ಜಯಲಕ್ಷ್ಮಿ ಪಾಟೀಲ್ ಅಂಕಣ – ನನ್ನೊಳಗಿನ ಅಹಂ ಕನಲತೊಡಗಿತು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

41

ಇವರ ಸಂಬಳ ಕಮ್ಮಿ ಅನ್ನೋದು ನನಗ್ಯಾವತ್ತೂ ಕೊರತೆಯಂತೆ ಅನಿಸಲೇಯಿಲ್ಲ. ಅದಕ್ಕೆ ಕಾರಣ ಹೊಟ್ಟೆಗಾಗ್ಲಿ ಪ್ರೀತಿಯಲ್ಲಾಗ್ಲಿ ಯಾವುದೇ ಕಮ್ಮಿ ಇರಲಿಲ್ಲ ಅಷ್ಟೇ ಅಲ್ಲ, ನನ್ನ ತಂದೆ ತಾಯಿ ನಮ್ಮನ್ನ ಯಾವತ್ತೂ ಅತೀ ಮುದ್ದು ಮಾಡದೇ, ಕೇಳಿದ್ದನ್ನೆಲ್ಲಾ ಕೊಡಿಸದೇ ನಮ್ಮಲ್ಲಿ ಸಂಯಮ ನೆಲೆಸೊ ಹಾಗೆ ಮಾಡಿದ್ದೂ ಮುಖ್ಯ ಕಾರಣ. ಜೊತೆಗೆ ನನ್ನಲ್ಲೂ ಕಂಡದ್ದಲ್ಲಾ ಬೇಕು ಅನ್ನುವ ಹಪಹಪಿ ಇಲ್ಲದಿರುವುದೂ ಒಂದು ಕಾರಣವಾಗಿರಬಹುದು. ಹಾಗಂತ ತೀರಾ ವಿರಾಗಿಯಂತಹ ಮನಸತ್ವವೇನೂ ಅಲ್ಲ ನನ್ನದು. ಬೇಕು ಅನಿಸಿದ್ದು ಸಿಗದೆ ಹೋದಲ್ಲಿ ಹಠ ಮಾಡದೆ ಸುಮ್ಮನಿರುವುದು ಅಭ್ಯಾಸವಾಗಿತ್ತಾದ್ದರಿಂದ ಅದೇ ಮುಂದುವರೆದಿದೆ ಅಷ್ಟೇ. ಆದರೆ ಅದೊಮ್ಮೆ ಅದೆಷ್ಟು ಬಲವಾದ ಆಸೆ ಮೂಡಿತ್ತು ಎಂದರೆ…

ನನ್ನ ಸಹಪಾಠಿ ಸುಹಾಸಿನಿ ಕೊರ್ತಿ ಮತ್ತು ರಾಜಾ (ಪರಗೊಂಡ) ಬಗಲಿ ೧೯೯೨ರ ಜುಲೈ ತಿಂಗಳಲ್ಲಿ, ಉಡುಪಿ, ಇಡಗುಂಜಿ, ಕೊಲ್ಲೂರು ಇತ್ಯಾದಿ ಜಾಗಗಳನ್ನು ನೋಡಿಕೊಂಡು ಪುಣೆಯ ನಮ್ಮನೆಗೆ ಬಂದಿದ್ದರು. ಅವರಿಬ್ಬರ ಪ್ರೇಮದ ಉತ್ತುಂಗದ ದಿನಗಳವು. ಸುಹಾಸಿನಿ ಚೆಂದದ ಕಂಠಸಿರಿಯ ಚಲುವೆ. ಸರಕಾರಿ ಪಶುವೈದ್ಯರ ಮಗಳು. ಅವಳು ಹಾಡುತ್ತಿದ್ದರೆ ಕೇಳುತ್ತಲೇ ಇರಬೇಕು ಅನಿಸುತ್ತದೆ. ಅವಳು ನಕ್ಕರೆ ಎಡೆಗೆನ್ನೆಯ ಮೇಲೊಂದು ಮಡುವಿನಂಥಾ ಗುಳಿ ಬೀಳುತ್ತದೆ. ಓದಿನಲ್ಲೂ ಜಾಣೆ ಆಕೆ. ಈಗ ಬಿಜಾಪುರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪ್ರಾಧ್ಯಾಪಕಿಯಾಗಿ  ಕೆಲಸ ಮಾಡುತ್ತಿದ್ದಾಳೆ. ಸರಕಾರಿ ಸೂಪರಿಟೆಂಡೆಂಟ್ ಇಂಜಿನಿಯರ್ ಹುದ್ದೆಯಲ್ಲಿದ್ದ ಬಗಲಿ ಅವರ ಏಕೈಕ ಸುಪುತ್ರ ನಮ್ಮ ರಾಜಾ. ತುಂಬಾ ಮುದ್ದಿನಲ್ಲಿ ಬೆಳೆದ ಹುಡುಗ.

ಪುಣೆಗೆ ನಮ್ಮಲ್ಲಿ ಬಂದಾಗ ಸುಹಾಸಿನಿಗೊಂದು ತುಂಬಾ ಸುಂದರವಾದ ತುಂಬು ನೆರಿಗೆ ಇರುವ ಮಕಮಲ್ಲಿಂತೆ ಮೃದುವಾಗಿರುವ ಬಿಳಿ ಚೂಡಿದಾರ್ ಕೊಡಿಸಿದ್ದ. ಅವರೊಂದಿಗೆ ಹೋಗಿ ನಾನೇ ಅಂಗಡಿಯಲ್ಲಿ ಆರಿಸಿದ್ದು. ಅದು ನನ್ನ ಮನಸ್ಸನ್ನು ಅದೆಷ್ಟು ಸೂರೆಗೊಂಡಿತ್ತೆಂದರೆ ಅಂಥದ್ದೇ ನಾನೂ ಒಂದು ತೆಗೆದುಕೊಳ್ಳಲೇಬೇಕು ಅನ್ನುವ ಅದಮ್ಯ ಆಸೆ ಹುಟ್ಟಿಕೊಂಡು ಬಿಟ್ಟಿತ್ತು. ಆದರೆ ಅದರ ಬೆಲೆ ಆಗ ೨೦೦೦ ರೂಪಾಯಿಗಳು! ಅದು ನಮ್ಮನೆಯ ಒಂದಿಡೀ ತಿಂಗಳ ಖರ್ಚು! ನಮ್ಮ ಹಣಕಾಸಿನ ಸ್ಥಿತಿ ಗೊತ್ತಿದ್ದರೂ ತಡೆಯದೇ ಗಂಡನ ಎದುರು ನನ್ನಾಸೆಯನ್ನು ಹೇಳಿಕೊಂಡುಬಿಟ್ಟೆ. ಅವರು ಸುಮ್ಮನೆ ನಕ್ಕರು. ತಪ್ಪು ಮಾಡಿದ ಭಾವ ಕಾಡತೊಡಗಿ ತಲೆ ತಗ್ಗಿಸಿದೆ. ಮುಂದೆ ಯಾವುದೋ ಹಬ್ಬಕ್ಕೆ ಈಗ ಅನಾರ್ಕಲಿ ಅಂತಾರಲ್ಲ ಅಂಥದ್ದೊಂದು ಖಾದಿಯ ಬಿಳಿಯದೊಂದು ಚೆಂದದ ಡ್ರೆಸ್ ಕೊಡಿಸಿದರಾದರೂ, ಅದರ ಅಂದ ಗೆಳತಿಯ ಡ್ರೆಸ್ಸಿನ ಅಂದಕ್ಕೆ ಸಮನಾಗಿರಲಿಲ್ಲ ಅನ್ನುವುದು ನಿಜ. ಇವರು ಅದರ ಬೆಲೆಯನ್ನು ಹೇಳಿದಾಗ ಯಾಕಾದರೂ ನಾನು ಡ್ರೆಸ್ ಬೇಕೆಂದು ಕೇಳಿದೆನೋ ಎಂದು ತುಂಬಾ ದಿನ ಹಳಹಳಿಸಿದೆ. ನಾನು ಆಸೆಪಟ್ಟೆ ಅನ್ನುವ ಒಂದೇ ಕಾರಣಕ್ಕೆ ಇವರು ೭೦೦ ರೂಪಾಯಿಗಳನ್ನು ಕೊಟ್ಟು ತಂದಿದ್ದರು ಅದನ್ನು! ನಮ್ಮತ್ತೆಯವರಿಗೆ ೨೦೦೦ ರೂಪಾಯಿಯ ಮೈಸೂರು ಸಿಲ್ಕ್ ಕೊಡಿಸಲೇಬೇಕು ಎಂದು ಹಠ ಮಾಡಿ, ಕೊಂಡಿದ್ದಾಗ ಮತ್ತು ಸಂಸಾರದ ಆರಂಭದ ದಿನಗಳಲ್ಲಿ, ನನಗೆ ಸಂಸಾರದ ಖರ್ಚು ಬಾಬತ್ತಿನ ಅಂದಾಜೇ ಇರಲಿಲ್ಲ. ಈಗ ಅದರ ಪರಿಚಯವಾಗಿತ್ತಾದರಿಂದ ಕೇಳಬಾರದಿತ್ತು ನಾನು ಅನಿಸಿ ಪಶ್ಚಾತಾಪವಾಗಿತ್ತು.

೧೯೯೨ ನೋವಿನ ಜೊತೆಗೆ ಸಂಭ್ರಮವನ್ನೂ ಹೊತ್ತೇ ಕಾಲಿಟ್ಟಿತ್ತು ನಮ್ಮ ಬದುಕಲ್ಲಿ. ವರ್ಷದ ಆರಂಭದಲ್ಲಿಯೇ ಇವರ ತಂದೆ ಅಂದರೆ ನನ್ನ ಮಾವನವರಿಗೆ ಎದೆಯಲ್ಲಿ ನೋವು ಎಂದಾಗಿ ಇಲ್ಲಿಯೇ ತೋರಿಸೋಣ ಬನ್ನಿ ಎಂದು ಅವರನ್ನು ಒತ್ತಾಯದಿಂದ ಪುಣೆಗೆ ಕರೆಸಿಕೊಂಡೆವು. ಮಗನ ಬಳಿಯೂ ಅವರಿಗೆ ಮಹಾ ಸಂಕೋಚ ಮತ್ತು ಭಾರವಾಗಬಾರದು ಎನ್ನುವ ಕಾಳಜಿ. ಸಸೂನ್ ರೋಡಲ್ಲಿರುವ ರೂಬಿ ಆಸ್ಪತ್ರೆ ಚೆನ್ನಾಗಿದೆ ಎಂದು ಗೊತ್ತಾಗಿ ಅಲ್ಲಿ ಮಾವನವರನ್ನು ಕರೆದುಕೊಂಡು ಹೋಗಿ ತೋರಿಸಿದೆವು. ಕೆಲವು ಪರೀಕ್ಷೆಗಳಾದ ನಂತರ ಮಾವನವರ ಎಡ ಪುಪ್ಪಸಕ್ಕೆ ಕ್ಯಾನ್ಸರ್ ಬಂದಿರುವುದು ಪತ್ತೆಯಾಯಿತು. ತಕ್ಷಣ ಚಿಕಿತ್ಸೆ ಆರಂಭಿಸಬೇಕು ಎಂದು ವೈದ್ಯರು ಹೇಳಿದರೂ, ಮಾವನವರಿಗೆ ಕೆಲಸಕ್ಕೆ ರಜೆ ಮತ್ತು ಮನೆ ಕಡೆಗೂ ವ್ಯವಸ್ಥೆ ಮಾಡಿ ಬರಬೇಕಾಗಿದ್ದರಿಂದ ಊರಿಗೆ ಹೋಗಿ ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಬಂದರು. ಚಿಕಿತ್ಸೆ ಆರಂಭವಾಯಿತು. ಈಗಿನ ಹಾಗೆ ಆಗೆಲ್ಲ ನಮ್ಮಂಥ ಜನಸಾಮಾನ್ಯರು ರೇಡಿಯೇಶನ್, ಕೀಮೊ ಅಂತೆಲ್ಲ ಅಂತಿರಲಿಲ್ಲ. ಕರೆಂಟ್ ಕೊಡಿಸೋದು ಅಂತಿದ್ದ್ವಿ. ಬಹುಶಃ ರೇಡಿಯೇಶನ್ ನಂತರದ ಉರುಪಿನ ತೀವ್ರತೆಯಿಂದಾಗಿ ಕರೆಂಟು ಕೊಡೋದು ಅಂತಿದ್ದ್ರೋ ಏನೋ. ಹಾಗೆ ಕರೆಂಟ್ ಕೊಡಿಸಲು ಧನಕ್ವಾಡಿಯ ಬಾಲಾಜಿನಗರದಲ್ಲಿದ್ದ ನಮ್ಮ ಮನೆಯಿಂದ ಸೂಸನ್ ರಸ್ತೆಯ ರೂಬಿ ಆಸ್ಪತ್ರೆಗೆ ಎರಡು ಸಿಟಿ ಬಸ್ ಬದಲಿಸಿ ವಾರಕ್ಕೆರಡು ಬಾರಿ ಮಾವನವರನ್ನು ಕರೆದುಕೊಂಡು ಹೋಗಿ ಬರುತ್ತಿದ್ದೆ. ಬರುವಾಗ ಅವರಿಗೆ ಕಷ್ಟವಾಗದಿರಲಿ ಎಂದು ಅವರನ್ನು ನಾನು ಆಟೊರಿಕ್ಷಾದಲ್ಲಿ ಕರೆತರುವುದು ಮಾವನವರಿಗೆ ಬಲು ದುಬಾರಿ ಅನ್ನಿಸೋದು.

“ಯಾಕವಾ ಗೌಡಶ್ಯಾನಿ ಸುಮ್ನ ಒಂದಕ್ಕ ನಾಕ್ ಖರ್ಚ್ ಮಾಡ್ತಿ? ನನಗೇನಾಗಂಗಿಲ್ಲ ಸಿಟಿಬಸ್ಸಿನ್ಯಾಗ ಹೋಗೂನು ನಡೀ” ಅನ್ನೋರು.

“ನಿಮಗಿಂತ ರೊಕ್ಕ ಹೆಚ್ಚೇನ್ರಿ ಮಾಮಾರ? ಮದ್ಲ ಕರೆಂಟ್ ಕೊಟ್ಟಿದ್ದ ಬ್ಯಾನಿನೇ ರಗಡಾಗಿರ್ತೈತಿ. ಅಂಥಾದ್ರಾಗ ಬಸ್ಸಿನ್ಯಾಗ ಹೋದ್ರ ತ್ರಾಸಕ್ಕತ್ರಿ. ಹಂಗೆಲ್ಲಾ ಏನೂ ಅನ್ಕೋಬ್ಯಾಡ್ರಿ, ಜಲ್ದಿ ಆರಾಮಾಗ್ರಿ ನೀವು ಸಾಕ್ರಿ ಮಾಮಾರ” ಎಂದು ನಾನೆಂದರೆ,

“ಇಲ್ಲವಾ, ಕರಂಟ್ ಅಂದ್ರ ನಾನೂ ಮದ್ಲ ಅಂಜಿದ್ದೆ. ಆದ್ರ ಕೊಡಾಗ ಏನೇನೂ ಬ್ಯಾನಿ ಆಗಂಗಿಲ್ಲ” ಅವರು ಸಮಜಾಯಿಶಿ ನೀಡಲು ನೋಡಿದರೂ ಕೇಳದೇ ಅವರನ್ನು ಆಟೋದಲ್ಲೇ ಮನೆಗೆ ಕರೆತರುತ್ತಿದ್ದೆ. ಕಾರಣ ಮನೆಗೆ ಬಂದ ಮೇಲೆ ಅದು ಕೊಡುವ ಹಿಂಸೆಯನ್ನು ನಾನು, ನನ್ನ ಅಜ್ಜಿ ಹಲ್ಲುಕಚ್ಚಿ ಸಹಿಸುವುದನ್ನು ನೋಡಿ ತಿಳಿದಿದ್ದೆ. ಅಂಥಾ ಅವಸ್ಥೆಯಲ್ಲೂ ಮಾವನವರು ತಮ್ಮ ಮೂರು ಹೊತ್ತಿನ ಸ್ನಾನ, ಲಿಂಗಪೂಜೆಯ ನಂತರವಷ್ಟೇ ಆಹಾರ ತೆಗೆದುಕೊಳ್ಳುತ್ತಿದ್ದರು. ಗುರುಗಳಿಂದ ಲಿಂಗ ದೀಕ್ಷೆ ತೆಗೆದುಕೊಂಡ ಅವರಿಗೆ, ಮೂರೂ ಹೊತ್ತಿನ ಸ್ನಾನ ಪೂಜೆ ಆಗಲೇಬೇಕು ಅನ್ನುವ ನಿಯಮವನ್ನು ಅವರು ತೀರಾ ಕೊನೆಗಾಲದ ಒಂದು ತಿಂಗಳಿನ ಮೊದಲಿನವರೆಗೆ ಪಾಲಿಸಿಕೊಂಡೇ ಬಂದರು. ದೀಕ್ಷೆಯಿಂದಾಗಿ ತಟ್ಟೆಯಲ್ಲಿ ಒಂದಗುಳೂ ಬಿಡುವ ಹಾಗಿರುವುದಿಲ್ಲ ಮಾತ್ರವಲ್ಲ, ತಾವುಂಡ ತಟ್ಟೆಯಲ್ಲೇ ನೀರು ಹಾಕಿ ಕುಡಿಯಬೇಕು. ಮಾವನವರು ತಪ್ಪದೇ ಅದನ್ನೆಲ್ಲಾ ಪಾಲಿಸುತ್ತಿದ್ದರು. ನಮ್ಮ ಜನರೇಶನ್ನಿನವರು ಮಾತ್ರ ಅನಿಸುತ್ತೆ ದೀಕ್ಷೆ ತೆಗೆದುಕೊಂಡರೂ ನಂತರದ ಕೆಲವು ತಿಂಗಳಿಗೇ ಗುಂಡಗಡಿಗೆಯನ್ನು ದೇವರ ಜಗುಲಿಯ ಮೇಲಿಟ್ಟು ಕೈಮುಗಿದು ಎಲ್ಲ ನೇಮನಿಷ್ಠೆಗಳನ್ನು ಗಾಳಿಗೆ ತೂರಿದವರು. ಹಾಗಾಗಿ ದೀಕ್ಷೆ ಹೊಂದಿದ್ದರೂ ನಾವುಗಳು ಅದನ್ನೆಲ್ಲ ಪಾಲಿಸಲಿಲ್ಲ. ಬಾಲ್ಯದಿಂದಲೂ ತೃಪ್ತಿಯಿಂದ ಹೈನುಂಡು ಬೆಳೆದ ಮಾವನವರಿಗೆ ಹೋಳಿಗೆಯ ಮೇಲೆ ಚಮಚದಿಂದ ತುಪ್ಪ ಹಾಕಿದರೆ ಆಗುತ್ತಿರಲಿಲ್ಲ. ಹೋಳಿಗೆಯಿದ್ದಾಗ ಹಾಲಿನಂತೆ ಬಟ್ಟಲು ತುಂಬಿದ ತುಪ್ಪ ತಾಟಲ್ಲಿ ಇರಬೇಕಿತ್ತಂತೆ. ಅವರು ವರ್ಗಾ ಆಗಿ ಕಲಕೇರಿಗೆ ಬಂದ ಮೇಲೆ ಕೊಂಡು ತರುವ ಹಾಲು ತುಪ್ಪವನ್ನು ತುಪ್ಪದಂತೆಯೇ ಇಷ್ಟಿಷ್ಟೇ ಬಳಸುವ ಅನಿವಾರ್ಯತೆ ಉಂಟಾದ ಮೇಲೆ ಹೋಳಿಗೆ ಉಣ್ಣುವುದನ್ನೇ ಬಿಟ್ಟುಬಿಟ್ಟಿದ್ದರಂತೆ. ಹೀಗಂತ ಅತ್ತೆ ಹೇಳಿದ್ದು ನೆನಪಿತ್ತಾದರಿಂದ, ಮಾವನವರು ಪೂನಾದಲ್ಲಿ ನಮ್ಮೊಂದಿಗಿದ್ದಾಗ ಹೋಳಿಗೆ ಮಾಡಿ ಬಟ್ಟಲಲ್ಲಿ ತುಪ್ಪ ಹಾಕಿಕೊಟ್ಟಿದ್ದೆ. ಅಂದು ಅವರ ಕಣ್ಣಲ್ಲಿ ತುಳುಕಿದ ಖುಷಿಯನ್ನು ಪಟ್ಟನೇ ರೆಪ್ಪೆಯಲ್ಲಡಗಿಸಿ ತೃಪ್ತಿಯಿಂದ ಉಂಡೆದ್ದ ನೆನಪು ಮನದಲ್ಲಿ ಅಚ್ಚೊತ್ತಿದೆ.

ಮೊದಲ ಟ್ರೀಟ್ಮೆಂಟ್ ಕೋರ್ಸ್ ಮುಗಿಸಿಕೊಂಡು ಮಾವ ಕಲಕೇರಿಗೆ ಮರಳಿದರು. ನಮ್ಮ ಜೊತೆಗೇ ಇರಿ ಎಂದರೂ ಕೇಳಲಿಲ್ಲ. ಹೇಗೂ ಮೂರು ತಿಂಗಳ ನಂತರ ಮತ್ತೆ ಕೀಮೊ ಮತ್ತು ರೇಡಿಯೇಶನ್ ಗೆ ಬರಲು ವೈದ್ಯರು ಹೇಳಿದ್ದರಲ್ಲ ಆಗ ನಮ್ಮ ಜೊತೆಯೇ ಇರಿಸಿಕೊಂಡರಾಯಿತು ಎಂದುಕೊಂಡೆವಾದರೂ ಆಗಲೂ ಮಾವನವರು ನೌಕರಿಯ ಕಾರಣ ಹೇಳಿ ಚಿಕಿತ್ಸೆ ಮುಗಿದಿದ್ದೇ ಊರಿಗಿ ಹೋದರು.

ಮಾವನವರಿಗೆ ನನ್ನ ಕಂಡರೆ ಸಣ್ಣ ಮಗುವಿನ ಮೇಲಿನ ವಾತ್ಸಲ್ಯ. ಅದಕ್ಕೊಂದು ಉದಾಹರಣೆ ಎಂಬಂತೆ ನಡೆದ ಒಂದು ಘಟನೆಯನ್ನು ನೆನೆದಾಗಲೆಲ್ಲ ಮನಸ್ಸು ಆರ್ದ್ರವಾಗುತ್ತದೆ. ಮದುವೆಯಾದ ಹೊಸತರಲ್ಲಿ ಬಹುಶಃ ೧೯೯೧ರ ಜನವರಿಯಲ್ಲಿರಬೇಕು, ತವರಿನಲ್ಲಿದ್ದ ನನ್ನನ್ನು, ಅತ್ತೆ ಮಾವ ಮುಗುಳಖೋಡಿಗೆ ಕರೆದುಕೊಂಡು ಹೋದರು. ಅಲ್ಲಿನ ಮಠದಲ್ಲಿ ಸಪ್ತಾಹ ನಡೆದಿತ್ತು. ಮದುವೆಗೂ ಮೊದಲು ಗೌರಿಹುಣ್ಣಿಮೆಗೆ ಸಕ್ಕರೆ ಆರತಿಯೊಡನೆ ಅವರೇ ಕೊಟ್ಟಿದ್ದ ಗಾಢ ನೀಲಿ ಅಂಚು ಸೆರಗಿರುವ, ಆಕಾಶನೀಲಿ ಬಣ್ಣದ ಪಾಲಿಸ್ಟರ್ ಸೀರೆ ಉಟ್ಟುಕೊಂಡುಹೋಗಿದ್ದೆ.

ನನಗಾ ಸೀರೆ ತುಂಬಾ ಇಷ್ಟವಾಗಿತ್ತು. ಬೆಳಿಗ್ಗೆ ಹೋಗಿ ರಾತ್ರಿಯವರೆಗೆ ವಾಪಸ್ ಬರುವುದು ಎಂದಾಗಿತ್ತಾದ್ದರಿಂದ ಬಟ್ಟೆಬರೆ ಹೊದಿಕೆ ಏನನ್ನೂ ಒಯ್ದಿರಲಿಲ್ಲ. ಮಾವನವರ ದೀಕ್ಷೆಯಿಂದಾಗಿ ಅವರ ಒಂದು ಜೊತೆ ಬಟ್ಟೆ ಟವಲ್ಲು ಮಾತ್ರ. ನಾವು ಹೋದ ಸಮಯದಲ್ಲಿ ಅಲ್ಲಿನ ಸ್ವಾಮಿಗಳ ದರ್ಶನವಾಗದೇ, ಮರುದಿನ ಅವರನ್ನು ಕಾಣುವ ಅಪೇಕ್ಷೆಯಿಂದ ಅಲ್ಲೇ ಉಳಿಯುವುದೆಂದು ನಿರ್ಧರಿಸಿದರು. ಯಾವುದಾದರೂ ಹೊಟೆಲಲ್ಲಿ ಉಳಿದುಕೊಳ್ಳಬಹುದು ಎಂದೆಣಿಸಿದ್ದೆ. ಆದರೆ ಆ ಊರಲ್ಲಿ ಉಳಿದುಕೊಳ್ಳುವಂಥಾ ಲಾಡ್ಜುಗಳಿರಲಿಲ್ಲ. ಮಾವನವರು,

“ಇಂಥಾ ಭಾಗ್ಯ ಮತ್ತ ಮತ್ತ್ ಎಲ್ಲಿ ಸಿಗಬೇಕು ನಮಗ. ಇವತ್ತ ಮಠದಾಗ ಉಳದು ಮುಂಜಾನೆದ್ದು ದರ್ಶನ ಮಾಡ್ಕೊಂಡು ಇಲ್ಲಿಂದ ಹೋಗೂನು” ಎಂದಾಗ ನನ್ನೆದೆ ಧಸಕ್ ಅಂತು!

ಆ ಮಠದ ಒಂದೊಂದು ಕೋಣೆಯಲ್ಲೂ, ಆವರಣದಲ್ಲೂ ಎಲ್ಲಿ ನೋಡಿದರಲ್ಲಿ ಜನ. ಹೊದೆಯಲು ಹಾಸಲು ಏನೇನೂ ಇಲ್ಲ! ಇಲ್ಲಿ ಹೇಗೆ ಮಲಗೋದು ಎಂದು ಯೋಚಿಸುತ್ತಲೇ ಮಠದಲ್ಲಿ ಪ್ರಸಾದ (ಊಟ) ಸ್ವೀಕರಿಸಿದೆವು. ಉಂಡ ಮೇಲೆ ನಮ್ಮ ತಟ್ಟೆ ನಾವೇ ತೊಳೆದಿಡಬೇಕು ಎಂದಾಗ ನನ್ನೊಳಗಿನ ಅಹಂ ಕನಲತೊಡಗಿತು. ಆದರೆ ಅತ್ತೆ ತಮ್ಮ ತಟ್ಟೆ ತೆಗೆದುಕೊಂಡು ಮೇಲೆದ್ದಾಗ ಅನಿವಾರ್ಯವಾಗಿ ಅವರನ್ನು ಅನುಸರಿಸಿ ಹೋಗಿ ಕೈತೊಳೆದುಕೊಂಡು ಅವರ, ಮಾವನವರ ಮತ್ತು ನನ್ನ ತಟ್ಟೆಗಳನ್ನು ತೊಳೆದಿಟ್ಟು ಬಂದೆ.

ಉತ್ತರ ಕರ್ನಾಟಕದಲ್ಲಿ ಛಳಿಯ ಅನುಭವ ಆಗೋದು ಡಿಸೆಂಬರ್ ಮತ್ತು ಜನವರಿಯ ಆರಂಭದಲ್ಲಿ ಮಾತ್ರ. ಉಂಡವರೆಲ್ಲ ಅಲ್ಲಲ್ಲಿ ಹರಟೆ ಹೊಡೆಯುತ್ತಾ, ಪರಸ್ಪರ ಪರಿಚಯಿಸಿಕೊಳ್ಳುತ್ತಾ ಜಾಗ ಸಿಕ್ಕಲ್ಲಿ ತಾವು ತಂದ ಜಮಖಾನ, ಬೆಡ್ಶೀಟ್ ಹಾಸಿ ಹೊದ್ದು, ಇಲ್ಲಾ ಅಂಥಾ ಛಳಿಯಲ್ಲಿಯೂ ಹಾಗೆಯೇ ನೆಲದ ಮೇಲೆ ಮಲಗುತ್ತಿದ್ದರೆ ನಾನ್ಯಾಕಾದರೂ ಇಲ್ಲಿಗೆ ಬಂದೆನೋ ಎಂದು ಪೇಚಾಡತೊಡಗಿದೆ. ಕಂಡಕಂಡವರ ನಡುವೆ ಜಾಗ ಸಿಕ್ಕಲ್ಲಿ ಮಲಗುವುದು ಅಸಾಧ್ಯದ ಮಾತು ಅನಿಸಿತು. ನಮ್ಮತ್ತೆ ತಲೆ ಕೆಡೆಸಿಕೊಳ್ಳದೇ ಪರಿಚಯವಾದ ಹೆಣ್ಣುಮಕ್ಕಳೊಂದಿಗೆ ಮಾತಾಡುತ್ತಾ, ತುಂಬು ಸೆರಗುಹೊದ್ದು, ಮೈ ಮೇಲೆ ಟವಲ್ ಹೊದ್ದು ನಿದ್ದೆ ಹೋದರು.

ನನಗೋ ಜಪ್ಪಯ್ಯ ಅಂದರೂ ಮೈ ನೆಲೆದೆಡೆಗೆ ವಾಲುತ್ತಿಲ್ಲ. ಕುಳಿತೇಯಿದ್ದ ನನ್ನ ನೋಡಿ ಮಾಮಾರು ಮಲಗಲು ಸೂಚಿಸಿದರೂ ಅವರೆದು ಹೇಳಲೂ ಆಗದೇ ಅನುಭವಿಸಲೂ ಆಗದೇ ಚಡಪಡಿಸುತ್ತಾ ಕುಳಿತೇ ಇದ್ದೆ. “ಉಳದೋರೆಲ್ಲಾ ಮಲಗಿಲ್ಲೇನು? ಮಕ್ಕೊ ಜಯಲಕ್ಷ್ಮಿ” ಆಜ್ಞಾಪಿಸುವಂತೆ ಹೇಳಿದಾಗ ಅನಿವಾರ್ಯವಾಗಿ ಗೂಡುಗಾಲು ಹಾಕಿಕೊಂಡು ಮುದುರಿ ಮಲಗಿದೆ. ಛಳಿ ಮತ್ತು ಎಲ್ಲೋ ಯಾರ್ಯಾರೋ ಜನರ ನಡುವೆ ಮಲಗಿರುವೆ ಅನ್ನುವ ಅವಮಾನದಂಥಾ ಭಾವ ಎಷ್ಟೋ ಹೊತ್ತು ಬಿಡಲಿಲ್ಲವಾದರೂ ನಿದ್ರಾದೇವಿ ನನ್ನ ಅರಿವಿಗೆ ಬರದಂತೆ ಯಾವುದೋ ಒಂದು ಕ್ಷಣದಲ್ಲಿ ತನ್ನ ತೋಳಿಗೆಳೆದುಕೊಂಡು ಚೈ ತಟ್ಟಿದ್ದಳು. ನಸುಕಿನಲ್ಲಿ ಅತ್ತೆಯವರು ನನ್ನನ್ನು ಎಬ್ಬಿಸಿದಾಗ ಓಹ್ ಮಲಗಲಾರೆ ಎಂದುಕೊಂಡವಳು ನಿದ್ದೆಹೋಗಿಬಿಟ್ಟಿದ್ದೇನೆ ಎಂದು ಸಂಕೋಚಪಡುತ್ತಾ ಎದ್ದು ಕೂತರೆ ನನ್ನ ಮೈತುಂಬಾ ನಾಲ್ಕು ಮಡಿಕೆ ಮಾಡಿ ಹೊದಿಸಿದ ಮಾವನವರ ಧೋತರವಿತ್ತು. ಮಾವನವರತ್ತ ತಿರುಗಿದರೆ ಅವರ ಮೈ ಮೇಲೆ ಧೋತರವಿಲ್ಲ! ಅತ್ತೆಯವರಿಗೆ ಅಸಮಧಾನವಾಗಿತ್ತು.

“ಅಲ್ಲs, ನಿನಗ ರೂಢಿ ಐತಿ, ಅಕಿಗೆ ರೂಢಿ ಇಲ್ಲ. ನಡಗಾಕಹತ್ತಿದ್ಳು, ಅದಕ್ಕ ಹೊಚ್ಚೀದೆ. ಏನಾತು ಅಂಥಾದ್ದು ಈಗ?” ಎಂದು ಸಮಾಧಾನಿಸುತ್ತಿದ್ದರು ಅತ್ತೆಯವರನ್ನು. ನನ್ನ ಕಣ್ಣುತುಂಬಿ ಬಂದವು. ಅಲ್ಲಿಯವರೆಗಿದ್ದ ಯಾಕಾರ ಬಂದ್ನೋ ಇಲ್ಲಿಗೆ ಅನ್ನುವ ಭಾವ ಅಳಿದು ಬೆಚ್ಚನೆಯ ಆಪ್ತತೆ ನೆಲೆಗೊಂಡಿತು. ರಾತ್ರಿ ಊಟಕ್ಕೂ ಮೊದಲು ಮಾವನವರ ಸ್ನಾನವಾಗಿ ಆಗ ಉಟ್ಟ ಧೋತರವನ್ನು ಅವರು ತೊಳೆದುಹಾಕಿದ್ದರಿಂದ ತಾವುಟ್ಟ ಧೋತರವನ್ನೇ ಬಿಚ್ಚಿ ನಾಲ್ಕು ಮಡಿಕೆ ಮಾಡಿಕೆ ನನಗೆ ಹೊದೆಸಿ ತಾವು ರಾತ್ರಿಯೆಲ್ಲಾ ಛಳಿಯಲ್ಲಿ ನಿದ್ದೆ ಮಾಡದೆ ನಮ್ಮಿಬ್ಬರಿಗೂ ಕಣ್ಗಾವಲಾಗಿ ಕಾಯ್ದು ಕಳೆದಿದ್ದರು.

| ಇನ್ನು ಮುಂದಿನ ವಾರಕ್ಕೆ | 

‍ಲೇಖಕರು Admin

August 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Sanjeev Aladhi

    Patil Madammaravare, nivu thumba chennagi namma Utthar Karnatakada Javari bhashene balasutthiri, Dayavittu nivu bareyuttha iri, Bareyodhannu nillisabyadri, nimma barahadha bhashe mathu mugdha bhava thumba manassige hidisithu, Dayavittu nimma Mai Manasina arogya kaadikondu chendhaga bareyuttha iri…. Nimma baravanige Horalu notakke kayuttha iruttheve. Namaskar Madamm…..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: