದ ಆ ಕುರ್ಚಿಯ ಬಣ್ಣ ಹಲವಾರು ಕಡೆ ಮಾಸಿ ಹೋಗಿತ್ತು. ಕುರ್ಚಿಯ ಬೆನ್ನಿಗೆ ಮರದ ಅಡ್ಡ ಪಟ್ಟಿಗಳನ್ನು ಹೊಡೆದಿದ್ದು, ಅದರಲ್ಲಿ ಒಂದು ಪಟ್ಟಿ ಕಳಚಿ ಹೋಗಿ ಮುಂದಿನ ಹಲ್ಲುಗಳ ಸಾಲಿನಲ್ಲಿ ಒಂದು ಹಲ್ಲು ಬಿದ್ದು ಹೋಗಿರುವಂತೆ ಕಾಣಿಸುತ್ತಿತ್ತು. ಒಂದು ಕಡೆಯ ಕಾಲು ಗಿಡ್ಡವಾಗಿ ಕುರ್ಚಿ ಒಂದೇ ಕಡೆ ಬಾಗಿರುವಂತೆ ಕಾಣಿಸುತ್ತಿತ್ತು.

“ಮಿಸೆಸ್ ರೈಟ್ ನಿನ್ನೆ ನೋಡಲು ಹೇಗಿದ್ದಳು?” ವಕೀಲ ಕೇಳಿದ.

“ಅವಳೊಂಥರ ಅನ್ಯಮನಸ್ಕಳಂತೆ ಕಾಣಿಸುತ್ತಿದ್ದಳು.”

“ಹಾಗಂದ್ರೆ? ಸ್ವಲ್ಪ ಬಿಡಿಸಿ ಹೇಳಿ.” ವಕೀಲ ಜೇಬಿನಿಂದ ಒಂದು ಸಣ್ಣ ನೋಟು ಬುಕ್ಕು ಮತ್ತು ಪೆನ್ಸಿಲನ್ನು ಹೊರತೆಗೆಯುತ್ತಾ ಕೇಳಿದ. ಮಾರ್ತಾಳಿಗೆ ಆ ಪೆನ್ಸಿಲು ಅಪಶಕುನದಂತೆ ಕಂಡಿತು. ಅವಳು ಗಂಡನ ಕಡೆಗೆ ನೋಡಿದಳು: ಅಗತ್ಯವಿಲ್ಲದ ಮಾತುಗಳನ್ನಾಡಿ ಸಮಸ್ಯೆಯಲ್ಲಿ ಸಿಕ್ಕಿ ಹಾಕಿ ಕೊಳ್ಳದಿರುವಂತೆ.
ಮಿಸ್ಟರ್ ಹೇಲ್ ಕೂಡ ಜಾಗರೂಕನಾದ. ನೋಟು ಬುಕ್ಕು, ಪೆನ್ಸಿಲು ಕಂಡು ಅವನೂ ಹೆದರಿದ ಎಂದು ಕಾಣಿಸುತ್ತದೆ!

“… ಅವಳೊಂಥರಾ ಗೊಂದಲದಲ್ಲಿರುವಂತೆ ನನಗೆ ಕಾಣಿಸಿತು. ಅಂದರೆ ‘ಈಗ ಏನು ಮಾಡಲಿ, ಏನು ಮಾಡಲಿ?’ ಎನ್ನುವ ಆತಂಕದಲ್ಲಿರುವಂತೆ.”
“ನಿಮ್ಮನ್ನು ನೋಡಿದಾಗ ಅವಳ ಪ್ರತಿಕ್ರಿಯೆ ಹೇಗಿತ್ತು?”
“ನನ್ನನ್ನು ಕಂಡು ಆಕೆಗೆ ವಿಶೇಷವಾಗಿ ಏನೂ ಅನಿಸಲಿಲ್ಲವೆಂಬಂತೆ ನನಗೆ ಭಾಸವಾಯಿತು. “ಹಲೋ ಮಿಸೆಸ್ ರೈಟ್, ಹೇಗಿದ್ದೀರಾ? ಇವತ್ತು ಚಳಿ ಸ್ವಲ್ಪ ಜಾಸ್ತಿಯೇ ಇದೆ ಅಂತ ಅನಿಸುವುದಿಲ್ಲವೇ?” ಎಂದು ನಾನು ಅಂದಾಗ, ಅವಳು, ‘ಒಹ್, ಹೌದಾ?’ ಎಂದು ನೀರಸವಾಗಿ ಒಂದು ಕೈಯಿಂದ ತನ್ನ ಏಪ್ರನಿನ ಅಂಚನ್ನು ನೀವುದರಲ್ಲಿಯೇ ಮಗ್ನಳಾದಳು. ಒಂದರೆಗಳಿಗೆ ನಾನೂ ಗೊಂದಲಕ್ಕೊಳಗಾದೆ. ಅವಳು ನನಗೆ ಪ್ರತಿ ವಂದನೆ ಮಾಡಲೂ ಇಲ್ಲ, ಒಳಗೆ ಬಾ ಅಂತಲೂ ಕರೆಯಲಿಲ್ಲ. ಅನ್ಯಮನಸ್ಕಳಾಗಿ ಏಪ್ರನ್ ಅಂಚನ್ನು ತೀಡುವುದರಲ್ಲಿಯೇ ತೊಡಗಿಕೊಂಡಳು. ನಾನು ಸ್ವಲ್ಪ ಹೊತ್ತು ಕಾದು, “ಮಿಸೆಸ್ ರೈಟ್, ನನಗೆ ಜಾನ್‌ನನ್ನು ನೋಡಬೇಕಿತ್ತು.” ಎಂದೆ

“ಇದನ್ನು ಕೇಳಿ ಆಕೆ ಪೆಚ್ಚು ಪೆಚ್ಚಾಗಿ ನಗೆಯಾಡಿದಳು. ಹೌದು ನಿಜವಾಗಿಯೂ ನಕ್ಕಳೆಂದೇ ನನಗನಿಸಿತು. ನನಗೆ ಹೊರಗೆ ಹ್ಯಾರಿ ಕಾಯುತ್ತಿರುವುದು ನೆನಪಾಗಿ, ನಾನು ಕೊಂಚ ಜೋರಾಗಿಯೇ, “ಜಾನ್ ಮನೆಯಲ್ಲಿ ಇಲ್ವಾ?” ಎಂದೆ.
“ಇಲ್ಲ.” ತಗ್ಗಿದ ಸ್ವರದಲ್ಲಿ ಆಕೆ ಉತ್ತರಿಸಿದಳು. “ಹೊರಗೆ ಹೋಗಿದ್ದಾನಾ ಇಲ್ಲ, ಊರಲಿಲ್ಲವಾ?” ಕೇಳಿದೆ.
“ಜಾನ್ ಮನೆಯಲ್ಲೇ ಇದ್ದಾನೆ.” ಅವಳೆಂದಳು.

ನನಗೆ ಸಿಟ್ಟು ಏರುತ್ತಿತ್ತು. “ಮನೆಯಲ್ಲಿ ಇದ್ದೂ ಇಲ್ಲ ಅಂತಿರಲ್ಲಾ ಮಿಸೆಸ್ ರೈಟ್?” ಎಂದೆ.
“ಜಾನ್ ಸತ್ತೋಗಿದ್ದಾನೆ!” ಎನ್ನುತ್ತಾ ಮಿಸೆಸ್ ರೈಟ್ ಮತ್ತೆ ಏಪ್ರನ್ ಉಜ್ಜುವುದರಲ್ಲೇ ಮಗ್ನಳಾದಳು.
“ಏನೂ, ಸತ್ತು ಹೋಗಿದ್ದಾನಾ?” ನಾನು ಆಶ್ಚರ್ಯ ಮತ್ತು ಅತಂಕದಿಂದ ಕೇಳಿದೆ.
ಆಕೆ ಶಾಂತವಾಗಿ ‘ಹೌದು’ ಎನ್ನುವಂತೆ ಗೋಣು ಆಡಿಸಿ ಕುರ್ಚಿಯ ಮೇಲೆ ಹಿಂದಕ್ಕೂ ಮುಂದಕ್ಕೂ ತೂಗತೊಡಗಿದಳು.

“ಏನಾಯ್ತು ಮಿಸೆಸ್ ರೈಟ್?.. ಈಗ.. ಈಗ.. ಅವನು ಎಲ್ಲಿದ್ದಾನೆ?” ನಾನು ತೊದಲಿದೆ.
ಮಿಸೆಸ್ ರೈಟ್ ಮಹಡಿಯ ಕಡೆಗೆ ಬೊಟ್ಟು ತೋರಿಸಿದಳು.

“ಹೇಗೆ, ಏನಾಯ್ತು ಮಿಸೆಸ್ ರೈಟ್?” ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದೇ ತೊರಲಿಲ್ಲ.
“ಜಾನ್ ಕುತ್ತಿಗೆಗೆ ಹಗ್ಗ ಸುತ್ತಿಸಿಕೊಂಡು ಸತ್ತಿದ್ದಾನೆ..” ಎನ್ನುತ್ತಾ ಅವಳು ಏಪ್ರನ್ ಉಜ್ಜುತ್ತಾ, ಕುರ್ಚಿಯಲ್ಲಿ ತೂಗತೊಡಗಿದಳು…

| ಮುಂದುವರೆಯುತ್ತದೆ ।

‍ಲೇಖಕರು avadhi

February 7, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: