ಜಯರಾಮಾಚಾರಿ ಹೊಸ ಕಥೆ: ಸಪ್ತ ಸಾಗರದಾಚೆ ಎಲ್ಲೋ..

ಜಯರಾಮಾಚಾರಿ

**

ಇನ್ಯಾವತ್ತೂ ಈ ರಫೀಕನ ಮುಸುಡಿ ನೋಡಬಾರದು ಎಂದು ನಿರ್ಧರಿಸಿ ಗಾಡಿಯ ಕಿಕ್ ಹೊಡೆದೆ.

**

“ಓದೋದು ತೀರ ಪರ್ಸನಲ್ ಅನುಭವ ಆಗಾಗಿ ಓದುಗ ಒಂಟಿಯಾಗಿ ಕೂತು ಓದಬೇಕು, ಬರಹಗಾರನು ಅಷ್ಟೇ ಎಲ್ಲೋ ಒಂಟಿಯಾಗಿ ಕೂತು ಬರೆಯಬೇಕು, ಬರೆದ ಮೇಲೆ ಕೃತಿ ಮಾತಾಡಬೇಕು ಲೇಖಕ ಮಾತಾಡಬಾರದು” ಎಂದು ವಾದಿಸುವಾಗ ರಾಘವೇಂದ್ರರಾಯರ ಮುಖ ಸಿಟ್ಟಿನಲ್ಲಿ ಹತ್ತಿ ಉರಿದು ಬಾಯಿಗೆ ಬಂದ ಬೈಗುಳ ಒಳನುಂಗಿಕೊಂಡು “ನೋಡಯ್ಯ ನೀನು ಹೇಳೋದು ನಿಜವೇ ಆದರೆ ಜಗತ್ತು ಹಂಗಿಲ್ಲ, ಇದು ವ್ಯಾಲಿಡೇಷನ್ ಕಾಲ ಕಣಯ್ಯಾ, ನಮ್ಮ ಕೃತಿ ಏನು ಅಂತ ಬರಹಗಾರ ಬಾಯಿ ಬಡ್ಕೋಬೇಕು, ಇಲ್ಲ ಅವನ ಕೃತಿಯನ್ನ ಯಾರಾದರೂ ಹೊಗಳಿ ಅಟ್ಟಕ್ಕೇರಿಸಬೇಕು ಆಗಲೇ ಜನಕ್ಕೆ ತಲುಪೋದು, ಬಂದ್ಬಿಟ್ಟ ಹೇಳಕ್ಕೆ, ಓದು ಪರ್ಸನಲ್ ಹೌದು ಕಣಯ್ಯಾ, ಆದರೆ ಒಂದು ಸಲ ನೀನು ಬರೆದದ್ದನ್ನೇ ನೀನೆ ಗಟ್ಟಿಯಾಗಿ ಓದು, ಇಲ್ಲ ಬೇರೆ ಯಾರೋ ಓದಲಿ ಆಗ ಬೇರೆ ಮಟ್ಟದಲ್ಲೇ ನಿನ್ನ ತಾಕುತ್ತೆ ಕಣಯ್ಯಾ, ಅದಕ್ಕೆ ನಿಂಗೆ ಹೇಳ್ತ ಇರೋದು, ಯುವ ಬರಹಗಾರ ಅಂತ, ನಂದೇ ಮನೆ ಕಣಯ್ಯಾ ನಾನು ಹೇಳಿದ್ ಮಾಡು ಆಮೇಲೆ ಏನು ಉಪಯೋಗ ಇಲ್ಲ ಅಂದ್ರೆ ಬಿಟ್ಟುಬಿಡು” ಎಂದು ಹೇಳಿ ಹಿಂದೆ ಕೂಡ ತಿರುಗದೆ ಸಿಟ್ಟಿನಲ್ಲೇ ಹೋಗಿ ಕಾರು ಹತ್ತಿ ಕೂತು ಹೊರಟುಬಿಟ್ಟರು.

ಒಂದು ಕಮ್ಯುನಿಟಿ ಓದು ಆಗಬೇಕು, ಸಾಹಿತ್ಯಾಸಕ್ತರನ್ನು, ಬರಹಗಾರರನ್ನು, ಹಾಗೆ ಓದುಗರನ್ನು ಒಂದು ಕಡೆ ಸೇರಿಸಬೇಕು ಎನ್ನುವುದು ರಾಯರ ಆಸೆ ಕನಸು, ಅವರು ಬರೆಯುತ್ತಿದ್ದ ಕಾಲಕ್ಕೆ ಅವರೇ ಇದನೆಲ್ಲ ಮಾಡುತ್ತಿದ್ದು ಯಾವುದೊ ಒಂದು ಹಂತದಲ್ಲಿ ಅವನೆಲ್ಲ ಬಿಟ್ಟಿದ್ದರು. ನನ್ನ ಕವಿತೆಯೊಂದು ಕಾಲೇಜು ಮ್ಯಾಗಜೀನಲ್ಲಿ ಕಾಣಿಸಿಕೊಂಡಾಗ ಅದನ್ನ ರಾಯರು ತುಂಬಾ ಮೆಚ್ಚಿ, ನನ್ನ ಬೆನ್ನುತಟ್ಟಿದ್ದರು. ಅವತ್ತಿನಿಂದ ಅವರು ನನ್ನ ಹಚ್ಚಿಕೊಂಡಿದ್ದರು, ಯಾವಾಗ ಒಂದೆರಡು ವಿದ್ಯಾರ್ಥಿ ಕಥಾಸ್ಪರ್ಧೆಲಿ ಮೊದಲ ಬಹುಮಾನ ಬಂತೋ ಅವತ್ತಿನಿಂದ ನನಗೆ ಬರಹಗಾರ ಹೇಗೆಲ್ಲ ಇರಬೇಕು ಎಂದು ತಲೆ ತಿನ್ನತೊಡಗಿದರು, ಅವರ ಬರಹಗಳು ನನಗೆ ಇಷ್ಟವಾದ್ದರಿಂದ ಮತ್ತೆ ಅವರು ನನ್ನ ಗುರುಗಳು ಕೂಡ ಆದ್ದರಿಂದ ಅವರ ಈ ಕಾಟವನ್ನು ತಡೆದುಕೊಂಡೆ.

ನಾನು ಈ ಕಮ್ಯುನಿಟಿ ಓದು, ಸಮಾರಂಭ, ಸಮ್ಮೇಳನ, ವೇದಿಕೆ, ಗೋಷ್ಠಿ ವಿರೋಧಿಸಿದರೆ ಅವರು ಅದನ್ನೆಲ್ಲ ಬೆಂಬಲಿಸುತ್ತಿದ್ದರು. “ನಾವು-ನಾವೇ ಬರೆದ ಕವಿತೆಗಳನ್ನ ನಾವು-ನಾವೇ ಓದಿಕೊಂಡು ದೊಡ್ಡ ದೊಡ್ಡ ಮಾತಾಡಿ ಮನೆಗೆ ಹೋಗುವುದು ಎಂತಹ ಸಾಧನೆ” ಎಂದು ಹೇಳಿದಾಗ ಅವರು ಸಿಟ್ಟಿನಿಂದ ನನಗೆ ಬುದ್ದಿವಾದ ಹೇಳುತ್ತಿದ್ದರು. “ನೋಡಯ್ಯ ಎಲ್ಲಾನು ಬೇಕು, ಎಲ್ಲಾನು ಬಳಸಿಕೊಳ್ಳಬೇಕು, ಸೀನಿಯರ್ಸುಗಳ ಮಾತಾಡಿಸು, ಅವರನ್ನು ಹೊಗಳು, ಎಲ್ಲರ ಪರಿಚಯ ಆದ್ರೆ ನಿನಗೆ ಸಿಗೋದು ಸಿಗ್ತಾ ಇರ್ತದೆ ಕಣಯ್ಯಾ, ನೀನು ಅದಕ್ಕೆ ಅರ್ಹ ಇಲ್ಲ ಅಂದ್ರು ಸಿಗುತ್ತೆ, ನಾನು ನಿನ್ ತರಾನೇ ಇದ್ದಿದ್ದಕ್ಕೆ ನೋಡುದ್ಯ ನನಗೆ ಏನಾಯ್ತು? ಯಾವ ಅವಾರ್ಡ್ ಇಲ್ಲ, ರಿವಾರ್ಡ್ ಇಲ್ಲ, ಜೂರಿ ಪೂರಿ ಏನು ಸಿಗಲಿಲ್ಲ ಕಣಯ್ಯಾ” ಎಂದು ಅಳುವ ಧ್ವನಿಯಲ್ಲಿ ಹೇಳುತ್ತಿದ್ದರು, ಅವರು ಹೇಳೋದು ನಿಜವೂ ಕೂಡ, ಒಂದು ಗುಂಪಿನಲ್ಲಿ ಗುರುತಿಸಿಕೊಳ್ಳದ, ಸೀನಿಯರ್ಸುಗಳಿಗೆ ಬಕೇಟು ಹಿಡಿಯದ ಬರಹಗಾರರನ್ನು ಗುರುತಿಸಿರೋ ಇಲ್ಲ. ಆದರೂ ಒಲ್ಲದ ಮನಸ್ಸಿನಿಂದ “ಆಗಲಿ ಸಾರ್” ಎಂದು ಹೇಳಿದಾಗಲೇ ಅವರ ಸಿಟ್ಟು ಕಮ್ಮಿ ಆದದ್ದು.

ಅವರದೇ ಮನೆ ಒಂದು ತ್ಯಾಗರಾಜನಗರ ಕಾಲೋನಿಯಲ್ಲಿತ್ತು, ಆ ಮನೆಯ ಟೆರೇಸು ಈ ಕಮ್ಯುನಿಟಿ ಓದಿಗೆ ಹೇಳಿ ಮಾಡಿಸಿದ ಹಾಗಿತ್ತು.

ರಾಜಕಾರಣಿಗಳ ತರ ಹಿರಿಯ ಸಾಹಿತಿಗಳು ತಮ್ಮದೇ ಶಿಷ್ಯರ ಶಿಷ್ಯೆಯರ ಗುಂಪುಗಳನ್ನು ಮಾಡಿಕೊಂಡು, ಅವರ ಬೆನ್ನು ತಟ್ಟಿಕೊಂಡು, ತಮ್ಮ ಬೆನ್ನನ್ನು ಅವರಿಂದ ತಟ್ಟಿಸಿಕೊಂಡು ಸಾಹಿತ್ಯಕ್ಕೆ ಜೊಳ್ಳನ್ನ ದೂಡುತ್ತಾ ಸೆಲೆಬ್ರಿಟಿಯ ಭ್ರಮೆ ಅವರಿಗೆ ಮೂಡಿಸುತ್ತ ಇರೋವಾಗ ಕಮ್ಯುನಿಟಿ ಓದಿಗೆ ಹೊಸ ಓದುಗರು ಹೊಸ ಬರಹಗಾರರು, ಯಾವ ಗುಂಪಿಗೂ ಸೇರದೆ ತಮ್ಮ ಪಾಡಿಗೆ ಬರೆದು ತಮ್ಮ ಪಾಲಿಗೆ ಸಿಕ್ಕಿದ್ದನ್ನು ಖುಷಿಯಿಂದ ಸ್ವೀಕರಿಸುತ್ತ ಇರುವ ಜನಪ್ರಿಯರಲ್ಲದ ಬರಹಗಾರರನ್ನ ಕರೆದೆ.

ಈಗಾಗಲೇ ಆರೇಳು ವರ್ಷದಿಂದ ‘ಯುಗಾದಿ ಪದ್ಯ’ ‘ಸಂಕ್ರಾಂತಿ ಪದ್ಯ’ ಎಂದು ದೊಡ್ಡ ದೊಡ್ಡ ರಂಗಮಂದಿರದಲ್ಲಿ ಆರೇಳು ವರ್ಷಗಳಿಂದ ಅದದೇ ಕವಿಗಳು ಬಂದು ಓದುತ್ತಿದ್ದ ಹಾಗೆ ನಮ್ಮ ಈ ‘ತಾರಸಿ ಪದ್ಯ ಗದ್ಯ’ ಓದುವ ಕಾರ್ಯಕ್ರಮ ಕೂಡ ಅದೇ ತರದ್ದ ಎಂದು ನಾನು ಕರೆದವರೆಲ್ಲ ಅನುಮಾನ ವ್ಯಕ್ತಪಡಿಸಿದರು. ಅವರಿಗೆ ಅಂತದೆಲ್ಲ ಇಲ್ಲಿ ನಡೆಯೋಲ್ಲ ಎಂದು ಮನವರಿಕೆ ಮಾಡಿಕೊಟ್ಟ ಮೇಲೆಯೇ ಎಲ್ಲರು ಬಂದದ್ದು, ಹಾಗೆ ಬಂದವರಲ್ಲಿ ಈ ರಫೀಕನು ಇದ್ದ.

ಪ್ರತಿ ತಿಂಗಳಿಗೊಮ್ಮೆ ಮೂರನೇ ಭಾನುವಾರಕ್ಕೆ ಸಂಜೆ ನಾಲ್ಕು ಗಂಟೆಗೆ ಅಷ್ಟು ಬರಹಗಾರರು ಓದುಗರು ಸೇರೋದು, ಕವಿತೆ ಕತೆ ಓದೋದು ಅದರ ಬಗ್ಗೆ ಒಂದಷ್ಟು ಹರಟೋದು ಆಮೇಲೆ ಕಾಫಿ ಕುಡಿದು ಮನೆಗೆ ಹೋಗೋದು.

ಆ ಕಾರ್ಯಕ್ರಮಕ್ಕೆ ನನಗೆ ಸಹಾಯ ಮಾಡಲು ಸಿಕ್ಕವನೇ ರಫೀಕು. ಮೊದಲು ಓದುಗನಾಗಿ ಬಂದು ಬೇಂದ್ರೆಯವರ ಕವಿತೆಗಳನ್ನು, ದೇವನೂರು ಮಹಾದೇವ ಅವರ ಕತೆಗಳನ್ನ ಅದ್ಭುತವಾಗಿ ಓದಿ ನಾಲ್ಕೈದು ಎಳೆ ಹುಡುಗಿಯರನ್ನು ಬುಟ್ಟಿಗೆ ಹಾಕಿಕೊಂಡ. ನೋಡಲು ಎತ್ತರದ ಹುಡುಗ, ಕಂದು ಬಣ್ಣದ ಕಣ್ಣುಗಳು, ಒಳ್ಳೆಯ ಧ್ವನಿ, ಚೆಂದದ ಶರ್ಟುಗಳನ್ನು ಹಾಕುತ್ತಿದ್ದ. ಅವನಿಗೆ ಹುಡುಗಿಯರು ಬೀಳುವುದು ನನಗೇನು ಆಶ್ಚರ್ಯವೂ ಆಗಲಿಲ್ಲ. ನಾನು ಅವನನ್ನು ಛೇಡಿಸಿ ಮಜಾ ತೆಗೆದುಕೊಳ್ಳುತ್ತಿದ್ದೆ.

ನಾಲ್ಕನೇ ಸಂಚಿಕೆಗೆ ರಾಗಿಣಿ ಸೇರಿಕೊಂಡಳು. ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ತೀವ್ರ ಕವಿತೆಗಳನ್ನು ಬರೆದು ಎಷ್ಟೋ ಹುಡುಗರ ಹೃದಯ ಗಿಂಡಿಬಿಡುತ್ತಿದ್ದಳು. ನನಗೂ ಅವಳ ಆಕರ್ಷಣೆಯಲ್ಲಿ ಬೀಳದೆ ಗತಿ ಇರಲಿಲ್ಲ. ಅವಳು ‘ಸರ್ ಸರ್’ ಎಂದು ಸಂಭೋದಿಸುತ್ತಲೇ ನನ್ನ ಹೃದಯ ಗಿಂಡಿದ್ದಳು, ನಾನು ಅವಳ ಕಾಲು ಎಳೆದಾಗ ನಾಚಿ ನೀರಾಗುತ್ತಿದ್ದಳು.

ಹೊಸ ಹೊಸ ಹುಡುಗರು ಹುಡುಗಿಯರು ಸೇರಿ ಫೇಸ್ಬುಕ್ಕು ಇನ್ಸ್ಟಾಗ್ರಾಮು ಎಲ್ಲ ಕಡೆ ವಿಷಯ ಹರಡಿ ರಾಯರ ಟೆರೇಸು ಕೂಡ ತುಂಬಿ ಹೋಗಿ ಅದು ಒಂದೆರಡು ಪತ್ರಿಕೆಯಲ್ಲೂ ಸುದ್ದಿ ಆದ ಮೇಲೆ ನಮ್ಮ ಈ ‘ತಾರಸಿ ಪದ್ಯ ಗದ್ಯ’ ಕಾರ್ಯಕ್ರಮಕ್ಕೆ ಮಣ್ಣು ಬಳಿಯುವ ಕೆಲಸವನ್ನು ಒಂದು ಕಡೆ ರೈಟಿಸ್ಟುಗಳು ಮತ್ತೊಂದು ಕಡೆ ಲೆಫ್ಟಿಸ್ಟುಗಳು ಶುರು ಹಚ್ಚಿಕೊಂಡರು.

ಒಂದು ಕಡೆ ಪ್ರತಿ ತಿಂಗಳ ಕಾರ್ಯಕ್ರಮದ ವಿನ್ಯಾಸ ಮಾಡೋದು, ಹೊಸ ಹೊಸ ಬರಹಗಾರರನ್ನು ಗುರುತು ಹಚ್ಚೋದು, ಮತ್ತೊಂದು ಕಡೆ ಬರೆಯಬೇಕಾದ ಕತೆ ಕವಿತೆಗಳು, ಮತ್ತೊಂದು ಕಡೆ ಕಾಲೇಜು ಪರೀಕ್ಷೆ ಇದೆಲ್ಲದರ ಮಧ್ಯೆ ಒಂದೊಳ್ಳೆ ಕಾರ್ಯಕ್ರಮಕ್ಕೆ ಮೂಗು ತೂರಿಸಿ ಕುಂಡಿ ಕೆರೆಯುವ ಈ ಲೆಫ್ಟಿಸ್ಟ್ ರೈಟಿಸ್ಟ್ ಗಳ ಕಾಟ ಬೇರೆ. ಉದ್ದುದ್ದ ಬರೆದು “ಬರಹಗಾರರು ಹೇಗಿರಬೇಕು? ಅವರ ಕರ್ತವ್ಯ ಏನು? ಹೇಗೆ ಓದಬೇಕು? ಕಾರ್ಯಕ್ರಮದಲ್ಲಿ ಆ ಜಾತಿ ಅವರು ಇದ್ದಾರೆ ಈ ಧರ್ಮದವರು ಇದ್ದಾರೆ ಇವರಂತೂ ಇಲ್ವೇ ಇಲ್ಲ” ಹೀಗೆ ಕೆಲಸಕ್ಕೆ ಬಾರದನ್ನ ಹೇಳುತ್ತಾ ನಮ್ಮ ಕಾರ್ಯಕ್ರಮಕ್ಕೆ ಮೂರು ನಾಮ ಹಾಕಲು ಕಾಯುತ್ತಿದ್ದರು.

ಇವರುಗಳ ಕಾಟಕ್ಕೆ ಮತ್ತು ನನ್ನ ನೆಮ್ಮದಿಗೆ ಕೊನೆಗೂ ಅಷ್ಟು ಚೆಂದವಾಗಿ ಯಾವ ಅಜೆಂಡಾ ಇಲ್ಲದೆ ಕೇವಲ ಸಾಹಿತ್ಯ ದೃಷ್ಟಿಯಿಂದ ನಡೆಯುತ್ತಿದ್ದ ಕಾರ್ಯಕ್ರಮ ನಿಲ್ಲಿಸಬೇಕಾಗಿ ಬಂತು. ಕೊನೆ ದಿನ ಅಂತೂ ಓದುಗರು ಬರಹಗಾರರು ಅಳುತ್ತಲೇ ಓದಿದರು, ಕಾರ್ಯಕ್ರಮ ಮುಗಿದ ಮೇಲೆ ಒಬ್ಬರನೊಬ್ಬರು ತಬ್ಬಿಕೊಂಡು ಬೀಳ್ಕೊಟ್ಟರು. ಅವತ್ತು ರಫೀಕ ರಾಗಿಣಿಯನ್ನು ತಬ್ಬಿಕೊಂಡು ಅಳುತ್ತಿದ್ದ.   

ಇದನ್ನ ರಾಯರಿಗೆ ಹೇಳಿದಾಗ “ಇವೆಲ್ಲ ಇನ್ನೂ ನಿಂತಿಲ್ಲ ಅನ್ನು, ನಮ್ ಕಾಲದಲ್ಲೂ ಇತ್ತು ಕಣಯ್ಯಾ ಆದರೆ ಇಷ್ಟೊಂದು ವಿಷ ಇರ್ಲಿಲ್ಲ, ಇರಲಿ ಬಿಡು ಇಷ್ಟು ದಿನ ಮಾಡಿದ್ದೀಯಲ್ಲ, ಇನ್ಮೇಲೆ ಪರೀಕ್ಷೆ ಮೇಲೆ ಗಮನ ಕೊಡು, ಆಮೇಲೆ ನಿನ್ನ ಕತೆ ಕವಿತೆ ನೋಡ್ಕೋ, ಬದುಕು ಮುಖ್ಯ ಕಣಯ್ಯಾ” ಎಂದು ಭಾಷಣ ಬಿಗಿದರು.

**

ಗುರು ರಾಘವೇಂದ್ರರಾಯರು ಸತ್ತದ್ದು ‘ನಾಥನಿಲ್ಲದೆ ನಾನು ಅನಾಥನಾದದ್ದು’, ಪರೀಕ್ಷೆಲಿ ಪಾಸ್ ಆಗಿ ಕೆಲಸಕ್ಕೆ ಅಲೆದಿದ್ದು, ಯಾವುದೊ ಪತ್ರಿಕೇಲಿ ಕೆಲಸಕ್ಕೆ ಸಿಕ್ಕಿದ್ದು, ರೂಮು, ಪಿಜಿಯಿಂದ ಒಂದು ಬೆಡ್ರೂಮ್ ಮನೆ ಸೇರಿದ್ದು, ಇಷ್ಟೆಲ್ಲಾ ಆಗೋದರ ಒಳಗೆ ಎರಡು ವರ್ಷ ಉರುಳಿತ್ತು.

ಕೆಲಸ, ಓದು, ರಿಪೋರ್ಟ್, ಸಿನಿಮ, ನಾಟಕದ ಗೀಳಿನಲ್ಲಿ ಬರಹ ಮಕಾಡೆ ಮಲಗಿತ್ತು. ಯಾವಾಗ ಸುದ್ದಿಗಳಿಗೆ ಕೈ ಒಗ್ಗಿಹೋಯಿತೊ ಆಗಿನಿಂದ ಕತೆ ಕವಿತೆ ಬರೆಯಲು ಆಗದೆ ಹೋಯ್ತು, ಅದನ್ನು ಬರೆಯಲು ಸಮಯವೂ ಸಿಕ್ಕಿದ್ದು ಕಮ್ಮಿ.

ವೀರೇಶ್ ಸಿನಿಮಾದಲ್ಲಿ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ನೋಡಿ ಹೊರಗೆ ಬಂದಾಗ ಹೊರಗೆ ಜೋರು ಮಳೆ, ಎದೆಯಲ್ಲಿ ಭಾರ, ಹಳೆ ಹುಡುಗಿ ನೆನಪಾಗಿ ಕಣ್ಣಲ್ಲಿ ನೀರು, ಆಟೋಗಾಗಿ ಅಲ್ಲೇ ನಿಂತಾಗ ರಾಗಿಣಿ ನಿಂತಿದ್ದು ಕಾಣಿಸ್ತು.

ಬಿಳಿ ಟಾಪು ನೀಲಿ ಜೀನ್ಸು ತೋಳಲ್ಲಿ ಬ್ಯಾಗು ಕತ್ತಿಗೆ ಕಪ್ಪು ಸ್ಕ್ರಾಫ್ ಸ್ವಲ್ಪ ಎತ್ತರದ ಚಪ್ಪಲಿ, ಕೈಯಲ್ಲಿ ಮೊಬೈಲು, ಅವಳ ಬೆರಳುಗಳು ಮೊಬೈಲ್ ಅನ್ನು ಸವರುತ್ತಿದ್ದವು ನಾನು ನೋಡುವುದಕ್ಕೂ ಅವಳು ನೋಡುವುದಕ್ಕೂ ಒಂದೇ ಆಗಿ ‘ವಾಟ್ ಎ ಸರ್ ಪ್ರೈಸ್ ಸರ್’ ಎಂದು ತಬ್ಬಿಕೊಂಡಳು, ಅವಳು ಕೂಡ ಸಿನಿಮಾ ನೋಡಿ ಗಡ್ಡದ ಮನುವನ್ನು ನೋಡಿ ಕೈಕೊಟ್ಟ ಅವನ ಗೆಳೆಯನನ್ನು ನೆನಸಿ ಅತ್ತು ಕಣ್ಣುಗುಡ್ಡೆ ಕೆಂಪು ಮಾಡಿಕೊಂಡಿದ್ದಳು. ಹಾಳಾದ್ದು ಪ್ರೀತಿ ಯಾರನ್ನ ತಾನೇ ಸುಮ್ನೆ ಇರಕ್ಕೆ ಬಿಡುತ್ತೆ.   

ಈ ಹಿಂದೆ ಅವಳು ಈ ತರ ಹಗ್ ಮಾಡಿದ್ದಿಲ್ಲ. ಎಂತದೋ ರೋಮಾಂಚನ ಎದ್ದು ಕೂತಿತು. “ಹೇಗಿದ್ದೀರಿ” ಎಂದಳು, ನಾನು “ಚೆನ್ನಾಗಿದ್ದೀನಿ” ಎಂದೇ, ಅದು ಇದು ಮಾತಾಯಿತು, “ನೀವು ಕಾಣಿಸಲೇ ಇಲ್ಲ” ಎಂದಳು, “ಹೂ” ಎಂದೇ, ನಂಬರ್ ಕೇಳಿದಳು ಕೊಟ್ಟೆ. ಆಟೋ ಬಂತು ಹತ್ತಿ ಹೋದಳು.

ಅವಳ ಎಳೆ ಮೊಲೆಗಳ ತಬ್ಬುಗೆಯ ರೋಮಾಂಚನದ ಬಿಸಿ ಹೊತ್ತುಕೊಂಡೇ ಮನೆಗೆ ಬಂದೆ. ಅಷ್ಟರಲ್ಲಿ ಅವಳ ಮೆಸೇಜು ಬಂದು ಬಿದ್ದಿತ್ತು. ‘ಖುಷಿ ಆಯಿತು’ ಎಂದು, ನಾನು ನಗುವಿನ ಈಮೊಜಿ ಒತ್ತಿ ಸುಮ್ಮನಾದೆ.

ಅವಳ ತಬ್ಬುಗೆಗಳು ನನ್ನ ಒಳಗೆ ಸಾವಿರ ಕತೆಗಳನ್ನ ಕವಿತೆಗಳನ್ನ ನುಗ್ಗಿಸಿದ್ದಳು. ಬರೆಯುತ್ತ ಹೋದೆ, ಹೊಸ ಹೊಸ ಕನಸುಗಳನ್ನ ಎಣೆಯುತ್ತ ಹೋದೆ, ಅವಳಿಗೆ ಕತೆ ಕವಿತೆಗಳನ್ನು ಕಳಿಸಿದ ಹಾಗೆ ನನ್ನೊಳಗೆ ಅರಳುತ್ತಿದ್ದ ಬಿಸಿ ಕನಸುಗಳನ್ನು ಕಳಿಸಲು ಆಗಲೇ ಇಲ್ಲ.

ಕಳಿಸಿದ ನನ್ನ ಕೆಲವು ಮೋಹಕ ಕವಿತೆಗಳಿಗೆ ಕತೆಯ ಸಾಲುಗಳಿಗೆ ನಿಧಾನಕ್ಕೆ ಹರಡಿಕೊಂಡಳು, ಮಾತಾಡಿದಳು, ನಾನು ಪೋಲಿ ಜೋಕನ್ನು ಬೇಕಂತಲೇ ಹೊಡೆಯುತ್ತಿದ್ದೆ, ಅವಳು ನಗುವ ಕಣ್ಣು ಹೊಡೆಯುವ ಈಮೊಜಿ ಕಳಿಸಿ ನನ್ನನ್ನು ಉತ್ತೇಜಿಸುತ್ತಿದ್ದಳು, ಅದ್ಯಾವ ಮಾಯದಲ್ಲೋ ನಾವಿಬ್ಬರು ರೋಚಕ ಮೋಹಕ ಚಾಟುಗಳಿಗೆ ಅಂಟಿಕೊಂಡು ದೂರ ಇದ್ದುಕೊಂಡೇ ಬಿಸಿ ಆಗಿಬಿಟ್ಟೆವು.

ಹತ್ತಿ ಉರಿದ ನನ್ನ ಬಿಸಿಯನ್ನು ಆರಿಸಿದ್ದು ಅವಳೇ.

ಯಾವುದೊ ಕಳೆಗುಂದಿದ ಸಂಜೆಯಲ್ಲಿ, ಅವಳ ಮೂರನೇ ದಿನ ಡೇಟಿನಲ್ಲಿ ಗೊಳೋ ಎಂದು ಒದರುತ್ತಾ ರಫಿಕು ಜೊತೆ ಮಲಗಿ ಒದ್ದಾಡಿದ್ದು, ಮಲಗಿದಷ್ಟೇ ಮತ್ತೇನು ಆಗಿಲ್ಲ ಎಂದು ಕಾಗೆ ಹರಿಸಿದ್ದು, ಅವನನ್ನು ಇವಳು ಹುಚ್ಚಿಯಂತೆ ಪ್ರೀತಿಸಿದ್ದು, ಅವನು ಇನ್ನೊಬ್ಬಳಿಗಾಗಿ ಇವಳನ್ನು ಬಿಟ್ಟು ಹೋದದ್ದು ಹೀಗೆ ಎಲ್ಲವು ಹೇಳುತ್ತಾ ಹೋದಳು.

ಬಿಸಿ ಆರುತ್ತಾ ಹೋದಾಗ “ನಾವು ಯಾವಾಗ ಮಲಗಿಕೊಳ್ಳೋದು ಒಟ್ಟಿಗೆ?” ಎಂದು ಕೇಳಿದಳು, ನಾನು “ಬರಿಯ ಮಲಗೋದು ಅಷ್ಟೇನ ರಫೀಕ್ ತರ?” ಎಂದಾಗ, “ಇಲ್ಲ ಮಲಗೋದು ಮುಳುಗೋದು ಮುಲುಗೋದೂ ನರಳೋದು” ಎಂದು ಕಣ್ಣು ಹೊಡೆವ ಈಮೊಜಿ ಕಳಿಸಿದಳು.

ಆಗಾಗ ರಫೀಕನ ವಿಷಯ ಬಂದಾಗ ನಾನು ವಿನಾಕಾರಣ ಸಿಟ್ಟಾಗುತ್ತಿದ್ದೆ, ಅವನ ವಿಷಯ ಬೇಡ ಎನ್ನುತ್ತಿದ್ದೆ, ಅವಳು ಎಲ್ಲಿ ಶುರುಮಾಡಿದರೂ ಕೊನೆಗೆ ರಫೀಕನ ವಿಷಯಕ್ಕೆ ಬಂದು ನನ್ನನ್ನು ಮಾನಸಿಕವಾಗಿ ಹಿಂಸಿಸುವಲ್ಲಿ ಗೆಲ್ಲುತ್ತಿದ್ದಳು, ನಾನು ಅವಳ ಪಡೆಯಲು ಒದ್ದಾಡುತ್ತಿದ್ದೆ, ಅವಳು ಸಿಕ್ಕರೂ ಸಿಗದಂತೆ ಇದ್ದಳು.

**

ಡೇಟಿಗೆಂದು ಒಂದು ದಿನ ಫಿಕ್ಸ್ ಆಯಿತು, ನನಗೆ ಈ ಡೇಟುಗಳಲ್ಲಿ ನಂಬಿಕೆ ಇಲ್ಲ ಸುಮ್ಮನೆ ಸಮಯ ಮತ್ತು ದುಡ್ಡು ವ್ಯರ್ಥವೆಂಬ ಅನಿಸಿಕೆ, ಅವಳ ಪ್ರಕಾರ ನಾವಿಬ್ಬರು ಅರಿತುಕೊಳ್ಳಲು ನಮ್ಮಿಬ್ಬರಲ್ಲೂ ಒಂದು ಕಂಫರ್ಟ್ ಬೆಳೆಯಲು ಮೊಳೆಯಲು ಒಂದೆರಡು ಡೇಟು ಸುತ್ತಾಟ ಡಿನ್ನರ್ ಪಬ್ಬು ಎಲ್ಲ ಮುಖ್ಯ.

ಅವಳು ಹತ್ತಿಸಿದ ಒಳಬೆಂಕಿಗೆ ಉರಿಯದೆ ಸುಮ್ಮನೆ ಇರಲಾಗಲಿಲ್ಲ ಒಪ್ಪಿದ್ದೆ.

ಬೆಳಗ್ಗೆ ಎದ್ದು ಇಂದಿರಾನಗರದಲ್ಲಿ ಸಿಕ್ಕು ಮಾಲುಗಳನ್ನು ಅಡ್ಡಾಡಿ, ಕೆಫೆಯಲ್ಲಿ ಕಾಫಿ ಕುಡಿದು, ಕೈ ಹಿಡಿದು ಓಡಾಡಿ ಒಂದು ಸಿನಿಮಾದ ಕಾರ್ನರಿನಲ್ಲಿ ಕೂತು ಮೈ ಸೋಕಿ ಬಿಸಿಯಾಗಿ ಮತ್ತೇನು ಆಗದೆ ಸಿನಿಮಾ ಮುಗಿದು ಈಚೆ ಬಂದಾಗ “ನಾಟಕ ನೋಡೋಣ್ವಾ”? ಎಂದಳು, ಶೇಕ್ಸಫಿಯರನ ಇಂಗ್ಲೀಷ್ ನಾಟಕ, ನನಗೂ ತಲೆ ಕೆಟ್ಟು “ಸರಿ” ಎಂದೇ, ಆಟೋದಲ್ಲಿ ಅವಳು ನನ್ನ ಭುಜ ಒರಗಿಕೊಂಡು ಕೂತಳು, ಆಟೋದವನು ಇಪ್ಪತ್ತು ಸಲ ಸಣ್ಣ ಕನ್ನಡಿಯಿಂದ ನೋಡಿದ.

ನಾಟಕ ಮುಗಿಸಿ ಹೊರಬಂದೆವು.

ಅವಳ ಕಣ್ಣು ಊದಿಕೊಂಡಿತ್ತು, “ಯಾಕೆ?” ಎಂದು ಕೇಳಿದೆ, “ಆ ಲೋಫರ್ ಇಲ್ಲೇ ಇದ್ದಾನೆ” ಎಂದಳು, ಆ ಲೋಫರ್ ಯಾರು ಎಂದು ಗೊತ್ತಾಗದೆ ಮುಖ ನೋಡಿದೆ, “ಅವನೇ ರಫೀಕ್, ಅಲ್ನೋಡಿ” ಎಂದಳು, “ಮಾತಾಡಿಸಿದ್ರೆ ಗ್ರಾಚಾರ ಬಿಡಿಸ್ತೀನಿ” ಎಂದಳು, ಅವನು ನೋಡಿದ ನಾನು ನೋಡಿದೆ, ಮಾತಾಡಿಸದೆ ವಿಧಿ ಇಲ್ಲ.

ರಫೀಕ್ ಹತ್ತಿರ ಹೋದೆ ಹೇಗಿದ್ದೀಯ? ಏನ್ ಕತೆ? ಹೀಗೆ ಮಾತಾಡಿಸಿದೆ, ಅವನು ಎಲ್ಲದಕ್ಕೂ ಅನ್ಯಮನಸ್ಕನಾಗಿ ಜಿರಾಫೆಯಂತ ಕತ್ತನ್ನು ಇನ್ನಷ್ಟು ನಿಗುರಿಸಿ ರಾಗಿಣಿಯನ್ನು ನೋಡುತ್ತಾ ಉತ್ತರ ಹೇಳುತ್ತಿದ್ದ, ಅವಳು ಇವನನ್ನು ನೋಡುತ್ತಿದ್ದಳು, ಇಬ್ಬರಿಗೂ ಮಾತಾಡಿಸೋ ತವಕ, ಆದರೆ ಮಧ್ಯೆ ನಾನು ಕರಡಿ ತರ, ಅವರ ಕಷ್ಟ ನೋಡಲಾಗದೆ ನಾನೇ “ರಾಗಿಣಿ ಗೊತ್ತಲ್ಲ ಹೋಗಿ ಮಾತಾಡ್ಸಿ” ಎಂದೇ. ಅದನ್ನೇ ಕಾಯುತ್ತಿದ್ದ ಅನ್ಸುತ್ತೆ, ನನ್ನ ಮಾತು ಕೇಳಿ ತಲೆ ಅಲ್ಲಾಡಿಸಿ ಹೋದ.

ಸ್ವಲ್ಪ ಹೊತ್ತು ದೂರ ದೂರ ನಿಂತ್ತು ಮಾತೇ ಆಡದೇ ಸುಮ್ಮನಿದ್ದರು.

ಆಮೇಲೆ ಹತ್ತಿರ ಬಂದರು, ಅವನು ಅವಳ ಕೈ ಅಮುಕಿದ ಅವಳು ಬಿಡಿಸಿಕೊಳ್ಳಲು ಒದ್ದಾಡಿದಳು.

ಆಮೇಲೆ ಸುಮ್ಮನಾದಳು

ಅವನು ತಬ್ಬಿಕೊಂಡ, ಅವಳು ಕೂಡ.

ನಾನು ಅವರಿಬ್ಬರ ಬಳಿಯೂ ಹೋಗಲಾರದೆ, ಅಲ್ಲೇ ಇರಲಾಗದೆ, ರಂಗಶಂಕರದ ಕ್ಯಾಂಟೀನಿಗೆ ನುಗ್ಗಿದೆ, ಸಾಬೂದಾನ ವಡ ಮತ್ತು ಕಾಫಿ ತೆಗೆದುಕೊಂಡೆ, ರಾಗಿಣಿಗೆ “ಇಲ್ಲೇ ಇರ್ತೀನಿ ನಿಂದು ಮಾತಾಡಿ ಆದ್ಮೇಲೆ ಬಾ” ಎಂದು ವಾಟ್ಸಾಪು ಮೆಸೇಜು ಒಗೆದು ಸುಮ್ಮನೆ ಹಳೆ ಚಾಟ್ ನೋಡುತ್ತಾ ಹೋದಾಗ

ಹದಿನೈದು ದಿನದ ಹಿಂದೆ

“ಈ ರಂಗಶಂಕರದಲ್ಲಿ ಶೇಕ್ಸಫಿಯರನ ನಾಟಕ ಇದೆ, ಬನ್ನಿ ಹೋಗೋಣ” ಎಂಬ ಅವಳ ಮೆಸೇಜಿತ್ತು, ನಾನು “ನೋಡೋಣ ಇನ್ನು ಟೈಮ್ ಇದೆ ಅಲ್ವ?” ಎಂದಿದ್ದೆ, ಅವಳು “ನೀವು ಬರದಿದ್ರೆ ರಫೀಕ್ ಕರೀತೀನಿ, ಅವನು ಮೆಸೇಜು ಮಾಡ್ತಾ ಇದ್ದಾನೆ ಸಿಗು ಅಂತ, ಅಷ್ಟೇ” ಎಂದು ನಗುವ ಈಮೊಜಿ ಕಳಿಸಿದ್ದಳು, ನಾನು ಸಿಟ್ಟಿನ ಈಮೊಜಿ ಹಾಕಿದ್ದೆ.

ಹೊರಗೆ ಜೋರು ಸಿಡಿಲು, ರಾಗಿಣಿ ಮತ್ತು ರಫಿಕು ಅಲ್ಲೆಲ್ಲೂ ಕಾಣಿಸಲೇ ಇಲ್ಲ.

ಇನ್ಯಾವತ್ತೂ ಈ ರಫೀಕನ ಮುಸುಡಿ ನೋಡಬಾರದು ಎಂದು ನಿರ್ಧರಿಸಿ ಗಾಡಿಯ ಕಿಕ್ ಹೊಡೆದೆ

**

‍ಲೇಖಕರು avadhi

February 11, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. swamy

    I dont know who is this writer , story is influenced by many kannada short story writers ..the one which could i easily identify is Nataraj Huliyar ,
    not that the story is bad ..since i read many stories my mind may also be jumbled !

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: