ಎನ್ ಎಸ್ ಶ್ರೀಧರ ಮೂರ್ತಿ ಕವಿತೆ – ಆರೋಹಣ ಮತ್ತು ಅವರೋಹಣ…

ಎನ್ ಎಸ್ ಶ್ರೀಧರ ಮೂರ್ತಿ

ಹಿಂದೋಳ
(ಹಿಂದೋಳ ದಕ್ಷಿಣಾದಿಯಲ್ಲಿ ಅತಿ ಹೆಚ್ಚು ಬಳಕೆಯಾಗುವ ರಾಗ. ಚಿತ್ರಗೀತೆಗಳಲ್ಲಂತೂ ಈ ರಾಗಕ್ಕೆ ಎಂದಿನಿಂದಲೂ ಬೇಡಿಕೆ. ಔಢವರಾಗವಾದ ಇದು 20ನೆಯ ಮೇಳಕರ್ತ ನಟಭೈರವಿಯಲ್ಲಿ ಜನ್ಯ ಎನ್ನುವುದು ಬಹಳ ಜನರ ಒಪ್ಪಿತ ಅಂಶವಾದರೂ ಹರಿಕಾಂಭೋಜಿಯಲ್ಲಿ ಜನ್ಯ ಎನ್ನುವವರೂ ಇದ್ದಾರೆ. ಈ ರಾಗದಲ್ಲಿ ರಿಷಭ ಮತ್ತು ಪಂಚಮ ಎರಡೂ ಇಲ್ಲದಿರುವುದರಿಂದ ವಿಸ್ತಾರ ಹೆಚ್ಚು. ಇದನ್ನು ಹಿಂದೂಸ್ತಾನಿಯ ಮಾಲ್‌ಕೌಂಸ್‌ಗೆ ಸಮನಾಂತರ ಎಂದು ಹೇಳುತ್ತಾರಾದರೂ ಎರಡರ ನಡುವೆ ಸಾಕಷ್ಟು ಸೂಕ್ಷ್ಮ ವ್ಯತ್ಯಾಸಗಳಿವೆ)

ಆರೋಹಣ
ಏರುವ ಹಾದಿನಲ್ಲಿ ಸದಾ ಎದುರಾಗವ ಸವಾಲು
ಆಧಾರ ಶ್ರುತಿಯಲ್ಲೇ ಷಡ್ಜಕ್ಕೆ ದಕ್ಕಿದ ಮೀಸಲು.
ಸೃಷ್ಟಿಯ ಮೂಲದಲ್ಲೇ ಬರೆದಿರಬಹುದೆ ಈ ಸಾಲು

ಸೆರಗು ಹಿಡಿದು ಜಗ್ಗುವ ಹಠಮಾರಿ ಕೂಸು
ನಿಷಾದದ ಆಧಾರಕ್ಕೆ ಹರಡಿಕೊಂಡ ಕನಸು
ನೆಲಕ್ಕುರಳಲು ಒಲ್ಲದ ಬೀಜದೊಳಗಿನ ತಿನಿಸು.

ಹಾಡಿನ ಹಾದಿಯಲ್ಲಿ ಅರಳಿದ ಹೂವುಗಳು
ಕಾಲ ದೇಶ ಕರ್ಮದಲಿ ಅಡಗಿದ ಜೀವಿಗಳು
ಇರುವಂಥ ಉಸಿರಲ್ಲೇ ಹೆಸರ ಹುಡುಕಿದ ಭಾವ.
ಸರಿವ ಚಿತ್ರಗಳಿಂದ ಕೂಡಿಕೊಂಡ ಸಂಬಂಧ
ಗಾಂಧಾರ, ಮಧ್ಯಮ, ದೈವತ ಎಲ್ಲದರ ಬಂಧ
ಜೋಗುಳದ ಹಾಡಿಗೆ ಹುಸಿ ಮುನಿಸಲೂ ನಗುವ ಕಂದ.

ಕತ್ತಲೆಯೂ ಬೆಳಕೂ ನೋವೋ ನಲಿವೋ
ಬಗಲ ಕೂಸಿಗೆ ಉಂಟೆ ಕಾಲದ ಪರಿವು:
ಜೀವದಂತರಾಳವ ಬಗೆದು ಹುಡುಕಿದ ಠಾವು.

ಮುಗಿಲ ಹಸಿವೆಗೆ ಗಾಳಿಯೇ ಆಹಾರ
ಪಂಚಮ ಇಲ್ಲದಿರೆ ದೈವತವೇ ಆಧಾರ
ಉರಿವ ಊರಿನಲಿ ಹೀಗೆ ಉಳಿದಿತ್ತು ಹಸಿರು.

ಬದುಕ ಬಾಣಲೆಯಲಿ ಬೆರೆಸಿದರೆ ಬೆವರು
ಹತ್ತಿದವರ ಏದುಸಿರು, ಇಳಿದವರ ನಿಟ್ಟುಸಿರು
ಪಾಪಗಳ ರಾಶಿಯ ಮೇಲೆ ಪುಣ್ಯದ ಹೆಸರು.

ತಟ್ಟಿ ಎಬ್ಬಿಸಿದರೂ ಕೂಸಿಗೆ ಎಚ್ಚರವಿಲ್ಲ-
ಕನಸಿನಲ್ಲೇ ತೇಲುತ್ತ ನಿಲ್ಲುತ್ತಾ ಗೊತ್ತಿಲ್ಲ ಗೊತ್ತಿಲ್ಲ
ಸ್ವರಲೋಕದಲಿ ಬಹುಷ: ಈಗ ಮಾತು ಬೇಕಿಲ್ಲ.

ಬಿತ್ತಿದ ಕಾಳುಗಳು ಹಸಿದವರ ಕಾಯುವುದು
ಹಕ್ಕಿ ಪಕ್ಕಿಯ ಪ್ರಾಣ ಬೀಜ ಗರ್ಭದಲಿಹುದು
ಧರೆಯ ಜೀವತದಲಿ ಈಗ ಬೆಳಕು ಬಂದಿಹುದು.

ಕುಡಿಗೊಬ್ಬ ಒಡೆಯ ನಡೆಗೊಬ್ಬ ಒಡೆಯ
ನಾನು ಎಂಬುದನ್ನೇ ಮರೆತು ನಿಂತಿತು ಕಾಯ
ಬೆಳಕು ಎಲ್ಲರನು ಈಗ ಎಬ್ಬಿಸುವ ದಿವ್ಯ ಸಮಯ.

ಅವರೋಹಣ

ಹೆದರದಿರು ಮಗುವೆ ಅಲ್ಲಿ ಜಲ ಹುಟ್ಟುವುದು
ನಡುಗದಿರು ಜೀವವೆ ಅಲ್ಲಿ ಒಲೆ ಉರಿಯುವುದು
ಅಳಬೇಡ ಒಲವೆ ಮತ್ತೆ ನದಿ ಹರಿಯುವುದು.

ನೆಳಲ ಹುಡುಕಿದರೆ ಇಲ್ಲಿ ವನವೇ ಕಾದಿಹುದು
ಮಂದ್ರದ ನಡೆಗೆ ಭುವಿಯೇ ನಲಿದಿಹುದು
ಎಲ್ಲ ತುಂಬಿದ ಮೇಲೆ ಇನ್ನೂ ಏನೋ ಬೇಕಿಹುದು.

ಎಚ್ಚರದ ನಡೆಯಲ್ಲೇ ನರನಾಡಿ ಚಳಕು
ಕಲ್ಲಗವಿಯ ಆಳದಲಿ ಹೊಳೆದ ಬೆಳಕು
ಸೋಜಿಗದ ಭಯದಲ್ಲೀಗ ಜಗವೇ ಥಳುಕು.

ಚಿಲಕವಿದ್ದ ಮನೆಯ ನೋಡಿದರೆ ಇರಲಿಲ್ಲ ಬೀಗ
ಅಲ್ಲಿತ್ತು ಒಳ ಹೊರಗಿನ ನಡುವೆ ಬೇಧವಿಲ್ಲದ ಜಾಗ
ತಾರಕದಲ್ಲಿ ನಿಂತು ಸ್ವರಮಾಲೆಯಲಿ ಹೊಳೆದಿತ್ತು ರಾಗ.

ಅದು ಸರಿ, ಕಣಿವೆ ದಾಟಿದ ಮೇಲೆ ಏಕಿಂಥ ಕಳವಳ
ನೆಲವ ಸೀಳಿದ ಮೇಲೂ ಇನ್ನೂ ಉಳಿದಿರುವ ಜಗಳ
ಕಣ್ಣ ಹಾಯಿಸಿದಷ್ಟು ದೂರದ ಕಡಲಿಗೆ ಹಾಕಬಹುದೆ ಗಾಳ.

ಮತ್ತೆ ಮಾತು ಬೇಕಿನ್ನಿಸಿದರೂ ದಿನವಿನ್ನು ಮುಗಿದಿಲ್ಲ
ಇಂದು ಕಳೆಯದ ಹೊರತು ನಾಳೆ ದೊರಕುವುದಿಲ್ಲ
ಬಂದವರ ಸರತಿ ಸಾಲಲ್ಲಿ ಮನೆ ಮಗನೇ ಇಲ್ಲ.

ಯಾರಳಿದು ಯಾರುಳಿದು ಲೆಕ್ಕ ತಪ್ಪಿತೊ ಹೇಗೆ
ಮೊಳಕೆಯೊಡದರೂ ನೆಲಕೆ ತಪ್ಪಲಿಲ್ಲ ಏಕೆ ಬೇಗೆ
ಕಳೆದ ನಿನ್ನೆಗಳೆಲ್ಲ ಈಗ ಕಂಡಿದೆ ಹೊಸದಾದ ಹಾಗೆ

ಮನದಣಿವು, ಸ್ಥಿರಶಾಂತಿ, ಮೌನ, ಭಾವ ದೀಪ್ತಿಯ ಮುದ್ರೆ
ತಾನು ನಡೆಸುವ ಯಜ್ಞಕ್ಕೆ ತಾನೇ ಯಾಜ್ಞಿಕ, ಹವಿಸ್ಸು
ಓಂ, ತತ್, ಸತ್ ಎಂಬ ನೆಲೆಯಲ್ಲಿ ಅರಳಿತು ಬ್ರಹ್ಮ ತತ್ವ.

ಕುಡಿಯೊಡೆದ ಭಾವಕ್ಕೆ ಇಲ್ಲಿ ನಡೆದಿದೆ ನಿತ್ಯ ನೈವೇದ್ಯ
ಬಾಗಿ ಸಾಗಿದರೂ ಗುರಿ ತಲುಪಿದ್ದೂ ಈಗ ಸ್ವಯಂವೇದ್ಯ
ಜಗವನ್ನೇ ನಡುಗಿಸಿದ ಕಾಳ ಕತ್ತಲೆಗೆ ಈಗ ಸಿಕ್ಕ ಭವವೈದ್ಯ

ಭಾವಕೋಟೆಗೆ ದೊರಕಿದೆ ಈಗ ಸಂಯಮದ ಕಾವಲು
ಗದ್ದಲದ ಗುಹೆಯ ನಡುವೆ ಹರಿದಿದೆ ನಾದದ ಹೊನಲು
ಕೊಳಲ ನಾದದ ಹಾದಿಯಲ್ಲಿ ಕಾಣಬಹುದೆ ಯಾರಾದರೂ ಸೋಲು.

‍ಲೇಖಕರು Admin

September 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: