ಪ್ರಸನ್ನ ಹೆಗ್ಗೋಡು
‘ಚರಕ’ ಮುಚ್ಚಲ್ಪಡುವ ಸ್ಥಿತಿಗೆ ಬಂದುಬಿಟ್ಟಿದೆ, ದಿವಾಳಿ ಏಳುವ ಸ್ಥಿತಿಗೆ ಬಂದಿದೆ ಎನ್ನುವ ಸುದ್ದಿಯನ್ನು ನೀವೆಲ್ಲಾ ಕೇಳಿ ತೀವ್ರ ಚಿಂತಿತರಾಗಿದ್ದೀರಿ.
ನಿಮ್ಮಲ್ಲಿ ಅನೇಕರಿಗೆ ಯಾಕೆ ಹೀಗಾಯಿತು ಅನ್ನುವಂತಹ ಪ್ರಶ್ನೆ ಮನಸ್ಸಿನಲ್ಲಿ ಎದ್ದಿದೆ.
ಚರಕದಲ್ಲಿ ಏನಾದರೂ ಭ್ರಷ್ಟಾಚಾರ ನಡೆದಿದೆಯೇ ಅಥವಾ ಚರಕದ ಹೆಣ್ಣುಮಕ್ಕಳು ಸರಿಯಾಗಿ ಕೆಲಸ ಮಾಡುತ್ತಿಲ್ಲವೇ? ಯಾಕೆ ಹೀಗಾಯ್ತು ಅಂತ. ಚರಕದ ಹೆಣ್ಣುಮಕ್ಕಳು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ, ಅಷ್ಟೇ ಅಲ್ಲ, ಚರಕ ಹಲವಾರು ವರ್ಷಗಳಿಂದ ಲಾಭದಾಯಕವಾಗಿ ನಡೆದಿದೆ. ಈ ವರ್ಷ ಕೂಡ ಚರಕ ಲಾಭದಾಯಕವಾಗಿಯೇ ನಡೆದಿದೆ.
ಆದರೂ ಹೀಗ್ಯಾಕಾಯಿತು ಅಂದರೆ ಒಂದು ಕಡೆಯಿಂದ ನಾವು ನೇಕಾರರ ಕೈಬಿಡಬಾರದು, ಬಣ್ಣಕಾರರ ಕೈಬಿಡಬಾರದು, ಹೊಲಿಗೆದಾರರ ಕೈಬಿಡಬಾರದು ಅಂತ ಅವರ ಹತ್ತಿರ ಪದಾರ್ಥಗಳನ್ನ ಮಾಡಿಸುತ್ತಾ ಬಂದೆವು.
ಇನ್ನೊಂದು ಕಡೆಯಿಂದ ಸರ್ಕಾರ ಕಳೆದ 18 ವರ್ಷಗಳಲ್ಲಿ ಹಲವು ಮುಖ್ಯಮಂತ್ರಿಗಳು ಇಂದಿನ ಮಾನ್ಯ ಯಡಿಯೂರಪ್ಪನವರು ಸೇರಿದ ಹಾಗೆ ನೀಡಿದ ವಿವಿಧ PPP ಪ್ರಾಜೆಕ್ಟ್ ಗಳು ಅಂದರೆ Public Private Participation Project ಗಳಿಗೆ ಒಂದು ಬಿಡಿಗಾಸು ಕೂಡ ಸರ್ಕಾರದಿಂದ ಇಲ್ಲಿ ತನಕ ಬಿಡುಗಡೆ ಆಗಿಲ್ಲ. ಇದಕ್ಕೆ ಕಾರಣರು ಆಯಾ ಮುಖ್ಯಮಂತ್ರಿಗಳಾಗಲಿ, ಆಯಾ ವಿಭಾಗದ ಮಂತ್ರಿಗಳಾಗಲಿ ಅಲ್ಲ. ಆ ಆಡಳಿತ ವರ್ಗ ಕಾರಣ ಆಗಿದೆ.

ಅಲ್ಲಿ ಸುಮಾರು 2 ಕೋಟಿ ರೂಪಾಯಿ ಹಣ ಸಿಕ್ಕಿಹಾಕಿಕೊಂಡಿದ್ದರೆ, ಈ ಕಡೆ ನಮ್ಮ ಹಣ ನೇಕಾರರಿಗೆ ಕೊಟ್ಟು ಬರಿದಾಗಿದೆ. ನಮ್ಮ ಬ್ಯಾಂಕಿನ ಬ್ಯಾಲೆನ್ಸು ಕಡಿಮೆಯಾಗಿದೆ ಹಾಗಾಗಿ, ನಾವಿವತ್ತು ಕಷ್ಟದಲ್ಲಿ ಸಿಲುಕಿಕೊಂಡಿದ್ದೇವೆ. ನಮಗೇನು ಅನ್ನಿಸುತ್ತಾ ಇದೆ ಅಂದರೆ, ಚರಕವನ್ನು ಉಳಿಸುವ ಸರಳವಾದ ಕೆಲಸ ಅದು, ಸುಲಭವಾದ ಕೆಲಸ. ಆ ಕೆಲಸವನ್ನ ನೀವು ಮಾಡಬೇಕು. ನೀವು ಇನ್ನೇನು ಮಾಡಬೇಕಾಗಿಲ್ಲ. ಯಾವುದೋ ಒಂದು ಮಿಲ್ ಬಟ್ಟೆ, ಸಿಂಥೆಟಿಕ್ ಬಟ್ಟೆ, ಅಥವಾ ಇನ್ಯಾವುದೋ ಒಂದು ಕೆಟ್ಟ ಪದಾರ್ಥ ಕೊಳ್ಳುವ ಬದಲು, ಕೈಮಗ್ಗದ ಪದಾರ್ಥವನ್ನು ಕೊಳ್ಳಿ. ಕೈ ಉತ್ಪನ್ನಗಳನ್ನು ಕೊಳ್ಳಿ. ಗ್ರಾಮೀಣ ರೈತರ ಉತ್ಪನ್ನಗಳನ್ನು ನೇರವಾಗಿ ಖರೀದಿ ಮಾಡಿ.
ಇತ್ತ ಕಡೆಯಿಂದ ನಮ್ಮ ಚರಕದ ಹೆಣ್ಣುಮಕ್ಕಳು ಸತ್ಯಾಗ್ರಹ ಶುರು ಮಾಡಿದ್ದಾರೆ. ಚರಕದ ಹಳ್ಳಿಯಾದ ಹೆಗ್ಗೋಡಿನ ಗ್ರಾಮಪಂಚಾಯತಿಯ ಮುಂದೆ ಅವರು ಹೋಗಿ ಅಲ್ಲಿ ಶ್ರಮದಾನ ಮಾಡಿ, ಸತ್ಯಾಗ್ರಹ ಮಾಡಿ, ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯನ್ನು ಅಲ್ಲಿ ಕೊಟ್ಟಿದ್ದಾರೆ. ನಾಳೆಯಿಂದ ನಾವು ಹಳ್ಳಿ ಹಳ್ಳಿಗಳಿಗೆ ಹೋಗಿ ನಾವು ಉತ್ಪಾದಿಸಿದ ಬಟ್ಟೆಯಲ್ಲಿ ಯಾವುದು ಮಾರಾಟಕ್ಕೆ ಸಾಧ್ಯವಿಲ್ಲವೋ ಅವೆಲ್ಲವನ್ನೂ ಬಡವರಿಗೆ ಹಂಚುವ ಮೂಲಕ ಬಡವರ ಬೆಂಬಲವನ್ನ ಯಾಚಿಸುತ್ತಿದ್ದೇವೆ.
ಇತ್ತ ಕಡೆಗೆ ಯಾವ್ಯಾವುದು ಮಾರಾಟಕ್ಕೆ ಸಾಧ್ಯವಿದೆಯೋ, ಲಭ್ಯವಿದೆಯೋ ಅದೆಲ್ಲವನ್ನು ಬೇರೆ ಬೇರೆ ನಗರಗಳಲ್ಲಿ ಇರುವ ನಮ್ಮ ಅಂಗಡಿಗಳಿಗೆ ಕಳಿಸುತ್ತಿದ್ದೇವೆ. ಅವರು ಅದನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ನಮಗೆ ಸಾರ್ವಜನಿಕರ ಅಭಿಮಾನದ ಮಹಾಪೂರವೇ ಹರಿದು ಬಂದಿದೆ. ಅನೇಕರು ಹಣ ಕಳಿಸಿ ನಾವು ನಿಮಗೆ ಸಹಾಯ ಮಾಡುತ್ತೇವೆ ಎಂದಿದ್ದಾರೆ. ಉದಾಹರಣೆಗೆ ಇನ್ಫೋಸಿಸ್ ಸಂಸ್ಥೆಯವರು 10 ಲಕ್ಷ ರೂಪಾಯಿಯನ್ನು ಕಳಿಸಿ, ನಿಮ್ಮ ಸಂಸ್ಥೆಗೆ ನಮ್ಮ ಸಣ್ಣ ನೆರವು ಅಂತ ಹೇಳಿದ್ದಾರೆ. ಅವರೆಲ್ಲರಿಗೂ ನಾವೇನು ಹೇಳುತ್ತಿದ್ದೇವೆ ಎಂದರೆ ತುಂಬಾ ಸಂತೋಷ, ತುಂಬಾ ವಂದನೆಗಳು.

ಆದರೆ ನೀವು ಕೊಟ್ಟ ಹಣವನ್ನು ನಾವು ದಾನವಾಗಿ ಸ್ವೀಕರಿಸಲು ಇಷ್ಟಪಡುವುದಿಲ್ಲ. ಏಕೆಂದರೆ ನಾವು ಕೂಡ ಉದ್ಯೋಗಸ್ಥ ಮಹಿಳೆಯರು. ನೀವು ಕೊಟ್ಟಿರುವ ಹಣಕ್ಕೆ ಬದಲಾಗಿ ನಾವು ಕೂಪನ್ಸ್ ಕೊಡುತ್ತೇವೆ. ಗಿಫ್ಟ್ ಕೂಪನ್ಸ್ ಕೊಡುತ್ತೇವೆ. ಅದನ್ನ ನಿಮ್ಮ ನೌಕರರಿಗೆ ಹಂಚಿ. ಅವರು ಯಾವುದೇ ದೇಸಿ ಅಂಗಡಿಯಲ್ಲಿ ಬಟ್ಟೆ ಖರೀದಿ ಮಾಡಲಿ ಅಥವಾ ಅಕಸ್ಮಾತ್ ಕೋವಿಡ್ ನಿಂದಾಗಿ ಬಟ್ಟೆ ಖರೀದಿ ಮಾಡಲು ಸಾಧ್ಯವಾಗದಿದ್ದರೆ ನಾವು ಮೈಲಾಂಗ್ ಮುಖಾಂತರ ಈ ಬಟ್ಟೆಗಳನ್ನು ಕಳಿಸುವುದಕ್ಕೆ ವ್ಯವಸ್ಥೆ ಮಾಡುತ್ತೇವೆ.
ಆದ್ದರಿಂದ ನಮಗೆ ದಾನ ಬೇಡ ಚಲಾವಣೆ ಬೇಕು, ಚಾಲನೆ ಬೇಕು. ನಮ್ಮ ಬಟ್ಟೆಗಳು ಖರ್ಚಾಗುತ್ತಾ ಇದ್ದರೆ ನಾವು ಇನ್ನೂ ಹೆಚ್ಚಿನ ನೇಕಾರರಿಗೆ ಸಹಾಯ ಮಾಡಲಿಕ್ಕೆ ಆಗುತ್ತದೆ, ಇನ್ನು ಹೆಚ್ಚಿನ ಬಣ್ಣಕಾರರಿಗೆ ಸಹಾಯ ಮಾಡಲಿಕ್ಕೆ ಸಾಧ್ಯವಾಗುತ್ತದೆ ಅನ್ನೋದನ್ನ ಹೇಳುತ್ತಿದ್ದೇವೆ. ಅದರಿಂದ ಸ್ನೇಹಿತರೆ ನನ್ನ ಪ್ರಕಾರ ಇದು ಎರಡನೆಯ ಸ್ವಾತಂತ್ರ್ಯ ಚಳುವಳಿ. ಚರಕ ಒಂದು ಸಂಕೇತ ಮಾತ್ರ. ಈ ಸಂಕೇತದ ಹಿಂದೆ ಸಾವಿರಾರು ನೇಕಾರಿಕೆಯ ಸೊಸೈಟಿಗಳು, ನೇಕಾರರು, ಬಣ್ಣಕಾರರು, ಚಮ್ಮಾರರು, ರೈತರು ಇದ್ದಾರೆ.
ಅವರೆಲ್ಲರೂ ಬಳಲಿದ್ದಾರೆ. ಅವರೆಲ್ಲರೂ ಉದ್ಯೋಗ ವಂಚಿತರಾಗಿದ್ದಾರೆ. ಅವರ ಆತ್ಮ ನಿರ್ಭರತೆಯನ್ನು ನಾವು ಕಸಿದು ಕೊಂಡಿದ್ದೇವೆ. ಮಾನ್ಯ ಪ್ರಧಾನ ಮಂತ್ರಿಗಳು ಹೇಳುವ ಆತ್ಮನಿರ್ಭರತೆ ಅನ್ನೋದು, ಅದನ್ನು ಇವೇ ಸರ್ಕಾರಗಳೇ ಕಸಿದುಕೊಂಡಿದೆ, ಅವರ ಉದ್ಯೋಗವನ್ನು ಕಸಿದುಕೊಳ್ಳುವ ಮೂಲಕ. ಅವರನ್ನು ಭಿಕ್ಷುಕರನ್ನಾಗಿ ಮಾಡಿದ್ದೇವೆ, ಕೈಚಾಚುವವರನ್ನಾಗಿ ಮಾಡಿದ್ದೇವೆ, ಇದು ನಾಚಿಕೆಗೇಡಿನ ಸಂಗತಿ.
ಇದನ್ನು ತಪ್ಪಿಸಲಿಕ್ಕೆ ಭಾರತದ ಪ್ರತಿಯೊಬ್ಬ ಪ್ರಜೆಗೂ ಹಕ್ಕಿದೆ ಮತ್ತು ಜವಾಬ್ದಾರಿಯಿದೆ. ನಿಮ್ಮ ನಿಮ್ಮ ಹಕ್ಕುಗಳನ್ನು, ನಿಮ್ಮ ನಿಮ್ಮ ಜವಾಬ್ದಾರಿಗಳನ್ನು ಪೂರೈಸಿದರೆ ಈ ದೇಶ, ಮತ್ತೆ ಸ್ವತಂತ್ರವಾಗುತ್ತದೆ. ಈ ದೇಶ, ದೇಶಭಕ್ತರ ನಾಡಾಗುತ್ತದೆ. ದಯಮಾಡಿ ನೀವೆಲ್ಲರೂ ಸೇರಿ ನಿಮ್ಮ ರಾಜಕಾರಣವನ್ನು ಮರೆತು, ನೀವು ಕಾಂಗ್ರೆಸ್ ಪಕ್ಷದವರಾ? ಬಿಜೆಪಿ ಪಕ್ಷದವರಾ? ಕಮ್ಯುನಿಸ್ಟರಾ ಅಥವಾ ಜನತಾದಳದವರಾ ಎನ್ನುವುದನ್ನು ಮರೆತು ಎಲ್ಲರೂ ಒಗ್ಗಟ್ಟಿನಿಂದ ಗ್ರಾಮೀಣ ಬಡವರ ಉತ್ಪನ್ನಗಳನ್ನು ಕೊಳ್ಳುವ ಈ ಚಳುವಳಿಗೆ ನಿಮ್ಮ ಬೆಂಬಲವನ್ನು ನೀಡಿ.
ಕೇವಲ ದೇಸಿ ಬಟ್ಟೆ ಅಲ್ಲ. ನಿಮ್ಮ ನಿಮ್ಮ ಹಳ್ಳಿಗಳಲ್ಲಿ, ನಿಮ್ಮ ನಿಮ್ಮ ರಾಜ್ಯಗಳಲ್ಲಿ ನಿಮ್ಮ ನಿಮ್ಮ ನಗರಗಳಲ್ಲಿ ಇರುವಂತಹ ಎಲ್ಲ ರೀತಿಯ ದೇಸಿ ಪ್ರಯತ್ನಗಳನ್ನ, ಅವುಗಳ ಪದಾರ್ಥಗಳನ್ನು ಕೊಳ್ಳುವುದರ ಮೂಲಕ ಬೆಂಬಲಿಸಿ. ಒಂದು ಹೊಸ ದೇಶವನ್ನು ಕಟ್ಟಿ ಒಂದು ಹೊಸ ವ್ಯವಸ್ಥೆಯನ್ನು ಕಟ್ಟೋಣ.










0 Comments