ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೇತನ್ ಪೊನ್ನಾಚಿ ಹೊಸ ಕವಿತೆ: ಕಾರಣ ಕಾಯದವಳು

-ಚೇತನ್ ಎಸ್.ಪೊನ್ನಾಚಿ

ನರ ನಾಡಿಯೆಲ್ಲ ಬತ್ತಿ  ಬಿರುಕ್ಹೊಡೆದು ಮುಗಿಲಂತರಿಸಿ ಕುಳಿತಾಗ.
ಮುಂಗಾರು ಮಳೆ ತಬ್ಬಿ ಅಡಗಿದ ಬೀಜ ಬೆದೆಯೊಡೆದು ಬಂದಂತೆ..
ಕಾರಣಕಾಯದೆ ಅವಳು ನೆನಪಾಗಿ ಬಿಡುತ್ತಾಳೆ.

ದಿನತುಂಬಿದ ಗಂಗೆ ಇವತ್ತು, ನಾಳೆ, ನಾಳಿದ್ದುಗಳೆಂದು ದಿನ ಕಾಯುವಾಗ.
ಸದ್ದಿಲ್ಲದಂತೆ ನಡುರಾತ್ರಿಯಲ್ಲೊಮ್ಮೆ ಹೆಣ್ಣು ಕರುವಿಗೆ ಜನ್ಮವಿತ್ತಂತೆ..
ಕಾರಣಕಾಯದೆ ಅವಳು ನೆನಪಾಗಿ ಬಿಡುತ್ತಾಳೆ.

ಸಂಜೆ ಅರಳಿಕಟ್ಟೆಯ ಮೇಲೆ, ಗಾಳಿ ಮಾತುಗಳು ಕಡ್ಡಿ ಗೀರುವ ಸಮಯ!
ಸುಟ್ಟು ಬೂದಿಯಾಗುವವರ ಮಧ್ಯೆ ಅಪ್ಪಟ ಅಪರಂಜಿಯಂತೆ..
ಕಾರಣಕಾಯದೆ ಅವಳು ನೆನಪಾಗಿ ಬಿಡುತ್ತಾಳೆ.

ಗೌಡರ ಮೊಮ್ಮಗಳ ಸೊಂಟದ ಮೇಲಿನ ತಾಮ್ರದ ಬಿಂದಿಗೆ ಚಳಪಿಸಲು;
ಕೋಣೆಯ ಕಿಟಕಿ ಬಾಗಿಲು ತೆರೆಯುತಿತ್ತು.
ಕೊಳವೆಬಾವಿಯ ಸದ್ದು ಎದೆಗೊದ್ದು ನೀರಾಗಿ..
ಕಾರಣಕಾಯದೆ ಅವಳು ನೆನಪಾಗಿ ಬಿಡುತ್ತಾಳೆ.

ಹಟ್ಟಿ ಚಪ್ಪರದ ತುಂಬಾ ಮೊಲ್ಲೆ, ಮೊಸರು ಗಡಿಗೆಯ ಚೆಲ್ಲಿರಲು!
ನೀಲವೇಣಿಯ ಹುಡುಗಿ  ತಿಳಿಗಾಳಿಯಲ್ಲೊಮ್ಮೆ ಸುಳಿದಾಡಿದಂತೆ..
ಕಾರಣಕಾಯದೆ ಅವಳು ನೆನಪಾಗಿ ಬಿಡುತ್ತಾಳೆ.

ಊರು ಹಬ್ಬದಲೊಮ್ಮೆ ಕಾಡೆಮ್ಮೆ, ಹುಲಿ, ಕೀಲುಗೊಂಬೆಗಳ ಕುಣಿತ.
ತೋಳತೆಕ್ಕೆಯಲ್ಲಿದ್ದ ಮಗಳು ಕಿಟಾರನೆ ಕಿರುಚಿ ಕುತ್ತಿಗೆ ಬಿಗಿದಾಗ..
ಕಾರಣಕಾಯದೆ ಅವಳು ನೆನಪಾಗಿ ಬಿಡುತ್ತಾಳೆ.

 

‍ಲೇಖಕರು avadhi

22 July, 2020

3 Comments

  1. Mantheshakumar. B.n.

    ಕಾರಣ ಕಾಯದವಳು ಕವಿತೆ ಸಖತ್ ಇದೆ. ಅಭಿನಂದನೆಗಳು ಸರ್

  2. T S SHRAVANA KUMARI

    ಇಷ್ಟವಾಯಿತು

  3. Shekhar Ladawa

    NICE

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading