ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಚರಿತ್ರೆಯಾಗದೆಯೂ ವರ್ತಮಾನದಲ್ಲಿರುತ್ತೇವೆ!' – ರೂಪ ಹಾಸನ್ ಕವಿತೆ

ನಾವು ಅವರಂತಲ್ಲ

ರೂಪ ಹಾಸನ

ಕ್ಷಮಿಸಿಬಿಡು ಪ್ರಭುವೆ
ನಾವು ಅವರಂತಲ್ಲ
ಅವರಂತಿಲ್ಲದ್ದಕ್ಕೆ ಖೇದವೂ ಇಲ್ಲ.
 
ನಾವು ಚದುರಂಗವಾಡುವುದಿಲ್ಲ
ನಮಗಾಟ ಬರುವುದಿಲ್ಲ
ಕಲಿಯುವುದೂ ಇಲ್ಲ
ಅದು ನಮಗಿಷ್ಟವೂ ಇಲ್ಲ.
 
ರಾಜ ರಾಣಿ ಕುದುರೆ ಒಂಟೆ ಆನೆ ಪದಾತಿ
ಹಿಂಡುಕಟ್ಟಿ ಸದಾ ಯುದ್ಧ ಯುದ್ಧ ಯುದ್ಧ.
ಅವರನಿವರು ಕೊಂದು
ಇವರನವರು ತರಿದು
ಗೆದ್ದವರ ತಿಮಿರಿನುನ್ಮಾದ
ಅದು ನಮಗೆ ನಿಷೇಧ.
 
ತಂತ್ರಕ್ಕೆ ಪ್ರತಿತಂತ್ರ
ನೂರು ದುರಾಲೋಚನೆಗಳ ಷಡ್ಯಂತ್ರ
ಕುಟಿಲೋಪಾಯಗಳ ಮಂತ್ರ
ಬೇಡವೇ ಬೇಡ ದಮ್ಮಯ್ಯ
ಚದುರಂಗ ನಮಗಿಷ್ಟವಿಲ್ಲ.
 
ಟ್ರೋಫಿ ಕಪ್ಪು ಪ್ರಶಸ್ತಿ ಫಲಕ
ಕಿರೀಟ ಸಿಂಹಾಸನ ಸನ್ಮಾನ
ಎಲ್ಲ ಅವರವೇ
ಅವರವಾಗೇ ಇರಲಿ ಪ್ರಭುವೇ
ನಮಗೆ ಬೇಕಿಲ್ಲ
ನಮಗೆ ನಮ್ಮಷ್ಟಕ್ಕೆ
ನಮ್ಮೆದೆಯ ನೋವು ಹಾಡಲು ಬಿಡು
ಚದುರಂಗವಾಡದ್ದಕ್ಕೆ ಕ್ಷಮಿಸಿಬಿಡು
ಹೌದು ನಾವು ಅವರಂತಿಲ್ಲ.
 
ಆಟವಾಡದೇ ಇತಿಹಾಸಕ್ಕೆ ದಾಖಲಾಗುವುದಿಲ್ಲ
ಹೋಗಲಿಬಿಡು ಪ್ರಭುವೇ ಕತ್ತೆಬಾಲ
ಅವರ ತಕ್ಕಡಿಯಲ್ಲಿ ನಾವು ತೂಗುವುದಿಲ್ಲ
ನಮ್ಮ ಹಾಡಿಗೆ ತಕ್ಕಡಿಯೇ ಇಲ್ಲ.
ಅಳತೆಗಳ ಗೊಡವೆ ನಮಗಿಲ್ಲ.
 
ಕ್ಷಮಿಸಿಬಿಡು ಪ್ರಭುವೇ
ನಾವು ಅವರಂತಲ್ಲವೇ ಅಲ್ಲ.
 
ನಾವು ಹೀಗೆಯೇ ನೋವು ಹಾಡುತ್ತೇವೆ
ಆಟವಾಡದೆಯೂ ಜೀವಂತವಿರುತ್ತೇವೆ
ಚರಿತ್ರೆಯಾಗದೆಯೂ ವರ್ತಮಾನದಲ್ಲಿರುತ್ತೇವೆ!
 
 

‍ಲೇಖಕರು avadhi

11 March, 2013

15 Comments

  1. ಬೇಲೂರು ರಘುನಂದನ್

    “ಚರಿತ್ರೆಯಾಗದೆಯೂ ವರ್ತಮಾನದಲ್ಲಿರುತ್ತೇವೆ! ”
    ಇಡೀ ಕವಿತೆಯ ಶಕ್ತಿ ಮತ್ತು ಆಶಯಗಳು ಈ ಸಾಲಿನಲ್ಲಿ ಎಲ್ಲ ದಿಕ್ಕಿನಿಂದ ಆವರಣ ಹಿಗ್ಗುವಂತಿದೆ …………..ವರ್ತಮಾನ ಮತ್ತು ಚರಿತ್ರೆಯ ಗ್ರಹಿಕೆಗೆ ಹೊಸ ತಾತ್ವಿಕತೆ ಕೊಟ್ಟಿದ್ದೀರಿ……ಅಭಿನಂದನೆಗಳು

  2. pravara

    ಅದೆಷ್ಟು ಚೆಂದದ ಕವಿತೆ, ತುಂಬಾ ಇಷ್ಟವಾಯ್ತು……… ನಮ್ಮನ್ನು ಮತ್ತಷ್ಟು ಓದಿಸಿ

  3. M.S.Krishna Murthy

    ಏಸು ಕ್ರಿಸ್ತ ಶಿಲುಬೆಗೆರುವಾಗ “ಇವರು ಏನು ಮಾಡುತ್ತಿದ್ದಾರೆಂದು ಅರಿಯರು .ಕ್ಷಮಿಸು ತಂದೆ” ಎಂದನಂತೆ ಅದು ನೆನಪಾಯಿತು.ನೋವು ಕೊಟ್ಟವರನ್ನು ದ್ವೇಷಿಸದೆ ಕ್ಷಮಿಸಬಹುದು ಆದರೆ ಅವರನ್ನು ನೆನಪಿಟ್ಟುಕೊಳ್ಳಬೇಕು.ಸಾದ್ಯವಾದರೆ ಹತ್ತಿರದಿಂದ ಗಮನಿಸುತ್ತಿರಬೇಕು..ತುಂಬಾ ಚೆನ್ನಾಗಿದೆ..ಕ್ಷಮಿಸುವುದು ಹಾಗಿರಲಿ ನೋವು ಕಡಿಮೆಯಾಗಲಿ…

  4. -ರವಿ ಮೂರ್ನಾಡು

    ವರ್ತಮಾನಕ್ಕೊಂದು ಚರಿತ್ರೆಯಲ್ಲದ ಸಂದೇಶ ಸಾರಿದ್ದೀರಿ. ಅವರು ಅವರಾಗಿಯೇ ಇರಲಿ ಬಿಡಿ. ನಾವು ನಾವಾಗಿಯೇ ಇರುವ. ಕಲ್ಲು ಕುಟ್ಟಿ ಪುಡಿಯಾದರೂ ಹಲ್ಲು ಕಿಸಿಯದ ಹಾಗೆ, ಪುಡಿ ಪುಡಿ ಕಲ್ಲಿನೊಳಗೂ ಅವಿತ ಕುಳಿತ ಅಸ್ತವ್ಯಸ್ತ ಮನಸ್ಸಿನ ಮೌನದ ಹಾಗೆ. ನಿಮ್ಮ ಕಾವ್ಯ ಈ ನಿಟ್ಟಿನಲ್ಲಿ ಬಲವಾಗಿ ಪ್ರತಿಪಾದನೆ ಹಾದಿಯಲ್ಲಿದೆ. ಅಭಿನಂದನೆಗಳು.

  5. sathish babu

    ಆಟವಾಡದೇ ಇತಿಹಾಸಕ್ಕೆ ದಾಖಲಾಗುವುದಿಲ್ಲ
    ಹೋಗಲಿಬಿಡು ಪ್ರಭುವೇ ಕತ್ತೆಬಾಲ
    ಅವರ ತಕ್ಕಡಿಯಲ್ಲಿ ನಾವು ತೂಗುವುದಿಲ್ಲ
    ನಮ್ಮ ಹಾಡಿಗೆ ತಕ್ಕಡಿಯೇ ಇಲ್ಲ.
    ಅಳತೆಗಳ ಗೊಡವೆ ನಮಗಿಲ್ಲ… wha….super kanakka!!!
    -sathish babu

  6. Raghunandan K

    ಸ್ವಲ್ಪ ಹೆಚ್ಚೇ ಎನಿಸುವಷ್ಟು ಇಷ್ಟವಾಯಿತು…

  7. Ahalya Ballal

    “ತಂತ್ರಕ್ಕೆ ಪ್ರತಿತಂತ್ರ
    ನೂರು ದುರಾಲೋಚನೆಗಳ ಷಡ್ಯಂತ್ರ
    ಕುಟಿಲೋಪಾಯಗಳ ಮಂತ್ರ
    ಬೇಡವೇ ಬೇಡ ದಮ್ಮಯ್ಯ
    ಚದುರಂಗ ನಮಗಿಷ್ಟವಿಲ್ಲ..”
    ಆಹಾ….! ಪರಿಪರಿಯ ತಕ್ಕಡಿಗಳನ್ನು ಅನುಭವಿಸಿ ಅನುಭವಿಸಿ ರೋಸಿಹೋದವರಿಗೆ ಹೊಸ ದೃಷ್ಟಿಕೋನ ಸಿಕ್ಕಂತಾಯ್ತು.

  8. Vinay Bharadwaj

    ಕವಿತೆ ತುಂಬಾ ಚೆನ್ನಾಗಿದೆ…
    ತುಂಬಾ ಇಷ್ಟವಾಯ್ತು 🙂

  9. ರೂಪ ಹಾಸನ

    ತುಂಬಾ ತುಂಬಾ ಧನ್ಯವಾದಗಳು.
    ರೂಪ

    • GURURAJ KATHRIGUPPE

      ROOPAJI, I have read a very good poem after a long time.It is very simple,as you.anybody with good heart can understand this poem.you have written what we are feeling in our heart,this poem gives me the feel as I am reading my own poem,that is the sign of good poetry. I know you have much more poems in you,which looks as we are singing : please dont stop,because YOU ARE WRITING THE FEELINGS OF MILLIONS IN YOUR PEN.

      • Rupa

        Gururaj avare,
        neevu nanna aathmavishvaasa hecchisiddiri. thanx.
        Rupa

  10. ಚಂದಿನ

    ಮತ್ತೆ ಮತ್ತೆ ಓದಿಸಿಕೊಳ್ಳುತ್ತಾ, ಆಪ್ತವಾಗುತ್ತಾ, ಆವರಿಸಿಕೊಳ್ಳುವ ಶಕ್ತಿ ನಿಮ್ಮ ಸಾಲುಗಳಲ್ಲಿ ದಟ್ಟವಾಗಿದೆ.

    • Rupa

      thanx a lot.

  11. jayashankarbelagumba

    ವರ್ತಮಾನಕ್ಕೊಂದು ಚರಿತ್ರೆಯಲ್ಲದ ಸಂದೇಶ ಸಾರಿದ್ದೀರಿ. nice

    • Rupa

      thanx jayashankar
      rupa

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading