ಚಹಾ ಪುರಾಣ

ಪಾ ಶ್ರೀನಿವಾಸ

ನಮ್ಮ ಜೀವನದ ಅದೆಷ್ಟೊ ಕ್ರಿಯೆಗಳಿಗೆ – ಚಟುವಟಿಕೆಗಳಿಗೆ ನಿದಿ೯ಷ್ಟ ಕಾರಣಗಳೇ ಬೇಕಿಲ್ಲ. 

ಒಂದು ಉದಾಹರಣೆ, ನೀವು ದಿನದಲ್ಲಿ ಎಷ್ಟು ಬಾರಿ ಚಹಾ ಕುಡಿಯುತ್ತೀರಾ? ಮನೆಯಲ್ಲಿ, ಕಛೇರಿಯಲ್ಲಿ, ಗೆಳೆಯರ ಸಂಗಡ ಹೀಗೆ ನಿದಿ೯ಷ್ಟ ಕಾರಣಗಳಿಟ್ಟುಕೊಂಡು ಚಹಾ ಕುಡಿದಿದ್ದು ಎಷ್ಟು ಬಾರಿ? ಕಾರಣಗಳಿಲ್ಲದೆ ಕುಡಿದಿದ್ದು ಎಷ್ಟು ಬಾರಿ? 

ಈ ಚಹಾ ಅನ್ನೋದು ಬಲು ಅಮೋಘವಾದದ್ದು. ಇದನ್ನು ನಂಬಿ ನಮ್ಮ ಭಾರತದಲ್ಲಿ ಅದೆಷ್ಟೋ ಜನ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ಸುಮ್ಮನೆ ನಿಮ್ಮ ಬೀದಿಯಲ್ಲಿ, ನೀವು ನಡೆದಾಡುವ ರಸ್ತೆಗಳಲ್ಲಿ ಎಷ್ಟು ಚಹಾ ಅಂಗಡಿಗಳಿವೆ ಅಂತಾ ಲೆಕ್ಕ ಹಾಕಿ ನೋಡಿ. ಆ ಚಹಾ ಅಂಗಡಿಗಳಿಂದ ಅದೆಷ್ಟು ಕುಟುಂಬಗಳ ಬಂಡಿ ಸಾಗುತ್ತಿರಬಹುದು.  

ಚಹಾ ಕುಡಿಯದ ಜನಸಂಖ್ಯೆ ಎಷ್ಟಿರಬಹುದು? ಛೇ, ಈ ಪ್ರಶ್ನೆಯೇ ಸರಿಯಲ್ಲ. ಏಕೆಂದರೆ ನಮ್ಮ ಬದುಕಿನಲ್ಲಿ ದಿನನಿತ್ಯದ ಕೆಲಸಕಾಯ೯ಗಳ ಪಟ್ಟಿಯಲ್ಲಿ ಚಹಾ ಸೇವನೆ ಸಾಮಾನ್ಯ ಅಲ್ಲವೇ ? 

ಬ್ರಿಟೀಷರು ನಮ್ಮ ದೇಶದಲ್ಲಿ ಬಿಟ್ಟುಹೋದ ಪ್ರಮುಖ ವಸ್ತು ವಿಚಾರಗಳಲ್ಲಿ ಚಹಾ ಸೇವನೆಯೂ ಒಂದು. ಈಸ್ಟ್ ಇಂಡಿಯಾ ಕಂಪನಿಯ ಆಡಳಿತವಿದ್ದಾಗ ಚಹಾ ಅಧಿಕೃತವಾಗಿ ನಮ್ಮ ಭಾರತವನ್ನು ಪ್ರವೇಶಿಸಿತು. ‘ಕೆಮಿಲಿಯಾ ಸಿನೆನ್ಸಿಸ್’ ಎಂಬ ವೈಜ್ಞಾನಿಕ ಹೆಸರು ಹೊಂದಿರುವ ಚಹಾದ ಮೂಲ ದೇಶ ಚೀನಾ. ಚೀನಾ ದೇಶದ ರಾಜನೊಬ್ಬ ಆಕಸ್ಮಾತ್ ಆಗಿ ಚಹಾ ಸೇವನೆ ಕಂಡು ಹಿಡಿದನಂತೆ. ಅಲ್ಲದೆ ಇಂದು ಚಹಾ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಚೀನಾ ಮೊದಲ ಸ್ಥಾನದಲ್ಲಿದೆ. ನಾವು, ಭಾರತೀಯರು ಎರಡನೇ ಸ್ಥಾನದಲ್ಲಿದ್ದೇವೆ . 

ಇಂದು ವಿಶ್ವದೆಲ್ಲೆಡೆ ಚಹಾ ಸೇವನೆ ಜನಜೀವನದ ಭಾಗವಾಗಿದೆ. ಹಾಗಾಗಿಯೇ ಪ್ರತಿ ವಷ೯ ಡಿಸೆಂಬರ್ 15 ರಂದು ವಿಶ್ವದಾದ್ಯಂತ ಚಹಾ ದಿನಾಚರಣೆ ಆಚರಿಸಲಾಗುತ್ತದೆ . 

ನಮ್ಮ ಭಾರತವು ವೈವಿಧ್ಯತೆಗಳಿಂದ ಕೂಡಿದ ದೇಶ. ಅಂತೆಯೇ ನಮ್ಮ ದೇಶದಲ್ಲಿ  ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವೈವಿಧ್ಯಮಯ ಚಹಾ ದೊರೆಯುತ್ತದೆ. ಹತ್ತು ಹದಿನೈದು ವಷ೯ಗಳಿಂದ ಅನ್ನದ ಬದಲು ಚಹಾ ಕುಡಿದುಕೊಂಡೇ ಜೀವನ ನಡೆಸುತ್ತಿರುವ ಪರಮ ವಿಚಿತ್ರ ವ್ಯಕ್ತಿಗಳೂ ಇಲ್ಲಿದ್ದಾರೆ. 

ಬೀದಿ ತುದಿಯಲ್ಲಿನ ಪೆಟ್ಟಿಗೆಯಂಗಡಿಯಿಂದ ಹಿಡಿದು ಮಲ್ಟಿನ್ಯಾಷನಲ್ ಕಂಪನಿಗಳು ನಡೆಸುವ ಸೂಪರ್ ಮಾಕೆ೯ಟ್ ನವರೆಗೆ ತಿರುಗಿ ಬನ್ನಿ ಒಮ್ಮೆ , ನಿಮಗೆ ಅದೆಷ್ಟು ತರೇಹವಾರಿ ಚಹಾ ಪುಡಿ ಸಿಗುತ್ತದೆ ಗೊತ್ತಾ?? ಬೆಲೆಯಲ್ಲಿಯೂ ಅಜ ಗಜಗಳ ನಡುವಿನ ವ್ಯತ್ಯಾಸ ದೊರೆಯಬಲ್ಲುದು . 

ಇನ್ನು ಗಲ್ಲಿ ಗಲ್ಲಿಗಳಲ್ಲಿರುವ ಚಹಾ ಅಂಗಡಿಗಳಿಗೆ ಒವ್ವೆ ಸುತ್ತಿ ಬನ್ನಿ. ಅಬ್ಬಾ! ಅದೆಂತಹ ನಮೂ-ನಮೂನೆಯ ಚಹಾಗಳು ದೊರೆಯುತ್ತವೆ. ಕಡಕ್ ಚಹಾ, ಕಟ್ಟಾಂ ಚಹಾ, ಬ್ಲಾಕ್ ಚಹಾ, ಗ್ರೀನ್ ಟೀ, ಲಿಂಬು ಟೀ, ಮಸಾಲಾ ಟೀ, K ಟೀ ಹೀಗೇ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. 

ಈ ಕರೋನಾ ಕಾಲದಲ್ಲಿ ಲೆಮೆನ್ ಟೀ, ಮಸಾಲಾ ಟೀ ಬಹು ಉತ್ತಮ ಎಂಬ ಮಾತುಗಳೂ ಚಾಲ್ತಿಯಲ್ಲಿವೆ. 

‘ಕೈಗುಣ’ ಅನ್ನೋದು ಈ ಚಹಾ ಮಾಡೋರಲ್ಲಿ ನೋಡಬೇಕಾದ ಮತ್ತೊಂದು ಅಂಶ. ಕೆಲವರು ಮಾಡುವ ಚಹಾ ಮತ್ತಾರಿಂದಲೂ ಮಾಡಲು ಸಾಧ್ಯವಿಲ್ಲ ಬಿಡಿ. ಅದು ಅವರವರ ಕೈಗುಣ. ಇಂಗು ತೆಂಗು ಇದ್ದರೆ ಮಂಗಮ್ಮನೂ ರುಚಿಯಾದ ಅಡುಗೆ ಮಾಡಬಲ್ಲಳು ಎಂಬ ಗಾದೆ ಮಾತಿದೆ . ಆದ್ರೆ ಚಹಾ ತಯಾರಿ ವಿಚಾರದಲ್ಲಿ ಈ ಮಾತು ಸುಳ್ಳು. ಗಟ್ಟಿ ಹಾಲು, ಒಳ್ಳೆಯ ಚಹಾಪುಡಿ ಇದ್ದರೂ ಅದಕ್ಕೆ ಬೇಕಾದ ಹದ ಗೊತ್ತಿಲ್ಲದವರಿಂದ ಚಹಾ ಕೂಡ ಕಷಾಯವೋ, ಕಲ್ಲ್ ಗಚ್ಚೋ ಆಗಬಹುದು. ಇಂತಹದ್ದೇ ರುಚಿಯ ಚಹಾ ಬೇಕೆಂದು ಕಿಲೋಮೀಟರ್ ಲೆಕ್ಕದಲ್ಲಿ ಅಲೆದಾಡುವ ಮಂದಿಯನ್ನೂ ನಾನು ನೋಡಿದ್ದೇನೆ.  

ಪ್ರಮುಖ ನಿಧಾ೯ರಗಳು ರೂಪುಗೊಳ್ಳುವಲ್ಲಿ  ಚಹಾದ ಮಹಿಮೆ ಬಲು ಅಪಾರ. ಸುಮ್ಮನೆ ಈ ಕೆಳಗಿನ ಪಟ್ಟಿಯನ್ನೊಮ್ಮೆ ನೋಡೋಣ. 

* ಗಂಡು ಹೆಣ್ಣು ನೋಡಿ ಒಪ್ಪಿಗೆ ಸೂಚಿಸುವ ಕಾಯ೯ 

*ಕಛೇರಿಯ ಸಭೆ/ಮೀಟಿಂಗುಗಳು 

*ಗೆಳೆಯರ ಸಮಾಗಮ 

* ಸಕಾ೯ರದ ಅಧಿಕೃತ ಸಭೆಗಳು

*ಸೈಟ್ ಮನೆ  ವ್ಯಾಪಾರದ ವಿಚಾರ ವಿನಿಮಯ

*ಚೀಟಿ ವ್ಯವಹಾರಗಳು

*ಫೈನಾನ್ಸ್ ಬಡ್ಡಿ ವ್ಯವಹಾರಗಳು 

* ಕಛೇರಿಗಳ ವಿರಾಮದ ಅವಧಿ 

* ಸಿನಿಮಾ ಕಥೆಗಳ ಚಚೆ೯ಗಳಲ್ಲಿ 

ಹನುಮಂತನ ಬಾಲದಂತೆ ಈ ಪಟ್ಟಿ ಬೆಳೆಸಲು ನೀವೂ ಒಂದಷ್ಟು ಅಂಶಗಳನ್ನು ಸೇರಿಸಬಲ್ಲಿರಿ. 

ದೇಶದ ಎಂತೆಂತಹ ದೊಡ್ಡದೊಡ್ಡ ವಿಚಾರಗಳ ಚಚೆ೯ ನಡೆಯುವುದು ಈ ಚಹಾ ಮುಂದೆಯೇ. ಗಲ್ಲಿಯಿಂದ ದಿಲ್ಲಿಯವರೆಗೂ ನಡುವೆ ನಡೆವ ಸರಿಸುಮಾರು ಎಲ್ಲ ವಿದ್ಯಮಾನಗಳಲ್ಲೂ ಚಹಾ ಮಹಾರಾಜ ಉಪಸ್ಥಿತಿ ಬಲು ಸಹಜಸಮಾಚಾರ. 

ಟಿ.ವಿ ಚಾನೆಲ್ ಗಳಲ್ಲಿ, ದಿನಪತ್ರಿಕೆಗಳಲ್ಲಿ ಚಹಾ ಮಹಾರಾಜರಿಲ್ಲ ಎಂದರೆ ಆ ಟಿ.ವಿ. ಚಾನೆಲ್ಲುಗಳಿಗೆ, ಪತ್ರಿಕೆಗಳಿಗೆ ಸರಿಯಾದ ಅಹ೯ತೆಗಳಿಲ್ಲವೆಂದೇ ಅಥ೯. 

ಇನ್ನು ಅಕ್ಷರಲೋಕದ ಮಂದಿಯವರೊಂದಿಗೆ ಚಹಾದ ಸಂಬಂಧದ ಕುರಿತು ಬರೆಯಲಿಲ್ಲವೆಂದರೆ ಈ ಲೇಖನ ಅಪೂಣ೯ವಾದಂತೆಯೇ. ಸಾಹಿತಿಗಳಿಗೆ ಹೊಸ ಹೊಸ ಕಲ್ಪನೆಗಳು ಮೂಡಲು ಈ ಚಹಾ ಸ್ಫೂತಿ೯ದಾಯಕ. ಚಹಾ ಸೇವಿಸದ ಬರಹಗಾರ ಸಿಗುವುದು ವಿರಳಾತೀವಿರಳ. ಸಾಹಿತಿಗಳ ಪ್ರಮುಖ ಗುಣಲಕ್ಷಣಗಳಲ್ಲಿ ಚಹಾ ಸೇವನೆಯೂ ಒಂದು. ಕಥಾ ಕಮ್ಮಟಗಳಲ್ಲಿ, ಕಾವ್ಯ ಕಮ್ಮಟಗಳಲ್ಲಿ ಚಹಾ ವಿರಾಮದಲ್ಲಿ  ಚಹಾ ಕುರಿತಾಗಿ ಅದೆಷ್ಟು ಗರಂ ಗರಂ ಚಚೆ೯ಗಳು ನಡೆದಿರಬಹುದೋ, ಅದೆಲ್ಲವನ್ನು ಒಟ್ಟು ಮಾಡಿದರೆ ಒಂದು ಗ್ರಂಥವನ್ನೆ ಪ್ರಕಟಿಸಬಹುದು. 

ಕವಿಗೋಷ್ಟಿಗಳ ಆರಂಭದಲ್ಲೊಂದು ಚಹಾ ಸೇವನೆ, ಅಂತ್ಯದಲ್ಲೊಂದು ಚಹಾ ಸೇವನೆ ಕಾಯ೯ಕ್ರಮಕ್ಕೆ ಕಳೆಗಟ್ಟಿಸುತ್ತದೆ. ಕೆಲವು ಕವಿಗಳ ಕವನ ಆಲಿಸುವುದಕ್ಕಿಂತಲೂ, ಚಹಾ ಸೇವನೆಯೇ ಸ್ವಗ೯ ಸಮಾನ ಅನುಭವ ಕೊಡುವುದರಲ್ಲಿ ಎರಡು ಮಾತಿಲ್ಲ. (ವಿ.ಸೂ. ನಾನೂ ಕೂಡ ಒಂದಷ್ಟು ಕವಿಗೋಷ್ಟಿಯಲ್ಲಿ ಭಾಗವಹಿಸಿ, ಕವಿತಾ ವಾಚನ ಮಾಡಿರುವ ಕವಿಯೇ) ಬಿಸಿ ಬಿಸಿಯಾದ ಘಮಘಮಿಸುವ ಮಸಾಲ ಚಹಾ ಮಾಡಿಕೊಂಡು ನನ್ನಾಕೆ ಪಕ್ಕಕ್ಕೆ ಬಂದು ನಿಂತಿದ್ದಾಳೆ. ಹಾಗಾಗಿ ಚಹಾ ಬರಹಕ್ಕೊಂದು ವಿರಾಮ. ಹುಂ ನೀವೂ ಹೊರಡಿ, ಶರೀರದ ಹೆಡ್ಡಾಫೀಸ್ ಗೆ ಚುರುಕು ಮುಟ್ಟಿಸುವ ಒಂದು ಚಹಾ ಕುಡಿಯಿರಿ.

‍ಲೇಖಕರು Avadhi

July 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: