ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಾಡಮಾಲಿಗಳ ಜಗತ್ತು : ಜಾಡಮಾಲಿಗಳ ಈ ಬದುಕು ಯಾರಿಗೆ ಬೇಕು..?

ಬಹುಶಃ ಇಂತಹುದೊಂದು ಪ್ರಪಂಚವನ್ನು ಯಾರೊಬ್ಬ ನಾಗರೀಕನೂ ನೋಡಿರಲಾರನು.
ಅಂತಹುದೊಂದು ಜಗತ್ತಿನಲ್ಲಿ ಬದುಕುತ್ತಿದ್ದಾರೆ ನಮ್ಮ ಪೌರ ಕಾರ್ಮಿಕರು.
ಹೌದು..!
ಈ ಪೌರ ಕಾರ್ಮಿಕರ ಜಗತ್ತೇ ಅಂಥದ್ದು. ನಮ್ಮನ್ನೆಲ್ಲ ನಿತ್ಯ ರೋಗರುಜನಗಳಿಂದ ಮುಕ್ತ ಮಾಡುವ, ಇಡೀ ಸಮಾಜವನ್ನು, ಪರಿಸರವನ್ನು ಸ್ವಚ್ಛವಾಗಿರುವ ಪೌರ ಕಾರ್ಮಿಕರ ಅತ್ಯಂತ ಹೀನ ಬದುಕನ್ನು ನೋಡಬೇಕೆಂದರೆ ನೀವು ಒಮ್ಮೆ ಹಾಸನದ ಸಂತೆ ನಡೆಯುವ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಬಂದು ನೋಡಿ. ಆ ಮೂವರ ಬದುಕನ್ನು ನೋಡಿದರೆ ಇಡೀ ಸಮಾಜವೇ ಬೆಚ್ಚಿ ಬೀಳಬೇಕು. ಅಷ್ಟೊಂದು ಹೀನಾಯವಾಗಿ, ಕೀಳಾಗಿ ನಡೆಸಿಕೊಳ್ಳುತ್ತಿದೆ ನಮ್ಮ ಸಮಾಜ, ವ್ಯವಸ್ಥೆ.
ಇಷ್ಟೊಂದು ಹೀನಾಯವಾಗಿ ನಡೆಸುಕೊಳ್ಳುವ ಪದ್ಧತಿ ಜಗತ್ತಿನಲ್ಲಿ ಬೇರೆಲ್ಲೂ ಇರಲಾರದೇನೋ.. ಅಂದು ನನ್ನ ಸ್ನೇಹಿತ ದಂಡೋರ ಸೋಮು ಜತೆ ಸಂತೆ ಪೇಟೆಯ ತ್ಯಾಜ್ಯ ಸಂಗ್ರಹಣ ಘಟಕ್ಕೆ ಹೋದಾಗ ಸಮಯ ಬೆಳಗ್ಗೆ 11.00 ಗಂಟೆ. ಆ ಪ್ರದೇಶದಲ್ಲಿ ಎತ್ತ ನೋಡಿದರಲ್ಲಿ ನಾವು ಎಸೆದ ಕಸದ ರಾಶಿ. ಬೆಟ್ಟದಂತೆ ಬೆಳೆದು ನಿಂತಿದೆ. ಈ ನಡುವೆ ನಮಗೆ ಹುಡುಕಿದರೂ ಸಿಕ್ಕದಂತೆ ಅಲ್ಲಿಬ್ಬರು ಯುವಕರು ಬೆಟ್ಟವನ್ನು ಇಲಿ ಅಗೆಯುವಂತೆ ಕುಳಿತು ಏನನ್ನೋ ಅರಸುತ್ತಿದ್ದರು. ಅವರನ್ನು ನೋಡಿಕೊಳ್ಳಲು ಮೇಸ್ತ್ರಿ.
ಕಲೆ : ಪುಂಡಲೀಕ ಕಲ್ಲಿಗನೂರು
ನನ್ನ ಜತೆಗಿದ್ದ ಸೋಮುವನ್ನು ಯಾರವರು ಬಿಕ್ಷುಕರೇ..? ಎಂದು ಕೇಳಿದೆ.
ಇಲ್ಲ ಸಾರ್ ಅವರು ನಮ್ಮ ನಗರಸಭೆಯ ಪೌರ ಕಾಮರ್ಿಕರು!
ಒಂದು ಕ್ಷಣ ದಂಗಾಗಿ ಹೋದೆ. ನಾವು ಯಾರನ್ನು ಹುಡುಕಿಕೊಂಡು ಬಂದೆವೋ ಅವರು ಅವರಾಗಿರಲಿಲ್ಲ. ಅವರ್ಯಾರು ಮನುಷ್ಯರಂತೆ ಇರಲಿಲ್ಲ. ಭಿಕ್ಷುಕರಿಗಿಂತಲೂ ಹೀನಾಯ ಸ್ಥತಿ.
ನಾವು ಎಸೆದ ಕಸದೊಂದಿಗೆ ಕಸವಾಗಿಯೇ ಮುಳುಗಿದ್ದ ಅವರ ಸ್ಥಿತಿ ನೋಡಿ ನಮ್ಮ ಬಗ್ಗೆ ನಮಗೆ ಅವಮಾನ ಆದಂತಾಯ್ತು.
ಹೌದು..!
ಅವರದ್ದು ಅತ್ಯಂತ ಅಮಾನವೀಯ ಕೆಲಸ. ನಿತ್ಯ ನಾವೆ ಎಸೆಯುವ ಬೆಟ್ಟದಷ್ಟು ಕಸವನ್ನು ಬೇರ್ಪಡಿಸುವ ಕೆಲಸ. ಅವರ ಜೀವನ ಎಂಥಹವರಿಗೂ ಬೇಡ. ಮೈಗೆ ಮುತ್ತಿಕೊಂಡ ಲಕ್ಷ ನೊಣಗಳ ಮಧ್ಯೆ ಅವರ ಬದುಕು. ಮುಖಕ್ಕೆ ನೊಣ ಮುತ್ತಿಕೊಂಡಿರುತ್ತವೆ. ಒಂದು ನೊಣ ಮುತ್ತಿದರೆ ಫಟ್ ಎಂದು ಸಿಂಡರಿಸುವ ನಾವುಗಳು ಅವರ ಕೆಲಸವನ್ನು ಕಣ್ಣಾರೆ ನೋಡಬೇಕು.
ಈ ಸಂಸ್ಕರಣ ಘಟಕಕ್ಕೆ ನಿತ್ಯ ನಮ್ಮಿಂದ ಕಸ ಎತ್ತಿಕೊಂಡು 6 ಆಟೋಗಳು ಬಂದು ಇಲ್ಲಿ ಡಂಪ್ ಮಾಡುತ್ತಾರೆ. ಇದನ್ನು ಒಣ ಕಸ, ಪುನರ್ ಬಳಕೆ ಕಸ ಎಂದೆಲ್ಲಾ ಬೇರ್ಪಡಿಸಲಾಗುತ್ತದೆ. ಇಲ್ಲಿ ಉಳಿದ ಕಸವನ್ನು ಗೊಬ್ಬರ ಮಾಡಲಾಗುತ್ತದೆ. ಹೀಗಾಗಿ ಈ ಕಸವನ್ನು ಬೇರ್ಪಡಿಸವ ಕೆಲಸ ಮೂವರದು.
ನಾವು ಹೋದಾಗ ಮೂವರಲ್ಲಿ ಒಬ್ಬ ಹುಷಾರಿಲ್ಲದೆ ಆಸ್ಪತ್ರೆಗೆ ಹೋಗಿದ್ದ. ನಮಗೆ ಸಿಕ್ಕವರು ಲೋಕೇಶ್ ಮತ್ತು ಕುಮಾರ್. ಕೈಯ್ಯಲ್ಲೊಂದು ಗ್ಲೌಸ್ ಕೂಡ ಇಲ್ಲದೆ ಕಸದೊಳಗೆ ಕಸವಾಗಿ ಹೋಗಿದ್ದ ಇಬ್ಬರನ್ನು ಗುರುತಿಸುವುದೇ ಕಷ್ಟವಾಗಿತ್ತು. ಇವರಿಬ್ಬರೂ ಹೊರಗುತ್ತಿಗೆ ಪೌರ ಕಾರ್ಮಿಕರು ತಿಂಗಳ ಸಂಬಳ ಐದೂವರೆ ಸಾವಿರ ಇರಬಹುದು. ಆದರೆ ಇವರ ಕೆಲಸ ಲಕ್ಷ ಕೊಟ್ಟರು ಬೇಡ ಎನ್ನುವಂತಹದ್ದು. ಈ ನಗರಸಭೆಯ ಅಧಿಕಾರಿಗಳು, ಟೆಂಡರ್ ಪಡೆದುಕೊಂಡಿರುವವರು ಎಂಥಹ ಸ್ವಾಥರ್ಿಗಳು ಮಾನವೀಯತೆ ಇಲ್ಲದವರು ಎಂದರೆ, ಇವರ ಕೈಗೆ ಗ್ಲೌಸ್, ಕಾಲಿಗೆ ಶೂ, ಮುಖಕ್ಕೆ ಮಾಸ್ಕ್ ಕೊಟ್ಟಿಲ್ಲ. ಇವರನ್ನು ಇಷ್ಟೊಂದು ಅಮಾನವೀಯವಾಗಿ ನಡೆಸಿಕೊಳ್ಳುವ ಇಂಥಹವರಿಗೆ ಏನೆನ್ನಬೇಕು..?
ಇಲ್ಲಿ ಕೆಲಸ ಮಾಡುವ ಕುಮಾರ್ ತನ್ನ ಜೀವನವನ್ನು ಹೀಗೆ ವಿವರಿಸುತ್ತಾನೆ.
`ಸಾರ್ ನನ್ನ ತಂದೆ-ತಾಯಿ ಇಬ್ಬರೂ ಅನಕ್ಷರಸ್ಥರು. ಮದುವೆ ಆಗಿದೆ. ನಮ್ಮ ಜೀವನ ಯಾರಿಗೂ ಬೇಡ ಸಾರ್, ಬದುಕಬೇಕಲ್ಲ ಎಂದು ಕೆಲಸ ಮಾಡುತಿದ್ದೇವೆ. ನಮ್ಮ ಜೀವಗಳಿಗೆ ಇಲ್ಲಿ ಬೆಲೆಯೇ ಇಲ್ಲ. ನೊಣಗಳ ಮಧ್ಯೆ ಜೀವನ. ಬೆಳಗ್ಗೆ 6 ಕ್ಕೆ ಬರುತ್ತೇವೆ, ನೀವು ನಂಬುತ್ತೀರೋ ಇಲ್ಲವೋ ನಾವು ಇಡೀ ದಿನ ಹಸಿವಿನಿಂದ ಇರುತ್ತೇವೆ. ಒಂದು ಹನಿ ನೀರು ಕುಡಿಯಬೇಕು ಎಂದರೂ ಇಲ್ಲಿ ಕೊಡುವವರೇ ಇಲ್ಲ… 6 ಗಂಟೆ ಎಂದರೆ ಇಲ್ಲಿರಬೇಕು 2 ನಿಮಿಷ ಲೇಟಾದರೂ ವಾಪಸ್ ಕಳಿಸುತ್ತಾರೆ. ಸಂಬಳ ಕೊಡುವುದಿಲ್ಲ. ಹಾಗಾಗಿ 4.30 ಕ್ಕೆ ಎದ್ದು ಬರುತ್ತೇವೆ. ಹಾಗೆ ಇನ್ನೊಂದು ವಿಷಯ. ನಮ್ಮ ಕೆಲಸ ಮಧ್ಯಾಹ್ನ 2 ಗಂಟೆವರೆಗೆ ನಿರಂತರವಾಗಿರುತ್ತದೆ. ನಮ್ಮನ್ನು ನೋಡಿ ಕಾಫಿ, ಟೀ ಮಾರುವವರೂ ಕೂಡ ಒಂದು ಲೋಟ ಟೀ ಕೊಡುವುದಿಲ್ಲ. ಈ ಬಟ್ಟೆ ಹಾಕಿಕೊಂಡು ಒಂದು ಇಡ್ಲಿ ತಿನ್ನೊಣ ಎಂದು ಹೋದರೆ ನಮಗೆ ಮುತ್ತುವ ನೊಣಗಳನ್ನು ನೋಡಿ ಕ್ಯಾಂಟಿನ್ ಅಂಗಡಿಯವರೂ ಕೂಡ ಈ ಕಡೆ ಬರಬೇಡಿ ಎನ್ನುತ್ತಾರೆ. ಬೆಳಗ್ಗೆಯಿಂದ ಒಂದು ಹನಿ ನೀರು ಕುಡಿಯದೆ ಮಧ್ಯಾಹ್ನದವರೆಗೆ ಉಪವಾಸ ಇರುತ್ತೇವೆ ಸ್ವಾಮಿ. ಮಿಗಿಲಾಗಿ, ನಾವು ಕೆಲಸ ಮಾಡುವಾಗ ಸಿಕ್ಕುವ ಹೇಲು, ಕೊಳೆತ ಹೆಗ್ಗಣ, ಬೆಕ್ಕು, ಕೊಳೆತ ಮಾಂಸ , ಕೊಳೆತು ನಾರುವ ವಸ್ತುಗಳು ಏನಿಲ್ಲ ಸ್ವಾಮಿ ಎಲ್ಲವನ್ನೂ ನಾವು ಖುದ್ದು ತೆಗೆದು ಭೇರ್ಪಡಿಸಬೇಕು, ಆ ವಾಸನೆ, ಅಸಹ್ಯ ನೋವು, ಮುತ್ತುವ ಗುಂಗುರ ನಮಗೆ ಗೊತ್ತು ಅನುಭವಿಸಿದವರಿಗಷ್ಟೆ ಗೊತ್ತು..ಆ ನೋವು.. ಇದನ್ನು ನೋಡಿಕೊಂಡು ನಮಗೆ ಏನು ತಿನ್ನಲು ಮನಸ್ಸು ಬರುತ್ತದೆ ಸ್ವಾಮಿ..! ಹಾಗೆ ಉಪವಾಸ ಇರುತ್ತೇವೆ. ನಮ್ಮ ಜನ್ಮ ಯಾರಿಗೂ ಬೇಡ ಸ್ವಾಮಿ’ ಎಂದು ನೋವಿನಿಂದ ಕಣ್ಣೀರು ಹಾಕುತ್ತಾರೆ.
ಮತ್ತೊಬ್ಬ ಲೋಕೇಶ್ ಹೇಳುವುದು ಇನ್ನೂ ಭಯಾನಕ ಅನುಭವಗಳು `ನಾವು ನಿತ್ಯ 6 ಲೋಡ್ ಕಸವನ್ನು ಎಷ್ಟು ಹೊತ್ತಾದರೂ ವಿಲೇವಾರಿ ಮಾಡಲೇಬೇಕು. ಇಲ್ಲದಿದ್ದರೆ ನಮ್ಮ ಪ್ರಾಣ ಹಿಂಡುತ್ತಾರೆ. 3 ಜನ ಇಷ್ಟು ಮಾಡಲು ಸಾಧ್ಯವೇ ಸ್ವಾಮಿ..? ನಮ್ಮ ಜನ ಏನೇನು ಎಸೆದಿರುತ್ತಾರೆ ನಿಮಗೆ ಹೇಳಿದರೆ ಅಸಹ್ಯ ಎನಿಸುತ್ತದೆ. ಅವೆಲ್ಲವನ್ನೂ ಕೈಯ್ಯಿಂದ ಕ್ಲೀನ್ ಮಾಡುತ್ತೇವೆ. ನಗರಸಭೆಯಿಂದ ನೀಡುವ ಕಳಪೆ ಗ್ಲೌಸ್ ಒಂದು ದಿನಕ್ಕೆ ಉಳಿಯುವುದಿಲ್ಲ. ಒಂದು ಗಾಜು ಸಿಕ್ಕಿದರೆ ಹರಿದು ಹೋಗುತ್ತವೆ. ಮಾಸ್ಕ್ ಇಲ್ಲದೆ ಮುಖ ಅಲಜರ್ಿ ಆಗುತ್ತದೆ. ಕೈಗೆ ಎಷ್ಟು ಗಾಜುಗಳು ಸಿಕ್ಕಿಕೊಂಡು ನೋಡಿ ಗಾಯವಾಗಿದೆ… ಇನ್ನು ಗಾಯ ಕೆರೆದುಕೊಂಡರೆ ನಾಳೆ ಇನ್ನೂ ಅಲಜರ್ಿ ಆಗುತ್ತದೆ. ಹೀಗಾಗಿ ನೊಣ ಮುತ್ತಿದರೆ ಮುತ್ತಿಕೊಳ್ಳಲಿ ಎಂದು ಬಿಡುತ್ತೇವೆ. ಆಗಾಗ ತಲೆಬಾರ, ಕೈಕಾಲು ನೋವು, ಇರುತ್ತದೆ. ನಮ್ಮ ಆರೋಗ್ಯಕ್ಕೆ ಇಲ್ಲಿ ಏನೂ ಗ್ಯಾರಂಟಿ ಇಲ್ಲ. ತಲೆ ತಿರುಗಿ ಒಂದು ವೇಳೆ ಇಲ್ಲೆ ಬಿದ್ದರೆ ನಮ್ಮನ್ನೂ ಇದರೊಂದಿಗೆ ಹೊತ್ತೊಯ್ದರೂ ಯಾರೂ ಕೇಳುವರಿಲ್ಲ ಹಾಗಿದೆ ನಮ್ಮ ಸ್ಥಿತಿ. ಸಾರ್ ಬೆಳಗ್ಗೆಯಿಂದ ಕೆಲಸ ಮಾಡಿರುತ್ತೇವೆ ರಾತ್ರಿ ಒಂದು ಕ್ವಾಟರ್ ಓಸಿ ಕುಡಿಯುತ್ತೇನೆ ಇಲ್ಲದಿದ್ದರೆ ನಿದ್ದೆ ಬರುವುದಿಲ್ಲ. ಮೈ ಕೈ ನೋವು ಹೋಗುವುದಿಲ್ಲ ಅದರ ಹೊರತಾಗಿ ನನಗೆ ಇನ್ನೊಂದು ಜೀವನ ಗೊತ್ತೆ ಇಲ್ಲ ಸ್ವಾಮಿ. ಇಷ್ಟೆಲ್ಲ ಕೆಲಸ ಮಾಡಿದ ನಮಗೆ ಕೈ ತೊಳೆದುಕೊಳ್ಳಲು ಒಂದು ಸೋಪ್ ಕೊಡುವುದಿಲ್ಲ ಎಂದರೆ ನೀವೇ ಯೋಚಿಸಿ ನಮ್ಮ ಸ್ಥಿತಿ ಹೇಗಿದೆ ಎಂದು. ನಮಗೆ ಮಳೆಗಾಲ- ಬೇಸಿಗೆ ಯಾವುದೂ ಗೊತ್ತಿಲ್ಲ. ನಮ್ಮ ಜೀವನ ಯಾರಿಗೂ ಬೇಡ ಎನ್ನುತ್ತಾರೆ.
ಈ ನಡುವೆ ಕೈಯ್ಯಲ್ಲಿ ಕೆಲಸ ಮಾಡುವ ಅವರ ಸ್ಥಿತಿ ಕಂಡು ತಕ್ಷಣ ಅವರ ಮೇಲಾಧಿಕಾರಿ ಸ್ಟೀಫನ್ ಪ್ರಕಾಶ್ ಗೆ ತಿಳಿಸಿ ಹೀಗೆ ದುಡಿಸಿಕೊಳ್ಳುತ್ತಿದ್ದೀರಲ್ಲಾ ಎಂದು ಕಳಿದ ಕೆಲವೇ ನಿಮಿಷಕ್ಕೆ ಹೊಸ ಗ್ಲೌಸ್ಗಳು ಅವರ ಎದುರು ಬಂದು ಬಿದ್ದಿದ್ದವು.
ನೋಡಿ ಸಾರ್.. ಹೀಗೆ ಈವತ್ತು ಬಂದಿವೆ. ನಮ್ಮ ಕೆಲಸ ನೋಡಿಯಾದರೂ ಇವರ ಮನ ಕಲಕುವುದಿಲ್ಲವಲ್ಲಾ? ಎಂಬ ಅಸಹಾಯಕತೆ ವ್ಯಕ್ತಪಡಿಸುತ್ತಾನೆ.
ನಿಜಕ್ಕೂ ಇವರ ಸ್ಥಿತಿ ಯಾರಿಗೂ ಬೇಡ. ಇವರ ಈ ಸ್ಥಿತಿಗೆ ಏನು ಹೇಳುತ್ತೀರಿ ನಾಗರಿಕರೇ..? ಇವರ ಗೋಳು ಕೇಳುವರ್ಯಾರು..? ನಮ್ಮನ್ನೆಲ್ಲಾ ಸ್ವಚ್ಛಗೊಳಿಸುವ ಇವರನ್ನು ನಾವು ಸರಿಯಾಗಿ ನೋಡಿಕೊಳ್ಳಬಾರದೇ..? ದಯವಿಟ್ಟು ಯೋಚಿಸಿ..! ನಮ್ಮಂತೆ ಇವರಿಗೂ ಬದುಕಲು ಅವಕಾಶ ಕೊಡಿ.

‍ಲೇಖಕರು avadhi

6 August, 2013

11 Comments

  1. ಸತ್ಯನಾರಾಯಣ

    ಪ್ರಿಯ ನಾಗರಾಜ್,
    ನಿಮ್ಮ ಲೇಖನ ಚೆನ್ನಾಗಿದೆ ಎಂದು, ಲೇಖನಮಾಲೆಗೊಂದು ಅದ್ಭುತ ಆರಂಭ ಎಂದು ಹೊಗಳಬೇಕೆ? ಅಥವಾ ಇಂಥದೊಂದು ಹೀನ ಪರಿಸ್ಥಿತಿಯ ಸಮಾಜದಲ್ಲಿ ಇದ್ದೇವಲ್ಲಾ ಎಂದು ಎಂದು ಕಳವಳಗೊಳ್ಳಬೇಕೆ ತಿಳಿಯದಾಗಿದೆ. ಹೊಸ ಗ್ಲೌಸುಗಳು ಪ್ರತ್ಯಕ್ಷವಾದ ಪರಿಯೇ ಹೇಳುತ್ತದೆ, ನಮ್ಮ ಸಮಾಜದ, ಅಧಿಕಾರ ದೌರ್ಜನ್ಯದ ಕಥೆಗಳನ್ನು.
    ಇಂದು ಕೇಳದಿದ್ದರೆ ಏನೂ ಸಿಗುವುದಿಲ್ಲ ಎನ್ನುವಂತಿದೆ! ಈ ಕೇಳುವ ಪರಿಸ್ಥಿತಿಯೂ ಸೋತಾಗ ಕಿತ್ತುಕೊಳ್ಳುವ ಮನಸ್ಥಿತಿ ನಿರ್ಮಾಣವಾಗುತ್ತದೆ. ಆ ಆತಂಕವಾದರೂ ನಮ್ಮ ಸಮಾಜವನ್ನು ಕಾಡಬೇಕು.
    ಕಣ್ಣಿಗೆ ಕಟ್ಟಿದಂತಿರುವ ನಿಮ್ಮ ಬರಹದ ಜೊತೆಯಲ್ಲಿ ಒಂದೆರಡು ಚಿತ್ರಗಳೂ ಇದ್ದರೆ ಚೆನ್ನಿತ್ತು.
    ಮುಂದಿನ ಬರವಣಿಗೆಯ ನಿರೀಕ್ಷೆಯಲ್ಲಿ….

  2. ಸುಹಾಸ ಭಜಂತ್ರಿ

    ಪೌರ ಕಾರ್ಮಿಕರ ನೋವು ಕಷ್ಟಗಳಿಗೆ ಅವಧಿ ಧ್ವನಿಯಾಗಬೇಕು ನಿಜ. ಆದರೆ ಹೆತ್ತೂರ ಅವರು ತುಸು ಅತಿರಂಜಿತವಾಗಿಯೇ ಪೌರ ಕಾರ್ಮಿಕರ ಚಿತ್ರಣ ಮಾಡಿದ್ದಾರೆ ಅಲ್ಲವೇ. ನಾನಿರುವ ವೈಯಾಲಿಕಾವಲ್ ನಲ್ಲಿ ನನಗೆ ನಿತ್ಯ ಕಂಡು ಬರುವ ಪೌರ ಕಾರ್ಮಿಕರು ಯಾರೂ ಹೆತ್ತೂರ ಅವರು ವರ್ಣಿಸಿರುವ ಪೌರ ಕಾರ್ಮಿಕರ ಚಿತ್ರದೊಂದಿಗೆ ಹೋಲುವುದಿಲ್ಲವಲ್ಲ! ಎಲ್ಲ ವರ್ಗದ ಜನರಲ್ಲಿ ಕಂಡು ಬರುವ ಹಾಗೆ ಪೌರ ಕಾರ್ಮಿಕರಲ್ಲೂ ಜೋರು ಬಾಯಿಯವರು, ಸೌಮ್ಯ ಸ್ವಭಾವದವರು, ಜಗಳಗಂಟರು, ಸಮಾಧಾನಿಗಳು, ಕದಿಯುವ ಚಟ ಇರುವವರು, ಸಹಾಯ ಮಾಡುವ ಪ್ರವೃತ್ತಿಯವರು, ಕಾಸು ಕೇಳುವವರು, ಒಪ್ಪ ಕೆಲಸ ಮಾಡುವವರು, ಕೆಲಸಗಳ್ಳರು ಇದ್ದಾರೆ. ಮಿಕ್ಕ ಸರಕಾರೀ ನೌಕರರಿಗೆ ಹೋಲಿಸಿದರೆ ಪೌರಕಾರ್ಮಿಕರಿಗೆ ಕೆಲಸ ಕಡಿಮೆ. ಆದುದರಿಂದ ಬ್ಯಾಲನ್ಸ್ದ್ ಆದ ಚಿತ್ರಣ ಕೊಡಬೇಕಿತ್ತು ಹೆತ್ತೂರ ಅವರು.

    • ಸತ್ಯನಾರಾಯಣ

      “ಮಿಕ್ಕ ಸರಕಾರೀ ನೌಕರರಿಗೆ ಹೋಲಿಸಿದರೆ ಪೌರಕಾರ್ಮಿಕರಿಗೆ ಕೆಲಸ ಕಡಿಮೆ.”
      ಏನು ನಿಮ್ಮ ಮಾತಿನ ಅರ್ಥ!???????????

      • ಸುಹಾಸ ಭಜಂತ್ರಿ

        ಒಂದು ದಿನ ನಿಮ್ಮ ಏರಿಯಾದ ಪೌರ ಕಾರ್ಮಿಕರ ಬೆನ್ನು ಬಿದ್ದು ಅವರ ಕೆಲಸದ ದಿನಚರಿಯನ್ನು ಗಮನಿಸಿ.

        • ಸತ್ಯನಾರಾಯಣ

          ಮಾನ್ಯರೇ
          ನಾನು ಗಮನಿಸಿದ್ದೇನೆ. ಗಮನಿಸುತ್ತಲೂ ಇದ್ದೇನೆ.
          ನೀವು ಒಂದು ಹದಿನೈದು ದಿನ, ನಿಮ್ಮ ಕೆಲಸಕ್ಕೆ ರಜೆ ಹಾಕಿ, ಅವರ ಕೆಲಸಗಳನ್ನು ಮಾಡಿನೋಡಿ. ಎರಡೂ ಕೈಯಲ್ಲಿ ಪೊರಕೆ ಹಿಡದು ಗುಡಿಸಿ. ಮನೆ ಮನೆಗೆ ಹೋಗಿ ಕಸ ಸಂಗ್ರಹಿಸಿ. ಗಾಡಿಯಲ್ಲಿ ಕಸವನ್ನು ಬೇರ್ಪಡಿಸಿ. ಕಸ ತುಂಬಿದ ಆಟೋ-ಲಾರಿಗಳಲ್ಲಿ ಕುಳಿತು ಪ್ರಯಾಣಿಸಿ. ಆಗಲೂ ನಿಮಗೆ ಇದು ‘ಕಡಿಮೆ ಕೆಲಸ’ ಎನ್ನಿಸಿದರೆ ನಿಮ್ಮ ಅಭಿಪ್ರಾಯವನ್ನು ನಾನು ಸ್ವೀಕರಿಸುತ್ತೇನೆ.

          • ಸುಹಾಸ ಭಜಂತ್ರಿ

            ‘ಕಡಿಮೆ ಕೆಲಸ’ ಅಂತ ನಾನು ಹೇಳಲಿಲ್ಲ. ಕೆಲಸ ಕಡಿಮೆ ಅಂತ ಹೇಳಿದ್ದಲ್ಲವೇ? ಯಾಕೆ ನನ್ನ ಮಾತನ್ನು ತಿರುಚಿದ್ದು ನೀವು? ಬಹುತೇಕ ಸರಕಾರೀ ನೌಕರರಿಗೆ ದಿನಕ್ಕೆ ಎಂಟು ಘಂಟೆ ಕೆಲಸ ನಿಯಮ ಅನ್ವಯವಾಗುತ್ತದೆ, ಆದರೆ ನಮ್ಮ ಏರಿಯಾ ಪೌರ ಕಾರ್ಮಿಕರು ಪ್ರತಿ ದಿನ ಎಂಟು ಘಂಟೆ ಕೆಲಸ ಮಾಡಿದ್ದನ್ನು ನಾನು ನೋಡಿಲ್ಲ. ನೀವು ನೋಡಿದ್ದರೆ ಸಂತೋಷ.

  3. g.n.nagaraj

    ಹೆತ್ತೂರವರ ಬರಹ ಸಮಾಜದಲ್ಲಿ,ದಲಿತರಲ್ಲಿಯೂ ಅತ್ಯಂತ ಕೆಳ ಸ್ತರದಲ್ಲಿರುವವರಬದುಕು ಬವಣೆಯನ್ನು ಮುಂದಿಡುತ್ತಿದೆ. ಬಹಳ ೊಳ್ಳೆಯ ಕೆಲಸ. ಇಲ್ಲಿ ಅನವಶ್ಯಕವಾದ ಚರ್ಚೆಯೊಂದನ್ನು ಹುಟ್ಟುಹಾಕಿ ಅವರ ಸಂಕಷ್ಟಗಳ ಬಗೆಗೆ ಬರಬಹುದಾದ ಮಾನವೀಯ ಸ್ಪಂದನವನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ ಒಬ್ಬ ಮಹಾಶಯರು. ಹೆತ್ತೂರವರು ಬಣ್ಣಿಸಿದ ಜಾಡಮಾಲಿಗಳು ಮತ್ತು ಸುಹಾಸರವರು ಗುರಿಯಿಟ್ಟ ಜಾಡಮಾಲಿಗಳು ಇಬ್ಬರೂ ಬೇರೆ ಬೇರೆ ರೀತಿಯ ಜಾಡಮಾಲಿಗಳು ಎಂಬುದು ಅವರಿಗೆ ಅರ್ಥವಾಗಿಲ್ಲವೋ ಅಥವಾ ? ಇಲ್ಲಿ ವಿವರಿಸಲ್ಪಟ್ಟ ಜಾಡಮಾಲಿಗಳ ಬದುಕಿನ ಬವಣೆಗಳ ಬಗ್ಗೆ ಅವರಿಗೆ ಯಾವ ಭಾವನೆಯೂ ಉತ್ಪನ್ನವಾಗಲಿಲ್ಲವೇ ? ಅವರ ಬದುಕು ಬದಲಾಗುವ ದಾರಿಯನ್ನು ಹುಡಕಬೇಕು, ಅದಕ್ಕೆ ತಾನೂ ಒಂದು ಪಾತ್ರ ವಹಿಸಬೇಕೆಂದು ಅನ್ನಿಸುತ್ತಿಲ್ಲವೇ. ಇದು ಕೇವಲ ಹಾಸನದ್ದು ಮಾತ್ರ ಅಲ್ಲದೇ ಸರಿಸುಮಾರು ಇಡೀ ರಾಜ್ಯದ ಪರಿಸ್ಥಿತಿ. ಇದನ್ನು ಉತ್ತಮಪಡಿಸಲು ನಾಗರಿಕ ಸಮಾಜ ವಹಿಸಬೇಕಾದ,ವಹಿಸಬಹುದಾದ ಪಾತ್ರವೇನು ? ಇನ್ನೇನಿಲ್ಲವೆಂದರೂ ಒಂದು ನೆಟ್ ಲೋಕದ ಪೆಟಿಷನ್ ಮಾಡಿ ಬಹಳ ಜನರ ಸಹಿ ಸಂಗ್ರಹಿಸಿ ಸರ್ಕಾರಕ್ಕೆ ಒತ್ತಾಯ ಮಾಡಲು ಬರುವುದಿಲ್ಲವೇ ? ಹೀಗೆ ನಮ್ಮ ಮಾನವೀಯ ಮಿಡಿತ ಕ್ರಿಯಾಶೀಲವಾಗುವ ಮಾರ್ಗವನ್ನು ಹುಡಕಬೇಕಾಗಿದೆ.

  4. ನಾಗರಾಜ್ ಹೆತ್ತೂರು

    ಸುಹಾಸ ಭಜಂತ್ರಿ ಅವರೇ ನಿಮ್ಮ ವಾದ ನೋಡಿದರೆ ನಿಜಕ್ಕೂ ನಿಮ್ಮ ಮೇಲೆ ಅನುಕಂಪ ಹುಟ್ಟುತ್ತದೆ. ನಿತ್ಯ ನಮ್ಮನ್ನು ರಕ್ಷಿಸುವ ಒಂದು ಸಮುದಾಯದ ಬಗ್ಗೆ ನಿಮಗಿರುವ ಅತ್ಯಂತ ಕೆಳದರ್ಜೆಯ ಕಲ್ಪನೆಯ ಬಗ್ಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ಅವರು ಮಾಡುವ ಕೆಲಸವನ್ನು ನೀವಲ್ಲ ಯಾರೂ ಲಕ್ಷ ಕೊಟ್ಟರೂ ಮಾಡುವುದಿಲ್ಲ. ನಿಮ್ಮ ವ್ಯಾಪ್ತಿಯಲ್ಲಿ ಈ ತರಹದ ಸಮುದಾಯದವರು ಇಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ನಿಮ್ಮ ವಾದ ನೋಡಿದರೆ ಅವರ ಜೀವನದ ಬಗ್ಗೆ ನಿಮಗೆ ಎಳ್ಳಷ್ಟು ಗೊತ್ತಿಲ್ಲ. ಸಮಸ್ಯೆ ಹೇಳಿದರೆ ಅತಿರಂಜಕತೆ ಎನ್ನುತ್ತೀರಾ…? ನಿಮ್ಮದು ಎಂತಹ ಮನಸ್ಸಿರಬಹುದು ಎಂದು ಯೋಚಿಸುತ್ತಿದ್ದೇನೆ…! ಇರಲಿ, ಎಲ್ಲರೂ ನೀವು ನೋಡದಂತೆ ನೋಡಲು ಸಾಧ್ಯವಿಲ್ಲ. ನಾನೇನು ಊಹಿಸಿಕೊಂಡು ಬರೆದಿಲ್ಲ. ಕಣ್ಣಾರೆ ಕಂಡಿದ್ದನ್ನು ಬರೆದಿದ್ದೇನೆ. ಕಲ್ಲು ಹುಡುಕುವುದನ್ನು ನಿಲ್ಲಿಸಿ. ಜಾಡಮಾಲಿಗಳ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡಿ ಅದಷ್ಟೆ ನಿಮಗೆ ಹೇಳಬಹುದು… ಅಂದ ಹಾಗೆ ನನ್ನದೊಂದು ಪ್ರಶ್ನೆ ನೀವು ನೋಡಿದ ಪೌರ ಕಾರ್ಮಿಕ ಯಾವತ್ತಾದರೂ ನಿಮ್ಮ ಮನೆ ಮುಂದೆ ಚರಂಡಿ ಕ್ಲೀನ್ ಮಾಡಲು ಬಂದಾಗಲೂ ಅಥವಾ ಮತ್ಯಾವುದೋ ಕಸ ಗುಡುಸಲು ಬಂದಾಗ ಕರೆದು ಒಂದು ಲೋಟ ನೀರು ಕೊಟ್ಟಿದ್ದೀರೋ…?

    • ಸುಹಾಸ ಭಜಂತ್ರಿ

      ಮಾನ್ಯ ಹೆತ್ತೂರ ಅವರೇ, ಬಹಳ ಆವೇಶಪೂರಿತವಾಗಿ ನನ್ನ ಟೀಕೆ ಮಾಡಿದ್ದೀರಿ. ಪೌರಕಾರ್ಮಿಕರ ಬಗ್ಗೆ balanced ಆಗಿ ಬರೆಯಬೇಕಿತ್ತು ಅಂತ ನಾನು ತಮಗೆ ಸಲಹೆ ಕೊಟ್ಟಿದ್ದನ್ನೇ ಮಹಾ ಅಪರಾಧ ಅನ್ನುವ ಹಾಗೆ ಟೀಕಿಸಿದ್ದೀರಿ! ಇರಲಿ, ನಿಮ್ಮ ಟೀಕೆಗೆ ಅಂಜುವವ ನಾನಲ್ಲ. ಇನ್ನು”ಪೌರ ಕಾರ್ಮಿಕ ಯಾವತ್ತಾದರೂ ನಿಮ್ಮ ಮನೆ ಮುಂದೆ ಚರಂಡಿ ಕ್ಲೀನ್ ಮಾಡಲು ಬಂದಾಗಲೂ ಅಥವಾ ಮತ್ಯಾವುದೋ ಕಸ ಗುಡುಸಲು ಬಂದಾಗ ಕರೆದು ಒಂದು ಲೋಟ ನೀರು ಕೊಟ್ಟಿದ್ದೀರೋ” ಎಂಬ ತಮ್ಮ ಪ್ರಶ್ನೆ ನೋಡಿ ನಗು ಬಂತು. ಕಸ ಗುಡಿಸುವ ಹೆಂಗಸಿಗೆ ಪ್ರತಿ ತಿಂಗಳು ಭಕ್ಷೀಸು ಹಣ ಕೊಡುತ್ತಿದ್ದೇನೆ. ಕೊಡಲಿಲ್ಲ ಅಂದರೆ ಆಕೆ ಗಲಾಟೆ ಮಾಡುತ್ತಾಳೆ ಎಂಬುದು ಬೇರೆ ವಿಚಾರ. ಭಕ್ಷೀಸು ಅಷ್ಟೇ ಅಲ್ಲ, ಪ್ರತಿ ಹಬ್ಬಕ್ಕೂ ಸೀರೆ ಕೊಡುತ್ತಿದ್ದೇನೆ. ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ಮಾಡಿದ ತಿಂಡಿ ತಿನಿಸುಗಳನ್ನು ಬಿಸಿ ಬಿಸಿ ಕೊಟ್ಟಿದ್ದೇನೆ. ದಿನ ಆಕೆ ಕಾಪಿ ಕುಡಿದು ಹೋಗುವುದು ನನ್ನ ಮನೆಯಲ್ಲೇ.

  5. laxminarayana v n

    ಸಾಧ್ಯವಿದ್ದರೆ ಆನಂದ್ ಪಟವರ್ಧನ್ ರ ‘ಜೈ ಭೀಮ್ ಕಾಮ್ರೇಡ್’ ಎಂಬ 3 ಗಂಟೆ ಅವಧಿಯ ಡಾಕ್ಯುಮೆಂಟರಿಯನ್ನು ನಿಮ್ಮ ನಿಮ್ಮ ಊರುಗಳಲ್ಲಿ ಜನರ ಜೊತೆ ಕುಳಿತು ನೋಡಿ.

  6. ಎಚ್. ಸುಂದರ ರಾವ್

    ಒಬ್ಬ ತನ್ನ ಹೇಲನ್ನು ಇನ್ನೊಬ್ಬನ ತಲೆಯ ಮೇಲೆ ಹೊರಿಸುವುದು ಅಮಾನವೀಯ ಎಂಬ ಕಾರಣಕ್ಕೆ ತಾನೆ ಬಸವಲಿಂಗಪ್ಪನವರು ಆ ಪದ್ಧತಿಯನ್ನು ರದ್ದು ಮಾಡಿದ್ದು? ಹಾಗಾದರೆ ಒಬ್ಬ ಮಾಡಿದ ಕಸವನ್ನು ಇನ್ನೊಬ್ಬ ಹೊರಬೇಕೆ? ಹೊರಬಹುದೆ? ಹೊರಿಸಬಹುದೆ?
    ಉದಾಹರಣೆಗೆ ನಾನು ಮನೆಗೆ ಒಂದು ಹೊಸ ಟಿವಿ ತರುತ್ತೇನೆ. ಮನೆಗೆ ತಂದು ಅದರ ಪ್ಯಾಕಿಂಗ್ ಬಿಡಿಸಿ, ಟಿವಿ ಇಟ್ಟುಕೊಂಡು ಅದನ್ನು ಪ್ಯಾಕ್ ಮಾಡಿದ ರಟ್ಟಿನಪೆಟ್ಟಿಗೆ, ಥರ್ಮೋಕೋಲ್ ಇತ್ಯಾದಿಗಳನ್ನು ಹೊರಗೆ ರಸ್ತೆ ಬದಿಯ ಕಸದ ತೊಟ್ಟಿಗೆ ಎಸೆಯುತ್ತೇನೆ. ಇದು ಇಂದು ನಾವೆಲ್ಲ ಒಪ್ಪಿ ಅನುಸರಿಸುತ್ತಿರುವ ಪದ್ಧತಿ. ಇದು ಸರಿಯೇ? ಹೀಗೆ ಮಾಡುವುದು ಒಬ್ಬ ತನ್ನ ಹೇಲನ್ನು ಇನ್ನೊಬ್ಬ ಹೊರಬೇಕೆಂದು ನಿರೀಕ್ಷಿಸುವುದಕ್ಕಿಂತ ಹೇಗೆ ಕಡಿಮೆ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading