ಚಿತ್ತಾಪೂರ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರವರಿ, 8, 2014
ಸಮ್ಮೇಳನಾಧ್ಯಕ್ಷರ ನುಡಿ
ಸಮ್ಮೇಳನಾಧ್ಯಕ್ಷರು ಶ್ರೀ ರಾಜಶೇಖರ ಹತಗುಂದಿ
ಸಾಹಿತ್ಯ-ಸಂಸ್ಕೃತಿ ಬಗ್ಗೆ ಅಪಾರ ಗೌರವ ಪ್ರೀತಿಯನ್ನಿಟ್ಟುಕೊಂಡಿರುವ ಕನ್ನಡದ ಮನಸುಗಳೆ, ಚಿತ್ತಾಪೂರ ತಾಲೂಕಿನ ಈ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿರುವ, ನಾಡಿನ ಹಿರಿಯ ಸಂಸ್ಕೃತಿ ಚಿಂತಕರೂ ಆಗಿರುವ ನಾಡೋಜ ಡಾ. ಬರಗೂರ ರಾಮಚಂದ್ರನವರೆ, ಈ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರೂ, ಉತ್ಸಾಹಿ ಶಾಸಕರು ಆಗಿರುವ ಪ್ರಿಯಾಂಕ ಖರ್ಗೆಯವರೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಿರುವ ಮಲ್ಲಿಕಾರ್ಜುನ ತಂಗಾ ಅವರೆ, ಬಸವರಾಜ ಜಿರಡೆ ಅವರೆ, ಶಿವಶರಣಪ್ಪಾ ಬನ್ನಿಕಟೆ ಅವರೆ, ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹಿಪಾಲರೆಡ್ಡಿ ಮುನ್ನೂರ ಅವರೆ, ಚಿತ್ತಾಪೂರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಗಯ್ಯಸ್ವಾಮಿಯವರೆ, ತಾಲೂಕಾ ಸಾಹಿತ್ಯ ಪರಿಷತ್ನ ಇನ್ನಿತರ ಪದಾಧಿಕಾರಿಗಳೆ, ನನ್ನನ್ನು ಸಮ್ಮೇಳನಾಧ್ಯಕ್ಷರನ್ನಾಗಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರೆ, ಈ ಸಮ್ಮೇಳನದಲ್ಲಿ ಸಂಭ್ರಮದಿಂದ ಪಾಲ್ಗೊಂಡ ಸಹೋದರ, ಸಹೋದರಿಯರೆ, ಎಲ್ಲ ಕನ್ನಡಪರ-ಜನಪರ ಸಂಘಟನೆಗಳ ಪದಾಧಿಕಾರಿಗಳೆ, ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮದ ಎಲ್ಲ ಸ್ನೇಹಿತರೆ ತಮಗೆಲ್ಲ ತುಂಬು ಹೃದಯದ ನಮನಗಳು…
ಈ ಸಂದರ್ಭದಲ್ಲಿ ನನಗೆ ದಾರ್ಶನಿಕ ಕವಿ, ಮಹಾನ್ ಅನುಭಾವಿ ಅಲ್ಲಮ ಪ್ರಭುವಿನ ವಚನ ನೆನಪಾಗುತ್ತಿದೆ… ನನ್ನ ಬದುಕಿನಲ್ಲಾದ ಸ್ಥಿತ್ಯಂತರಗಳು, ಸಂಭವಿಸಿದ ಆಕಸ್ಮಿಕಗಳನ್ನು ಅಲ್ಲಮನ ಈ ವಚನ ಧ್ವನಿಪೂರ್ಣವಾಗಿ ಪ್ರತಿನಿಧಿಸುವಂತಿದೆ. ಅಷ್ಟು ಮಾತ್ರವಲ್ಲ ನನ್ನ ಮತ್ತು ಚಿತ್ತಾಪೂರ ತಾಲೂಕಿನ ನಡುವೆ ಏರ್ಪಟ್ಟ ಅವಿನಾಭಾವ ಸಂಬಂಧದ ಪರಿಯನ್ನು ಈ ವಚನ ಸೂಚ್ಯವಾಗಿ ವಿವರಿಸುತ್ತದೆಯೆಂದು ಭಾವಿಸಿದ್ದೇನೆ.
ಎತ್ತಣ ಮಾಮರಎತ್ತಣ ಕೋಗಿಲೆ
ಎತ್ತಣಿಂದೆತ್ತ ಸಂಬಂಧವಯ್ಯಾ?
ಬೆಟ್ಟದ ಮೇಲಣ ನೆಲ್ಲಿಕಾಯಿ
ಸಮುದ್ರದೊಳಗಣ ಉಪ್ಪು
ಎತ್ತಣಿಂದೆತ್ತ ಸಂಬಂಧವಯ್ಯಾ?
ಗುಹೇಶ್ವರಲಿಂಗಕ್ಕೆಯೂ ನಮಗೆಯೂ
ಎತ್ತಣಿಂದೆತ್ತ ಸಂಬಂಧವಯ್ಯಾ…
ಹಾಗೆ ನೋಡಿದರೆ, ನನ್ನ ಹುಟ್ಟೂರು ಕಲಬುರ್ಗಿ ತಾಲೂಕಿನ ಹತಗುಂದಿ… ಪ್ರಾಥಮಿಕ-ಪ್ರೌಢ ಶಿಕ್ಷಣವನ್ನು ಹತಗುಂದಿ, ಸಾವಳಗಿಯಲ್ಲಿ ಪೂರೈಸಿದೆ. ಮಹತ್ವಾಕಾಂಕ್ಷೆ ಇಲ್ಲದ ಅಪ್ಪ, ಕೂಲಿನಾಲಿ ಮಾಡಿ ಹೊಟ್ಟೆ ತುಂಬಿಸುತ್ತಿದ್ದ ಅವ್ವ. ಮನೆ ತುಂಬಾ ಬಡತನ ಹಾಸಿ ಹೊದ್ದು ಮಲಗಿತ್ತು. ಅಪ್ಪ ಕೆಟ್ಟವನೇನೂ ಆಗಿರಲಿಲ್ಲ. ಊರಿಗೆ ಉಪಕಾರಿ ಮನೆಗೆ ಮಾರಿ ಎಂಬ ಸ್ವಭಾವದವರು. ಇದ್ದೊಬ್ಬ ತಮ್ಮ ಹುಟ್ಟಿದಾರಭ್ಯ ದುಡಿಯುತ್ತಿದ್ದ. ಏಳನೇ ತರಗತಿ ಪಾಸಾದಾಗ ಹಣಕಾಸಿನ ಮುಗ್ಗಟ್ಟಿನಿಂದ ಓದು ನಿಲ್ಲಿಸುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಹಿಂದೆಮುಂದೆ ಯೋಚಿಸದೆ ಅಪ್ಪ ನನ್ನನ್ನು ಮುಂಬಯಿಗೆ ಕಳಿಸಲು ನಿರ್ಧರಿಸಿದ್ದ. ನನಗಾಗ ಅಷ್ಟೊ ಇಷ್ಟೊ ಟೇಲರಿಂಗ್ ಕೆಲಸ ಗೊತ್ತಿತ್ತು. ಮುಂಬಯಿಯಲ್ಲಿ ನಾನು ಟೇಲರ್ ಆಗಿ ದುಡಿಯಬೇಕೆಂಬುದು ಅಪ್ಪನ ಹಂಬಲ. ಮುಂಬಯಿಯಲ್ಲಿರುವ ತನ್ನ ಸಂಬಂಧಿಕರೊಂದಿಗೆ ಮಾತಾಡಿ ನನ್ನನ್ನು ಅಲ್ಲಿಗೆ ರವಾನಿಸಲು ಅಪ್ಪ ಎಲ್ಲ ರೀತಿಯ ತಯಾರಿ ಮಾಡಿದ್ದ.
ಏಳನೇ ತರಗತಿಯಲ್ಲಿ ನನ್ನ ಸಹಪಾಠಿಯಾಗಿದ್ದ ಮಹಾದೇವಪ್ಪ ನಾಯಕೋಡಿ ಇದ್ದುದರಲ್ಲಿಯೇ ಸ್ಥಿತಿವಂತ. ಆತ ಈಗ ದೆಹಲಿಯಲ್ಲಿ ಕೆಲಸದಲ್ಲಿದ್ದಾನೆ. `ರಾಜಶೇಖರ ಹೈಸ್ಕೂಲ್ ಸೇರಿದರೆ ಮಾತ್ರ ನಾನು ಆ್ಯಡ್ಮಿಶನ್ ಮಾಡಿಸುವೆ’ ಎಂದು ಆತ ತನ್ನ ಮನೆಯಲ್ಲಿ ಹಠ ಹಿಡಿದು ಕೂತಿದ್ದ. ಮಹಾದೇವಪ್ಪನ ಅಪ್ಪ ಶಿವಲಿಂಗಪ್ಪ ನಾಯಿಕೋಡಿ ನನ್ನ ಶಾಲಾ ಶುಲ್ಕವನ್ನು ತಾವೇ ಭರಿಸಿ ಇಬ್ಬರನ್ನೂ ಹೈಸ್ಕೂಲಿಗೆ ಸೇರಿಸಿದ್ದರು. ನಾನು ನಿರಾಳನಾದೆ. ನನ್ನ ಗೆಳೆಯನ ತಂದೆಯ ಔದಾರ್ಯ ನೆನೆದರೆ ಕಣ್ಣು ತುಂಬಿ ಬರುತ್ತದೆ.
ಹೈಸ್ಕೂಲಿನ ಮೊದಲೆರಡು ವರ್ಷ ಹೇಗೋ ಸಾಗಿದವು. ಆದರೆ ಹತಗುಂದಿಯಲ್ಲಿ ಬದುಕು ದುಸ್ತರವಾಯಿತು. ಒಂಭತ್ತನೇ ತರಗತಿ ಪರೀಕ್ಷೆ ಮುಗಿಸಿದ್ದೆ. ಅದೇ ಸಂದರ್ಭದಲ್ಲಿ ನನ್ನ ತಾಯಿಯ ಅಕ್ಕನ ಮಗ ಈರಣ್ಣ ಅವರು ಹತಗುಂದಿಗೆ ಬಂದಿದ್ದರು. ಅವರು ಭಂಕೂರಿನ ಸಮೀಪದ ಮುತ್ತಗಿ ಗ್ರಾಮದವರು. ಕಿತ್ತು ತಿನ್ನುವ ಬಡತನ, ಬದುಕಿನ ಎಲ್ಲ ದಾರಿಗಳು ಮುಚ್ಚಿಕೊಂಡಿದ್ದವು. ಈರಣ್ಣನವರ ನೆರವಿನೊಂದಿಗೆ `ಭಂಕೂರು’ ಗ್ರಾಮಕ್ಕೆ ಸ್ಥಳಾಂತರವಾದೆವು. ಭಂಕೂರಿನ ಕಲ್ಲಿನ ಖಣಿಗಳಲ್ಲಿ ಅಪ್ಪ-ಅವ್ವ ತಮ್ಮ ಕೆಲಸ ಮಾಡುತ್ತಿದ್ದರು. ನಾನು ಭಂಕೂರಿನ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.ಗೆ ಸೇರಿಕೊಂಡೆ.
ಭಂಕೂರು ಹೈಸ್ಕೂಲಿನ ಹಾಜರಾತಿ ದಾಖಲೆಯಲ್ಲಿ ನನ್ನದು ಕೊನೆಯ ಹೆಸರು. ಯಾಕೆಂದರೆ, ನಾನು ಹೊರಗಿನಿಂದ ಬಂದು ತಡವಾಗಿ ಪ್ರವೇಶ ಪಡೆದಿದ್ದೆ. ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಹೊರಬಿದ್ದಾಗ ನನ್ನ ಹೆಸರು ಮೊದಲನೆಯದಾಗಿತ್ತು. ಜಾತ್ಯತೀತ ಮನೋಧರ್ಮದ ಮೇಷ್ಟ್ರುಗಳಾದ ಇಟಗಿಕರ್, ಪಾಗದವಾರ ಹಾಗೂ ಪೂಜಾರಿಯವರು ನನ್ನ ಯಶಸ್ಸಿನ ಬಹುದೊಡ್ಡ ಪಾಲುದಾರರು. ವಿಜ್ಞಾನ ಬೋಧಿಸುತ್ತಿದ್ದ ಇಟಗಿಕರ ಸರ್ ಅವರು ನನ್ನೆಲ್ಲ ಬೆಳವಣಿಗೆಯನ್ನು ಕಂಡು ಸಂಭ್ರಮಪಟ್ಟವರು. ಚಿತ್ತಾಪೂರ ತಾಲೂಕಿನ ಭಂಕೂರ ನನಗೆ ಅನ್ನಕ್ಕೆ ಮಾತ್ರ ಆಸರೆಯಾಗಲಿಲ್ಲ. ಅಕ್ಷರ ಮತ್ತು ಅರಿವು ದಯಪಾಲಿಸಿತು. ಪರೀಕ್ಷೆಗಳನ್ನು ಪಾಸು ಮಾಡುವುದು ಮತ್ತು ಒಂದು ನೌಕರಿಯನ್ನು ಗಿಟ್ಟಿಸಿಕೊಳ್ಳುವುದು ಎಲ್ಲರಂತೆ ನನಗೂ ಅನಿವಾರ್ಯವಾಗಿತ್ತು. ಶಹಾಬಾದ್ ಮರಗೋಳ ಕಾಲೇಜಿನಲ್ಲಿ ಪಿ.ಯು.ಸಿ. ಮುಗಿಸಿದೆ, ಎಬಿಎಲ್ ಕಾರ್ಖನೆಯಲ್ಲಿ ಮೂರು ವರ್ಷದ ಅಪ್ರೆಂಟಿಸ್ಶಿಪ್ ಪೂರೈಸಿದೆ. ಆಗ ಕಾರ್ಖಾನೆ ಸತತ ಎರಡು ವರ್ಷಗಳ ಕಾಲ ಲಾಕ್ಔಟ್ ಆಗಿದ್ದರಿಂದ ನೌಕರಿಯ ಅವಕಾಶ ತಪ್ಪಿ ಹೋಯಿತು.
ನಂತರದ ದಿನಗಳಲ್ಲಿ ಬಳ್ಳಾರಿಗೆ ಹೋಗಿ ಡಿಪ್ಲೊಮಾ ಇನ್ ಸಿವಿಲ್ ಇಂಜಿನಿಯರಿಂಗ್ ಪೂರೈಸಿದ್ದು, ಮೈಸೂರು ವಿವಿಯಿಂದ ಎಂ.ಎ. ಪದವಿ ಪಡೆದದ್ದು ನನ್ನ ಪಾಲಿಗೆ ಮಹತ್ವದ ಸಂಗತಿಗಳಲ್ಲ. ಅನ್ನ ಅಕ್ಷರದ ಜೊತೆಗೆ ಸಾಹಿತ್ಯ, ಸಂಸ್ಕೃತಿ, ಸಮಾಜ, ರಾಜಕಾರಣದ ಬಗ್ಗೆ ಅಪಾರ ತಿಳಿವಳಿಕೆಯನ್ನು ಕೊಟ್ಟ ಈ ಚಿತ್ತಾಪೂರ ನೆಲಕ್ಕೆ ನಾನು ಸದಾ ಋಣಿ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಲೋಹಿಯಾರ ವಿಚಾರಧಾರೆಗಳು ನನ್ನ ವಿವೇಕದ ಭಾಗವಾಗಿದ್ದು, ಆ ಮೂಲಕ ಅಕ್ಷರ ಲೋಕದಲ್ಲಿ ಒಂದೆರಡು ಹೆಜ್ಜೆ ಕ್ರಮಿಸಲು ಸಾಧ್ಯವಾಗಿದ್ದು ಭಂಕೂರ ಪರಿಸರದ ಸಮೃದ್ಧ ಸಾಂಸ್ಕೃತಿಕ ವಾತಾವರಣದಿಂದ. ಭಂಕೂರಿನಲ್ಲಿ ಹಳೆ ಕಂಪನಿ, ಹೊಸ ಕಂಪನಿಗಳೆಂದೇ ಖ್ಯಾತಿ ಪಡೆದಿರುವ ಎರಡು ಕಾರ್ಖಾನೆಗಳು ಕಾರ್ಮಿಕ ಚಳವಳಿಗೆ ಈ ಭಾಗದಲ್ಲಿ ನೆಲೆಯೊದಗಿಸಿದ್ದವು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೋರಾಟಗಳು ನನ್ನೊಳಗೆ ಆತ್ಮಾಭಿಮಾನವನ್ನು, ಸಾಮಾಜಿಕ ಸಂಗತಿಗಳ ಬಗೆಗಿನ ಗಾಢ ತಿಳಿವಳಿಕೆಯನ್ನು ಮೂಡಿಸಿದವು.
ಜಾತಿ ವ್ಯವಸ್ಥೆ ಬಗ್ಗೆ ಡಾ. ಬಿ.ಆರ್.ಅಂಬೇಡ್ಕರ್ ಅವರು ಆಡಿದ ಮಾತುಗಳು ನನ್ನ ಬದುಕು ಮತ್ತು ಬರಹವನ್ನು ಗಾಢವಾಗಿ ಪ್ರಭಾವಿಸಿವೆ. ಬಾಬಾ ಸಾಹೇಬರು ಒಂದೆಡೆ ಹೇಳುತ್ತಾರೆ. “ಜಾತಿ ವ್ಯವಸ್ಥೆಯನ್ನು ಪವಿತ್ರಗೊಳಿಸಿರುವ, ಅದನ್ನು ದೈವತ್ವಕ್ಕೆ ಏರಿಸಿರುವ ಎಲ್ಲವನ್ನೂ ಧಿಕ್ಕರಿಸಬೇಕು. ಅದಕ್ಕೆ ಜೀವ ತುಂಬಿರುವ ಸಂಸ್ಥೆಗಳನ್ನು ನಾಶಪಡಿಸಬೇಕು. ಇಂಥ ಸಂದರ್ಭದಲ್ಲಿ ಹಿಂದೆ ಬುದ್ಧ ತಾಳಿದ ನಿಲುವನ್ನೇ ಅನುಸರಿಸಬೇಕು. ಅರ್ಥಹೀನ ಶಾಸ್ತ್ರ, ಸಂಹಿತೆಗಳನ್ನು ಮುಲಾಜಿಲ್ಲದೆ ಧಿಕ್ಕರಿಸಬೇಕು. ಜಾತಿ ವ್ಯವಸ್ಥೆಗೂ, ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಅದು ನಿಜವಾದ ಅಧ್ಯಾತ್ಮಿಕತೆ ಹಾಗೂ ರಾಷ್ಟ್ರದ ಬೆಳವಣಿಗೆಗೆ ಹಾನಿಕಾರವಾದದ್ದು…” ಎಂದು. ಬುದ್ಧ-ಬಸವರ ತತ್ವಾದರ್ಶಗಳ ಸಾರ ಬಾಬಾ ಸಾಹೇಬರ ಮಾತುಗಳಲ್ಲಿ ಅಂತರ್ಗತವಾಗಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಬುದ್ಧ-ಬಸವ, ಅಂಬೇಡ್ಕರ್ರು ತೋರಿದ ಬೆಳಕಲ್ಲಿ ಚಳವಳಿ ರೂಪಿಸಿತ್ತು. ಆ ಕಾರಣಕ್ಕೆ ನನ್ನಂತಹ ಅಸಂಖ್ಯಾತರಿಗೆ ಚಳವಳಿಗಳು ಸಾಮಾಜಿಕ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾದವು.
ಎಬಿಎಲ್ ಕಾರ್ಖಾನೆಯ ಕನ್ನಡ ಗೆಳೆಯರ ಬಳಗದ ಗ್ರಂಥಾಲಯ, ಮಾಸ್ತಿ, ಕುವೆಂಪು, ಕಾರಂತ, ಲಂಕೇಶ, ದೇವನೂರ, ತೇಜಸ್ವಿ, ಸಿದ್ಧಲಿಂಗಯ್ಯ, ಚಿತ್ತಾಲರಂತಹ ಮಹಾನ್ ಲೇಖಕರ ಕೃತಿಗಳನ್ನು ಓದುವ ಅವಕಾಶ ಕಲ್ಪಿಸಿತು. ಕನ್ನಡ ಗೆಳೆಯರ ಬಳಗದ ಹಸ್ತಪ್ರತಿ ಸಂಚಿಕೆಗಳು ಬರಹದತ್ತ ಆಸಕ್ತಿ ತೋರುತ್ತಿದ್ದ ಯುವಕರಿಗೆ ವೇದಿಕೆಯೊದಗಿಸಿದ್ದವು. ತಾನು ಬರೆದ ಮೊದಲ ಕತೆಗೆ ಬಹುಮಾನ ನೀಡಿ ಹಸ್ತಪ್ರತಿ ಸಂಚಿಕೆಯಲ್ಲಿ ಪ್ರಕಟಿಸಲಾಗಿತ್ತು. ಡಾ. ಹಾ.ಮಾ.ನಾಯಕ ರಂತಹ ಹಿರಿಯ ಸಾಹಿತಿಯಿಂದ ಬಹುಮಾನ ವಿತರಿಸಿ ಹುರಿದುಂಬಿಸಿದ್ದರು. ಕನ್ನಡ ಗೆಳೆಯರ ಬಳಗದ ಹೆಚ್.ಬಿ.ತೀರ್ಥ, ಮಂಡಲಗಿರಿ ಪ್ರಸನ್ನ, ಮಾ.ರಾ.ರುದ್ರಾಚಾರ್ ಮುಂತಾದವರು ನನ್ನ ಆರಂಭದ ಬರಹಕ್ಕೆ ನೀರೆರೆದು ಪೋಷಿಸಿದವರು. ದಲಿತ ಸಂಘರ್ಷ ಸಮಿತಿಯ ಗೆಳೆಯರಾದ ಸುರೇಶ ಮೆಂಗನ್, ಮಲ್ಲೇಶಿ ಸಜ್ಜನ ಮುಂತಾದವರು `ಇವ ನಮ್ಮವ ಇವ ನಮ್ಮವ’ ಎಂದು ಪ್ರೀತಿ ವಿಶ್ವಾಸ ತೋರಿದ್ದರಿಂದ ಚಳವಳಿಗಳಿಂದಲೂ ಹೆಚ್ಚು ಕಲಿಯಲು ಸಾಧ್ಯವಾಯಿತು. ಭಂಕೂರ ಕರ್ನಾಟಕ ಕಾಲೇಜಿನ ಅಧ್ಯಾಪಕ ವೃಂದದ ಸದಸ್ಯರಾದ ಎಂ.ಡಿ.ತಾರಾನಾಳ, ಎಸ್.ಎಸ್.ಬಿರಾದಾರ, ವೀರಭದ್ರ ಚೌದ್ರಿ, ಬಾಲಕುಂದಿ ಮುಂತಾದವರು ಕಾಲೇಜಿನ ಗ್ರಂಥಾಲಯವನ್ನೇ ನನಗೊಪ್ಪಿಸಿ ನನ್ನ ಓದಿನ ದಾಹ ತಣಿಸಲು ನೆರವಾದರು.
ನನ್ನ ಕತೆಯನ್ನು ಹೆಚ್ಚು ಲಂಬಿಸಿ ನಿಮಗೆ ಬೇಸರ ಮಾಡಲಾರೆ. `ರಾಜಶೇಖರ ಹತಗುಂದಿ’ ಎಂಬ ವ್ಯಕ್ತಿ ಸ್ವಯಂಭೂ ಅಲ್ಲ ಎಂಬುದನ್ನು ಸ್ಪಷ್ಟಪಡಿಸಲು ತುಸು ವಿವರವಾಗಿ ಹೇಳಬೇಕಾಯಿತು. ಭಾಷಣದ ಆರಂಭದಲ್ಲಿ ಉಲ್ಲೇಖಿಸಿದ ಅಲ್ಲಮನ ವಚನ ನನಗೆ ನಿತ್ಯ ಕಾಡುತ್ತದೆ. ಒಬ್ಬ ಲೇಖಕ ರೂಪುಗೊಳ್ಳುವುದರಲ್ಲಿ ಏನೆಲ್ಲ ಸಂಗತಿಗಳು, ಎಷ್ಟೆಲ್ಲ ವ್ಯಕ್ತಿಗಳು ಒತ್ತಾಸೆಯಾಗಿ ನಿಂತಿರುತ್ತಾರೆ. ಭಂಕೂರಿನಿಂದ ಬೆಂಗಳೂರಿನವರೆಗಿನ ನನ್ನ ಪಯಣದಲ್ಲಿ ಎಷ್ಟೆಲ್ಲ ಆಕಸ್ಮಿಕಗಳು ಘಟಿಸಿವೆ. ಅನೂಹ್ಯ ಶಕ್ತಿಗಳು ಬೆಂಬಲಿಸಿವೆ. ನೆನಪಿಸಿಕೊಂಡರೆ ರೋಮಾಂಚನವಾಗುತ್ತದೆ. ಕಲಬುರ್ಗಿ ಆಕಾಶವಾಣಿಯಲ್ಲಿ ಅಧಿಕಾರಿಗಳಾಗಿದ್ದ ಡಾ. ಆನಂದ ಪಾಟೀಲ, ಡಾ. ಬಸು ಬೇವಿನಗಿಡದ ಆ ಸಾಹಿತ್ಯ ವಲಯದ ಮೂಲಕ ದಕ್ಕಿದ ಚಿತ್ರಶೇಖರ ಕಂಠಿ, ಜಿ.ಎನ್.ಮೋಹನ, ರವಿ ಹಿರೇಮಠ ನನ್ನ ಬದುಕಿಗೆ ಹೊಸ ಆಯಾಮ ಪ್ರಾಪ್ತವಾಗುವಂತೆ ಮಾಡಿದರು. ಸ್ಥಳೀಯ ಕಲಬುರ್ಗಿ ವಾಣಿ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನು ಅಗ್ನಿ ಬಳಗಕ್ಕೆ ಸೇರಿಸಿದವರು. ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್. ಸುಮಾರು 9 ವರ್ಷಗಳ ಕಾಲ ಬೆಂಗಳೂರಿನ ಅಗ್ನಿ ವಾರಪತ್ರಿಕೆಗೆ ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳ ಪ್ರತಿನಿಧಿಯಾಗಿ ವರದಿ ಮಾಡಿದ್ದೇನೆ. ಈ ಭಾಗದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಯತ್ನಿಸಿದ್ದೇನೆ. ಯಾವುದೇ ನಂಜು ಇಟ್ಟುಕೊಳ್ಳದೆ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಟೀಕಿಸಿದ್ದೇನೆ. ಕೈ ಬಾಯಿ ಶುದ್ಧವಿಟ್ಟುಕೊಂಡ ಸಾರ್ಥಕ ಭಾವ ನನ್ನದು.
ಕಳೆದ ಏಳು ವರ್ಷಗಳಿಂದ ಅಗ್ನಿ ಪತ್ರಿಕೆಯ ಸಂಪಾದಕನಾಗಿ ಕಾರ್ಯ ನಿರ್ವಹಿಸುತ್ತಿರುವ ನಾನು ಹೈದ್ರಾಬಾದ್ ಕರ್ನಾಟಕ ಭಾಗದ ಸರ್ವಾಂಗೀಣ ಅಭಿವೃದ್ಧಿ ಬಗ್ಗೆಯೇ ಹೆಚ್ಚು ಚಿಂತಿಸುತ್ತಿರುತ್ತೇನೆ. 9 ವರ್ಷಗಳ ಕಾಲ ಅಗ್ನಿಯನ್ನು ರೂಪಿಸಿ ಅದಕ್ಕೊಂದು ರಾಜ್ಯಮಟ್ಟದ ಮನ್ನಣೆ ದೊರಕಿಸಿಕೊಟ್ಟವರು ಅಗ್ನಿಶ್ರೀಧರ್. ಅಂತಹ ಪತ್ರಿಕೆಯ ಸಂಪಾದಕತ್ವದ ಹೊಣೆಯನ್ನು ನನಗೆ ವಗರ್ಾಯಿಸಿದಾಗ ಒಂದು ಕ್ಷಣ ದಿಗಿಲುಗೊಂಡಿದ್ದೆ. `ಕೊಟ್ಟ ಕುದುರೆಯನೇರದರಿಯದವ ವೀರನೂ ಅಲ್ಲ ಧೀರನೂ ಅಲ್ಲ’ ಎಂಬ ವಚನದ ಸಾಲು ನನ್ನಲ್ಲಿ ಹುಮ್ಮಸ್ಸು ಮೂಡಿಸಿತು. ಅಗ್ನಿಯನ್ನು ಜಾತ್ಯತೀತ ನಿಲುವಿನೊಂದಿಗೆ, ಜನಪರ ಆಂದೋಲನದ ಮಾದರಿಯಲ್ಲಿ ರೂಪಿಸುತ್ತಾ ಸಾಗಿದ್ದೇವೆ. ಅಗ್ನಿಶ್ರೀಧರ್, ಅಗ್ನಿ ಬಳಗದ ಮಂಜುನಾಥ ಅದ್ದೆಯವರ ಋಣ ನನ್ನ ಮೇಲಿದೆ…
ನನ್ನಂತಹ ಅಸಂಖ್ಯಾತ ಲೇಖಕರನ್ನ ರೂಪಿಸಿದ ಚಿತ್ತಾಪೂರ ತಾಲೂಕು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿರಿಮೆ-ಗರಿಮೆ ಮೆರೆದಂತಹ ಪ್ರದೇಶ. ಚಿತ್ತಾಪೂರ ತಾಲೂಕಿನ ಚರಿತ್ರೆ, ಐತಿಹ್ಯ ಗಮನಿಸಿದರೆ, ಅಲ್ಲಿ ಸರ್ವಧರ್ಮಗಳ ಸಮನ್ವಯತೆ ಇರುವುದು ಸ್ಪಷ್ಟವಾಗುತ್ತದೆ. ಚಿತ್ತಾಪೂರ ತಾಲೂಕಿನ ಸನ್ನತಿಯಲ್ಲಿ 1989ರಲ್ಲೇ ಸಾಮ್ರಾಟ್ ಅಶೋಕನ ಶಿಲಾಶಾಸನ ಶೋಧಿಸಲಾಯಿತು. ಜಗತ್ತಿಗೆ ಬೆಳಕಿನ ಹಾದಿ ತೋರಿದ ಬೌದ್ಧ ಧರ್ಮ ಸಾಮ್ರಾಟ್ ಅಶೋಕನ ಪ್ರಯತ್ನದ ಫಲವಾಗಿ ನಮ್ಮಲ್ಲೂ ಪ್ರಚಾರದಲ್ಲಿತ್ತು ಎನ್ನಲಿಕ್ಕೆ ಬೃಹತ್ ಗಾತ್ರದ ಶಿಲಾಶಾಸನ ಸಾಕ್ಷಿಯೊದಗಿಸುತ್ತದೆ. ಸನ್ನತಿ ಸಮೀಪದ ಬೌದ್ಧ ಸ್ತೂಪಗಳು ಬೌದ್ಧ ಧರ್ಮದ ಔನ್ನತ್ಯ, ತತ್ವಾದರ್ಶಗಳ ಸಂಕೇತದಂತಿವೆ. ಸನ್ನತಿಯಿಂದ ಅನತಿ ದೂರದಲ್ಲಿರುವ ಕನಗನಹಳ್ಳಿ ಬೌದ್ಧ ಸ್ತೂಪ ಇಡೀ ದಕ್ಷಿಣ ಭಾರತದಲ್ಲಿನ ಅತಿದೊಡ್ಡ ಸ್ತೂಪವಾಗಿದೆ ಎಂದು ಹೇಳಲಾಗುತ್ತಿದೆ. ಬುದ್ಧ ಗುರುವಿನ ತತ್ವಾದರ್ಶಗಳು ಚಿತ್ತಾಪೂರ ತಾಲೂಕಿನ ಸಾಂಸ್ಕೃತಿಕ ಪರಂಪರೆಯಲ್ಲಿ ಬಂಗಾರದ ಕಳಸದಂತೆ ಶಿಖರಪ್ರಾಯವಾಗಿವೆ.
ಚಿತ್ತಾಪೂರ ಪಟ್ಟಣದಿಂದ ಮೂರು ಕಿ.ಮೀ. ಅಂತರದಲ್ಲಿರುವ `ನಾಗಾವಿ’ ಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತು. ಚಾಲುಕ್ಯರ ಆರನೇ ವಿಕ್ರಮಾದಿತ್ಯನ ಕಾಲದಲ್ಲಿ ಲೋಕರಸ ಎಂಬಾತ `ಅರಲು ಮುನ್ನೂರಿನ’ ಮಹಾಮಂಡಳೇಶ್ವರನಾಗಿದ್ದ. ಅರಲು ಮುನ್ನೂರಿನಲ್ಲಿಯೇ ನಾಗಾವಿ ಎಂಬ ಪ್ರಸಿದ್ಧ ವಿಶ್ವವಿದ್ಯಾಲಯವಿತ್ತು. ದಕ್ಷಿಣ ಭಾರತದ ಪ್ರಸಿದ್ಧ ವಿದ್ಯಾಕೇಂದ್ರವಾಗಿದ್ದ ಕಾಂಚಿ ಪೀಠದ ಮಾದರಿಯಲ್ಲೇ ನಾಗಾವಿ ವಿಶ್ವವಿದ್ಯಾಲಯದಲ್ಲಿ ವೇದ, ಶಾಸ್ತ್ರ, ಗಣಿತ ಹಾಗೂ ಯೋಗ ಶಾಸ್ತ್ರಗಳನ್ನು ಕಲಿಸಿಕೊಡಲಾಗುತ್ತಿತ್ತು. ಚಿತ್ತಾಪೂರ ತಾಲೂಕಿನ ಮರತೂರ ಗ್ರಾಮದ ವಿಜ್ಞಾನೇಶ್ವರ `ಮಿತಾಕ್ಷರ’ ಎಂಬ ಹೆಸರಿನ ನ್ಯಾಯಶಾಸ್ತ್ರದ ಗ್ರಂಥ ರಚಿಸಿದ್ದು ಇಲ್ಲಿ ಉಲ್ಲೇಖಾರ್ಹ.
ಚಿತ್ತಾಪೂರ ಸಮೀಪ `ನಾಗಾ ಎಲ್ಲಮ್ಮ’ ದೇವಿಯ ದೇವಸ್ಥಾನವಿದೆ. ಇಲ್ಲಿ ಮೌಢ್ಯ ಸಂಪ್ರದಾಯಗಳ ಆಚರಣೆಗೆ ಅವಕಾಶವಿಲ್ಲ. ಅಪ್ಪಟ `ಶಕ್ತಿದೇವತೆ’ಯಾಗಿರುವ ನಾಗಾ ಎಲ್ಲಮ್ಮನೇ ಮಾನ್ಯಖೇಟದ ರಾಷ್ಟ್ರಕೂಟರ ಕುಲದೇವತೆ ವೇಳಾಂಬದೇವಿ ಎಂಬ ಪ್ರತೀತಿ ಇದೆ. ವಾಸ್ತುಶಿಲ್ಪಕ್ಕೆ ಹೆಸರಾದ ಚಿತ್ತಾಪೂರ ತಾಲೂಕಿನಲ್ಲಿ 60 ಕಂಬದ ಗುಡಿಯೆಂದೇ ಗುರುತಿಸಲ್ಪಡುವ ತ್ರೈಪುರುಷ ದೇವಾಲಯ, ಮಧುವರಸ ದಂಡನಾಯಕ ಕಟ್ಟಿಸಿದ ರಾಮೇಶ್ವರ ದೇವಾಲಯ ಗಮನ ಸೆಳೆಯುತ್ತವೆ. ಲಕ್ಷ್ಮಣೇಶ್ವರ ದೇವಾಲಯ, ಸಿದ್ದೇಶ್ವರ ದೇವಾಲಯ, ವೈಷ್ಣವ ದೇವಾಲಯ, ಆಂಜನೇಯ ದೇವಾಲಯ, ಈರಪ್ಪಯ್ಯನ ಗದ್ದುಗೆ, ಜೈನ ಬಸದಿ, ಕರಿ ಮಸೀದಿ, ಜುಮ್ಮಾ ಮಸೀದಿ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು. ಇವುಗಳಲ್ಲಿ ಕೆಲವೊಂದು ಶಿಥಿಲಾವಸ್ಥೆಯಲ್ಲಿವೆ. ಚಿತ್ತಾಪೂರ ಅಕ್ಕಪಕ್ಕದ ಪ್ರದೇಶದಲ್ಲಿ ಅನೇಕ ತೀರ್ಥ ಕುಂಡಗಳಿವೆ. ಇದು ಅಂತರ್ಜಲದ ಮಟ್ಟ ಸಮೃದ್ಧವಾಗಿರುವುದರ ಸೂಚನೆ.
ಚಿತ್ತಾಪೂರ ತಾಲೂಕು ಎಲ್ಲ ಮತಧರ್ಮಗಳ ನೆಲೆವೀಡು. ಸಂತರು, ಶರಣರು, ಸೂಫಿಗಳು ಸೌಹಾರ್ದ ಬದುಕಿನ ಎಳೆಗಳನ್ನು ಗಟ್ಟಿಗೊಳಿಸಿದ್ದಾರೆ. ಕೊಡೇಕಲ್ ಬಸವಣ್ಣ, ತಿಂಥಿಣಿ ಮೌನೇಶ್ವರರ ಹಾಗೆ ಈರಪ್ಪಯ್ಯ ಅಪರೂಪದ ಶರಣ. ಬಸವಾದಿ ಪ್ರಮಥರ ವೈಚಾರಿಕ ಪರಂಪರೆಯನ್ನು ಕಾಲಜ್ಞಾನದ ಮಾದರಿಯಲ್ಲಿ ಪ್ರಚುರಪಡಿಸಿದ ಈರಪ್ಪಯ್ಯ ಡಂಗುರ ಪದಕಾರನಾಗಿದ್ದ. ಡಾಂಭಿಕ ಭಕ್ತಿಯನ್ನು ಕಟುವಾದ ಪದಗಳಲ್ಲಿ ಟೀಕಿಸುತ್ತಿದ್ದ. ಸಿದ್ಧರು, ಶರಣರು, ಸಂತರು, ಸೂಫಿಗಳು ಜನಸಾಮಾನ್ಯರ ನಡುವೆ ಜಾತ್ಯತೀತ ತತ್ವಗಳನ್ನು ಬಿತ್ತಿ ಬೆಳೆದವರು. ಆ ಪರಂಪರೆಯ ಮುಂದುವರಿಕೆಯಾಗಿ ಮಠಗಳು, ದರ್ಗಾಗಳು ವರ್ತಮಾನದ ಗಳಿಗೆಯಲ್ಲಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿವೆ. ಹಲಕರ್ಟಾದ ಶರೀಫ ದರ್ಗಾ, ಚಿತಾಶಾವಲಿ ದರ್ಗಾ, ಕೋರಿ ಸಿದ್ಧೇಶ್ವರ ಮಠ, ಕಂಬಳೇಶ್ವರ ಮಠ, ದಿಗ್ಗಾಂವಮಠ, ಭರತನೂರಮಠ, ಮುಗುಳನಾಗಾಂವ ಮಠ, ರಾವೂರಿನ ಸಿದ್ಧಲಿಂಗೇಶ್ವರ ಮಠ ಪ್ರಮುಖವಾಗಿವೆ.
ಗೂಳೂರು ಸಿದ್ಧವೀರಣ್ಣೊಡೆಯರ ಸಂಗ್ರಹಿಸಿದ್ದ `ಶೂನ್ಯ ಸಂಪಾದನೆ’ ಗ್ರಂಥವನ್ನು ಪ್ರಕಟಿಸಿದ ಕೀರ್ತಿ ರಾವೂರಿನ ಸಿದ್ಧಲಿಂಗೇಶ್ವರ ಮಠಕ್ಕಿದೆ. ರಾಜಕೀಯ ಪ್ರಜ್ಞೆ ಮೈಗೂಡಿಸಿಕೊಂಡಿರುವ ಚಿತ್ತಾಪೂರ ತಾಲೂಕಿನ ಜನತೆ ದಲಿತ-ಕಮ್ಯುನಿಸ್ಟ್ ಚಳವಳಿಗಳಿಗೆ ಮಾರ್ಗದರ್ಶಕರಾಗಿದ್ದರು. ಶರಣಪ್ಪ ಭೈರಿ, ಕೆ.ಬಿ.ಶಾಣಪ್ಪ ಹಾಗೂ ಸಿ.ಗುರುನಾಥ್ ಅವರು ಕಮ್ಯುನಿಸ್ಟ್ ಚಳವಳಿಯ ಮೂಲಕ ಜನನಾಯಕರಾಗಿ ಹೊರಹೊಮ್ಮಿದವರು. 70-80ರ ದಶಕಗಳಲ್ಲೇ ಚಿತ್ತಾಪೂರ ತಾಲೂಕಿನ ಮತದಾರರು ಎಡಪಕ್ಷಗಳ ಮುಖಂಡರನ್ನು ಶಾಸನಸಭೆಗೆ ಆರಿಸಿ ಕಳಿಸಿದ್ದರು. ಕಾಂಗ್ರೆಸ್ಸಿನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರು ಸಂವಿಧಾನ ಮತ್ತು ಜನತಂತ್ರದ ಮೇಲೆ ವಿಶ್ವಾಸ ಹುಟ್ಟುವ ಹಾಗೆ ರಾಜಕಾರಣ ಮಾಡುತ್ತಾ ಬಂದವರು. ಜನತಂತ್ರವನ್ನು, ಜಾತಿಬಲ, ತೋಳ್ಬಲ ಮತ್ತು ಹಣಬಲದ ಅಖಾಡವೆಂದು ಪರಿಗಣಿಸಿರುವ ಸಂದರ್ಭದಲ್ಲಿ ಖರ್ಗೆಯವರು ಪ್ರಜಾಪ್ರಭುತ್ವದ ಸಾಧ್ಯತೆ, ಸಾರ್ಥಕತೆ ರುಜುವಾತುಪಡಿಸಿದ ಧೀಮಂತ ನಾಯಕ. ಅವರು ಚಿತ್ತಾಪೂರ ಮತಕ್ಷೇತ್ರವನ್ನು ಶಾಸನ ಸಭೆಯಲ್ಲಿ ಪ್ರತಿನಿಧಿಸಿದ್ದರು ಎನ್ನುವುದು ಅಭಿಮಾನದ ಸಂಗತಿ.
ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತರುವುದು ಮತ್ತು ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ದೊರಕಿಸಿಕೊಡುವುದು ಸಾಮಾನ್ಯ ಸಂಗತಿಯಾಗಿರಲಿಲ್ಲ. ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷರು, ಮಾಜಿ ಮಂತ್ರಿಗಳು ಆಗಿರುವ ವೈಜನಾಥ ಪಾಟೀಲರು ಜನಾಂದೋಲನ ರೂಪಿಸುವ ಮೂಲಕ 371ನೇ ಕಲಂಗೆ ತಿದ್ದುಪಡಿ ಮಾಡುವ ಅನಿವಾರ್ಯತೆಯನ್ನು ಮನಗಾಣಿಸಿದರು. ಅಂತಿಮವಾಗಿ ದಿಲ್ಲಿ ಮಟ್ಟಿದಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ನ್ಯಾಯ ಕೊಡಿಸಿದವರು ಖರ್ಗೆಯವರು. ಈ ಭಾಗದ ಜನತೆ ಖರ್ಗೆಯವರ ರಾಜಕೀಯ ಇಚ್ಛಾಶಕ್ತಿಯನ್ನು ಅನುಗಾಲವೂ ಸ್ಮರಿಸಿಕೊಳ್ಳುತ್ತಾರೆ. 26 ವರ್ಷದ ನನ್ನ ಪತ್ರಿಕಾ ಸೇವೆಯಲ್ಲಿ ಖರ್ಗೆಯವರಂತಹ `ಕಾಯಕನಿಷ್ಟ’ ರಾಜಕಾರಣಿಯನ್ನು ಕಂಡಿಲ್ಲ. ಅಭಿವೃದ್ಧಿ ಮೀಮಾಂಸೆಗೆ ಹೊಸ ಭಾಷ್ಯ ಬರೆದ ಖರ್ಗೆಯವರು ವಿಶೇಷವಾಗಿ ಯುವ ರಾಜಕಾರಣಿಗಳಿಗೆ `ಮಾದರಿ’ಯಾಗುವ ವ್ಯಕ್ತಿತ್ವ ರೂಪಿಸಿಕೊಂಡವರು. ಚಿತ್ತಾಪೂರ ತಾಲೂಕಿನ ವಿಶಿಷ್ಟ ರಾಜಕೀಯ ಪರಂಪರೆ ಹಾಲಿ ಶಾಸಕ ಪ್ರಿಯಾಂಕ ಖರ್ಗೆಯವರ ಮೂಲಕ ಸಮರ್ಥವಾಗಿ ಮುಂದುವರಿಯಲಿ. ಜನಪ್ರತಿನಿಧಿಗಳನ್ನು ಭ್ರಷ್ಟರೆಂದು ಬಿಂಬಿಸುವ ಹಾಗೂ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಹುನ್ನಾರ ನಡೆಯುತ್ತಿರುವ ಈ ದಿನಮಾನಗಳಲ್ಲಿ ಶಾಸನಸಭೆಗೆ ಹೋಗುವವರ ಹೊಣೆಗಾರಿಕೆ ದೊಡ್ಡದಿದೆ.
ಚಿತ್ತಾಪೂರ ತಾಲೂಕಿನಲ್ಲಿ ಆರ್ಥಿಕ ಸಂಪನ್ಮೂಲಕ್ಕೇನೂ ಬರವಿಲ್ಲ. ಇಲ್ಲಿಯ ಫರಸಿಕಲ್ಲಿಗೆ ಮಹಾರಾಷ್ಟ್ರ, ಆಂಧ್ರ ರಾಜ್ಯಗಳಲ್ಲಿ ಅಪಾರ ಬೇಡಿಕೆ ಇದೆ. ಚಿತ್ತಾಪೂರ ತಾಲೂಕಿನಲ್ಲಿ ದೊರೆಯುವ ಸುಣ್ಣದ ಕಲ್ಲು (ಲೈಮ್ಸ್ಟೋನ್) ಸಿಮೆಂಟ್ ಉತ್ಪಾದನೆಯಲ್ಲಿ ಪ್ರಮುಖ ಕಚ್ಛಾವಸ್ತು. ವಾಡಿಯ ಸಿಮೆಂಟ್ ಫ್ಯಾಕ್ಟರಿ ಹಲವು ದಶಕಗಳಿಂದ ಸಿಮೆಂಟ್ ಉತ್ಪಾದನೆಯಲ್ಲಿ ತೊಡಗಿದೆ. ಚಿತ್ತಾಪೂರ ತಾಲೂಕಿನಲ್ಲಿ ಫಲವತ್ತಾದ ಭೂಮಿಯಿದೆ. ಕಲಬುರ್ಗಿ ಜಿಲ್ಲೆಯನ್ನು ತೊಗರಿ ಕಣಜವೆಂದು ಕರೆಯಲಾಗುತ್ತದೆ. ತೊಗರಿ ಕಣಜದಲ್ಲಿ ಚಿತ್ತಾಪೂರ ತಾಲೂಕಿನ ಪಾಲು ದೊಡ್ಡದು. ಕರ್ನಾಟಕದ ಹನ್ನೆರಡು ಜಿಲ್ಲೆಗಳಲ್ಲಿ ಸರಾಸರಿ 12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗುತ್ತಿದೆ. ಕಲಬುರ್ಗಿ ಜಿಲ್ಲೆಯೊಂದರಲ್ಲೇ ಸರಾಸರಿ ನಾಲ್ಕು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯುತ್ತಾರೆ. ಇದರಲ್ಲಿ ಚಿತ್ತಾಪೂರ ತಾಲಕಿನ ಪಾಲು ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದಷ್ಟಿದೆ. ಹಾಗೆ ನೋಡಿದರೆ, ಇಡೀ ಕಲಬುರ್ಗಿ ಜಿಲ್ಲೆಯಲ್ಲಿ ತೊಗರಿ ಬೆಳೆಯಲು ಹೇಳಿ ಮಾಡಿಸಿದ ಜಮೀನು ಇರುವುದು ಚಿತ್ತಾಪೂರ ತಾಲೂಕಿನಲ್ಲಿ.
ವಿಶಿಷ್ಟ ತಳಿಯೆನಿಸಿರುವ `ಮಾಲದಂಡಿ’ ಜೋಳ ಹೆಚ್ಚು ಬೆಳೆಯುವುದು ಇದೇ ತಾಲೂಕಿನಲ್ಲಿ. ಇಲ್ಲಿ ಬೆಣ್ಣೆತೋರಾ, ಕಾಗೀಣಾ ಜೀವಜಲ ಹರಿಸುವ ಪ್ರಮುಖ ನದಿಗಳು. ಭೀಮಾನದಿ, ಕಮಲಾವತಿ ಕಡಿಮೆ ಭೂ ಭಾಗದಲ್ಲಿ ಹಾದು ಹೋಗುವ ನದಿಗಳು. ಬೆಣ್ಣೆತೋರಾ ನೀರಾವರಿ ಯೋಜನೆ ಅರ್ಥಪೂರ್ಣ ಬಳಕೆಗೆ ಸಿದ್ಧವಾದರೆ ಇಲ್ಲಿಯ ರೈತರ ಬದುಕು ಬಂಗಾರವಾಗುತ್ತದೆ. ನೀರಾವರಿ ಸೌಲಭ್ಯ ಹೆಚ್ಚಿಸಲು ಚೆಕ್ಡ್ಯಾಮ್ ನಿರ್ಮಾಣ, ಕೆರೆ ಕಟ್ಟೆಗಳ ದುರಸ್ತಿಗೆ ಮುಂದಾಗಬೇಕು. ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲವಾದ್ದರಿಂದ ಕೃಷಿಯನ್ನವಲಂಬಿಸಿದ ರೈತಾಪಿ ಸಮುದಾಯ ಹತಾಶೆಗೊಳಗಾಗುತ್ತಿದ್ದಾರೆ. ಚಿತ್ತಾಪೂರ ತಾಲೂಕಿನ ನೆಲದೊಳಗೆ ಲೈಮ್ಸ್ಟೋನ್ ಹೇರಳವಾಗಿ ಸಿಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆ ಕಾರಣಕ್ಕೆ ಐದಾರು ಸಿಮೆಂಟ್ ಕಂಪನಿಗಳು ಕೃಷಿಯೋಗ್ಯವಾದ ಜಮೀನು ಕಬಳಿಸಲು ಹೊಂಚು ಹಾಕುತ್ತಿವೆ. ಕೈಗಾರಿಕೆಗಳು ಬರಲಿ. ಸಿಮೆಂಟ್ ಫ್ಯಾಕ್ಟರಿಗಳೂ ಬರಲಿ. ಆದರೆ ಕೃಷಿಯ ಕತ್ತು ಹಿಚುಕುವ ಕಂಪನಿಗಳಿಗೆ ಯಾವ ಕಾರಣಕ್ಕೂ ಮಣೆ ಹಾಕಬಾರದು.
ರೈತರ ಹತಾಶ ಮನಃಸ್ಥಿತಿಯ ದುರ್ಲಾಭ ಪಡೆಯಲು ಲಾಭಕೋರ ಕಂಪನಿಗಳು ಯತ್ನಿಸುತ್ತಲೇ ಇರುತ್ತವೆ. ಕೃಷಿಗೆ ಪೂರಕವಾಗಿ ನಿಲ್ಲುವ ಕೈಗಾರಿಕೆಗಳಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಸಿಮೆಂಟ್ ಕಂಪನಿಗಳು ಬರುವುದೇಯಾದರೆ, ಕೃಷಿಗೆ ಯೋಗ್ಯವಲ್ಲದ ಜಮೀನಿನಲ್ಲಿ ಮಾತ್ರ ಬರಲಿ. ಹಣದಾಸೆಗೆ ಫಲವತ್ತಾದ ಜಮೀನುಗಳನ್ನು ಮಾರಾಟ ಮಾಡುವ ಪ್ರವೃತ್ತಿ ನಿಲ್ಲಬೇಕಿದೆ. ತಾಲೂಕಿನಲ್ಲಿ ನೀರಾವರಿ ಸಾಧ್ಯತೆಗಳನ್ನು ವಿಸ್ತರಿಸಿದರೆ, ವರ್ಷಕ್ಕೆ ಕನಿಷ್ಠ ಮೂರ್ನಾಲ್ಕು ಬೆಳೆಗಳನ್ನು ಬೆಳೆಯುತ್ತಾರೆ. ಮಳೆಯಾಧಾರಿತ ಕೃಷಿ ರೈತರ ಪಾಲಿಗೆ ಜೂಜಾಗಿಬಿಟ್ಟಿದೆ. ಜಾಗತೀಕರಣದ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಿ ಮುನ್ನಡೆಯಬೇಕಿದೆ. ತಾಲೂಕಿನ ಆರ್ಥಿಕ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ವ್ಯವಸ್ಥೆ ಮಾಡಿಕೊಂಡರೆ ಆರ್ಥಿಕಾಭಿವೃದ್ಧಿ ಸಾಧಿಸಬಹುದಾಗಿದೆ.
ಸಂಪತ್ತಿನ ಸಮಾನ ಹಂಚಿಕೆ ಇಲ್ಲದ ಕಡೆ, ದುಡಿಯುವ ಕೈಗಳಿಗೆ ಉದ್ಯೋಗ ದೊರೆಯದ ಸಂದರ್ಭದಲ್ಲಿ `ಗುಳೆ ಹೋಗುವುದು’ ಅನಿವಾರ್ಯವಾಗುತ್ತದೆ. ಬೇರೆ ಜಿಲ್ಲೆ, ತಾಲೂಕುಗಳಿಗೆ ಹೋಲಿಸಿದರೆ ಚಿತ್ತಾಪೂರ ತಾಲೂಕಿನಲ್ಲಿ ಗುಳೆಯ ಪ್ರಮಾಣ ಕಡಿಮೆಯೆಂದೇ ಹೇಳಬೇಕು. ನೀರಾವರಿ ಯೋಜನೆಗಳು ಬಳಕೆಗೆ ಲಭ್ಯವಾದರೆ, ಕೃಷಿ ಚಟುವಟಿಕೆಗಳು ನಿರಂತರ ನಡೆದರೆ ಹಾಗೂ ಉದ್ಯೋಗಖಾತ್ರಿಯಂತಹ ಸರಕಾರಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡರೆ `ಗುಳೆ ಹೋಗುವುದನ್ನು’ ಸಂಪೂರ್ಣ ತಡೆಯಬಹುದಾಗಿದೆ. ಒಂದು ತಾಲೂಕಿನ ಆರ್ಥಿಕಾಭಿವೃದ್ಧಿ ಮೊದಲ ಆದ್ಯತೆಯಲ್ಲಿ ಮಾಡುವಂತಾಗಬೇಕು. ಜೊತೆಗೆ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ಚಟುವಟಿಕೆಗಳು ಹೆಚ್ಚಬೇಕು.
ಚಿತ್ತಾಪೂರ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಿಯಾಂಕ ಖರ್ಗೆಯವರಿಗೆ ಸಾಹಿತ್ಯ-ಸಂಸ್ಕೃತಿ ಬಗ್ಗೆ ಅಪಾರವಾದ ಪ್ರೀತಿಯಿದೆ ಎನ್ನುವುದಕ್ಕೆ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಯೋಜಿಸಿರುವುದೇ ಸಾಕ್ಷಿ. ಪ್ರಜಾವಾಣಿಯ ಕಾಮನಬಿಲ್ಲು ಪುರವಣಿಯಲ್ಲಿ ಪ್ರಿಯಾಂಕ ಖರ್ಗೆಯವರ ಸಂದರ್ಶನವೊಂದು ಪ್ರಕಟವಾಗಿತ್ತು. ಆ ಸಂದರ್ಶನದಲ್ಲಿ ಅವರು “ನಾನು ಲೋಹಿಯಾ ಅವರ ಬರಹಗಳನ್ನು ಓದುತ್ತಿದ್ದೇನೆ” ಎಂದು ಹೇಳಿಕೊಂಡಿದ್ದರು. ನನಗೆ ಆಶ್ಚರ್ಯವಾಯಿತು. ತಕ್ಷಣ ಪ್ರಜಾವಾಣಿಯ ಗೆಳೆಯ ಸುರೇಶ್ ದೊಡ್ಡಪಾಳ್ಯ ಅವರಿಗೆ ಕರೆ ಮಾಡಿ “ಅದೆಲ್ಲಾ ನಿಜಾನಾ…?” ಎಂದು ಕೇಳಿದೆ. ಅವರೂ ಪ್ರಿಯಾಂಕ ಖರ್ಗೆಯವರ ಓದಿನ ಬಗ್ಗೆ ಅಪಾರ ಗೌರವ ವ್ಯಕ್ತಪಡಿಸಿದರು. ನಾನು ಇತ್ತೀಚಿನ 5-6 ವರ್ಷಗಳ ಸದನದ ಕಲಾಪವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದೇನೆ. ಗುಣಮಟ್ಟದ ಚರ್ಚೆಗಳೇ ಆಗುವುದಿಲ್ಲ. ಕಾರಣ ನಮ್ಮ ಜನಪ್ರತಿನಿಧಿಗಳಿಗಿರುವ ಓದಿನ ಕೊರತೆ. ಪಂಡಿತ್ ಜವಾಹರ್ ಲಾಲ್ ನೆಹರು, ಡಾ. ಬಿ.ಆರ್.ಅಂಬೇಡ್ಕರ್, ಡಾ. ರಾಮಮನೋಹರ್ ಲೋಹಿಯಾ ಸ್ವತಃ ಬರಹಗಾರರಾಗಿದ್ದರು. ಅವರನ್ನು ಮುತ್ಸದ್ಧಿಗಳ ಸಾಲಿನಲ್ಲಿಟ್ಟು ನೋಡುತ್ತಾರೆ.
ಪ್ರಿಯಾಂಕ ಖರ್ಗೆಯವರ ಓದುವ ಆಸಕ್ತಿಯ ಬಗ್ಗೆ ತಿಳಿದ ನನ್ನಲ್ಲಿ ಅವರ ಬಗೆಗಿನ ಗೌರವ ಹೆಚ್ಚಾಗಿದೆ. ಚಿತ್ತಾಪೂರದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದನ್ನೆಲ್ಲ ಗಮನಿಸಿದರೆ, ಚಿತ್ತಾಪೂರ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲೇ `ಮಾದರಿ’ ಕ್ಷೇತ್ರವಾಗಿ ಮಾರ್ಪಾಡಾಗುವುದರಲ್ಲಿ ಸಂಶಯವಿಲ್ಲ. ಅಂತಿಮವಾಗಿ ಜನತಂತ್ರದ ಸಾಫಲ್ಯ-ವೈಫಲ್ಯ ನಿಂತಿರುವುದು ಜನಪ್ರತಿನಿಧಿಗಳ ಧಾರಣಶಕ್ತಿಯ ಮೇಲೆ. ಜನನಾಯಕನಾದವ ವೈಚಾರಿಕವಾಗಿ ತಾನೂ ಸ್ಪಷ್ಟವಾಗುತ್ತಾ ಜನತೆಯನ್ನು ಸರಿದಾರಿಯಲ್ಲಿ ಮುನ್ನಡೆಸಬೇಕು. ಈ ಭಾಗಕ್ಕೆ ದೊರೆತ ವಿಶೇಷ ಸ್ಥಾನಮಾನದ ಸವಲತ್ತುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಹಿಂದುಳಿದ ಹಣೆಪಟ್ಟಿ ಕಿತ್ತೆಸೆಯಬಹುದು.
ಚಿತ್ತಾಪೂರ ತಾಲೂಕಿನ ಆಧುನಿಕ ಸಾಹಿತ್ಯ ಸಮೃದ್ಧವಾಗಿದೆ. ಡಾ. ಚನ್ನಣ್ಣ ವಾಲೀಕಾರರಂತಹ ಹಿರಿಯ ಸಾಹಿತಿ ಚಿತ್ತಾಪೂರ ತಾಲೂಕಿನ ಶಂಕರವಾಡಿ ಗ್ರಾಮದವರು. ಬಂಡಾಯ ಸಾಹಿತ್ಯ ಸಂಘಟನೆಯ ಮುಂಚೂಣಿಯಲ್ಲಿದ್ದ ಅವರು ಅನೇಕ ಮೌಲಿಕ ಗ್ರಂಥಗಳನ್ನು ರಚಿಸಿದ್ದಾರೆ. ದಲಿತ-ಕಮ್ಯುನಿಸ್ಟ್ ಚಟುವಟಿಕೆಗಳಲ್ಲಿ ನೇರ ಪಾಲ್ಗೊಂಡವರು. ರಾಜ್ಯಮಟ್ಟದಲ್ಲಿ ಹೆಸರು ಮಾಡಿರುವ ವಾಲೀಕಾರ ಅವರು ಅನೇಕ ಕಿರಿಯ ಲೇಖಕರನ್ನು ಬೆನ್ನು ತಟ್ಟಿ ಬೆಳೆಸಿದವರು. ಅವರು ಚಿತ್ತಾಪೂರ ತಾಲೂಕಿನವರು ಎನ್ನುವುದು ನಮ್ಮೆಲ್ಲರ ಹೆಮ್ಮೆ. ಅನೇಕ ಜನ ಹಿರಿ-ಕಿರಿಯರು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಸಾರಸ್ವತ ಲೋಕದ ಕಣಜವನ್ನು ಸಮೃದ್ಧಗೊಳಿಸುತ್ತಿದ್ದಾರೆ. . .
ನಾನು ಸಾಹಿತ್ಯ ಕ್ಷೇತ್ರದಲ್ಲಿ ಸಾಧಿಸಿದ್ದು ಕಡಿಮೆ. ಸಾಧಿಸಬೇಕಾದದ್ದು ಬಹಳಷ್ಟಿದೆ. ನಿಮ್ಮೆಲ್ಲರ ಪ್ರೀತಿ ನನ್ನ ಆತ್ಮಸ್ಥೈರ್ಯ ಹೆಚ್ಚಿಸಿದೆ. ಬರೆಯುವ ಹುಮ್ಮಸ್ಸು ಇಮ್ಮಡಿಸಿದೆ. ನಿಮ್ಮೆಲ್ಲರ ಪ್ರೀತಿಯ ಋಣ ತೀರಿಸಲಾದರೂ ನಾನು ಮತ್ತಷ್ಟು ಬರೆಯಲೇಬೇಕು. ವಿಜ್ಞಾನ ತಂತ್ರಜ್ಞಾನ ಒದಗಿಸಿದ ಸವಲತ್ತುಗಳು ಜಗತ್ತನ್ನು ತುದಿಬೆರಳಲ್ಲಿ ತಂದು ನಿಲ್ಲಿಸಿವೆ. ತಂತ್ರಜ್ಞಾನದ ಆವಿಷ್ಕಾರ ಸಂಭ್ರಮ ಪಡುವಂತೆ ಮಾಡಿದೆ. ಇನ್ನೊಂದೆಡೆ ಗ್ರಾಹಕ ಸಂಸ್ಕೃತಿ ಎಲ್ಲೆಡೆ ವ್ಯಾಪಿಸಿ ಭ್ರಾಂತಿಯಲ್ಲಿ ತೇಲಾಡುತ್ತಿದ್ದೇವೆ. ಮಾನವೀಯ ಸಂಬಂಧಗಳು ತೆಳುವಾಗುತ್ತಿವೆ. ಹಣ ಮತ್ತು ಗ್ರಾಹಕ ವಸ್ತುಗಳ ಆಕರ್ಷಣೆ ಬದುಕನ್ನು ದುಬಾರಿಗೊಳಿಸುತ್ತಿದೆ. ಸರಳತೆ-ಸಜ್ಜನಿಕೆ ಜಾಗದಲ್ಲಿ ಹುಸಿಡೌಲು ಯಜಮಾನಿಕೆ ನಡೆಸುತ್ತಿದೆ. ಹುಸಿ ಭ್ರಮೆಗಳನ್ನು ಕಿತ್ತೆಸೆಯುವ ಸಾಹಿತ್ಯ ರಚನೆಯಾಗಬೇಕಿದೆ.
ಅಲ್ಲಮನ ಇನ್ನೊಂದು ವಚನದೊಂದಿಗೆ ನನ್ನ ಮಾತುಗಳನ್ನು ಮುಗಿಸುತ್ತೇನೆ.
“ಅಜ್ಞಾನವೆಂಬ ತೊಟ್ಟಿಲೊಳಗೆ
ಜ್ಞಾನವೆಂಬ ಶಿಶುವ ಮಲಗಿಸಿ
ಸಕಲ ವೇದಶಾಸ್ತ್ರವೆಂಬ ನೇಣಕಟ್ಟಿ
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ
ತೊಟ್ಟಿಲು ಮುರಿದು ನೇಣು ಹರಿದು ಜೋಗುಳನಿಂದಲ್ಲದೆ
ಗುಹೇಶ್ವರನೆಂಬ ಲಿಂಗವ ಕಾಣಬಾರದು”
ಎಲ್ಲರಿಗೂ ಮತ್ತೊಮ್ಮೆ ನನ್ನ ನಮನಗಳು.
ಜೈ ಕರ್ನಾಟಕ, ಸಿರಿಗನ್ನಡಂ ಗೆಲ್ಗೆ…







Hello sara,
Really wonder full. I have dumbfounded to read about your early life. Congrats to be honoured by your mother taluk. I want you to read your new stories with the theme of your early life.
Kaligananath Gudadur