ಜಿ ಎನ್ ನಾಗರಾಜ್ ಅಂಕಣ- ಪ್ರಮೀಳೆಯರ ಸ್ತ್ರೀ ರಾಜ್ಯವೆಂಬುದೊಂದು ಇತ್ತೆ?

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

17

‌ಸ್ತ್ರೀರಾಜ್ಯದೊಳ್ ಪ್ರಮೀಳೆ-
ಹಯಂ ತಳರ್ದುದತಿ ವೇಗದಿಂ…ಬರಿಯ ವನಿತಾಮಯದ ರಾಜ್ಯದೊಳಸೀಮೆಗುತ್ಸಾಹದಿಂದೆ.
ಕುದುರೆ ಬಹಳ ವೇಗದಲ್ಲಿ ಕೇವಲ ಮಹಿಳೆಯರೇ ಇರುವ ರಾಜ್ಯಕ್ಕೆ ಉತ್ಸಾಹದಿಂದ ಹೊಕ್ಕಿತು.

ಈ ಕುದುರೆ ಅಶ್ವಮೇಧ ಯಾಗದ ಕುದುರೆ. ಯಾಗದ ಪದ್ಧತಿಯಂತೆ ಒಂದು ವರ್ಷ ಕಾಲ ಅಲ್ಲಲ್ಲಿ ಸುತ್ತಾಡುತ್ತಾ ಬರುತ್ತದೆ. ಯಾರು ಅದನ್ನು ಹಿಡಿದು ಕಟ್ಟವರೋ ಅವರೊಡನೆ ಯಾಗದ ಕುದುರೆಯನ್ನು ಹಿಂಬಾಲಿಸಿದ ಸೈನ್ಯ ಮತ್ತು ಅದರ ದಂಡನಾಯಕ ಯುದ್ಧ ಮಾಡಿ ಗೆಲ್ಲುತ್ತಾನೆ. ಅಂತಹ ಕುದುರೆ ಪ್ರಮೀಳೆಯೆಂಬಾಕೆ ರಾಜ್ಯಭಾರ ನಡೆಸುತ್ತಿದ್ದ ಕೇವಲ ಸ್ತ್ರೀಯರೇ ಇರುವ ಸ್ತ್ರೀ ರಾಜ್ಯವನ್ನು ಪ್ರವೇಶಿಸುತ್ತದೆ. ಈ ಕುದುರೆ ಅಂತಿಂತಹವ ಕುದುರೆಯಲ್ಲ. ಮಹಾಭಾರತದ ಮಹಾಯುದ್ಧ ಮುಗಿದ ನಂತರ ಧರ್ಮರಾಯನ ಆಳ್ವಿಕೆ ನಡೆಸಲು ಉದ್ದೇಶಿಸಿದ್ದ ಮಹಾ ವೀರ ಪಾಂಡವರ ಅಶ್ವಮೇಧದ ಕುದುರೆ. ಈ ಕುದುರೆಯ ಬೆಂಬಲಕ್ಕೆ ಸ್ವತಃ ಅರ್ಜುನನ ಸೇನೆಯೇ ಹಿಂಬಾಲಿಸುತ್ತಿರುತ್ತದೆ.

ಈ ಕುದುರೆಯನ್ನು ರಾಜ್ಞಿ ಪ್ರಮೀಳೆ ಕಟ್ಟಿಹಾಕಿಸುತ್ತಾಳೆ. ಈಗ ಅರ್ಜುನ ಮತ್ತವನ ಸೈನ್ಯ ಇವರೊಡನೆ ಯುದ್ಧದಲ್ಲಿ ಗೆದ್ದು ಈ ರಾಜ್ಯವನ್ನು ವಶ ಮಾಡಿಕೊಳ್ಳಬೇಕು. ನಂತರ ಕುದುರೆಯನ್ನು ಪಡೆಯಬೇಕು.
ಇದು ಜೈಮಿನಿ ಭಾರತದ 16 ನೆಯ ಸಂಧಿಯಲ್ಲಿ ಪ್ರಸ್ತಾಪವಾಗಿದೆ. ಈ ರಾಜ್ಯದಲ್ಲಿ ಪ್ರಜೆಗಳೆಲ್ಲ ಮಹಿಳೆಯರು ಮಾತ್ರವಲ್ಲ, ಆಡಳಿತ ನಡೆಸುವವರು, ಸೈನಿಕರು, ದಳಪತಿಗಳು ಎಲ್ಲ ಮಹಿಳೆಯರೇ.
“ಕಣ್ಷ ಹೊಳಪಿನ ಚಪಲೆಯರ ಕುದುರೆ ಲಕ್ಷದಿಂ/
ತಿಣ್ಣ ಮೊಲೆಯಸಗಮನೆಯಾರಾನೆ ಲಕ್ಷದಿಂ/
ಹುಣ್ಣಿಮೆಯ ಶಶಿಯಂತೆಸೆವ ಬಟ್ಟ ಮೊಗದ ನೀರೆಯರ ರಥ ಲಕ್ಷದಿಂದೆ /
…ವಣ್ಣದಂಗದ ಬಾಲೆಯರ ಮೂರು ಲಕ್ಷದಿಂ ಪೆಣ್ಣ ದಳಮೈದೆ ಜೋಡಿಸಿತು ಪಾರ್ಥನ ಸಮರಾಕಾ ಪ್ರಮೀಳೆಯ ಸುತ್ತಲು.”
ಇದು ಸ್ತ್ರೀ ರಾಜ್ಯದ ಸೈನ್ಯ.
“ಬಗೆಬಗೆಯ ಕೈದುಗಳ ವಿಗಡೆಯರ್ ನೆರೆದು ಕಾಳಗಕೆ ಮುಂಕೊಳುತಿರ್ದರು.”

“ಲೀಲೆ ಮಿಗೆ‌ ಪೆಣ್ದಳಂ ಬಂದು ವಿಜಯನ ಪಡೆಯ/
ಮೇಲೆ ಬಿದ್ದುದು ಕರಿ ತುರಗ ರಥ ಪದಾತಿಗಳ ಸಾಲೆಸೆಯೆ ಸಂದಣಿಸಿ ನಾನಾ ಪ್ರಕಾರದ ಕೈದುಗಳ ಮಳೆಗರೆಯುತೆ”
ಇಂತಹ ಸೈನ್ಯವನ್ನು ಮುನ್ಬಡೆಸುತ್ತಾ ಬಂದ ರಾಜ್ಞಿ ಪ್ರಮೀಳೆಯನ್ನು
“….ಇವಳನೀಕ್ಷಣವೆ ಭಂಗಿಸುವೆ/ನೆಂದು ಸಮ್ಮೋಹನಾಸ್ತ್ರವನುಗಿದು ಗಾಂಡೀವದೊಳ್ ಪೂಡಿ ಪಾರ್ಥನೆಸಲು/
ಮಂದಸ್ಮಿತದೊಳದಂ ಕಡಿದು ಬಿಲ್ದಿರುವನೆ
ಚ್ಚಿಂದುಮುಖಿ ಶಕ್ರ ಸುತನಂ ನೋಯಿಸಲ್ಕೆ”
ರಾಮಾಯಣದಲ್ಲಿ ಲಕ್ಷ್ಮಣ ಶೂರ್ಪನಖಿಗೆ ಮೂಗು ಕುಯ್ದು ಅವಮಾನ ಮಾಡಿ ಕಳಿಸಿದಂತೆ ಪ್ರಮೀಳೆಯನ್ನೂ ಭಂಗಿಸುವೆನೆಂದು ಹೊರಟ ಅರ್ಜುನನಿಗೇ ತನ್ನ ಬಾಣ ಪ್ರಯೋಗದಿಂದ ಘಾತಿಸುತ್ತಾಳೆ. ಮುಂದೇನಾಗುತ್ತದೆ ಎಂಬುದು ಈ ಲೇಖನದ ವಿಷಯಕ್ಕೆ ಅಪ್ರಸ್ತುತ.

ಇದು ಪುರಾಣಗಳ ಕಾಲದಲ್ಲಿ ಇಂತಹುದೊಂದು ಸ್ತ್ರೀ ರಾಜ್ಯವನ್ನು ಕಲ್ಪಿಸಿಕೊಳ್ಳಲಾಗಿತ್ತು. ಇದೇ ರೀತಿಯ ಸ್ತ್ರೀ ರಾಜ್ಯವನ್ನು ನಾಥ ಮತ್ತು ತಾಂತ್ರಿಕ ಪಂಥಗಳ ಮಚ್ಛೇಂದ್ರನಾಥ ಮತ್ತು ಗೋರಕ್ಷನಾಥ ಜೀವನ ಚಿತ್ರಣದಲ್ಲಿಯೂ ಬರುತ್ತದೆ. ಪ್ರಮೀಳಾ ರಾಜ್ಯ ಎಂಬ ಹೆಸರೇ ಸ್ತ್ರೀ ರಾಜ್ಯ ಎಂಬ ಪದ ಗುಚ್ಛಕ್ಕೆ ಪರ್ಯಾಯವಾಗಿ ಬಳಸಲಾಗುತ್ತದೆ. ಸ್ತ್ರೀ ಮಲಯಾಳ ಎಂಬ ಪದ ಪ್ರಯೋಗ ಅನೇಕ ಮಹಾ ಪುರುಷರ ಪವಾಡ ಕತೆಗಳಲ್ಲಿ ಹಾಗೂ ಕೆಲ ಜಾನಪದ ಕತೆಗಳಲ್ಲೂ ಸುಳಿಯುತ್ತದೆ.

ಕೇವಲ ಸ್ತ್ರೀಯರೇ ಇರುವ ಸ್ತ್ರೀ ರಾಜ್ಯ ಕಲ್ಪನೆ ಭಾರತಕ್ಕೆ ಮಾತ್ರ ಸೀಮಿತವಲ್ಲ. ಜಗತ್ತಿನ ಪ್ರಾಚೀನ ನಾಗರೀಕತೆಗಳಲ್ಲೆಲ್ಲ ಇಂತಹ ಕಲ್ಪನೆಗಳಿವೆ. ಗ್ರೀಕ್ ಪುರಾಣಗಳಲ್ಲಿ ಮತ್ತು ಅದರ ಪ್ರಸಾರವಾಗಿ ರೋಮ್, ಈಜಿಪ್ಟ್‌, ಮೆಸಪೋಟೋಮಿಯಾ ಪ್ರದೇಶಗಳಲ್ಲಿಯೂ ಅಮೆಜಾನ್ ಎಂಬ ಸ್ತ್ರೀ ಯುದ್ಧ ವೀರರ ನಾಡಿನ ಕಲ್ಪನೆಯಿದೆ. ಇವರನ್ನು ಎದುರಿಸಲು ಮಹಾವೀರ ಪುರುಷರ ಸೈನ್ಯಕ್ಕೂ ಕಷ್ಟವಾಗುತ್ತಿತ್ತು. ಇವರ ರಾಜ್ಯ ಬಹಳ ವಿಸ್ತಾರವಾಗಿತ್ತು. ಕಪ್ಪು ಸಮುದ್ರದಿಂದ ಆರಂಭವಾಗಿ ಮೆಸೆಪೋಟಿಮಿಯಾದ ಗಡಿಯವರೆಗೂ ಹಬ್ಬಿತ್ತು ಎಂಬೆಲ್ಲ ವರ್ಣನೆಗಳಿವೆ. ಅಮೆಜಾನ್ ವೀರರು ತಮ್ಮ ಬಿಲ್ಲು ಬಾಣ ಪ್ರಯೋಗಕ್ಕೆ, ಕತ್ತಿ ಯುದ್ಧಕ್ಕೆ ಅಡ್ಡಿಯಾಗುತ್ತದೆಂದು ಅವರ ಬಲ ಮೊಲೆಯನ್ನೇ ಕತ್ತರಿಸಿಕೊಳ್ಳುತ್ತಿದ್ದರೆಂಬ ವಿವರಣೆಗಳಿವೆ. ಅಮೆಜಾನ್ ಎಂಬ ಹೆಸರೇ ಒಂಟಿ ಮೊಲೆಯವರು ಎಂದು ಅರ್ಥ ನೀಡುತ್ತದಂತೆ.

ಚೀನಾದಲ್ಲಿ ನುಜಿಗುವು ( ಸ್ತ್ರೀ ರಾಜ್ಯ )ನುಜಿಂಗುವು ( ಸ್ತ್ರೀ ಆಳ್ವಿಕೆಯ ರಾಜ್ಯ ಎಂಬ ಕಲ್ಪನೆಗಳಿವೆ ಈ ಕಲ್ಪನೆ ಕೊರಿಯಾ, ಜಪಾನುಗಳಿಗೂ ವ್ಯಾಪಿಸಿತ್ತು.

ಈ ಸ್ತ್ರೀ ರಾಜ್ಯಗಳು ನಿಜವಾಗಿಯೂ ಇದ್ದುವೆ ಅಥವಾ ಕೇವಲ ಪೌರಾಣಿಕ ಕಲ್ಪನೆಯೇ ? ಇದು ಒಂದು ಬಹು ಚರ್ಚಿತ ವಿಷಯ.

ಸ್ತ್ರೀ ರಾಜ್ಯದ ಕಲ್ಪನೆಯಂತೆ ಕೇವಲ ಮಹಿಳೆಯರೇ ಒಂದು ಪ್ರದೇಶದಲ್ಲಿ ಪೂರ್ತಿಯಾಗಿ ಇರಲು ಸಾಧ್ಯವೇ ? ಅವರಿಗೆ ಮಕ್ಕಳು ಹೇಗೆ ಹುಟ್ಟುತ್ತಿದ್ದರು ? ಹುಟ್ಟುವ ಮಕ್ಕಳೆಲ್ಲಾ ಹುಡುಗಿಯರೇ ಆಗಿರುತ್ತದ್ದರೇ ? ಹುಡುಗರೂ ಹುಟ್ಟುತ್ತಿದ್ದರಾದರೆ ಅವರುನ್ನು ಸ್ತ್ರೀ ರಾಜ್ಯದಿಂದ ಹೊರಗೆ ಹಾಕಲಾಗುತ್ತಿತ್ತೇ ? ಹೀಗೆ ಹಲ ಹಲವು ಪ್ರಶ್ನೆಗಳು ಕೇಳಲ್ಪಟ್ಟಿವೆ.

ಅಮೆಜಾನ್‌ಗಳ ವಿಷಯದಲ್ಲಿ ಅವರು ಪಕ್ಕದ ಒಂದು ಪ್ರದೇಶದ ಗಂಡುಗಳೊಡನೆ ಬೆರೆತು ಮಕ್ಕಳನ್ನು ಹಡೆಯುತ್ತಿದ್ದರು. ಹೆಣ್ಣು ಮಕ್ಕಳನ್ನು ಮಾತ್ರ ಉಳಿಸಿಕೊಂಡು ಗಂಡು ಮಕ್ಕಳನ್ನು ತಂದೆಯರಿಗೇ ನೀಡುತ್ತಿದ್ದರು ಅಥವಾ ಕೊಂದು ಬಿಡುತ್ತಿದ್ದರು ಎಂಬ ವಿವರಣೆಗಳಿವೆ. ಚೀನಾದ ನುಜಿಗುವುಗಳ ಹೆಂಗಸರು ಒಂದು ವಿಶೇಷ ಕೊಳದಲ್ಲಿ ಸ್ನಾನ ಮಾಡಿದರೆ ಸಾಕು ಗರ್ಭಿಣಿಯರಾಗುತ್ತಿದ್ದರು. ಹೆಣ್ಣು ಮಕ್ಕಳನ್ನೇ ಹೆರುತ್ತಿದ್ದರು ಎಂಬ ಕಲ್ಪನೆಯಿದೆ. ಇಂತಹ ಕಲ್ಪನೆಗಳು ಭಾರತದಲ್ಲಂತೂ ಹೇರಳ. ಮಚ್ಛೇಂದ್ರನಾಥ, ಗೋರಕ್ಷನಾಥರ ಕತೆಯ ಸ್ತ್ರೀರಾಜ್ಯದಲ್ಲಿ ಅವರು ಹನುಮಂತನ ವಾದ್ಯ ಸಂಗೀತವನ್ನು ಸಾವಿರಾರು ಮೈಲಿ ದೂರದಿಂದಲೇ ಕೇಳಿ ಗರ್ಭಿಣಿಯಾರದರು ಎಂಬ ಒಂದು ವಿವರಣೆ ಇದ್ದರೆ ಅರ್ಜುನ ಹೊಕ್ಕ ಪ್ರಮೀಳಾ ರಾಜ್ಯದ ಹೆಂಗಳೆಯರು ಪುರುಷರು ವಾಸಿಸುತ್ತಿದ್ದ ಕಡೆ ಸುಳಿದು ತಮ್ಮ ರೂಪ ಲಾವಣ್ಯಗಳಿಂದ ಅವರನ್ನು ಆಕರ್ಷಿಸುತ್ತಿದ್ದರೆಂದೂ ನಂತರ ತಮ್ಮ ರಾಜ್ಯಕ್ಕೆ ಕರೆದುಕೊಂಡು ಹೋಗಿ ಒಂದು ತಿಂಗಳ ಕಾಲ ಅವರೊಂದಿಗೆ ಕೂಡುತ್ತಿದ್ದರು. ಅವರು ಗರ್ಭಿಣಿಯರಾದ ಕೂಡಲೆ ಈ ಪುರುಷರಿಗೆ ರುಚಿಯಾದ ವಿಷದ ಖಾದ್ಯಗಳನ್ನು ಉಣಬಡಿಸಿ ಕೊಲ್ಲುತ್ತಿದ್ದರು. ತಮ್ಮ ದೇಹದಿಂದಲೇ ವಿಷ ಸ್ರವಿಸಿ ಕೊಲ್ಲುವ ವಿಷಕನ್ಯೆಯರೂ ಆಗಿದ್ದರು ಎಂಬೆಲ್ಲಾ ಕಲ್ಪನೆಗಳಿವೆ.

ಇಂತಹ ಸ್ತ್ರೀ ರಾಜ್ಯದ ಕಲ್ಪನೆಗಳೆಲ್ಲ ಮೂಡಿದ್ದು ಪುರುಷಾಳ್ವಿಕೆಯ ದೇಶಗಳಲ್ಲಿ. ಪುರುಷ ಪುರಾಣ ಕತೃಗಳಿಂದ ಎಂಬುದು ವಿಶೇಷವಾಗಿ ಗಮನಿಸಬೇಕಾದ ವಿಷಯ. ಈ ಪುರಾಣ ಕತೃಗಳು ಪುರುಷಾಳ್ವಿಕೆ ಸ್ಥಾಪನೆಯಾದ ಮೇಲೂ ಅಲ್ಲಲ್ಲಿ ಉಳಿದಿದ್ದ ಅಮ್ಮ ಕೇಂದ್ರಿತ ಸಮಾಜ ಪದ್ಧತಿಯನ್ನು ನೋಡಿ ವಿಚಿತ್ರವೆನಿಸಿ ಮಾಡಿಕೊಂಡ ಕಲ್ಪನೆ. ತಮ್ಮ ಪುರುಷಾಳ್ವಿಕೆಗೆ ಎಲ್ಲಿ ಕುತ್ತು ಬರುತ್ತದೋ ಎಂಬ ಭಯದಿಂದ ಅಥವಾ ಸ್ತ್ರೀ ಮೂಲದಿಂದ ವಂಶಗಳ ಗಣನೆ ಮತ್ತು ಅವರ ಮುಖ್ಯ ಪಾತ್ರವನ್ನೇ ಸರಿಯಾಗಿ ಅರ್ಥ ಮಾಡಿಕೊಳ್ಳಲಾರದೆ ಸ್ತ್ರೀಯರೇ ಇರುವ ರಾಜ್ಯ ಎಂದು ವಿರೂಪಗೊಳಿಸಿ, ಅಪಕಲ್ಪನೆಗಳನ್ನು ಹೇರಿದ ಪ್ರಸಂಗ ಎಂದೂ ಸಮಾಜ ಶಾಸ್ತ್ರಜ್ಞರು ವಿವರಿಸಿದ್ದಾರೆ. ಕೆಲವೊಮ್ಮೆ‌ರಾಜನ ನಿಧನದ ನಂತರ ರಾಣಿಯರು ಆಳುತ್ತಿರುವ ಪ್ರಸಂಗಗಳಲ್ಲಿ ಅವರ ಆಳ್ವಿಕೆಯ ಬಗ್ಗೆ ಅಪನಂಬಿಕೆ ಮೂಡಿಸಲು ಮತ್ತು ಅವರು ಸ್ವತಂತ್ರ ರಾಜ್ಞಿಯರಾಗಿ ಆಡಳಿತ ಮಾಡಲು ಅವಕಾಶವಾಗದಂತೆ ಬಾಲಕ ರಾಜಕುವರನನ್ನೇ ಸಿಂಹಾಸನದಲ್ಲಿ ಕುಳ್ಳಿರಿಸಿ ಅವನ ತಾಯಿ ಕೇವಲ ಅವನ ಪ್ರತಿನಿಧಿಯಾಗಿ ಮಾತ್ರ ಆಳಬೇಕೆಂಬ ಕಟ್ಟಲೆ ಹೇರಲು ಇಂತಹ ಕುತಂತ್ರಗಳನ್ನು ನಡೆಸಿದ್ದಾರೆಂದೂ ವಿವರಣೆಗಳಿವೆ.
ಸ್ತ್ರೀ ರಾಜ್ಯದ ಬಗೆಗಿನ ಈ ಕಲ್ಪನೆ, ಅಪಕಲ್ಪನೆಗಳಂತಿರಲಿ ಮಾತೃ ಪ್ರಧಾ‌ನ ಸಮಾಜದ ಸ್ವರೂಪವೇನು ? ಅದು ಪುರುಷಾಳ್ವಿಕೆಯ ವಿರುದ್ಧ ರೂಪಾದ ಮಹಿಳಾ ಆಳ್ವಿಕೆಯೇ ? ಮಹಿಳಾ ಆಳ್ವಿಕೆ ಎಂಬುದೊಂದಿತ್ತೇ ?
ಈ ಪ್ರಶ್ನೆಗಳು ನಮ್ಮ ಹಿಂದಿನ ಸಮಾಜವನ್ನು ಅರ್ಥೈಸಿಕೊಳ್ಳಲು ಮಾತ್ರವಲ್ಲ ಇಂದಿನ ಸಮಾಜವನ್ನು ವಿಶ್ಲೇಷಿಸಲು, ಮುಂದಿನ ಸಮಾಜದ ಸ್ವರೂಪವನ್ನು ವಿವರಿಸಿಕೊಳ್ಳಲು ಕೂಡಾ ಮುಖ್ಯ.

ಮಾತೃ ಪ್ರಧಾನ ಸಮಾಜ , ಗಂಡಾಳ್ವಿಕೆಗೆ ಬದಲಾಗಿ ಹೆಣ್ಣಾಳ್ವಿಕೆಯೇ ? :
ಸಮಾಜ ವಿಜ್ಞಾನಗಳ ಸಮಾಜ ಶಾಸ್ತ್ರ, ಮಾನವ ಶಾಸ್ತ್ರ, ಇತಿಹಾಸ, ಮನಶ್ಶಾಸ್ತ್ರ ಮೊದಲಾದ ವಿಭಾಗಗಳಲ್ಲಿ ಮಾತೃ ಪ್ರಧಾನ ಸಮಾಜ ,ಪಿತೃ ಪ್ರಧಾನ ಸಮಾಜ ಎಂಬ ಪರಿಕಲ್ಪನೆಗಳು ವ್ಯಾಪಕವಾಗಿ ಬಳಕೆಯಲ್ಲಿವೆ. ಈಗ ವಿಶ್ವಾದ್ಯಂತ ಪ್ರಧಾನ ಸಮಾಜದ ಸ್ವರೂಪವಾಗಿರುವ ಪಿತೃ ಪ್ರಧಾನ ಸಮಾಜ ಅಸ್ತಿತ್ವಕ್ಕೆ ಬರುವ ಮೊದಲು ಬಹುಕಾಲ ಮಾತೃ ಪ್ರಧಾನ ಸಮಾಜ ಅಸ್ತಿತ್ವದಲ್ಲಿತ್ತೆಂದು ಈಗ ಸರ್ವಸಮ್ಮತ ತತ್ವವಾಗಿದೆ.

ವರ್ತಮಾನ ಕಾಲದ ಪಿತೃ ಪ್ರಧಾನ ಸಮಾಜದ ವಿವಿಧ‌ ಆಯಾಮಗಳನ್ನು ಮತ್ತು ಅದರ ಪ್ರಕ್ರಿಯೆ ,ಪರಿಣಾಮಗಳನ್ನು ಕಣ್ಣಾರೆ ನೋಡುತ್ತಿರುವ, ಅನುಭವಿಸುತ್ತಿರುವ ಸಂದರ್ಭದಲ್ಲಿ ಮಾತೃ ಪ್ರಧಾನ ಸಮಾಜವೆಂದರೆ ಇಂತಹದೇ ಸಮಾಜದ ಮಾತೃ ರೂಪ ಎಂಬ ಕಲ್ಪನೆ ಮೂಡುವುದು ಸಹಜ. ಅಂತಹ ತಪ್ಪು ಕಲ್ಪನೆ ಬಹುಕಾಲ ಸಮಾಜ ವಿಜ್ಞಾನಿಗಳಲ್ಲಿಯೇ ವ್ಯಾಪಕವಾಗಿತ್ತು. ಈಗಲೂ ಸ್ವತಃ ಸಂಶೋಧನೆಯಲ್ಲಿ ನಿರಂತರವಾಗಿ ತೊಡಗದ ಶಾಲಾ ಕಾಲೇಜುಗಳ ಉಪನ್ಯಾಸಕರುಗಳಲ್ಲಿ, ವಿದ್ಯಾರ್ಥಿಗಳಿಗಾಗಿ ರೂಪುಗೊಂಡಿರುವ ಪಠ್ಯ ಕ್ರಮ ಮತ್ತು ಪುಸ್ತಕಗಳಲ್ಲಿ ಈ ಕಲ್ಪನೆ ಇನ್ನೂ ವ್ಯಾಪಕವಾಗಿಯೇ ಇದೆ. ಪಿತೃ ಪ್ರಧಾನ ಸಮಾಜದ ಮನೆಯ ಒಳಗಿನ ಮತ್ತು ಹೊರಗಿನ ವಿವಿಧ ರಂಗಗಳಲ್ಲಿ ಗಂಡಾಳ್ವಿಕೆ, ಪುರುಷಾಹಂಕಾರ, ಸ್ತ್ರೀಯರು ಬೌದ್ಧಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಕೀಳು ಪರುಷರು ಶ್ರೇಷ್ಟ,ಅವರು ಪುರುಷರಿಗೆ ಅಧೀನರಾಗಿಯೇ ಇರಬೇಕು ಎಂಬ ನಂಬಿಕೆ, ಮೌಲ್ಯಗಳು ಮತ್ತು ಸಾಮಾಜಿಕ ಕಟ್ಟಲೆಗಳಿವೆ. ಅವು ಮೀರಲಾಗದ ಧಾರ್ಮಿಕ ನಿಯಮಗಳಾಗಿ, ದೈವ ನಿಯಾಮಕವೆಂದೂ ಘೋಷಿಸಲ್ಪಟ್ಟಿವೆ. ಮಾತೃ ಪ್ರಧಾನ ಸಮಾಜದಲ್ಲಿಯೂ ಅದೇ ರೀತಿ ಸ್ತ್ರೀಯರ ಅಧಿಪತ್ಯ, ಮಹಿಳೆಯರೇ ಶ್ರೇಷ್ಠ, ಪುರುಷರು ಕೀಳು, ಪುರುಷರು ಮಹಿಳೆಯರಿಗೆ ಅಧೀನರಾಗಿಯೇ ಇರಬೇಕು ಎಂಬ ನಂಬಿಕೆ,ಮೌಲ್ಯ ಹಾಗೂ ಕಟ್ಟಲೆಗಳಿದ್ದವು ಎಂದು ಯಾಂತ್ರಿಕವಾಗಿ ಭಾವಿಸಲಾಗಿದೆ ಮತ್ತು ಅರ್ಥೈಸಿಕೊಳ್ಳಲಾಗಿದೆ.

ಇವು ಸಂಪೂರ್ಣ ತಪ್ಪು ಕಲ್ಪನೆಗಳು ಎಂಬುದನ್ನು ವಿವಿಧ ಸಾಮಾಜಿಕ ವಿಜ್ಞಾನಗಳು ಸಂಶೋಧನೆಯ ಬೆಳವಣಿಗೆಗಳ ಜೊತೆ ಜೊತೆಗೇ ನಿರೂಪಿಸುತ್ತಾ ವಿವರಿಸುತ್ತಾ ಬಂದಿವೆ. ನಾನು ಮಾತೃ ಎಂಬ ಪದವನ್ನೂ, ಮಾತೃ ಪ್ರಧಾನ ಎಂಬ ಪದಗಳನ್ನೂ ಬಹಳ ಅಪರೂಪವಾಗಿ ಬಳಸಿದ್ದೇನೆಂಬುದು ಈ ಲೇಖನ ಮಾಲೆಯ ಓದುಗರಿಗೆ ಪರಿಚಿತವಾಗಿದೆ ಎಂದು ಭಾವಿಸುತ್ತೇನೆ. ಕೆಲವರು ಮಾತೃ ಪ್ರಧಾನ ಸಮಾಜ ಎಂಬುದು ಬಹಳ ಬಳಕೆಯಲ್ಲಿರುವಾಗ ಅದನ್ನೇಕೆ ನೀವು ಬಳಸುವುದಿಲ್ಲ ? ಅಮ್ಮ ಕೇಂದ್ರಿತ ಎಂದೇ ಬಹಳ ಬಾರಿ ಬಳಸುತ್ತಿದ್ದೀರಿ ಎಂದು ಖುದ್ದಾಗಿ ಕೇಳಿದ್ದಾರೆ. ಈಗ ಸಮಾಜ ವಿಜ್ಞಾನಿಗಳು ಪುರುಷಾಳ್ವಿಕೆಯ ಸಮಾಜ ಅಸ್ತಿತ್ವಕ್ಕೆ ಬರುವ ಮೊದಲಿನ ಸಮಾಜಗಳನ್ನು ವಿವರಿಸಲು matrifocal- ಅಮ್ಮ ಕೇಂದ್ರಿತ matrilineal- ಅಮ್ಮ ಮೂಲದ, matrilocal -ಅಮ್ಮನ ಜೊತೆ ವಾಸದ ಎಂಬ ಪದ ಗುಚ್ಛಗಳನ್ನು ಬಳಸುತ್ತಿದ್ದಾರೆ. ಅಮ್ಮ ಮೂಲದ ಎಂದರೆ ವಂಶಾವಳಿಯನ್ನು ಅಮ್ಮನ ಮೂಲದಿಂದ ಗುರುತಿಸುವುದು, ಅಮ್ಮನ ಜೊತೆ ವಾಸದ ಎಂದರೆ ಹೆಣ್ಣು ಗಂಡು ಎಲ್ಲ ಮಕ್ಕಳೂ ತಮ್ಮ ತಾಯಂದಿರ ಜೊತೆಗೇ ವಾಸ. ಅಲ್ಲಿಯೇ ಅವರ ಊಟ, ಕೆಲಸ, ಬದುಕು, ಅಮ್ಮ ಕೇಂದ್ರಿತ ಎಂದರೆ ಅಮ್ಮನ ಮಕ್ಕಳಾಗಿ ಬದುಕುತ್ತಿರುವ ಮನೆಯಲ್ಲಿ ಅಮ್ಮನೇ ಹಿರಿಯಳಾಗಿ, ಬದುಕಿನ ಕೇಂದ್ರವಾಗಿ ,ಎಲ್ಲರ ಮಾರ್ಗ ದರ್ಶಕಳಾಗಿ ಇರುತ್ತಾಳೆ, ಕೆಲಸದ ವಿಭಜನೆ ಮೊದಲಾದ ನಿತ್ಯ ಬದುಕಿನ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳುವುದರಲ್ಲಿ ಮುಂದಾಳಾಗಿರುತ್ತಾಳೆ ಎಂದು ಅರ್ಥ.

ಅಮ್ಮ ಎಂದಾಗ ಅದು ಒಬ್ಬರ ತಾಯಿ ಎಂಬ ಅರ್ಥಕ್ಕೆ ಸೀಮಿತವಾಗದೆ ಅಮ್ಮನ ಅಮ್ಮ, ಅಮ್ಮನ ಅಜ್ಜಿ ಅಥವಾ ದೊಡ್ಡಮ್ಮ, ಚಿಕ್ಕಮ್ಮ ದೊಡ್ಡಜ್ಜಿ, ಚಿಕ್ಕಜ್ಜಿಯರೂ ಆಗಬಹುದು. ಒಟ್ಟಿನಲ್ಲಿ ಒಬ್ಬಳೇ ಅಮ್ಮನಿಂದ ಗುಂಪಿನಲ್ಲಿ ಅತ್ಯಂತ ಹಿರಿಯಳು ಎಂಬ ವಿಶಾಲಾರ್ಥ ಪಡೆದುಕೊಳ್ಳುತ್ತದೆ.

ಹಿಂದಿನ ಹಲವು ಲೇಖನಗಳಲ್ಲಿ ವಿವರಿಸಿರುವಂತೆ ಮಕ್ಕಳ ಜನನಕ್ಕೆ ಗಂಡೂ ಬೇಕು ಎಂಬುದೇ ಗೊತ್ತಿಲ್ಲದಿರುವಾಗ , ಅಮ್ಮ ಮತ್ತು ಅವಳ ಮಕ್ಕಳು, ಮೊಮ್ಮಕ್ಕಳು ಎಂಬ ಸಹಜ ಮತ್ತು ಖಚಿತ ಸಂಬಂಧದ ಆಧಾರದಲ್ಲಿ ರೂಪುಗೊಂಡ ಗುಂಪು ಎಂಬುದೇ ಅಮ್ಮ ಕೇಂದ್ರಿತ ಸಮಾಜ. ಮಕ್ಕಳ ಜನನಕ್ಕೆ ಅಪ್ಪನೂ ಕಾರಣ ಎಂಬುದು, ಇಂತಹವರು ನನ್ನ ಮಕ್ಕಳು ಎಂಬುದು ಅಪ್ಪನಿಗೂ, ಇವರು ನನ್ನ ಅಪ್ಪ ಎಂಬುದು ಮಕ್ಕಳಿಗೂ ಅರಿವೇ ಇಲ್ಲದ ಪರಿಸ್ಥಿತಿಯಲ್ಲಿನ ಸಹಜ ಸಂಬಂಧಗಳ ಕೂಸು ಈ ಸಮಾಜ ಪದ್ಧತಿ. ಇದು ಅಮ್ಮ, ಅಜ್ಜಿಯರಿಂದಾಗಲೀ, ಮತ್ಯಾವ ಸ್ತ್ರೀಯರ ಚಿಂತನೆ, ಯೋಜನೆಯ ಫಲವಾಗಿ ಉಗಮವಾದ ಸ್ಥಾಪಿತವಾದ ಸಮಾಜವಲ್ಲ.

ಮಕ್ಕಳ ಬೆಳವಣಿಗೆಯಲ್ಲಿ ಅತಿ ಹೆಚ್ಚಿನ ಪಾತ್ರ ತಾಯಿಯದೇ ಆಗಿತ್ತು. ಜೊತೆಗೆ ದೊಡ್ಡಮ್ಮ,ಚಿಕ್ಕಮ್ಮಂದಿರು,ಅಜ್ಜಿ ಮುತ್ತಜ್ಜಿಯರು ಸಹ ಪೋಷಕರಾಗಿ (allo-parenting ) ಭಾಗವಹಿಸುತ್ತಿದ್ದರು. ಹಲವೊಮ್ಮೆ ತಾಯಿಯ ಜೊತೆಯಲ್ಲಿಯೇ ವಾಸಿಸುತ್ತಿದ್ದ ಅವಳ , ಅವಳ ತಾಯಿಯ ಸೋದರರು ಕೂಡಾ alloparents ಆಗಿ ಪಾತ್ರ ವಹಿಸುತ್ತಿದ್ದರು. ಇಡೀ ಗುಂಪಿನ ರಕ್ಷಣೆ, ಆಹಾರ,ವಾಸಗಳ ಹೊಣೆಯನ್ನು ಎಲ್ಲರೂ ಸೇರಿ ನಿರ್ವಹಿಸುತ್ತಿದ್ದರು. ನಾವೆಲ್ಲ ಒಬ್ಬ ತಾಯಿ,ಅಜ್ಜಿಯ ಮೂಲದವರು ಎಂಬ ಪ್ರೀತಿ,ಕಾಳಜಿ ಈ ಗುಂಪಿನ ಆಧಾರ ತಂತುವಾಗಿತ್ತು.
ಬದುಕಿನ ಈ ಸಹಜ ಮತ್ತು ಅನಿವಾರ್ಯ ರೀತಿ ನೀತಿಗಳು ಗುಂಪಿನ ಎಲ್ಲ ಮಕ್ಕಳಿಗೆ ತಮ್ಮ ತಾಯಿ,ಸೋದರ ಮಾವಂದಿರ ಬಗ್ಗೆ ಗೌರವ ಮೂಡಲು, ಅಜ್ಜಿಯೊಬ್ಬಳ ಹಿರಿತನದಲ್ಲಿ ಒಂದು ಗುಂಪಾಗಿ ಜೀವಿಸಲು ಕಾರಣವಾಗಿದ್ದವು. ಇದರಲ್ಲಿ ಯಾರು ಮೇಲು,ಯಾರು ಕೀಳು ಎಂಬ ಬೇಧ ಭಾವಕ್ಕೆ ಅವಕಾಶವಿರಲಿಲ್ಲ. ಹೇರಿಕೆಯ ಅಗತ್ಯವೂ ಇರಲಿಲ್ಲ.

ಅಮ್ಮನಿಂದ ಹುಟ್ಟು, ಅಮ್ಮನ ಹಿರಿತನ ಮಾರ್ಗದರ್ಶನ ಎಂಬ ಗೌರವದ ಸೂಚನೆಯಾಗಿ , ಈಗಾಗಲೇ ಹಲವು ಬಾರಿ ವಿವರಿಸಿದಂತೆ ಅಮ್ಮಗಳಿಂದ ಕಂಡುಕೊಂಡ ಆಹಾರ ಪಡೆಯುವ, ರೋಗ ನಿವಾರಣೆಯಾಗುವ ಮಾರ್ಗಗಳಿಂದ ಅಮ್ಮಗಳು ತನ್ನಿಂದ ತಾನೇ ಅಮ್ಮ ದೇವತೆ ಎಂಬ ಹೊಸ ಗೌರವಕ್ಕೆ ಪಾತ್ರರಾದರು. ಈ ದೈವ ಪಟ್ಟವನ್ನು ಯಾವ ಅಮ್ಮ,ಅಜ್ಜಿಯೂ ಹೇರಲಿಲ್ಲ. ಅದು ದೈವ ಪಟ್ಟವೆಂಬ ಭಾವನೆಯೂ ಇರಲಿಲ್ಲ. ಇದು ಹೆಣ್ಣಿನ ಮೇಲು‌ಸ್ಥಾನ,ಗಂಡಿನ ಕೀಳು ಸ್ಥಾನದ ಸೂಚಕವೂ ಆಗಿರಲಿಲ್ಲ. ಎಲ್ಲ ಗಂಡು ಮಕ್ಕಳು,ಹೆಣ್ಣು ಮಕ್ಕಳೂ ತಮ್ಮ ತಾಯನ್ನು ಗೌರವಿಸುವಂತಹ ಸಹಜ ಕ್ರಿಯೆ.

ಈ ಸಮಾಜದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಗುಂಪಿನ ಎಲ್ಲರ ಆಹಾರ ಸಂಪಾದನೆಗಾಗಿ, ಅವಶ್ಯ ಬಿದ್ದಾಗ ರಕ್ಷಣೆಗಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆಯಲ್ಲಿ ಎಲ್ಲರೂ ಎಲ್ಲ ಕೆಲಸವನ್ನೂ ಮಾಡುವುದು ಅನುವಾರ್ಯವಾಗಿದ್ದ ಕಾಲ ಕೂಡಾ. ಶಿಲಾಯುಧಗಳ ತಯಾರಿಕೆ, ಬೇಟೆಯಲ್ಲಿ ಬಳಕೆಯಲ್ಲಿ ಗಂಡಸಿನ ಪಾತ್ರದಂತೆಯೇ ಹೆಂಗಸರೂ ಪಾತ್ರ ವಹಿಸುತ್ತಿದ್ದ ಕಾಲ. ಶತ್ರುಗಳೊಂದಿಗೆ ಕಾಳಗದಲ್ಲಿಯೂ ಭಾಗವಹಿಸುತ್ತಿದ್ದ ಕಾಲ. ಅದನ್ನೇ ಪ್ರಮೀಳಾ ರಾಜ್ಯ, ಪೆಣ್ ಪಡೆ, ಅಮೆಜಾನ್ ಎಂದು ಬಿಂಬಿಸಿರುವ ಸಾಧ್ಯತೆಗಳಿವೆ.

ಆದ್ದರಿಂದ ಪಿತೃ ಪ್ರಧಾನ ಸಮಾಜ ಕೇವಲ ಅಪ್ಪನ ಮೂಲದಿಂದ ವಂಶಾವಳಿಯನ್ನು,ಗುಂಪಿನ ಗುರುತನ್ನು ಪಡೆಯುವುದಕ್ಕೆ ಮಾತ್ರ ಸೀಮಿತವಾಗದೆ, ಅಪ್ಪ ಕೇಂದ್ರಿತ, ಅಪ್ಪ ಮೂಲದ,ಅಪ್ಪನ ಜೊತೆ ವಾಸದ ಸಂಬಂಧ ಮಾತ್ರವಾಗದೆ ಗಂಡಾಳ್ವಿಕೆಯಾಗಿ , ಮಹಿಳೆಯರು ಅಡಿಯಾಳಾಗಿ ಬದುಕಬೇಕಾದ ರಾಜಪ್ರಭುತ್ವದ ರಾಜಕೀಯ ಪದ್ಧತಿಯಾಗಿ ರೂಪುಗೊಂಡ ವಿಧಾನಕ್ಕೂ, ಧಾರ್ಮಿಕ ನಿಯಮಗಳಾಗಿ, ದೈವ ಸೃಷ್ಟಿಯಾಗಿ ಹೇರಲ್ಪಟ್ಟದ್ದಕ್ಕೂ ಬಹಳ ಬಹಳ ವ್ಯತ್ಯಾಸವಿದೆ. ಒಂದು ಅಗಾಧ ಕಂದರವೇ ಇದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: