ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಪಿ ಬಸವರಾಜು ಹೊಸ ಕವಿತೆ- ಯುದ್ಧವೆಂದರೆ…

ಜಿ ಪಿ ಬಸವರಾಜು

೧. ಯುದ್ಧವೆಂದರೆ

ಬೆಚ್ಚಗಿನ ಮನೆ ಸುಟ್ಟು ಕರುಕಾಗಿದೆ
ಸಿಡಿದು ಬೀದಿಗೆ ಬಿದ್ದ ಆಲ್ಬಮ್ಮನ್ನು
ತುಳಿದು ಹೋಗುತ್ತವೆ ಸೈನಿಕ ಬೂಟು

ಅನಾಥವಾಗಿ ಕೈಚಾಚುತ್ತದೆ ಆಲ್ಬಂ
ಮಗು, ಹೊಗೆ ಮೋಡಗಳ ಆಕಾಶಕ್ಕೆ
ಸಿಡಿಯುವ ಬಾಂಬುಗಳ ಬಿತ್ತಿ ಬೆಳೆದ
ನೆಲದಲ್ಲಿ ಅಪ್ಪನೆಲ್ಲೊ ಅಮ್ಮನೆಲ್ಲೊ

ಕಾಳ್ಗಿಚ್ಚಿನಂತೆ ಧಾವಿಸಿ ಬರುವ ಜ್ವಾಲೆ-
ನಾಲಗೆ, ಗಳಿಗೆಗಳ ಎಣಿಸುತ್ತಿದೆ ಆಲ್ಬಂ
ಅಳುವೊ ನಗುವೊ, ಹಗೆಯಿಲ್ಲದ ಮುಗ್ಧ ಮಗು
ಯಾಕೆ? ಯುದ್ಧದ ನಾಡಿಗೆ ಗಡಿಗೆರೆಯಷ್ಟೆ ಸಾಕು

ಪುಟ್ಟ ಪಾದವನೂರಿ ಹೊರ ಬರುತ್ತದೆ ಮಗು
ಬಯಲು ಆಲಯ, ಖಾಲಿ ಬೀದಿ, ಸುಳಿವಿಲ್ಲ
ಜೀವಗಳ, ದಿಡ್ಡಿಬಾಗಿಲ ತೆರೆದಿದೆ ಸುಡುಗಾಡು
ಸಿಡಿದ ಚೂರುಗಳ ಎಡವಿ ಬೀಳುತ್ತದೆ ಮಗು

ರೆಕ್ಕೆ ಬಡಿಯುತ್ತ ಬರುವ ಚಿತ್ರಗಳ ನೋಡುತ್ತ
ಮನೆಬಿಟ್ಟು ನಾಡಬಿಟ್ಟು ಬಂದ ಸೈನಿಕ
ಎತ್ತಿಕೊಳ್ಳುತ್ತಾನೆ ಮಗುವ, ಬಂದೂಕವನು
ನೆಲಕಿಟ್ಟು ನೇವರಿಸುತ್ತಾನೆ ಒರಟು ಕೈಗಳಲ್ಲಿ

೨. ಕೆಂಪಾಗುವುದಿಲ್ಲ ಸುಡುಗಾಡು

ಯುಕ್ರೇನಿನಲ್ಲೀಗ ನದಿಗಳು ಹರಿಯುವುದಿಲ್ಲ
ನೆತ್ತರ ಕಾಲುವೆಗಳು ಬಂದು ಸೇರುವ ನದಿಯ
ಬಣ್ಣ ಯಾವುದೆಂದು ಕೇಳಿ
ರಷ್ಯನ್‌ ಸೈನಿಕರನ್ನೆ

ದೋಣಿಗಳು, ಮೀನುಗಾರರು
ಈ ನದಿಗಳಲ್ಲಿ ಯಾಕೆ
ಕಾಣುತ್ತಿಲ್ಲ? ಬಿಡುಗಣ್ಣು
ತೆರೆದು ನೋಡಿದರೆ
ತೇಲುತ್ತಿರುವ ದೋಣಿಗಳು
ಊದಿಕೊಂಡ ಹೆಣಗಳು

ಯುಕ್ರೇನಿನ ಹೊಲಗದ್ದೆಗಳನ್ನು
ನೋಡಲಾಗುವುದಿಲ್ಲ ನೀವು
ಸುಟ್ಟು ಕರುಕಲಾದ ಉಳಿಕೆಯಲ್ಲಿ
ಹುಡುಕುವುದು ಹೇಗೆ ಹಸಿರನ್ನು
ಜೀವ ಜೀವದ ಉಸಿರನ್ನು?

ಸೊಂಟ ಮುರಿದು ಬಿದ್ದ ಕಟ್ಟಡಗಳು
ಭಣಗುಟ್ಟುವ ಬೀದಿಗಳು, ಗುರುತಿಲ್ಲದ
ಗಾಯಗಳು, ಆಕಾಶ ಮುಚ್ಚಿದ ಹೊಗೆ
ನೆಲ ಮುಗಿಲ ತಬ್ಬಿನಿಂತ ಬೆಂಕಿ
ಯಾರ ಮುಖ ನೋಡುವುದು, ರಷ್ಯನ್‌
ಸೈನಿಕರೂ ಬಿದ್ದಿದ್ದಾರೆ-ಬೀದಿ ಹೆಣಗಳಾಗಿ

ಹಕ್ಕಿಗಳೆತ್ತ ಹಾರಿ ಹೋದವು ಈ ನಾಡಿನಲ್ಲಿ?
ಮಕ್ಕಳು ಮುದುಕರು ಬೀಲದಲ್ಲಿ ತಲೆಮರೆಸಿ
ಸೂರ್ಯ ಕಾಣುತ್ತಿಲ್ಲ, ಚಂದಿರ ಬರುತ್ತಿಲ್ಲ
ಹದ್ದು ಕಾಗೆಗಳೂ ಕಾಣದ ಸುಡುಗಾಡಿನಲ್ಲಿ

ಕಾಲ ನಿಂತಿದೆ ಋತುಚಕ್ರ ತಿರುಗುತ್ತಿಲ್ಲ
ಸೂರ್ಯನಿಲ್ಲದ ಹಗಲಲ್ಲಿ ಹೆಜ್ಜೆ ತಪ್ಪಿದೆ
ನೀಲಿ ಆಕಾಶ ನುಣುಚಿಕೊಂಡಿದೆ, ಸಿಡಿ-
ತಲೆಯ ಕ್ಷಿಪಣಿ ಕಾರುತ್ತಿವೆ ಹಗೆಯನ್ನು

ಬಲೆಹಿಡಿದು ಹೊರಟವರು ಬರುತ್ತಾರೆ ಖಾಲಿ-
ಕೈಯಲ್ಲಿ, ಆ ಹಕ್ಕಿ ಬೇಕಾದರೆ ಈ ಹಕ್ಕಿಯನ್ನು
ಕೊಲ್ಲಬೇಕು, ಹರಿವ ನೆತ್ತರಿನಲ್ಲಿ ಕುಂಚವನು
ಅದ್ದಿ ಅದ್ದಿ ಬಳಿಯಬೇಕು ಕೆಂಪು ಬಣ್ಣ, ಎಷ್ಟು
ಬಳಿದರೂ ಕೆಂಪಾಗುವುದಿಲ್ಲ ನೆಲ, ಸುಟ್ಟ
ಸುಡುಭೂಮಿ ಕಪ್ಪನೆಯ ಕರುಕಲು ನೆಲ

ಮನುಷ್ಯರು ನಡೆದಾಡಿದ ಹೆಜ್ಜೆಗುರುತನ್ನೂ
ಒರೆಸಿ ಹಾಕಿವೆ ಸಾಲಿಟ್ಟ ಯುದ್ಧ ಟ್ಯಾಂಕು,
ಗುರಿಯಿಟ್ಟು ನಡೆವಾಗ ದಾರಿ ಯಾರಿಗೆ ಬೇಕು?
ಗೆಲ್ಲುವುದಕ್ಕೆ ಇದ್ದಾನೆ ಒಬ್ಬ-ಸರ್ವಾಧಿಕಾರಿ

‍ಲೇಖಕರು Admin

5 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading