ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೆಗೆವಾರ

ಪಿ ಆರ್ ವೆಂಕಟೇಶ್

ನಿಜವೆಂದು ನಂಬಿಸಿದ ನಿಜಗಳೆದೆಯನು ಸೀಳಿ
ಕೆಂಡದುಂಡೆಯಮೇಲೆ ಎದ್ದು ನಿಂತವನೆ

ಹೆಗಲ ಮೇಲೆ ಕೋವಿ ಎದೆಯೊಳಗೆ ಗುಲಾಬಿ
ದೂರಗಳ ಅಲೆದಳೆದು ಸನಿಹ ಬೆಸೆದವನೆ

ಆಳಗಳ ಅರ್ಥೈಸಿ ಇಳಿದೊಳಗೆ ಈಜಾಡಿ
ನೀಲಿ ಬಾನಿಗೆ ಬೆಳ್ಳಿ ಚುಕ್ಕಿಯಾದವನೆ.

ಉರಿವ ಬೆಂಕಿಯ ಒಳಗೆ
ದುಡಿವಜನ ಸಿಲುಕಿರಲು
ಬೆಳಕ ತಂಪಿಗೆ ಎಳೆದ ಹಣತೆ ಯಾದವನೆ

ಕಡುಕಷ್ಟ ಬೆಟ್ಟಗಳ ಕುಟ್ಟಿ ಹುಡಿಯಾಗಿಸಿ
ಧರೆಯ ಒಡಲಿನ ತುಂಬ ಸತು ತುಂಬಿದವನೆ

ಕವಿದ ಕತ್ತಲ ಎದೆಯ
ಎಳೆ ಬಿಡಿಸಿ ಹರಿದೊಗೆದು
ಧರೆಯೊಡಲ ಬಾನಿಗೆ ಸೂರ್ಯನಾದವನೆ

ಗಿರಣಿ ಸದ್ದಿಗೆ ಸತ್ತು ಹೊಗೆಯಾದ ಕಾರ್ಮಿಕರ
ಕನಸ ಕನವರಿಕೆಗೆ
ಕಣ್ಣಾದವನೆ

ದಾರಿಗಳ ಕೊರೆಕರೆದು ದಿಕ್ಕೆಟ್ಟ ಜೀವಕೆ
ನಿನ್ನೆ ಎದೆಯನೆ ಹಾಸಿ ಹೆಧ್ಧಾರಿ ಯಾದವನೆ

ಮಾಯೆ ನೀ ಎಂದೆಂದು ಹೀಗಳಿದ ಹೆಣ್ಣ
ಮೌನ ಮನಸ ಮಾತ ಮುಗಿಲೆತ್ತರ ಬೆಸೆದವನೆ

ಸತ್ತವನ ಎದೆಯಲ್ಲಿ ಜೀವವನು ಎಚ್ಚರಿಸಿ
ಸರಪಳಿಗೆ ಸಿಡಿಮದ್ದ ತೀಡಿದವನೆ

ಇತಿಹಾಸ ಚಾಲನೆಗೆ ಹೊಸದಾರಿ ಹದಗೊಳಲು
ಹೋರಾಟ ಬೀಜಗಳ ಬಿತ್ತಿ ನಡೆದವನೆ.

‍ಲೇಖಕರು Avadhi

28 October, 2020

1 Comment

  1. T S SHRAVANA KUMARI

    ಚಂದ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading