ನಾಳೆಗಳು
– ನಾ ಬಾಲಕೃಷ್ಣ ಮೈಸೂರು
ಮೂಡುವುದು ಮುಂಜಾವು
ಕೆಂಪಾಗಿ.. .. .. ಹೀಗೆ.. ..
ಹಸಿವಿನ ಗೊಡವೆ ಕಾಡದ
ಗುಡಾಣ ಗುಂಪುಗಳ ನಡುವೆ
ಹಸಿದವರ ನಿಟ್ಟುಸಿರ
ಇಂದಿನಿರುವಿಕೆಯು ಹೀಗೆ.. ಹೀಗೆ..
ಹಿಡಿಗೂಳಿತ್ತು ಜಗ್ಗಿಜಗ್ಗೆಂದು
ಕುಣಿಸುವ ಸೂತ್ರಧಾರಿಗೆ
ಇಲ್ಲಿಲ್ಲದ ಅನಂತತೆಯತ್ತ ಚಿತ್ತ.
ಹಂಗಿನಂಕೆಯ ದಾಟಲಾಗದ ಸಂಕಟಿಗನಿಗೆ
ಹಗಲು ನಿದ್ದೆ ಕರುಣಿಸುವ
ರಾಮಕೃಷ್ಣರ ಪುಳಕ.
ಹೆಡೆಮುರಿದು ನಡುಬಗ್ಗಿ ಬೇಡುವ
ಅರವಳಿಕೆ ಮಂಪರಿಗೆ
ಖಚಿತವಾಗದು ನಾಳೆಗಳ ನಾಳೆಗಳು.
ಗಾಳಿ ಕುದುರೆ ಸವಾರಿಏರಿದ
ಜಾಣ ಕುರುಡಿಗೆ ಕಾಣಿಸದು ಕರಾಳ ರಾತ್ರಿ.
ಮತ್ತು ಇಳಿದೊಡನೆ
ಮತ್ತೆ ಕಾಣಿಸುವ ಸವಾಲುಗಳ
ಜೋಭದ್ರ ನಾಳೆಗಳು
ಮತ್ತೆ ಮುಂಜಾವು ಕೆಂಪಾಗಿ
ಕೆಂಪಾದ ನಾಳೆಗಳು
ಮೂಡುವುದೆ ಹೀಗೆ
ಮೂಡಣದ ಕೆಂಪು.






0 Comments