
ಚಂದ್ರು ಎಂ ಹುಣಸೂರು
ನೆನ್ನೆ ಕೊಲ್ಲಲ್ಪಟ್ಟ ನಾನು
ಯಾರಿಂದ ಕೊಲ್ಲಲ್ಪಟ್ಟೆ ಎಂಬ
ತನಿಖೆಯಾಗಬೇಕೆಂದು ಒತ್ತಾಯದಲ್ಲಿದ್ದೇನೆ
ಜೀವಂತ ಇರುವಾಗ
ನಿನ್ನಿಂದ ಎಷ್ಟೊಂದು ಸುಖವನ್ನು ಅನುಭವಿಸಿದೆ
ಪ್ರತೀ ಕ್ಷಣ ಮತ್ತು ಈಗ
ಆದರೆ ಕೊಲ್ಲಲ್ಪಟ್ಟು ದೂರ ದೂರ ನಿಲ್ಲುತ್ತಿದ್ದೇನೆ
ಮತ್ತೊಂದು ಹುಟ್ಟಿಗೆ
ಮತ್ತೊಂದು ಕೊಲೆಗೆ
ಹೇಗೆ ಕೊಲ್ಲುತ್ತಾರೆ
ಮತ್ತು ಜೀವ ಹೋಗುವಾಗ ಅದು ಯಾವ ಹಾದಿ ಹಿಡಿದು ಹೋಗುತ್ತದೆ
ಎನ್ನುವ ಅನುಮಾನವಿತ್ತು
ಈಗ ಇಂಚಿಂಚು ಸಾಯುವಾಗ ಸಾವು ಅರ್ಥವಾಯಿತು
ಸಾವು ಅರ್ಥವಾದವರಿಗೆ ಇನ್ನೇನು ಕೆಲಸ ಇಲ್ಲಿ
ಎಂದು ಅವಸರಕ್ಕೂ ಮೂದಲಿಸಬೇಡ
ಜತೆಜತೆಗೆ ನೀನು ಸಾಯುವುದನ್ನು ನೋಡಿದ್ದೇನೆ
ನಾವಿಬ್ಬರು ಈಗ ಒಂದೇ ಮಸಣದ ಹೂಗಳು

ಹೆಚ್ಚೆಂದರೆ ಈಗ ಮತ್ತೊಂದು ಹುಟ್ಟಿಗೆ ಕಾಯಬಹುದು
ಅದಕ್ಕಾಗಿ ಯಾರು ಯಾರ ಮಿಲನವಾಗಬೇಕೊ
ನನ್ನ ಕೋಪ ನಿನ್ನ ಅಹಂಕಾರದ್ದ
ಅಥವಾ ನನ್ನ ಸಹಜತೆ ಮತ್ತು ಅಪೇಕ್ಷೆಯದ್ದ
ಆಗ ನಾನು ಮತ್ತೊಮ್ಮೆ ಹುಟ್ಟುತ್ತೇನೆ ಮತ್ತು ನೀನೂ
ಹುಟ್ಟು ಸಾವಿನ ನಡುವೆ
ಆಗಾಗ ಸಾಯಬೇಕಾದರೆ
ಮತ್ತೆ ಮತ್ತೆ ಹುಟ್ಟಬೇಕಾದರೆ
ಪ್ರೀತಿ ಮಾಡಬೇಕೆಂದು ಯಾರೂ ಕಲಿಸಲಿಲ್ಲ
ಅದು ನಿನ್ನ ಮೌನದ ಕೂಸು
ನಿನ್ನ ನಿರ್ಲಕ್ಷತನದ ಶಕ್ತಿ
ಹಾಗಾಗಿ ನಾನು ಮತ್ತೆ ಮತ್ತೆ ಸಾಯಲು ಅಂಜುವುದಿಲ್ಲ
ಮತ್ತೊಂದು ಹುಟ್ಟಿದೆಯಲ್ಲ
ಅದರಲ್ಲಿ ನಾನು ಊಹಿಸದ
ಬೆಳಕು ಲೋಕದಲ್ಲಿ
ಇನ್ನೂ ಗಟ್ಟಿಯಾದ ಅಪ್ಪುಗೆ
ಮಾನವ ಜನ್ಮದ ಸಾರ್ಥಕತೆ

ಇದನ್ನೆಲ್ಲ ಹೇಳುವಾಗ ನಾನು ಹುಟ್ಟುತ್ತಿದ್ದೇನೆ
ನೀನೂ ಕೂಡ ಹುಟ್ಟುವ ಹಂತದಲ್ಲಿರಬಹುದು
ಅಥವಾ ಇನ್ನೂ ಶವವಾಗಿ
ಒಟ್ಟಿನಲ್ಲಿ ಆದಷ್ಟು ಬೇಗ ಹುಟ್ಟುವ ಗುಣ ನಮ್ಮಲ್ಲಿರಬೇಕು
ಶವವಾಗಿ ಇರುತ್ತೀವೆಂದರೆ ಲೋಕ ಕೈಚೆಲ್ಲುತ್ತದೆ
ಮೂರು ದಿನದ ನಂಬಿಕೆಗೆ
ಬೀಜವೊಂದು
ಎದೆಯ ತೇವವ ಹರಿಸಿ
ಪುಟ್ಟ ಬೇರನ್ನು ಬಿಟ್ಟು
ಮೊಳಕೆಯೊಡೆಯುವಾಗ
ನಾವೆಲ್ಲ ನಂಬಿಕೆಯ ಬಗ್ಗೆ ಯೋಚಿಸಲೇಬಾರದು ನೋಡು






ಚಂದದ ಕವಿತೆ
ಥ್ಯಾಂಕ್ಯೂ..
ಓದುತ್ತ ಹೋದಂತೆ ಬದುಕಿನ ಅನುಭವಗಳನ್ನು ಅನಾವರಣಗೊಳಿಸುತ್ತ ಹೋಗುವ ಈ ಕವನ ಓದುಗನ ಮನಸ್ಸನ್ನು ಹದ್ದು ಬಸ್ತಿನಲ್ಲಿ ಇಡುತ್ತದೆ. ಶುಭಮಸ್ತು ಚಂದ್ರು ರವರೇ ..