
ದೇವು ಮಾಕೊಂಡ
ಜಗದ ಬಲೆ
ಬಲೆಯೊಳಗಿನ ಮುಸುಕು
ಸಿಕ್ಕಿಸಿಕೊಂಡ ಬದುಕ ಕೊಂಡಿ
ಕಳಚಲು ಯತ್ನಿಸುತ್ತಿದೆ ವೈರಾಗಿ
ರಾತ್ರಿ ಹೆದರುತ್ತಿದೆ ಹೊರಬರಲು
ಹಗಲ ಬಯಲ ನರ್ತನಕೆ
ಅನುಗಮನ ನಿಗಮನದರಿವು
ಏಕಮುಖಗೊಂಡಿದೆ ಗೊಂದಲ ಜಗದಿ
ದಿನದಿನ ನಂಬಿಕೆಗಳೇ ಬೋಣಿಗೆ
ಮಾಡುವಾಗ ಬೋದಿಗೆ ಶಾಸನ
ಮೌನ ಮಾತಾಗಿದೆ
ಮಹಾಸತಿಗಲ್ಲು ಮನಸತೇವ ಮಾಡಿ ನಕ್ಕು
ಮತ್ತೆ ಶರಣಾಗುತ್ತಿವೆಅಂಧ ಗೋಪುರಗೆದರಿ
ನಿರವ ರಾತ್ರಿ ದಮನಿತ ದೀಪಗಳುರಿಸುವಾಗ
ವಿಲೋಮ ಗಾಳಿ ಜನಜನಿತ
ಅವಮಾನಿತ!

ತನ್ನೊಳಗಿನ ತನ್ನದರಿವು ಹುಡುಕುವ
ಆಗುಂತಕನೊಬ್ಬ
ನಿನ್ನೆ ಸತ್ತ ಹೆಣದ ಮುಂದೆ ನಿಂತ ಬೈರಾಗಿ
ಕಣ್ಣೀರು ಹಾಕಲು ಹೇಸುತ್ತಿದ್ದ
ನಾಳೆಯ ನಗಾರಿಗಳ ದನಿ ನಂಬಿ
ಜಡಜಗದ ಬಲೆಗೆ ಬಿದ್ದ ಜೀನಗಂಬ
ಮೂಕಗೊಂಡಿದೆ ಕಾವ್ಯಶಾಸನ ಲ್ಯಾವಿಕಟ್ಟಿ
ಕೆರೆ ಕಟ್ಟಿಸಿ ಬಾವಿ ತೋಡಿಸಿ
ಹಂಸರೆಕ್ಕೆ ಮುರಿದು ಒಳಗೆ ಒಗೆದು
ಮೇಲೊಂದು ಶಾಸನ ಕೆತ್ತಿ ಫಲಕವಿಟ್ಟು
ಅಕ್ಷರಗಳು ನೇತಾಡುತ್ತಿವೆ ತೇವಗೋಡೆಯಲಿ
‘ಸತ್ಯಂ ಶಿವಂ ಸುಂದರಂ’
ಅಹಿಂಸಾ ಪರಮೊ ಧರ್ಮಂ’
ಶಾಂತಿ ಅಗೋಚರ ಚರಿತ್ರೆ ಚಿರನಿದ್ರೆ’






0 Comments