ತೇಜಸ್ವಿಯನ್ನು ಹುಡುಕುತ್ತಾ: ದತ್ತಣ್ಣನಿಂದ ಸಿಕ್ಕ ಮಾಹಿತಿ


ಭಾಗ- ೫
ಇಲ್ಲಿಯವರೆಗೆ
’ನಿರುತ್ತರ’ದಿಂದ ಹಿಂದಿರುಗಿದವರೇ ಸಂಜೆಯವರೆಗೂ ಸಂತೆ ಮೈದಾನ, ಪ್ರವಾಸಿ ಮಂದಿರ, ಹ್ಯಾಂಡ್ ಪೋಸ್ಟ್, ದೇವಸ್ಥಾನದ ರಸ್ತೆ, ಹಳೆ ಮೂಡಿಗೆರೆ ಇಲ್ಲೆಲ್ಲಾ ಸುತ್ತಾಡಿ ಮೂಡಿಗೆರೆಯ ಪರಿಚಯ ಮಾಡಿಕೊಳ್ಳಲು ಪ್ರಯತ್ನಿಸಿದೆವು. ಸಂಜೆ 5 ಗಂಟೆಗೆ ಮೂಡಿಗೆರೆಯ ಮಸೀದಿ ರಸ್ತೆಯಲ್ಲಿ ನಡೆದು ಮನೆಯೊಂದರ ಗೇಟು ತೆಗೆದು ಅಂಗಳ ಹೊಕ್ಕು ಕಾಲಿಂಗ್ ಬೆಲ್ ಒತ್ತಿ ಮನೆಯವರು ಬಾಗಿಲು ತೆಗೆಯುವುದನ್ನೇ ನಿರೀಕ್ಷಿಸುತ್ತಾ ನಿಂತೆವು. ಬಾಗಿಲು ತೆಗೆದವರು ‘ಗುಡ್ ಇವೆನಿಂಗ್, ಬನ್ನಿ ಒಳಗೆ’! ಎನ್ನುತ್ತಾ ಮುಖದ ತುಂಬಾ ನಗು ತುಂಬಿಕೊಂಡು ಆಪ್ತವಾಗಿ ನಮ್ಮನ್ನು ಸ್ವಾಗತಿಸಿದರು. ‘ಹೊರಗಡೆ ಹೋಗ್ಬೇಕ್ಕಿತ್ತು. ರೆಡಿಯಾಗಿ ನಿಮಗೋಸ್ಕರಾನೇ ಕಾಯ್ತಾ ಕೂತಿದ್ದೆ. ಕರೆಕ್ಟ್ ಟೈಮಿಗೆ ಬಂದ್ರಲ್ಲ, ಬನ್ನಿ ಕೂತ್ಕೊಳಿ’ ಎನ್ನುತ್ತಲೇ ನಮ್ಮನ್ನು ಅಲ್ಲಿಯೇ ಇದ್ದ ಸೋಫಾದ ಮೇಲೆ ಕೂರುವಂತೆ ಸೂಚಿಸಿದರು. ‘ಯೂ ಆರ್ ಸೋ ಯಂಗ್’ ನಿಮ್ಮ ಹೆಸರು ಕೇಳಿ ನೀವ್ಯಾರೋ ತುಂಬಾ ವಯಸ್ಸಾದವ್ರಿರ್ಬೇಕು ಅಂದ್ಕೊಂಡಿದ್ದೆ! ನೀವು ನೋಡಿದ್ರೆ ಯಂಗ್ ಅಂಡ್ ಎನರ್ಜಿಟಿಕ್ಕು…ಹೆಹೆ….ಸಾರಿ ತಪ್ಪು ತಿಳ್ಕೋಬೇಡಿ’ಎಂದು ನಕ್ಕರು. ನಾವಿಬ್ಬರು ಪರಸ್ಪರ ಮುಖ ನೋಡಿಕೊಂಡು ನಕ್ಕೆವು. ಹೀಗೆ ಮೊದಲ ಭೇಟಿಯಲ್ಲೇ ನಮ್ಮೊಂದಿಗೆ
ಇಷ್ಟು ಮುಕ್ತವಾಗಿ ಮಾತನಾಡಲು ಪ್ರಾರಂಭಿಸಿದವರು ಸುರೇಶ್ಚಂದ್ರ ದತ್ತ ಉರುಫ್ ದತ್ತಣ್ಣ, ತೇಜಸ್ವಿಯವರ ಮೂಡಿಗೆರೆಯ ಯುವ ಹಿಂಬಾಲಕರಲ್ಲಿ ಒಬ್ಬರು. ‘ಮನೆ ತುಂಬಾ ಚೆನ್ನಾಗಿದೆ ಸರ್’ ವಿಷಯಕ್ಕೆ ಬರುವ ಮೊದಲು ಪೀಠಿಕೆಯಂತೆ ಏನನ್ನಾದರು ಮಾತನಾಡಬೇಕಾದ್ದರಿಂದ ಹೀಗೆ ಮಾತು ಶುರು ಮಾಡಿದೆ. ‘ಥ್ಯಾಂಕ್ ಯು, ನಾನೇ ಡಿಸೈನ್ ಮಾಡಿದ್ದು. ಓದಿದ್ದು ಅಪ್ಲೈಡ್ ಆರ್ಟ್ಸ್.ಹಾಗಾಗಿ ಚಿತ್ರಕಲೆ, ಡ್ರಾಯಿಂಗ್ ಇದರಲೆಲ್ಲ ಆಸಕ್ತಿ. ಸದ್ಯಕ್ಕೆ, PÁ¦ü ತೋಟ ಮಾಡ್ತಾ, ಚಿತ್ರಗಳನ್ನು ಬಿಡಿಸುವುದು, ಪಶ್ಚಿಮಘಟ್ಟಗಳ ಜೀವಜಗತ್ತಿನ ಬಗ್ಗೆ ರಿಸರ್ಚ್, ಪತ್ರಿಕೆಗಳಿಗೆ ಅಂಕಣ ಬರೆಯುವುದು ಹೀಗೆ ಆಸಕ್ತಿ ಇರುವ ಕೆಲಸಗಳನ್ನ ಮಾಡ್ತಾ ಹೋಗ್ತಿದ್ದೀನಿ’ಎಂದು ತಮ್ಮ ಹಿನ್ನೆಲೆ ಹೇಳಿಕೊಂಡರು ದತ್ತಣ್ಣ. (ಕುಪ್ಪಳ್ಳಿಯಲ್ಲಿನ ಕುವೆಂಪುರವರ ಮನೆಯಲ್ಲಿ ಕುವೆಂಪುರವರ ಬದುಕಿಗೆ ಸಂಬಂಧಪಟ್ಟ ಫೋಟೋಗಳನ್ನು ಒಂದು ಕ್ರಮದಲ್ಲಿ ತುಂಬಾ ಅಚ್ಚುಕಟ್ಟಾಗಿ ಜೋಡಿಸಿಟ್ಟವರು ದತ್ತಣ್ಣ.)‘ನನ್ನದು ಬಿಡಿ ನಿಮ್ಮ ಬಗ್ಗೆ ಹೇಳಿ’ ಎಂದು ಅವರು ಕೇಳಿದ್ದು ನೇರ ವಿಷಯಕ್ಕೆ ಬರುವಂತೆ ಆಹ್ವಾನ ಕೊಟ್ಟಂತಿತ್ತು. ನಾನು ನನ್ನ ಬಗ್ಗೆ, ಹೇಮಂತನ ಬಗ್ಗೆ ಚುಟುಕಾಗಿ ಹೇಳಿ ತೇಜಸ್ವಿಯವರ ಕುರಿತಾದ ಸಾಕ್ಷ್ಯಚಿತ್ರ ಮಾಡುವ ನಮ್ಮ ಯೋಜನೆಯ ಬಗ್ಗೆ ಅವರಿಗೆ ವಿವರಿಸಿದೆ. ನಮ್ಮ ಯೋಚನೆ ಕೇಳಿ ಮೆಚ್ಚಿಗೆ ಸೂಚಿಸಿದ ದತ್ತಣ್ಣ ತನ್ನಿಂದೇನಾಗಬೇಕೆಂದೂ ಕೇಳಿದರು. ತೇಜಸ್ವಿಯವರ ಒಡನಾಟದ ಬಗ್ಗೆ, ಅವರ ಈ ಒಡನಾಟದಲ್ಲಿ ತೇಜಸ್ವಿಯವರ ವ್ಯಕ್ತಿತ್ವವನ್ನು ಇವರು ಗ್ರಹಿಸಿದ ಬಗ್ಗೆ ವಿವರವಾಗಿ ತಿಳಿಸಬೇಕೆಂದು ಅವರಲ್ಲಿ ಕೇಳಿದೆ. ‘ಓ, ಖಂಡಿತ ಹೇಳ್ತಿನಿ, ತೇಜಸ್ವಿ ಬಗ್ಗೆ ಮಾತಾಡೋದು ಅಂದ್ರೆ ನನಗೂ ಖುಷಿ ವಿಚಾರ’ ಎನ್ನುತ್ತಾ ಮಾತು ಪ್ರಾರಂಭಿಸಿದರು. ತೇಜಸ್ವಿ ಇವರ ಸಂಪರ್ಕಕ್ಕೆ ಬಂದ ಬಗ್ಗೆ, ತೇಜಸ್ವಿಯವರ ಕೆಲವು ಕೃತಿಗಳಿಗೆ ಇವರು ಮಾಡಿಕೊಟ್ಟ ಚಿತ್ರಗಳ ಬಗ್ಗೆ (ಇಲ್ಲಸ್ಟ್ರೇಶನ್ಸ್), ತೇಜಸ್ವಿಯವರಿಗಿದ್ದ ಅಪರಿಮಿತ ಕುತೂಹಲದ ಬಗ್ಗೆ, ದತ್ತಣ್ಣನವರ ಮಾತು ಕೇಳಿ ಸಿಹಿಯಾದ ಹಣ್ಣೆಂದು ‘ನಾಯಿ ತೂಪುರ’ ಎಂಬ ಬೇರೆ ಜಾತಿಯ ಹಣ್ಣು ತಿಂದು ಮುಖ ಕಹಿ ಮಾಡಿಕೊಂಡು ಇವರ ಮೇಲೆ ರೇಗಿದ್ದರ ಬಗ್ಗೆ, 6 ತಿಂಗಳು ತಲೆಕೆಡಿಸಿಕೊಂಡು ಒದ್ದಾಡಿ ಕಡೆಗೂ ಬಗೆಹರಿಯದ ಕಂಪ್ಯೂಟರ್ ಸಂಬಂಧಿತ ಸಮಸ್ಯೆಯನ್ನು ದತ್ತಣ್ಣ ಎರಡೇ ನಿಮಿಷದಲ್ಲಿ ಬಗೆಹರಿಸಿದಾಗ ದತ್ತಣ್ಣನವರೆಡೆಗೆ ಬೆರಗುಗಣ್ಣುಗಳಿಂದ ನೋಡುತ್ತಾ ಮೆಚ್ಚುಗೆ ಸೂಚಿಸಿದ್ದರ ಬಗ್ಗೆ, ಹೀಗೆ ವಿವರವಾಗಿ ಅವರ ಮತ್ತು ತೇಜಸ್ವಿಯವರ ನಡುವಿನ ಒಡನಾಟದ ಸವಿನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಂಡರು. (ದತ್ತಣ್ಣ ಹೇಳಿದ ಈ ಎಲ್ಲಾ ವಿಷಯಗಳನ್ನು ಮತ್ತೆ ಚಿತ್ರೀಕರಣಕ್ಕೆ ಹೋದಾಗ ಮತ್ತಷ್ಟು ವಿವರವಾಗಿ ಹೇಳಿದರು. ಹಾಗಾಗಿ ಇವರ ಮಾತಿನ ಪೂರ್ಣಭಾಗವನ್ನು ದತ್ತಣ್ಣನವರ ಚಿತ್ರೀಕರಣದ ಭಾಗದಲ್ಲಿ ದಾಖಲಿಸಲಾಗುವುದು).

ಹೀಗೆ ಮಾತನಾಡುತ್ತಾ ಕುಳಿತಿದ್ದ ನಮಗೆ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಲೋಕದ ಪರಿವೆಯನ್ನೇ ಮರೆತು ತೇಜಸ್ವಿಯವರ ನೆನಪಿನ ಲೋಕದಲ್ಲಿ ಮುಳುಗಿದ್ದ ನಮಗೆ ಮತ್ತೆ ಎಚ್ಚರವಾಗಿದ್ದು ದತ್ತಣ್ಣನವರ ಶ್ರೀಮತಿಯವರು ಕಾಫಿಯ ಘಮ ನಮ್ಮ ಮೂಗಿಗೆ ಅಡರಿದ ಮೇಲೆಯೆ. ಆಗ ಮಾತಿಗೆ ವಿರಾಮ ಕೊಟ್ಟು ಸಮಯ ನೋಡಿಕೊಂಡೆವು. ಆಗಲೇ 7 ಗಂಟೆ ಆಗಿಬಿಟ್ಟಿತ್ತು! ದತ್ತಣ್ಣ ನಮ್ಮನ್ನು ಅವರ ಮನೆಯ ಮೊದಲ ಮಹಡಿಗೆ ಕರೆದುಕೊಂಡು ಹೋದರು. ಅವರ ಮನೆ ತುಂಬಾ ವಿಶಾಲವಾಗೇನು ಇಲ್ಲದಿದ್ದರೂ ಮನೆಯ ವಿನ್ಯಾಸ, ಒಳಾಂಗಣ ಅದ್ಭುತವಾಗಿದ್ದವು. ಸ್ವತಃ ದತ್ತಣ್ಣನವರೇ ಈ ಮನೆಯ ವಿನ್ಯಾಸಕಾರರಾಗಿದ್ದರಿಂದ ಈ ರೀತಿಯ ಸುಂದರವೂ, ಅನುಕೂಲಕರವೂ ಆದ ವಿನ್ಯಾಸ ಮೂಡಿಬಂದಿದೆ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ.
ಆದರೆ ನಮಗೆ ಗೊತ್ತಿಲ್ಲದಿದ್ದ ಮತ್ತೊಂದು ವಿಚಾರವೆಂದರೆ ದತ್ತಣ್ಣನವರಿಗೆ ಹಳೆಯ ನಾಣ್ಯ, ಕರೆನ್ಸಿ ನೋಟು, ಅಂಚೆ ಚೀಟಿಗಳು ಇವನೆಲ್ಲಾ ಸಂಗ್ರಹಿಸುವ ಹವ್ಯಾಸವಿದೆ ಎನ್ನುವುದು. ಮನೆಯ ಮೊದಲ ಮಹಡಿಯಲ್ಲಿ ಅವರ ಈ ಸಂಗ್ರಹಗಳಿಗಾಗಿಯೇ ಪ್ರತ್ಯೇಕ ಅಲ್ಮೇರಗಳನ್ನು ಮಾಡಿಸಿ ಬಹುಜೋಪಾನವಾಗಿ ಶೇಖರಿಸಿಟ್ಟಿದ್ದರು ದತ್ತಣ್ಣ. ನಮಗೆ ಆ ಸಂಗ್ರಹಗಳನ್ನೆಲ್ಲಾ ತೋರಿಸಿ ಅವರ ಈ ಹವ್ಯಾಸದ ಬಗ್ಗೆ ಹೇಳಿದರು. ಅವರ ಈ ಹವ್ಯಾಸ ಕಂಡು ‘ತೇಜಸ್ವಿಯವರ ಒಡನಾಡಿಗಳು ಅವರ ಹಾಗೇ ಹಲವು ವಿಷಯಗಳಲ್ಲಿ ಆಸಕ್ತಿ ಇರುವವರು’ ಎಂದು ನಾನು ಹೇಮಂತ ಮಾತನಾಡಿಕೊಂಡೆವು. ಅವರ ಮನೆಯನ್ನೆಲ್ಲ ನೋಡಿದ ನಂತರ ಅವರಿಗೆ ‘ಚಿತ್ರೀಕರಣಕ್ಕಾಗಿ ಆದಷ್ಟು ಶೀಘ್ರದಲ್ಲಿ ಮತ್ತೆ ಮೂಡಿಗೆರೆಗೆ ಬರುವುದಾಗಿ, ಅಷ್ಟರಲ್ಲಿ ತೇಜಸ್ವಿಯವರ ಕುರಿತು ಯಾವುದಾದರೂ ವಿಷಯವನ್ನು ಮರೆತಿದ್ದರೆ ಜ್ಞಾಪಿಸಿಕೊಳ್ಳಬೇಕೆಂದು’ ದತ್ತಣ್ಣನವರಲ್ಲಿ ಮನವಿ ಮಾಡಿ ಅವರಿಗೂ ಅವರ ಶ್ರೀಮತಿಯವರಿಗೂ ವಂದಿಸಿ ಅಲ್ಲಿಂದ ನಿರ್ಗಮಿಸಿದೆವು.

ರಾತ್ರಿ ಮೂಡಿಗೆರೆಯ ಹೋಟೆಲೊಂದರಲ್ಲಿ ಊಟ ಮಾಡಿ ಲಾಡ್ಜಿನ ರೂಮಿಗೆ ಬಂದೆವು. ಬೆಳಿಗ್ಗಿನಿಂದ ಮಾತನಾಡಿಸಿದ ತೇಜಸ್ವಿ ಒಡನಾಡಿಗಳು ಹೇಳಿದ ವಿಷಯಗಳನ್ನು ಡೈರಿಯಲ್ಲಿ ನೋಟ್ಸ್ ಮಾಡಿಕೊಂಡೆ. ನಾಳೆ ಬೆಳಿಗ್ಗೆ ನಮ್ಮ ರಿಸರ್ಚ್ ವರ್ಕಿನ ಪ್ರಮುಖ ದಿನವಾಗಿತ್ತು. ತೇಜಸ್ವಿಯವರ ಒಡನಾಡಿಗಳೊಂದಿಗೆ ತೇಜಸ್ವಿ ಓಡಾಡಿದ ಕೆಲವು ಜಾಗಗಳಿಗೆ ಹೋಗುವ ಯೋಚನೆ ನಮ್ಮದಾಗಿತ್ತು. ಅದಕ್ಕಾಗಿ ತೇಜಸ್ವಿಯವರ ಇಬ್ಬರು ಯುವ ಗೆಳೆಯರು ನಮ್ಮೊಂದಿಗೆ ಬರಲಿದ್ದರು.ಅದಕ್ಕಾಗಿ ನಮ್ಮೊಂದಿಗೆ ನಾಳೆ ಬರಲಿದ್ದ ಇಬ್ಬರಲ್ಲಿ ಒಬ್ಬರಿಗೆ ಫೋನ್ ಮಾಡಿ ನಾಳಿನ ಕಾರ್ಯಕ್ರಮವನ್ನು ಅವರಿಗೆ ಮತ್ತೆ ಜ್ಞಾಪಿಸಿದೆ. ಅವರು ‘ಡೊಂಟ್ ವರಿ, ಬೆಳಿಗ್ಗೆ 7–7.30ಕ್ಕೆಲ್ಲಾ ಸಿಕ್ತೀನಿ. ಇಡೀ ದಿನ ಸುತ್ತೋದೇ ಕೆಲಸ. ಈಗ ಮಲ್ಕೊಳಿ. ಗುಡ್ ನೈಟ್’ಎಂದರು. ಹೇಮಂತನಿಗೆ ವಿಷಯ ತಿಳಿಸಿದೆ. ಅವನು ‘ಸರಿ ಬಿಡು ಬೆಳಿಗ್ಗೆ ಬೇಗ ರೆಡಿಯಾಗಿರೋಣ’ ಎಂದ. ಇನ್ನು ಎಂಟು ಗಂಟೆಯಾಗಿದ್ದರಿಂದ ನಿದ್ರೆಬಾರದೆ ಇಬ್ಬರು ಮತ್ತೆ ರೂಮಿನಿಂದ ಹೊರಗೆ ಹೋಗಿ ರಾತ್ರಿ ಹತ್ತರ ತನಕ ಮೂಡಿಗೆರೆಯನ್ನು ನಿರುದ್ದೇಶಪೂರ್ವಕವಾಗಿ ಸುತ್ತಾಡಿ, ಸುಸ್ತಾಗಿ ಬಂದು ಹಾಸಿಗೆ ಮೇಲೆ ಉರುಳಿಕೊಂಡೆವು. ಅದ್ಯಾವ ಮಾಯದಲ್ಲಿ ನಿದ್ರೆ ಬಂತೋ ಗೊತ್ತಾಗಲಿಲ್ಲ. ಬೆಳಿಗ್ಗೆ 6ಗಂಟೆಗೆ ಮೊಬೈಲ್ಅಲಾರಂಮಿನ ಸದ್ದಾದಾಗಲೇ ಎಚ್ಚರವಾದದ್ದು.

‘ಮೂಡಿಗೆರೆಯ ಗೆಳೆಯರೊಂದಿಗಿನ ಅಲೆದಾಟದ ಅನುಭವಗಳು’
ಮರುದಿನ ಭಾನುವಾರ. ಅಂದು ತೇಜಸ್ವಿ ಓಡಾಡಿದ ಕೆಲವು ಪ್ರದೇಶಗಳನ್ನು ನೋಡಲು ಹೋಗುತ್ತೇವೆ ಎಂಬ ಸಂಗತಿಯೇ ನಮ್ಮನ್ನು ಅತ್ಯುತ್ಸಾಹಿಗಳನ್ನಾಗಿ ಮಾಡಿತ್ತು. 6ಗಂಟೆಗೆಲ್ಲ ಎದ್ದು ಗಡಿಬಿಡಿಯಲ್ಲಿ ತಯಾರಾಗಿ, ಅಂದು ಮಾರ್ಗದರ್ಶಕರಂತೆ ನಮ್ಮೊಂದಿಗೆ ಬರಲಿದ್ದ ಗೆಳೆಯರಿಗೆ ಕಾಯುತ್ತಾ ಕುಳಿತ್ತಿದ್ದೆವು. 7ಗಂಟೆಯ ಹೊತ್ತಿಗೆ ನಾವು ನಿರೀಕ್ಷಿಸುತ್ತಿದ್ದ ಆ ವ್ಯಕ್ತಿ ಅತಿಥಿ ಲಾಡ್ಜಿನ ನಮ್ಮ ಕೋಣೆಗೆ ಬಂದರು. ನನ್ನಷ್ಟೇ ಎತ್ತರವಾಗಿದ್ದ, ಫ್ರೆಂಚ್ ಗಡ್ಡದಾರಿ ಆ ವ್ಯಕ್ತಿ ನನ್ನ ಕೈಕುಲುಕಿ ‘ಹಾಯ್, ನಾನ್ ಧನಂಜಯ್, ಧನಂಜಯ ಜೀವಾಳ’ಎಂದು ತಮ್ಮ ಪರಿಚಯ ಮಾಡಿಕೊಂಡರು,. ನಾನು ನನ್ನ ಪರಿಚಯದ ನಂತರ ಅವರಿಗೆ ಹೇಮಂತನನ್ನು ಪರಿಚಯಿಸಿದೆ. ಧನಂಜಯ ಜೀವಾಳರಿಗೆ ಫೋನಿನಲ್ಲೇ ಸಾಕ್ಷ್ಯಚಿತ್ರದ ಬಗ್ಗೆ ವಿವರವಾಗಿ ತಿಳಿಸಿದ್ದರಿಂದ ಅವರು ಹೆಚ್ಚೇನು ಪ್ರಶ್ನಿಸದೆ ‘ನಾವೀಗ ಮಾತಾಡ್ತಾ ಕೂತ್ಕೊಂಡು ಟೈಮ್ ವೇಸ್ಟ್ ಮಾಡೋದ್ ಬೇಡ, ಹಾಗೆ ಹೋಗ್ತಾ ಮಾತಾಡಬಹುದಲ್ವ? ಹ್ಯಾಗಿದ್ರು ಇಡೀ ದಿವಸ ಜೊತೆಗಿರ್ತಿವಲ್ಲ. ಎಂದರು. ನಾವು ಅವರ ಮಾತಿಗೆ ಸಮ್ಮತಿಸಿ ಹೊರಟೆವು. ಮೊದಲು ಮೂಡಿಗೆರೆಯಲ್ಲಿ ಬಸ್ ಹಿಡಿದು ಅಲ್ಲಿಂದ ಸುಮಾರು ೧೫ ಕಿಲೋಮೀಟರ್ ದೂರದ ಕೊಟ್ಟಿಗೆಹಾರದ ಕಡೆ ಹೊರಟೆವು. ದಾರಿಯಲ್ಲಿ ನಮ್ಮ ಹಾಗೂ ಧನಂಜಯರವರ ಮಾತುಕತೆ ಸಾಗುತ್ತಿತ್ತು. ಈ ಮಾತುಕತೆಯಲ್ಲಿ ಸಾಕ್ಷ್ಯಚಿತ್ರದ ರೂಪುರೇಷೆಗಳನ್ನು ಅವರಿಗೆ ಮತ್ತೊಮ್ಮೆ ವಿವರಿಸಿದೆ. ಧನಂಜಯರವರು ಕೆಲವು ಉಪಯುಕ್ತ ಸಲಹೆಗಳನ್ನು ಕೊಟ್ಟು ಸಾಧ್ಯವಾದರೆ ಬಳಸಿಕೊಳ್ಳಿ ಎಂದರು. ಕೊಟ್ಟಿಗೆಹಾರ ತಲುಪಿದ ನಂತರ ಧನಂಜಯ್ ನಮ್ಮನ್ನು
ನೇರ ಕೊಟ್ಟಿಗೆಹಾರದಲ್ಲಿರುವ ‘ಕೆ.ಪಿ ಪೂರ್ಣಚಂದ್ರ ತೇಜಸ್ವಿ ಜೀವವೈವಿಧ್ಯ ಸಂಶೋಧನಾ ಕೇಂದ್ರ’ ಎಂದು ಬೋರ್ಡ್ ಇದ್ದ ಕಟ್ಟಡಕ್ಕೆ ಕರೆದುಕೊಂಡು ಹೋದರು. ನಾವು ಏನಿದೆಂದು ಕೇಳುವ ಮೊದಲೇ ‘ಅದು ಮೂಡಿಗೆರೆ ಸುತ್ತಮುತ್ತಲಿನ ತೇಜಸ್ವಿಯವರ ಸಹವರ್ತಿಗಳು ಹಾಗೂ ಯುವ ಗೆಳೆಯರೆಲ್ಲ ಸೇರಿ ತೇಜಸ್ವಿಯವರ ಕನಸುಗಳನ್ನು ಸಾಕಾರಗೊಳಿಸಲು, ಅವರ ಆಶಯದಂತೆ ವಿವಿಧ ಸ್ತರದ ಸಮುದಾಯಕ್ಕೆ ವಿಜ್ಞಾನ, ತಂತ್ರಜ್ಞಾನ ಬೋಧನೆಯ ಜೊತೆಗೆ ಪರಿಸರದ ಜೊತೆಗಿನ ಬಾಂಧವ್ಯ ಬೆಸೆಯುವ ಮಹತ್ತರ ಉದ್ದೇಶವನ್ನಿಟ್ಟುಕೊಂಡು ಕಟ್ಟಿಕೊಂಡಿರುವ ‘ವಿಸ್ಮಯ ಪ್ರತಿಷ್ಠಾನ’ದ ಕಛೇರಿಯೆಂದು ಅದೀಗ ಸರ್ಕಾರಿ ದಾಖಲೆಗಳಲ್ಲಿ ‘ಕೆ.ಪಿ ಪೂರ್ಣಚಂದ್ರ ತೇಜಸ್ವಿ ಜೀವವೈವಿಧ್ಯ ಸಂಶೋಧನಾ ಕೇಂದ್ರ’ ಎಂದು ದಾಖಲಾಗಿದೆಯೆಂದು ನಮಗೆ ವಿವರಿಸಿದರು. ಈ ಸಂಸ್ಥೆಯ ಮೂಲಕ ಮಕ್ಕಳಿಗಾಗಿ ಜಗತ್ತಿನ ಅದ್ಭುತಗಳನ್ನು, ಕೌತುಕಗಳನ್ನು ಪ್ರದರ್ಶಿಸುವ ಸುಸಜ್ಜಿತ ಥಿಯೇಟರ್, ಕೀಟ ಸಂಗ್ರಹಾಲಯ, ಆರ್ಕಿಡ್ ಗಳ ಸಂಗ್ರಹಾಲಯ, ಡಿಜಿಟಲ್ ಗ್ರಂಥಾಲಯವನ್ನು ಒಳಗೊಂಡ ಥೀಮ್ ಪಾರ್ಕ್ ಸ್ಥಾಪಿಸುವುದು ಹಾಗೂ ಪರಿಸರ ಸಂರಕ್ಷಣೆ, ಕೃಷಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕಾರ್ಯಯೋಜನೆಗಳ ಬಗ್ಗೆ ನಮಗೆ ತಿಳಿಸಿದರು.
ನಾವು ಇಷ್ಟೆಲ್ಲಾ ಮಾತನಾಡುತ್ತಾ ಕುಳಿತಿದ್ದಾಗ ಚಾರ್ಲಿ ಚಾಪ್ಲಿನ್ ನನ್ನು ಹೋಲುವ ಮಧ್ಯವಯಸ್ಕರೊಬ್ಬರು ನಗುತ್ತಾ ನಾವಿದ್ದ ಕಛೇರಿಯೊಳಗೆ ಬಂದರು. ಧನಂಜಯ್ ‘ಯಾಕ್ ಬಾಪು ಲೇಟ್ ಮಾಡಿಬಿಟ್ರಿ? ಲೇಟಾದ್ರೆ ಅಂದ್ಕೊಂಡಿರೊ ಕಡೆಗೆಲ್ಲ ಹೋಗೋಕಾಗಲ್ಲ’ ಎಂದು ಬಂದವರನ್ನು ಮಾತನಾಡಿಸುತ್ತಾ ಅವರನ್ನು ನಮಗೆ ಪರಿಚಯಿಸಿದರು. ಅವರು ತೇಜಸ್ವಿಯವರ ಮೀನು ಹಿಡಿಯುವ ಸಾಹಸಗಳಲ್ಲಿ ಸದಾ ಜೊತೆಯಾಗಿರುತ್ತಿದ್ದ, ತೇಜಸ್ವಿಯವರ ಹಲವು ಕೃತಿಗಳ ಮುಖಪುಟಕ್ಕೆ ಬೇಕಾದ ಚಿತ್ರಗಳನ್ನು ಅಂದವಾಗಿ ಮಾಡಿಕೊಟ್ಟಿರುವ, ತೇಜಸ್ವಿಯವರನ್ನು ಹತ್ತಿರದಿಂದ ಬಲ್ಲ ಅವರ ದೀರ್ಘಕಾಲದ ಒಡನಾಡಿ ‘ಬಾಪು ದಿನೇಶ್’. ಬಾಪು ದಿನೇಶ್ ರವರ ಬಗ್ಗೆ ತುಂಬಾ ಕೇಳಿದ್ದೆ ಮತ್ತು ಅಲ್ಲಲ್ಲಿ ಓದಿಕೊಂಡಿದ್ದೆ. ಅವರನ್ನು ಮೊದಲ ಬಾರಿಗೆ ನೋಡಿದಾಗ ಬಾಪು ದಿನೇಶ್ ಎಂಬ ಹೆಸರು ಅವರಿಗೆ ತುಂಬಾ ಚೆನ್ನಾಗಿ ಹೊಂದುತ್ತದೆ ಎನ್ನಿಸಿತು. ಏಕೆಂದರೆ ಥೇಟ್ ಬಾಪು ಅಂದರೆ ಗಾಂಧೀಜಿಯವರಂತಹದ್ದೇ ಮೈಕಟ್ಟು ಅವರದ್ದಾಗಿತ್ತು.
ಅಲ್ಲಿಗೆ ಬರಬೇಕಾದವರೆಲ್ಲ ಬಂದಂತಾಗಿದ್ದರಿಂದ ನಮ್ಮ ಅಂದಿನ ಪ್ರಯಾಣದ ಎಲ್ಲಿಂದ ಪ್ರಾರಂಭಿಸಬೇಕು ಎನ್ನುವುದರ ರೂಪುರೇಷೆಗಳ ಬಗ್ಗೆ ಧನಂಜಯ್ ನಮಗೆ ವಿವರಿಸಿದರು. ಆ ಯೋಜನೆಯಂತೆ ಮೊದಲು ಚಾರ್ಮಾಡಿ ಘಾಟ್ ಗೆ ಹೋಗೋಣವೆಂದು ಅವರು ನಮಗೆ ಹೇಳಿದರು. ನಾವು ಸಮ್ಮತಿಸಿದೆವು. ಅಷ್ಟರಲ್ಲಿ ಬಾಪು ದಿನೇಶ್ ಹೋಗಿ ಜೀಪೊಂದನ್ನು ದಿನದ ಮಟ್ಟಿಗೆ ಬಾಡಿಗೆಗೆ ಮಾತನಾಡಿಕೊಂಡು ಕರೆದುಕೊಂಡು ಬಂದರು. ನಾವು ನಾಲ್ಕು ಜನ ಜೀಪು ಹತ್ತಿಕೊಂಡೆವು. ನಮ್ಮ ಜೀಪು ಕೊಟ್ಟಿಗೆಹಾರದ ಚೆಕ್ ಪೋಸ್ಟ್, ಮಲೆಯ ಮಾರುತ ಗೆಸ್ಟ್ ಹೌಸ್, ಅಲೆಖಾನ್ ಎಸ್ಟೇಟ್ ಎಲ್ಲವನ್ನೂ ದಾಟಿ ಅರ್ಧ ಗಂಟೆಯಷ್ಟರಲ್ಲಿ ಹಾವಿನಂತೆ ಅಂಕುಡೊಂಕಾಗಿ ಮಲಗಿದ ರಸ್ತೆಯ ಮಧ್ಯದಲ್ಲಿ ಸಾಗಿ ಚಾರ್ಮಾಡಿ ಘಾಟಿನ ಅಣ್ಣಪ್ಪನ ದೇವಸ್ಥಾನದ ಬಳಿ ನಿಂತಿತು. ಜೀಪಿನಿಂದಿಳಿದು ಸುತ್ತಲೂ ನೋಡಿದೆವು. ಮೊದಲ ಸಲ ಚಾರ್ಮಾಡಿಯ ರುದ್ರರಮಣೀಯ ಸೌಂದರ್ಯವನ್ನು ಕಂಡು ನಾನು ಬೆಕ್ಕಸ ಬೆರಗಾಗಿ ಹೋದೆ. ಕಣ್ಣು, ಮನಸ್ಸುಗಳಿಗೆ ಬಿಡುವಿಲ್ಲದ ಕೆಲಸ. ಬಹುಶಃ ಮೊದಲ ಸಲ ಚಾರ್ಮಾಡಿ ಘಾಟ್ ನೋಡುವವರು ಯಾರೇ ಆಗಿರಲಿ ಕಣ್ಣರಳಿಸದೆ, ಬೆರಗುಗೊಳ್ಳದೆ, ಅಚ್ಚರಿ ವ್ಯಕ್ತಪಡಿಸದೆ ಆ ಅನನ್ಯ ಪ್ರಕೃತಿ ಸೌಂದರ್ಯವನ್ನು ಸವಿಯಲು ಸಾಧ್ಯವೇ ಇಲ್ಲವೆಂದು ನನಗನ್ನಿಸುತ್ತದೆ. ನಮ್ಮ ಕಣ್ಣುಗಳಿಗಂತು ಹಬ್ಬವೋ ಹಬ್ಬ. ಚಾರ್ಮಾಡಿಯ ಹಾದಿಯಲ್ಲಿ ಎತ್ತ ನೋಡಿದರತ್ತ ಹಸಿರೇ ಹಸಿರು. ಸುತ್ತಲೂ ಹಸಿರು ಹೊದ್ದು ಕುಳಿತ ಬೃಹತ್ ಪರ್ವತ ಶ್ರೇಣಿಗಳು, ಅಲ್ಲೆಲ್ಲೋ ದೂರದಲ್ಲಿ ಪರ್ವತಗಳ ಕೊರಕಲುಗಳ ಮಧ್ಯೆ ಬೆಳ್ಳಿಗೆರೆಗಳಂತೆ ಧುಮುಕಿ ಸ್ವಲ್ಪ ದೂರ ಗುಪ್ತಗಾಮಿನಿಯಾಗಿ ಹರಿದು ಮತ್ತೆಲ್ಲೋ ಹೊರಬರುವ ಅಲ್ಲಿನ ಅಸಂಖ್ಯ ಝರಿಗಳು, ನದಿ ಮೂಲಗಳು, ಆ ದೈತ್ಯ ಪರ್ವತ ಶ್ರೇಣಿಗಳಿಗೆ ಕದ್ದು ಮುತ್ತಿಟ್ಟು ಓಡಿಹೋಗುತ್ತಾ ಸರಸವಾಡುತ್ತಿರುವಂತೆ ಭಾಸವಾಗುವ ಮೋಡಗಳ ಹಿಂಡು, ಎಲ್ಲ ನೋಡುತ್ತಿದ್ದರೆ ಇದ್ಯಾವುದೋ ಭ್ರಮಾಲೋಕ ಇರಬೇಕು ಎಂದು ಸಂಶಯ ಬರುವುದರಲ್ಲಿ ಆಶ್ಚರ್ಯವಿಲ್ಲ. ಎಷ್ಟು ನೋಡಿದರು ತಣಿಯದಷ್ಟು ಸುಂದರವೂ, ಜೊತೆಗೆ ಅಷ್ಟೇ ನಿಗೂಢವೂ, ಅನ್ವೇಷಣೆಗೆ ಪ್ರೇರಕವೂ ಆದ ಈ ಪ್ರಕೃತಿ ತೇಜಸ್ವಿಯವರನ್ನು ಮೈಸೂರಿನಂತಹ ನಗರದಿಂದ ತನ್ನೆಡೆಗೆ ಸೆಳೆದಿದ್ದರಲ್ಲಿ ಆಶ್ಚರ್ಯವೇನಿಲ್ಲ ಎನ್ನಿಸತೊಡಗಿತು. ಅಣ್ಣಪ್ಪನ ಗುಡಿ ನೋಡಿದ ಕೂಡಲೇ ತಕ್ಷಣ ನೆನಪಾಗಿದ್ದು ತೇಜಸ್ವಿಯವರ ‘ಕಾಡಿನ ಕಥೆಗಳು’.
ತೇಜಸ್ವಿಯವರು ಅನುವಾದಿಸಿರುವ ಕೆನೆತ್ ಆಂಡರ್ಸನ್ ನ ‘ಕಾಡಿನ ಕಥೆಗಳ’ ಮುನ್ನುಡಿಯಲ್ಲಿ ನರಿ ಎಂದುಕೊಂಡು ಚಿರತೆಯನ್ನು ಅಟ್ಟಿಸಿಕೊಂಡು ಹೋದ ಘಟನೆ ದಾಖಲಿಸುವಾಗ ಚಾರ್ಮಾಡಿ ಘಾಟಿನ ಈ ಅಣ್ಣಪ್ಪನ ಗುಡಿಯ ಪ್ರಸ್ತಾಪ ಬರುತ್ತದೆ. ಆ ಕ್ಷಣದಲ್ಲೇ ಆ ಘಟನೆಗಳೆಲ್ಲ ಕಣ್ಮುಂದೆ ನಡೆದಂತೆ ಭಾಸವಾದವು. ಅಲ್ಲಿಂದ ಸ್ವಲ್ಪ ಮುಂದೆ ಹೋದಾಗ ಧನಂಜಯ್ ಅಲ್ಲಿಯೇ ಒಂದು ತಿರುವಿನಲ್ಲಿ ಜೀಪು ನಿಲ್ಲಿಸುವಂತೆ ಹೇಳಿ ಕೆಳಗಿಳಿದು ನಮ್ಮನ್ನು ಇಳಿಯುವಂತೆ ಹೇಳಿ ಚಾರ್ಮಾಡಿಯ ಆ ನಿರ್ಜನ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ತಲೆ ಎತ್ತಿದ್ದ ಟೀಶಾಪ್ ಒಂದನ್ನು ತೇಜಸ್ವಿ ತೆರವುಗೊಳಿಸಿದ್ದರ ಬಗ್ಗೆ ವಿವರಿಸಿದರು. ಮೇಲ್ನೋಟಕ್ಕೆ ಸಾಮಾನ್ಯ ಟೀಶಾಪ್ ಆಗಿದ್ದ ಅದು ಭವಿಷ್ಯದಲ್ಲಿ ಇಡೀ ಚಾರ್ಮಾಡಿಗೆ ಸ್ಮಗ್ಲಿಂಗ್, ವೇಶ್ಯಾವಾಟಿಕೆಯಂತಹ ಅನೈತಿಕ ಚಟುವಟಿಕೆಗಳ ಕೇಂದ್ರವಾಗಬಹುದಾದ ಅಪಾಯಗಳನ್ನು ಮುಂದಾಲೋಚಿಸಿ ತೇಜಸ್ವಿ, ಧನಂಜಯ್ ಮುಂತಾದ ಗೆಳೆಯರೊಡಗೂಡಿ ಆ ಅಂಗಡಿ ತೆರವುಗೊಳಿಸಿದ್ದ ಘಟನೆಯನ್ನು ನಮ್ಮೊಂದಿಗೆ ಹಂಚಿಕೊಂಡರು. (‘ಜುಗಾರಿ ಕ್ರಾಸ್’ ನೆನಪು ಮಾಡಿಕೊಳ್ಳಿ)
ಹಾಗೆ ಇನ್ನೂ ಸ್ವಲ್ಪ ಮುಂದೆ ಹೋಗಿ ಜೀಪು ನಿಂತಿತು. ಅಷ್ಟೊತ್ತಿಗೆ ಜೀಪು ನಿಂತ ಕೂಡಲೇ ಇಳಿಯಬೇಕೆಂದು ನಾವು ಯಾಂತ್ರಿಕವಾಗಿ ಒಗ್ಗಿಬಿಟ್ಟಿದ್ದೆವು.

ಧನಂಜಯ್, ರಾಮ ಲಕ್ಷ್ಮಣರ ಮರವೆಂದು ಹೇಳಿ ಒಂದು ಬೃಹದಾಕಾರದ ಮರವನ್ನು ತೋರಿಸಿದರು. ಅಲ್ಲಿ ಒಂದೇ ರೀತಿಯ ಎರಡು ಮರಗಳಿದ್ದವೆಂದು, ಒಂದು ಮರವನ್ನು ಕಡಿದು ಬಿಟ್ಟಿರುವುದರಿಂದ ಈಗ ಅಲ್ಲಿರುವುದು ಒಂದೇ ಮರವೆಂದು ನಮಗೆ ವಿವರಿಸಿದರು. ಚಾರ್ಮಾಡಿಗೆ ತೇಜಸ್ವಿ ಆಗಾಗ ಬರುತ್ತಿದ್ದರೆಂದು, ಕೆಲವು ಸಾರಿ ಬೆಳಿಗ್ಗೆ ೭ಗಂಟೆಯೊತ್ತಿಗೆಲ್ಲ ಬಂದು ಅಷ್ಟು ಬೆಳಗಿನ ಹೊತ್ತಿನಲ್ಲಿ ಚಾರ್ಮಾಡಿ ಹೇಗೆ ಕಾಣುತ್ತದೆಂದು ನೋಡಿ ಹಾಗೇ ಸ್ಕೂಟರ್ ಹತ್ತಿಕೊಂಡು ವಾಪಸ್ ಹೋಗುತ್ತಿದ್ದರೆಂದು ಧನಂಜಯ್ ನಮಗೆ ತಿಳಿಸಿದರು.
ಬೆಳ್ಳಂಬೆಳಿಗ್ಗೆ ಚಾರ್ಮಾಡಿ ಘಾಟಿನಲ್ಲಿ ಸುತ್ತಲೂ ಅವೇ ಕುತೂಹಲದ ಕಣ್ಣುಗಳಿಂದ ವೀಕ್ಷಿಸುತ್ತಾ ಸ್ಕೂಟರ್ ಮೇಲೆ ಬರುತ್ತಿರುವ ತೇಜಸ್ವಿಯನ್ನು ಕಲ್ಪಿಸಿಕೊಂಡು ಒಳಗೊಳಗೇ ಆನಂದಿಸಿದೆ. ಹೇಮಂತನಂತೂ ಫೋಟೋ ತೆಗೆಯುವುದರಲ್ಲಿ ಅದೆಷ್ಟು ಮುಳುಗಿಹೋಗಿದ್ದನೆಂದರೆ ಘಾಟಿಯಲ್ಲಿ ಸಂಚರಿಸುವ ವಾಹನಗಳ ಕಡೆಯೂ ಅವನಿಗೆ ಲಕ್ಷ್ಯವಿಲ್ಲದೆ ರಸ್ತೆ ಮಧ್ಯೆ ನಿಂತು ಫೋಟೋ ತೆಗೆಯುತ್ತಾ ಹೋಗಿ ಬರುವ ವಾಹನ ಚಾಲಕರಿಂದ ನಿರಂತರವಾಗಿ ಬೈಸಿಕೊಳ್ಳುತ್ತಿದ್ದ.
ಅಷ್ಟೊತ್ತಿಗಾಗಲೇ ಗಂಟೆ ಹನ್ನೊಂದಾಗಿತ್ತು. ಜೀಪು ಚಾರ್ಮಾಡಿಯಿಂದ ವಾಪಸ್ ಹೊರಟು ಮತ್ತೆ ಕೊಟ್ಟಿಗೆಹಾರವನ್ನು ತಲುಪಿತ್ತು. ಬೆಳಿಗ್ಗಿನಿಂದ ಯಾರೂ ಏನು ತಿಂದಿರಲಿಲ್ಲವಾದ್ದರಿಂದ ಅಲ್ಲಿಯೇ ಇದ್ದ ಹೋಟೆಲ್ ಒಂದಕ್ಕೆ ನುಗ್ಗಿ ನೀರು ದೋಸೆ, ಕೋಳಿ ಸಾರು ಜೊತೆಗೆ ನೆಂಚಿಕೊಳ್ಳಲು ಹುರಿದ ಮೀನು ಸರಿಯಾಗಿ ತಿಂದು ಫುಲ್ ಗ್ಲಾಸ್ ಟೀ ಕುಡಿದು ಸಂತೃಪ್ತರಾದ ನಂತರ ಅಲ್ಲಿಂದ ಮುಂದೆ ಹೋಗಲಿರುವ ಜಾಗದ ಬಗ್ಗೆ ಧನಂಜಯರನ್ನು ವಿಚಾರಿಸಿದೆವು. ಅವರು ತುಂಬಾ ಒಳ್ಳೆಯ ಜಾಗಕ್ಕೆ ನಾವೀಗ ಹೋಗಲಿದ್ದೇವೆಂದು ಹೇಳಿ ಜೀಪು ಹತ್ತುವಂತೆ ಹೇಳಿದರು. ಜೀಪು ಕೊಟ್ಟಿಗೆಹಾರದ ಮುಖ್ಯರಸ್ತೆ ಬಿಟ್ಟು ಕಲ್ಲುಮಣ್ಣಿನ ಕಚ್ಚಾರಸ್ತೆಯೊಂದನ್ನು ಹಿಡಿದು ಮುಂದೆ ಸಾಗುತ್ತಿತ್ತು. ಧನಂಜಯರಿಗೆ ನಾವೀಗ ಹೋಗುತ್ತಿರುವ ಜಾಗ ಯಾವುದೆಂದು ಕೇಳಿದಾಗ ಅವರು ‘ಕರ್ವಾಲೊ’ ಕಾದಂಬರಿಯ ವಿಷಯ ತೆಗೆದರು. ಕರ್ವಾಲೊ ಕಾದಂಬರಿಯ ಪ್ರಾರಂಭದ ದೃಶ್ಯದಲ್ಲಿ ನಿರೂಪಕ (ತೇಜಸ್ವಿ) ಜೇನು ಪೋಷಕರ ಸಹಕಾರ ಸಂಘದಆಫೀಸಿಗೆ ಹೋಗಿ ಜೇನು ಬೇಕೆಂದು ಕೇಳಿದಾಗ ಆ ಆಫೀಸಿನಲ್ಲಿ ಬೀಮ್ಯಾನ್ ಕೆಲಸಕ್ಕೆ ಹೊಸದಾಗಿ ಸೇರಿದ್ದ ಮಂದಣ್ಣ ಬಂದಿರುವವರ ಸಿನಿಮಾ ಹಿನ್ನೆಲೆಯವರು ಎಂದು ತಿಳಿದು (ತೇಜಸ್ವಿಯವರ ಅಬಚೂರಿನ ಪೋಸ್ಟ್ ಆಫೀಸ್ ಕಥೆಯನ್ನು ಆಗ ಶ್ರೀ ಗಿರೀಶ್ ಕಾಸರವಳ್ಳಿಯವರು ಸಿನಿಮಾ ಮಾಡಿದ್ದರು) ಅತ್ಯುತ್ಸಾಹದಿಂದ ಅವರಿಗೆ ಜೇನಿನ ಬಗ್ಗೆ ವಿವರಿಸುವ ದೃಶ್ಯವಿದೆಯಲ್ಲ, ಅದರಲ್ಲಿ ಮಂದಣ್ಣ, ನಿರೂಪಕನಿಗೆ ‘ಗುತ್ತಿ ಕಡೇದು ಒಳ್ಳೇ ಜೇನು ನಾನು ಕೊಡ್ತೀನಿ ಸಾರ್’ ಅಂತ ಒಂದು ಮಾತು ಹೇಳ್ತಾನೆ. ಕರ್ವಾಲೋ ಕಾದಂಬರಿಯ ಮಂದಣ್ಣ ಹೇಳಿದ ಆ ‘ಗುತ್ತಿ’ ಎಂಬ ಜಾಗಕ್ಕೆ ನಾವೀಗ ಹೋಗುತ್ತಿರುವುದು’ ಎಂದರು ಧನಂಜಯ್.
ತೇಜಸ್ವಿಯವರ ಕತೆ, ಕಾದಂಬರಿಗಳಲ್ಲಿ ಓದಿದ ಜಾಗಗಳೆಲ್ಲವು ಈಗ ನಮ್ಮ ಕಣ್ಮುಂದೆ ಬರುತ್ತಿರುವುದು ಕಂಡು ನಮಗೆ ಮೈ ರೋಮಾಂಚನವಾದಂತಹ ಅನುಭವ.
ಗುತ್ತಿಗೆ ಹೋಗುವ ರಸ್ತೆ ರಸ್ತೆಯೇ ಅಲ್ಲವೆಂದು ಹೇಳಬಹುದು. ಏಕೆಂದರೆ ಸಂಪೂರ್ಣ ಜನವಸತಿರಹಿತವಾಗಿದ್ದ ಆ ಪ್ರದೇಶಕ್ಕೆ ರಸ್ತೆಯಾದರು ಯಾಕೆ ಬೇಕೆಂದು ಸರ್ಕಾರದವರು ಆ ಭಾಗಕ್ಕೆ ರಸ್ತೆಯನ್ನೆ ಹಾಕಿರಲಿಲ್ಲ. ಗುತ್ತಿಯೆಂದರೆ ಯಾವುದೇ ಊರಿನ ಹೆಸರಲ್ಲ. ಪಶ್ಚಿಮ ಘಟ್ಟದ ಬೃಹತ್ ಪರ್ವತ ಶ್ರೇಣಿಗಳಿರುವ ಆ ಒಂದು ನಿರ್ದಿಷ್ಟ ಪ್ರದೇಶಕ್ಕೆ ಇರುವ ಹೆಸರು ಗುತ್ತಿ. ಈಗೀಗ ‘ದೇವರಮನೆ’ಗೆ, ‘ಗುತ್ತಿ’ಗೆ ಬರುವ ಪ್ರವಾಸಿಗರು ಹೆಚ್ಚಾಗಿರುವುದರಿಂದ ಮತ್ತು ಆ ಪ್ರದೇಶದಲ್ಲಿ ಕೆಲವರು ತೋಟ ಮಾಡಿಕೊಂಡಿರುವುದರಿಂದ ಬೆಟ್ಟಗಳನ್ನೇ ಸಪಾಟು ಮಾಡಿ ಕಚ್ಚಾರಸ್ತೆಗಳನ್ನು ಮಾಡಿದ್ದಾರೆ. ನಮ್ಮ ಜೀಪು ಆ ಕಚ್ಚಾ ರಸ್ತೆಯಲ್ಲೇ ಸಾಗಿ ಒಂದು ಕಡೆ ನಿಂತುಕೊಂಡಿತು. ಯಥಾಪ್ರಕಾರ ಜೀಪಿನಿಂದಿಳಿದು ಇಳಿದು ಸುತ್ತಲೂ ನೋಡಿದೆವು. ಸುತ್ತಲೂ ಕಣ್ಣುಹಾಯಿಸಿದ್ದಲ್ಲೆಲ್ಲಾ ಬಾನಿನೆತ್ತರಕ್ಕೆ ಚಾಚಿಕೊಂಡಿರುವ ಹಚ್ಚ ಹಸಿರಾದ ಬೃಹತ್ ಪರ್ವತಗಳು. ಆ ಪರ್ವತಗಳನ್ನೇ ಕಣ್ ಕಣ್ ಬಿಟ್ಟು ನೋಡುತ್ತಾ ಧನಂಜಯ್ ಹಾಗೂ ಬಾಪು ದಿನೇಶರ ಜೊತೆಗೆ ಹೆಜ್ಜೆ ಹಾಕುತ್ತಾ ಒಂದು ಶಿಖರದ ತುದಿಗೆ ಬಂದು ನಿಂತೆವು. ಆಗ ಅಲ್ಲಿ ಕಂಡ ಆ ಅದ್ಭುತ ದೃಶ್ಯವನ್ನು ಪದಗಳಲ್ಲಿ ವಿವರಿಸುವುದಾದರು ಹೇಗೆ?
ಮೊದಲು ತುಂಬಾ ಸ್ಪಷ್ಟವಾಗಿ ಕಾಣುತ್ತಿದ್ದ ನೂರಾರು ಹಚ್ಚಹಸಿರು ಬೆಟ್ಟಗಳನ್ನು ಅವುಗಳ ನಡುವಿನ ಕಣಿವೆಯಲ್ಲಿ ತೇಲಿಬಂದ ಮೋಡಗಳು ಕ್ಷಣಾರ್ಧದಲ್ಲಿ ಮುಳುಗಿಸಿ ಮರೆಯಾಗಿಸಿ ನಮ್ಮನ್ನೇ ನಾವು ಕಾಣದಂತೆ ಮಾಡುವ ಪ್ರಕೃತಿಯ ಆ ಆಟಕ್ಕೆ ನಾವೆಲ್ಲರು ಸಾಮೂಹಿಕವಾಗಿ ಶರಣಾಗಿಮೂಕರಾಗಿ ನಿಂತಿದ್ದೆವು. ಸ್ವಲ್ಪ ಹೊತ್ತು ಪ್ರಕೃತಿಯ ಈ ಆಟವನ್ನು ನೋಡುತ್ತಾ ನಿಂತಿದ್ದ ನಮಗೆ ನಿಧಾನವಾಗಿ ಸುತ್ತಲಿನ ಇತರೆ ವಿಷಯಗಳ ಬಗ್ಗೆ ಗಮನಹರಿಯಿತು. ದಪ್ಪ ಎಲೆಯ, ಕುರುಚಲು ರೀತಿಯ ಒಂದು ಗಿಡ ನಮ್ಮ ಕಾಲ ಕೆಳಗೆ ನಾವು ನಿಂತಿದ್ದ ಬೆಟ್ಟದ ತುಂಬೆಲ್ಲಾ ಬೆಳೆದಿತ್ತು. ಧನಂಜಯ್ ಆ ಗಿಡವನ್ನು ‘ಗುರುಗಿ ಗಿಡ’ ಅಥವ ‘ಕುರಿಂಜಿ’ ಗಿಡವೆಂದು, ಆ ಗಿಡದ ಮಕರಂದವನ್ನು ಹೀರಿಯೇ ಜೇನುಗಳು ಬಿಳಿಬಣ್ಣದ ಜೇನು ಉತ್ಪಾದಿಸುವುದೆಂದು ನಮಗೆ ವಿವರಿಸಿದರು. ಹಾಗಾಗಿಯೇ ಕರ್ವಾಲೋ ಕಾದಂಬರಿಯಲ್ಲಿ ಮಂದಣ್ಣ ಗುತ್ತಿ ಕಡೆಯ ಒಳ್ಳೆ ಜೇನು ಎಂದು ಕೊಟ್ಟ ಜೇನುತುಪ್ಪ ತೇಜಸ್ವಿ ಮನೆಗೆ ಹೋಗಿ ಡಬ್ಬ ತೆಗೆದು ನೋಡಿದಾಗ ಬಿಳಿ ಬಣ್ಣದ ಜೇನುತುಪ್ಪವಾಗಿದ್ದದ್ದು. ತೇಜಸ್ವಿ ಆ ಜಾಗಕ್ಕೆ ತುಂಬಾ ಸಲ ಬಂದಿದ್ದರೆಂದು ಧನಂಜಯ್ ನಮಗೆ ತಿಳಿಸಿದರು. ಅಲ್ಲಿಂದ ಆ ಬೆಟ್ಟ ಇಳಿದು ಬಂದು ಜೀಪು ಹತ್ತಿ ಮುಂದೆ ಹೋದೆವು. ಜೀಪು ತುಂಬಾ ಪ್ರಾಚೀನ ದೇವಸ್ಥಾನ ಒಂದರ ಮುಂದೆ ನಿಂತಿತು. ಆ ದೇವಸ್ಥಾನದ ಮುಂದಿನ ಕಲ್ಲಿನ ಮೇಲೆ ‘ದೇವರಮನೆ’ ಎಂದು ಬರೆದಿದ್ದ ಅಕ್ಷರಗಳು ಮಳೆ ಬಂದು ಪಾಚಿಹಿಡಿದಿದ್ದರಿಂದ ಸರಿಯಾಗಿ ಕಾಣಿಸದಂತಾಗಿದ್ದವು. ಆ ದೇವಸ್ಥಾನ ಹೊಯ್ಸಳರ ಕಾಲದ ಪುರಾತನ ದೇವಾಲಯವೆಂದು ಬಾಪು ನಮಗೆ ವಿವರಿಸಿದರು.
ಹಾಗೆ ಅಲ್ಲಿಂದ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಇದ್ದ ಕಚ್ಚಾ ರಸ್ತೆಯು ಮುಗಿದು, ಸರ್ಕಾರದವರು ಮಂಗಳೂರಿನಿಂದ ಹಾಸನಕ್ಕೆ ವಿದ್ಯುತ್ ಹರಿಸಲು ಆ ಬೃಹತ್ ಪರ್ವತಗಳ ಮೇಲೆ ಸ್ಥಾಪಿಸುತ್ತಿದ್ದ ಭಾರಿ ಗಾತ್ರದ ವಿದ್ಯುತ್ ಕಂಬಗಳ, ಲೈನುಗಳ ಕೆಲಸದ ಲಾರಿಗಳು, ಟ್ರಕ್ಕುಗಳು, ಜೆಸಿಬಿಗಳು ಓಡಾಡಲು ಬೆಟ್ಟಗಳನ್ನೇ ಕಡಿದು ಮಾಡಿದ್ದ ರಸ್ತೆಯ ಮೇಲೆ ನಮ್ಮ ಜೀಪು ಪ್ರಯಾಸಪಟ್ಟುಕೊಂಡು ಸಾಗಿ ಒಂದು ಕಡೆ ನಿಂತಿತು. ಪಶ್ಚಿಮ ಘಟ್ಟಗಳಲ್ಲಿ ಅಭಿವೃದ್ಧಿಯ ನೆಪದಲ್ಲಿ ಆಗುತ್ತಿರುವ ಅರಣ್ಯ ನಾಶದ ಕರಾಳಮುಖದ ದರ್ಶನ ಅಲ್ಲಿ ನಮಗೆ ಆಯಿತು. ಅಷ್ಟು ಬೃಹತ್ತಾದ ಪರ್ವತಗಳ ನೆತ್ತಿಯನ್ನೇ ಸಪಾಟು ಮಾಡಿ ಅವುಗಳ ಮೇಲೆ ದೈತ್ಯಾಕಾರದ ವಿದ್ಯುತ್ ಕಂಬಗಳನ್ನು ನೆಡುವ ಕಾರ್ಯ ಸರ್ಕಾರದಿಂದಲೇ ಎಗ್ಗಿಲ್ಲದೆ ಸಾಗುತ್ತಿತ್ತು. ಇಷ್ಟು ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಅಭಿವೃದ್ಧಿ ಎನ್ನುವುದು ಎಷ್ಟು ಅವಶ್ಯವೋ ಅಷ್ಟೇ ಅವಶ್ಯ ನಮ್ಮ ಪಶ್ಚಿಮಘಟ್ಟಗಳು. ಪ್ರಕೃತಿ ರಕ್ಷಣೆ ಹಾಗೂ ಅಭಿವೃದ್ಧಿ ಇವೆರಡೂ ಒಂದು ಸಮತೋಲನದಲ್ಲಿ ಸಾಗುವಂತೆ ನೀತಿ ರೂಪಿಸುವ ಮತ್ತು ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನೈತಿಕ ಹೊಣೆ ಸರ್ಕಾರಗಳು ವಹಿಸಿದರೆ ಇಷ್ಟು ಸಮೃದ್ಧವಾದ ಪ್ರಾಕೃತಿಕ ಸಂಪತ್ತು ನಮ್ಮ ಕಣ್ಣೆದುರಿಗೇ ನಶಿಸಿ ಹೋಗುವುದನ್ನು ತಪ್ಪಿಸಿ ನಮ್ಮ ಮುಂದಿನ ಪೀಳಿಗೆಗಳಿಗೂ ಈ ಸಂಪತ್ತನ್ನು ಬಿಟ್ಟು ಹೋಗಬಹುದು ಎನ್ನಿಸುತ್ತದೆ.
ಭಾರವಾದ ಮನಸ್ಸಿನಿಂದ ಅಲ್ಲಿಂದ ವಾಪಸ್ ಹೊರಟೆವು.
ಧನಂಜಯ್ ನಾವೀಗ ತೇಜಸ್ವಿ ಜೊತೆಗೆ ಟ್ರೆಕ್ಕಿಂಗ್ ಹೋಗಿದ್ದ ಒಂದು ಜಾಗವೊಂದಕ್ಕೆ ಹೋಗುತ್ತಿರುವುದಾಗಿ ಹೇಳಿದರು.ನಮ್ಮ ಜೀಪು ಕಚ್ಚಾರಸ್ತೆಯನ್ನು ದಾಟಿ ನುಣುಪಾದ ಡಾಂಬರು ರಸ್ತೆಯ ಮೇಲೆ ಸಾಗುತ್ತಿತ್ತು. ಆ ಹೊತ್ತಿಗೆ ಸಣ್ಣಗೆ ಮಳೆ ಪ್ರಾರಂಭವಾಯಿತು. ರಸ್ತೆಯ ಅಕ್ಕಪಕ್ಕಗಳ ಗದ್ದೆಗಳಲ್ಲಿ ಆ ಮಳೆಯಲ್ಲೇ ತಲೆಯ ಮೇಲೆ ಕೊಪ್ಪೆ ಚೀಲ ಹೊದ್ದು ಮಲೆನಾಡಿನ ಮುಗ್ಧ ರೈತ ಜೀವಗಳು ತಮ್ಮ ಕೆಲಸದಲ್ಲಿ ಮುಳುಗಿದ್ದವು. ಸ್ವಲ್ಪ ದೂರ ಕ್ರಮಿಸಿದ ನಂತರ ದೂರದಲ್ಲಿ ನಮ್ಮ ನೇರಕ್ಕೆ ಎತ್ತಿನ ಬೆನ್ನಿನ ಮೇಲಿನ ಡುಬ್ಬದಂತೆ ಮಂಜಿನಲ್ಲಿ ಅರ್ಧಮುಳುಗಿದ್ದ ಪರ್ವತವೊಂದು ಕಾಣಿಸುತ್ತಿತ್ತು. ಅದು ಯಾವ ಪರ್ವತವೆಂದು ನಾನು ಕೇಳಿದಾಗ ಧನಂಜಯ್ ‘ಅದೇ ಎತ್ತಿನಭುಜ’ ಎಂದರು. ಎತ್ತಿನ ಭುಜ ಬೆಟ್ಟದ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೆ. ಈಗ ಕಣ್ಣೆದುರೇ ಆ ಪರ್ವತ ಕಾಣಿಸುತ್ತಿತ್ತು. ಆಗ ‘ನಾವೀಗ ಅಲ್ಲಿಗೇ ಹೋಗ್ತಿರೋದು’! ಎಂದು ಸೇರಿಸಿದರು ಧನಂಜಯ್. ಜೀಪು ಮುಂದೆ ಮುಂದೆ ಸಾಗಿದಂತೆ ಎತ್ತಿನಭುಜ ನಮಗೆ ಹತ್ತಿರದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ತಿರುವು ಮುರುವಿನ ರಸ್ತೆಯನ್ನು ಹಾದು ನಮ್ಮ ಜೀಪು ಒಂದು ಹಳೆಯ ದೇವಸ್ಥಾನದ ಮುಂದೆ ಬಂದು ನಿಂತಿತು. ಅದು ಎತ್ತಿನಭುಜ ಪರ್ವತಕ್ಕೆ ಚಾರಣಕ್ಕೆ ಹೋಗುವವರಿಗೆ ಬೇಸ್ ಕ್ಯಾಂಪ್ ಅಂತೆ. ಅಲ್ಲಿಂದ ಮುಂದೆ ನಡೆದು ಹೋಗಬೇಕೆಂದು ಧನಂಜಯ್ ತಿಳಿಸಿದರು. ಆದರೆ ಅಷ್ಟೊತ್ತಿಗೆ ಮಳೆ ಜೋರಾಗಿದ್ದರಿಂದ ದುರಾದೃಷ್ಟವಷಾತ್ ಎತ್ತಿನಭುಜದ ನೆತ್ತಿಗೆ ನಾವು ಹೋಗಲಾಗಲಿಲ್ಲ. ಆ ಮಳೆಯಲ್ಲಿ ಎತ್ತಿನ ಭುಜಕ್ಕೆ ಹೋಗಿ ಬರುವುದಕ್ಕೆ ಒಂದಿಡೀ ದಿನವೇ ಬೇಕಾಗುವುದರಿಂದ ನಮಗದು ಸಾಧ್ಯವಾಗಲಿಲ್ಲ. ಆದರೆ ತೇಜಸ್ವಿಯವರು ಅವರ ಪತ್ನಿ ರಾಜೇಶ್ವರಿಯವರೊಡನೆ ಧನಂಜಯ್ ಮತ್ತವರು ಗೆಳೆಯರು ನೇಚರ್ ಕ್ಲಬ್ಬಿನ ಮೂಲಕ ಆಯೋಜಿಸಿದ್ದ ಎತ್ತಿನ ಭುಜದ ಚರಣಕ್ಕೆ ಬಂದಿದ್ದ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ಚಾರಣಕ್ಕೆ ಬಂದಿದ್ದವರಿಗೆಂದು ತಂದಿದ್ದ ಪುಳಿಯೋಗರೆ
ಮತ್ತು ಮೊಸರನ್ನದ ಡ್ರಮ್ಮುಗಳನ್ನು ಧನಂಜಯ್ ಮತ್ತವರ ಗೆಳೆಯರು ಪ್ರಯಾಸಪಟ್ಟುಕೊಂಡು ಹೊತ್ತುಕೊಂಡು ಬೆಟ್ಟ ಹತ್ತುತ್ತಿರುವುದನ್ನು ನೋಡಲಾಗದ ತೇಜಸ್ವಿ, ‘ಹ್ಯಾಗಿದ್ರು ಮೇಲೆ ತಗೊಂಡು ಹೋಗಿ ತಿನ್ನೋದೆ ತಾನೆ, ಇಲ್ಲೇ ತಿಂದು ಹೋಗಿಬಿಡೋಣ, ಅವರವರ ಭಾರ ಅವರವರೇ ಹೊತ್ತುಕೊಂಡ ಹಾಗಾಗುತ್ತೆ’ ಎಂದು ಒಂದು ಐಡಿಯಾ ಕೊಟ್ಟು ಧನಂಜಯ್ ಮತ್ತವರ ಗೆಳೆಯರನ್ನು ಊಟದ ಡ್ರಮ್ಮು ಹೊರುವ ಕಷ್ಟದಿಂದ ತಪ್ಪಿಸಿದ ಸಂದರ್ಭವನ್ನು ನೆನಪಿಸಿಕೊಂಡರು.
ಸುರಿಯುತ್ತಿದ್ದ ಮಳೆಯಲ್ಲೇ ಬಂದ ಹಾದಿಯಲ್ಲೇ ವಾಪಸ್ ಹೊರಟು ಮಧ್ಯಾಹ್ನ ೩ ಗಂಟೆಯ ಹೊತ್ತಿಗೆ ಮೂಡಿಗೆರೆ ತಲುಪಿದೆವು. ಸುತ್ತಿ ಸುತ್ತಿ ಸುಸ್ತಾಗಿ, ಬೆಳಿಗ್ಗೆ ತಿಂದಿದ್ದ ನೀರು ದೋಸೆ ಖಾಲಿಯಾಗಿ ಹೊಟ್ಟೆ ಚುರುಗುಟ್ಟುತ್ತಿತ್ತು. ಮೂಡಿಗೆರೆಯ ಹೋಟೆಲ್ ಹೊಕ್ಕು ಚಪಾತಿ, ಅನ್ನ, ಮೀನು ಸಾರು ತಿಂದು ಸಮಾಧಾನವಾದ ನಂತರ ಈಗ ಯಾವ ಕಡೆಗೆಂದು ಧನಂಜಯರನ್ನು ಕೇಳಿದೆವು. ಆಗ ಬಾಪು ದಿನೇಶ್ ತಮಗೆ ತೋಟದಲ್ಲಿ ಸ್ವಲ್ಪ ಕೆಲಸವಿದೆಯೆಂದು ಅನಿವಾರ್ಯವಾಗಿ ಹೋಗಲೇಬೇಕಾಗಿದೆಯೆಂದು ಹಾಗಾಗಿ ಮುಂದಕ್ಕೆ ನಿಮ್ಮೊಂದಿಗೆ ಬರಲಾಗುತ್ತಿಲ್ಲವೆಂದು ಹೇಳಿ ನಮ್ಮನ್ನು ಬೀಳ್ಕೊಟ್ಟರು.
ನಾವು ಮೂರು ಜನ ಜೀಪು ಹತ್ತಿದೆವು. ಜೀಪು ಚಿಕ್ಕಮಗಳೂರಿನ ಕಡೆ ಹೊರಟಿತು. ಧನಂಜಯ್ ನಾವೀಗ ಬಾಬಾಬುಡನಗಿರಿಗೆ ಹೋಗುತ್ತಿರುವುದಾಗಿ ಹೇಳಿದರು. ‘ಅಲ್ಲಿಗ್ಯಾಕೆ? ತೇಜಸ್ವಿ ಅಲ್ಲಿಗೂ ಹೋಗ್ತಿದ್ರ? ಎಂದು ಕೇಳಿದಕ್ಕೆ ‘ಅಲ್ಲೇ ಹೇಳ್ತೀನಿ ಬನ್ನಿ’ ಎಂದು ಉತ್ತರ ಕೊಟ್ಟರು ಧನಂಜಯ್. ನಾವು ಸುಮ್ಮನಾದೆವು.
ಮೂಡಿಗೆರೆಯಿಂದ ಚಿಕ್ಕಮಗಳೂರು ಸುಮಾರು ೪೦ ಕಿಲೋಮೀಟರ್ ಇದೆ. ಅಲ್ಲಿಂದ ಮುಂದಕ್ಕೆ ಬಾಬಾಬುಡನಗಿರಿ ಸುಮಾರು ೩೦ ಕಿಲೋಮೀಟರ್ ದೂರ. ಸುಮಾರು ಒಂದೂವರೆ ಗಂಟೆಗಳಲ್ಲಿ ತಲುಪಬಹುದಾಗಿದ್ದ ಜಾಗಕ್ಕೆ ಮೂರು ಗಂಟೆ ಸಮಯ ಆದರೂ ನಾವು ತಲುಪಲಿಕ್ಕೆ ಆಗಿರಲಿಲ್ಲ. ಕಡೆಗೆ ಸಂಜೆ ೬ ಗಂಟೆಗೆ ಬಾಬಾಬುಡನಗಿರಿಯ ನೆತ್ತಿಗೆ ತಲುಪಿದ ಮೇಲೆ ಗೊತ್ತಾಯಿತು ನಾವು ದಾರಿ ತಪ್ಪಿ ಸುತ್ತಿ ಬಳಸಿ ಅಲ್ಲಿಗೆ ತಲುಪಿದೆವು ಅಂತ. ೬ ಗಂಟೆಯ ಹೊತ್ತಿಗೆಲ್ಲ ಬೆಟ್ಟದ ಮೇಲೆ ಭಾಗಶಃ ಕತ್ತಲಾವರಿಸುತ್ತಿತ್ತು. ಜೊತೆಗೆ ಬೆಟ್ಟದ ಮೇಲೆ ದಟ್ಟ ಮಂಜು ಮುಸುಕಿ ೧೦೦ ಮೀಟರ್ ಆಚೆಗೆ ಏನಿದೆ ಎಂದು ಕಾಣಲು ಬಿಡುತ್ತಿರಲಿಲ್ಲ. ಬಂದಿದ್ದ ಪ್ರವಾಸಿಗರೆಲ್ಲಾ ವಾಪಸ್ ಹೊರಟಿದ್ದರೆ, ನಾವು ಮಾತ್ರ ಅವರಿಗೆ ವಿರುದ್ಧ ದಿಕ್ಕಿನಲ್ಲಿ ಬೆಟ್ಟಹತ್ತಿ ಹೋಗುತ್ತಿದ್ದೆವು. ಇನ್ನೂ ೩ ಕಿಲೋಮೀಟರ್ ಬೆಟ್ಟ ಹತ್ತಿ ಬಾಬಾಬುಡನಗಿರಿಯನ್ನು ದಾಟಿ ಅದರ ಮೇಲಿರುವ ಮಾಣಿಕ್ಯಧಾರ ಜಲಪಾತದ ಬಳಿಬಂದೆವು. ಅಷ್ಟೊತ್ತಿಗಾಗಲೆ ಸಂಪೂರ್ಣ ಕತ್ತಲಾವರಿಸಿಬಿಟ್ಟಿತ್ತು. ಆದರೂ ಹಿಂಜರಿಯದೆ ಎತ್ತರದಿಂದ ಮುತ್ತಿನ ಹನಿಗಳಂತೆ ಧುಮುಕುತ್ತಿದ್ದ ಜಲಪಾತದ ಬಳಿಗೆ ಮೆಟ್ಟಿಲಿಳಿದು ಹೋದೆವು. ದೂರದಿಂದ ಜಲಪಾತದ ಸದ್ದು ಕೇಳಿಸುತ್ತಿತ್ತೇ ವಿನಃ ಕತ್ತಲಲ್ಲಿ ಕಾಣಿಸುತಿರಲಿಲ್ಲ. ತುಂಬಾ ಹತ್ತಿರ ಹೋದಾಗಲಷ್ಟೇ ಜಲಪಾತದ ದರುಶನ ನಮಗಾದದ್ದು. ನೀರು ಭಯಂಕರವಾಗಿ ಕೊರೆಯುತ್ತಿತ್ತು. ಧನಂಜಯರಿಗೆ ‘ಏನ್ ಸಾರ್, ಇಲ್ಲೇ ಹೇಳ್ತೀನಿ ಅಂದ್ರಲ್ಲ, ಏನ್ ಹೇಳಿ’ ಎಂದು ಕೇಳಿದಾಗ ಅವರು ಈ ಕಥೆ ಹೇಳಿದರು.
‘ಸುಮಾರು 15ವರ್ಷಗಳ ಹಿಂದೆ ತೇಜಸ್ವಿ ಅವರ ಗೆಳೆಯರೊಬ್ಬರೊಡನೆ ಇದೇ ಮಾಣಿಕ್ಯಧಾರಕ್ಕೆ ಹೋಗಿದ್ದಾಗ ತುಂಬಾ ಸಮೀಪದಿಂದ ನೀರು ಬೀಳುವುದನ್ನು ನೋಡಬೇಕೆಂದು ಜಾರುತ್ತಿದ್ದ ಪ್ರಪಾತವನ್ನು ಜೀವ ಕೈಯಲ್ಲಿಟ್ಟುಕೊಂಡವರಂತೆ ಇಳಿಯುತ್ತಿದ್ದಾಗ ನಿರ್ಜನವಾದ ಆ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಯಾವುದೋ ಧ್ವನಿ ‘ಸಾರ್ ಅಲ್ಲಿಗೆ ಹೋಗ್ಬೇಡಿ ಸಾರ್, ಅಲ್ಲಿಗೆ ಹೋಗ್ಬೇಡಿ ಸಾರ್’ !!! ಎಂದು ಕಿರುಚಿದ್ದು ಕೇಳಿಸಿ ಹಿಂತಿರುಗಿ ನೋಡಿದಾಗ ವ್ಯಕ್ತಿಯೊಬ್ಬ ‘ಆ ಕಡೆ ಹೋಗಬಾರದೆಂದು ತಮಗೆ ಸೂಚಿಸುತ್ತಿರುವುದು ಅವರಿಗೆ ಕಂಡಿದೆ. ತೇಜಸ್ವಿ ಮತ್ತು ಅವರ ಗೆಳೆಯರು ಆ ವ್ಯಕ್ತಿಯ ಮಾತು ಅಲಕ್ಷಿಸಿ ಮತ್ತು ಮುಂದುವರಿದಾಗ ಆ ವ್ಯಕ್ತಿ ಮತ್ತಷ್ಟು ಜೋರಾಗಿ ‘ಆ ಕಡೆ ಹೋಗ್ಬೇಡಿ’ ಎಂದು ಕಿರುಚಿದನಂತೆ. ‘ಯಾಕ್ ಹೋಗ್ಬಾರ್ದು? ಅಲ್ಲೇನು ಕಾಳಿಂಗ ಸರ್ಪ ಇದೆಯೇ? ಇದ್ರೆ ಫೋಟೊ ತೆಗೆದ್ರಾಯ್ತು’ ಎಂದುಕೊಂಡು ಮತ್ತು ಮುಂದುವರಿದಾಗ ಆ ವ್ಯಕ್ತಿ ‘ಸಾರ್ ಆ ಕಡೆ ಹೋಗ್ಬೇಡಿ ಸಾರ್, ಅಲ್ಲಿ ನನ್ನೆಂಡ್ತಿ ಸ್ನಾನ ಮಾಡ್ತಿದ್ದಾಳೆ’ ಎಂದು ಇವರಿಗೆ ಅಂಗಲಾಚಿ ಬೇಡಿಕೊಂಡನಂತೆ!!! ಈ ಘಟನೆಯನ್ನು ತೇಜಸ್ವಿಯವರೇ ತನಗೆ ಹೇಳಿದೆಂದು ಧನಂಜಯ್ ನಮ್ಮೊದಿಗೆ ಹಂಚಿಕೊಂಡರು.ಕಡೆಗೆ ತೇಜಸ್ವಿ ‘ಆದ್ರೂ ಅವತ್ತು ಅವ್ನು ಅಷ್ಟೆಲ್ಲಾ ಕೂಗಾಡುವ ಅಗತ್ಯ ಇರಲಿಲ್ಲ, ಅಲ್ವೇನಯ್ಯ?’ ಎಂದು ಧನಂಜಯರನ್ನೇ ಪ್ರಶ್ನಿಸಿದರಂತೆ.ನಾವು ಮೂವರು ಆ ಘಟನೆಯನ್ನು ಮತ್ತೆ ಮತ್ತೆ ನೆನಪಿಸಿಕೊಂಡು ದಾರಿಯುದ್ದಕ್ಕೂ ನಕ್ಕೆವು. ಹಾಗೇ ತೇಜಸ್ವಿಯವರ ಜೊತೆ ಮುಳ್ಳಯನಗಿರಿಗೆ ಚಾರಣಹೊರಟು ರಾತ್ರಿ ಬೆಟ್ಟದಲ್ಲಿಯೇ ತಂಗಿದ್ದ ರೋಮಾಂಚಕ ಅನುಭವಗಳನ್ನು ಧನಂಜಯ್ ನಮ್ಮೊಂದಿಗೆ ಹಂಚಿಕೊಂಡರು. ಅಷ್ಟೊತ್ತಿಗೆ ರಾತ್ರಿ ಸುಮಾರು ೭.೩೦ ಇರಬೇಕು. ನಮ್ಮ ಜೀಪು ಬಾಬಾಬುಡನ್ ಗಿರಿ ಇಳಿಯುತ್ತಿತ್ತು. ನಂಬ್ತೀರೋ ಬಿಡ್ತೀರೊ, ಬೆಟ್ಟದ ತುಂಬಾ ಮಂಜು ಮುಸುಕಿ ನಮಗೆ ಒಂದು ಹೆಜ್ಜೆಯಷ್ಟು ಬಿಟ್ಟರೆ ಮುಂದಿನ ದಾರಿಯೇ ಕಾಣುತ್ತಿರಲಿಲ್ಲ. ನಮ್ಮ ಜೀಪಿನ ಚಾಲಕ ಅತ್ಯಂತ ಜಾಗರೂಕನಾಗಿ ನಡಿಗೆಗಿಂತಲೂ ಕಡಿಮೆ ಸ್ಪೀಡಿನಲ್ಲಿ ಜೀಪ್ ಓಡಿಸುತ್ತಿದ್ದ. ಸುಮಾರು ೧೦ ಕಿಲೋಮೀಟರ್ ಬಂದ ನಂತರ ಮಂಜು ಸ್ವಲ್ಪ ಕಡಿಮೆಯಾಗಿ ರಸ್ತೆ ಕಾಣಿಸತೊಡಗಿದಾಗ ಹೋದ ಜೀವ ಬಂದಂತಾಯ್ತು ನಮಗೆ. ಅಂತೂ ಹೇಗೋ ಮೂಡಿಗೆರೆ ತಲುಪಿಕೊಂಡೆವು. ಸಮಯ ರಾತ್ರಿ ೯ ಗಂಟೆ ಆಗಿತ್ತು. ಜೀಪಿನ ಚಾಲಕನಿಗೆ ಆತನ ಹಣ ಕೊಟ್ಟು ಕಳುಹಿಸಿದೆವು. ಧನಂಜಯರಿಗೆ ಥ್ಯಾಂಕ್ಸ್ ಹೇಳಿದೆವು. ಅವರು ‘ನಾನು ಈ ಜಾಗಗಳಿಗೆಲ್ಲ ಹೋಗಿ ತುಂಬಾ ದಿನ ಆಗಿತ್ತು. ನಿಮ್ಮಿಂದ ಮತ್ತೆ ಆ ಅವಕಾಶ ಸಿಕ್ತು. ನಾನೂ ನಿಮಗೆ ಥ್ಯಾಂಕ್ಸ್ ಹೇಳ್ಬೇಕು’ ಎಂದರು. ಅವರು ಬೆಳಿಗ್ಗೆ ಬೇಗ ಎದ್ದು ತಯಾರಾಗಿ ಅವರ ಬ್ಯಾಂಕಿನ ನೌಕರಿಗೆ ಹೋಗಬೇಕಾದ್ದರಿಂದ ನಮ್ಮೊಂದಿಗೆ ಹೆಚ್ಚು ಹೊತ್ತು ನಿಲ್ಲದೇ ಹೊರಟೇ ಹೋದರು. ನಾನು ಹೇಮಂತ ಮೂಡಿಗೆರೆಯ ಹೋಟೆಲ್ ನಲ್ಲಿ ಊಟ ಮಾಡಿ,ಬೆಳಿಗ್ಗೆ ಬೇಗ ಎದ್ದು ಬೆಂಗಳೂರಿನ ಬಸ್ ಹಿಡಿಯಬೇಕೆಂದುಕೊಂಡು ರೂಮಿಗೆ ಬಂದು
ಮಲಗಿದೆವು. ಆದರೆ ನಾಳೆ ಬೆಳಿಗ್ಗೆ ನಾವಂದುಕೊಂಡಂತೆ ಬೆಂಗಳೂರಿಗೆ ಹೊರಡಲು ಸಾಧ್ಯವಾಗುವುದಿಲ್ಲವೆಂಬ ಯಾವ ಸುಳಿವು ನಮಗಾಗ ಇರಲಿಲ್ಲ!

‍ಲೇಖಕರು avadhi

July 21, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. ನಿಶಾ ಗೋಪಿನಾಥ್

    ತೇಜಸ್ವಿ ಅವರ ಬದುಕಿನ ಕುರಿತ ಇಡೀ ಸರಣಿ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ಅವಧಿ ಹಾಗೂ ಲೇಖಕರಿಬ್ಬರಿಗೂ ಧನ್ಯವಾದ

    ಪ್ರತಿಕ್ರಿಯೆ
  2. ಆನಂದ

    ಸಾಕ್ಷ್ಯಚಿತ್ರದ ಸಿ.ಡಿ. ಕುರಿತ ಎಲ್ಲ ವಿವರಗಳನ್ನೂ (ಬೆಲೆ, ಸಂಪರ್ಕ ವಿಳಾಸ, ಫೋನ್ ಇತ್ಯಾದಿ) ಪ್ರತಿ ಸರಣಿ ಕೊನೆಗೆ ಕೊ ಟ್ಟರೆ ಉಪಯುಕ್ತವಾದೀತು.

    ಪ್ರತಿಕ್ರಿಯೆ
  3. Dr Yogeesh

    ನಿಮ್ಮ ಮತ್ತೆ ಮತ್ತೆ ತೇಜಸ್ವಿ ಬಿಟ್ಟು ಬಿಡದೆ ೩ ಬಾರಿ ನೋಡಿದ್ದೆ. ಮೇಕಿಂಗ್ ಬಗ್ಗೆ ನಿಮ್ಮ ಲೇಖನ ನೀವು ಪಟ್ಟ ಶ್ರಮ ಹಾಗು ನಿಮ್ಮ ಆಸಕ್ತಿಯನ್ನ ತೋರಿಸುತ್ತದೆ. ನಿಮ್ಮ ಸಾಕ್ಶ್ಯ ಚಿತ್ರ ೧೯೯೬-೨೦೦೦ ರಲ್ಲಿ ನೋಡಿದ ಮೂಡಿಗೆರೆ , ಚಾರ್ಮಾಡಿ ಮತ್ತು ಸುತ್ತಲಿನ ಜಾಗ ಹಾಗು ಮಳೆಯನ್ನ ಕಣ್ಣಮುಂದೆ ಬರುವಂತೆ ಮಾಡಿತು. ನಿಮ್ಮ ಪೂರ್ಣ ತಂಡಕ್ಕೆ ನನ್ನ ಅಭಿನಂದನೆ

    ಪ್ರತಿಕ್ರಿಯೆ
  4. malini guruprasanna

    samruddha male, ghat section yaavudoo nanage hosadalla. pashima ghattadalle nanna mane iruvudu. bengaloorina maneyalli kulitu nannoorige hogi banda anubhava . Thanks.

    ಪ್ರತಿಕ್ರಿಯೆ
  5. Parameshwar

    ಗೆಳೆಯರೆಲ್ಲರಿಗೂ ಧನ್ಯವಾದಗಳು.
    ’ಮತ್ತೆ ಮತ್ತೆ ತೇಜಸ್ವಿ’ ಸಾಕ್ಷ್ಯಚಿತ್ರದ ಡಿವಿಡಿಗಳು ಜಯನಗರದ ಟೋಟಲ್ ಕನ್ನಡ ಪುಸ್ತಕ ಮಳಿಗೆ, ಬೆಂಗಳೂರಿನ ಎಲ್ಲಾ ಸಪ್ನ ಬುಕ್ ಶಾಪಿನ ಮಳಿಗೆಗಳಲ್ಲಿ ದೊರೆಯುತ್ತವೆ. ಆಸಕ್ತರು ಡಿವಿಡಿಗಳಿಗಾಗಿ ಟೋಟಲ್ ಕನ್ನಡದ ಲಕ್ಷ್ಮೀಕಾಂತರವರನ್ನು ಸಂಪರ್ಕಿಸಿ. ಅವರ ನಂಬರ್ – 9986222402
    ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: