
ಮೂಲ: ಎರಿನ್ ಹ್ಯಾನ್ಸನ್

ಕನ್ನಡಕ್ಕೆ : ಚೈತ್ರಾ ಶಿವಯೋಗಿಮಠ
ನೀನು:
ನಿನ್ನ ವಯಸ್ಸಲ್ಲ
ಹಾಕುವ ಬಟ್ಟೆಗಳ ಅಳತೆಯೂ ಸಹಿತ ಅಲ್ಲ
ಬರಿಯ ದೇಹದ ತೂಕವಲ್ಲ
ಅಥವಾ ನಿನ್ನ ಕೂದಲಿನ ಬಣ್ಣವಲ್ಲ
ಬರಿದೆ ನಿನ್ನ ಹೆಸರಲ್ಲ
ಅಥವಾ ನಿನ್ನ ಕೆನ್ನೆಯ ಮೇಲಿನ ಗುಳಿಗಳಲ್ಲ
ನೀನು:
ನೀನೋದುವ ಎಲ್ಲಾ ಪುಸ್ತಕಗಳು
ನೀನಾಡುವ ಎಲ್ಲಾ ಮಾತುಗಳು
ಮುಂಜಾನೆಯ ನಿದ್ದೆಗಣ್ಣಿನ ಗೊಗ್ಗರು ಧ್ವನಿ
ಅಡಗಿಸಿಡುವ ನಿನ್ನೆಲ್ಲ ನಗೆಯ ಅಕ್ಕರೆ
ನಿನ್ನ ನಗೆಯೊಳಗಿನ ಸಕ್ಕರೆ
ನೀ ಸುರಿಸಿದ ಪ್ರತಿ ಕಂಬನಿಯ ಬಿಕ್ಕಳಿಕೆ
ನಿನ್ನ ಏಕಾಂತದಲ್ಲಿ ಮನಬಿಚ್ಚಿ ಹಾಡುವ ಹಾಡು
ನೀನು ಅಲೆದಾಡಿದ ಪ್ರತಿ ಸ್ಥಳದ ಜಾಡು
ಮತ್ತು ನೀನು ಮನೆಯೆಂದು ಕರೆವ ನೆಲೆಯೇ

ನೀನು:
ನಿನ್ನ ನಂಬಿಕೆಗಳು
ನೀನು ಪ್ರೀತಿಸುವ ಜನರು
ನಿನ್ನ ಕೋಣೆಯೊಳಗೆ ತೂಗುಹಾಕಿದ ಚಿತ್ರಪಟಗಳು
ಮತ್ತು ನೀನು ಕನಸುವ ಭವಿತವ್ಯ
ನೀನು ಬಹಳಷ್ಟು ಸೌಂದರ್ಯದಿಂದ ಕೂಡಿರುವೆ
ಆದರೆ ನೀನಲ್ಲದ ನಿನ್ನ ವ್ಯಾಖ್ಯಾನಗಳೇ ನೀನೆಂದು
ನಿರ್ಧರಿಸಿ, ಅದನ್ನ ಮರೆತೇ ಬಿಟ್ಟಿರುವೆ






ಲೌಲಿ ಕವಿತೆ.ಚೆಂದ ಅನುವಾದ