ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯರಾಮಾಚಾರಿ ಹೊಸ ಕವಿತೆ – ಲಾಸ್ಟ್ ಅಂಡ್ ಫೌಂಡ್…

ಜಯರಾಮಾಚಾರಿ

ಸೆಕ್ಯುರಿಟಿ ಹಸಿರು ಬಣ್ಣದ ಕವರ್ ಕೈಯಲ್ಲಿ
ಹಿಡಿದು ಬಂದಾಗ
ನನ್ನ ಎದೆ ಹೊಡೆದುಕೊಳ್ಳಲು ಸುರುವಾಯ್ತು
ದೇವರೆ ಈ ಕೊನೆಯ ನಿಲ್ದಾಣದಲ್ಲಿ
ಇನ್ಯಾರು ಏನೋ ಕಳೆದುಕೊಂಡರೋ?!
ಮರೆತು ಹೋದರೋ ಎಂದು
ಅವನು ತಂದಿಟ್ಟ ಕವರಿನಲ್ಲಿ
ಬಣ್ಣದ ಗುಳಿಗೆಗಳಿದ್ದವು
ಪಾರದರ್ಶಕ ಕವರಿನಲ್ಲಿ
ಮರಳಿನಂತ ಪುಡಿಯಿತ್ತು
ಹೊಸದಾಗಿ ಕೊಂಡಿರಬಹುದಾದ
ಚಿಕ್ಕ ಮಗುವಿನ ವೆಲ್ವೇಟ್ ಬಟ್ಟೆ ಕೂಡ ಇತ್ತು

ಹೀಗೆ ಕಳೆದುಕೊಂಡವರ ಪಟ್ಟಿ ದೊಡ್ಡದಿದೆ
ಊಟದ ಡಬ್ಬಿ, ಹೂ ಹಣ್ಣು ಬುಟ್ಟಿ
ಕವರಿನಲ್ಲಿ ಶೂ ಚಪ್ಪಲಿ ಬಟ್ಟೆಗಳು
ಕೆಲವೊಮ್ಮೆ ಛತ್ರಿಗಳು ಸಾಮಾನ್ಯ
ಮೊಬೈಲ್ ಲಾಪ್ ಟಾಪ್ ಆದರೆ ಕಳೆದುಕೊಂಡವರು ದೇವರಂತೆ ಮರು ನಿಮಿಷವೇ ಪ್ರತ್ಯಕ್ಷ
ಬಿಟ್ಟು ಹೋದ ವಸ್ತುಗಳ ದೊಡ್ಡ ಪಟ್ಟಿಯಿದೆ
ಅವೆಲ್ಲವನ್ನು ಬರೆದಿಟ್ಟುಕೊಂಡ ರಿಜಿಸ್ಟರ್ ಕೂಡ ಇದೆ
ಕಂದು ಬಣ್ಣದ ಆರು ಜಿಪ್ಪಿನ ಇಪ್ಪತ್ನಾಲ್ಕು ರುಪಾಯಿ
ಮತ್ತು ಒಂದು ಸ್ಟಾಂಪ್ ಸೈಜಿನ ಪೋಟೋ
ಎಂದು ಪರ್ಸಿನ ಡೀಟೇಲ್ ಬರೆದು
ಆರು ತಿಂಗಳೇ ಆಗಿವೆ.
ಅರೇ ಹೀಗೆ ಬಿಟ್ಚು ಹೋದವರೆಲ್ಲ ಏನಾದರು?!
ಎಂದುಕೊಳ್ಳುವೆ ಪಾಪ ಎಷ್ಟು ಒದ್ದಾಡಿದ್ದಾರೋ !
ಬಣ್ಣ ಕಳೆದುಕೊಂಡ ಜಾಕೆಟ್
ಹರಿದು ಹೋದ ಶೂ
ತುಕ್ಕಿಡಿದ ಛತ್ರಿಗಳ ಬಿಟ್ಟುಹೋದವರ
ದುಗುಡಗಳೇನಿರಬಹುದು?!
ಎಂದೂ ಬಾರದವರ
ಎಂದೋ ಬರುವರೆಂಬ ಆಶಾವಾದದಲ್ಲಿ
ಅವರಿಗಾಗಿ ರಿಜಿಸ್ಟರುಗಳ ಕ್ಲೈಮ್ ಜಾಗಗಳು
ಕಾದು ಕೂತಿವೆ

ಈಗಾಗಲೇ ಕ್ಲೈಮ್ ಮಾಡಿಕೊಂಡ ಸಹಿಗಳು ಖಾಲಿಜಾಗಗಳ ನೋಡಿ ನಕ್ಕಿವೆ
ಟ್ರಾಫಿಕ್ಕಲ್ಲಿ ಕಿರುಚುತ್ತ ನಿಂತ ಆಂಬುಲೆನ್ಸ್
ಒಬ್ಬರ ಹೆಗಲು ಒಬ್ಬರು ಹಿಡಿದು ರಸ್ತೆ ದಾಟೋ ಅಂಧರು
ಪೋಸ್ಟ್ ಆಫೀಸಿನ ಬಳಿ ಕುಳಿತ ಮುದುಕಿಯರು
ಮತ್ತು ಈ ಕೊನೆ ನಿಲ್ದಾಣದಲ್ಲಿ ಸಿಕ್ಕ ಈ ವಸ್ತುಗಳ ಕಂಡರೆ
ನನಗೆ ಒಂತರ ಸಂಕಟ
ಇವೆಲ್ಲ ಸಂಕಟದ ವಿಶ್ವರೂಪಗಳು

ಬುರ್ಖಾ ತೊಟ್ಟವಳು ಓಡಿ ಬಂದಳು
ಉಸಿರು ಜೋರಾಗಿ ಬಿಡುತ್ತ
ಈಗಷ್ಟೇ ಸಿಕ್ಕ ಕವರು ತನ್ನದೆಂದಳು
ಸೆಕ್ಯೂರಿಟಿ ಪೋಲಿಸನಂತೆ ವಿಚಾರಿಸಿ ಕೊಟ್ಟ
ಆ ವೆಲ್ವೆಟ್ ಬಟ್ಟೆ ಮೊಮ್ಮಗಳದು ಎನ್ನುವಾಗ ಅದೆಂತ ಹೂ ಸಂಭ್ರಮವಿತ್ತು ಅವಳ ಮುಖದಲ್ಲಿ
ಅವಳು ಕ್ಲೈಮ್ ಮಾಡಿ
ದೇವರ ಕಂಡವಳಂತೆ ಕೈ ಮುಗಿದು ಹೊರಟಾಗ
ನಾನು ದೇವರಂತೆ ಸುಮ್ಮನಿದ್ದೆ.
ಅವಳ ಸಹಿಯ ಮೇಲೆ ಕೈಯಾಡಿಸಿದೆ
ಆತಂಕದ ಸೂತಕ ಕಳೆದುಕೊಂಡವನಂತೆ
ನಿಟ್ಟುಸಿರು ಬಿಟ್ಟೆ.

‍ಲೇಖಕರು Admin

16 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading