ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ನಾಗರಾಜ್ ಕೇಳ್ತಾರೆ: ಬೇರೆ ಧರ್ಮದ ಮೇಲೆ ಹಗೆ ಸಾಧಿಸುವುದೇಕೆ?

ಭಾಗ ೬

ಭಾಗ ೫ ಓದಲು ಇಲ್ಲಿ ಕ್ಲಿಕ್ಕಿಸಿ

ಇನ್ನು ಮನುಷ್ಯ ಸಮಾಜದ ಜಾತಿವ್ಯವಸ್ಥೆಯ ಬಗ್ಗೆ, ಜಾತಿ ಬೇಧಗಳ ಬಗ್ಗೆ ಶಂಕರರು ಏನು ಹೇಳುತ್ತಾರೆ ನೋಡೋಣ
ಬ್ರಹ್ಮ ಸೂತ್ರದಲ್ಲಿ ಅಪ ಶೂದ್ರಾಧಿಕರಣವೆಂದು ಕರೆಯಲ್ಪಡುವ ಭಾಗದಲ್ಲಿ 1-3- 34 ರಿಂದ 1-3-38 ರವರೆಗಿನ ಸೂತ್ರಗಳ ಬಗ್ಗೆ ಶಂಕರರು ನೀಡಿದ ವಿವರಣೆಗಳಲ್ಲಿ ಶೂದ್ರರಿಗೆ ಜ್ಞಾನದ ಹಕ್ಕಿಲ್ಲ. ಏಕೆಂದರೆ ಅವರು ವೇದವನ್ನು ಆಧ್ಯಯನ ಮಾಡುವಂತಿಲ್ಲ. ವೇದಾಧ್ಯಯನ ಮಾಡುವುದಕ್ಕೆ ಉಪನಯನವಾಗಿರಲೇ ಬೇಕು. ಉಪನಯನ ಮೂರು ದ್ವಿಜ ಜಾತಿಯವರಿಗೆ ಮಾತ್ರ ಸೀಮಿತಗೊಳಿಸಲ್ಪಟ್ಟಿದೆ. ಆದ್ದರಿಂದ ಶೂದ್ರರು ವೇದಗಳನ್ನು ಅಧ್ಯಯನ ಮಾಡುವಂತಿಲ್ಲ. ಅವರಿಗೆ ಜ್ಞಾನವನ್ನು ಪಡೆಯುವ ಅಭಿಲಾಷೆಯಿರಬಹುದು. ಸಾಮರ್ಥ್ಯವೂ ಇರಬಹುದು ಆದರೆ ಇವು ಯಾವುದೂ ಅವರನ್ನು ಜ್ಞಾನ ಪಡೆಯುವುದಕ್ಕೆ ಅರ್ಹರನ್ನಾಗಿ ಮಾಡುವುದಿಲ್ಲ. ಏಕೆಂದರೆ ಕೇವಲ ಸಾಮಾನ್ಯ ಸಾಮರ್ಥ್ಯ ಅದಕ್ಕೆ ಅರ್ಹರನ್ನಾಗಿ ಮಾಡುವುದಿಲ್ಲ. ಅದಕ್ಕೆ ಬೇಕಾದದ್ದು ವೇದ ಜ್ಞಾನದ ಸಾಮರ್ಥ್ಯ, ಅದು ಅವರಿಗೆ ನಿಷೇಧಿಸಲ್ಪಟ್ಟಿದೆ ಎಂದು ಸಾರಿದ್ದಾರೆ.
ಶೂದ್ರರಿಗೆ ಅಭಿಲಾಷೆಯಿರಬಹುದು. ಸಾಮರ್ಥ್ಯವೂ ಇರಬಹುದು. ಆದರೆ ನಿಷೇಧದಿಂದಾಗಿ, ಅದಕ್ಕೆ ಅವರು ದ್ವಿಜರಲ್ಲದುದೇ ಕಾರಣವಾಗಿ ಅವರಿಗೆ ಜ್ಞಾನದ ಹಕ್ಕು ಇಲ್ಲ. ಇದು ಜಾತಿ ವ್ಯವಸ್ಥೆಯೋ ಅಲ್ಲವೋ ?
ಶಂಕರರು ಮುಂದಿನ ಸೂತ್ರಗಳ ವಿವರಣೆಯಲ್ಲಿ ಇನ್ನೂ ಭಯಂಕರ ಸಂಗತಿಗಳಿಗೆ ತಮ್ಮ ಅಂಗೀಕಾರ ಮುದ್ರೆಯನ್ನು ಒತ್ತುತ್ತಾರೆ.
ಸ್ಮೃತಿಗಳು ಹೇಳಿವೆ
ಶೂದ್ರನಿಗೆ ವೇದಗಳನ್ನು ಕೇಳುವ ಹಕ್ಕಿಲ್ಲ. ಅಧ್ಯಯನ ಮಾಡುವ ಹಕ್ಕಿಲ್ಲ. ವೇದಗಳ ಅರ್ಥವನ್ನು ತಿಳಿಯುವ ಹಕ್ಕಿಲ್ಲ ಎಂದು. ಅವನೇನಾದರೂ ವೇದಗಳನ್ನು ಕೇಳಿಸಿಕೊಂಡು ಬಿಟ್ಟರೆ ಅವನ ಕಿವಿಗೆ ಕಾದ ಸೀಸ ಮತ್ತು ಅರಗಿನಿಂದ ತುಂಬಿಬಿಡಬೇಕೆಂದು ಗ್ರಂಥಗಳು ಹೇಳಿವೆ. ಶೂದ್ರನು ಚಲಿಸುವ ಸ್ಮಶಾನ ವಾದ್ದರಿಂದ ಅವನು ಇರುವ ಆಸು ಪಾಸಿನಲ್ಲಿ ವೇದಗಳನ್ನು ಓದಬಾರದು.

ಅಷ್ಟೇ ಅಲ್ಲ ವೇದೋಚ್ಚಾರಣೋ ಜಿಹ್ವಾ ಚ್ಛೇದೋ ವೇದಧಾರಣೋ ದೇಹಚ್ಛೇದೋ
ಅಂದರೆ ಶೂದ್ರನು ವೇದವನ್ನು ಉಚ್ಚರಿಸಿದರೆ ಅವನ ನಾಲಿಗೆಯನ್ನೇ ಕತ್ತರಿಸಬೇಕು. ವೇದವನ್ನು ಹೃದ್ಗತ ಮಾಡಿಕೊಂಡರೆ ( ನೆನಪಿನಲ್ಲಿಟ್ಟುಕೊಂಡರೆ ) ಅವನ ದೇಹವನ್ನು ಛಿದ್ರ ಛಿದ್ರ ಮಾಡಬೇಕು.
ಆದರೆ ವಿದುರ, ಧರ್ಮವ್ಯಾಧರಂತೆ ಹಿಂದಿನ ಜನ್ಮಗಳಲ್ಲಿ ಮಾಡಿದ ಪುಣ್ಯದ ಫಲವಾಗಿ ಅವರಿಗೆ ತಾನೇ ತಾನಾಗಿ ಜ್ನಾನ ಲಭಿಸಿದರೆ ಅದನ್ನು ತಪ್ಪಿಸಲಾಗದು. ಶೂದ್ರರಿಗೆ ಪುರಾಣಗಳನ್ನು ಬೇಕಾದರೆ ಓದಿ ಹೇಳಬಹುದು. ಆದರೆ ಶೂದ್ರರಿಗೆ ವೇದಗಳ ಮೂಲಕ ಜ್ಞಾನ ಪಡೆಯುವ ಹಕ್ಕಿಲ್ಲ.
ಇವು ಶಂಕರರ ಅಮೃತ ವಾಕ್ಯಗಳು. ಇಂತಹ ಶಂಕರರು ಜಾತಿ ಬೇಧವನ್ನು ವಿರೋಧಿಸುವ ಮಾತುಗಳನ್ನು ಆಡಿದ್ದಾರೆ ಎನ್ನುತ್ತಾರೆ ಝಳಕಿಯವರು.
ಬಾಲಗಂಗಾಧರ್ ತಂಡದವರು ವಚನಗಳ ಮಾರ್ಗವಾಗಲೀ ಶಂಕರರ ಮಾರ್ಗವಾಗಲೀ ಎಲ್ಲ ಆಧ್ಯಾತ್ಮದ ವಿವಿಧ ಮಾರ್ಗಗಳು. ಸತ್ಯವನ್ನು ಕಂಡು ಹಿಡಿಯಲು ಮಾಡುವ ಪ್ರಯತ್ನಗಳು . ಅವುಗಳ ನಡುವೆ ಭಿನ್ನತೆಯಿರಬಹುದು ಆದರೆ ವಿರೋಧವೇನಿಲ್ಲ ಎಂಬ ಮಾತುಗಳನ್ನಾಡುತ್ತಾರೆ. ಹಾಗಾದರೆ ಇಸ್ಲಾಂ ಹಾಗೂ ಕ್ರಿಶ್ಚಿಯನ್ ಧರ್ಮಗಳು- ಅವರ ಮಾತಿನಲ್ಲಿಯೇ ಹೇಳುವುದಾದರೆ ರಿಲಿಜನ್ನುಗಳು, ಕೂಡ ಸತ್ಯವನ್ನು ಅನ್ವೇಷಿಸುವ ವಿವಿಧ ಮಾರ್ಗಗಳೆಂದೇ ಆ ಧರ್ಮಗಳ ಸಂತರೂ ಅವರ ಅನುಯಾಯಿಗಳೂ ಸಾರಿಕೊಂಡು ಬಂದಿದ್ದಾರೆ. ಅದನ್ನು ವಿವೇಕಾನಂದರೂ ಸೇರಿದಂತೆ ನಮ್ಮ ದೇಶದ ಹಲವು ಧಾರ್ಮಿಕ ಸಂತರೂ, ಸಾಮಾನ್ಯ ಜನತೆಯೂ ಹಲವು ರೂಪದಲ್ಲಿ, ಆಚರಣೆಗಳಲ್ಲಿ ಮಾನ್ಯ ಮಾಡುತ್ತಾ ಬಂದಿದ್ದಾರೆ ಎಂದ ಮೇಲೆ ಕ್ರಿಶ್ಚಿಯನ್ ಧರ್ಮದ ದೃಷ್ಠಿಕೋನ ನಮ್ಮ ಸಾಮಾಜಿಕ ಅಧ್ಯಯನವನ್ನು ಕೆಡಿಸಿಟ್ಟಿದೆ ಎಂದು ಹಳ ಹಳಿಸುವುದೇಕೆ ? ಸತ್ಯವನ್ನು ಕಂಡು ಹಿಡಿಯುವ ಆ ಮಾರ್ಗಗಳ ಬಗ್ಗೆ ಹಗೆ ಸಾಧಿಸುವುದೇಕೆ ?
ಈಗಾಗಲೇ ಚಂದ್ರಶೇಖರ ಕಂಬಾರರು ತಮ್ಮ ಪ್ರತಿಕ್ರಿಯೆಯಲ್ಲಿ ಆಧ್ಯಾತ್ಮವೆಂದ ಕೂಡಲೇ ಎಲ್ಲಾ ಒಂದೇ ಆಗಿಬಿಡುವುದಿಲ್ಲ. ವಚನಗಳ, ವಿವಿಧ ಭಕ್ತಿ ಮಾರ್ಗಗಳ ಪರಂಪರೆ ವೈದಿಕ ಪರಂಪರೆಗೆ ವಿರೋಧವಾಗಿದೆ ಎಂಬುದನ್ನು ಹೇಳಿದ್ದಾರೆ.
ವಚನಗಳು ಹಾಗೂ ಶಂಕರರು ಪ್ರತಿಪಾದಿಸಿದ ಆಧ್ಯಾತ್ಮ ವಿಚಾರಗಳನ್ನೇ ತೆಗೆದುಕೊಂಡು ಪರಿಶೀಲಿಸಿದರೂ ಅವುಗಳ ನಡುವೆ ಇರುವುದು ಕೇವಲ ಭಿನ್ನತೆಯಲ್ಲ ಕಟ್ಟಾ ವಿರೋಧ ಎಂಬುದು ಕಣ್ಣಿಗೆ ಹೊಡೆಯುವಂತೆ ಗೋಚರಿಸುತ್ತದೆ.
ಶಂಕರರೂ, ಸಾಂಖ್ಯ ದರ್ಶನವೂ
ಶಂಕರರ ಕಾಲಕ್ಕಾಗಲೇ ಬಹಳ ಪ್ರಭಾವಶಾಲಿಯಾಗಿದ್ದ ಸಾಂಖ್ಯ- ಯೋಗ ದರ್ಶನಗಳು ಅವರು ವೇದಾಂತವೆಂದು ಕರೆದ ವಿಚಾರಗಳಿಗೆ, ಆ ಮೂಲಕ ಅವರು ಬ್ರಾಹ್ಮಣ ಶ್ರೇಷ್ಠತೆಯ, ದ್ವಿಜ ಜಾತಿಗಳ ಆಳ್ವಿಕೆ ಸಮಾಜಕ್ಕೆ ದೊಡ್ಡ ಸವಾಲಾಗಿ ಎದುರಾದವು . ಆದ್ದರಿಂದ ಶಂಕರರು ಸಾಂಖ್ಯ- ಯೋಗ ದರ್ಶನಗಳನ್ನು ತಮ್ಮ ಪ್ರಮುಖ ಎದುರಾಳಿ ಎಂದು ಪರಿಗಣಿಸಿದರು ಮತ್ತು ಖಂಡಿಸಲು ಹಾಗೂ ಅವುಗಳ ಪ್ರಭಾವವನ್ನು ಕುಗ್ಗಿಸಲು ಪ್ರಯತ್ನಿಸಿದರು. ಅವರೇ ತಮ್ಮ ಗ್ರಂಥಗಳಲ್ಲಿ ಹೇಳಿದಂತೆ ‘ ‘ಸಾಂಖ್ಯ ತತ್ವಗಳಿಗೆ ಮೊದಲು ಪ್ರತಿವಾದವನ್ನು ಹೂಡುತ್ತೇನೆ. ಏಕೆಂದರೆ ಅತಿ ಬಲಶಾಲಿಯಾದ ಜಟ್ಟಿಯನ್ನು ಮೊದಲು ಸೋಲಿಸಿದರೆ ಇನ್ನುಳಿದವರನ್ನು ಸೋಲಿಸುವುದು ಬಹಳ ಸುಲಭವಾಗುತ್ತದೆ ‘ ಎಂದು ಭಾವಿಸಿದರು. ಅವರ ಬ್ರಹ್ಮ ಸತ್ಯ ಜಗನ್ಮಿಥ್ಯ ಅಥವಾ ಬ್ರಹ್ಮವೊಂದೇ ಸತ್ಯ ಇಡೀ ಸೃಷ್ಠಿಯೆಲ್ಲಾ ಮಾಯೆ ಎಂಬ ತತ್ವ ಈ ಜಗತ್ತನ್ನು ಕಡೆಗಣಿಸಿ, ಕರ್ಮ ಮಾಡುವುದಷ್ಟೇ ನಮ್ಮ ಕರ್ತವ್ಯ, ಫಲಾಫಲಗಳು ಬ್ರಹ್ಮೇಚ್ಚೆ. ಈ ಜಗತ್ತಿನ ಸಂಕಟಗಳಿಂದ ಪಾರಾಗಲು ದೇಹವನ್ನು ದಂಡಿಸಿ ಮೋಕ್ಷದತ್ತ ಗಮನ ನೀಡುವುದೇ ದಾರಿ ಎಂಬ ಅವರ ವಿಚಾರಗಳಿಗೆ ತದ್ವಿರುದ್ಧವಾಗಿದ್ದವು ಸಾಂಖ್ಯದ ಈ ವಿಚಾರಗಳು : ‘ ಪ್ರಕೃತಿಯೇ ಪ್ರಧಾನ. ಅದು ತನ್ನಿಂದ ತಾನೇ ವಿಕಾಸವಾಗುತ್ತಾ 24 ತತ್ವಗಳು ಉದ್ಭವಿಸಿವೆ. ಪುರುಷ ಕೇವಲ ಸಾಕ್ಷಿಯಾಗಿರುತ್ತಾನೆ ಎಂಬ ಈ ತತ್ವಗಳು ದೇಹದ ನಶ್ವರತೆಗೆ ಬದಲಾಗಿ ದೇಹ ಕ್ರಿಯೆಗಳೆಲ್ಲ ದೇವನ ಪೂಜೆಯೇ. ದೇಹವನ್ನು ದೃಢಗೊಳಿಸಬೇಕು.’ ಎಂದು ಹೇಳಿದವು. ಈ ಜಗತ್ತಿನ ವಿಕಾಸದಲ್ಲಿ ಪುರುಷನ ( ನಾವು ದಿನನಿತ್ಯ ಬಳಸುವ ಪುರುಷ- ಮಹಿಳೆ ಎಂಬ ಅರ್ಥದಲ್ಲಲ್ಲ. ಪ್ರಕೃತಿ- ಪುರುಷ ಎಂಬ ಅರ್ಥದಲ್ಲಿ ) ಗೌಣ. ಎಂದರು. ಬ್ರಹ್ಮನೇ ಎಲ್ಲವೂ. ಈವಾಸ್ತವ ಪ್ರಪಂಚವೆಂಬುದು ಭ್ರಮೆ, ಮಾಯೆ ಎಂಬ ವೇದಾಂತದ ಮೂಲ ವಿಚಾರಗಳೂ ಒಂದಕ್ಕೊಂದು ವಿರೋಧ ಎಂಬುದನ್ನು ಇಲ್ಲಿಯೇ ನೋಡಬಹುದು.
ಸಾಂಖ್ಯ ತತ್ವಗಳ ಮೇಲೆ ಶಂಕರರ ಅವರ ಅನುಯಾಯಿಗಳ ಬಿರುಸಿನ ಧಾಳಿಯ ನಂತರವೂ ಸಾಂಖ್ಯದ ಪ್ರಭಾವ ಉಳಿದೇ ಉಳಿಯಿತು ಎಂಬುದಕ್ಕೆ ಶಂಕರರ ತರುವಾಯವೂ ಮೇಲೆ ಹೆಸರಿಸಿದ ವಿವಿಧ ಧಾರ್ಮಿಕ ಪಂಥಗಳು ಹೇಗೆ ಆ ವಿಚಾರಗಳನ್ನು ವಿವಿಧ ರೂಪದಲ್ಲಿ ಅಳವಡಿಸಿಕೊಂಡವು ಎಂಬುದೇ ಸಾಕ್ಷಿ. ಹಾಗೆಯೇ ಈ ಎಲ್ಲ ಪಂಥಗಳೂ ವಿವಿಧ ಪ್ರಮಾಣದಲ್ಲಿ ಜಾತಿ ವಿರೋಧವನ್ನು ಹಾಗೆಯೇ ಲಿಂಗ ಬೇಧದ ವಿರೋಧವನ್ನು ಅಳವಡಿಸಿಕೊಂದವು. ಆದ್ದರಿಂದ ಜನ ಸಾಮಾನ್ಯರು ಈ ಪಂಥಗಳನ್ನು ಲಕ್ಷಗಟ್ಟಳೇ, ಕೋಟಿಗಟ್ಟಳೇ ಸಂಖ್ಯೆಯಲ್ಲಿ ಅನುಸರಿಸಿದರು. ಈ ಮಾತನ್ನು ಶಂಕರರು ಪ್ರತಿಪಾದಿಸಿದ ಅದ್ವೈತ ಆಥವಾ ಇತರ ವೇದಾಂತದ ವಿವಿಧ ಪಂಥಗಳ ಬಗ್ಗೆ ಹೇಳ ಬಹುದೇ ? ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಈ ಅನೇಕ ಪಂಥಗಳು ರಾಜ- ಮಹಾರಾಜರ, ಪಾಳೆಯಗಾರರನ್ನೂ ಧಿಕ್ಕರಿಸಿದುವು ಅಥವಾ ದೂರ ಇಟ್ಟವು ಎಂಬುದು ಕೂಡ ಒಂದು ವಿಶೇಷ.

‍ಲೇಖಕರು avadhi

21 July, 2013

1 Comment

  1. yash

    chinthanarha lekhana.

Trackbacks/Pingbacks

  1. ಜುಗಾರಿ ಕ್ರಾಸ್ : ’ಮಾನ್ಯ ಜಿ ಎನ್ ನಾಗರಾಜ್‌ರವರೆ…’ « ಅವಧಿ / avadhi - [...] ಪ್ರಕಟವಾಗಿತ್ತು. ಅದರ ಒಂದು ಕೊಂಡಿ ಇಲ್ಲಿದೆ. ಆ ಲೇಖನಕ್ಕೆ ಕಿರಣ್ ಅವರು ಬರೆದಿರುವ [...]
  2. ಜುಗಾರಿ ಕ್ರಾಸ್ : ಜಿ ಎನ್ ನಾಗರಾಜ್ ಉತ್ತರಿಸುತ್ತಾರೆ « ಅವಧಿ / avadhi - [...] ಪ್ರಕಟವಾಗಿತ್ತು. ಅದರ ಒಂದು ಕೊಂಡಿ ಇಲ್ಲಿದೆ. ಆ ಲೇಖನದ ಬಗ್ಗೆ ಕಿರಣ್ ತಮ್ಮ ಪ್ರತಿಕ್ರಿಯೆ [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading