ರವಿಕುಮಾರ್ ಟೆಲೆಕ್ಸ್
ಹೈಸ್ಕೂಲ್ ಓದುತ್ತಿದ್ದ ಸಮಯ:
ಅವ್ವ : ಊಟಕ್ಕೆ ಬಾರೋ.
ನಾನು: ನಂದಾಗ್ಲೇ ಊಟ ಆಯ್ತು
ಅವ್ವ; ಅದೆಲ್ಲಿ ತಿಂದು ಬಂದೆ?
ನಾನು: ಫ್ರೆಂಡ್ ‘…..’ಮನೆಯಲ್ಲಿ
ಅವ್ವ: ಅಯ್ಯೊ ಅವ್ರ ಮನೆಯಲ್ಲಿ ಒಂದು ಲೋಟ ನೀರೂ ಕುಡಿಬಾರ್ದೋ…..!?
ನನ್ನವ್ವನ ಮಾತು ಕೇಳಿ ಕ್ಷಣ ಕಾಲ ಬೆಚ್ಚಿಬಿದ್ದೆ. ಅದುವರೆಗೂ ನಾವೆ ಕಟ್ಟಕಡೆಯ ಜಾತಿ ಎಂದುಕೊಂಡಿದ್ದ ನನಗೆ ನಮಗಿಂತಲೂ ಕಟ್ಟಕಡೆಯ ಜಾತಿಯೊಂದು ಇದೆ ಎಂಬ ನನ್ನವ್ವನ ಮಾತು ಹೊಸ ಸಂಶೋಧನೆಯಂತೆ ಸ್ಫೋಟಗೊಂಡಿತು. ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಓದು. ಬರಹ ಗೊತ್ತಿಲ್ಲದ ನನ್ನವ್ವನಿಗೆ ಜಾತಿವ್ಯವಸ್ಥೆಯಲ್ಲಿ ನಾವೇ ಕಟ್ಟಕಡೆಯ ಜಾತಿ ಕಣವ್ವ ಎಂದು ಸಮಜಾಯಿಷಿದಾಗ ಆಕೆ ಜ್ಞಾನೋದಯವಾದಂತೆ ತಲೆದೂಗಿದಳು.
ನನ್ನ ಮನೆಗೆ ಅನೇಕ ಮೇಲ್ವರ್ಗದ ಗೆಳೆಯರು ಬಂದು ನೀರು ಕುಡಿವಾಗ. ಮುರುಕಲು ಜೋಪಡಿಯಲ್ಲೂ ಜೊತೆ ಕುಳಿತು ಉಣ್ಣುವಾಗ ನನ್ನವ್ವ ಅವರ ಜಾತಿಗಳನ್ನು ತಿಳಿದುಕೊಂಡು ಉತ್ತುಮ್ರೆಲ್ಲಾ (ಉತ್ತಮರು) ನಮ್ ಮನೆಯಾಗೆ ಬರೋದು ಹೆಮ್ಮೆ ಎಂದು ಬೀಗುತ್ತಿದ್ದಳು. ನನಗೆ ದಿಗಿಲಾಗಿದ್ದು ಏನೆಂದರೆ, ಜಾತಿವ್ಯವಸ್ಥೆಯಲ್ಲಿ ಕಟ್ಟಕಡೆಯ ಜಾತಿಯ ಮುಗ್ದ, ಅನಕ್ಷರಸ್ಥೆಯ ನನ್ನವ್ವನ ತಲೆಯೊಳಗೂ ಮೇಲು- ಕೀಳಿನ ‘ಬ್ರಾಹ್ಮಣ್ಯ’ ಹೊಕ್ಕಿದ್ದಾದರೂ ಹೇಗೆ? ಈ ಜಾತಿಯ ರಣಸೋಂಕು ಕೊರೋನಾದಂತೆ ಎಷ್ಟೊಂದು ಪ್ರಭಾವಶಾಲಿಯಾಗಿ ಎಂತವರನ್ನು ಆವರಿಸಿಕೊಂಡು ಬಿಡುತ್ತಲ್ಲ?
‘ಬ್ರಾಹ್ಮಣ್ಯ’ ಎಂದರೆ ಯಥಾಸ್ಥಿತಿವಾದ,ಮೌಢ್ಯ, ಶೋಷಣೆ, ವಿಭಜನೆ, ತರತಮ, ಶ್ರೇಷ್ಠ- ಕನಿಷ್ಠ, ಒಳಗು – ಹೊರಗು. ಸಂಪ್ರದಾಯ, ಪರಂಪರೆಗಳ ಹೆಸರಲ್ಲಿ ಮನುಷ್ಯರನ್ನು ಸಮೂಹದಿಂದ ಹೊರಗಿಡುವ, ಕೊಲ್ಲುವ ಹಿಂಸಾಗುಣ… ಹೀಗೆ ವ್ಯಾಖ್ಯಾನಿಸಬಹುದು.
ಈ ಬ್ರಾಹ್ಮಣ್ಯದ ಮೂಲ ಉತ್ಪತ್ತಿ ಬ್ರಾಹ್ಮಣರೆ ಆಗಿದ್ದರೂ ಕಾಲ ಬದಲಾದಂತೆ ಬ್ರಾಹ್ಮಣ್ಯದಿಂದ ವಿಮುಖರಾದ ಬ್ರಾಹ್ಮಣರು ನಮ್ಮ ನಡುವೆ ಸಾಕಷ್ಟು ಜನರಿದ್ದಾರೆ. ನನ್ನ ಆಪ್ತ ಸ್ನೇಹಿತರಾಗಿಯೂ, ಹಿತೈಷಿಗಳಾಗಿಯೂ ಇದ್ದಾರೆ. ಅಷ್ಟೆ ಅಲ್ಲ ಸಮ ಸಮಾಜದ ನಿರ್ಮಾಣಕ್ಕಾಗಿ, ಸಂವಿಧಾನದ ಆಶಯಗಳ ಅನುಷ್ಠಾನಕ್ಕಾಗಿ ಮುಂಚೂಣಿಯಲ್ಲಿ ನಿಂತು ಹೋರಾಡಿದ ಅನೇಕರನ್ನು ನಾವು ಇತಿಹಾಸದಲ್ಲೂ – ವರ್ತಮಾನದಲ್ಲೂ ಕಾಣುತ್ತಿದ್ದೇವೆ.
ಆದರೆ ಈ ‘ಬ್ರಾಹ್ಮಣ್ಯ’ ನಾಶವಾಗುವ ಬದಲಿಗೆ ಶೂದ್ರರೂ. ದಲಿತರನ್ನೂ ಆವರಿಸಿಕೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಇಂದು ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಲ್ಲಿ, ಜಾತಿ ಆಧಾರಿತ ಹಿಂಸೆ, ಕ್ರೌರ್ಯಗಳಲ್ಲಿ ಬ್ರಾಹ್ಮಣರಿಗಿಂತ ಶೂದ್ರಜಾತಿಗಳು ಹೆಚ್ಚು ಸಕ್ರೀಯವಾಗಿರುವುದನ್ನು ನಿರಾಕರಿಸಲಾದೀತೆ? ಶೂದ್ರ ಜಾತಿಗಳ ಈ ಮನಃಸ್ಥಿತಿಯ ಹಿಂದೆ ಅಡಗಿರುವುದು ಇದೇ ಬ್ರಾಹ್ಮಣ್ಯ.
ಬಹುಮುಖ್ಯವಾದ ಸಂಗತಿ ಎಂದರೆ ದಲಿತರಲ್ಲೂ ಇಂದು ಬ್ರಾಹ್ಮಣ್ಯ ನೆಲೆಗೊಂಡಿದೆ. ದಲಿತರು ತಮ್ಮ ಸಮುದಾಯದೊಳಗಿರುವವರನ್ನೆ ಮಡಿ- ಮೈಲಿಗೆಯಿಂದ ಕಾಣುತ್ತಿದ್ದಾರೆ. ಮೀಸಲಾತಿಯ ಫಲ ಪಡೆದು ಉದ್ಯೋಗ, ಅಧಿಕಾರ, ಅಂತಸ್ತು, ಹಣ ಕೈಗೂಡಿದ ತಕ್ಷಣ ದಲಿತರು ತಮ್ಮದೇ ಆದ ಶ್ರೇಣಿಕೃತ ಸ್ಥಿತಿಯನ್ನು ನಿರ್ಮಿಸಿಕೊಂಡು ಬ್ರಾಹ್ಮಣ್ಯದ ಅಚರಣೆಗೆ ಇಳಿಯುತ್ತಾರೆ. ಈ ಹೊತ್ತಿನ ಕೆಲವು ದಲಿತ ರಾಜಕಾರಣಿಗಳಿಗೂ ಇದಕ್ಕೆ ಹೊರತಾಗಿಲ್ಲ.
ಅವರ ಮನೆ ಬಾಗಿಲುಗಳು ಸಾಮಾನ್ಯ ದಲಿತರ ಪಾಲಿಗೆ ಸದಾ ಮಡಿ – ಮೈಲಿಗೆಯಿಂದ ಮುಚ್ಚಿರುತ್ತವೆ. ಈ ಬ್ರಾಹ್ಮಣಿಕೆ ಎಂಬುದು ಈ ವರ್ಣಾಶ್ರಮ ವ್ಯವಸ್ಥೆಯ ಕಟ್ಟಕಡೆಯ ಜಾತಿಯವರೆಗೂ ವಿಸ್ತರಿಸಿಕೊಂಡಿದೆ. ಎಲ್ಲಾ ಜಾತಿಗಳಲ್ಲೂ ವಿಷಸರ್ಪದಂತೆ ಕಾರುತ್ತಿದೆ ಎಂಬುದನ್ನು ನಾವು ಮೊದಲು ಅರಿಯಬೇಕು.
ಪರಿಸ್ಥಿತಿ ಹೀಗಿರುವಾಗ ಯಾರೇ ಬ್ರಾಹ್ಮಣ್ಯವನ್ನು ವಿರೋಧಿಸಿದ ಮಾತ್ರಕ್ಕೆ ಅದು ಬ್ರಾಹ್ಮಣರ ನಿಂದನೆ ಎಂದು ಯಾವ ಬ್ರಾಹ್ಮಣರು ಭಾವಿಸಬೇಕಾಗಿಲ್ಲ. ಅದಕ್ಕಾಗಿ ಪೊಲೀಸ್ ಸ್ಟೇಷನ್, ಕೋರ್ಟ್ ಕಚೇರಿ ತುಳಿಯಬೇಕಾಗಿಲ್ಲ. ಅದೇ ರೀತಿ ಯಾವ ಬ್ರಾಹ್ಮಣೇತರ ಜಾತಿಯವನು ತನ್ನ ಜಾತಿಯೊಳಗಿನ ಬ್ರಾಹ್ಮಣ್ಯವನ್ನು ಗುರುತಿಸದೆ ಬ್ರಾಹ್ಮಣರನ್ನು ನಿಂದಿಸಿದರೆ ಅದು ಅಕ್ಷಮ್ಯ.
ಬ್ರಾಹ್ಮಣ್ಯ ಎಂಬ ಪದಕ್ಕೆ ನೀವು ನೀಡಿರುವ ವಿವರಣೆ ತುಂಬಾ ಸರಳವಾಗಿದೆ ಮತ್ತು ಸ್ಪಷ್ಟವಾಗಿದೆ. ಜಾತಿ ವ್ಯವಸ್ಥೆ ಯಲ್ಲಿ ಹುಟ್ಟಿ ಬೆಳೆದಿರುವ ನಮ್ಮೆಲ್ಲರ ಮೈ ಮನಗಳಲ್ಲಿ ಬ್ರಾಹ್ಮಣ್ಯ ಎಂಬುದು ಬೇರೆ ಬೇರೆ ಪ್ರಮಾಣಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ ನೆಲೆಗೊಂಡಿದೆ. ಸಿ ಪಿ ನಾಗರಾಜ
Olle baraha, ellaru chintisa bekaada vishaya!