ಜಪಾನ್ ದೇಶದ ಕವಿ ನನಾವ್ ಸಕಾಕಿ ( 1923 – 2008 ) ಅವರ ಮೂರು ಕವನಗಳ ಅನುವಾದ ಇಲ್ಲಿದೆ.
ಅನುವಾದಿಸಿದವರು ಎಸ್ . ಎನ್ . ಗಣನಾಥ

ಕೆಸರಿನಲ್ಲಿ ಪಾದಗಳು
ಕೊಳಕು ಕಥೆಗಳನ್ನು
ಕೇಳಿದಾಗ
ತೊಳೆದುಕೊಂಡು
ಬಿಡು ನಿನ್ನ ಕಿವಿಯನ್ನು
ಕೊಳಕು ನೋಟ
ಕಂಡಾಗ
ತೊಳೆದುಕೊಂಡು
ಬಿಡು ನಿನ್ನ ಕಣ್ಣನ್ನು
ಕೊಳಕು ಯೋಚನೆಗಳು
ಬಂದಾಗ
ತೊಳೆದುಕೊಂಡು ಬಿಡು
ನಿನ್ನ ಮನವನ್ನು
ಆದರೆ
ನಿನ್ನ ಪಾದಗಳು ಮಾತ್ರ
ಸದಾ
ಕೆಸರಿನಲ್ಲಿರಲಿ
೨.
ಒಂದು ಪದ್ಯ
ಮಣ್ಣಿನ ಕುರಿತು ತಿಳಿಯಬೇಕಿದ್ದರೆ
ಕಳೆಗಳ ಬಗ್ಗೆ
ಕಲಿ
ಸಂಸ್ಕೃತಿಯ ಕುರಿತು
ಅರಿಯಬೇಕೆಂದಿದ್ದರೆ
ಕಲೆಗಳ ಬಗ್ಗೆ ಕಲಿ
ಈ ನಾಡಿನ ನಾಳೆಗಳನ್ನು
ತಿಳಿಯಬೇಕೆಂದಿದ್ದರೆ
ಜನಪದ ಗೀತೆಗಳನ್ನು
ಆಲಿಸು
ಜನರ ಬಗ್ಗೆ
ತಿಳಿಯಬೇಕು ಎಂದರೆ
ನಿನ್ನನ್ನು ನೀನು ತಿಳಿ
೩.
ನಕ್ಷತ್ರಗಳನ್ನು ತಿನ್ನೋಣ
ಮಕ್ಕಳೇ
ನನ್ನನ್ನು ನಂಬಿ!
ಭಗವಂತನು ಆಕಾಶವನ್ನು
ಸೃಷ್ಟಿಸಿದ್ದು
ವಿಮಾನಗಳಿಗಾಗಿ
ಹವಳದ
ಬಂಡೆಗಳನ್ನು
ಪ್ರವಾಸಿಗರಿಗಾಗಿ
ಹೊಲಗಳನ್ನು
ರಸಗೊಬ್ಬರಗಳಿಗಾಗಿ
ಕಾಡುಗಳನ್ನು ಗಾಲ್ಫ್
ಆಡಲೆಂದು
ಪರ್ವತಗಳನ್ನು ರೆಸಾರ್ಟ್ ಗಳಿಗಾಗಿ
ವನ್ಯಮೃಗಗಳನ್ನು
ಝೂಗಳಿಗಾಗಿ
ಲಾರಿ
ಮತ್ತು ಕಾರುಗಳನ್ನು ರಸ್ತೆ ದುರಂತದ ಸಲುವಾಗಿ
ಹಾಗೂ
ಅಣುಸ್ಥಾವರಗಳನ್ನು
ಭೂತ ಪ್ರೇತಗಳ ನೃತ್ಯ ಕ್ಕಾಗಿ
ಮಕ್ಕಳೇ, ಚಿಂತೆ ಮಾಡದಿರಿ !
ಬಾವಿಗಳು ಎಂದೂ ಬತ್ತುವುದಿಲ್ಲ
ಸಂಜೆಯ ಬೆಳಕಿನ
ರಂಗನ್ನು ನೋಡಿ!
ತೋಟದಲ್ಲಿರುವ
ಸೂರ್ಯಕಾಂತಿ
ಎಷ್ಟೊಂದು
ಸುಂದರವಾಗಿದೆ
ದುಂಬಿಯ ಝೇಂಕಾರ
ಎಷ್ಟೊಂದು ಇಂಪು!
ಪುಟ್ಟ ಮಗುವೊಂದು
ಹಾಡಲು
ಆರಂಭಿಸಿತು.
” ನಾವು
ನಕ್ಷತ್ರಗಳನ್ನು ತಿನ್ನೋಣ ?”
” ನಾವು
ನಕ್ಷತ್ರಗಳನ್ನು ತಿನ್ನೋಣ !”






yes
nice
good!!