ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಲಪತಿ ವಿ ಕವಿತೆ- ಅಮ್ಮನ ಪಾದಗಳು…

ಚಲಪತಿ ವಿ

ಅಮ್ಮನ ಪಾದಗಳಡಿ ತಲೆಯಿಟ್ಟು
ನಾಡಿ ಬಡಿತದ ಆಲಾಪ ಆಸ್ವಾದಿಸುವ
ಮಜಕ್ಕಿಂತ ಬೇರೆನಿಲ್ಲ ಈ ಜಗದಲಿ
ಅಲ್ಲಿ ಸಿಗುವ ಪ್ರಶಾಂತತೆ
ಯಾವ ಧರ್ಮಕ್ಕೂ ಸಮನಾದುದಲ್ಲ

ಅಮ್ಮನ ಪಾದ ತಾಕಿದ ಧೂಳಿನಿಂದ
ಫಲವತ್ತಾದ ನೆಲದ ಕಂಬನಿ
ಸೆರಗಿಗೆ ಸೋತ ಬೆವರ ಹನಿಗಳಿಂದ
ಕಪ್ಪಾದ ಮುಗಿಲು, ಹಸಿವಿಗೆ ಉಸಿರಾದಾಗ
ಭಗವದ್ಗೀತೆಯ ಸಾರವೂ ಶೂನ್ಯ

ಅಮ್ಮನ ಪಾದಗಳನ್ನು ಬಿಗಿದಪ್ಪಿ
ಹಣೆಯಿಂದ ಸ್ಪರ್ಶಿಸಿ ಶರಣಾದರೆ
ಬದುಕಿನ ನಕಾಶೆ ಹಗುರಾಗಿ
ಪ್ರಪಂಚದ ಪ್ರಶ್ನೆಗಳೆಲ್ಲವೂ ಕಿರಿದಾಗುತ್ತವೆ, ಅಷ್ಟಕ್ಕೂ
ಅಮ್ಮ ಎಸೆದ ಸವಾಲುಗಳಿಗೆ ಸಾಟಿಯಿಲ್ಲ ಯಾವ ದೇವರು

ಅಮ್ಮನ ಪಾದಗಳು ಪದವಿರದ ಹಾಡುಗಳು
ಹೆಜ್ಜೆಯಿಟ್ಟ ಕಡೆಯೆಲ್ಲಾ ಕೌತುಕ
ಬ್ರಹ್ಮಾಂಡವೇ ಬೆರಗಾಗುವಷ್ಟು ರಮಣೀಯ
ಅಮ್ಮ ಮೊದಲ ಅಳುವಿಗೆ ನಗುವಾಗಿ ಅರಳುತ್ತಾಳೆ
ಉತ್ತರಗಳು ಹುಡುಕುವುದು ವ್ಯರ್ಥ, ಸೃಷ್ಟಿ ಸ್ಪಷ್ಟ

ಅಮ್ಮ ಮಗುವಾಗಿದ್ದಾಳೆ, ಹೌದು
ಪಾದವಿನ್ನು ಹಸಿ ಹಸಿಯಾಗಿದೆ
ಕೆನ್ನೆಗೊತ್ತಿ ಕ್ಷಣ ಮರೆತರೆ
ಧ್ಯಾನವೆಂಬುದು ತೃಣ ಮಾತ್ರ

‍ಲೇಖಕರು avadhi

27 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading