ಡಿ. ಶಬ್ರಿನಾ ಮಹಮದ್ ಅಲಿ
**
ಬೆಳ್ಳಂಬೆಳಗ್ಗೆ
ಸೊಪ್ಪು ಮಾರುವ
ಅಜ್ಜಿಯೊಂದಿಗೆ
ಕೋಟ್ಯಾಧಿಪತಿ ಹೆಂಗಸಿನ
ಚೌಕಾಸಿ ಜಗಳ…
ಅದು ಎಷ್ಟಕ್ಕಾಗಿ?
ಎಂಟಾಣೆ,ರೂಪಾಯಿಗಾಗಿ!
ಚೌಕಾಸಿ ಮಾಡುವ
ಕೋಟ್ಯಾಧಿಪತಿಗೆ
ಬಿಡುವಿಲ್ಲದೆ ಓಡಿ
ಸವೆದ ಆ ಅಜ್ಜಿಯ
ಕಾಲುಗಳು
ಕಾಣಲಿಲ್ಲವೇ?
ಮುಳ್ಳು ಮುಳ್ಳಾಗಿರುವ
ಒರಟು ಕೈಗಳ ನೋಡಿ
ಮರುಕ ಹುಟ್ಟಲಿಲ್ಲವೆ?
ಕೂತಲ್ಲಿಯೇ ಕೂತು
ಕಂತೆ ಕಂತೆ ನೋಟು
ಎಣಿಸುವ ಸಿರಿವಂತಳಿಗೆ,
ಮೂರ್ನಾಲ್ಕು ಕಾಸಿಗಾಗಿ
ನಿತ್ಯ ನಿಯ್ಯತ್ತಿನಿಂದ….
ದೇಹ ಸವೆಸುವ ಅಜ್ಜಿಯ
ಪಾಡು ಕಂಡಿತಾದರೂ ಹೇಗೆ?
ಮರುಕ ಹುಟ್ಟಿತಾದರು ಹೇಗೆ?
ಹೊಟ್ಟೆಪಾಡಿಗಾಗಿ ಮನೆ
ಬಾಗಿಲಿಗೆ ಬರುವ ಸೊಪ್ಪಿನವರು
ಒಂದೆರಡು… ದಿನದಲಿ
ಬಾಡುವ ಹೂವಿನವರು
ಕೊಳೆವ ಹಣ್ಣು-ತರಕಾರಿಯವರು
ಇವರೇ ಆಗಬೇಕೆ ನಿಮ್ಮ
ಸೊಕ್ಕಿನ ಚೌಕಾಸಿ ಚಪಲಕೆ..?
ಚೌಕಾಸಿ ಮಾಡಬೇಕೆ…
ಹೋಗಿ ಸುಲುಗೆ ಮಾಡುವ
ದೊಡ್ಡ..ಅತಿ ದೊಡ್ಡ..
ಮಾಲ್-ಮಾರ್ಕೆಟಗಳಿಗೆ!
ಆಗದಲ್ಲವೇ….!
ಉಳ್ಳವರೊಂದಿಗೆ
ಮಾಡಲಾಗದ ಚೌಕಾಸಿ
ಕಡು ಬಡವರೊಂದಿಗೇಕೆ..?
0 Comments