ಜಿ ಪಿ ಬಸವರಾಜು ಹೊಸ ಕವಿತೆ: ಮುಖವಾಡಗಳು

 ಜಿ.ಪಿ.ಬಸವರಾಜು

ಮುಖವಾಡಗಳ ಮಂದಿ ಕಾಣುತ್ತಾರೆ

ಬೀದಿಯಲ್ಲಿ, ಮಾರ್ಕೆಟ್ಟಿನಲ್ಲಿ, ಮಾಲುಗಳಲ್ಲಿ

ಮತ್ತೆ ಎಲ್ಲಿ ನೋಡಿದರೂ ಅಲ್ಲಿ ಮುಖವಾಡ;

 

ಗುರುತು ಪರಿಚಯದವರೂ ಹೊಸಬರಾಗಿಯೇ

ಕಾಣುತ್ತಾರೆ ಮುಖವಾಡದಲ್ಲಿ, ಒಮ್ಮೊಮ್ಮೆ

ಮನುಷ್ಯರಾಗಿಯೂ ಕಾಣುವುದಿಲ್ಲ, ನಿಮ್ಮ

ಕಲ್ಪನೆಯಲ್ಲಿ ಸುಳಿದು ಹೋಗುವ ಪ್ರಾಣಿ-

ಗಳಂತೆ ಕಂಡು ನೀವು ಸರಿದು ಹೋಗಬೇಕು;

 

ಬೀದಿತುಂಬ, ಊರತುಂಬ, ಎಲ್ಲೆಲ್ಲು ಮುಖ-

ವಾಡಗಳ ಪವಾಡ; ಒಮ್ಮೊಮ್ಮೆ ನಸುಗತ್ತಲಲ್ಲಿ

ಕಂಡಾಗ ಈ ಮುಖವಾಡಗಳು ದೆವ್ವ, ಭೂತ

ಕರಾಳ ಕಾಲಧರ್ಮ, ಕೈಯಲ್ಲಿ ಪಾಶವಿದೆಯೊ

ಇಲ್ಲವೊ ನೊಡಲಾಗುವುದಿಲ್ಲ- ಭಯ ಕವಿದು;

 

ನೀವು ಜೀವಂತ ಉಳಿಯಬೇಕೆಂದರೆ ಈ

ಮುಖವಾಡಗಳು ಬೇಕೇಬೇಕು ಎನ್ನುತ್ತಾರೆ;

ನಿಜವಿರಬಹುದು ಬಲ್ಲವರ ಮಾತು,ನಾವಂತೂ

ಮುಖವಾಡಗಳ ಹೊತ್ತೇ ನಡೆಯುತ್ತೇವೆ ಎಲ್ಲೆಲ್ಲೂ

ಹುಟ್ಟಿನಿಂದಲೇ ಈ ಜೀವದ ಆಸೆ ಕಾಡಿರಬೇಕು

ಆಗಿನಿಂದಲೇ ತೊಟ್ಟಿದ್ದೇವೆ ಮುಖವಾಡ-ಒಂದಲ್ಲ

ಹತ್ತಾರು, ಮನೆಯಲ್ಲಿ, ಕಚೇರಿಯಲ್ಲಿ, ಬೀದಿಯಲ್ಲಿ

ಗೆಳೆಯರಲ್ಲಿ, ಪರಿಚಿತರಲ್ಲಿ, ಅಪರಿಚಿತರಲ್ಲಿ ಒಂದೊಂದು

ಮುಖವಾಡ; ಒಳಗೊಂದು ಹೊರಗೊಂದು, ತೊಟ್ಟೇ

ಬದುಕಿದ್ದೇವೆ ಮುಖವೇ ಇಲ್ಲದೆ ಮುಖವಾಡದಲ್ಲಿ

ರಂಗದ ಮೇಲೊಂದು, ಕೆಳಗೊಂದು, ಗ್ರೀನ್‍ರೂಂನಲ್ಲಿ

ಎಲ್ಲ ಮುಖವಾಡಗಳ ಕಳಚಿದಾಗಲೂ ಉಳಿಯುವುದು

ಮುಖವಾಡ, ಹುಟ್ಟಲಿಲ್ಲವೇ ನಾವು ಮುಖವಾಡಗಳನು

ಬಿಟ್ಟು, ನಮ್ಮ ಅಸಲೀ ಮುಖಗಳ ತೊಟ್ಟು-ಎಂದರೆ

ಇಂಥ ಪ್ರಶ್ನೆಯೇ ಅಸಂಬದ್ಧ ಎಂದರು ಲೋಕ ಬಲ್ಲವರು

 

ಬದುಕಲು ಬೇಕು ಕಣಯ್ಯಾ ಮುಖವಾಡ, ಅದಿದ್ದರೇ

ಭೂಷಣ, ರೈಲು ಹಳಿಗಳ ಮೇಲೆ ಓಡುವುದು ಸಲೀಸು

ಇಲ್ಲವಾದರೆ ಮುಳ್ಳಿನ ಕಿರೀಟ ಹೊರಬೇಕು, ಮೊಳೆ

ಹೊಡೆಸಿಕೊಂಡು ಶಿಲುಬೆಗೇರಬೇಕು, ಸುರಿವ ರಕ್ತದ

ಯಾತನೆಯ ಮೆರವಣಿಗೆಯನ್ನೇ ಜನ ಬಯಸುವರು

ಆಗಲೂ ಅವರು ಮುಖವನ್ನು ಗುರುತಿಸುವುದಿಲ್ಲ

ದೇವಪುರುಷನೆಂದು ಮುಖವಾಡ ತೊಡಿಸುವರು

 

ರಾಮ ಈ ಮಣ್ಣಿನವನೇ, ಕಿಲಾಡಿ ಕೃಷ್ಣನ ಆಟಕ್ಕೆ

ಮಣ್ಣು ಬೇಕು ಮೂರು ಲೋಕಗಳ ತೋರಿಸಲು

ಬುದ್ಧ ಒಂದೊಂದೆ ಮಜಲು ದಾಟಲು ಎಷ್ಟೊಂದು

ಬೆವರು ಹರಿಸಿದ, ಆದರೂ ಒಪ್ಪುವುದಿಲ್ಲ ಲೋಕ

ಇವನಿಗೂ ಬೇಕು ಹನ್ನೊಂದನೆಯ ಅವತಾರದ

ಕಿರೀಟ, ಬಸವ ಕೇವಲ ಎಂಟುನೂರು ಹೆಜ್ಜೆ ದೂರ,

ಪವಾಡವಿಲ್ಲದೆ ಮುಖವಾಡವಿಲ್ಲದೆ ಒಪ್ಪುವುದು ಹೇಗೆ

ಅವನನ್ನು, ಕೂಡಲ ಸಂಗಮದ ಅಸಲೀ ಮನುಷ್ಯನನ್ನು

 

ಹುಟ್ಟು ಈ ಮಣ್ಣಿನದೇ, ಆದರೆ ವೇಷ ಮಾತ್ರ

ದೇವಲೋಕದಿಂದ ಬರಬೇಕು, ಈಗ ನಾವು

ತರುತ್ತಿಲ್ಲವೇ ಎಲ್ಲವನ್ನೂ ವಿದೇಶದಿಂದ, ಹಾಗೆ

 

ಮುಖವಾಡವೇ ಮನುಜರಿಗೆ ಒಪ್ಪುವುದು,

ಜನ ಮೆಚ್ಚುವುದು ದೇವರ ಮುಖವಾಡವನ್ನೇ

ದೇವರ, ಅವತಾರಗಳ ಮುಖವಾಡ ಚಂದ

‍ಲೇಖಕರು nalike

May 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಪ್ರಕಾಶ್ ಕೊಡಗನೂರ್

    ಜೀಪಿಯವರ ಕವಿತೆ ಮನುಷ್ಯ ಸಂವೇದನೆಯ ನಿಜ ರೂಪವನ್ನು ಕಳೆದುಕೊಂಡoತೆಯೂ ; ನಮ್ಮ ಸೋಗಲಾಡಿತನದ , ಒಲ್ಲದ ನೋಟಗಳಲ್ಲಿ ಇದು ವಿಜೃಂಭಿಸುತ್ತಿರುವ ವಿಷಾದವನ್ನೂ ಎತ್ತಿಹಿಡಿದಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: