ಜಿತೇಂದ್ರ ಬೇದೂರು
ಎಷ್ಟೋಂದು ಬಣ್ಣಗಳ ಹೊತ್ತು ತಂದಿದ್ದೆ ನೀನು!
ಇರಿಸಿದ್ದೆ, ಬಗೆಬಗೆಯ ಬಣ್ಣಗಳ ನನ್ನೆದುರು ಹರಡಿ
ಕಂಡಷ್ಟೂ ಹರವು, ಬಗೆದಷ್ಟೂ ಬೆರಗು!
ಕಲೆ ಅರಳಿಸಿದ್ದೆ, ಭಾವಗಳ ಬಣ್ಣವನು ಹದವಾಗಿ ಕರಡಿ.
ನೀನು ಸೆಳೆವ ಕಾಮನಬಿಲ್ಲು,
ನಾನು ಗರಿಗೆದರಿದ ನವಿಲು.
ಮನಸು ಪಾತರಗಿತ್ತಿ,
ರಂಗು ರಂಗಿನ ಭಿತ್ತಿ.
ನೀ ಹಸಿರ ಬಳಿದೆ, ನಾ ಭೂಮಿಯಾದೆ,
ಕಣ್ಣ ತುಂಬಾ ನೀ ನೀಲಿ ಕನಸ ಸುರಿದೆ.
ಹಳದಿ ರೆಕ್ಕೆಯ ಕೊಟ್ಟೆ, ನಾನಾದೆ ಚಿಟ್ಟೆ.
ಕಣ್ಣ ಕುಂಚದಿ,ತಿದ್ದಿ ನನ್ನ ರಂಗೇರಿಸಿದ್ದೆ,
ಮೈ ಮನಕೆ ನಾಚಿಕೆಯ ತಿಳಿ ಕೆಂಪು ಬಳಿದೆ.

ಇದ್ದಕ್ಕಿದ್ದಂತೆ ಏಕೆ ನೀ ಎದ್ದು ಹೋದೆ?
ಮಳೆಬಿಲ್ಲು ತಂದು ಮುಡಿಗೇರಿಸುವೆ ಎಂದಿದ್ದೆ
ಕನಸುಗಳಿಗೇಕೆ ಕಡುಕಪ್ಪು ಬಳಿದೆ?
ಮನದಾಳದಲಿ ನೀ ಎಳೆದ ರೇಖೆಗಳ
ಕಾಪಿಟ್ಟು ಕಾದಿರುವೆ ಗೆಳೆಯಾ,
ಎದೆಯಂಗಳದಲಿ, ದಿಕ್ಕೆಟ್ಟ ಚುಕ್ಕಿಗಳ
ಸೇರಿಸಿ,ಚಿತ್ತಾರ ಮೂಡಿಸು ಬಾ.
ಬೆಳ್ಳಿಗೆರೆಯೊಂದನ್ನು, ಎಳೆದುಬಿಡು ಈಗಲೇ,
ಕೊನೆಯಿರದ ಕಾರಿರುಳಲಿ ಹೊಳೆವ ತಾರೆಯ ಹಾಗೆ
ನನ್ನ ತಲ್ಲಣಗಳನೆಲ್ಲ ಕಟ್ಟಿಡುವೆ ಅದರಲ್ಲಿ!.
ನಿನ್ನೆದೆಯಲ್ಲೂ ನನ್ನ ಚಿತ್ರವ ಬಿಡಿಸು
ಬಣ್ಣ ಮಾಸದ ಹಾಗೆ,
ಬಣ್ಣಗಳ ನೀಡೆನ್ನ ಬದುಕಿನ ಮಗ್ಗುಲುಗಳಿಗೆ.






0 Comments