ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಲಲಿತಾ ಮತ್ತು ಜೈಲು – ಜಿ ಪಿ ಬಸವರಾಜು

ಅಪರಾಧ ಮತ್ತು ಶಿಕ್ಷೆ

ಜಿ ಪಿ ಬಸವರಾಜು

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ತಮಿಳ್ನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಕಳೆದ ಮೊದಲ ದಿನದ ವಿವರಗಳನ್ನು ಪತ್ರಿಕೆಯೊಂದು ಪ್ರಕಟಿಸಿದೆ. ಕಾರಾಗೃಹದಲ್ಲಿ ಕೊಡಲಾದ ಬೆಳಗಿನ ಉಪಹಾರವನ್ನು ಜಯಲಲಿತಾ ನಿರಾಕರಿಸಿದ್ದಾರೆ. ಹೊರಗಿನಿಂದ ತರಿಸಿದ ಇಡ್ಲಿ, ವಡೆಗಳನ್ನು ತಿಂದಿದ್ದಾರೆ. ಮಧ್ಯಾಹ್ನದ ಊಟದ ವಿವರ ಅಲ್ಲಿಲ್ಲ. ರಾತ್ರಿಯ ಊಟವೆಂದರೆ ಬ್ರೆಡ್ಡು, ಹಾಲು ಮತ್ತು ಹಣ್ಣು. ಚನ್ನೈನಿಂದ ತರಿಸಿದ ಬ್ಲಾಂಕೆಟ್ಟನ್ನು ಅವರು ಬಳಸಲು ಅವಕಾಶ ಕಲ್ಪಿಸಲಾಗಿತ್ತು. ಅವರ ಬೆಳಗಿನ ಮತ್ತು ಸಂಜೆಯ ವಾಕಿಂಗ್ಗಳಿಗೂ ಅಡ್ಡಿಯೇನೂ ಇರಲಿಲ್ಲ. ಜಯಲಲಿತಾ ಕುಳಿತುಕೊಳ್ಳುವುದಕ್ಕೆಂದು ಹೊರಗಿನಿಂದ ತಂದಿದ್ದ ವಿಶೇಷ ಕುಚರ್ಿಯನ್ನು ಜೈಲಿನ ಒಳಕ್ಕೆ ಒಯ್ಯಲು ಅಧಿಕಾರಿಗಳು ಅನುಮತಿ ಕೊಡಲಿಲ್ಲ.
ಮಿತಿಮೀರಿದ ಪ್ರಮಾಣದಲ್ಲಿ ಆಸ್ತಿ ಹೊಂದಿದ್ದ ಪ್ರಕರಣದಲ್ಲಿ ಜಯಲಲಿತಾ ಈಗ ಅಪರಾಧಿ. ಅಪರಾಧ ಎಂದರೆ ಅದಕ್ಕೆ ಶಿಕ್ಷೆಯನ್ನೂ ನೀಡಲಾಗುತ್ತದೆ. ಅಪರಾಧ ಮತ್ತು ಶಿಕ್ಷೆ ಎರಡೂ ನ್ಯಾಯಾಲಯದಲ್ಲಿ ನಿಧರ್ಾರವಾಗುವ ಸಂಗತಿಗಳು. ನಾವು ಒಪ್ಪಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಲಯಕ್ಕೆ ಮಹತ್ವದ ಜಾಗವಿದೆ. ಅಪರಾಧ ಅಪರಾಧವೇ. ಯಾರೇ ಮಾಡಿದರೂ ಅದು ಅಪರಾಧವೇ. ಶಿಕ್ಷೆಯೂ ಹಾಗೆಯೇ. ಎಲ್ಲರಿಗೂ ಒಂದೇ. ಅಪರಾಧಿಗಳು ಶಿಕ್ಷೆಯನ್ನು ಅನುಭವಿಸಲೇ ಬೇಕು. ಈ ಶಿಕ್ಷೆ ಎನ್ನುವುದು ವ್ಯಕ್ತಿಯನ್ನು ತಿದ್ದುತ್ತದೆ; ಮತ್ತೆ ಅವನು ಅಪರಾಧವನ್ನು ಮಾಡದಂತೆ ಎಚ್ಚರಿಸುತ್ತದೆ. ಅವನ ವ್ಯಕ್ತಿತ್ವದಲ್ಲಿ ಮಾಪರ್ಾಟನ್ನು ತರುತ್ತದೆ. ಈ ನಂಬಿಕೆಯಿಂದಲೇ ಶಿಕ್ಷೆಯನ್ನು ನೀಡಲಾಗುತ್ತದೆ.
ನ್ಯಾಯಾಲಯ ನೀಡುವ ಶಿಕ್ಷೆಯ ಆಚೆಗೂ ಇನ್ನೊಂದು ‘ಶಿಕ್ಷೆ’ ಇರುತ್ತದೆ. ಅದು ಅಪರಾಧಿ ತನಗೇ ತಾನೇ ವಿಧಿಸಿಕೊಳ್ಳುವ ಶಿಕ್ಷೆ. ಅಪರಾಧಿ ತನ್ನನ್ನು ತಾನೇ ನೋಡಿಕೊಳ್ಳುವ ಮೂಲಕ ತನ್ನಲ್ಲಿರಬಹುದಾದ ದೋಷಗಳನ್ನು ಸರಿಪಡಿಸಿಕೊಳ್ಳುವುದು. ಜೈಲು ಒಂದರ್ಥದಲ್ಲಿ ಅಪರಾಧಿಯ ಆತ್ಮನಿರೀಕ್ಷೆಯ ಜಾಗ. ತನ್ನ ಸೆಲ್ನಲ್ಲಿ ಏಕಾಂಗಿಯಾಗಿ ಕುಳಿತು, ತನ್ನ ಕೃತ್ಯಗಳನ್ನೆಲ್ಲ ಒಮ್ಮೆ ನೋಡಿ, ತನ್ನ ಪಾತ್ರವನ್ನು ಪರೀಕ್ಷಿಸಿಕೊಂಡು, ತಾನು ಮಾಡಿದ ಕೃತ್ಯಗಳು ಸರಿಯೋ ಅಲ್ಲವೋ ಎಂದು ನಿರ್ಧರಿಸಿ, ತಪ್ಪಾಗಿದ್ದರೆ ಅದನ್ನು ಒಪ್ಪಿಕೊಳ್ಳುವುದು. ಇದಕ್ಕೆ ಎಲ್ಲ ಕವಚಗಳನ್ನೂ ಕಳಚಿ ತಾನು ಬೆತ್ತಲಾಗಿ ನಿಲ್ಲಬೇಕಾಗುತ್ತದೆ. ಅಂದರೆ ಸತ್ಯಕ್ಕೆ ಎದುರು ಬದುರಾಗಿ ನಿಲ್ಲುವುದು; ಸತ್ಯದ ಬೆಳಕಿನಲ್ಲಿ ತನ್ನ ಅಲ್ಪತನವನ್ನು, ಕೆಟ್ಟ ನಡೆಯನ್ನು ಅರಿಯುವುದು; ತನ್ನ ಕುರೂಪವನ್ನೂ ಒಪ್ಪಿಕೊಳ್ಳುವುದು. ಈ ಒಪ್ಪಿಗೆಯ ನಂತರ ತನ್ನನ್ನು ತಾನು ಸರಿಪಡಿಸಿಕೊಳ್ಳುವುದಕ್ಕೆ ಪ್ರಯತ್ನಿಸುವುದು. ಇದೇ ವ್ಯಕ್ತಿಯ ವಿಕಾಸಕ್ಕೆ ದಾರಿಮಾಡಿಕೊಡುವ ವಿಧಾನ.
ಗಾಂಧೀಜಿಯವರಿಗೆ ಈ ಅಪರಾಧ ಮತ್ತು ಶಿಕ್ಷೆಯಲ್ಲಿ ಬಹಳ ವಿಶ್ವಾಸವಿತ್ತು. ವ್ಯಕ್ತಿ, ಸಮುದಾಯ, ರಾಷ್ಟ್ರ, ಜಗತ್ತು ಎಲ್ಲವನ್ನೂ ಈ ಚೌಕಟ್ಟಿನೊಳಕ್ಕೆ ತರಲು ಅವರು ನೋಡುತ್ತಿದ್ದರು. ನ್ಯಾಯಾಲಯ ವಿಧಿಸುವ ಶಿಕ್ಷೆಗಿಂತ, ವ್ಯಕ್ತಿ ತನಗೆ ತಾನೇ ವಿಧಿಸಿಕೊಳ್ಳುವ ಶಿಕ್ಷೆ ಬಹಳ ಮುಖ್ಯವಾದದ್ದು, ಅದು ಅವನನ್ನು ಉತ್ತಮ ಹಾದಿಯಲ್ಲಿ ನಡೆಸುತ್ತದೆ. ವ್ಯಕ್ತಿ ಹೀಗೆ ಬದಲಾದರೆ ಸಮುದಾಯ ಉತ್ತಮಗೊಳ್ಳುತ್ತದೆ; ರಾಷ್ಟ್ರ ವಿಕಾಸವಾಗುತ್ತದೆ ಎಂದು ಗಾಂಧೀಜಿ ಬಲವಾಗಿ ನಂಬಿದ್ದರು.
ಒಂದು ರಾಷ್ಟ್ರದ ಪ್ರಗತಿ ಎಂದರೆ ಅದು ಕೇವಲ ಆಥರ್ಿಕ ಪ್ರಗತಿ, ಕೈಗಾರಿಕೆಗಳ ಪ್ರಗತಿ, ಸಂಪತ್ತಿನ ಪ್ರಗತಿ ಅಲ್ಲ. ಇವೆಲ್ಲವನ್ನೂ ಮೀರಿದ ವ್ಯಕ್ತಿಯ ವಿಕಾಸ. ಇದಕ್ಕೆ ನೈತಿಕ ನೆಲೆಗಟ್ಟು ಬೇಕಾಗುತ್ತದೆ. ಮೊದಲು ಇದಾದರೆ ಉಳಿದದ್ದು ನಂತರ ತಾನೇ ತಾನಾಗಿ ಆಗುತ್ತದೆ. ವ್ಯಕ್ತಿಯ ನೈತಿಕತೆ ರಾಷ್ಟ್ರದ ನೈತಿಕತೆಯಾಗಬೇಕು ಎಂದು ಗಾಂಧೀಜಿ ಹೇಳುತ್ತಿದ್ದರು. ಅವರು ಆಧುನಿಕ ನಾಗರಿಕತೆಯನ್ನು ವಿರೋಧಿಸುತ್ತಿದ್ದುದರ ಹಿಂದೆ ಈ ಚಿಂತನೆ ಇತ್ತು. ಆಧುನಿಕ ನಾಗರಿಕತೆ ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ, ಉತ್ಪಾದನೆ ಇವುಗಳ ಬೆಳವಣಿಗೆಯನ್ನು ಮಾತ್ರ ನೋಡುತ್ತ, ವ್ಯಕ್ತಿಯ ನಿಜವಾದ ವಿಕಾಸವನ್ನೇ ಮರೆತಿರುತ್ತದೆ, ನೈತಿಕ ಪ್ರಶ್ನೆಯನ್ನಂತೂ ಅದು ಕಡೆಗಣಿಸಿರುತ್ತದೆ ಎಂದು ಅವರು ಟೀಕಿಸುತ್ತಿದ್ದರು. ಈ ಕಾರಣಕ್ಕಾಗಿಯೇ ಅವರು ಅದನ್ನು ವಿರೋಧಿಸುತ್ತಿದ್ದರು.

ಅಪರಾಧ ಎನ್ನುವುದನ್ನು ವ್ಯಕ್ತಿಯ ಎಲ್ಲ ಕ್ರಿಯೆಗಳಿಗೂ ವಿಸ್ತರಿಸಲು ಗಾಂಧೀಜಿ ನೋಡುತ್ತಿದ್ದರು. ಹೆಚ್ಚು ತಿನ್ನುವುದೂ ಅಪರಾಧ. ಇದರ ಪರಿಣಾಮವಾಗಿ ಬರುವ ಹೊಟ್ಟೆನೋವನ್ನೂ ಗಾಂಧೀಜಿ ‘ಶಿಕ್ಷೆ’ ಎಂದೇ ಭಾವಿಸುತ್ತಿದ್ದರು. ಹೆಚ್ಚು ತಿಂದ ಅಪರಾಧಕ್ಕಾಗಿ ಹೊಟ್ಟೆನೋವಿನ ಶಿಕ್ಷೆಯನ್ನು ವ್ಯಕ್ತಿ ಅನುಭವಿಸಲೇಬೇಕು. ಇದನ್ನು ಬಿಟ್ಟು ವೈದ್ಯರ ಬಳಿಗೆ ಓಡುವುದು, ವೈದ್ಯರು ಔಷಧಿಯನ್ನು ಕೊಟ್ಟು ಅದನ್ನು ಪರಿಹರಿಸುವುದು ಸರಿಯಾದ ಕ್ರಮ ಅಲ್ಲ. ಹೊಟ್ಟೆನೋವನ್ನು ಅನುಭವಿಸುವವನು ತನಗೆ ಯಾಕಾಗಿ ಹೊಟ್ಟೆನೋವು ಬಂತು ಎಂದು ಯೋಚಿಸುತ್ತಾನೆ. ತಾನು ತಿಂದ ವಸ್ತುಗಳ ಬಗ್ಗೆ ಚಿಂತನೆ ನಡೆಸುತ್ತಾನೆ. ಯಾವುದನ್ನು ತಿನ್ನಬೇಕು, ಎಷ್ಟು ತಿನ್ನಬೇಕು ಇತ್ಯಾದಿ ಹಲವು ಸಂಗತಿಗಳು ಅವನ ಮನಸ್ಸಿನಲ್ಲಿ ಕಡೆಯಲ್ಪಡುತ್ತವೆ. ಹೊಟ್ಟೆನೋವನ್ನು ಅನುಭವಿಸುತ್ತ ಅನುಭವಿಸುತ್ತ ಅವನು ಸಹನೆಯನ್ನೂ ಕಲಿಯುತ್ತಾನೆ-ಇದು ಗಾಂಧೀ ತತ್ವ. ಗಾಂಧೀಜಿ ತಮ್ಮ ಪತ್ನಿ ಅಥವಾ ತಮ್ಮ ಆಶ್ರಮವಾಸಿಗಳು ಅನಾರೋಗ್ಯಕ್ಕೀಡಾದಾಗ ತಾವೇ ಅವರನ್ನು ನೋಡಿಕೊಳ್ಳುತ್ತಿದ್ದರು. ತಮಗೆ ಗೊತ್ತಿರುವ, ಸ್ಥಳೀಯವಾಗಿ ಸಿಕ್ಕುವ ನಾರುಬೇರುಗಳನ್ನು ಬಳಸಲು ಅವರು ನೋಡುತ್ತಿದ್ದರು. ರೋಗದ ಕಾರಣಗಳನ್ನು ಹುಡುಕುತ್ತಿದ್ದರು. ಅದು ಮತ್ತೆ ಬರದಂತೆ ನೋಡಿಕೊಳ್ಳಲು ರೋಗಿಗೆ ಅರಿವು ಮೂಡಿಸುತ್ತಿದ್ದರು.
ರೋಗ ಎನ್ನುವುದು ಕೇವಲ ದೇಹಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಮನಸ್ಸು ಮತ್ತು ದೇಹ ಎರಡಕ್ಕೂ ಸಂಬಂಧಿಸಿರುತ್ತದೆ. ಅಷ್ಟೇ ಅಲ್ಲ ತಾನು ಬದುಕುವ ಪರಿಸರ, ಪ್ರಕೃತಿಯೊಂದಿಗಿನ ತನ್ನ ಸಂಬಂಧ, ಗಾಳಿ, ನೀರು, ಪ್ರಾಣಿ, ಪಶು ಪಕ್ಷಿಗಳ ಜೊತೆಗಿನ ಸಖ್ಯ ಇತ್ಯಾದಿ ಎಲ್ಲದರ ಜೊತೆ ಸಂಬಂಧವಿರುತ್ತದೆ. ಇದನ್ನೆಲ್ಲ ಒಟ್ಟಿಗೆ ಗ್ರಹಿಸಿದಾಗಲೇ ನಿಜವಾದ ಪರಿಹಾರ ದೊರೆಯುತ್ತದೆ. ಇಲ್ಲವಾದರೆ ತಾತ್ಕಾಲಿಕ ಶಮನ ಮಾತ್ರ ಸಿಕ್ಕಬಹುದು. ಆಧುನಿಕ ವೈದ್ಯ ಇದನ್ನೆಲ್ಲ ಗಮನಿಸುವ ಗೋಜಿಗೇ ಹೋಗುವುದಿಲ್ಲ. ಅವನ ವಿಶೇಷ ಪರಿಣತಿ ಎನ್ನುವುದು ಮನುಷ್ಯನ ದೇಹದ ಪ್ರತಿಯೊಂದು ಅಂಗವನ್ನೂ ಬೇರ್ಪಡಿಸಿ ನೋಡಲು ಬಯಸುತ್ತದೆ. ಒಂದು ಅಂಗಕ್ಕೆ ವಿಶೇಷ ಗಮನ ನೀಡುವ ಆಧುನಿಕ ವೈದ್ಯ ಮನುಷ್ಯನ ದೇಹದ ಇತರ ಅಂಗಗಳ ಗೊಡವೆಗೇ ಹೋಗುವುದಿಲ್ಲ. ಒಂದು ಅಂಗವೇ ಮುಖ್ಯವಾಗಿ, ಉಳಿದೆಲ್ಲ ಅಂಗಗಳನ್ನು ಅವನು ಉಪೇಕ್ಷಿಸುತ್ತಾನೆ. ರೋಗ ಯಾಕಾಗಿ ಬಂತು ಎನ್ನುವುದರ ಬಗೆಗೂ ಅವನಿಗೆ ಹೆಚ್ಚು ಆಸಕ್ತಿ ಇರುವುದಿಲ್ಲ- ಎಂದೆಲ್ಲ ಗಾಂಧೀಜಿ ಯೋಚಿಸುತ್ತಿದ್ದರು.
ಜಯಲಲಿತಾ ಈಗ ನೆಲದ ಮೇಲೆ ನಿಂತಿದ್ದಾರೆ. ಅವರಿಗೆ ಈ ಗಾಳಿ, ನೀರು, ಮಣ್ಣುಗಳ ನಿಜರೂಪ ಇದೀಗ ತಿಳಿಯುತ್ತಿದೆ. ಜೈಲುಗಳಲ್ಲಿ ಸಾಮಾನ್ಯ ಕೈದಿಗಳಿಗೆ ಕೊಡುತ್ತಿರುವ ಆಹಾರ ಯಾವ ಬಗೆಯದು, ಅವರು ಅಲ್ಲಿ ಗಂಟೆಗಳನ್ನು, ದಿನಗಳನ್ನು, ಹಗಲು ರಾತ್ರಿಗಳನ್ನು ಹೇಗೆ ಕಳೆಯುತ್ತಿದ್ದಾರೆ, ಅಲ್ಲಿನ ಏಕಾಂತ ಅವರನ್ನು ಕೊಲ್ಲುತ್ತಿದೆಯೇ ಅಥವಾ ಚಿಂತನೆಯ ದಾರಿಯಲ್ಲಿ ನಡೆಸುತ್ತಿದೆಯೇ? ಸಮುಹದ ಜೊತೆಯಲ್ಲಿ ವ್ಯಕ್ತಿ ಬದುಕುವುದು ಹೇಗೆ, ದುಡಿಯುವುದು ಹೇಗೆ-ಇತ್ಯಾದಿ ಹಲವಾರು ಸಂಗತಿಗಳನ್ನು ಅರಿಯಲು ಅದ್ಭುತ ಅವಕಾಶ ಅವರಿಗೆ ದೊರೆತಿದೆ. ಜೈಲುಗಳು, ಅಲ್ಲಿನ ವ್ಯವಸ್ಥೆ, ಅಧಿಕಾರ ಮತ್ತು ಅದರ ದರ್ಪ, ಸಕರ್ಾರ ನೋಡಿಕೊಳ್ಳುತ್ತಿರುವ ಶಾಲೆಗಳು, ಆಸ್ಪತ್ರೆಗಳು, ಸಾರಿಗೆ ವ್ಯವಸ್ಥೆ ಇತ್ಯಾದಿ ನೂರಾರು ಜೈಲುಗಳಲ್ಲಿ ಈ ದೇಶದ ಸಾಮಾನ್ಯ ಪ್ರಜೆ ಹೇಗೆ ದಿನಗಳನ್ನು ದೂಡುತ್ತಿದ್ದಾನೆ ಎಂಬುದನ್ನು ಚಿಂತಿಸಲು, ತಳಮಟ್ಟ ಶೋಧಿಸಲು ಜಯಲಲಿತಾ ಅವರಿಗೆ ಇದಕ್ಕಿಂತ ಒಳ್ಳೆಯ ಅವಕಾಶ ಇನ್ನೊಂದು ಸಿಕ್ಕಲಾರದು.
ಅಪಾರ ಸಂಪತ್ತನ್ನು ಕೂಡಿ ಹಾಕಿದ ಜಯಲಲಿತಾ ಅವರಿಗೆ ಈಗ ಜೈಲಿನಲ್ಲಿ ಒಂದು ಸರಿಯಾದ ಕುಚರ್ಿಯನ್ನು (ಬೆನ್ನು ನೋವಿನ ಕಾರಣದಿಂದ) ಇಟ್ಟುಕೊಳ್ಳುವ ಅವಕಾಶವೂ ಇಲ್ಲ. ನಾಲ್ಕು ಗೋಡೆಗಳ ಆಚೆಗಿನ ಪ್ರಪಂಚವನ್ನು ನೋಡುವ ಸ್ವಾತಂತ್ರ್ಯವೂ ಅವರಿಗಿಲ್ಲ. ತಮ್ಮ ನೆತ್ತಿಯ ಮೇಲೆ ಕಾಣುವ ಆಕಾಶವಷ್ಟೆ ಅವರ ಪಾಲಿಗೆ ಉಳಿದಿರುವ ಪ್ರಕೃತಿ. ಈ ನಿಜ ಸಂಗತಿಗಳು ಜಯಲಲಿತಾ ಅವರನ್ನು ಅಧ್ಯಾತ್ಮದ ಚಿಂತನೆಗೆ ಪ್ರೇರೇಪಿಸಬೇಕು.
ರಾಜಕೀಯ ಮತ್ತು ಧರ್ಮ ಒಂದರೊಳಗೊಂದು ಬೆರೆತಿರಬೇಕು ಎಂದು ಗಾಂಧೀಜಿ ಬಯಸಿದ್ದರು. ಧರ್ಮದ ನೆಲೆಗಟ್ಟಿನ ಮೇಲೆ ರೂಪಿಸುವ ರಾಜಕೀಯ ನಿಜವಾದ ವಿಕಾಸಕ್ಕೆ ದಾರಿಮಾಡಿಕೊಡುತ್ತದೆ. ಇದನ್ನು ಜಯಲಲಿತಾ ಮಾತ್ರವಲ್ಲ ಎಲ್ಲ ರಾಜಕಾರಣಿಗಳೂ ಅರ್ಥಮಾಡಿಕೊಳ್ಳಬೇಕಾಗಿದೆ.
ಗಾಂಧೀ, ನೆಹರೂ ಸೇರಿದಂತೆ ನಮ್ಮ ಅನೇಕ ನಾಯಕರು ಜೈಲುವಾಸಕ್ಕೆ ಹಲವು ಅರ್ಥಗಳನ್ನು ತಂದರು. ಜೈಲಿನಲ್ಲಿರಲಿ, ಹೊರಗಿರಲಿ ಗಾಂಧೀಜಿ ತಮ್ಮ ನಿತ್ಯದ ಕೆಲಸಕಾರ್ಯಗಳನ್ನು ತಪ್ಪದೆ ನಿರ್ವಹಿಸುತ್ತಿದ್ದರು. ಅವರ ಚಿಂತನೆಗಳು, ಲೇಖನಗಳು ಅಲ್ಲಿ ರೂಪಗೊಂಡದ್ದೇ ಹೆಚ್ಚು. ನೆಹರೂ ಕೂಡಾ ತಮ್ಮ ಕೃತಿಗಳನ್ನು ರಚಿಸಿದ್ದು ಜೈಲಿನಲ್ಲೇ.
ಅನೇಕ ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಜಯಲಲಿತಾ ಅವರಿಗೆ ಜೈಲುವಾಸ ಅತ್ಯಂತ ಕಠೋರ ಪರೀಕ್ಷೆಯಾಗಬಹುದು. ಆದರೆ ದೃಢವಾದ ಮನಸ್ಸು ಮತ್ತು ಅದರ ಸಂಕಲ್ಪ ದೇಹವನ್ನು ನಿಯಂತ್ರಿಸಬಲ್ಲದು; ಅವರ ಆರೋಗ್ಯವನ್ನು ಸುಧಾರಿಸಲೂ ಬಲ್ಲದು. ತಮ್ಮ ಬದುಕಿನಲ್ಲಿ ಉದ್ಭವವಾಗಿರುವ ಎಲ್ಲ ಸಮಸ್ಯೆಗಳನ್ನು ಎದುರಿಸುವ ಚೈತನ್ಯವನ್ನು ಈ ಜೈಲುವಾಸ ತಂದುಕೊಡಬಹುದು. ಹೊಸ ವ್ಯಕ್ತಿಯಾಗಿ ಅವರು ಹೊರಬರುವುದಕ್ಕೂ ಇದು ನೆರವಾಗಬಹುದು. ಗಾಂಧೀ ತತ್ವಗಳಲ್ಲಿ ನಂಬಿಕೆ ಇಡುವುದು ಸಾಧ್ಯವಾದರೆ ಅವರ ಬದುಕಿಗೊಂದು ಹೊಸ ತಿರುವು ಸಿಕ್ಕಬಹುದು.
ಸೌಜನ್ಯ : ಸಂಯುಕ್ತ ಕರ್ನಾಟಕ

‍ಲೇಖಕರು G

6 October, 2014

ನಿಮಗೆ ಇವೂ ಇಷ್ಟವಾಗಬಹುದು…

12 Comments

  1. Prabhakar M. Nimbargi

    ಗಾಂಧೀ ತತ್ವಗಳಲ್ಲಿ ನಂಬಿಕೆ ಇಡುವುದು ಸಾಧ್ಯವಾದರೆ ಅವರ ಬದುಕಿಗೊಂದು ಹೊಸ ತಿರುವು ಸಿಕ್ಕಬಹುದು.
    Gandhian Philosophy and Jayalalita! What a combination have you proposed?

  2. C. N. Ramachandran

    ಪ್ರಿಯ ಜಿ. ಪಿ. ಅವರಿಗೆ: ನಿಮ್ಮ ಲೇಖನ ಅಪರಾಧ ಮತ್ತು ಶಿಕ್ಷೆ ಇವುಗಳನ್ನು ನೈತಿಕ ನೆಲೆಯಲ್ಲಿ ತುಂಬಾ ಚೆನ್ನಾಗಿ ಚರ್ಚಿಸುತ್ತದೆ;ನಿಮ್ಮ (ಗಾಂಧಿಜಿಯವರ) ನಿಲುವನ್ನೇ ಡಾಸ್ಟಾಯೆವ್ಸ್ಕಿಯ “ಕ್ರೈಮ್ ಅಂಡ್ ಪನಿಶ್‍ಮೆಂಟ್” ಕಾದಂಬರಿ ಅದ್ಭುತವಾಗಿ ನಾಟ್ಯೀಕರಿಸುತ್ತದೆ.
    ಈ ಸಂದರ್ಭದಲ್ಲಿ, ವಾಸ್ತವದ ವ್ಯಕ್ತಿಗಳನ್ನು ಮರೆತು ಹೇಳಬಹುದಾದ ಒಂದು ಸಂಗತಿಯಿದೆ. ಜಯಲಲಿತಾ ಅವರ ಶಿಕ್ಷೆ ಪ್ರಕಟವಾದಾಗ, ಈ ವಿಷಯವನ್ನೇ ನಾನು (ಈಗ ಅಮೆರಿಕಾದಲ್ಲಿರುವ) ನನ್ನ ಮಗನೊಡನೆ ಚರ್ಚಿಸುತ್ತಿದ್ದೆ; ಆಗ ಅವನು ಹೇಳಿದ ಒಂದು ಮಾತು ನನ್ನನ್ನು ಬೆಚ್ಚಿಬೀಳಿಸಿತು. ಅಮೆರಿಕಾದ ಅತ್ಯಂತ ಪ್ರತಿಭಾಶಾಲಿ ಮಹಿಳಾ ಪತ್ರಕರ್ತೆ ಮಾರ್ಥಾ ಎಂಬುವವಳ ಉದಾಹರಣೆಯನ್ನು ಕೊಡುತ್ತಾ, ಅವನು ಹೇಳಿದ: “Be it in the US or India; a woman found guilty is more harshly punished than a man found guilty” (’ಭಾರತವಿರಲಿ ಅಮೆರಿಕಾ ಇರಲಿ, ನಮ್ಮ ಸಮಾಜ ಅಪರಾಧಿ ಸ್ತ್ರೀಯನ್ನು ಅಪರಾಧಿ ಪುರುಷನಿಗಿಂತ ಹೆಚ್ಚು ಕಠೋರವಾಗಿ ಶಿಕ್ಷಿಸುತ್ತದೆ’). ನನಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಸಿ. ಎನ್. ರಾಮಚಂದ್ರನ್

  3. Anonymous

    ಪ್ರಿಯ ರಾಮಚಂದ್ರನ್‍,
    ನಿಮ್ಮ ಅಭಿಪ್ರಾಯಕ್ಕಾಗಿ ವಂದನೆಗಳು.
    ನಿಮ್ಮ ಮಗ ಹೇಳಿದ ಮಾತುಗಳು ವಾಸ್ತವಕ್ಕೆ ಹತ್ತಿರವಿದ್ದರೆ! ಒಂದು ಕ್ಷಣ ಆಘಾತವೇ ಆಯಿತು. ನಮ್ಮ ಸಮಾಜ, ಹಾಗೆಯೇ ಅಮೆರಿಕನ್‍ ಸಮಾಜ, ಪುರುಷ ಪ್ರಧಾನ ಮಾತ್ರವಲ್ಲ, ಪುರುಷ ದಬ್ಬಾಳಿಕೆಯ ಸಮಾಜಗಳೇ. ನಾವೆಷ್ಟು ಕ್ರೂರಿಗಳು ಎಂದು ವ್ಯಥೆಯಾಯಿತು.ಶಿಕ್ಷೆ ಕೊಡುವ ನ್ಯಾಯಾಲಯ ಕಾನೂನಿನ ಚೌಕಟ್ಟಿನಲ್ಲಿಯೇ ಇರುತ್ತದೆ ಎಂಬುದು ನಿಜವಾದರೂ, ನ್ಯಾಯಾಧೀಶರ ಮನಸ್ಸು ರೂಪಗೊಂಡಿರುವುದು ಪುರುಷ ಪ್ರಧಾನ ಸಮಾಜದ ಚಿಂತನೆಯ ನೆಲೆಗಟ್ಟಿನಲ್ಲಿಯೇ ಎಂಬುದನ್ನು ಅಲ್ಲಗಳೆಯುವುದು ಕಷ್ಟ.
    ಈ ದಿಕ್ಕಿನಲ್ಲಿ ಚಿಂತಿಸುವುದಕ್ಕೆ ನೆರವಾದವು ನಿಮ್ಮ ಮಗನ ಮಾತುಗಳು. ಅವರಿಗೆ ವಂದನೆಗಳು.
    -ಬಸವರಾಜು, ಜಿಪಿ.

  4. ಎಂ.ಸಿ.ನಿಂಗಪ್ಪ.ಹಟ್ಟಿ ಚಿನ್ನದ ಗಣಿ

    ಮನುಷ್ಯ ಬದಲಾಗುವದು, ತಾನು ಮಾಡಡುತ್ತಿರುವ ಸರಿಯಾದದ್ದಲ್ಲದ ಕೆಲಸದಬಗ್ಗೆ ಪಾಪ ಪ್ರಜ್ಞೆ ಕಾಡಿದಾಗಲೆ.
    ಮನುಷ್ಯ ಈಗ ತನ್ನನ್ನು ತಾನು ಸ್ವಯಂ ವಿಮರ್ಶೆ ಮಾಡಿಕೊಳ್ಳುವದನ್ನು ಮರೆತಿದ್ದಾನೆ. ಜಾಗತಿಕರಣದ ಕಾಲಘಟ್ಟದಲ್ಲಿ ಅವನು ಆಲೋಚಿಸುವ ವಿಧಾನ ವೂ ಬದಲಾಗಿದ. ಹಾಗಗಿ ತನ್ನ ತಪ್ಪು ನಡೆಗಳನ್ನು ಸರಿ ಪಡಿಸಿಕೊಂಡು ಸರಿದಾರಿಯಲ್ಲಿ ನಡಿಯಲೊಲ್ಲ.ಸಂಪತ್ತನ್ನು ಇನ್ನಷ್ಟು ಮತ್ತಷ್ಟು ಹೆಚ್ಚಿಸಿಕೊಳ್ಳುವದೆ ಮುಖ್ಯವಾಗುತ್ತಿದೆ

  5. lalithasiddabasavaiah

    you r right sir,ಅದಕ್ಕೆ ಕಾರಣ ಸಮಾಜ ಹೆಂಗಸರು ಯಾವಾಗಲು ಪ್ರಶ್ನಾತೀತರಾಗೆ ಇರಬೇಕೆಂದು ಬಯಸುವುದು. ನಾನು ಜಿಲ್ಲಾಪಂಚಾಯಿತಿಯಲ್ಲಿ ಕೆಲಸ ಮಾಡುವಾಗ ಮೊದಲ ಸಲ ಹೆಂಗಸೊಬ್ಬರು ಅಧ್ಯಕ್ಷರಾದರು. ಯಥಾಪ್ರಕಾರ ಸ್ಥಳೀಯ ರಾಜಕಾರಣದ ಒತ್ತಡಕ್ಕೆ ಅವರೂ ಬಾಗಿದರು. ಆಗ ಅದೇ ಹಿಂದೆ ಆಗಿಹೋದ ಮೂವರು ಗಂಡಸು ಅಧ್ಯಕ್ಷರ ಅಡಾವುಡಿಗಳನ್ನ ಮರೆತೆ ಬಿಟ್ಟ ಜನ ಮಾತಾಡಿದ್ದು ಈ ರೀತಿ – ‘ಅಯ್ಯೊ ಹೆಂಗಸರೂ ದುಡ್ಡ್ ಹೊಡ್ಯಕ್ಕೆ ನಿಂತ್ ಬಿಟ್ಟ್ರೆ ಹೆಂಗ್ಯಪ್ಪಾ?’
    ಅಂದರೆ ಪುರಷರು ಹೊಡೆದರೆ ಅಂಥ ವಿಷ್ಯ ಅಲ್ಲ, ಆದರೆ ಹೆಂಗಸೊಬ್ಬಳು ಅಧ್ಯಕ್ಷೆಯಾದ ಮೇಲೆ ಇಕ್ಕುಳದಿಂದಲೂ ದುಡ್ಡು ಮುಟ್ಟಬಾರದು,ಪರಮ ನೀತಿವಂತ ಳಾಗಿರಬೇಕು. ಅದಕ್ಕೆ ಬೇಕಾದ ತಳಹದಿಯನ್ನೇನಾದರು ಹಿಂದಿನ ಅಧ್ಯಕ್ಷರುಗಳು ಹಾಕಿಕೊಟ್ಟಿದ್ದಾರೆಯೆ? ಬೇಡ ಹೋಗಲಿ ಈಕೆಯೆ ಸನ್ಮಾರ್ಗವನ್ನು ಆರಂಭಿಸಿದಳುಂತ ಇಟ್ಟುಕೊಂಡರೆ ಆರು ದಿನ ಆಕೆಯನ್ನು ಕುರ್ಚಿಯ ಮೇಲೆ ಬಿಟ್ಟಾರೆ ? ಇಂಥ ವಾಸ್ತವ ವಿಷಯಗಳ ಪರಾಮರ್ಶೆ ಯಾರಿಗೂ ಬೇಡ, ಹೆಂಗುಸು ಹೀಗೆ ಮಾಡಿದ ಅಪರಾಧವೇ ದೊಡ್ಡದಾಯಿತು. ಆಮೇಲೆ ಪಕ್ಷವೂ ಆಕೆಯನ್ನು ಶಿಕ್ಷಿಸಿತು! ಆ ಹಿಂದಿನ ಮೂವರು ಅಧ್ಯಕ್ಷರೂ ಆರಾಮವಾಗಿ ಈಗಲೂ ಪಕ್ಷಸುಖ ಅನುಭವಿಸುತ್ತಲೆ ಇದ್ದಾರೆ. ಸೀಸರ್ ಅಧ್ವಾನವಾದರು ಅಡ್ಡಿಯಿಲ್ಲ ಅವನ ಹೆಂಡತಿ ಪ್ರಶ್ನಾತೀತವಾಗಿ “ಯಾವಾಜ್ಜೀವವೂ” ಇರಬೇಕು. ಇದು ನಮ್ಮ ಮನಸ್ಥಿತಿ.ಜಯಲಲಿತಾ ಅವರ ಮೇಲಂತೂ ನಮ್ಮ ಮಾಧ್ಯಮಗಳು ಏಕಮುಖವಾಗೆ ಟೀಕಿಸಿವೆ.

  6. Anonymous

    ಅನೇಕ ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಜಯಲಲಿತಾ ಅವರಿಗೆ ಜೈಲುವಾಸ ಅತ್ಯಂತ ಕಠೋರ ಪರೀಕ್ಷೆಯಾಗಬಹುದು. ಆದರೆ ದೃಢವಾದ ಮನಸ್ಸು ಮತ್ತು ಅದರ ಸಂಕಲ್ಪ ದೇಹವನ್ನು ನಿಯಂತ್ರಿಸಬಲ್ಲದು; ಅವರ ಆರೋಗ್ಯವನ್ನು ಸುಧಾರಿಸಲೂ ಬಲ್ಲದು. ತಮ್ಮ ಬದುಕಿನಲ್ಲಿ ಉದ್ಭವವಾಗಿರುವ ಎಲ್ಲ ಸಮಸ್ಯೆಗಳನ್ನು ಎದುರಿಸುವ ಚೈತನ್ಯವನ್ನು ಈ ಜೈಲುವಾಸ ತಂದುಕೊಡಬಹುದು. ಹೊಸ ವ್ಯಕ್ತಿಯಾಗಿ ಅವರು ಹೊರಬರುವುದಕ್ಕೂ ಇದು ನೆರವಾಗಬಹುದು. ಗಾಂಧೀ ತತ್ವಗಳಲ್ಲಿ ನಂಬಿಕೆ ಇಡುವುದು ಸಾಧ್ಯವಾದರೆ ಅವರ ಬದುಕಿಗೊಂದು ಹೊಸ ತಿರುವು ಸಿಕ್ಕಬಹುದು…ultimate…

  7. kvtirumalesh

    ಶ್ರೀ ಬಸವರಾಜು
    ನಿಮ್ಮ ತಾತ್ವಿಕ ಮಾತುಗಳು ಚರ್ಚಾತೀತವಾಗಿವೆ. ಆದರೆ ಅಧ್ಯಾತ್ಮ ಯಾಕೆ ಲೇಖನದಲ್ಲಿ ಬಂತೋ ಗೊತ್ತಾಗುವುದಿಲ್ಲ. ಸಾಮಾಜಿಕ ಮನುಷ್ಯನಿಗೂ ಅಧ್ಯಾತ್ಮಕ್ಕೂ ಏನು ಸಂಬಂಧ? ಜಯಲಲಿತ ಯಾವ ಅಧ್ಯಾತ್ಮವನ್ನೂ ಮಾಡಬೇಕಾಗಿಲ್ಲ. ತನ್ನನ್ನು ಪ್ರೀತಿಸುವ ಜನ ಕೈಬಿಡುವುದಿಲ್ಲ ಎಂಬ ಒಂದೇ ಒಂದು ನಂಬಿಕೆ ಅವರಿಗೆ ಇರುತ್ತಿದ್ದರೆ ಸ್ವಂತಕ್ಕೆ ಸಂಪತ್ತು ಕೂಡಿಹಾಕುವ ಯೋಚನೆಯೇ ಬರುತ್ತಿರಲಿಲ್ಲ. ತಮಿಳು ನಾಡಿನ ಅವರನ್ನು ಆರಾಧಿಸುತ್ತಾರೆ; ಆಕೆಗೋಸ್ಕರ ಏನು ಮಾಡಲೂ ತಯಾರು — ಆ ಜನ ಮುಗ್ಧರು. ಇ‍ಷ್ಟೊಂದು ಪ್ರೀತಿಯ ಮುಂದೆ ಜಯಲಲಿತಗೆ ಇನ್ನೇನು ಬೇಕಿತ್ತು? ನೀವಂದಂತೆ ಸ್ವವಿಮರ್ಶೆಗೆ ಇದೊಂದು ಅವಕಾಶ; ಆಕೆಯ ಉದಾಹರಣೆ ಮೂಲಕ ನಮಗೂ; ಯಾಕೆಂದರೆ ವ್ಯಕ್ತಿಯೊಬ್ಬನ ಪಾಪದಿಂದ ಇತರರೇನೂ ಮುಕ್ತರಲ್ಲ. ಜಯಲಲಿತ ವಿದ್ಯಾವಂತೆ. ಒಳ್ಳೇ ಪುಸ್ತಕಗಳನ್ನು ಓದಲಿ–ಸಾಹಿತ್ಯ, ವಿಜ್ಞಾನ, ಕಲೆ, ಚರಿತ್ರೆ ಇತ್ಯಾದಿ. ಇನ್ನು ಈ ಅಧ್ಯಾತ್ಮ ಎನ್ನುವುದು ನನ್ನ ಸಮಕಾಲೀನ ಲೇಖಕರ ಅಫೀಮಾಗಿಬಿಟ್ಟಿದೆ; ಇದು ತಮಗೇ ಸಾಲದು ಎಂಬಂತೆ ಇತರರಿಗೂ ತಿನಿಸುತಿದ್ದಾರೆ. ಅಧ್ಯಾತ್ಮದಷ್ಟು ಆತ್ಮವಂಚನೆ ಇನ್ನೊಂದಿಲ್ಲ.
    ಗಾಂಧಿಜಿಯ ವಿಷಯಕ್ಕೆ ಬಂದರೆ, ಅವರ ಕಾಲಕ್ಕೆ ಸರಿಯಾದುದು ನಂತರದ ಕಾಲಕ್ಕೂ ಸರಿಯೆನಿಸಬೇಕಾದ್ದಿಲ್ಲ. ಗಾಂಧಿಯ ಅರ್ಥಶಾಸ್ತ್ರದಂತೆ ಇಂದು ಯಾವ ಸಮಾಜವೂ ಬದುಕಲಾರದು. ಗಾಂಧಿಯ ಹೆಸರಿನಲ್ಲಿ ಹಳ್ಳಿ ಮತ್ತು ಬುಡಕಟ್ಟು ಜನಾಂಗಗಳನ್ನು ರೊಮಾಂಟಿಕ್ ಆಗಿ ನೋಡುವ ಪಟ್ಟಣಿಗರದೊಂದು ಆಗ್ರಹವೊಂದಿದೆ; ಆದರೆ ಅಲ್ಲಿಯೂ ಎಂಥಾ ಕ್ರೌರ್ಯ ಇದೆ ಎಂದು ಹೋಗಿ ನೋಡಿ. ಗಾಂಧಿಯನ್ನು ತುಂಬಾ ಮೆಚ್ಚುತ್ತಿದ್ದ ಅನಂತಮೂರ್ತಿಯವರು ಇಳಿಗಾಲದಲ್ಲಿ ಬದುಕಿದ್ದು ಡಯಾಲಿಸಿಸ್ ನಿಂದ. (ಅನಂತಮೂರ್ತಿಯವರ ಕಾಯಿಲೆಗೆ ಅವರ ಜೀವನಕ್ರಮವೇ ಕಾರಣ ಎಂದು ವಾದಿಸಬಹುದು; ಆದರೆ ಯಾವುದೇ ಚಟಗಳಿಲ್ಲದವರಿಗೂ ಸಕ್ಕರೆ ಕಾಯಿಲೆ ಬರುತ್ತದೆ!) ನಾನೂ ಗಾಂಧಿಯ ಅಭಿಮಾನಿಯೇ; ಅವರ ಆತ್ಮಚರಿತ್ರೆ ಓದಿ ನನಗ ಕಣ್ಣೀರು ಬಂದಿತ್ತು. ಆದರೆ ಗಾಂಧಿಯಿಂದ ನಾನು ಕಲಿತುಕೊಂಡ ಹಲವು ಸಂಗತಿಗಳಲ್ಲಿ (ಅಹಿಂಸೆ, ಸರಳತೆ, ಸತ್ಯ ಇತ್ಯಾದಿ) ವಿಮರ್ಶಾ ವಿಧಾನವೂ ಒಂದು. ಪ್ರಶ್ನಾತೀತವಾಗಿ ಯಾವುದನ್ನೂ ಸ್ವೀಕರಿಸದಿರೋಣ.
    ಕೆ.ವಿ. ತಿರುಮಲೇಶ್

  8. Anonymous

    ಶ್ರೀ ತಿರುಮಲೇಶ್‍ ಅವರಿಗೆ,
    ಗಾಂಧೀಜಿಯವರ ಸಮಗ್ರ ಚಿಂತನೆಯನ್ನು ಕಡೆಗಣಿಸಿ, ರಾಷ್ಟ್ರವನ್ನು ಮುನ್ನಡೆಸಲು ನೋಡಿದ ನೆಹರೂ ಅವರದು ತಪ್ಪು ಹೆಜ್ಜೆ ಎನ್ನುವುದು ಈಗ ನಮಗೆಲ್ಲ ಸ್ಪಷ್ಟವಾಗಿದೆ ಎಂದೇ ನನ್ನ ಭಾವನೆ. ಇದೇ ತಪ್ಪನ್ನು ಅನೇಕ ರಾಷ್ಟ್ರಗಳು ಮಾಡಿವೆ. ಆಧುನಿಕ ನಾಗರಿಕತೆಯೇ ನಮ್ಮ ಆದರ್ಶವೆಂದ ನಂಬಿ, ಅಮೆರಿಕದಂಥ ಒಂದೆರಡು ರಾಷ್ಟ್ರಗಳನ್ನೇ ಮಾದರಿ ಎಂದು ಭಾವಿಸಿ ಅದೇ ದಿಕ್ಕಿನಲ್ಲಿ ಸಾಗಿದ ರಾಷ್ಟ್ರಗಳ ಸ್ಥಿತಿ ಏನಾಗಿದೆ ಎಂಬುದೂ ನಮಗೆ ಗೊತ್ತು. ಪ್ರತಿಯೊಂದು ಹಳ್ಳಿಯೂ ಸ್ವಾವಲಂಬನೆಯಲ್ಲಿ ಬಾಳಬೇಕೆಂಬ ಗಾಂಧೀಜಿ ಕನಸು ಅನುಸರಿಸಲಾಗದ ಕಠಿಣ ಮಾರ್ಗವೇನೂ ಆಗಿರಲಿಲ್ಲ. ಆದರೆ, ಆ ದಿಕ್ಕಿನಲ್ಲಿ ಯೋಚಿಸದೇ ಬೇರೊಂದು ದಾರಿಯನ್ನು ಹಿಡಿದ ನಮಗೆ ಈಗ ಹಿಂದಕ್ಕೆ ಹೋಗುವುದು ಅಸಾಧ್ಯವಾಗಿದೆ, ಅಷ್ಟೆ.
    -ಬಸವರಾಜು, ಜಿಪಿ

    • kvtirumalesh

      ಶ್ರೀ ಬಸವರಾಜು
      ನಿಮ್ಮ ಚಿಂತನೆ ಅರ್ಥವಾಗುತ್ತದೆ, ಆದರೆ ಪ್ರಾಯೋಗಿಕವಲ್ಲ. ಕಾರಣವೆಂದರೆ, `ಸ್ವಾವಲಂಬನೆ’ ಎಂಬ ಕಲ್ಪ್ಪನೆಯ ಕುರಿತಾದ ಗೊಂದಲ. ಹಿಂದೆ ಅಂಥದೊಂದು ಕಾಲವಿತ್ತು ಅನ್ನುತ್ತಾರೆ: ಪ್ರತಿ ಹಳ್ಳಿಗೂ ಒಬ್ಬರು ವೈದ್ಯರು, ಒಬ್ಬರು ಪುರೋಹಿತರು, ಜ್ಯೋತಿಷಿ, ಕುಂಬಾರ, ಕ್ಷೌರಿಕ, ಬಡಗಿ, ದರ್ಜಿ ಮುಂತಾಗಿ. ಇಲ್ಲೂ ಕೂಡ ಸ್ವಾವಲಂಬನೆಯೇನೂ ಇಲ್ಲ. ಪರಿಪೂರ್ಣ ಸ್ವಾವಲಂಬನೆಯೆಂದರೆ ಮನುಷ್ಯ ಇತರ ಯಾರನ್ನೂ ಅವಲಂಬಿಸದೇ ಇರುವುದು. ಏಕಾಕಿಯಾಗಿರೋದು. ಅದು ಯಾಕೆ ಸಾಧ್ಯವಾಗಿಲ್ಲ? ಅದೇ ಕಾರಣಕ್ಕೆ ಯಾವುದೇ ಘಟಕವೂ (ಹಳ್ಳಿಯಾಗಲಿ ದಿಲ್ಲಿಯಾಗಲಿ) `ಸ್ವಾವಲಂಬಿತ’ವಾಗಿರೋದು ಸಾಧ್ಯವಿಲ್ಲ. ಒಂದು ದೇಶ ಇನ್ನೊಂದು ದೇಶವನ್ನು ಯಾವ ಯಾವುದೋ ಕಾರಣಕ್ಕೆ ಅವಲಂಬಿತವಾಗಿರಬೇಕಾಗುತ್ತದೆ. ಕೃಷಿಭೂಮಿಯೇ ಇಲ್ಲದ ದೇಶಗಳಿವೆ; ಅವು ಆಹಾರಕ್ಕೆ ಬೇರೆ ದೇಶಗಳನ್ನು ಅವಲಂಬಿಸುತ್ತವೆ; ಪ್ರತಿಯಾಗಿ ಆ ದೇಶ `ಕೊಳ್ಳುವ ಶಕ್ತಿ’ಯನ್ನು ಹೊಂದಬೇಕಾಗುತ್ತದೆ–ಎಂದರೆ ಕೈಗಾರಿಕೆ ಮೂಲಕವೋ ಇನ್ನು ಯಾವುದೇ ಬೇರೆ ದಾರಿಯಿಂದಲೋ. ಕೇರಳದಿಂದ ಬರುವ ದಾದಿಯರ ಉದಾಹರಣೆ ನಿಮಗೆ ಗೊತ್ತಿರಬಹುದು; ಕೇರಳಕ್ಕೆ ಈ ದಾದಿಯರ ಮೂಲಕ ಸಾಕಷ್ಟು ಹಣ ಬರುತ್ತದೆ. ಭಾರತದ ಅನೇಕ ಶಿಕ್ಷಕರು ವಿದೇಶಗಳ್ಲ್ಲಿ ದುಡಿಯುತ್ತಿದ್ದಾರೆ. ಶಿಕ್ಷಕರು ಮಾತ್ರವಲ್ಲ, ಗಾರೆಗೆಲಸದವರು, ಬಡಗಿಗಳು, ವಾಹನ ಚಾಲಕರು ಮುಂತಾಗಿ.ಇವರನ್ನೆಲ್ಲ ಹಳ್ಳಿಗಳಲ್ಲೇ ಕೂತುಕೊಳ್ಳಿ ಎಂದರೆ ಹೇಗೆ?
      ಇನ್ನು ಇಂಟೆಲೆಕ್ಚುವಲ್ ವಿಷಯಗಳ ಸಂಚಾರ ಇಂಥಾ ವಿನಿಮಯಕ್ಕೆ ಇನ್ನೊಂದು ಉದಾಹರಣೆ. ಲೋಕಕ್ಕೆ ಕಾಗದ ತಂತ್ರಜ್ಞಾನ ಎಲ್ಲಿಂದ ಹೇಗೆ ಬಂತು? ರೇಶ್ಮೆ ಎಲ್ಲಿಂದ ಬಂತು? ವಿವಿಧ ಹಣ್ಣುಗಳು, ಸಸ್ಯ ತಳಿಗಳು ನಮ್ಮ ಹಳ್ಳಿಗಳಿಗೆ ಎಲ್ಲಿಂದ ಬಂದುವು? ಅದೇ ರೀತಿ ನಮ್ಮಲ್ಲಿಂದಲೂ ಕೆಲವು ಸಂಗತಿಗಳು ಬೇರೆ ಕಡೆ ಹೋಗಿರಬಹುದು. ಮಹಾತ್ಮಾ ಗಾಂಧಿಯವರ ಹಲವು ವಿಚಾರಗಳಾದರೂ ಬೇರೆ ಕಡೆಯಿಂದಲೇ ಮೂಡಿಬಂದವು ಅಲ್ಲವೇ? ಅವರು ಹುಟ್ಟಿದಲ್ಲೇ ಇರುತ್ತಿದ್ದರೆ ಮಹಾತ್ಮಾ ಆಗುತ್ತಿದ್ದರೇ? ರವೀಂದ್ರನಾಥ ಟಾಕೂರರು ತಮ್ಮ ಪದ್ಯಗಳನ್ನು ಹೊತ್ತುಕೊಂಡು ಇಂಗ್ಲೆಂಡಿಗೆ ಹೋದ್ದು ಯಾತಕ್ಕೆ? ಅವರಿಗೆ ಸಲ್ಲುವುದು ಇತರರಿಗೆ ಅಮಾನ್ಯವೇ? ಮಹಾತ್ಮಾ ಗಾಂಧಿಗೂ ಕೆಲವು ಪೂರ್ವಾಗ್ರಹಗಳಿದ್ದುವು. ಅವರು ರೇಲ್ವೇ ಪದ್ಧತಿಯನ್ನೇ ಟೀಕಿಸುತ್ತಿದ್ದರು!ಬಹುಶಃ ಅದು ಬ್ರಿಟಿಷ್ ಮೂಲದ್ದು ಎಂದಿರಬೇಕು; ಅವರು ಹೇಳುತ್ತಿದ್ದುದು ರೇಲ್ವೇ ಬಂದು ನಮ್ಮ ಹಳ್ಳಿಗಳನ್ನು ಒಡೆದುವು ಎಂದು. ಪ್ರಿ-ರೇಲ್ವೆ ಯುಗಕ್ಕೆ ಹೋಗೋಣವೇ?
      ಡಿವಿಶನ್ ಆಫ್ ಲೇಬರ್ ಎಂಬ ತತ್ವದ ಮೇಲೆಯೇ ಎಲ್ಲಾ ನಾಗರಿಕತೆಗಳೂ ಬೆಳೆದುಬಂದಿವೆ; ಅದರಲ್ಲಿ ಇರುವ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಬೇಕು. ಅದಲ್ಲದೆ ನಾನು ಸ್ವಾವಲಂಬಿಯಾಗಿರುತ್ತೇನೆ ಎಂದರೆ ಅದು ಕೇವಲ ಭ್ರಮೆ. ಎಲ್ಲಾ ಕಡೆಯೂ ಎಲ್ಲಾ ಸೌಕರ್ಯಗಳೂ ಲಭ್ಯವಾಗಬೇಕು ಎನ್ನುವುದು ಬೇರೆ ಮಾತು; ಅದನ್ನು ನಾನು ಸಮರ್ಥಿಸುತ್ತೇನೆ. ಈ ಕುರಿತು ಬಹಳಷ್ಟು ಮಾತಾಡುವುದಿದೆ. ಆದರೆ ಯೋಚಿಸಿದರೆ ತಾನಾಗಿಯೇ ಗೊತ್ತಾಗುತ್ತದೆ.
      ಕೆ.ವಿ. ತಿರುಮಲೇಶ್

      • D.M.Sagar

        I fully agree with K.V.Tirumalesh, ‘swaavalambane’ is an over rated and abstract thinking, that’s not practical in strict sense. It’s rather motivating than fulfilling!

  9. g p basavaraju

    ಶ್ರೀ ತಿರುಮಲೇಶ್‍ ಅವರಿಗೆ,
    ‘ಸ್ವಾವಲಂಬನೆ’ ಎಂಬುದನ್ನು ಅಕ್ಷರಶಃ ತೆಗೆದುಕೊಂಡಾಗಲೇ ಗೊಂದಲ ಹುಟ್ಟಿಕೊಳ್ಳುತ್ತದೆ. ಹಾಗೆ ತೆಗೆದುಕೊಳ್ಳಬೇಕಾದ ಅಗತ್ಯವೇ ಇಲ್ಲ. ನಮ್ಮ ಇಂದಿನ ಅವಲಂಬಿತ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಕು. ಸ್ಥಳೀಯ ಕ್ರಿಯಾಶೀಲತೆಯನ್ನು ನಾಶಮಾಡಿ ತನ್ನನ್ನು ಸ್ಥಾಪಿಸಿಕೊಂಡಿರುವ ಬೃಹತ್‍ ಉತ್ಪಾದನಾ ಘಟಕಗಳನ್ನು, ಬಂಡವಾಳವನ್ನು ಮತ್ತು ಇದೆಲ್ಲದರ ಮೇಲೆ ಅವಲಂಬಿತವಾಗಿರುವ ಮನುಷ್ಯನ ಪಾಡನ್ನು ನೋಡಿದರೆ ನಾವು ಕ್ರಮಿಸಿ ಬಂದ ಮಾರ್ಗವಿದೆಯಲ್ಲ ಅದು ಮೆಚ್ಚುವಂಥದ್ದಲ್ಲ ಎಂಬುದು ಸ್ಪಷ್ಟವಾಗುತ್ತದೆ. ಒಂದು ಹಳ್ಳಿಯ ಮೇಲೆ ಮತ್ತೊಂದು ಹಳ್ಳಿ, ಒಂದು ರಾಜ್ಯದ ಮೇಲೆ ಮತ್ತೊಂದು ರಾಜ್ಯ, ಹಾಗೆಯೇ ಒಂದು ರಾಷ್ಟ್ರದ ಮೇಲೆ ಮತ್ತೊಂದು ರಾಷ್ಟ್ರ ಅವಲಂಬಿತವಾಗುವುದು ತಪ್ಪಲ್ಲ. ಆದರೆ ಮೊದಲು ಆ ಹಳ್ಳಿ ಅಥವಾ ಆ ರಾಷ್ಟ್ರ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳಬೇಕು. ಇದನ್ನೇ ಸ್ವಾವಲಂಬನೆ ಎಂದು ಅರ್ಥೈಸಿಕೊಳ್ಳಬಹುದು. ಇವತ್ತಿನ ಪರಾವಲಂಬನೆ ಮತ್ತು ನಾವು ಸ್ಥಾಪಿಸಿಕೊಂಡಿರುವ ಕೇಂದ್ರೀಕೃತ ವ್ಯವಸ್ಥೆ ಮನುಷ್ಯನ ಬೆಳವಣಿಗೆಗೆ ಖಂಡಿತಾ ಮಾರಕವಾಗಿದೆ. ಇದನ್ನೆಲ್ಲ ನೋಡಿದಾಗಲೇ ಗಾಂಧೀಜಿಯ ಚಿಂತನೆ ಬಹಳ ಪ್ರಸ್ತುತ ಎನ್ನಿಸುತ್ತದೆ. ಗಾಂಧೀಜಿಯ ಚಿಂತನೆಯನ್ನು ಕೂಡಾ ನಾವು ಅಕ್ಷರಶಃ ತೆಗೆದುಕೊಳ್ಳಬೇಕಾಗಿಲ್ಲ.ಆ ಚಿಂತನೆಯ ಮೂಲ ಆಶಯವನ್ನು ಗ್ರಹಿಸಿ, ಕಾಲ ಮತ್ತು ದೇಶಕ್ಕೆ ತಕ್ಕಂಥ ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡು, ಮನುಷ್ಯನ ಘನತೆಯನ್ನು ಕಾಪಾಡುವ, ಹಾಗೆಯೇ ಅವನ ನಿಜವಾದ ವಿಕಾಸಕ್ಕೆ ನೆರವಾಗಬಲ್ಲ ವ್ಯವಸ್ಥೆಯೊಂದನ್ನು ನಾವು ಕಟ್ಟಿಕೊಳ್ಳುವ ಸಾಧ್ಯತೆಯಂತೂ ಇದ್ದೇ ಇದೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದಕ್ಕೆಲ್ಲ ಅವಕಾಶ ಇದ್ದೇ ಇರುತ್ತದೆ.
    -ಜಿ.ಪಿ.ಬಸವರಾಜು

  10. Hema Sadanand Amin

    vah! satvika charche, lekhana asalu,charche baddi……. innastu tilidu kolluvantaitu.Dhanyavada yellarigu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading