ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಂಬಾರರ ಎರಡು ಕವಿತೆಗಳು

ಡಾ. ಜಯಶ್ರೀ ಸಿ ಕಂಬಾರ

 

ಗಟರಿನಲ್ಲಿಗಡಿಯಾರ

ನೆನ್ನೆಯ ದಿನ ಇಲ್ಲಿ

ಹಸಿ ಮಣ್ಣಿನ ವಾಸನೆ ಇತ್ತು.

ಅದರೊಂದಿಗೆ ಹಸಿರಿನ ಘಮ

ತಾವರೆಯ ಸವಿಗಂಪೂ ಇತ್ತು.

ಸಂಭ್ರಮದಿಂದ ಅರಳುವ ಹೂವು

ಪಕಳೆಗಳ ಸವಿ ಸದ್ದು,

ಹಕ್ಕಿಗಳ ಚಿಲಿಪಿಲಿ ನಾದ

ತಿಳಿಗಾಳಿಯಲಿ ತೇಲಿ ಕೇಳಿಸುತ್ತಿತ್ತು.

ಈಗ ಅದೆಲ್ಲಇತಿಹಾಸ.

 

ಈಗ ಕೇಳಿಸುವುದು

ಸಿಮೆಂಟು ನೆಲಗಳಲ್ಲಿ ಸದ್ದಡಗಿ

ನಲುಗುತ್ತಿರುವ ನೀರ ಅಲೆಗಳು.

ಚಟಪಟ ಮರ್ಮರಗೊಳ್ಳುತ್ತಿವೆ

ಮೀನುಗಳು ಹಾತೊರೆದು

ಜೀವಕ್ಕಾಗಿ, ನೆಲದ ಅಡಿ.

ಬಣ್ಣದರೆಕ್ಕೆಯು ಪುಸ್ತಕ

ಪುಟದಲ್ಲಿ ವರ್ಷಗಳಿಂದ ಭದ್ರವಾಗಿದೆ.

 

ಎಲ್ಲ ಶಬ್ಧಗಳೂ ನಿಶಬ್ಧದಲ್ಲಿ ನೀಗಿ

ಮೂಡಿದೆ ವಿಚಿತ್ರ ಮೌನ

ಚಲನವೂ ಮೌನ, ಮೌ….ನ

ಹುದುಗಿದ ಅಲೆಗಳ ಗೋಳು

ಮಾರ್ದನಿಯಾಗಿರಾತ್ರಿಯಲಿ

ಕೇಳಿ ಬರುತ್ತಿದೆ. ನೀರ ನೆಳಲು

ಕಟ್ಟಡಗಳ ಮೇಲೆ ಕುಣಿಯುತ್ತಿವೆ,

ವಿನಾಶಕ ಕುಣಿತ.

ಕಾಣದ ಹಕ್ಕಿಗಳ ಕಾವಲು

ಕಣ್ಣುಗಳು ಬೆಂಬತ್ತಿವೆ ಬಿಡದೆ.

ಕಣ್ಣುಗಳು ತಿವಿಯುತ್ತಿವೆ, ಕಾಡುತ್ತಿವೆ.

ಅಲ್ಲಿ, ಆ ಗಟರಿನಲ್ಲಿಎಸೆದಗಡಿಯಾರ

ಇನ್ನೂಜೀವಂತವಾಗಿದೆ………

 

ಟಿಕ್……. ಟಾಕ್…… ಟಿಕ್……ಟಾಕ್……

 

ಮತ್ತೊಂದು ವರ್ಷ

ಪಡುವಣದರವಿ ಗಂಭೀರದಲಿ ಇಳಿಯುತ್ತಿದ್ದಾನೆ

ಮೋಟಾರುಗಳು ರಸ್ತೆಯಲ್ಲಿಯೆರ್ರಾ ಬಿರ್ರಿ ನುಗ್ಗುತ್ತಿದೆ

ಅವ್ಯವಸ್ಥೆಯ ಮನಗಳಂತೆ

ಹಾದಿಗಳೆಲ್ಲಾ ತಿರುಚಿವೆ, ಉರುಳುತ್ತಿದೆ ದಾಳ

ನಿಲ್ಲದೆ ಉರುಳತ್ತಲೇ ಇದೆ

ಟೇಬಲ್ ಮೇಲಿನ ಇಸ್ಪೀಟು ಎಲೆಗಳಂತೆ

ಹರಡಿವೆ ಮರುಷಗಳು ಒಂದರ ಮೇಲೊಂದು

ಮತ್ತೆ ಹೊಸ ಎಲೆ, ಮತ್ತೆ ಹೊಸ ವರ್ಷ.

 

ಹೊರಗಿನ ಗದ್ದಲಗಳ ಮಧ್ಯೆ

ಕುಳಿತಿದ್ದೇವೆ ಇಲ್ಲಿ ನೀನು, ನಾನು.

ಢಿಕ್ಕಿಸುತ್ತಿವೆ ಗೊಂದಲಗಳು.

ಪಂಜುಗಳು ಪರಚುತ್ತಿವೆ ಖಾಸಗಿ ವಿಷಯಗಳ,

ತೇಲಿ ಬರುತ್ತಿವೆ ನೆನಪುಗಳು ಹೆಣದಂತೆ,

ಒಡೆದು ನೋಯುತ್ತಿವೆ ಮಾತುಗಳು ಗಾಯದಂತೆ.

ಸದ್ದಿಲ್ಲದೆ ಹುದುಗಿದೆ ಮೌನ.

ಮಾತಿನ ನಡುವೆ ನಾನು ನಾನಾಗಿ ಉಳಿದಿರಲಿಲ್ಲ,

ನೀನೂ ನೀನಾಗಿರಲಿಲ್ಲ ಕೇವಲ ಸರಕುಗಳಂತಿದ್ದೆವು.

 

ನಿನ್ನಕಣ್ಣ ವಿಚಿತ್ರ ಹೊಳಹಿನಲ್ಲಿ

ನನ್ನ ಭೂತವಕಂಡೆ

ಆಳದ ಬಾವಿಯಿಂದ ಏಳುವುದನ್ನು.

ನೆರಳ ಜಾಡಿಸುವ ಸಮಯ

ಉರುಳುತ್ತಿದೆ ದಾಳ

ಕಾರೆಂಬೋಕತ್ತಲ ಗರ್ಭದಲ್ಲಿ

ಹೊಸ ದಿನವು ಹೊರಳಿ, ಉರುಳಿದೆ,

ಮತ್ತೊಂದು ಹೊಸ ಎಲೆ,

ಮತ್ತೊಂದು ಹೊಸ ವರ್ಷ.

 

 

‍ಲೇಖಕರು G

14 June, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading