ಜಯಲಕ್ಷ್ಮಿ ಪಾಟೀಲ್ ಅಂಕಣ – ಬಾಬಾ ಮೂರುತಿ ಕಂಡಲ್ಲೆಲ್ಲ ಕೈ ಮುಗಿಯುತ್ತೇನೆ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

51

ನಾವು ಲೋಣಿಯಲ್ಲಿದ್ದಾಗ ನಮ್ಮಲ್ಲಿಗೆ ಊರಿನಿಂದ ಬರುವ ಎಲ್ಲರನ್ನೂ ಶಿರ್ಡಿ ಮತ್ತು ಶನಿ ಶಿಂಗಣಾಪುರಕ್ಕೆ ಕಡ್ಡಾಯವಾಗಿ ಕರೆದುಕೊಂಡು ಹೋಗುತ್ತಿದ್ದೆವು. ಬಂದವರು ಹೆಚ್ಚು ಕಾಲ ನಮ್ಮಲ್ಲಿ ತಂಗುವವರಿದ್ದರೆ, ಹತ್ತಿರದಲ್ಲೇ ಇದ್ದ ನಾಸಿಕ್ ಪ್ರವಾಸವನ್ನೂ ಮಾಡಿಸುತ್ತಿದ್ದೆವು. ಶನಿ ಶಿಂಗಣಾಪುರದ ಹತ್ತಿರವೇ ಇರುವ ಸೊನಯ್ ಎಂಬ ಪುಟ್ಟ ಊರಲ್ಲಿ ರೇಣುಕಾ ಎಲ್ಲಮ್ಮನ ಸುಂದರ ದೇವಸ್ಥಾನವೊಂದಿದೆ. ಪುರಾತನ ದೇವಸ್ಥಾನದ ಒಳ ಭಾಗದ ಗೋಡೆ ಕಂಬಗಳಿಗೆಲ್ಲ ಹೊಸದಾಗಿ ಅಂದರೆ ನಲವತ್ತು ವರ್ಷಗಳ ಹಿಂದೆ ನವೀಕರಿಸಿ ಮಾಡಿದ ಕನ್ನಡಿ ಅಲಂಕಾರವಿದೆ. ಆಗ ಅದಕ್ಕಾಗಿ ಎರಡು ಲಕ್ಷ ರೂಪಾಯಿಗಳ ಖರ್ಚಾಗಿದ್ದು ಆ ಹಣವನ್ನು ಹಿಂದಿ ಚಿತ್ರರಂಗದ ಮೇರು ನಟ ಶ್ರೀ ಅಮಿತಾಬ್ ಬಚ್ಚನ್ ಕೊಟ್ಟಿದ್ದಂತೆ. ಒಮ್ಮೆ ನಾವು ಶನಿಶಿಂಗಣಾಪುರಕ್ಕೆ ಹೋಗಿ ಮರಳಿ ಬರುತ್ತಿರುವಾಗ, ನಮ್ಮ ಟ್ಯಾಕ್ಸಿ ಡ್ರೈವರ್, ಅಮಿತಾಬ್ ಬಚ್ಚನ್ ಹೆಸರು ಹೇಳಿಯೇ ಆ ದೇವಸ್ಥಾನಕ್ಕೆ ಕರೆದೊಯ್ದಿದ್ದ. ದೇವಸ್ಥಾನದ ಆ ಒಳ ಅಲಂಕಾರ ನಮಗೂ ತುಂಬಾ ಇಷ್ಟವಾಗಿ ಅಂದಿನಿಂದ ಶಿಂಗಣಾಪುರಕ್ಕೆ ಹೋದಾಗಲೆಲ್ಲ ಸೊನಯ್ ಗೂ ಹೋಗುವುದು ಮಾಮೂಲಿಯಾಗಿ ಹೋಯಿತು. 

ಶನಿ ಶಿಂಗಣಾಪುರದ ಬಗ್ಗೆ ಕೆಲವರಿಗೆ ಗೊತ್ತು, ಶಿರ್ಡಿ ಗೊತ್ತಿರುವಂತೆ ಬಹಳಷ್ಟು ಜನಕ್ಕೆ ಗೊತ್ತಿಲ್ಲ. ಶಿರ್ಡಿ ಮತ್ತು ಶಿಂಗಣಾಪುರ ನಾವು ಲೋಣಿಯಲ್ಲಿದ್ದಾಗ ಇದ್ದ ಸ್ಥಿತಿಗೂ ಈಗಿರುವ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ! ಶಿರ್ಡಿಯಲ್ಲಿ ಬಾಬಾ ದರುಶನಕ್ಕೆ ಈಗಿನಂತೆ ಕಿಲೋಮಿಟರ್ ಉದ್ದದ ಪಾಳೆ ಅದಕ್ಕಾಗಿ ತಿರುಪತಿಯಲ್ಲಿರುವಂಥ ವ್ಯವಸ್ಥೆ, ಸುತ್ತಲೂ ನೂರಾರು ಅಂಗಡಿಗಳು, ಮಾಲ್, ನೂರಾರು ಲಾಡ್ಜ್, ಭಕ್ತಿಧಾಮಗಳು ಮುಂತಾಗಿ ಏನೂ ಇರಲಿಲ್ಲ ಆಗ! ನೇರ ಪ್ರವೇಶದ್ವಾರದಿಂದ ದೇವಸ್ಥಾನ ಪ್ರವೇಶಿಸಿ ಬಾಬಾ ದರುಶನ ಪಡೆದು ಗಂಟೆಗಟ್ಟಲೇ ಬಾಬಾ ಎದಿರು ಕುಳಿತುಕೊಳ್ಳುತ್ತಿದ್ದೆವು. ಅಲ್ಲಿ ಯಾರೂ ಎದ್ದು ಹೋಗಿ ಅನ್ನುತ್ತಿರಲ್ಲಿಲ್ಲ. ಇದೆಲ್ಲಾ ೨೦೦೦ ನಂತರದ ಬೆಳವಣಿಗೆಗಳು. ಶನಿ ಶಿಂಗಣಾಪುರವೂ ಅಷ್ಟೇ; ಶನಿದೇವರ ಹೆಸರುಹೊತ್ತ, ಬರುವ ಭಕ್ತರಿಂದ ನೆತ್ತಿಯ ಮೇಲೆ ಎಣ್ಣೆ ಹಾಕಿಸಿಕೊಂಡು (ತೈಲಾಭಿಷೇಕ) ಸದಾ ಮಿರಿಮಿರಿ ಮಿಂಚುವ ಆಳೆತ್ತರದ ಕಪ್ಪನೇ ಶಿಲೆ ಯಾವುದೇ ನೆರಳಿಲ್ಲದೇ ಬಯಲಲ್ಲಿ ಒಂದು ಕಟ್ಟೆಯ ಮೇಲೆ ಸ್ಥಾಪಿತಗೊಂಡಿದೆ.

ಈ ದೇವರಿಗೆ ಆಕಾಶವೇ ಸೂರು. ‘ನಾನು ಶನಿದೇವರು, ನನ್ನನ್ನು ಬಯಲಲ್ಲಿ ನಿಲ್ಲಿಸಿ, ನನಗಾಗಿ ಯಾವುದೇ ಕಟ್ಟಡ ಬೇಡ ಎಂದು ಯಾರಿಗೆ ಕನಸು ಬಿದ್ದು, ಈಗಿರುವ ಜಾಗದಲ್ಲಿ ಶನಿದೇವರನ್ನು ಸ್ಥಾಪಿಸಲಾಯಿತೋ ಅವರಿಗಾಗಿ ಶನಿದೇವರ ಎದುರಿಗೇನೇ ಪುಟ್ಟ ಕಟ್ಟಡ ಕಟ್ಟಿ ಅಲ್ಲಿ ಅವರುಗಳ ಮೂರ್ತಿಗಳನ್ನು ಇರಿಸಿದ್ದಾರೆ! ಆಗ ನಾವು ಲೋಣಿಯಲ್ಲಿದ್ದಾಗ ಇದ್ದಿದ್ದು ಇಷ್ಟೇ. ಶನಿದೇವರು ಬಂದು ಶಿಂಗಣಾಪುರದಲ್ಲಿ ನೆಲೆಸಿದ್ದರಿಂದ ಯಾರ ಮನೆಗೂ ಬಾಗಿಲುಗಳ ಫಡಕಿಗಳಿರಕೂಡದು ಎಂದು ಅಲ್ಲಿರುವ ಯಾವ ಮನೆಗೂ ಬಾಗಿಲುಗಳೇ ಇರಲಿಲ್ಲ ಆಗ. ಸುಮ್ಮನೆ ಒಂದು ಗೋಣಿ ಚೀಲದ ಪರದೆ ಇಳಿ ಬಿಟ್ಟಿರುತ್ತಿದ್ದರು. ಅಲ್ಲಿದ್ದ ಒಂದೇ ಒಂದು ಪುಟ್ಟ ಲಾಡ್ಜಿನ ಎಲ್ಲ ಕೋಣೆಗಳಿಗೂ ಆಗ ತಟ್ಟಿನ ಪರದೆಯೇ ಬಾಗಿಲು. ಆದರೆ ಈಗ ಅಲ್ಲಿ ತುಂಬಾ ಬದಲಾವಣೆ ಆಗಿದೆ ಅಲ್ಲಿ. ಶನಿದೇವರಿರುವ ಕಟ್ಟೆಯೊಂದು ಬಯಲಲ್ಲಿದೆ ಅನ್ನುವುದನ್ನು ಹೊರತುಪಡಿಸಿ, ಅವನ ಸುತ್ತಲೂ ವಿಶಾಲವಾದ ಅಂಗಳ ಹೊಂದಿದ ಬೃಹತ್ ಕಟ್ಟಡ ಎದ್ದು ನಿಂತಿದೆ. ಬಾಗಿಲಿಲ್ಲದ ಮನೆಗಳ ಸಂಖ್ಯೆ ಕಮ್ಮಿಯಾಗಿದೆ. ಹತ್ತಾರು ಲಾಡ್ಜುಗಳು ತಲೆ ಎತ್ತಿ ನಿಂತಿವೆ. ಉಳಿದ ದೇವಸ್ಥಾನಗಳಲ್ಲಿರುವಂತೆ ಅಲ್ಲೂ ಈಗ ಪ್ರಸಾದದ ಕೌಂಟರುಗಳನ್ನು ತೆರೆಯಲಾಗಿದೆ. 

ಎಲ್ಲಕ್ಕಿಂತ ಹೆಚ್ಚಾಗಿ ನನ್ನೊಳಗಿನ ನನ್ನ ಪತಿಯೊಳಗಿನ ಅಮಾಯಕತೆ ಮಾಯವಾಗಿ ವಾಸ್ತವ ಪ್ರಜ್ಞೆ ಮುಂಚೆಗಿಂತ ಈಗ ಹೆಚ್ಚಾಗಿದೆ! ಹಾಗಾಗಿ ಅಲ್ಲಿಗೆ ಹೋಗುವುದನ್ನು ನಿಲ್ಲಿಸಿದ್ದೇವೆ. ಸರ್ವಧರ್ಮ ಸಮನ್ವಯದ ಪ್ರತೀಕವಾದ ಶಿರ್ಡಿ ಸಾಯಿಬಾಬಾ ನಮ್ಮಿಬ್ಬರ ಆರಾಧ್ಯ ದೈವ ಎಂದು ನಾವು ಭಾವಿಸಿದ್ದೇವಾದ್ದರಿಂದ ಲೋಣಿ ಬಿಟ್ಟು ಬಂದ ಮೇಲೂ ಪ್ರತೀ ವರ್ಷ ಶಿರ್ಡಿಗೆ ಹೋಗುತ್ತೇವೆ. ಆದರೆ ಪಾಳೆಯಲ್ಲಿ ನಿಂತಾಗ ಎಷ್ಟು ಬಾಬಾರನ್ನು ನೋಡುತ್ತೇವೋ ಅಷ್ಟೇ ಭಾಗ್ಯ! ಹತ್ತಿರ ಬಂದಾಗ ನಿಮಿಷ ಪೂರ್ತಿಯೂ ಯಾರೂ ಅಲ್ಲಿ ನಿಲ್ಲುವ ಹಾಗಿಲ್ಲ, ಹಿಂದೆ ನಿಂತ ಅಸಂಖ್ಯಾತ ಭಕ್ತರೂ ದರ್ಶನ ಪಡೆಯಬೇಕಿರುವುದರಿಂದ ಅಲ್ಲಿಂದ ಹೊರಡಲೇಬೇಕು. ದೇವಸ್ಥಾನದ ಒಳ ಆವರಣದಲ್ಲೊಂದು ಜಾಗವಿದೆ. ಅಲ್ಲಿಂದ ಬಾಬಾ ದೇವಸ್ಥಾನದ ಕಿಟಕಿಯೊಂದರ ಮೂಲಕ ಬಾಬಾರ ಪ್ರತಿಮೆ ಕಾಣಿಸುತ್ತದೆ. ಅಲ್ಲಿ ಬೇಕಾದಷ್ಟು ಹೊತ್ತು ನಿಂತು ಅವರನ್ನು ಕಣ್ತುಂಬಿಕೊಳ್ಳಬಹುದು. ಹಾಗೇ ದೇವಸ್ಥಾನದಲ್ಲಿಯೇ ‘ಮುಖ ದರ್ಶನ’ ಎಂಬ ಜಾಗದವೊಂದಿದೆ. ಅಲ್ಲಿ ಕುಳಿತರೆ ನೂರು ಮಿಟರ್ ದೂರದಿಂದ ಬಾಬಾ ಕಾಣಿಸುತ್ತಾರೆ.

ಮನದಣಿಯುವಷ್ಟು ಅಲ್ಲಿ ಕುಳಿತು ಬಾಬಾರನ್ನು ಕಣ್ತುಂಬಿಕೊಂಡು ಮರಳುತ್ತೇವೆ. ಆರಾಧ್ಯ ದೈವ ಎಂದೆ. ಆದರೆ ನಾನ್ಯಾವತ್ತೂ ಬಾಬಾರ ಹೆಸರಿನಿಂದ ಇಲ್ಲಿಯವರೆಗೆ ಉಪವಾಸ ಮಾಡುವುದಾಗಲಿ ವ್ರತ ಹಿಡಿಯುವುದಾಗಲಿ ಮಾಡಿಲ್ಲ! ನಾನು ಉಪವಾಸ, ವ್ರತ ಎಲ್ಲ ಮಾಡುವುದಿಲ್ಲ ಅನ್ನುವ ಕಾರಣಕ್ಕಾಗಿ ಬಾಬಾ ನನಗೆಂದೂ ಕೆಟ್ಟದ್ದನ್ನ ಮಾಡಿಲ್ಲ! ತಮ್ಮ ಸರ್ವಧರ್ಮ ಸಮನ್ವಯದ ಬದುಕಿನ ನಿದರ್ಶದೊಂದಿಗೆ ನನ್ನ ಮನದಲ್ಲಿಳಿದಿರುವುದರಿಂದ, ಅವರು ನನ್ನ ಆದರ್ಶವಾಗಿ, ಅವರ ಕುರಿತು ನನ್ನ ಬಾಬಾ ಅನ್ನುವ ಪ್ರೀತಿ (ಭಕ್ತಿ) ಹೆಚ್ಚು ನನಗೆ. ನನಗೂ ಜಾತಿ ಧರ್ಮ ಮುಂತಾದವುಗಳ ಬಗ್ಗೆ ಯಾವುದೇ ಮೋಹ, ಅಸಹನೆಗಳಿಲ್ಲದಿರುವುದರಿಂದ, ನನಗಿಂತಲೂ ಶತಮಾನ ಮೊದಲೇ ಇವುಗಳ ಗೋಜಿಲ್ಲದೆನೇ, ಎಲ್ಲಕ್ಕೂ ಮಿಗಿಲಾಗಿ ಬದುಕಿ ತೋರಿದ್ದ ಬಾಬಾ ಅವರು ನಡೆದ ಆ ದಾರಿಯನ್ನು, ಆ ಮೂಲಕ ಬಾಬಾರನ್ನು ಸಂಪೂರ್ಣ ನಂಬುತ್ತೇನೆ. ಅದೇ ಕಾರಣಕ್ಕೆ ಬಾಬಾ ಮೂರುತಿ ಕಂಡಲ್ಲೆಲ್ಲ ಕೈ ಮುಗಿಯುತ್ತೇನೆ. ಬಾಬಾ ಮಾನಸಿಕ ಸ್ಥೈರ್ಯದ ರೂಪದಲ್ಲಿ ನನ್ನೊಂದಿಗಿದ್ದ ಪ್ರಸಂಗಗಳು ಅನೇಕ. 

ನಾವು ಲೋಣಿಯಲ್ಲಿದ್ದಾಗ ನನ್ನ ಪತಿಯ ಸಂಬಳ ನಾಲ್ಕು ಸಾವಿರದಿಂದ ಆರಂಭಗೊಂಡು ಐದುವರ್ಷಗಳಲ್ಲಿ ಐದು ಸಾವಿರಕ್ಕೆ ಏರಿತ್ತು ಅಷ್ಟೇ. ಆದರೆ ಇವರ ಬಳಗದವರೆಲ್ಲಾ, ‘ಇವರ ಸಂಬಳ ಐವತ್ತು ಸಾವಿರ ಇದೆ, ಕೊಡಬೇಕಾಗುತ್ತದೆಂದು ಸುಳ್ಳು ಹೇಳುತ್ತಾನೆ ಗೌಡಣ್ಣ’ ಎಂದು ಮಾತಾಡಿಕೊಳ್ಳುತಿದ್ದರು! ಅತ್ತೆಯವರಿಗೆ ಬರುತ್ತಿದ್ದ ಮಾವನವರ ಪೆನ್ಶನ್ ಹಣದ ಹೊರತಾಗಿ, ಬಿಜಾಪುರ ಮತ್ತು ಲೋಣಿಯಲ್ಲಿನ  ಎಲ್ಲ ಖರ್ಚುಗಳನ್ನೂ ಬರುತ್ತಿದ್ದ ಸಂಬಳದಲ್ಲೇ ನಾವುಗಳೇ ನಿರ್ವಹಿಸುತ್ತಿದ್ದರೂ ಇಂಥ ಮಾತುಗಳು ಕಿವಿಗೆ ಬಿದ್ದಾಗಲೆಲ್ಲ ವಿಚಲಿತರಾಗುತ್ತಿದ್ದೆವು ನಾವು. ನಾವು ಎಲ್ಲಿ ತಪ್ಪುತ್ತಿದ್ದೇವೆ ಎಂದು ಎಷ್ಟು ಯೋಚಿಸಿದರೂ ಉತ್ತರ ಸಿಗುತ್ತಿರಲಿಲ್ಲ. ನಂತರ ಯಾರೇನು ಬೇಕಾದರೂ ಅಂದುಕೊಳ್ಳಲಿ, ಅದರಿಂದ ನಮ್ಮ ಬದುಕೇನೂ ಬದಲಾಗದು ಎಂದು ಮನಸ್ಸಿಗೆ ತೆಗೆದುಕೊಳ್ಳುವುದನ್ನು ನಿಲ್ಲಿಸಿದೆವು. 

ಒಂದು ದಿನ ಇವರು ಮೊದಲು ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ಅಪ್ಸರಾ ಬಿಲ್ಡರ್ಸ್ ನ ಮಾಲಿಕ ಖಾನ್ ಸಾಬ್ ಅವರಿಂದ ಫೋನ್ ಬಂತು. ಬೆಂಗಳೂರಿನಲ್ಲಿ ದೊಡ್ಡ ಪ್ರೊಜೆಕ್ಟ್ ಒಂದು ಸಿಕ್ಕಿದೆ, ನೀವಲ್ಲಿ ಅದರ ಇನ್ಚಾರ್ಜ್ ಆಗಿ. ತಿಂಗಳಿಗೆ ಹದಿನೈದು ಸಾವಿರ ಸಂಬಳ, ಮನೆ ಬಾಡಿಗೆ ಕೊಡುತ್ತೇವೆ ಮತ್ತು ಪ್ರೊಜೆಕ್ಟ್ ಇರುವ ಜಾಗಕ್ಕೆ ಹತ್ತಿರವಾಗಿ ಅರ್ಧ ಎಕರೆ ಜಾಗವನ್ನು ನಿಮಗೆ ಕೊಡುತ್ತೇವೆ ಎನ್ನುವ ಆಫರ್ ಆ ಕಡೆಯಿಂದ! ಪುಣೆಯಲ್ಲಿ ಐನೂರು ರೂಪಾಯಿ ಸಂಬಳ ಹೆಚ್ಚಿಸಲೂ ಹಿಂದೆಮುಂದೆ ನೋಡಿದ ವ್ಯಕ್ತಿ ಇಷ್ಟು ದೊಡ್ಡ ಆಫರ್ ಎದುರಿಗಿಟ್ಟಾಗ ನಂಬಲಾಗಲಿಲ್ಲ. ಮತ್ತೂ ಮತ್ತೂ ಫೋನ್ ಮಾಡಿ ಖಂಡಿತ ಕೊಡುವುದಾಗಿ ಅವರು ಹೇಳತೊಡಗಿದಾಗ, ನಮಗಿದ್ದ ಜವಾಬ್ದಾರಿಗಳು, ಹಣದ ಮುಗ್ಗಟ್ಟು ಅವರ ಮಾತನ್ನು ನಂಬುವಂತೆ ಮಾಡಿತು. ಲೋಣಿಯಿಂದ ಬೆಂಗಳೂರಿಗೆ ಹೋಗುವುದೆಂದು ನಿಶ್ಚಯವಾಯಿತು. ಅಲ್ಲಿಂದ ಹೊರಡುವ ಮೊದಲು ಒಂದು ತಿಂಗಳು ಪೂರ್ತಿ ಅಲ್ಲಿದ್ದ ಎಲ್ಲರೂ ತಮ್ಮ ಮನೆಗೆ ಊಟಕ್ಕೆ ಕರೆದು ಉಡುಗೊರೆ ಕೊಟ್ಟು ಒಳ್ಳೆಯದಾಗಲಿ ಎಂದು ಹರಸಿದರು. 

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

November 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: