ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೆ ಎನ್ ಯು: ಒಂದು ಝಲಕ್

ಮ ಶ್ರೀ ಮುರಳಿ ಕೃಷ್ಣ

“ಒಂದು ವಿಶ್ವವಿದ್ಯಾನಿಲಯ ಎನ್ನುವುದು ಮಾನವತೆ, ಸಹಿಷ್ಣುತೆ, ತಿಳಿವಳಿಕೆ, ಪರಿಕಲ್ಪನೆಗಳ ಸಾಹಸಮಯ ಯಾನ, ಸತ್ಯಶೋಧನೆಯ ಪರವಾಗಿರಬೇಕು. ಉನ್ನತ ಧ್ಯೇಯೋದ್ದೇಶಗಳ ಮಾನವ ಕುಲದ ಮುನ್ನಡೆಗೆ ಚಾಲನೆ ನೀಡಬೇಕು. ವಿಶ್ವವಿದ್ಯಾನಿಲಯಗಳು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿದರೇ, ರಾಷ್ಟ್ರಕ್ಕೆ ಹಾಗೂ ಅದರ ಜನತೆಗೆ ಒಳಿತಾಗುತ್ತದೆ” ಎಂದರು ಭಾರತದ ಪ್ರಥಮ ಪ್ರಧಾನಿ ಜವಹರ್‍ಲಾಲ್ ನೆಹರು. ಇವು ಜೆಎನ್‍ಯುನ ಪ್ರಥಮ ಪರಿಚಯ ಪತ್ರಿಕೆ (ಪ್ರಾಸ್‍ಪೆಕ್ಟಸ್)ಯಲ್ಲಿರುವ ಅವರ ಮಾತುಗಳು. ಇದು ಅವರಿಗಿದ್ದ ವಿಶಾಲ ದೃಷ್ಟಿಕೋನದ ದ್ಯೋತಕ.

ನೆಹರು ಅವರಿಗಿದ್ದ ಮುಂಗಾಣ್ಕೆಯಂತೇ ಇತ್ತು ಜೆಎನ್‍ಯು; ಈಗಲೂ ಇದೆ. ತಡರಾತ್ರಿಯವರೆಗೆ ಅಲ್ಲಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಚಹಾ ಹೀರುತ್ತಲೋ, ಪಕೋಡ, ಸಮೋಸ ತಿನ್ನುತ್ತಲೋ, ಪಠ್ಯದ ವಿಷಯಗಳ ಜೊತೆಗೆ ಪಠ್ಯೇತರ, ಸಾಮಾಜಿಕ ಕಳಿಕಳಿಯಿರುವ ಅನೇಕ ವಿಚಾರಗಳತ್ತ ಗಮನ ಹರಿಸುತ್ತ, ವಾದ-ವಿವಾದ-ಸಂವಾದಗಳನ್ನು ಮಾಡುತ್ತ, ಜೀವಂತಿಕೆಯನ್ನು ಪ್ರದರ್ಶಿಸುತ್ತ, ಅಧ್ಯಯನ ನಡೆಸುವುದು ಇಲ್ಲಿನ ಸಾಮಾನ್ಯ ವರಸೆ. ಇದು ಅಲ್ಲಿನ ಪರಂಪರೆಯ ಒಂದು ಭಾಗವಾಗಿದೆ. ಧರ್ಮ, ಕೋಮು, ಜಾತಿ, ಪ್ರಾಂತ, ಭಾಷೆ ಮುಂತಾದ ಭೇದಭಾವಗಳಿಲ್ಲದೆ ಅವರು ಜ್ಞಾನಾರ್ಜನೆಗಾಗಿ ತಮ್ಮನ್ನು ತೆರೆದುಕೊಂಡು, ಕ್ರಿಯಾಶೀಲರಾಗಿ, ಬರೀ ನಮ್ಮ ದೇಶದಲ್ಲದೇ. ಅಂತರರಾಷ್ಟ್ರೀಯ ಮಟ್ಟದಲ್ಲೂ ತಮ್ಮ ಛಾಪನ್ನು ಮೂಡಿಸಿರುವ ಅನೇಕ ಪ್ರತಿಭಾವಂತರು ಇಲ್ಲಿ ಇದ್ದಾರೆ; ಆಗಿಹೋಗಿದ್ದಾರೆ.

ಆದರೆ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ತರುವಾಯ ಜೆಎನ್‍ಯುನ ತೇಜೋವಧೆ ಮಾಡುವ ಅಭಿಯಾನಕ್ಕೆ ಪುಷ್ಟಿ ದೊರೆಯಿತು. 1983ರ ನಂತರ ಪ್ರಥಮ ಬಾರಿಗೆ 2016ರಲ್ಲಿ ಪೊಲೀಸ್ ಜೆಎನ್‍ಯು ಪ್ರವೇಶಿಸಿ, ಅಂದಿನ ಜೆಎನ್‍ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಕನ್ಹಯ್ಯ ಕುಮಾರ್ ಹಾಗೂ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದರು. ಸಂಸತ್ ಭವನದ ಮೇಲಿನ ಆಕ್ರಮಣದ ವಿಷಯಕ್ಕೆ ಸಂಬಂಧಿಸಿದಂತೆ ನೇಣುಗಂಬವನ್ನೇರಿದ ಅಫ್ಜಲ್ ಗುರು ಕೇಸ್‍ನಲ್ಲಿ ಆತನಿಗೆ ನ್ಯಾಯ ದೊರಕಲಿಲ್ಲ ಎಂಬ ವಿಚಾರವಿದ್ದ ಸಭೆಯಲ್ಲಿ, ಕನ್ಹಯ್ಯ ಕುಮಾರ್ ಮತ್ತು ಇತರ ಕೆಲವು ವಿದ್ಯಾರ್ಥಿಗಳು ಭಾರತದ ವಿರುದ್ಧ ಘೋಷಣೆಗಳನ್ನು ಕೂಗಿದರು ಎಂಬುದು ಪೊಲೀಸರ ಆರೋಪವಾಗಿತ್ತು. ಆದರೆ ಇದುವರೆಗೆ ಈ ಆರೋಪ ಸಾಬೀತಾಗಿಲ್ಲ; ಅವರ ಮೇಲೆ ಚಾರ್ಜ್‍ಶೀಟನ್ನೂ ಹಾಕಿಲ್ಲ. ಈ ವಿಚಾರದಲ್ಲಿ ಟಿವಿ ಚ್ಯಾನೆಲ್‍ಗಳು, ಕೆಲವನ್ನು ಹೊರತುಪಡಿಸಿ, ಜೆಎನ್‍ಯುವನ್ನು ತಪ್ಪಾಗಿ ಬಿಂಬಿಸುವುದರಲ್ಲಿ ತಮ್ಮ ಪಾತ್ರವನ್ನು ವಹಿಸಿದವು. ಇತ್ತೀಚೆಗೆ ಉಮರ್ ಖಲೀದ್‍ನನ್ನು ಹತ್ಯೆ ಮಾಡಲು ಪ್ರಯತ್ನಿಸಲಾಯಿತು. ಆದರೆ ಈ ಪ್ರಯತ್ನ ವಿಫಲವಾಯಿತು.

ಜೆಎನ್‍ಯುನಲ್ಲಿ ಹಾಲಿ ಇರುವ ಕುಲಪತಿ ತಮ್ಮ ಅಧಿಕಾರವನ್ನು ವಹಿಸಿಕೊಂಡ ತರುವಾಯ ಜಾರಿಮಾಡಿದ ಕೆಲವು ಕ್ರಮಗಳು ವ್ಯಾಪಕ ಠೀಕೆಗೆ ಗುರಿಯಾಗಿವೆ. ಸ್ಪಷ್ಟವಾಗಿ, ಇವುಗಳು ಈ ವಿಶ್ವವಿದ್ಯಾನಿಲಯದ ಹಿತದಲ್ಲಿಲ್ಲ ಎನ್ನುವುದು ಠೀಕಾಕಾರರ ಅಭಿಪ್ರಾಯವಾಗಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಓಬಿಸಿ ಸಮುದಾಯಗಳ ಬಡವಿದ್ಯಾರ್ಥಿಗಳ ಭವಿಷ್ಯದ ಮುನ್ನಡೆಗೆ ತಡೆಯೊಡ್ಡುವ ಕ್ರಮ, ಉನ್ನತ ಸಂಶೋಧನೆಗೆ ಸೇರ್ಪಡೆಯಾಗುವ ನಿಟ್ಟಿನಲ್ಲಿ ನಿರ್ಬಂಧಗಳ ಹೇರಿಕೆ, ಸಣ್ಣ ತಪ್ಪುಗಳನ್ನು ಮಾಡಿದ ವಿದ್ಯಾರ್ಥಿಗಳ ಮೇಲೆ ಹಲವು ಸಾವಿರ ರೂಪಾಯಿಗಳ ದಂಡ ಹಾಕುವಿಕೆ, ಸ್ವೇಚ್ಛೆಯ ಹಾಗೂ ಪ್ರತಿಕಾರದ ಶಿಕ್ಷೆಗಳ ಪ್ರಯೋಗ, ಆಡಳಿತ ಮಂಡಲಿಯ ನಿರ್ದೇಶನಗಳನ್ನು ಸಕಾರಣಗಳೊಡನೆ ಪಾಲಿಸದ ಶಿಕ್ಷಕರ ವಿರುದ್ಧ ಶೋಕಾಸ್ ನೋಟಿಸ್‍ಗಳು ಇತ್ಯಾದಿ ಈ ವಿಶ್ವವಿದ್ಯಾನಿಲಯದ ವರ್ಚಸ್ಸಿಗೆ ಘಾಸಿಯನ್ನು ಉಂಟುಮಾಡಿವೆ.

ಜೆಎನ್‍ಯು ಬರೀ ಎಡಪಂಥ ವಿಚಾರಧಾರೆಯ ನೆಲೆವೀಡಾಗಿದೆ, ಆದುದರಿಂದ ಅಲ್ಲಿ ದೇಶದ್ರೋಹಿ ಪಡೆಗಳು ನಿರ್ಮಾಣಗೊಳ್ಳುತ್ತಿವೆ ಎಂಬುದನ್ನು ಪ್ರಧಾನವಾಗಿ ಜನಮಾನಸದಲ್ಲಿ ಬಿತ್ತಲು ಎಲ್ಲ ಬಗೆಯ ಷಡ್ಯಂತರಗಳನ್ನು ಹೆಣೆಯಲಾಗಿದೆ. ಆದರೆ ಇಲ್ಲಿನ ವಿದ್ಯಾರ್ಥಿವೃಂದಗಳು ಇನ್ನೂ ಅನೇಕ ವಿಚಾರಧಾರೆಗಳನ್ನು ಅನುಸರಿಸುತ್ತಾರೆ ಎಂಬುವುದಕ್ಕೆ ಹಲವು ನಿದರ್ಶನಗಳಿವೆ. ಇಲ್ಲಿ ಉದಾರ ಮನೋಭಾವವೂ ಢಾಳಾಗಿ ಕಂಡುಬರುತ್ತದೆ. ನಮ್ಮ ದೇಶದ ಮಾಜಿ ವಿದೇಶಾಂಗ ಕಾರ್ಯದರ್ಶಿ ಸುಬ್ರಹ್ಮಣ್ಯಂ ಜಯಶಂಕರ್, ರಾಷ್ಟ್ರೀಯ ಉಪ ಭದ್ರತಾ ಸಲಹೆಗಾರ ಅರವಿಂದ್ ಗುಪ್ತಾ, ಸ್ವರಾಜ್ ಇಂಡಿಯಾ ಸಂಘಟನೆಯ ಅಧ್ಯಕ್ಷ ಯೋಗೇಂದ್ರ ಯಾದವ್, ಸಿಪಿಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತರಾಮ್ ಯೆಚೂರಿ, ಪ್ರಸಿದ್ಧ ಪತ್ರಕರ್ತ ಪಾಲಗುಮ್ಮಿ ಸಾಯಿನಾಥ್, ಕೇಂದ್ರ ಸರ್ಕಾರದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇನ್ನೂ ಅನೇಕ ಗಣ್ಯರು ಈ ವಿಶ್ವವಿದ್ಯಾನಿಲಯದಿಂದ ಪದವಿ ಶಿಕ್ಷಣವನ್ನು ಪಡೆದು ಖ್ಯಾತನಾಮರಾಗಿದ್ದಾರೆ.

ಇತ್ತೀಚೆಗೆ ಈ ವಿಶ್ವವಿದ್ಯಾನಿಲಯದಲ್ಲಿ ಜರುಗಿದ ವಿದ್ಯಾರ್ಥಿ ಸಂಘದ ಚುಣಾವಣೆಯಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಅಭ್ಯರ್ಥಿಗಳು ಪ್ರಧಾನ ಹುದ್ದೆಗಳನ್ನು ಗೆದ್ದಿದ್ದಾರೆ. ಬಲಪಂಥೀಯ ಎಬಿವಿಪಿ ಸಂಘಟನೆಯ ಕಾರ್ಯಕರ್ತರು ಚುನಾವಣಾ ಪ್ರಕ್ರಿಯೆಗೆ ಅಡ್ಡಿಪಡಿಸಲು ಗೂಂಡಾಗಿರಿ ನಡೆಸಿದರೂ, ಅವರ ಕುಟಿಲ ಪ್ರಯತ್ನಗಳು ಸಾಕಾರಗೊಳ್ಳಲಿಲ್ಲ. ಇದು, ಈ ವಿಶ್ವವಿದ್ಯಾನಿಲಯವನ್ನು ಮುಗಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳಿಗೆ ಬಲವಾದ, ಇತ್ಯಾತ್ಮಕ ಸಂದೇಶವನ್ನು ರವಾನಿಸಿದೆ.

ಆದರೆ ಕೆಲವು ದಿನಗಳ ಹಿಂದೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಜೆಎನ್‍ಯುನಲ್ಲಿ ಭಾರತದ ವಿರುದ್ಧ ಯುದ್ಧವನ್ನು ಸಾರುವ ಶಕ್ತಿಗಳಿವೆಯೆಂದು ಹೇಳಿರುವುದು ಅತ್ಯಂತ ಬೇಜವಾಬ್ದಾರಿ ಹೇಳಿಕೆಯಾಗಿದೆ. ಜೆಎನ್‍ಯು ಉಳಿಯಬೇಕು; ಉಳಿಸಿಕೊಳ್ಳಬೇಕು. ಏಕೆಂದರೆ ಇದು ಭಾರತದ ಹೆಮ್ಮೆಯ ಶಿಕ್ಷಣ ಸಂಸ್ಥೆ.

‍ಲೇಖಕರು Avadhi

28 September, 2018

2 Comments

  1. ಮ ಶ್ರೀ ಮುರಳಿ ಕೃಷ್ಣ

    ಧನ್ಯವಾದ..ಶ್ರೀ ಜಿ ಎನ್ ಮೋಹನ್ ಹಾಗೂ ‘ಅವಧಿ’ ತಂಡ..

  2. ಪುರುಷೋತ್ತಮ ಬಿಳಿಮಲೆ

    ಜೆ ಎನ್ ಯು ವನ್ನು ಅಮೂಲಾಗ್ರವಾಗಿ ಬದಲಾಯಿಸುವ ಕೆಲಸ ನಡೆಯುತ್ಯಿದೆ. ಇಂಜಿನಿಯರಿಂಗ್/ ಎಂಬಿಎ ಕೋರ್ಸುಗಳು ಆರಂಭವಾಗುತ್ತಿವೆ. ಹಳೆಯ ಜೆ ಎನ್ ಯು ಇತಿಹಾಸವಾಗುತ್ತಿದೆ. Critical space has been demolished successfully.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading