ನಿಮ್ಮೊಳಗಿನ ಲೋಕದಲ್ಲೂ ಉರಿದುಹೋದ ಎಷ್ಟೊಂದು ಚಂದ್ರರಿರಬಹುದು. ಕಣ್ತೆರೆದು ಹುಡುಕಿ..

ಸೂರ್ಯನಂತೆ ಧಗಧಗನೆ ಉರಿದ ಚಂದ್ರ..

ಚಂದ್ರಾ…, ಹುಣ್ಣಿಮೆ ಬೆಳದಿಂಗಳಿನಂತಹ ಸೌಂದರ್ಯವನ್ನು ಹೊದ್ದ ಚೆಂದದ ಚೆಲುವೆ.

ವಯಸ್ಸು ಹದಿನೇಳೋ, ಹದಿನೆಂಟೋ ಇರಬಹುದು.

ದುಂಡು ಮುಖ, ಚಂಚಲವಾದ ಕಣ್ಣುಗಳು, ಕಡೆದಿಟ್ಟ ಗೊಂಬೆಯಂತಹ ಅಂಗಸೌಷ್ಠವ.

ನೀರ ಮೇಲೆ ತೇಲುವ ಹೊಸ ಹಾಯಿದೋಣಿಯಂತೆ ಅವಳ ನಡಿಗೆಯ ಲಯ.

ನದಿಯ ಘಟ್ಟಕ್ಕೆ ನೀರು ತುಂಬಿಕೊಂಡು ಬರಲಷ್ಟೇ ಅಲ್ಲ; ಜೀವ ಚೈತನ್ಯವನ್ನೂ ತುಂಬಿಕೊಂಡು ಬರಲು ಹೊರಡುವಂತಿತ್ತು ಅವಳ ಓಡಾಟ. ಮುಖದ ತುಂಬ ಹೊದ್ದ ಅವಕುಂಠನದ ಮರೆಯಲ್ಲಿಯೂ ಅವಳ ಚುರುಕಾದ ನಯನಗಳು ಇಡಿಯ ಊರಿನ ಸೂಕ್ಷಗಳನ್ನೆಲ್ಲ ಸರಸರನೆ ಗ್ರಹಿಸಿಬಿಡುತ್ತಿದ್ದವು. ಸುಂಯ್ಯನೆ ಬೀಸುವ ತಂಗಾಳಿ ಇಡಿಯ ಊರನ್ನು ಸುತ್ತುವಂತೆ ಅವಳು ಸ್ವಚ್ಛಂದವಾಗಿ ಊರನ್ನೆಲ್ಲ ಸುತ್ತುತ್ತಿದ್ದಳು. ಅವಳ ಗಂಡ ಚಿದಂ ಕೂಡ ಅಷ್ಟೇ ರೂಪವಂತ. ಅವನನ್ನು ಸರಿಯಾಗಿ ಆವರಿಸಿ ದಾರಿಯಲ್ಲಿಟುಕೊಳ್ಳಬೇಕೆಂಬ ಸಣ್ಣ ಎಚ್ಚರ ಚಂದ್ರಾಳಿಗೆ ಇದ್ದೇ ಇದೆ. ಆದರೆ ದಿನವೂ ನೀರು ತರಲು ಸ್ನಾನಘಟ್ಟದ ಬಳಿಗೆ ಹೋದಾಗ ಅಲ್ಲಿ ಈಜಾಡಲು ಬರುವ ಊರ ಶ್ರೀಮಂತ ಕಾಶಿ ಮುಜುಂದಾರರ ಮಗನ ಈಜಿನ ಪಟ್ಟುಗಳನ್ನವಳು ಆನಂದಿಸದೇ ಇರಲಾರಳು. ಹಾಗೆಯೇ ಅವನ ಮಿನುಗುವ ಅಂಗಸೌಷ್ಟವದ ಬಗ್ಗೆ ತಾನು ಮಾತು ತೆಗೆದಾಗಲೆಲ್ಲ ತನ್ನ ಗಂಡನೇಕೆ ಕೆಂಗಣ್ಣನೋಟವನ್ನು ತನ್ನೆಡೆಗೆ ಬೀರುತ್ತಾನೆ ಎಂಬ ವಿಷಯವೂ ಅವಳಿಗೆ ತಿಳಿಯದು.

ಚಿದಂಗೆ ಸದಾ ಇವಳದೇ ಚಿಂತೆ. ಅವನ ಅಣ್ಣನಿಗೂ ಈಗಾಗಲೇ ಮದುವೆಯಾಗಿ ಒಂದು ಪುಟ್ಟ ಮಗುವೂ ಇದೆ. ಆದರೆ ಅವಳು ಎಂದಾದರೂ ಇವಳಂತೆ ಜಿಗಿಯುತ್ತ ನಡೆದುದನ್ನು ಅವನು ಕಂಡಿಲ್ಲ. ಸದಾ ಅದಿಲ್ಲ, ಇದಿಲ್ಲವೆಂದು ಕೊರಗುತ್ತಾ, ಅಣ್ಣನ ಬಗ್ಗೆ ಅವರಿವರಲ್ಲಿ ದೂರುತ್ತಾ, ಇಡಿಯ ಜಗದ ಭಾರವೆಲ್ಲವೂ ತನ್ನ ಮೇಲೆಯೇ ಬಿದ್ದಂತಿರುವ ಅವಳು ಇವನಿಗೆ ಇಷ್ಟವೆಂದೇನೂ ಅಲ್ಲ. ಸಿಟ್ಟು ಬಂದಾಗ ಆ ಪುಟ್ಟ ಮಗುವಿಗೆ ಪಟಪಟನೆ ಅವಳು ಬಡಿಯುವಾಗೆಲ್ಲ ಚಿದಂ ಕೆಲವೊಮ್ಮೆ ಕೋಪಗೊಂಡಿದ್ದಾನೆ ಕೂಡ. ಆದರೆ ಚಂದ್ರಾಳ ಸಂತೋಷ ಮಾತ್ರ ಅತಿರೇಕದ್ದು ಅನಿಸುತ್ತದೆ ಅವನಿಗೆ. ಇಡಿಯ ದಿನ ಉಪವಾಸವಿದ್ದರೂ ಸಂಜೆ ತಾನು ಬರುವಾಗ ಹಾಡು ಹೇಳಿಕೊಂಡು ಕುಣಿಯುತ್ತಿರುತ್ತಾಳೆ. ಹಸಿವೆಯಾಗಲಿಲ್ಲವೆ ಎಂದರೆ, ‘ಹಾಡುಗಳಿವೆಯಲ್ಲ’ ಎನ್ನುತ್ತಾಳೆ. ಕೆಲವೊಮ್ಮೆ ಇವಳೂ ಅತ್ತಿಗೆಯಂತಿದ್ದರೆ ಚೆನ್ನಾಗಿತ್ತು ಎಂದು ಅವನಿಗೆ ಅನಿಸುವುದುಂಟು.

‘ಹುಡುಗಿ ಬಿರುಗಾಳಿಯ ಬೆನ್ನು ಹತ್ತಿದ್ದಾಳೆ. ಇನ್ನು ಹತೋಟಿಯಲ್ಲಿಡಲು ಸಾಧ್ಯವಿಲ್ಲ. ಏನಾದರೂ ಅನಾಹುತವಾಗುವ ಮುನ್ನ ತಹಬಂದಿಯಲ್ಲಿಟ್ಟುಕೊ.” ಊರ ಜನ ಅವಳ ಗಂಡ ಚಿದಂನನ್ನು ಎಚ್ಚರಿಸಿದರು. ಅವನೋ ಉಕ್ಕುವ ಯೌವ್ವನದ ಮದದಲ್ಲಿ ಒಂದೇ ನೆಗೆತದಲ್ಲಿ ಮುನ್ನುಗ್ಗಿ ಜಡೆಹಿಡಿದು ಅವಳನ್ನು ಎಳೆದೊಯ್ದು ಕೋಣೆಯೊಳಗೆ ತಳ್ಳಿ ಹೊರಗಿನಿಂದ ಬಾಗಿಲಿಗೆ ಬೀಗ ಹಾಕಿದ. ಸಂಜೆ ಕೆಲಸ ಮುಗಿಸಿ ಬರುವವರೆಗೂ ಇಲ್ಲೇ ಬಿದ್ದಿರು ಎಂದು ಶಪಿಸಿ ನಡೆದ. ಕೆಲಸ ಮುಗಿಸಿ ಮನೆಗೆ ಬಂದವನಿಗೆ ಅಚ್ಛರಿಯೊಂದು ಕಾದಿತ್ತು. ಚಂದ್ರಾ ಕೋಣೆಯಿಂದ ಕಾಣೆಯಾಗಿದ್ದಳು. ಮುಚ್ಚಿದ್ದ ಬಾಗಿಲು ಕಿತ್ತುಬಂದಿತ್ತು. ಅವಳ ಉಕ್ಕುವ ಯೌವ್ವನಕ್ಕೆ ಬಾಗಿಲೊಂದು ತಡೆಯೇ ಆಗಿರಲಿಲ್ಲ. ಚಂದ್ರಾ ಅದಾಗಲೇ ಮೂರು ಹಳ್ಳಿಗಳನ್ನು ದಾಟಿ ತನ್ನ ಸೋದರಮಾವನ ಮನೆ ಸೇರಿದ್ದಳು. ಚಿದಂಗೆ ಅವಳನ್ನು ಹುಡುಕುವುದರಲ್ಲಿ ಸಾಕುಸಾಕಾಗಿತ್ತು. ಮನೆಗೆ ಬರಲಾರೆನೆಂದು ಹಠಹಿಡಿದು ಕುಳಿತ ಹೆಂಡತಿಯ ಕಾಲಿಗೆ ಬಿದ್ದು ಅವಳನ್ನು ಮರಳಿ ತರಬೇಕಾಯಿತು. ‘ಹೆಂಡತಿಯನ್ನು ಹಿಡಿದಿಡುವುದು ಪಾದರಸವನ್ನು ಹಿಡಿದಿಡುವುದಕ್ಕಿಂತ ಕಷ್ಟ’ ಎಂಬ ಅರಿವು ಅವನಿಗಾಗಿತ್ತು. ಚಂದ್ರಾಳಂತೂ ಒಂದಿನಿತೂ ತಲೆಕೆಡಿಸಿಕೊಳ್ಳದೇ ಕಾಶಿ ಮುಜುಂದಾರನ ಕೊನೆಯ ಮಗ ಸ್ನಾನಘಟ್ಟದಲ್ಲಿ ಈಜುವಾಗ ತೋರುವ ಕೌಶಲಗಳನ್ನೆಲ್ಲ ಗಂಡನೆದುರು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಿದ್ದಳು ಮತ್ತು ಹಿಂದಿಗಿಂತಲೂ ತೀವ್ರವಾಗಿ ಚಿದಂನನ್ನು ಪ್ರೀತಿಸುತ್ತಿದ್ದಳು. ಭೀತಿಗ್ರಸ್ತ ಪ್ರೀತಿ ತೀವ್ರ ವೇದನೆಯಾಗಿ ಅವನನ್ನು ಪೀಡಿಸತೊಡಗಿತು.

ಆ ವೇಳೆಯಲ್ಲಿಯೇ ಅನರ್ಥವೊಂದು ಸಂಭವಿಸಿಬಿಟ್ಟಿತು. ಅಂದು ಅಣ್ಣತಮ್ಮಂದಿರಿಬ್ಬರೂ ಊರ ಚೌಕೀದಾರನ ಮನೆಯಲ್ಲಿ ಬೆವರು ಸುರಿಸಿ ದುಡಿದಿದ್ದರು. ಸಂಜೆ ಕಾಸಿಗಾಗಿ ಕೈಚಾಚಿದರೆ ಬರಿಗೈಯಲ್ಲಿ ಇವರನ್ನು ಕಳಿಸಿದ್ದ ಆ ಯಜಮಾನ. ಅವನಿಗೆ ಏನೂ ಹೇಳುವಂತಿರಲಿಲ್ಲ. ಬೆಳಗಿನಿಂದ ಊಟವಿಲ್ಲದೇ ಹೊಟ್ಟೆ ಒಂದೇ ಸಮನೆ ತಾಳ ಹಾಕುತ್ತಿತ್ತು. ಸಂಜೆ ಬರಿಗೈಯಲ್ಲಿ ಮನೆಗೆ ಬಂದು ಹೆಂಡತಿಯಲ್ಲಿ ಊಟಕ್ಕಿಡುವಂತೆ ಕೇಳಿದ್ದ ಚಿದಂನ ಅಣ್ಣ ದುಖೀರಾಮ. ಮನೆಯಲ್ಲಿ ಬಿಡಿಗಾಳೂ ಇರಲಿಲ್ಲ. ಎರಡು ವರ್ಷಪ್ರಾಯದ ಮಗು ಹಸಿವೆಯಿಂದ ಅತ್ತು ಸುಸ್ತಾಗಿ ಹಾಗೆಯೇ ಮಲಗಿತ್ತು. ಅವಳ ಓರಗಿತ್ತಿಯ ಸಿಟ್ಟು ಸಿಡಿಮದ್ದಿನಂತೇ ಸ್ಫೋಟಿಸಿತ್ತು. “ಊಟಕ್ಕೆ ಅಕ್ಕಿಯಿದ್ದರೆ ತಾನೆ? ಅಕ್ಕಿ ತಂದಿದ್ದರೆ ಹೇಳಿ. ಮತ್ತೆ ಊಟ ಕೇಳಿ” ಹಗಲಿಡೀ ದುಡಿದರೂ ಬಿಡಿಗಾಸು ಕೊಡದ ದಣಿಯರ ಮೇಲಿನ ಸಿಟ್ಟು ಹೆಂಡತಿಯ ಮೇಲೆ ತಿರುಗಿತು. ಅವನ ಕೈಯ್ಯ ಕೊಡಲಿ ಕ್ಷಣಾರ್ಧದಲ್ಲಿ ಅವಳ ರುಂಡ ಹಾರಿಸಿತ್ತು. ಚಿಮ್ಮಿದ ರಕ್ತ ಚಂದ್ರಾಳ ಸೀರೆಯನ್ನು ತೋಯಿಸಿತ್ತು. ದುಖಿಃರಾಮ ಗರಬಡಿದವನಂತೆ ಕುಳಿತ. ಕೋಪದ ಭರದಲ್ಲಿ ಹೆಂಡತಿಯನ್ನು ಕೊಂದ ದುಖೀ ಈಗ ನಿಜಕ್ಕೂ ದುಃಖಿತನಾಗಿದ್ದ.

ಅಷ್ಟರಲ್ಲಿಯೇ ಮನೆಗೆ ನುಗ್ಗಿದ ನೆರೆಯವನೊಬ್ಬ ಪ್ರಶ್ನೆಯ ಮೇಲೆ ಪ್ರಶ್ನೆ ಕೇಳಲಾರಂಭಿಸಿದ. ಚಿದಂ ಏನೆಂದು ಉತ್ತರಿಸಲೂ ತಿಳಿಯದೇ, “ಅದೇ ಇದೆಯಲ್ಲ ಎಲ್ಲರ ಮನೆಯಲ್ಲೂ ಓರಗಿತ್ತಿಯರ ಜಗಳ. ಇವಳೇನೋ ಅಂದಳು, ಅವಳೇನೋ ಹೇಳಿದಳು.” ಎಂದು ವಟಗುಟ್ಟತೊಡಗಿದ. ಅದಕ್ಕವನು ಬಣ್ಣಗಟ್ಟಿ, “ಓಹೋ, ಹೆಂಗಸರ ಜಗಳವಾ? ತೊಂದರೆಯೇನಿಲ್ಲ. ಏನಾದರೂ ಕಾರಣ ಕೊಟ್ಟು ನಿನ್ನ ಹೆಂಡತಿಯನ್ನು ಬಿಡಿಸಬಹುದು. ಮೊದಲು ಪೋಲೀಸರಲ್ಲಿ ಎಲ್ಲವನ್ನೂ ಒಪ್ಪಿಕೊಳ್ಳಲಿ. ಮತ್ತೆ ಕೋರ್ಟಿನಲ್ಲಿ ನೋಡಿಕೊಳ್ಳೋಣ” ಎಂದು ಧೈರ್ಯ ತುಂಬತೊಡಗಿದ. ಚಿದಂಗೀಗ ಮುಂದಿನ ದಾರಿ ಗೋಚರಿಸತೊಡಗಿತು.

ಚಿದಂ ಚಂದ್ರಾಳಿಗೆ ತಣ್ಣಗಿನ ದನಿಯಲ್ಲಿ ಹೇಳಿದ, “ನೀನು ಕೊಲೆ ಮಾಡಿರುವುದಾಗಿ ಒಪ್ಪಿಕೋ. ನಾನು ನಿನ್ನನ್ನು ಜೈಲಿನಿಂದ ಬಿಡಿಸಿಕೊಂಡು ಬರುತ್ತೇನೆ.” ಚಂದ್ರಾ ಎವೆಯಿಕ್ಕದೇ ಅವನನ್ನೇ ನೋಡುತ್ತಿದ್ದಳು. ಅವಳ ಕಣ್ಣುಗಳು ಕೆಂಡದುಂಡೆಗಳಂತೆ ಹೊಳೆಯುತ್ತಿದ್ದವು. ಅವನು ಅವಳು ಪೋಲೀಸರಿಗೆ ಹೇಳಬೇಕಾದ ಕಟ್ಟುಕಥೆಗಳ ಬಗ್ಗೆ ವಿವರಿಸತೊಡಗಿದ. ಹೀಗೆ ಹೇಳಿದರೆ ಅವಳು ಸುಲಭವಾಗಿ ಜೈಲಿನಿಂದ ಬಿಡುಗಡೆಯಾಗಬಹುದೆಂಬ ಭರವಸೆಯನ್ನೂ ತುಂಬುತ್ತಿದ್ದ. ಅವಳು ಅವನ ಮಾತುಗಳಿಗೆ ಕಿವುಡಾಗಿದ್ದಳು. ಪೋಲೀಸರು ಅವಳನ್ನು ಬಂಧಿಸಿಕೊಂಡು ಹೋಗುವಾಗ ಇಡಿಯ ಊರಿನ ಹೆಂಗಳೆಯರೆಲ್ಲರೂ ಕಿಟಕಿಯಾಚೆಗೆ ಬಂಧಿಯಾಗಿ ನಿಂತು ಗಾಬರಿಯಿಂದ ಅವಳನ್ನೇ ನೋಡುತ್ತಿದ್ದರು. ಅವರೆಲ್ಲರ ಬಿಡುಗಡೆಯ ಕನಸು ಕೈಜಾರಿದಂತಿತ್ತು.

ಪೋಲೀಸರು ಅಂತಹ ಹಠಮಾರಿ ಹುಡುಗಿಯನ್ನು ಕಂಡೇ ಇರಲಿಲ್ಲ. ಅವರು ಪರಿಪರಿಯಾಗಿ ಪ್ರಶ್ನಿಸಿದರೂ ಅವಳದ್ದು ಮಾತ್ರ ಒಂದೇ ಉತ್ತರ. “ನಾನೇ ನನ್ನ ಕೈಯ್ಯಾರೆ ನನ್ನ ಓರಗಿತ್ತಿಯನ್ನು ಕೊಂದೆ. ನನಗೆ ಅವಳನ್ನು ಕಂಡರಾಗುತ್ತಿರಲಿಲ್ಲ.” ಇದನ್ನುಳಿದು ಬೇರೆ ಯಾವ ವಾಕ್ಯವೂ ಅವಳ ಬಾಯಲ್ಲಿ ಬರಲಿಲ್ಲ. ಚಿದಂ ದಂಗುಬಡಿದು ಹೋಗಿದ್ದ. ಪೋಲೀಸರು ಅವಳನ್ನು ಬಂಧಿಸಿ ಒಯ್ಯುವಾಗ ಅವಳು ಅವನಿಗೆ ಹೇಳಿದಳು, ‘ಅರಳುವ ಯೌವ್ವನದೊಂದಿಗೆ ಗಲ್ಲುಗಂಬವೇರಲು ಹೊರಟಿರುವೆ. ದಿನವೂ ನನ್ನ ಸಂತೋಷವನ್ನು ಕಂಡು ಕೇಳುತ್ತಿದ್ದೆಯಲ್ಲ, ಯಾರನ್ನಾದರೂ ಪ್ರೀತಿಸುತ್ತಿರುವೆಯಾ ಎಂದು. ಹೌದು, ನಾನು ಗಲ್ಲುಗಂಬವನ್ನು ಪ್ರೀತಿಸುತ್ತಿದ್ದೇನೆ. ಇನ್ನು ನನ್ನ ಸಂಬಂಧವೇನಿದ್ದರೂ ಗಲ್ಲುಗಂಬದೊಂದಿಗೆ ಮಾತ್ರ.” ಚಿದಂ, ದುಖಿಃರಾಮ್ ಇಬ್ಬರೂ ಗರಬಡಿದು ನಿಂತರು!

ಕೋರ್ಟಿನಲ್ಲಿ ಬಗೆಬಗೆಯಾಗಿ ವಿಚಾರಣೆ ನಡೆಯಿತು. ಚಿದಂ ಈಗ ತನ್ನೊಳಗೆ ತಾನೇ ಬೇಯುತ್ತಿದ್ದ. ಪ್ರತಿಬಾರಿ ಕಟಕಟಗೆ ಬರುವಾಗಲೂ ಚಂದ್ರ ಇನ್ನಷ್ಟು ಆತ್ಮವಿಶ್ವಾಸದಿಂದ ಬೆಳಗುತ್ತಿದ್ದಳು ಮತ್ತು ಮತ್ತಷ್ಟು ಗಟ್ಟಿಯಾಗಿ ತಾನೇ ತನ್ನ ಓರಗಿತ್ತಿಯನ್ನು ಕೊಂದೆ ಎಂದು ಪ್ರತಿಪಾದಿಸುತ್ತಿದ್ದಳು. ಕೊನೆಗೊಮ್ಮೆ ಸ್ವತಃ ಚಿದಂ ತಾನೇ ಅತ್ತಿಗೆಯನ್ನು ಕೊಂದಿರುವುದಾಗಿ ಕಟಕಟೆಯಲ್ಲಿ ನಿಂತು ಹೇಳಿದ. ದುಖೀಃರಾಮನಂತೂ ತಾನು ಯಾಕಾಗಿ, ಹೇಗೆ ಹೆಂಡತಿಯನ್ನು ಕೊಂದೆ ಎಂಬ ಸತ್ಯವನ್ನು ನ್ಯಾಯಾಧೀಶರೆದುರು ಎಳೆಎಳೆಯಾಗಿ ಬಿಡಿಸಿಟ್ಟ. ಆದರೆ ಚಂದ್ರಾ ಮಾತ್ರ ತಾನೇ ಕೊಲೆಮಾಡಿರುವುದಾಗಿ ನ್ಯಾಯಸ್ಥಾನಕ್ಕೆ ಮನವರಿಕೆಯಾಗುವಂತೆ ಪ್ರತಿಪಾದಿಸಿದಳು. ಜಡ್ಜ್ ಅವಳಿಗೆ ಗಲ್ಲುಶಿಕ್ಷೆಯನ್ನು ವಿಧಿಸಿದರು.

ಜೈಲಿನಲ್ಲಿ ನೇಣುಹಾಕುವ ಮುನ್ನ, ಕರುಣಾಳು ಸಿವಿಲ್ ಸರ್ಜನ್ ಅವಳಿಗೆ, “ಯಾರನ್ನಾದರೂ ನೋಡುವ ಆಸೆಯಿದರಯೇ?” ಎಂದು ಕೇಳಿದರು. ಚಂದ್ರಾ ತಣ್ಣಗೆ ನುಡಿದಳು, “ನಾನು ನನ್ನ ಅಮ್ಮನನ್ನು ನೋಡಬೇಕು” ಅನಾರೋಗ್ಯಪೀಡಿತರಾಗಿದ್ದ ಅವಳ ತಂದೆ ಅವಳನ್ನು ಚಿದಂನ ಕೈಗೊಪ್ಪಿಸಿ ಅದಾಗಲೇ ಅಸುನೀಗಿದ್ದರು. “ನಿನ್ನ ಗಂಡ ನಿನ್ನನ್ನು ಕೊನೆಯ ಬಾರಿ ನೋಡಲೇಬೇಕೆಂದು ಹಠ ಹಿಡಿದಿದ್ದಾನೆ. ಅವನು ನಿನ್ನನ್ನು ಅದೆಷ್ಟು ಪ್ರೀತಿಸುತ್ತಾನೆ” ಎಂದರು ಸರ್ಜನ್. ಚಂದ್ರಾ ನಿಟ್ಟುಸಿರಿಟ್ಟು ನುಡಿದಳು, “ಆದರೆ ಅವನನ್ನು ತಿದ್ದಲಾಗದು……..” ಅವಳು ಗಂಡನನ್ನು ಪೂರ್ತಿಯಾಗಿ ಅರಿತಿದ್ದಳು, ಗಲ್ಲುಗಂಬವನ್ನು ಪ್ರೀತಿಸಿದಳು. ಹುಣ್ಣಿಮೆಯ ಬೆಳಕಿನಂತಿದ್ದ ಚಂದ್ರಾ ಸೂರ್ಯನಂತೆ ಧಗಧಗನೆ ಉರಿದ ಕಥೆಯಿದು.

ಸುಮಾರು ನೂರೈವತ್ತು ವರ್ಷಗಳ ಹಿಂದೆ ಇಂಥದ್ದೊಂದು ಸ್ತ್ರೀ ಪಾತ್ರವನ್ನು ಮತ್ತು ಅದು ತೋರುವ ಪ್ರತಿರೋಧದ ಅಲೆಯನ್ನು ಚಿತ್ರಿಸಲು ಗುರುದೇವರೊಬ್ಬರಿಗೇ ಸಾಧ್ಯ ಎನಿಸುತ್ತದೆ. ಕಥೆಯ ಓಘದಲ್ಲಿ ಸಿಕ್ಕಿಕೊಂಡ ಓದುಗನಿಗೆ ಚಂದ್ರಾಳೆಲ್ಲಿಯಾದರೂ ಪತಿಯ ದುಃಖಕ್ಕೆ ಕರಗಿಬಿಡುವಳೇನೋ ಎಂಬ ಆತಂಕ ಕಾಡುತ್ತದೆ. ಚಂದ್ರಾ ಗಲ್ಲುಗಂಬವೇರುವಾಗಳು ಅದೊಂದು ಬಿಡುಗಡೆಯ ದಾರಿಯಾಗಿ ಕಾಣುತ್ತದೆ. ಚಂದ್ರಾಳಂತಹ ಅನೇಕ ಹುಡುಗಿಯರ ಪ್ರತಿರೋಧದ ಅಲೆಗಳು ಮಾತ್ರವೇ ಇಂದಿನ ಹೆಣ್ಣಿನ ಬಿಡುಗಡೆಯ ಕಿಂಡಿಗಳಾದುದು ಕಾಡುತ್ತದೆ.

ಬಿಡುಗಡೆಯೆಂಬುದು ಪ್ರಪಂಚದ ಎಲ್ಲ ಜೀವಿಗಳ ತಹತಹಿಕೆ. ಮತ್ತದು ಜೀವಂತಿಕೆಯ ಲಕ್ಷಣವೂ ಕೂಡ. ಅಂಥದೊಂದು ಕ್ಷಣದ ಅಪರೂಪದ ಚಿತ್ರ ಎದೆಯೊಳಗೆ ಪ್ರತಿಮೆಯಾಗಿ ಇಂದಿಗೂ ಉಳಿದಿದೆ. ಅಂದು ಮನೆಯಲ್ಲಿ ಗಂಡಸರ್ಯಾರೂ ಇರಲಿಲ್ಲ. ಹಾಗೆ ಇದ್ದರೆ ಮುಸ್ಸಂಜೆಯಾದಮೇಲೆ ಹೊಸಿಲು ದಾಟಲು ಮನೆಯ ಹೆಣ್ಣುಗಳಿಗೆ ಅಧಿಕಾರವೂ ಇರಲಿಲ್ಲ. ಸಂಜೆ ಎಲ್ಲರಿಗೂ ಮೈ ತುರಿಕೆಯೆಂದೆನಿಸಿದ್ದರ ಹಿಂದಿನ ಕಾರಣ ಬೇರೆಯೇ ಇತ್ತು. ನಾಲ್ಕು ಜನ ಅತ್ತೆಯರೂ ಸ್ನಾನ ಮಾಡದೇ ನಿದ್ರೆ ಬಾರದೆಂದು ಮನೆಯಿಂದ ದೂರದಲ್ಲಿ ತೋಟದಲ್ಲಿರುವ ಸ್ನಾನದ ಮನೆಗೆ ತೆರಳಿದರು. ಹೋಗಿ ತಾಸು ರಾತ್ರಿಯಾದರೂ ಬಾರದ ಅವರನ್ನು ಊಟಕ್ಕೆ ಕರೆಯಲು ಅಮ್ಮ ಮಕ್ಕಳಿಬ್ಬರನ್ನು ಕಳಿಸಿದರು. ಅಲ್ಲಿ ಕಂಡ ದೃಶ್ಯ ನನ್ನ ಊಹೆಗೂ ಮೀರಿದ್ದಾಗಿತ್ತು. ಬಚ್ಚಲ ಬೆಂಕಿಯ ನಿಗಿನಿಗ ಕೆಂಡದೆದುರು ನಾಲ್ಕೂ ಜನರು ಬೆತ್ತಲೆಯಾಗಿ ಕುಳಿತು ಬೀಡಿ ಸೇದುತಿದ್ದರು. ಏನೇನೋ ಹೇಳಿ ತಮಾಷೆ ಮಾಡಿಕೊಂಡು ನಗುತಿದ್ದರು. ಆ ಕಾಲಕ್ಕೆ ಗಮಡಿಗೆ ಮಾತ್ರ ಸೀಮಿತವಾಗಿದ್ದ ಒಂದು ಕ್ಷಣವನ್ನವರು ತಾತ್ಕಾಲಿಕವಾಗಿ ಜೀವಿಸುತ್ತಿದ್ದರು ಅನಿಸುತ್ತದೆ!

ಕಟ್ಟುತಿರುವ ಮನೆ ಅರ್ಧದಲ್ಲಿಯೇ ನಿಂತುಹೋಗಿತ್ತು. ತಿಜೋರಿಯಲ್ಲಿರುವ ಕಾಸು ಬರಿದಾಗಿಹೋಗಿತ್ತು. ಮಿಲ್ಲಿನಿಂದ ಕಟ್ಟಿಗೆ ತರಿಸುವುದು ಕನಸಿನ ಮಾತಾಗಿತ್ತು. ಹಾಗಂತ ಊರಿನಲ್ಲಿಯೇ ಶ್ರೀಮಂತನಾದ ಮನೆಯೊಡೆಯನಿಗೆ ಮನೆಯನ್ನು ಕಟ್ಟದಿರಲು ಸಾಧ್ಯವೇ ಇರಲಿಲ್ಲ. ಕಳ್ಳಮಾಲಿನ ಹುಡುಕಾಟ ಆರಂಭವಾಯ್ತು. ಹತಿರದ ಕಾಡಿನಿಂದ ರಾತ್ರಿ ಸರಬರಾಜೂ ಆಗಿಹೋಯ್ತು. ಇನ್ನೇನು ಮನೆಯ ಕೋಳನ್ನು ಏರಿಸಬೇಕೆನ್ನುವಾಗ ಯಾರೋ ಫಾರೆಸ್ಟರಿಗೆ ದೂರು ಕೊಟ್ಟಾಗಿತ್ತು. ಮನೆಗೇ ಬಂದರು ಫಾರೆಸ್ಟ್ ಅಧಿಕಾರಿ. ಸಂಜೆಯವರೆಗೂ ಮಾತುಕತೆ ನಡೆದರೂ ಏನೊಂದೂ ಇತ್ಯರ್ಥವಾಗಲಿಲ್ಲ. ಇನ್ನೇನು ಇಳಿಸಂಜೆಯ ಹೊತ್ತು. ಕೆಲಸಗಾರರೆಲ್ಲ ನಿರ್ಗಮಿಸಿದ್ದರು. ಅಧಿಕಾರಿಯ ಕಣ್ಣು ಮನೆಯೊಡತಿಯ ಮೇಲೆ ನೆಟ್ಟಿತ್ತು. ಅನ್ಯಮಾರ್ಗವಿಲ್ಲವೆಂದು ಕೈಚೆಲ್ಲಿದ ಮನೆಯೊಡೆಯ. ಅವಳೋ ಗಟ್ಟಿಗಾತಿ ಹೆಣ್ಣು. ಗಂಡನ ಪುಕ್ಕಲುತನಕ್ಕೆ ಮನಸ್ಸಿನಲ್ಲಿಯೇ ಕ್ಯಾಕರಿಸಿ ಉಗಿದಳು. ಅಧಿಕಾರಿಯೊಂದಿಗೆ ಹಳೆಯ ಮನೆಯ ಮಾಳಿಗೆಯನ್ನೇರಿದಳು. ಬೆಳಗಾಗುವಾಗ ಅಧಿಕಾರಿಯ ಹೆಣ ಹಳೆಯ ಮನೆಯ ಮಾಡಿನಲ್ಲಿ ನೇತಾಡುತ್ತಿತ್ತು! ಹಾಲಿನಲ್ಲಿ ಬೆರೆಸಿದ ಪುಡಿಯ ಗುಟ್ಟು ಅವಳಿಗೆ ಮಾತ್ರವೇ ತಿಳಿದಿತ್ತು. ಕೊಲೆಯ ಆರೋಪವನ್ನು ಮನೆಯೊಡೆಯನೇ ಹೊರಬೇಕಾದ್ದರಿಂದ ಅದು ಆತ್ಮಹತ್ಯೆಯೆಂದು ಸುಲಭವಾಗಿ ಸಾಬೀತಾಯಿತು.

“ನೀನು ಗಂಡಸೇ ಆದರೆ ನನ್ನ ಮೈಮುಟ್ಟು ನೋಡುವ” ಎಂದು ತನಗೆ ಹೊಡೆಯಲು ಬರುವ ಸಹೋದರರಿಗೆ ಧಮಕಿ ಹಾಕುವ ಅರೆಮರುಳು ಹೆಣ್ಣೊಬ್ಬಳು ಸಾಮಾನ್ಯವಾಗಿ ಪ್ರತಿಕುಟುಂಬದಲ್ಲೂ ಮೊದಲು ಇದ್ದೇ ಇರುತ್ತಿದ್ದಳು. ಜಗವು ಅರಿಯದ ತಮ್ಮ ಗುಟ್ಟೆಲ್ಲಿ ಇವಳ ಬಾಯಿಂದ ರಟ್ಟಾಗುವುದೋ ಎಮಬ ಹೆದರಿಕೆಯಿಂದ, “ಮಳ್ಳಿ ಕೈಲಿ ಎಂಥ ಮಾತು?” ಎನ್ನುತ್ತಾ ಅಲ್ಲಿಂದ ಗಂಡುಕುಲ ಜಾಗ ಖಾಲಿ ಮಾಡುತ್ತಿತ್ತು. ಚರಿತ್ರೆ, ಇತಿಹಾಸಗಳೆಲ್ಲವೂ ಗಂಡಿನ ನೆಲೆಯಲ್ಲಿಯೇ ಬರೆಯಲ್ಪಟ್ಟದ್ದು ಕಾಲದ ಸತ್ಯವಲ್ಲದೆ ಬೇರೆನಿಲ್ಲ. ಅದನ್ನು ಹೆಣ್ಣಿನ ನೆಲೆಯಲ್ಲಿ ಓದಿದಾಗ ಬೇರೆಯೇ ಆಯಾಮ ಪಡೆದುಕೊಳ್ಳುವುದಂತೂ ಸುಳ್ಳಲ್ಲ. ಅಂಥದೊಂದು ಗ್ರಹಿಕೆಯನ್ನು ಮತ್ತು ದರ್ಶನವನ್ನು ಮೊದಲು ನೀಡಿದವರು ಗುರುದೇವ ರವೀಂದ್ರರು. ಪುರಾಣದ ಸ್ರ್ತೀ ಪಾತ್ರಗಳನ್ನು ಪರಿಧಿಯಿಂದ ಕೇಂದ್ರಕ್ಕೆ ತಂದು ಹೊಸ ಹೊಳಹನ್ನು ಮೊದಲಬಾರಿಗೆ ನೀಡಿದರು. ಹಾಗಾಗಿಯೇ ಅವರ ಕಥೆಯ ಪಾತ್ರಗಳು ಶತಮಾನ ಕಳೆದ ನಂತರವೂ ಪ್ರಸ್ತುತವಾಗುತ್ತವೆ ಮತ್ತು ವರ್ತಮಾನದೊಂದಿಗೆ ಸಂಭಾಷಿಸುತ್ತವೆ. ಅದನ್ನೇ ಬೇಂದ್ರೆಯವರು ಹೇಳಿದ್ದು, “ನಿನ್ನಂಗೆ ಹಾಡಾಕೆ, ನಿನ್ನಂಗೆ ಪಾಡಾಕೆ ಪಡೆದುಬಂದವರಿಲ್ಲೋ ಗುರುದೇವ”

ನಿಮ್ಮೊಳಗಿನ ಲೋಕದಲ್ಲೂ ಉರಿದುಹೋದ ಎಷ್ಟೊಂದು ಚಂದ್ರರಿರಬಹುದು. ಕಣ್ತೆರೆದು ಹುಡುಕಿ.

‍ಲೇಖಕರು avadhi

September 28, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. ಸುಧಾರಾಣಿ ನಾಯ್ಕ,ಸಿದ್ದಾಪುರ

    ಅದ್ಭುತ ಪ್ರತಿ ಬಾರಿಯ ಲೇಖನದಂತೆ ಇದು ನಿರೀಕ್ಷೆಯನ್ನು ಹುಸಿಗೋಳಿಸಲಿಲ್ಲ.ನಿಮ್ಮ ಬರಹ,ಲೇಖನ ಎರಡು ಸೂಪರ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: