ಕಾಡುವ ಮುಖಗಳು!
– ಶ್ರೀನಿವಾಸ ಎಂ

1
ಮೆಜೆಸ್ಟಿಕ್ನಲ್ಲಿ ದಿನಾ ಕಾಣುವ ನೂರಾರು
ಮುಖಗಳು; ಕೆಲವು ಸದಾ ಕಾಡುತ್ತವೆ.
2
ಒಂದು ಜತೆ ಬಟ್ಟೆ,
ದಿಕ್ಕು ದೆಸೆಯಿಲ್ಲದ ಅಲೆದಾಟ,
ಸಣ್ಣ ಕೆಲಸ, ದಿನಕ್ಕೆರಡೇ ಊಟ,
ತಲೆ ಮೇಲೋಂದು ಸೂರಿಲ್ಲ,
ದಣಿದರೂ ನಿದ್ದೆಯ ಹಂಗಿಲ್ಲ,
ಸಂಜೆಯೆ ಕನಸುಗಳ ಕಾಟ,
ಕಣ್ಮುಚ್ಚಿದರೆ ಊರು ಬಿಟ್ಟು
ಬಂಗಲೆ ಕಟ್ಟಿದವರ ಬಣ್ಣ ಬಣ್ಣಗಳ ಚಿತ್ರ!
3
ಅಂಗಡಿಗಳೆಲ್ಲ ಮುಚ್ಚೋವರೆಗೆ ನಿದ್ದೆಯ ಮಾತಿಲ್ಲ,
ಅಲ್ಲಿವರೆಗೆ ಬರೀ ಸುತ್ತಾಟ,
ಹೆಜ್ಜೆ ಹೆಜ್ಜೆಗೂ ಚಿತ್ರವಿಚಿತ್ರ ಜನ,
4
ಎಲ್ಲರ ಭಾವ ಲಹರಿಯೂ ಒಂದೇ,
ಕನಸುಗಳು ನನಸಾಗುವ ಕ್ಷಣಕ್ಕಾಗಿನ ಕಾತರ,
ಐದು ರೂಪಾಯಿಗೆ ಭವಿಷ್ಯ ಹೇಳಿದ
ಜ್ಯೋತಿಷಿಯ ಮಾತೇ ಪ್ರತಿಧ್ವನಿ!
5
ಮತ್ತೆ ನಾಳಿನ ಭೀಕರತೆಯ ನೆನಪು,
ಕನಸುಗಳೆಲ್ಲ ಕೊಚ್ಚಿ ಹೋಗುವ ಸಮಯ,
ಇಂದೇನೋ ಮುಗಿಯಿತು, ನಾಳಿನ ಚಿಂತೆ,
ಜನಪ್ರವಾಹದ ನಡುವೆ ಏಕಾಂಗಿ,
ಅದೆನೋ ತಳಮಳ, ಊರು ಬಿಟ್ಟ ಸಂಕಟ
6
ಪೇಟೆ ನಿದ್ದೆಗೆ ಜಾರುವ ಕ್ಷಣ,
ಊರಿಗೆ ಅಂದಿನ ಕೊನೆಯ ಕರೆ,
ಅಮ್ಮ…ಚೆನ್ನಾಗಿದ್ದೀನಿ…ಫಸ್ಟ್ಕ್ಲಾಸ್ ಊಟ,
ಫ್ರೆಂಡ್ ಮನೆ…ಇನ್ನೇನು ನಾಲ್ಕು ತಿಂಗ್ಲಳಲ್ಲಿ
ನೀನೂ ಬಂದಿಡ್ಬಹುದು…!





0 Comments