ಜಯಲಕ್ಷ್ಮಿ ಪಾಟೀಲ್ ಅಂಕಣ – ಮನಸು ಹುಚ್ಚೆದ್ದು ಕುಣಿಯತೊಡಗಿತು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

32

ನವರಸಪುರ ಉತ್ಸವ! ನೆನೆದರೆ ಮೈ ನವಿರೇಳುತ್ತದೆ. ನಾನು ಮೊದಲ ಬಾರಿ ಅದರಲ್ಲಿ ವೀಕ್ಷಕಳಾಗಿ ಭಾಗವಹಿಸಿದ್ದು ಬಿಎಸ್ಸಿ ಓದುವಾಗ. ನನ್ನ ಮೂರನೇ ಸೋದರಮಾವನ ಹೆಂಡತಿ ಸುಮಾ ಮತ್ತು ನಾನು ಒಂದೇ ಓರಿಗೆಯವರು. ಸಂಗೀತ, ಸಾಹಿತ್ಯ, ಪ್ರೀತಿಯಿಂದ ಗಿಡಗಳನ್ನು ಬೆಳೆಸುವಂಥಾ ಒಳ್ಳೆಯ ಅಭಿರುಚಿ ಉಳ್ಳವಳು. ಬಹುಶಃ ‘ಮಾನ್ಸುನ್ ರಾಗಾಸ್’ ಅಂತಿರಬೇಕು ಹೆಸರು, ಜಗಪ್ರಸಿದ್ಧ ಕಲಾವಿದರು ನುಡಿಸಿದ, ಬೇರೆ ಬೇರೆ ವಾದ್ಯಗಳ ವಾದನದ ಕ್ಯಾಸ್ಸೆಟ್ಟುಗಳ ಸೆಟ್ ಒಂದಿತ್ತು ಸುಮಾನ ಬಳಿ. ಆಕೆ ತುಂಬಾ ತನ್ಮಯಳಾಗಿ ಅವುಗಳನ್ನು ಕೇಳುತ್ತಿದ್ದಳು. ನನಗೆ ರಾಗಗಳ ಪರಿಚಯವಿಲ್ಲದಿದ್ದರೂ ಅವುಗಳಲ್ಲಿ ಕೆಲವೊಂದು ನನಗೂ ಇಷ್ಟವಾಗುತ್ತಿದ್ದವು.

ನಮ್ಮ ಮನೆಯಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಸಂಬಂಧ ಪಟ್ಟಂತೆ ಕ್ಯಾಸೆಟ್ಟುಗಳಿರಲಿಲ್ಲ. ನಾನು ಚಿಕ್ಕವಳಿದ್ದಾಗ ನಮ್ಮ ೨೩ನೇ ನಂಬರ್ ಮನೆಯ ಸಾಲಿನಲ್ಲಿಯೇ ನನ್ನ ಗೆಳತಿಯೊಬ್ಬಳು ಹಾರ್ಮೋನಿಯಂ ಕಲಿಯುತ್ತಿದ್ದಳು. ಹೇಳಿಕೊಡಲು ಅವರ ಮನೆಗೆ ಗುರುಗಳೊಬ್ಬರು ಬರುತ್ತಿದ್ದರಾದ್ದರಿಂದ, ಪ್ರಾಕ್ಟೀಸ್ ಮಾಡುವ ಸಮಯದಲ್ಲಿ ಅವರ ಮನೆಯಿಂದಾಚೆ ಸಹಜವಾಗಿಯೇ ಕೇಳುತ್ತಿತ್ತು. ನನಗದು ತುಂಬಾ ಇಷ್ಟವಾಗಿ ನನ್ನಜ್ಜಿಯ ಬಳಿ ಹೋಗಿ, ನಾನೂ ಪೇಟಿ ಕಲಿಯುತ್ತೇನೆ ಎಂದೆ. ಒಪ್ಪಲಿಲ್ಲ ಅವರು. ನಿರಾಸೆಯಾಗಿತ್ತು. ಆದರೆ ಆಗಾಗ ಅವರ ಮನೆಯಲ್ಲಿ ಅಭ್ಯಾಸ ನಡೆಯುತ್ತಿರುವುದು ಕೇಳಿಸಿದರೆ ಅವರ ಗೇಟಿನೆದುರು ನಿಂತು ಸ್ವಲ್ಪ ಕಾಲ ಕೇಳಿಸಿಕೊಳ್ಳುತ್ತಿದ್ದೆ.

ಮುಂದೆ ಪಿಯೂಸಿ ಸೆಕೆಂಡ್ ನ ವೆಕೇಶನ್ ಕ್ಲಾಸಿಗೆಂದು ಗೋಡಬೋಲೇ ಮಹಲ್ ಓಣಿಗೆ ಹೋಗುತ್ತಿದ್ದಾಗ, ಅಲ್ಲಿ ಅನೇಕ ಮನೆಗಳಿಂದ ಹಿಂದೂಸ್ತಾನಿ ಶಾಸ್ತ್ರಿಯ ಸಂಗೀತದ, ವಾದ್ಯಗಳ ರಿಯಾಜ್ ರಸ್ತೆಗೆ ಕೇಳುತ್ತಿತ್ತು. ಕ್ಲಾಸ್ ತಪ್ಪಿಸಿ ಕೇಳುತ್ತಾ ಅಲ್ಲೇ ನಿಂತುಬಿಡಲೇ ಅನಿಸುತ್ತಿತ್ತು ಆಗ ನನಗೆ. ಆದರೆ ಸಾಧ್ಯವಾಗುತ್ತಿರಲಿಲ್ಲ.

ಈಗ ಅಂಥದೊಂದು ಸುಮಧುರ ಸಂಗೀತವನ್ನು ಆರಾಮದಲ್ಲಿ ಕುಳಿತು ಸವಿಯುವ ಅವಕಾಶ ಒದಗಿಬಂದು, ಸುಮಾನಿಂದ ನವರಸಪುರ್ ಉತ್ಸವದ ಬಗ್ಗೆ ನನಗೆ ತಿಳಿಯಿತು. ಆಗ ನವರಸಪುರ ಉತ್ಸವದ ಬಗ್ಗೆ ಹೆಚ್ಚಿನ ವಿವರಗಳು ತಿಳಿದಿರಲಿಲ್ಲವಾದರೂ ದೇಶದ ದೊಡ್ಡ ದೊಡ್ಡ ಸಂಗೀತಗಾರರೆಲ್ಲ ನಮ್ಮಲ್ಲಿಗೆ ಬಂದು ಕಲಾ ಪ್ರದರ್ಶನ ನೀಡುತ್ತಾರೆ, ಒಂದಕ್ಕಿಂತ ಒಂದು ಕಾರ್ಯಕ್ರಮ ಅದ್ಭುತವಾಗಿರುತ್ತವೆ ಎನ್ನುವುದಷ್ಟೇ ಸುಮಾ ಹೇಳಿದ್ದರಿಂದ ಗೊತ್ತಿತ್ತು. ಗೊತ್ತಾದ ಮೇಲೆ ಹೋಗಬೇಕೆನ್ನೋ ನನ್ನ ಆಸೆಗೆ ಅಡ್ಡಿಯಾಗಿದ್ದು, ಈ ಕಾರ್ಯಕ್ರಮಗಳೆಲ್ಲ ರಾತ್ರಿ ವೇಳೆ ಇರುತ್ತವೆ ಮತ್ತು ನವರಸಪುರ ಬಿಜಾಪುರದಿಂದ ಐದು ಕಿಲೋಮೀಟರ್ ದೂರದಲ್ಲಿದೆಯಾದ್ದರಿಂದ, ಮದುವೆಯಾಗದ ಹುಡುಗಿಯರು (ಮದುವೆಯಾಗಿದ್ದಲ್ಲಿ ಗಂಡ ಜೊತೆಗಿರುತ್ತಾನೆ ಎನ್ನುವ ಧೈರ್ಯ ಹಿರಿಯರಿಗೆ) ಹಾಗೆಲ್ಲ ಅವೇಳೆಯಲ್ಲಿ ಹೋಗುವುದು ಸರಿಯಲ್ಲ ಅನ್ನುವುದು.

ಸುಮಾ ತನ್ನ ಸ್ನೇಹಿತೆಯ ಕುಟುಂಬದ ಜೊತೆಗೆ ಹೋಗುತ್ತಿದ್ದಳಾದ್ದರಿಂದ ಮತ್ತು ಅವರೆಲ್ಲರಿಗೆ ಮದುವೆಯೂ ಆಗಿತ್ತಾದ್ದರಿಂದ ೨೩ ಮನೆಯಲ್ಲಿನ ಹಿರಿಯರಿಗೆ ಆತಂಕವಿರಲಿಲ್ಲ. ಇಲ್ಲಿ ನಮ್ಮ ೯೦ ನಂಬರ್ ಮನೆಯಲ್ಲಿ ಹಾಗಲ್ಲವಲ್ಲ! ನನ್ನ ಗೆಳತಿಯರದೂ ನನ್ನದೂ ಒಂದೇ ಅವಸ್ಥೆ. “ಬರೇ ಹುಡಿಗ್ಯಾರನ್ನಷ್ಟೇ ರಾತ್ರಿ ಹೊರಗ ಬಿಡಂಗಿಲ್ಲ. ಹಗಲೊತ್ತು ಎಲ್ಲೆರೆ ಹೋಗ್ರಿ ನಾವು ಬ್ಯಾಡ ಅನ್ನಂಗಿಲ್ಲ, ಹೊತ್ತು ಮುಳುಗುದರಾಗ ಮನ್ಯಾಗಿರ್ಬೇಕ್ ಅಷ್ಟ!” ಎಲ್ಲರ ಮನೆಯಲ್ಲೂ ಮಾತಾಡಿಕೊಂಡವರಂತೆ ಹೀಗೇ ಹೇಳುತ್ತಿದ್ದರು. ನಮ್ಮಗಳ ಮನೆಗಳಲ್ಲಷ್ಟೇ ಅಲ್ಲ, ಊರಿನ ಯಾವ ಮನೆ ಹೊಕ್ಕರೂ ಅಲ್ಲೊಬ್ಬ ಮದುವೆಯಾಗದ ಹೆಣ್ಣುಮಗಳೊಬ್ಬಳಿದ್ದಲ್ಲಿ ಇದೇ ಮಾತು ಕೇಳಿ ಬರುವುದು ಸಾಮಾನ್ಯವಾಗಿತ್ತು. ಹಗಲೊತ್ತು ಎಲ್ಲೆಂದರಲ್ಲಿ ಹೋಗ್ರಿ ಬ್ಯಾಡ ಅನ್ನುದಿಲ್ಲ ಎನ್ನುವುದು ಕೇವಲ ಮಾತಿಗಷ್ಟೇ. ಹಗಲೂ ಸಹ ಹಾಗೆಲ್ಲ ಹೋಗಲು ಬಿಡುತ್ತಿರಲಿಲ್ಲ, ತುಂಬಾ ಮಸ್ಕಾ ಹೊಡೀಬೇಕಾಗುತ್ತಿತ್ತು ನಾನು. ಹೀಗಾಗಿ ಮೊದಲ ದಿನ ನವರಸಪುರ ಉತ್ಸವಕ್ಕೆ ನಮ್ಮವ್ವ ಕಳಿಸಿಕೊಡಲು ಸುತಾರಾಂ ಒಪ್ಪಲಿಲ್ಲ. ಅದರ ಮರುದಿನ ಸುಮಾನಳನ್ನು ಭೇಟಿಯಾದಾಗ, ಹಿಂದಿನ ರಾತ್ರಿಯ ಭೀಮಸೇನ ಜೋಷಿಯವರ ಗಾಯ್ಕಿಯ ಬಗ್ಗೆ ಆಕೆ ವರ್ಣಿಸುತ್ತಿದ್ದರೆ ನನ್ನೊಳಗಿನ ಹೋಗಲೇಬೇಕೆಂಬ ಆಸೆ ಹಠವಾಗಿಬಿಟ್ಟಿತ್ತು. ಮತ್ತೆ ಅವ್ವನ ಬಳಿ ಗೋಗರೆದೆ. ನನ್ನ ಕಾಟ ತಡೆಯದೇ ಮತ್ತು ಅಲ್ಲಿ ಹೇಗೂ ಸುಮಾ ಇರ್ತಾಳಲ್ಲ ಅನ್ನುವ ಧೈರ್ಯದೊಂದಿಗೆ ಸುಧಿ ಮತ್ತು ಜಗುವನ್ನು (ತಮ್ಮಂದಿರು) ಜೊತೆ ಮಾಡಿ ಕಳಿಸಿಕೊಟ್ಟಳು.

ಸೂರ್ಯ ಮುಳುಗುವ ಮೊದಲೇ ಮನೆಯಿಂದ ಹೊರಟೆವು ನಾವು. ನಮ್ಮ ಕೆ.ಎಚ್.ಬಿ ಕಾಲನಿಯಿಂದ ಸಿಟಿ ಬಸ್ ಹತ್ತಿ, ವಾಟರ್ ಟ್ಯಾಂಕ್ ಸ್ಟಾಪಲ್ಲಿಳಿದು (ವಾಟರ್ ಟ್ಯಾಂಕ್ ಬಿಜಾಪುರದ ಒಂದು ಏರಿಯಾದ ಹೆಸರು) ಅಲ್ಲಿಂದ ನವರಸಪುರ ಉತ್ಸವಕ್ಕೆ ಹೋಗಲೆಂದೇ ಸ್ಪೆಷಲ್ಲಾಗಿ ಸರಕಾರ ಬಿಟ್ಟಿದ್ದ ಬಸ್ಸನ್ನೇರಿದೆವು. ಕುತೂಹಲ, ನಾನೂ ಹೋಗುತ್ತಿದ್ದೇನೆ ಎಂಬ ಹಿಗ್ಗು ತುಂಬಾ ರೋಮಾಂಚನವನ್ನುಂಟು ಮಾಡಿತ್ತು. ಅಲ್ಲಿಯವರೆಗೆ ನಾನೆಂದೂ ನವರಸಪುರಕ್ಕೆ ಹೋದವಳಲ್ಲ. ಅದು ಹೇಗಿದೆ ಅನ್ನುವ ಕಲ್ಪನೆಯೂ ನನಗಿರಲಿಲ್ಲ. ಬಸ್ಸಿನಿಂದಿಳಿದು ಜನ ಹೊರಟ ಕಡೆಗೆ ನಾವೂ ನಡೆದೆವು. ಕೋಟೆಯಂಥಾ ಕಾಂಪೌಂಡಿನ ವಿಶಾಲವಾದ ಗೇಟ್ ದಾಟಿ ಒಳ ನಡೆದರೆ ಕೇವಲ ಕಮಾನುಗಳಿದ್ದ ಒಂದು ಹಾಳುಬಿದ್ದ ಕಟ್ಟಡ ಬಿಟ್ಟರೆ ಬಯಲೋ ಬಯಲು ಸುತ್ತಲೂ. ಅವರಲ್ಲಿ ಯಾರೋ ಒಂದಿಬ್ಬರು ಆ ಕಟ್ಟಡದ ಎದುರು ನಿಂತು “ಇದೇ ಸಂಗೀತ್ ಮಹಲ್. ಬರ್ರಿ ಮ್ಯಾಲೆ ಹತ್ತೂನು” ಎನ್ನುತ್ತಾ ಅದರ ಕಟ್ಟೆಯನ್ನೇರಿದರು. “ಓಹ್ ಇದು ಸಂಗೀತ್ ಮಹಲ್ ಅಂದ ಮ್ಯಾಲೆ ಇಲ್ಲೇ ಕಾರ್ಯಕ್ರಮ ನಡೀಬೇಕಲ್ಲ? “ಇದರಾಗ ಹೆಂಗ ಸಂಗೀತ ಕಾರ್ಯಕ್ರಮ ಮಾಡ್ತಾರ ಇವ್ರು?! ಇಲ್ಲಿ ನೊಡಿದ್ರ, ಒಂದ್ ಮೈಕಿಲ್ಲ, ಸೌಂಡ್ ಬಾಕ್ಸ್ ಇಲ್ಲ! ಕುಂದರಾಕ ಕುರ್ಚೆ ಇಲ್ಲ!” ಫುಲ್ ಗೊಂದಲಗೊಂಡಿದ್ದೆನಾದರೂ ಸುಮ್ಮನೆ ಮೇಲೆ ಹತ್ತುವವರನ್ನು ನಾವೂ ಅನುಸರಿಸಿದೆವು. ಮಹಡಿ ಏರಿ ಮೆಟ್ಟಿಲುಗಳು ಕರೆತಂದ ಜಾಗದಲ್ಲಿ ನಿಂತು ನೋಡಿದರೆ ಎದುರಿಗೆ ಮತ್ತೆ ಬಯಲು! ಮಹಲಿನ ಸ್ವಲ್ಪ ದೂರದಲ್ಲಿ ಹಿಂದೊಮ್ಮೆ ಸುಂದರವಾಗಿ ಇದ್ದಿರಬಹುದಾದ, ಈಗ ನೆಲದ ಮೇಲೆ, ಮಳೆ ಬಂದು ತುಸು ನೀರು ನಿಂತಂತೆ ಕಾಣುವ ಕೊಳ. ಸುತ್ತಲೂ ಕಣ್ಣಾಡಿಸುತ್ತಾ, ತಮ್ಮಂದಿರಿದಿರು ಕಾರ್ಯಕ್ರಮ ನಡೆಯುವುದು ಇಲ್ಲೆಯೋ ಇಲ್ಲಾ ಕ್ಯಾನ್ಸಲ್ ಏನಾದರೂ ಆಗಿದೆಯೋ ಎಂಬ ನನ್ನ ಅನುಮಾನ ತೋಡಿಕೊಂಡೆ. ಅಷ್ಟರಲ್ಲಿ “ನಡೀರಿ ಟೈಮಾತು, ಜಲ್ದಿ ಹೋಗದಿದ್ದ್ರ ನಮಗ ಮುಂದ ಜಾಗಾ ಸಿಗೂದಿಲ್ಲ” ಎನ್ನುತ್ತಾ ಹೊರಟವರನ್ನು ತಡೆದು, “ಇಲ್ಲಿ ಅಲ್ಲೇನ್ರಿ ಕಾರ್ಯಕ್ರಮಾ?” ಎಂದು ಕೇಳಿದೆ. ಎಂಥಾ ಪ್ಯಾಲಿ ಅದಾಳಿಕಿ ಎನ್ನುವಂತೆ ನನ್ನನ್ನು ನೋಡಿದ ಆ ವ್ಯಕ್ತಿ, “ಇಲ್ಲೇ ಆಗಿದ್ದ್ರ ನಿಮಗ ಮೈಕಿನ ವ್ಯವಸ್ಥಾ ಕಾಣ್ತಿತ್ತೊ ಇಲ್ಲೋ? ಇಲ್ಲಲ್ಲ. ಅಗಾ ಅಲ್ಲಿ ಆ ಕಡೆ” ಎನ್ನುತ್ತಾ ಕೈ ಮಾಡಿ ಆಗ್ನೇಯ ದಿಕ್ಕನ್ನು ತೋರಿಸಿ ದುಡುದುಡು ಕೆಳಗಿಳಿಯತೊಡಗಿದರು. ತೋರಿದತ್ತ ನೋಡಿದರೆ ಅಲ್ಲಿ ಏನೂ ಕಾಣುತ್ತಿಲ್ಲ! ಹಾಗಾದರೆ ಆ ಜಾಗ ತುಂಬಾ ದೂರವಿದೆ, ನಾವು ತಡ ಮಾಡಿದರೆ ದಾರಿ ತಪ್ಪುವುದು ಖಂಡಿತ ಅನಿಸಿ ಅವರ ಹಿಂದೆಯೇ ನಾವೂ ಓಡುನಡಿಗೆಯಲ್ಲಿ ಹೊರಟೆವು.

ನಡೆಯುವುದೆಂದರೆ ಆಗಲೂ ಈಗಲೂ ಆಲಸಿಯೇ ನಾನು. ಹೀಗಾಗಿ ಯಾಕಾರ ಬಂದ್ನೋ ಎಂದುಕೊಂಡೆ. ಆದರೆ ಬಂದಾಗಿತ್ತಲ್ಲ, ನಡೆದು ಕಾರ್ಯಕ್ರಮದ ಜಾಗ ತಲುಪಿದರೆ, ಅಲ್ಲೊಂದು ಅಷ್ಟೇನು ದೊಡ್ಡದಲ್ಲದ ಒಂದು ಸಾಧಾರಣ ವೇದಿಕೆ. ಅದರ ಎದುರಿಗೆ ಕುರ್ಚಿಗಳಿಲ್ಲ ಏನಿಲ್ಲ! ಬರಿ ನೆಲದ ಮೇಲೆ ಕುಳಿತುಕೊಳ್ಳೋದಾದ್ರೂ ಹೇಗೆ? ಅದೂ ಮಣ್ಣು ನೆಲದ ಮೇಲೆ! ಅವಮಾನವಲ್ಲವೇ? (ಮುಂದೆಯೂ ಹಾಗೆ ಮಣ್ಣು ನೆಲದ ಮೇಲೆ ಎಷ್ಟೋ ವರ್ಷಗಳ ತನಕ ಕುಂತಿರಲಿಲ್ಲ ನಾನು, ಏನೋ ಮುಜುಗರ. ಅವಮಾನ ಅನಿಸೋದು. ರಂಗಭೂಮಿಗೆ ಬಂದೆ ನೋಡಿ ಇಂಥ ಕ್ಷುಲ್ಲಕ ಅಹಮ್ಮುಗಳೆಲ್ಲ ಹೇಳ ಹೆಸರಿಲ್ಲದಂತೆ ಮಾಯವಾದವು!) ಸುತ್ತ ಕಣ್ಣಾಡಿಸಿದರೆ ನಮ್ಮ ಸುಮಾ, ಆಕೆಯ ಗೆಳತಿ ಕಾಣುತ್ತಿಲ್ಲ ಬೇರೆ. ಬಂದ ಜನ ಅಲ್ಲಲ್ಲೇ ಕುಳಿತುಕೊಳ್ಳತೊಡಗಿದರು. ಕೆಲವರು ಹಾಸಿಕೊಳ್ಳಲು ಪುಟ್ಟ ಜಮಖಾನ, ಹೊದ್ದುಕೊಳ್ಳಲು ಶಾಲ್, ಟವಲ್ ತಂದಿದ್ದರು. ನಾವೋ ಕೈಬಿಸಿಕೊಂಡು ಬಂದುಬಿಟ್ಟಿದ್ದೆವು ಯಾವ ವ್ಯವಸ್ಥೆಯನ್ನೂ ಮಾಡಿಕೊಳ್ಳದೆ. ಅನಿವಾರ್ಯ ಎಂಬಂತೆ ನಾನೂ ನೆಲದ ಮೇಲಿನ ಸಣ್ಣಪುಟ್ಟ ಕಲ್ಲುಗಳನ್ನು ಸರಿಸಿ ಕುಳಿತೆ. ದೊಡ್ಡ ತಮ್ಮ, “ಎಂಥಲ್ಲಿ ಕರ್ಕೊಂಡು ಬಂದಿಯವ್ವ ತಾಯಿ. ಇನ್ನೊಮ್ಮೆ ಜೋಡಿಗಿ ಬಾ ಅಂತ ಕರದರ ಕರಿ ಹೇಳ್ತೀನಿ!” ಎಂದು ಜೋರಾಗಿಯೇ ಗೊಣಗಿದ. ಹಾಗೇ ಇರುಸುಮುರುಸುಗೊಳ್ಳುತ್ತಾ ಮೂವರೂ ನೆಲದ ಮೇಲೆ ಕುಳಿತ ಹತ್ತು ನಿಮಿಷಕ್ಕೆ ಕಾರ್ಯಕ್ರಮ ತಬಲಾ ವಾದನದೊಂದಿಗೆ ಆರಂಭಗೊಂಡಿತು. ತುಸು ದಪ್ಪಗಿದ್ದ ಆದರೆ ತುಂಬಾ ಲವಲವಿಕೆಯಿಂದ ಇದ್ದ ಅವರ ಹೆಸರು ಈಗ ನೆನಪಾಗುತ್ತಿಲ್ಲ. ಆದರೆ ಅನೇಕ ಬಾರಿ ಅವರನ್ನು ಮಹಾನ್ ಕಲಾವಿದರಿಗೆ ತಬಲಾ ಸಾಥ್ ನೀಡಿದ್ದನ್ನು ಟಿವಿಯಲ್ಲಿ ನೋಡಿರುವೆ. ಸ್ವಲ್ಪ ಹೊತ್ತಿನ ನಂತರ ನೋಡಿದರೇನೇ ಗೌರವ ಉಕ್ಕಿ ಬರುವಂತಿರುವ ಒಬ್ಬ ಹಿರಿಯ ಕಲಾವಿದರು ತಮ್ಮ ವಾದ್ಯದೊಡನೆ ಬಂದು ಕಲಾವಿದರ ನಡುವೆ ಕುಳಿತಾಗ, ವೇದಿಕೆಯ ಮೇಲಿದ್ದವರು ತುಂಬಾ ವಿನಯದಿಂದ ಕೈಮುಗಿದರೆ ಪ್ರೇಕ್ಷಕರಿಂದ ಜೋರು ಚಪ್ಪಾಳೆ. ಪ್ರತ್ಯಕ್ಷವಾಗಿ ನಾನು ಸಂಗೀತ ಕಲಾವಿದರನ್ನು ನೋಡುತ್ತಿದ್ದುದು ಅದೇ ಮೊದಲ ಬಾರಿ ಆದ್ದರಿಂದ ಯಾರು ಏನು ತಿಳಿದಿರಲಿಲ್ಲ. ಹಾಗೆ ಬಂದು ಕುಳಿತವರು ಪಂಡಿತ್ ಶಿವಕುಮಾರ್ ಶರ್ಮಾ. ಜಗತ್ಪ್ರಸಿದ್ಧ ಸಂತೂರ್ ವಾದಕರು. ಸಂತೂರನ್ನೂ ನಾನು ಲೈವ್ ಆಲಿಸಿದ್ದೂ ಅದೇ ಮೊದಲ ಸಲ. ಕೇಳುತ್ತಾ ಕೇಳುತ್ತಾ ಅದು ಹೇಗೆ ಮೈಮರೆತಿದ್ದೆ ಅಂದರೆ ಸ್ವರ್ಗದಲ್ಲಿ ತೇಲುವುದು ಅನ್ನುತ್ತಾರಲ್ಲ ಹಾಗೆ. ಯಾವುದೋ ಬೇರೆಯದೇ ಲೋಕವದು. ಅವ್ವನ ಬಳಿ ಗೋಗರೆದು ಬಂದಿದ್ದಕ್ಕೂ ಸಾರ್ಥಕವಾಯಿತು ಅನಿಸುವಷ್ಟು ಖುಷಿ. ತಮ್ಮಂದಿರು ಬೋರ್ ಎಂದೇನಾದರೂ ನನ್ನನ್ನು ಬೈದುಕೊಳ್ಳುತ್ತಾ ಮುಖ ಇಳಿಬಿಟ್ಟುಕೊಂಡು ಕೂತಿದ್ದಾರೋ ಎಂದು ನಡುವೊಮ್ಮೆ ಕದ್ದು ಅವರೆಡೆಗೆ ಕಣ್ಣು ಹಾಯಿಸಿದರೆ ಅವರೂ ಮೋಡಿಗೋಳಗಾದವರಂತೆ ಛಳಿ ಮರೆತು ಬಿಟ್ಟಗಣ್ಣು ಬಿಟ್ಟಂತೆ ವೇದಿಕೆಯಲ್ಲಿ ಕಣ್ಣು ಕೀಲಿಸಿ ಕುಳಿತಿದ್ದರು! ಮುಂದೆ ಶುರುವಾಯಿತು ನೋಡಿ ಸಂತೂರ್ ಮತ್ತು ತಬಲಾಗಳ ಜುಗಲ್ಬಂಧಿ. ಮನಸು ಹುಚ್ಚೆದ್ದು ಕುಣಿಯತೊಡಗಿತು. ಆನಂದವೆಂದರೆ ಇದೇ ಮತ್ತು ಇದುವೇ ಮಾತ್ರ ಎನ್ನುವ ಪರಾಕಾಷ್ಠೆಗೆ ತಲುಪಿದ್ದೆ ನಾನು. ಅದ್ಭುತ ಅನುಭೂತಿ ಅದು.

ಕಾರ್ಯಕ್ರಮ ಮುಗಿದಾಗ ಸಮಯ ರಾತ್ರಿ 12ರ‌ ಹತ್ತಿರ. ಮರಳಿ ಮನೆಗೆ ಬರಲು ಬಸ್ ತಪ್ಪುತ್ತದೆಂದು ಮತ್ತೆ ದುಡುಡದುಡು ಓಟ. ವಾಟರ್ ಟ್ಯಾಂಕ್ ನವರೆಗಷ್ಟೇ ಬಸ್ಸು. ಆ ವೇಳೆಯಲ್ಲಿ ಅಲ್ಲಿಂದ ನಮ್ಮ ಕಾಲನಿಗೆ ಯಾವುದೇ ಬಸ್ ಇಲ್ಲವೆಂದು ಗೊತ್ತಾಯಿತು. ನಡೆಯುತ್ತಲೇ ಮನೆ ತಲುಪಬೇಕು. ಹಾಗೆ ನಡೆದು ಬರುವ ದಾರಿಯಲ್ಲಿ ಮೊದಲು ಪೊಲೀಸ್ ಕ್ವಾರ್ಟರ್ಸ್ ಹತ್ತಿದರೆ ನಂತರ ಎರಡೂ ಸುಡುಗಾಡುಗಳನ್ನು ದಾಟಬೇಕು. ಎದೆಯಲ್ಲಿ ಪುಕುಪುಕು ಶುವಾಯಿತು. ಏನಪ್ಪಾ ಮಾಡುವುದು ಎಂದು ರಾಸ್ತೆಯ ಕಡೆಗೆ ನೋಡಿದರೆ ಉತ್ಸವಕ್ಕೆ ಬಂದ ಅನೇಕರು ಅದೇ ದಾರಿಯಲ್ಲಿ ಗುಂಪು ಗುಂಪಾಗಿ ಹೋಗುತ್ತಿದ್ದುದು ಕಂಡು ಸಮಾಧಾನವಾಯಿತು. ಓಡುತ್ತಾ ಒಂದು ಗುಂಪಿನ ಸಮೀಪಕ್ಕೆ ಹೋಗಿ ಅವರೊಂದಿಗೆ ಹೆಜ್ಜೆ ಹಾಕತೊಡಗಿದೆವು. ಅವರುಗಳ ವಾಸಸ್ಥಳ ಬಂದಂತೆ ಒಬ್ಬಬ್ಬರೇ ಖಾಲಿಯಾಗತೊಡಗಿ ಮುಂದೆ ನಾವು ಮೂವರೇ ರಸ್ತೆಯ ಮೇಲೆ! ಬಿಟ್ಟರೆ ಅದು ಹೈವೇ ಆಗಿದ್ದರಿಂದ ಆಗೊಂದು ಈಗೊಂದು ವಾಹನಗಳು ನಮ್ಮನ್ನು ದಾಟಿಕೊಂಡು ಹೋಗುತ್ತಿದ್ದವು. ಕೈಕೈ ಹಿಡಿದುಹಕೊಂಡು ದಾಪುಗಾಲು ಹಾಕುತ್ತಾ ಅಂತೂ ಇಂತೂ ಸುರಕ್ಷಿತವಾಗಿ ಮನೆ ತಲುಪಿದೆವು.

ಮರುದಿನ ತಮ್ಮಿಂದ ಅಷ್ಟು ದೂರ ನಡೆಯಲಾಗುವುದಿಲ್ಲ, ಸೊ ಜೊತೆಗೆ ಬರುವುದಿಲ್ಲ ಎಂದು ತಮ್ಮಂದಿರು ತಗಾದೆ ತೆಗೆದಿದ್ದರಿಂದ ಆ ವರ್ಷ ಮತ್ತೆ ಹೋಗಲಾಗಲಿಲ್ಲ. ಮುಂದೆ ಪಂಡಿತ್ ರವಿಶಂಕರ್ ಶರ್ಮಾ ಅವರ ಸೀತಾರ್ ವಾದನವನ್ನು, ಝಾಕಿರ್ ಹುಸೇನ್ ಅವರ ತಬಲಾ ವಾದನವನ್ನು, ಹರಿಪ್ರಸಾದ್ ಚೌರಾಸಿಯಾ ಅವರ ಕೊಳಲ ವಾದನವನ್ನು ಕೇಳುವ ಸೌಭಾಗ್ಯ ಒದಗಿದ್ದೂ ನವರಸಪುರ ಉತ್ಸವದಲ್ಲೇ.

ಮುಂದೆ 2015ರ ಫೆಬ್ರವರಿ ತಿಂಗಳಲ್ಲಿ ನಡೆದ ಉತ್ಸವದಲ್ಲಿ, ಕವಿಯಾಗಿ ಗೋಷ್ಠಿಯೊಂದರಲ್ಲಿ ನಾನೂ ಭಾಗವಹಿಸಿದ್ದೆ.
ಅಷ್ಟೊಂದು ಅದ್ಭುತವಾಗಿ ನಡೆಯುತ್ತಿದ್ದ ನವರಸಪುರ ಉತ್ಸವ ನಂತರದಿಂದ ಇಲ್ಲಿಯವರೆಗೆ ಮತ್ತೆ ನಡೆದೇಯಿಲ್ಲ ಎನ್ನುವುದು ಸರಕಾರದ ಅವಜ್ಞೆಗೆ ಸಾಕ್ಷಿ.

ಮತ್ತೆ ಸರಕಾರ ನವರಸಪುರ ಉತ್ಸವವನ್ನು ಆಯೋಜಿಸಲಿ, ನನ್ನಂತೆ ನನ್ನೂರಿನ ಯುವ ಜನತೆ ಸಂಗೀತವನ್ನು, ಇತರ ಶಾಸ್ತ್ರೀಯ, ಜಾನಪದ ಕಲೆಗಳನ್ನು ಅರಿಯಲಿ, ಆಸ್ವಾದಿಸಲಿ ಆ ಮೂಲಕ ಅವರಲ್ಲಿನ ಆಸಕ್ತಿಗೆ ಇಂಬು ಸಿಕ್ಕು, ಅವರು ತಮ್ಮಿಚ್ಛೆಯ ಕಲೆಯಲ್ಲಿ ತರಬೇತಿ ಪಡೆದುಕೊಂಡು, ಉತ್ತಮ ಕಲಾವಿದರು ಎನಿಸಿಕೊಳ್ಳಲಿ ಎಂದು ಆಶಿಸುತ್ತೇನೆ.

ನವರಸಪುರ ಉತ್ಸವದ ಹಿನ್ನೆಲೆ ಕುರಿತು ಪುಟ್ಟದೊಂದು ಟಿಪ್ಪಣಿ:

೧೬-೧೭ನೇ ಶತಮಾನದಲ್ಲಿ (೧೫೮೦-೧೬೨೭) ಬಿಜಾಪುರವನ್ನಾಳಿದ ಸುಲ್ತಾನ, ಎರಡನೇ ಇಬ್ರಾಹಿಂ ಆದಿಲ್ ಶಾಹ್ ಸಂಗೀತಾರಾಧಕನಾಗಿದ್ದ. ಅವನು ಇತರ ಧರ್ಮಗಳನ್ನು ಗೌರವಿಸುವಂಥವನಾಗಿದ್ದರಿಂದ, ಕಲೆಗಳನ್ನು ಪೋಷಿಸುವವ ಮತ್ತು ತನ್ನ ಅಗಾಧ ಸಂಗೀತ ಪ್ರೇಮದಿಂದಾಗಿ ಜಗದ್ಗುರುವೆಂದೇ ಖ್ಯಾತಿ ಉಳ್ಳವನು. ಎಲ್ಲ ಭಾಷೆಗಳನ್ನು, ಭಾಷಿಕರನ್ನು ಗೌರವಿಸುತ್ತಿದ್ದನಂತೆ. ಇವನು ದಖನಿ ಭಾಷೆಯಲ್ಲಿ ‘’ಕಿತಾಬ್ ಏ ನವರಸ್ ಎಂಬ ಕೃತಿಯನ್ನು ರಚಿಸಿದ. ಅದರಲ್ಲಿ ೧೭ ರಾಗಗಳ ವಿವರಗಳೊಂದಿಗೆ ಆ ಎಲ್ಲಾ ರಾಗಗಳನ್ನೊಳಗೊಂಡ ಅನೇಕ ೫೯ ಗೀತೆಗಳೂ, ೧೭ ದೋಹಾಗಳೂ ಇವೆಯಂತೆ. ಆ ಪುಸ್ತಕದ ಆರಂಭದಲ್ಲಿ ಭಾರತದ ವಿದ್ಯಾಧಿದೇವತೆ ಸರಸ್ವತಿಯನ್ನು ಹೀಗೆ ಸ್ಮರಿಸಿದ್ದಾನಂತೆ.
ಭಕ್ ನ್ಯಾರಿ ನ್ಯಾರಿ ಭಾವ ಏಕ
ಕಃ ತುರುಕ್ ಕಃ ಬ್ರಾಹ್ಮಣ
ನೌರ್ಸ್ ಸುರ್ ಜಗ್ ಜೋತಿ ಆನಿ ಸರೋಗುಣಿ
ಉಸತ್ ಸರಸುತಿ ಮಾತಾ
ಇಬ್ರಾಹಿಂ ಪ್ರಸಾದ್ ಭಾಯಿ ದೂನಿ (ಗೂಗಲ್ ಕೃಪೆ)

(ಕನ್ನಡದಲ್ಲಿ ಇದರ ಭಾವಾರ್ಥ: ತುರುಕನಾದರೇನು ಬ್ರಾಹ್ಮಣನಾದರೇನು, ಭಾಷೆಗಳು ಬೇರೆ ಬೇರೆಯಾದರೇನು ಭಾವನೆಗಳು ಒಂದೇ. ತಾಯಿ ಸರಸ್ವತಿಯೇ ಇಬ್ರಾಹಿಮನನ್ನು ನೀನು ಆಶೀರ್ವದಿಸಿರುವುದರಿಂದ ಅವನ ನವರಸದ ಕೆಲಸವು ಧೀರ್ಘ ಕಾಲ ಉಳಿಯುತ್ತದೆ.)
ಬಿಜಾಪುರದಲ್ಲಿ ಕನ್ನಡ ಮತ್ತು ಮರಾಠಿ ಭಾಷೆಗಳು ಆಗ ಆಡಳಿತ ಭಾಷೆಗಳಾಗಿದ್ದವಂತೆ. ಹಾಗೆಂದುಕೊಂಡು ಮೇಲಿನ ಸಾಲುಗಳನ್ನು ಮರಾಠಿಯದ್ದಾಗಿರಬೇಕೆಂದು ಓದಿಕೊಂಡೆ. ನಂತರ ಗೂಗಲ್ ಅನುವಾದದಲ್ಲಿ ಪರೀಕ್ಷಿಸಿದರೆ, ಇದು ಗುಜರಾತಿ ಭಾಷೆ ಅನ್ನುತ್ತಿದೆ! ಆದರೆ ನಾನಗೆ ತಿಳಿದಂತೆ ಅರ್ಥದಲ್ಲಿ ಹೆಚ್ಚು ವ್ಯತ್ಯಾಸವಿಲ್ಲ.
ಕಲಾಪ್ರೇಮಿಯಾದ ಈ ಸುಲ್ತಾನ, ನವರಸಪುರ್ ಎಂಬ ಪಟ್ಟಣ ನಿರ್ಮಿಸಿ, ಅದರ ಒಂದು ಓಣಿಯಲ್ಲಿ ದೇಶದ ಎಲ್ಲೆಡೆಯಿಂದ, ಪರ್ಷಿಯಾದಿಂದಲೂ ಸಾವಿರಾರು ಸಂಗೀತ ಕಲಾವಿದರನ್ನು ಕರೆಸಿ ಅವರಿಗೆ ಅಲ್ಲಿ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಟ್ಟಿದ್ದನಂತೆ. ಅದರಲ್ಲಿ ವಾರಣಾಸಿಯಿಂದ ಬಂದ ಕಲಾವಿದರ ಸಂಖ್ಯೆ ಅಪಾರವಾಗಿತ್ತಂತೆ. ಸಂಗೀತಕ್ಕೆಂದು ನವರಸ್ ಮಹಲ್, ನವರಸ್ ಬಿಹಿಷ್ತ್ (ಬಿಹಿಷ್ತ್ ಎಂದರೆ ಸ್ವರ್ಗ ಎಂದರ್ಥ) ಎಂಬ ಎರಡು ಕಟ್ಟಡಗಳನ್ನು ಕಟ್ಟಿಸಿದ. ಅಲ್ಲಿ ಪ್ರತೀ ವರ್ಷ ‘ಈದ್ ಏ ನವರಸ್’ ಹೆಸರಲ್ಲಿ ಉತ್ಸವ ನಡೆಯುತ್ತಿತ್ತಂತೆ. ಈಗ ನವರಸ್ ಮಹಲ್ ಮಾತ್ರ ಉಳಿದುಕೊಂಡಿದೆ. ಅದರ ಸುತ್ತಲೂ ಕಟ್ಟಿರುವ ಎತ್ತರದ ಕಂಪೌಂಡಿಗೆ ಒಂಬತ್ತು ಬಾಗಿಲುಗಳಿವೆ.

|ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

June 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

 1. Shyamala Madhav

  ಓದಿ ಸಂತೋಷಿಸಿದೆ, ಜಯಲಕ್ಷ್ಮಿ. ನವರಸಪುರ್ ಉತ್ಸವ ಈಗ ನಡೆಯುತ್ತಿಲ್ಲವೆನ್ನುವುದು ನಿಜಕ್ಕೂ ಶೋಚನೀಯ.!

  ಪ್ರತಿಕ್ರಿಯೆ
  • ಜಯಲಕ್ಷ್ಮಿ ಪಾಟೀಲ್

   ಧನ್ಯವಾದಗಳು ಶ್ಯಾಮಲಾ.
   ಹೌದು ಅಷ್ಟೊಳ್ಳೆ ಉತ್ಸವವನ್ನು ಯಾಕೆ ನಿಲ್ಲಿಸಿದರೋ ಕಾಣೆ. ಬಿಜಾಪುರದ ನಾಗರಿಕರು ಮತ್ತೆ ಉತ್ಸವವನ್ನು ಆರಂಭಿಸಲು ಜಿಲ್ಲಾಧಿಕಾರಿಗಳಲ್ಲಿ ಮನವಿಕೊಂಡರೂ ಯಾವ ಪ್ರಯೋಜನವೂ ಆಗಿಲ್ಲ.

   ಪ್ರತಿಕ್ರಿಯೆ
 2. Ahalya Ballal

  ನಾನೂ ಆ ಸಂಗೀತವನ್ನ ಪ್ರತ್ಯಕ್ಷ ಅನುಭವಿಸಿ, ಆಮೇಲೆ ನಿರ್ಜನ ರಸ್ತೆಯಲ್ಲಿ ಮನೆಗೆ ನಡೆದುಕೊಂಡು ಬಂದ ಹಾಗಾಯ್ತು.

  ಜೊತೆಗೇ ಇತ್ತೀಚೆಗೆ ನೋಡಿದ ‘ಮೀ ವಸಂತ್ರಾವ್’ ಚಿತ್ರದ ಮಾರ್ವಾ ರಾಗದ ದೃಶ್ಯ-ಶ್ರಾವ್ಯ ಸಂಯೋಜನೆ ಮತ್ತೆ ಜೀವಂತವಾಯ್ತು.
  ಇಲ್ಲಿದೆ ಅದರ ಯುಟ್ಯೂಬ್ ಕೊಂಡಿ:

  ಪ್ರತಿಕ್ರಿಯೆ
  • ಜಯಲಕ್ಷ್ಮಿ ಪಾಟೀಲ್

   ಧನ್ಯವಾದಗಳು ಅಹಲ್ಯ. ಈ ಚಿತ್ರವನ್ನು ನೋಡಲು ಕಾತರದಿಂದ ಕಾಯುತ್ತಿರುವೆ. OOT ನಲ್ಲಿ ಯಾವಾಗ ಹಾಕುತ್ತಾರೋ ಏನೋ.. ಥೀಯೇಟರ್ ಹೌಸ್ ಫುಲ್ ಆಗಿತ್ತಾದ್ದರಿಂದ ನೋಡಲಾಗಿಲ್ಲ.

   ಪ್ರತಿಕ್ರಿಯೆ
 3. akshata

  ನವರಸ ಉತ್ಸವದ ಬಗ್ಗೆ ಬಹಳ. ಮಹತ್ವದ ಮಾಹಿತಿ ಕೊಟ್ರಿ ಜಯಾ. ನಿಮ್ಮ ಜೀವನಾನುಭವ ಬಹಳ ಅದ್ಭುತವಾದದ್ದು.

  ಪ್ರತಿಕ್ರಿಯೆ
  • ಜಯಲಕ್ಷ್ಮಿ ಪಾಟೀಲ್

   ಧನ್ಯವಾದಗಳು ಅಕ್ಷತಾ.

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: