ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಪಿ ಕಾಲಂ : ಎಚ್ಚರಿಕೆ! ದಿಕ್ಕುತಪ್ಪಿಸುವ ಪ್ರಶಸ್ತಿಗಳಿವೆ

ಎಚ್ಚರಿಕೆ! ದಿಕ್ಕುತಪ್ಪಿಸುವ ಪ್ರಶಸ್ತಿಗಳಿವೆ

ಕೃಪೆ : ವಿಜಯ ಕರ್ನಾಟಕ

ಕನ್ನಡ ಸಾಹಿತ್ಯವನ್ನು ಓದುವವರ ಸಂಖ್ಯೆ ಇಳಿಮುಖವಾಗುತ್ತಿದೆ ಎನ್ನುವ ಕೊರಗು ಆಗಾಗ ಪ್ರಕಟವಾಗುತ್ತಲೇ ಇದೆ. ಆದರೆ ಪ್ರತಿವರ್ಷ ಪ್ರಕಟವಾಗುತ್ತಿರುವ ಕನ್ನಡ ಪುಸ್ತಕಗಳ ಸಂಖ್ಯೆಯಲ್ಲಂತೂ ಇಳಿಮುಖ ಕಾಣಿಸುತ್ತಿಲ್ಲ. ಸೃಜನಶೀಲ ಕ್ರಿಯೆಯಲ್ಲಿ ತೊಡಗಿರುವವರ ಮತ್ತು ಪ್ರಕಟಿಸುವವರ ಉತ್ಸಾಹವಂತೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಪೂರಕವಾಗಿ, ಇಂಥ ಸೃಷ್ಟಿಶೀಲ ಕಾರ್ಯದಲ್ಲಿ ತೊಡಗುವವರ ಬೆನ್ನುತಟ್ಟಲು ಹಲವು ಪ್ರಶಸ್ತಿಗಳೂ ಕನ್ನಡದಲ್ಲಿವೆ.

ಬೇಂದ್ರೆ, ಕುವೆಂಪು, ಮಾಸ್ತಿ, ಪುತಿನ ಅವರ ಕಾಲದಲ್ಲಿ ಇಷ್ಟೊಂದು ಪ್ರಶಸ್ತಿಗಳಿರಲಿಲ್ಲ. ಆಗ ಕೃತಿಗಳನ್ನು ಪ್ರಕಟಿಸುವುದೇ ದೊಡ್ಡ ಕೆಲಸವಾಗಿತ್ತು. ಆದರೂ ಜನ ಈ ಲೇಖಕರ ಕೃತಿಗಳನ್ನು ಓದುತ್ತಿದ್ದರು; ಚರ್ಚಿಸುತ್ತಿದ್ದರು. ತಮ್ಮ ಮೆಚ್ಚಿನ ಲೇಖಕ ಮಾತನಾಡುವ ಅಥವಾ ಕವಿತೆಯನ್ನು ಓದುವ ಸಭೆಗಳಿಗೆ ಆಸಕ್ತರು ನುಗ್ಗಿ ಬರುತ್ತಿದ್ದರು. ಇಂಥ ಸಭೆಗಳಿಂದ, ಸಹೃದಯರ ಕೂಟಗಳಿಂದ ಲೇಖಕರು ಉತ್ತೇಜಿತರಾಗುತ್ತಿದ್ದರು; ತಮ್ಮ ಕೃತಿಗಳಿಗೆ ಸಿಕ್ಕುತ್ತಿದ್ದ ಈ ಬಗೆಯ ಸ್ಪಂದನಗಳಿಂದ ಹಿಗ್ಗುತ್ತಿದ್ದರು. ಈ ಸಾರ್ಥಕತೆಯ ತೃಪ್ತಿಯಲ್ಲಿ ಸೃಜನಶೀಲತೆ ಚಿಮ್ಮುತ್ತಿತ್ತು.

ಇದರ ಆಚೆಗೆ ಇದ್ದ ಬೆರಳೆಣಿಕೆಯ ಪ್ರಶಸ್ತಿಗಳು ತಮ್ಮ ಘನತೆ ಗೌರವಗಳನ್ನು ಉಳಿಸಿಕೊಂಡು, ಬರಹಗಾರರ ಘನತೆ ಗೌರವಗಳನ್ನೂ ಪೊರೆಯುತ್ತಿದ್ದವು. ಈಗ ಕಾಲಚಕ್ರ ಉರುಳಿದೆ. ಕಾವೇರಿಯಲ್ಲಿ ಬಹಳ ನೀರು ಹರಿದು ಹೋಗಿದೆ ಎನ್ನುವುದಕ್ಕಿಂತ ಈ ನೀರಿಗಾಗಿ ನಡೆದ ಕಲಹಗಳೂ ಸಾಕಷ್ಟು ಪ್ರಮಾಣದಲ್ಲಿ ನಡೆದು ಹೋಗಿವೆ.

ಈಗ ಹಲವು ಮಾಧ್ಯಮಗಳಿವೆ. ಕನ್ನಡಿಗರನ್ನು ತಣಿಸಲು ಅಕ್ಷರ ಮಾಧ್ಯಮವೊಂದೇ ಉಳಿದುಕೊಂಡಿಲ್ಲ. ವಿಭಿನ್ನ ಮಾರ್ಗಗಳ ಬಿರುಸು, ವೇಗ, ಅಬ್ಬರ, ಎಲ್ಲೆಲ್ಲೂ ಗದ್ದಲ. ಸಂತೆಯೊಳಗೆ ನಿಂತೇ ಬರೆಯಬೇಕಾದ ಅನಿವಾರ್ಯ ಬರಹಗಾರರ ಪಾಲಿಗಿದೆ; ಓದುಗನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಸಾಹಿತ್ಯದ ಬಗ್ಗೆ ಪ್ರೀತಿ, ಗೌರವ ಇಟ್ಟುಕೊಂಡು ಅದನ್ನು ಉತ್ತೇಜಿಸುವುದಕ್ಕಾಗಿ ನಿಂತಿರುವವರ ನಿಲುವು ನೋಟಗಳಲ್ಲೂ ಬದಲಾವಣೆಗಳಾಗಿವೆ. ಸಕರ್ಾರ, ಅಕಾಡೆಮಿಗಳು, ಪರಿಷತ್ತುಗಳಲ್ಲದೆ ಖಾಸಗೀ ಟ್ರಸ್ಟುಗಳು, ಸಂಘಟನೆಗಳು, ಕೂಟಗಳು ಪ್ರಶಸ್ತಿಗಳನ್ನು ಸ್ಥಾಪಿಸಿ ಬರಹಗಾರರ ಬೆಂಬಲಕ್ಕೆ ನಿಂತಿವೆ. ಹಣವೂ ದೊಡ್ಡ ಪ್ರಮಾಣದಲ್ಲಿ ಹರಿಯುತ್ತಿರುವುದರಿಂದ ಕೆಲವು ಪ್ರಶಸ್ತಿಗಳ ನಗದು ಹಣವೂ ದೊಡ್ಡದಾಗಿಯೇ ಇದೆ.

ಇವತ್ತು ಪ್ರಕಟವಾಗುವ ಬಹುಪಾಲು ಕೃತಿಗಳನ್ನು ಗಮನಿಸಿದರೆ, ನಮ್ಮಲ್ಲಿರುವ ಪ್ರಶಸ್ತಿಗಳ ಅಂದಾಜು ಸಿಕ್ಕುತ್ತದೆ. ಇಷ್ಟೊಂದು ಪ್ರಶಸ್ತಿಗಳ ನಡುವೆ ಲೇಖಕ ತನ್ನ ತಲೆಯನ್ನು ನೆಟ್ಟಗಿಟ್ಟುಕೊಂಡು ಬರೆಯುವುದೇ ಸೋಜಿಗದ ಸಂಗತಿ. ಆದರೂ ಪ್ರಶಸ್ತಿಗಳನ್ನು ಮೀರಿ ನಿಂತು ಬರೆಯಬಲ್ಲ ಸೃಜನಶೀಲರ ಸಂಖ್ಯೆ ಕನ್ನಡದಲ್ಲಿ ದೊಡ್ಡದಾಗಿಯೇ ಇದೆ ಎಂಬುದು ಸಮಾಧಾನ ತರುವ ಸಂಗತಿ.

ಪ್ರಶಸ್ತಿಗಳು ಹೆಚ್ಚಾಗಿರುವಂತೆಯೇ ಅವುಗಳ ಸ್ವರೂಪಗಳೂ ವೈವಿಧ್ಯಮಯವಾಗಿವೆ. ಕೆಲವು ಪ್ರಶಸ್ತಿಗಳು ಇವತ್ತಿಗೂ ತಮ್ಮ ಘನತೆಯನ್ನು ಕಾಯ್ದುಕೊಂಡಿವೆ. ಆಯ್ಕೆಯ ವಿಧಾನ, ತೀರ್ಪುಗಾರರ ಘನತೆಗೆ ಧಕ್ಕೆ ತಾರದ ವರ್ತನೆ, ಪ್ರಶಸ್ತಿ ಪಡೆಯುವ ಲೇಖಕರನ್ನು ನಡೆಸಿಕೊಳ್ಳುವ ರೀತಿ, ಪ್ರಶಸ್ತಿ ಪ್ರದಾನ ಸಮಾರಂಭಗಳ ಅಚ್ಚುಕಟ್ಟುತನ, ಕೃತಿಯ ಮೌಲ್ಯಮಾಪನ ಇತ್ಯಾದಿ ಅನೇಕ ಅಂಶಗಳಲ್ಲಿ ಕೆಲವು ಸಂಘಟನೆಗಳು ತಾವು ನೀಡುವ ಪ್ರಶಸ್ತಿಗಳನ್ನು ಮಹತ್ವದ ಪ್ರಶಸ್ತಿಗಳಾಗಿ ಮಾಡಿವೆ. ಇಂಥ ಪ್ರಶಸ್ತಿ ತನಗೆ ದೊರಕಿದೆ ಎಂದು ಲೇಖಕರು ಹೇಳಿಕೊಳ್ಳುವ ರೀತಿಯಲ್ಲಿ, ಜನ ಅದಕ್ಕೆ ಮನ್ನಣೆ ಕೊಡುವ ವಿಧಾನದಲ್ಲಿ ಈ ಪ್ರಶಸ್ತಿಗಳ ಘನತೆಯನ್ನು ಯಾರಾದರೂ ಗುರುತಿಸಬಹುದಾಗಿದೆ.

ನಮ್ಮ ಮಹತ್ವದ ಲೇಖಕರ ಹೆಸರಿನಲ್ಲಿ ಕೊಡುವ ಪ್ರಶಸ್ತಿಗಳು ಘನತೆಯಿಂದ ಕೂಡಿದಾಗ ಜನ ಸಂತೋಷಿಸುತ್ತಾರೆ; ಪ್ರಶಸ್ತಿಯನ್ನು ಪಡೆದ ಲೇಖಕರಲ್ಲಿ ಸಂತೃಪ್ತಿಯ ಭಾವ ಉಳಿಯುತ್ತದೆ; ಒಂದು ಸಮಾಜ ಆರೋಗ್ಯಪೂರ್ಣ ದಿಕ್ಕಿನಲ್ಲಿ ಮುನ್ನಡೆಯುತ್ತಿರುತ್ತದೆ. ಆದರೆ ಇದು ವ್ಯತಿರಿಕ್ತವಾದರೆ ಕನ್ನಡ ನಾಡು ಹೆಮ್ಮೆಪಡುವ ಲೇಖಕರ ಮುಖಕ್ಕೇ ಮಸಿಬಳಿದಂತಾಗುತ್ತದೆ. ಇದು ನಮ್ಮ ಲೇಖಕರಿಗೇ ನಾವು ಮಾಡುವ ಘೋರ ಅನ್ಯಾಯ.

ಇವತ್ತು ನಮ್ಮಲ್ಲಿರುವ ಅನೇಕ ಪ್ರಶಸ್ತಿಗಳ ಚರ್ಚೆ ಸಾರ್ವಜನಿಕವಾಗಿಯೇ ನಡೆಯಬೇಕಾಗಿದೆ. ಪ್ರಶಸ್ತಿಯ ಮೊತ್ತ ಮುಖ್ಯವಲ್ಲವಾದರೂ, ಅದು ಕೇವಲ ನೂರು, ಇನ್ನೂರು, ಐನೂರು ರೂಪಾಯಿಗಳಿಗೆ ಕುಗ್ಗುವುದು ಮತ್ತು ಇದನ್ನು ಪಡೆದುಕೊಳ್ಳುವುದಕ್ಕಾಗಿ ಲೇಖಕರು ತಮ್ಮ ಖರ್ಚಿನಲ್ಲಿಯೇ ಸಮಾರಂಭಕ್ಕೆ ಬಂದು ಹೋಗಬೇಕಾದ ಪರಿಸ್ಥಿತಿಯನ್ನು ನಿರ್ಮಿಸುವುದು ತಪ್ಪು. ಈ ಎಲ್ಲ ಸಂಗತಿಗಳನ್ನೂ ಲೇಖಕರಿಗೆ ಅನೇಕ ಸಂಘಟನೆಗಳು ಮೊದಲೇ ತಿಳಿಸುವುದಿಲ್ಲ. ಪ್ರಯಾಣ ಭತ್ಯೆ, ಊಟ, ವಸತಿ ಇವೆಲ್ಲ ಇದ್ದೇ ಇರುತ್ತವೆ ಎಂದು ಪ್ರಶಸ್ತಿ ಪಡೆದ ಲೇಖಕ ಭಾವಿಸಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಬೇಸ್ತುಬೀಳಬೇಕಾದ ಸನ್ನಿವೇಶವನ್ನು ಅನೇಕ ಸಂಘಟನೆಗಳು ಪ್ರತಿವರ್ಷ ಪ್ರಶಸ್ತಿಯ ಹೆಸರಿನಲ್ಲಿ ಸೃಷ್ಟಿಸುತ್ತಲೇ ಇರುತ್ತವೆ. ಪ್ರಶಸ್ತಿಗಾಗಿ ಐದು ಪ್ರತಿಗಳನ್ನು ಕಳುಹಿಸಿ, ಆರು ಪ್ರತಿಗಳನ್ನು ಕಳುಹಿಸಿ ಎಂದು ಲೇಖಕರಿಗೆ ಸೂಚಿಸುವುದು ಪುಸ್ತಕ ಸಂಗ್ರಹಿಸುವ ದಂಧೆಯಾಗಿ ಬೆಳೆಯುತ್ತಿದೆ. ಪ್ರಶಸ್ತಿಗಾಗಿ ಅರ್ಜಿಯನ್ನು ಹಾಕಿಕೊಳ್ಳಿ, ನಿಮ್ಮ ಸಾಧನೆಯ ವಿವರಗಳನ್ನು ಕೊಡಿ ಎಂದು ಹೇಳುವುದು ಲೇಖಕರಿಗೆ ಮಾಡುವ ಅಪಮಾನ ಎಂದು ಪ್ರಶಸ್ತಿಗಳನ್ನು ಕೊಡುವವರು ಯೋಚಿಸುವುದಿಲ್ಲ; ಅರ್ಜಿ ಹಾಕುವ ಲೇಖಕರೂ ಯೋಚಿಸುವುದಿಲ್ಲ. ಇದು ಪ್ರಶಸ್ತಿಗಳ ದುರಂತವೊ, ಕನ್ನಡದ ದುರಂತವೋ?

ಮೊನ್ನೆ ಧಾರವಾಡದ ಟ್ರ್ರಸ್ಟೊಂದು ತನ್ನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿತು. ಪ್ರಶಸ್ತಿಗೆ ಪಾತ್ರರಾಗಿದ್ದ ಕವಿ ಶಿವರಾಜ ಬೆಟ್ಟದೂರ ಪ್ರಶಸ್ತಿಯನ್ನು ನಿರಾಕರಿಸಿದರು. ಅದಕ್ಕೆ ಅವರು ಕೊಟ್ಟ ಕಾರಣ: ಲೇಖಕರ ಹೆಸರಿನಲ್ಲಿ ತುಸು ವ್ಯತ್ಯಾಸ ಕಾಣಿಸಿತೆಂಬ ಕಾರಣಕ್ಕಾಗಿ ಕವಿಯನ್ನು ಅವರ ಹೆಸರಿನ ಬಗ್ಗೆ ಅಫಿಡವಿಟ್ ಕೇಳಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದ ಆಹ್ವಾನ ಪತ್ರಿಕೆ ಕೊನೆಯ ಕ್ಷಣದವರೆಗೂ ಕವಿಯ ಕೈಸೇರದ್ದು ಇತ್ಯಾದಿ. ಕವಿ, ನಿಮ್ಮ ಪ್ರಶಸ್ತಿಯೂ ಬೇಡ, ಅಫಿಡವಿಟ್ಟೂ ಬೇಡ ಎಂದು ದೂರದಿಂದಲೇ ಕೈಮುಗಿದರು. ಇದೇ ಟ್ರಸ್ಟ್ ಹಿಂದೆ ಕವಿ ವಿಭಾ ಅವರಿಗೆ ಪ್ರಶಸ್ತಿಯನ್ನು ಘೋಷಿಸಿ, ವಿಭಾ ಅವರ ಪತಿ ಬಸೂ ಅವರಿಗೆ ಸಮಾರಂಭಕ್ಕೆ ಬಂದು ಪ್ರಶಸ್ತಿಯನ್ನು ಸ್ವೀಕರಿಸುವಂತೆ ಕೋರಿತು. ನಂತರ ಪ್ರಶಸ್ತಿಯನ್ನು ರದ್ದುಗೊಳಿಸಿತು. ಕಾರಣ ದಿವಂಗತರಿಗೆ ಈ ಪ್ರಶಸ್ತಿಯನ್ನು ಕೊಡುವುದು ಬೇಡವಂಬ ಟ್ರಸ್ಟಿನ ನಿರ್ಧಾರ. ವಿಚಿತ್ರ ಎಂದರೆ ಈ ಪ್ರಶಸ್ತಿ ಘೋಷಣೆಯ ಸಂದರ್ಭದಲ್ಲಿಯೂ ವಿಭಾ ಬದುಕಿರಲಿಲ್ಲ. ವಿಭಾ ಇಲ್ಲದ ನೋವಿನಲ್ಲಿ ಕೊರಗುವ ಪತಿಗೆ ಬರೆಹಾಕುವ ವಿಧಾನವೇ ಇದು?

ಪ್ರಶಸ್ತಿ ಖಾಸಗಿ ಸಂಸ್ಥೆಗಳು ಕೊಡುವುದಿರಲಿ, ಸರ್ಕಾರ ಅಥವಾ ಅಕಾಡೆಮಿ ಕೊಡುವುದಿರಲಿ ಅದರಲ್ಲಿ ಗುಟ್ಟುಗಳಿರಬಾರದು. ಪ್ರಶಸ್ತಿಗೆ ಆಯ್ಕೆ ಮಾಡುವ ವಿಧಿ ವಿಧಾನದಿಂದ ಹಿಡಿದು ಎಲ್ಲವೂ ಪಾರದರ್ಶಕವಾಗಿರಬೇಕು. ಲೇಖಕರ ಗೌರವಕ್ಕೆ ಧಕ್ಕೆಯುಂಟುಮಾಡುವ ಯಾವ ಅಂಶವೂ ಇರಬಾರದು. ಪ್ರಶಸ್ತಿಯನ್ನು ಪ್ರೀತಿಗೌರವಗಳಿಂದ ಕೊಡಬೇಕು. ಪ್ರಶಸ್ತಿಕೊಡುವ ಸಾಮಥ್ರ್ಯ, ಆರ್ಥಿಕ ಬಲ ಇಲ್ಲದಿದ್ದರೆ ಪ್ರಶಸ್ತಿಗಳನ್ನು ಕೊಡಬೇಕಾಗಿಲ್ಲ. ಸಮಾರಂಭ ವ್ಯವಸ್ಥೆ ಮಾಡುತ್ತೇವೆ ಹಣ ಕೊಡಿ, ಸಮಾರಂಭದ ಚಹಾಕ್ಕೆ ವ್ಯವಸ್ಥೆ ಮಾಡಿ, ಸ್ವಲ್ಪ ವೆಚ್ಚವನ್ನು ಭರಿಸಿ ಇತ್ಯಾದಿ ಶೋಷಣೆ ಮಾಡುವ ಸಂಘ ಸಂಸ್ಥೆಗಳ ಬಣ್ಣವನ್ನು ಲೇಖಕರೂ ಬಯಲು ಮಾಡಲು ಸಿದ್ಧವಿರಬೇಕು.

ಇದೆಲ್ಲದಕ್ಕಿಂತ ಮುಖ್ಯವಾಗಿ ಲೇಖಕ ಪ್ರಶಸ್ತಿಯ ಮೇಲೇ ನಿಂತಿರಬಾರದು. ಕೃತಿಯ ಸತ್ವವೇ ಮುಖ್ಯ; ಅದರ ಬಲವೇ ಲೇಖಕನ ಬಲ. ಪ್ರಶಸ್ತಿ, ಅಗ್ಗದ ಪ್ರಚಾರ, ಅನಗತ್ಯ ಸಾರ್ವಜನಿಕ ಮನ್ನಣೆ ಲೇಖಕನನ್ನು ದಾರಿತಪ್ಪಿಸುವುದೇ ಹೆಚ್ಚು. ಈ ಎಚ್ಚರ ಲೇಖಕನಿಗೆ ಇರಬೇಕು. ಉದಯೋನ್ಮುಖರು, ಅಸ್ತಂಗತರು ಎಂಬ ಬೇಧವಿಲ್ಲದೆ ಪ್ರಶಸ್ತಿಗಾಗಿ ಹಪಹಪಿಸುವ, ಲಾಬಿ ಮಾಡುವ ಲೇಖಕರೇ ಹೆಚ್ಚಾಗಿರುವ ಇಂದಿನ ಸಂದರ್ಭದಲ್ಲಿ ಪ್ರಶಸ್ತಿಗಳ ಬಗ್ಗೆ ಎಚ್ಚರಿಕೆಯಿಂದಿರಿ, ಮೌಲ್ಯಗಳಿಗಾಗಿ ಬದುಕಿ ಎಂದು ಯಾರಿಗೆ ಹೇಳುವುದು?

 

‍ಲೇಖಕರು G

13 November, 2012

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading