‘ಸಫಾರಿ’ ಮಲ್ಲಿಕಾರ್ಜುನ ಸ್ವಾಮಿ ಅಲಿಯಾಸ್ ‘ಚಾಂದಿನಿ’

ಚಾಂದಿನಿ

ಒಂದು ದಿನ ನಮ್ಮ ಕ್ಲಾಸ್‌ನಲ್ಲಿ ಟೀಚರ್ ಬಂದಿರಲಿಲ್ಲ. ನಾವೆಲ್ಲರೂ ಗಲಾಟೆ ಮಾಡುತ್ತೇವೆ, ಓದುವುದಿಲ್ಲವೆಂದು, ನಮ್ಮನ್ನು ನೋಡಿಕೊಳ್ಳಲು ಲೀಡರ್ ಒಬ್ಬನನ್ನು ನೇಮಿಸಿದ್ದರು. ಅವನ ಹೆಸರು ನಾಗೇಶ್. ನಮ್ಮ ತರಗತಿಯಲ್ಲಿ ೧೦ ಜನ ಹುಡುಗಿಯರಿದ್ದರು. ಹೆಚ್ಚಾಗಿ ನಾನು ಅವರ ಸಂಗಡ ಮಾತನಾಡುತ್ತಿದ್ದೆ. ಇದನ್ನು ಸಹಿಸದ ನಾಗೇಶ್, ಮಾಸ್ಟರ್ ಬಳಿಯಲ್ಲಿ “ಸಾರ್, ಇವನು ಹುಡುಗಿಯರಿಗೆ ಜಡೆ ಹಾಕುತ್ತಿದ್ದ” ಎಂದು ಸುಳ್ಳು ಹೇಳಿದ. ನಾನು ಸಾರ್‌ಗೆ “ಇಲ್ಲ, ನಾನು ಹಾಗೆ ಮಾಡಿಲ್ಲ. ಮಾತನಾಡುತ್ತಿದ್ದೆ ಅಷ್ಟೆ. ಇವನು ಸುಳ್ಳು ಹೇಳುತ್ತಾನೆ” ಅಂತ ಎಷ್ಟೇ ಹೇಳಿದರು ಕೇಳಲಿಲ್ಲ. ಅದಕ್ಕೆ ನನಗೆ ಕೊಟ್ಟ ಶಿಕ್ಷೆ ಏನೆಂದರೆ, ಕತ್ತಲೆಯ ಕೋಣೆಯಲ್ಲಿ ಎರಡು ಗಂಟೆಗಳ ಕಾಲ ನನ್ನ ಕೈಗಳನ್ನು ಕಾಲು ಸಂದಿಯಿಂದ ತೂರಿಸಿ ಕಿವಿಯನ್ನು ಹಿಡಿದುಕೊಳ್ಳಬೇಕು. ನಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದೆ.

ನನ್ನ ಹೆಸರು ಮಲ್ಲಿಕಾರ್ಜುನ ಸ್ವಾಮಿ ಎಂದಾದರೂ, ಎಲ್ಲರೂ ಪ್ರೀತಿಯಿಂದ ನನ್ನನ್ನು ‘ಸಫಾರಿ’ ಎಂದು ಕರೆಯುತ್ತಿದ್ದರು. ನನ್ನ ತಂದೆ ಗೌರಿ ಹಬ್ಬಕ್ಕೆ ‘ಸಫಾರಿ’ ಬಟ್ಟೆಯನ್ನು ಹೊಲಿಸಿದ್ದರು. ಆದ್ದರಿಂದ ನನ್ನ ಹೆಸರು ‘ಸಫಾರಿ’.

ವರ್ಷದ ಕಡೆಯಲ್ಲಿ ಎರಡು ದಿನದ ಪ್ರವಾಸಕ್ಕೆ ಹೋಗಲು ಎಲ್ಲಾ ಮಕ್ಕಳು ಸಹ ೧೨ ರೂಪಾಯಿಯನ್ನು ಅವರ ಮನೆಯಲ್ಲಿ ಕೇಳಿ ತರಬೇಕು ಎಂದು ಹೇಳಲಾಯಿತು. ನಮ್ಮ ಶಾಲೆಯ ಎಲ್ಲಾ ಮಕ್ಕಳ ಜೊತೆ ಬೇಲೂರು, ಹಳೇಬೀಡು, ಶ್ರವಣಬೆಳಗೊಳದ ಪ್ರಸಿದ್ಧ ತಾಣವನ್ನು ನೋಡಬೇಕು ಅನಿಸಿತು. ಆದರೆ ನಮ್ಮ ಮನೆಯಲ್ಲಿ ಅಮ್ಮನನ್ನು ಕೇಳಿದಾಗ “ನಮ್ಮಿಂದ ಅಷ್ಟು ಹಣ ಕೊಡಲು ಆಗುವುದಿಲ್ಲ” ಎಂದರು. ಇದನ್ನು ಕೇಳಿ ನನ್ನ ಮನಸ್ಸಿಗೆ ನೋವಾಯಿತು. ಎಲ್ಲರ ಮನೆಯಲ್ಲಿಯೂ ಸಹ ಅವರ ಮಕ್ಕಳ ಪ್ರವಾಸಕ್ಕೆ ಹಣ ಕೊಟ್ಟು, ಇಷ್ಟದ ತಿಂಡಿಯನ್ನು ಮಾಡಿ ಕಳುಹಿಸುತ್ತಾರೆ. ಆದರೆ ನಮ್ಮ ಮನೆಯ ಪರಿಸ್ಥಿತಿಯಲ್ಲಿ ನಾನು ಹೋಗಲಾಗಲಿಲ್ಲ. ಮರುದಿನ ಟೀಚರ್ ಕೇಳಿದಾಗ “ನನಗೆ ಬಸ್ ಪ್ರಯಾಣ ಮಾಡಿದರೆ ವಾಂತಿಯಾಗುತ್ತದೆ” ಎಂದು ಸುಳ್ಳು ಹೇಳಿದೆ. ಹೊರಡುವ ಮುನ್ನ ಎಲ್ಲಾ ಮಕ್ಕಳು ಬಸ್‌ನಲ್ಲಿ ಹಾಡಲೆಂದು ನಮ್ಮ ಶಾಲೆಯ ಪ್ರಾರ್ಥನೆಯ ಹಾಡುಗಳನ್ನು ಚಿಕ್ಕಪುಸ್ತಕದಲ್ಲಿ ಬರೆದು ಸಂಭ್ರಮಿಸುತ್ತಿದ್ದಾಗ, ನನ್ನ ಮನಸ್ಸು ಏಕಾಂಗಿ ಭಾವವನ್ನು ಅನುಭವಿಸುತ್ತಿತ್ತು. ಮನೆಯ ಪರಿಸ್ಥಿತಿಯಿಂದಾಗಿ ನಮ್ಮ ಆಸೆಗಳೆಲ್ಲಾ ಈಡೇರುವುದಿಲ್ಲ ಎಂಬ ನಿರಾಸೆ ಕಾಡುತ್ತಿತ್ತು. ಪ್ರವಾಸದ ಹಿನ್ನಲೆಯಲ್ಲಿ ಎರಡು ದಿನದ ರಜೆಯನ್ನು ನೋವಿನಿಂದಲೇ ಅನುಭವಿಸಿದೆ.

ನಮ್ಮ ಊರಿಗೆ ಕರಿಬೇವಿನ ಸೊಪ್ಪನ್ನು ಮಾರಲು ಸುಮಾರು ೬೦ ವಯಸ್ಸಿನ ಸಂಗ ಬರುತ್ತಿದ್ದ. ಎಲ್ಲರೂ ನನ್ನ ಕಡೆ ಬೆರಳುಮಾಡಿ “ಇವನೂ ನಿನ್ನಂಗೆಯೇ. ನಿನ್ನ ಜೊತೆ ಕರೆದುಕೊಂಡು ಹೋಗು” ಎಂದು ಅವನಿಗೆ ಹೇಳುತ್ತಿದ್ದರು. “ನೀನು ಹೋಗ್ತೀಯಾ ಇವನೊಡನೆ?” ಎನ್ನುವಾಗ ನಾನು ಕೋಪದಲ್ಲಿ ಅಲ್ಲಿಂದ ಓಡಿಹೋಗುತ್ತಿದ್ದೆ. ಅವನನ್ನು ಮಾತನಾಡಬೇಕೆನಿಸಿದರೂ, ಅಲ್ಲಿನ ಸಮಯ ಸಂದರ್ಭಗಳು ನನ್ನನ್ನು ಮೂಕವಾಗಿಸುತ್ತಿದ್ದವು. ‘ಜನ ನನ್ನನ್ನು ಯಾಕೆ ಇವನಿಗೆ ಹೋಲಿಸುತ್ತಾರೆ? ನಾನಿನ್ನೂ ಚಿಕ್ಕ ಹುಡುಗ. ಓದುತ್ತಿದ್ದೇನೆ. ದೊಡ್ಡವನಾದ ಮೇಲೆ ಸೊಪ್ಪು ಮಾರುವುದಿಲ್ಲ. ವಿದ್ಯಾವಂತನಾಗಿ ಮಾಸ್ತರ್ ಕೆಲಸಕ್ಕೆ ಸೇರುತ್ತೇನೆ’ ಎಂದು ಚಿಂತಿಸುತ್ತಿದ್ದೆ.

ನಮ್ಮ ಊರಿನ ಶಾಲೆಯಲ್ಲಿ ಓದುತ್ತಿರುವಾಗ ಹಿಂದಿನ ರೀತಿಯಲ್ಲಿ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ನೆಡೆಯುತ್ತಿರಲಿಲ್ಲ. ನನ್ನದೇ ಊರಿನ ಹುಡುಗರು ನನಗಿಂತಾ ದೊಡ್ಡವರು ಇರಲಿಲ್ಲ ಎಂಬುದು ಕಾರಣವೇನೋ ಗೊತ್ತಿಲ್ಲ. ಜೊತೆಗೆ ಹಿಂದಿನದೆಲ್ಲವನ್ನು ನನಗೆ ನೆನೆಯಲೂ ಇಷ್ಟವಾಗುತ್ತಿರಲಿಲ್ಲ. ಒಮ್ಮೆ ನಮ್ಮ ಶಾಲೆಯಲ್ಲಿ ಪ್ರಥಮ ಚಿಕಿತ್ಸೆಯ ಬಗ್ಗೆ ತರಬೇತಿಯಾದಾಗ ಅದರಲ್ಲಿ ನನಗೆ ಮೊದಲನೆಯ ಶ್ರೇಣಿಯಲ್ಲಿ ಅರ್ಹತಾಪತ್ರ ದೊರೆಯಿತು. ಅದನ್ನು ನಾನು ಎಂದಿಗೂ ಮರೆತಿಲ್ಲ.

ನನ್ನ ಶಾಲೆಯಲ್ಲಿ ಖೋಖೋ ಟೀಮ್ ಮತ್ತು ಲಾಂಗ್‌ಜಂಪ್, ಹೈಜಂಪ್ ಟೀಮ್‌ನಲ್ಲಿ ಇದ್ದೆ. ಅದರಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದೆ. ಕಬಡ್ಡಿಯ ಟೀಮ್‌ನಲ್ಲಿ ಮಾತ್ರ ಭಾಗವಹಿಸುತ್ತಿರಲಿಲ್ಲ. ನಮ್ಮ ಊರಿನಲ್ಲಿ ಆಟದ ತರಬೇತಿ ನೀಡುವವರು ನಮ್ಮ ಏರಿಯಾದವರೆ ಇದ್ದರು. ಅವರು ಬೇರೆಯ ಹುಡುಗರಿಗೆ ಚೆನ್ನಾಗಿ ಅಭ್ಯಾಸಮಾಡಲು ಸೂಚನೆ ನೀಡುತ್ತಿದ್ದರು. ಆದರೆ ನನಗೆ ಮಾತ್ರ “ನಿನ್ನಿಂದ ಆಗಲ್ಲ. ನೀನು ತಂಡದಲ್ಲಿ ಬೇಡ” ಎನ್ನುತ್ತಿದ್ದರು. ಇದನ್ನು ಎಲ್ಲರ ಮುಂದೆ ಹೇಳುವಾಗ ಮನಸ್ಸಿಗೆ ನೋವಾಗುತ್ತಿತ್ತು. “ಇವರೆಲ್ಲರ ಹಾಗೆಯೇ ಬೆಳಿಗ್ಗೆ ಎದ್ದು ಅಭ್ಯಾಸ ಮಾಡಲು ಬರುತ್ತೇನೆ. ಆದರೆ ಇವರು ಬೇಡ ಎನ್ನುತ್ತಾರಲ್ಲಾ” ಎಂದು ಅಂದಿನಿಂದ ಅಲ್ಲಿಗೆ ಹೋಗುವುದನ್ನೇ ಬಿಟ್ಟು, ಬೆಳಿಗ್ಗೆ ಎದ್ದು ಊರಿನ ರಸ್ತೆಯಲ್ಲಿ ಓಡಲು ಪ್ರಾರಂಭಿಸಿದೆ. ಮುಂದೆ ಎಂದೂ ಸಹ ಅವರ ಕಡೆ ಗಮನ ಹರಿಸುತ್ತಿರಲಿಲ್ಲ.

ನಾನು ಸಿನಿಮಾ ನೋಡಲು ಹೆಚ್ಚಾಗಿ ಅಪ್ಪ ಅಮ್ಮನ ಜೊತೆಯಲ್ಲಿಯೇ ಹೋಗುತ್ತಿದ್ದೆ. ಆಗ ಅಮ್ಮ ಮತ್ತು ನಾನು ಹೆಂಗಸರ ಸೀಟಿನಲ್ಲಿ ಕುಳಿತು ನೋಡುತ್ತಿದ್ದೆವು. ಟಾಕೀಸಿನಲ್ಲಿ ಗಂಡಸರಿಗೆ ಮತ್ತು ಹೆಂಗಸರಿಗೆ ಬೇರೆ ಬೇರೆ ಕಡೆಯಲ್ಲಿ ಸೀಟುಗಳಿದ್ದವು. ಕೆಲವೇ ದಿನದಲ್ಲಿ ನಾನೇ ಸಿನಿಮಾ ನೋಡಲು ಹೋದಾಗ, ಸಿನಿಮಾ ಶುರುವಾಗುವ ಒಂದು ಗಂಟೆ ಮುಂಚೆಯೇ ಹೆಂಗಸರಿಗೆ ಟಿಕೇಟ್ ಕೊಡುವ ಜಾಗದಲ್ಲಿ ನಿಲ್ಲುತ್ತಿದ್ದೆ. ಹೆಂಗಸರೆಲ್ಲರೂ “ನೀನು ಗಂಡುಹುಡುಗ. ಇಲ್ಲಿ ಯಾಕೆ ನಿಂತಿದ್ದೀಯಾ? ಗಂಡಸರ ಕಡೆ ಹೋಗು. ಅಲ್ಲಿ ನಿನಗೆ ಟಿಕೇಟ್ ಸಿಗುತ್ತೆ. ಗಂಡಸರ ಜೊತೆ ಕೂತು ಸಿನಿಮಾ ನೋಡು” ಎನ್ನುತ್ತಿದ್ದರು. ಅದಕ್ಕೆ ನಾನು ತಲೆಕೆಡಿಸಿಕೊಳ್ಳದೆ “ನಮ್ಮ ಮನೆಯ ಹೆಂಗಸರಿಗಾಗಿ ಇಲ್ಲಿ ನಿಂತಿದ್ದೇನಿ” ಎಂದು ಹೇಳುತ್ತಿದ್ದೆ. ಆಮೇಲೆ ಕೆಲವರು “ಇವನೊಬ್ಬ ಸಂಗ. ಅವನೆಲ್ಲಿ ಹೋಗ್ತಾನೆ! ಹೆಂಗಸರ ತಿಕದಲ್ಲಿಯೇ ಒತ್ತರಿಸಿಕೊಂಡು ಇರ್ತಾನೆ” ಎನ್ನುತ್ತಿದ್ದರು. ಕೆಲವೊಮ್ಮೆ ಕೋಪ ಬಂದರೂ ಸುಮ್ಮನಾಗುತ್ತಿದ್ದೆ. ಟಿಕೇಟ್ ಪಡೆದು ಹೆಂಗಸರ ವಿಭಾಗದಲ್ಲಿ ಒಳಗೆ ಹೋಗುವಾಗ ಅಲ್ಲಿ ನಿಂತಿದ್ದ ಕಾವಲಿನವನು ನನ್ನನ್ನು ಒಳಗೆ ಬಿಡದೆ ಗಂಡಸರ ಬಳಿ ಕಳುಹಿಸುತ್ತಿದ್ದನು. ಗಂಡಸರು ಟಿಕೇಟ್ ಪಡೆಯುವ ಸ್ಥಳಕ್ಕೆ ಹೋಗಿ, ಅವರ ಮಧ್ಯ ನಿಂತುಕೊಳ್ಳುವುದು ನನಗೆ ತುಂಬಾ ಕಷ್ಟವಾಗುತ್ತಿತ್ತು. ಮನಸ್ಸಿಗೆ ಅದು ನನ್ನ ಸರದಿಯಲ್ಲ ಅನ್ನಿಸುತ್ತಿತ್ತು.

ನಮ್ಮ ಮನೆಯ ಮುಂದೆ ಅತ್ತಿ ಮರದ ಹತ್ತಿರ ಆಟದ ಅಂಗಳವಿತ್ತು. ಅಲ್ಲಿ ಗೌರಿ ಹಬ್ಬದ ಸಂಧರ್ಭದಲ್ಲಿ ಅತ್ತಿಯ ಮರಕ್ಕೆ ಹಗ್ಗದಿಂದ ಸುವ್ವಾಲಿಯನ್ನು ಹಾಕಿ ಆಟವಾಡುತ್ತಿದ್ದೆವು. ಸಂಜೆಯ ಸಮಯದಲ್ಲಿ ಕಬಡ್ಡಿ ಆಟ ಆಡುತ್ತಿದ್ದರು. ನಾನು ಸಹ ಅಲ್ಲಿ ನೋಡಲು ಹೋಗುತ್ತಿದ್ದೆ. ಕಮ್ಮಿ ಜನರಿದ್ದ ಕಾರಣ ನನ್ನನ್ನು ಸಹ ಆಟಕ್ಕೆ ಬರುವಂತೆ ಹೇಳಿದರು. ನಾನು ಸೇರಿಕೊಂಡೆ. ನನಗೆ ಒಳಗೊಳಗೆ ಭಯ ಹಾಗು ಸಂಕೋಚ. ಆದರೂ ಛಲದಿಂದ ಸೇರಿಕೂಂಡೆ. ಆ ಮೈದಾನವು ಅಂಗಡಿಗೆ ಹೋಗುವ ರಸ್ತೆ ಪಕ್ಕದಲ್ಲಿ ಇದ್ದ ಕಾರಣ ತುಂಬಾ ಜನ ಸೇರಿದ್ದರು. ನನ್ನ ಆಟ ಬರುವಾಗ “ನುಗ್ಗೂ ಒಳಗೆ, ಹೋಗಿ ಅವರನ್ನು ಬಡಿದು ಬಾ” ಎಂದು ನನ್ನನ್ನು ಹುರಿದುಂಬಿಸುತ್ತಿದ್ದರು. ಕೆಲವರು ನನ್ನನ್ನು “ಆಟವಾಡ್ಲಿಕ್ಕೆ ಬರಲ್ಲ. ಇವನನ್ನೇಕೆ ಸೇರಿಸಿಕೊಂಡಿದ್ದೀರಾ?” ಅಂತಾ ಹಂಗಿಸುತ್ತಿದ್ದರು. ನಾನು ಎದುರು ತಂಡದಲ್ಲಿ ನುಗ್ಗಿ ಆಟವಾಡುವಾಗ ಗೇಲಿ ಮಾಡುವುದು, ಸಿಳ್ಳೆ ಹೂಡೆಯುವುದು, “ಹಿಡಿದು ಬಡಿರೋ ಅವನ್ನ” ಎಂದು ಚುಡಾಯಿಸುತ್ತಿದ್ದರು. ಆಗ ನಾನು ಸಹ ಆಟವಾಡಿ ನಮ್ಮ ತಂಡಕ್ಕೆ ಗೆಲುವನ್ನು ಪಡೆದೆವು. ಕೆಲವರು ನಮ್ಮನ್ನೆಲ್ಲಾ “ಪರವಾಗಿಲ್ಲ ಚೆನ್ನಾಗಿ ಆಡಿದಿರಿ” ಎಂದು ಪ್ರಶಂಸಿಸುತ್ತಿದ್ದರು. ಆದರೆ ಜನರು ನನಗೆ “ಇವನು ಕೈಲಾಗದವನು” ಎಂದಿದ್ದು ಮತ್ತು ಇತರ ಹುಡುಗರ ಮುಂದೆ ಆಡುತ್ತಿದ್ದ ಒಳ್ಳೆಯ ಮಾತುಗಳು ನನ್ನನ್ನು ಬಹಳ ಕಾಡಿದವು. ಇದು ಹೀಗೇಕೆ? ನನ್ನಲ್ಲಿ ಇರುವ ಕೊರತೆ ಏನು? ಎಲ್ಲಿ ನಾನು ಇದನ್ನು ಪರಿಹರಿಸಿಕೊಳ್ಳಬಹುದು? ನನ್ನ ದೇಹ ಎಲ್ಲರಂತೆಯೇ ಇದೆ, ಆದರೂ ಕಮ್ಮಿ ಇರುವುದು ಏನು? ಅಂತ ವಿಪರೀತವಾಗಿ ಯೋಚಿಸಿ, ಏಕಾಂಗಿಯಾಗಿ ಇರುವಂತೆ ಮಾಡುತ್ತಿತ್ತು.

ವಿ.ವಿಜಯಲಕ್ಷ್ಮಿ ಮೇಡಂ ಅಂದರೇ ನನಗೆ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ. ಬ್ರಾಹ್ಮಣರಾದ ಇವರು ಕನ್ನಡದ ಪಾಠವನ್ನು ಮಾಡುವಾಗ ನನ್ನ ಗಮನವೆಲ್ಲಾ ಅವರ ನಡೆ, ರೂಪದ ಕಡೆ ಇರುತ್ತಿತ್ತು. ಅವರ ಬಣ್ಣದ ಪ್ಲೇನ್ ಸೀರೆ, ಅದಕ್ಕೆ ತಕ್ಕಂತೆ ಹೊಂದುವ ಬಳೆ, ಕಪ್ಪುಬೋರ್ಡ್ ಮೇಲೆ ಸೀಮೆಸುಣ್ಣದಿಂದ ಅಕ್ಷರ ಬರೆಯುವಾಗ ಬರುವ ‘ಸುಳ್’ ಎನ್ನುವ ಶಬ್ದ, ಅವರ ಹಣೆಯಲ್ಲಿ ದೊಡ್ಡದಾದ ಕಪ್ಪು-ಕೆಂಪು ಮಿಶ್ರಿತದ ಬಟ್ಟು – ಇದರ ಕಡೆಯೇ ನನ್ನ ಲಕ್ಷ್ಯ ಇರುತ್ತಿತ್ತು. ಅವರು ನಿಜವಾಗಲೂ ಶಾರದಾಂಬೆಯಂತೆ ನನಗೆ ಕಾಣುತ್ತಿದ್ದರು. ಆದರೆ ನಾನು ದಿನವೂ ಅವರ ಸೀರೆ, ಬಳೆಯನ್ನು ನೋಡಿಕೊಂಡು, ನಾನು ಸಹ ಈ ರೀತಿ ಡ್ರೆಸ್ ಮಾಡಿಕೊಂಡು ಮಕ್ಕಳಿಗೆ ಪಾಠ ಮಾಡಬೇಕು ಎನ್ನಿಸುತ್ತಿತ್ತು. ಅದೆಲ್ಲಾ ನನ್ನ ಮನಸ್ಸಿನಲ್ಲಿ ಆಗಾಗ್ಗೆ ಬಂದು ಹೋಗುತ್ತಿತ್ತು. ನನ್ನ ನಿಜವಾದ ಕನಸುಗಳು ಹೀಗಿರುವಾಗ, ನಮ್ಮ ಶಾಲಾ ವಾರ್ಷಿಕೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲು ನಿರ್ಧರಿಸಿದರು. ಅಲ್ಲಿ ನಾಟಕವನ್ನು ಮಾಡಲು ಎಲ್ಲಾ ರೀತಿಯ ಕೆಲಸಗಳು ಶುರುವಾಯಿತು. ಆ ನಾಟಕದಲ್ಲಿ ನನಗೆ ಮುದುಕ ತಂದೆಯ ಪಾತ್ರ ದೊರೆಯಿತು. ಆ ಕಾರ್ಯಕ್ರಮದಲ್ಲಿ ಬಿಳಿಯ ಪಂಚೆಯನ್ನು ಉಟ್ಟು, ಬಿಳಿಯ ಕೂದಲಿಗಾಗಿ ಪೌಡರ್ ಹಾಕಿಕೊಂಡಿದ್ದೆ. ಆ ನಾಟಕವನ್ನು ಯಶಸ್ವಿಯಾಗಿ ಮಾಡಿದೆವು. ಆದರೆ ನಮ್ಮ ಶಾಲೆಯ ನಾಟಕ ನೋಡಲು ನಮ್ಮ ತಂದೆ-ತಾಯಿ ಬಂದಿರಲಿಲ್ಲ. ನನಗೆ ತುಂಬಾ ಬೇಜಾರಾಯಿತು. ನಾಟಕ ನೋಡಿದವರು ನನ್ನ ತಂದೆ-ತಾಯಿಗೆ “ನಿಮ್ಮ ಮಗ ನಾಟಕ ಚೆನ್ನಾಗಿ ಮಾಡಿದ” ಎಂದು ಹೇಳಿದ್ದರು. ಆದ್ದರಿಂದ ನನ್ನ ತಾಯಿ “ಅಯ್ಯೋ, ನಾನು ಬಂದು ನೋಡಬೇಕಾಗಿತ್ತು” ಎಂದು ಬೇಸರದಿಂದ ಹೇಳುತ್ತಿದ್ದರು.

ಈ ಸಮಯದಲ್ಲಿಯೇ ನನಗೆ ಗಂಡನ ಸಂಬಂಧ ಮತ್ತು ಒಡನಾಟಗಳ ಪ್ರೇರಣೆಗಳು ಬರಲು ಆರಂಭಿಸಿದವು. ಇವೆಲ್ಲವನ್ನು ನಾನು ಕಥೆಗಳ ಮೂಲಕ ನನ್ನ ಗೆಳೆಯನಲ್ಲಿ ಹೇಳಿಕೊಳ್ಳುತ್ತಿದ್ದೆ. ಶಾಲೆ ಬಿಟ್ಟು ಮನೆಗೆ ಬರುವಾಗ ದಾರಿಯುದ್ದಕ್ಕೂ ನನ್ನ ಕನಸಿನ ಕಥೆಯನ್ನು ಹೇಳುತ್ತಿದ್ದೆ. ಅವನು ಕೆಲವೊಮ್ಮೆ ಆಸಕ್ತಿಯಿಂದ ಇದನ್ನು ಕೇಳಿಸಿಕೊಳ್ಳುತ್ತಿದ್ದ, ಕೆಲವೊಮ್ಮೆ ಗೊಂದಲದ ರೂಪದಲ್ಲಿ ಪ್ರಶ್ನೆ ಮಾಡುತ್ತಿದ್ದ. “ಹೋಗೆಲೋ, ಅಂಬರೀಶ್ ನಿನ್ನ ಕನಸಲ್ಲಿ ಹೇಗೆ ಬಂದ? ಅವನು ಹೀರೋ” ಎಂದು ನನ್ನ ಕಥೆಯನ್ನು ಅರ್ಧದಲ್ಲಿಯೇ ನಿಲ್ಲಿಸಲು ಪ್ರಯತ್ನಿಸುತ್ತಿದ್ದ. ಇದರಿಂದ ನನಗೆ ನೋವಾದರೂ, ಇದು ಕಥೆಯಲ್ಲ ನಿಜ ಅನ್ನುವ ಭ್ರಮೆಯಲ್ಲಿ ಅವನನ್ನು ನಂಬಿಸಲು ಮತ್ತೆ ಮತ್ತೆ ಪ್ರಯತ್ನಿಸುತ್ತಿದ್ದೆ. ಮನಸ್ಸಿನ ಆಳದಲ್ಲಿ ಬೇರೂರಿದ್ದ ಬಯಕೆಗಳನ್ನು ಅವನಲ್ಲಿ ಮಾತ್ರ ಹಂಚಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೆ. ದಾರಿ ಎಷ್ಟೇ ಸಾಗಿದರೂ ಕಥೆ ಮಾತ್ರ ಮುಗಿಯುತ್ತಿರಲಿಲ್ಲ. ಅವನಲ್ಲಿ ಹೇಳಿಕೊಳ್ಳಲು ಭಯ, ನಾಚಿಕೆ ಮತ್ತು ಸಂಕೋಚಗಳು ನನಗಿರಲಿಲ್ಲ. ಅವನಲ್ಲಿ ಆತ್ಮೀಯತೆ ಇತ್ತು. ಪ್ರತಿದಿನ ಮಲಗುವಾಗ ನನ್ನ ಕನಸಿನ ಕತೆಯನ್ನು ನೆನೆಯುತ್ತಿದ್ದೆ. ಆ ದಿನದ ಕನಸಿನಲ್ಲಿ ಕತೆ ಮುಂದುವರೆಯುತ್ತಿತ್ತು. ಅಲ್ಲಿ ನಾನು ಮತ್ತೆ ಮತ್ತೆ ಹೆಣ್ಣಾದ, ಹೆಂಡತಿಯಾದ, ಪ್ರೇಯಸಿಯಾದ ಪಾತ್ರಗಳು ನನ್ನ ಕಣ್ಣ ಮುಂದೆ ಬರುತ್ತಿದ್ದವು. ಇವೆಲ್ಲಾ ಕನಸಲ್ಲ, ನಿಜ… ನಿಜ… ನಿಜ…

ಸ್ನೇಹಿತ ಕೆಲವೊಮ್ಮೆ “ನಿನ್ನದು ಬರೀ ಕನಸು” ಅನ್ನುವಾಗ ಅದನ್ನು ಒಪ್ಪಿಕೊಳ್ಳುವ ಮನಸ್ಸು ಇರುತ್ತಿರಲಿಲ್ಲ. ಕೆಲವೊಮ್ಮೆ ಅವನು ನಿಂದಿಸುತ್ತಿದ್ದ. ಕೆಲವು ದಿನ ಬೇಸರದಿಂದ ದೂರವಾಗುತ್ತಿದ್ದ. ನಂತರ ಮತ್ತೆ ಒಂದಾಗಿ ಬರುವಾಗ ಇದೇ ಕಥೆ.

ಅಮ್ಮ ಕೂಲಿಯಿಂದ ಬಂದ ಹಣದಿಂದ ಒಂದು ಜೊತೆ ಚಪ್ಪಲಿಯನ್ನು ತಂದುಕೊಟ್ಟರು. ಆದರೆ ನನಗೆ ಅದು ಇಷ್ಟವಾಗಲಿಲ್ಲ. ನನಗೆ ಬೇಕಾಗಿದ್ದದ್ದು ಕಾಲಿನ ಹಿಮ್ಮಡಿಯನ್ನು ಎತ್ತಿ ಸ್ವಲ್ಪ ಮೆಲ್ಲನೆ ವೈಯ್ಯಾರದಿಂದ ಮೆದು ಹೆಜ್ಜೆಹಾಕುವಂತೆ ಮಾಡುವ ಎತ್ತರದ ಚಪ್ಪಲಿ. ಆದರೆ ಅದನ್ನು ನಿರಾಕರಿಸಲಾಗದೆ ಕಾಲಿನ ಆಶ್ರಯಕ್ಕಾಗಿ ಪಡೆದುಕೊಂಡೆ.

ನಮ್ಮ ಊರಿನ ಬಸ್ ನಿಲ್ದಾಣದ ಮುಂದೆ ಮಾರನ ಅಂಗಡಿ ಇತ್ತು. ನಮ್ಮ ಊರಿನ ಬಾಷೆಯಲ್ಲಿ ಚಪ್ಪಲಿ ಹೊಲೆಯುವ ಜಾಡಮಾಲಿಯ ಅಂಗಡಿ. ಅವನು ಹಳೆಯ ಕಿತ್ತಿರುವ ಚಪ್ಪಲಿಗಳ ರಾಸಿಯನ್ನು ಹಾಕಿಕೊಂಡು ಇರುತ್ತಿದ್ದ. ನಾನು ಒಮ್ಮೊಮ್ಮೆ ಅವನ ಅಂಗಡಿಯ ಬಳಿ ನಿಂತು, ಅಲ್ಲಿದ್ದ ಎತ್ತರದ ಹಿಮ್ಮಡಿಯ ಚಪ್ಪಲಿಯನ್ನು ನೋಡುತ್ತಿದ್ದೆ. ನಾನು ಯಾವಾಗ ಇದನ್ನು ಧರಿಸುವುದು ಎಂದು ಯೋಚಿಸುತ್ತಿದ್ದೆ. ಅವನ ಬಳಿ ಕಿತ್ತು ಬಿದ್ದಿದ್ದ ಹೆಂಗಸರ ದಪ್ಪ ಹಿಮ್ಮಡಿಯ ಚಪ್ಪಲಿಯು ನನ್ನ ಕಾಲಿಗೆ ಸರಿ ಆಗಬಹುದಾ ಎಂದು ಕೇಳುತ್ತಿದ್ದೆ. ಯಾರು ಇಲ್ಲದಾಗ ನನ್ನ ಕಾಲನ್ನು ಅದರಲ್ಲಿ ಇಟ್ಟು ನೋಡುತ್ತಿದ್ದೆ. ಅವನು “ಇಲ್ಲಪ್ಪ, ಇದು ಹುಡುಗಿಯರ ಚಪ್ಪಲಿ. ನಾನು ಚೆನ್ನಾಗಿರುವುದನ್ನು ನಿನಗೆ ಹೊಲಿದು ಕೊಡ್ತೀನಿ” ಎಂದ. ನಾನು ಅವನ ಮಾತನ್ನು ಕೇಳದೆ ಅದರ ಕಡೆಯೇ ನನಗರಿವಿಲ್ಲದೇ ನೋಡುತ್ತಿದ್ದೆ. ಆ ಕೆಂಪು ಬಣ್ಣದ ಚಪ್ಪಲಿಯನ್ನು ನೋಡಲು ಅದೆಷ್ಟು ದಿನ ಅವನಲ್ಲಿ ಹೋಗಿದ್ದೆನೋ ನನಗೆ ಗೊತ್ತಿಲ್ಲ. ಕಡೆಗೊಮ್ಮೆ ನಾನು “ಮಾರ, ಇದರ ಬೆಲೆ ಎಷ್ಟು?” ಎಂದು ಕೇಳಿಯೇ ಬಿಟ್ಟೆ. “೧೨ ರೂಪಾಯಿ” ಎಂದ. ಆದರೆ ನನ್ನ ಬಳಿ ಅಷ್ಟೊಂದು ಹಣ ಇಲ್ಲ. ಆದರೂ ಅದನ್ನು ಹೇಗೆ ಸಂಪಾದನೆ ಮಾಡಿ ತೆಗೆದುಕೊಳ್ಳಬಹುದು ಎಂದು ಬಸ್‌ನಿಲ್ದಾಣಕ್ಕೆ ಬಂದಾಗಲೆಲ್ಲ ಅದರ ಕಡೆಯೇ ನೋಡುತ್ತಿದ್ದೆ. ಕೆಲವು ದಿನಗಳಾದರೂ ಸಹ ನನ್ನ ಬಳಿಯಲ್ಲಿ ೧೨ ರೂಪಾಯಿ ಸೇರಿಸಲು ಆಗಲಿಲ್ಲ. ಹೇಗಾದರೂ ಮಾಡಿ ಆ ಚಪ್ಪಲಿಯನ್ನು ನಾನು ಹಾಕಿಕೊಳ್ಳಬೇಕೆಂದು ತೀರ್ಮಾನಿಸಿದೆ. ಒಂದು ರಾತ್ರಿ ೯ ಗಂಟೆಯ ಸಮಯದಲ್ಲಿ ಬಸ್‌ನಿಲ್ದಾಣದ ಕಡೆ ಬಂದೆ. ಮಾರ ಎಲ್ಲಾ ಚಪ್ಪಲಿಯನ್ನು ಗೋಣಿಚೀಲದಿಂದ ಸುತ್ತಿ ಮೂಲೆಯಲ್ಲಿ ಇಟ್ಟಿದ್ದನು. ನಾನು ಯಾರಿಗೂ ತಿಳಿಯದಂತೆ ಚೀಲವನ್ನು ಬಿಚ್ಚಿ, ನನ್ನ ಇಷ್ಟದ ಕೆಂಪು ಚಪ್ಪಲಿಯನ್ನು ತೆಗೆದುಕೊಂಡು ಅಲ್ಲಿಂದ ಬಹುಬೇಗನೆ ಹೊರಟೆ. ಆಟದ ಮೈದಾನಕ್ಕೆ ಬಂದು ಯಾರಿಗೂ ಗೊತ್ತಾಗದ ಹಾಗೆ ಗಿಡಗಳ ಸಂದಿಯಲ್ಲಿ ಚಪ್ಪಲಿಗಳನ್ನು ಬಚ್ಚಿಟ್ಟು, ಮನೆಗೆ ಹೋಗಿ ಮಲಗಿಕೊಂಡೆ. ತುಂಬಾ ಭಯವಾಗಿತ್ತು. ಯಾರಾದರೂ ನೋಡಿ “ಚಪ್ಪಲಿ ಕಳ್ಳತನ ಮಾಡ್ತೀಯಾ?” ಎಂದು ಹಿಡಿದುಬಿಟ್ಟರೆ ಏನು ಮಾಡುವುದು ಎಂಬ ಭಯದಲ್ಲಿ ಅಂದಿನ ರಾತ್ರಿಯನ್ನು ಕಳೆದೆ. ಆದರೂ ಅವನ್ನು ನಾಳೆ ಎಲ್ಲಿ ಹಾಕಿಕೊಳ್ಳುವುದು, ಆಗ ನನ್ನ ಕಾಲುಗಳು ಹೇಗಿರುತ್ತವೆ ಎಂಬ ಕಲ್ಪನೆಯಲ್ಲಿಯೇ ನಿದ್ದೆ ಮಾಡಿದೆ.

ಬೆಳಿಗ್ಗೆ ಅವನ್ನು ಯಾರಿಗೂ ಕಾಣದ ಹಾಗೆ ಮನೆಗೆ ತಂದು, ಹಿತ್ತಲಿನಲ್ಲಿ ನನ್ನ ಕಾಲಿಗೆ ಖುಷಿಯಲ್ಲಿ ಹಾಕಿಕೊಂಡೆ. ಆದರೆ ನನ್ನ ಕಾಲು ಸ್ವಲ್ಪ ದಪ್ಪ ಇದ್ದ ಕಾರಣ ಸರಿಹೊಂದಲಿಲ್ಲ. ನಿರಾಸೆಯಿಂದ ಅದೇ ದಿನ ರಾತ್ರಿ ಯಾರಿಗೊ ತಿಳಿಯದ ಹಾಗೇ ಅಲ್ಲಿಯೇ ಇಟ್ಟು ಬಂದೆ. ಆದರೆ “ಎಂದಾದರೂ ಒಂದು ದಿನ ನಾನು ನನ್ನ ಇಷ್ಟದ ಚಪ್ಪಲಿಯನ್ನು ಹಾಕಿಕೊಳ್ಳುವೆ” ಎಂದು ಮನ್ನಸ್ಸಿನಲ್ಲಿಯೇ ಛಲವನ್ನು ತಂದುಕೊಂಡೆ.

ನನ್ನ ಬೇಸಿಗೆಯ ರಜೆಯ ಸಂಧರ್ಭದಲ್ಲಿ ಅಮ್ಮನ ಜೊತೆ ಗದ್ದೆಯ ಕಳೆಯನ್ನು ಕೀಳಲು ಹೋಗುತ್ತಿದ್ದೆ. ಅಲ್ಲಿ ಬೆಳಿಗ್ಗೆ ೮ ರಿಂದ ಮಧ್ಯಾಹ್ನ ೧೨ ರ ತನಕ ದುಡಿದರೆ, ೬ ರೂಪಾಯಿಗಳು ಕೂಲಿಯಾಗಿ ಸಿಗುತ್ತಿತ್ತು. ಮೊದಲನೆಯ ದಿನ ಅಮ್ಮ “ಈ ದಿನ ನನ್ನ ಮಗನಿಗೆ ಕಾಲು ತುಂಬಾ ನೋವಾಗಿರಬೇಕು” ಎಂದು ಪದೇ ಪದೇ ಹೇಳುತ್ತಿದ್ದರು. ಗದ್ದೆಯ ಮಾಲೀಕ ನಮಗೆಲ್ಲಾ ೨ ರೂಪಾಯಿಯ ಹೊಸ ನೋಟುಗಳನ್ನು ನೀಡಿದ್ದ. ಇದನ್ನು ನೋಡಿದ ನನಗೆ ತುಂಬಾ ಸಂತೋಷವಾಗಿತ್ತು. ಆ ರೀತಿ ರಜೆಯ ದಿನದಲ್ಲಿ ಕೂಲಿ ಮಾಡಿ, ೨೫೦ ರೂಪಾಯಿಗಳನ್ನು ಸಂಪಾದನೆ ಮಾಡಿದ್ದೆ. ಅದರಿಂದ ಒಮ್ಮೆ ಮೈಸೊರಿಗೆ ಹೋಗಿ, ರಸ್ತೆಯಲ್ಲಿ ಟಿಬೇಟಿಯನ್ನರು ದೊಡ್ಡಗಡಿಯಾರದ ಪಕ್ಕದಲ್ಲಿ ಮಾರುವ ಜಾಗದಲ್ಲಿ ನನಗೆ ಇಷ್ಟವಾದ ಕೆಂಪು ಬಣ್ಣದ್ದ ಸ್ಪೆಟರ್ ಹಾಗೊ ಎತ್ತರದ ಚಪ್ಪಲಿಯನ್ನು ತೆಗೆದುಕೊಂಡು ಬಂದೆ. ಮೊದಲು ಅದನ್ನು ಧರಿಸಿದ ತಕ್ಷಣ ನನ್ನ ಮನಸ್ಸಿಗೆ “ನಾನು ಧರಿಸಿದೆ” ಎಂಬ ಆನಂದದಲ್ಲಿ ತೇಲಿ ಹೋದೆ. ಇದನ್ನು ಹೇಗೆಲ್ಲಾ ಹಾಕಿಕೊಂಡು ನಡೆಯಬಹುದೆಂದು ಆಲೋಚಿಸಿದೆ. ನನಗಿಷ್ಟ ಬಂದಂತೆ ಮೈಸೂರಿನಲ್ಲಿ ನೆಡೆಯುತ್ತಾ, ನನ್ನ ಚಪ್ಪಲಿ ಹಾಕಿ ನಡೆಯುವ ಆಸೆಗಳನ್ನು ಅನುಭವಿಸಿದೆ. ಅದೇ ಖುಷಿಯಲ್ಲಿ ಮಾಲಾಶ್ರೀಯವರ ‘ನಂಜುಂಡಿ ಕಲ್ಯಾಣ’ ಸಿನಿಮಾವನ್ನು ನೋಡಲು ಹೋದೆ. ಸಿನಿಮಾ ಮುಗಿದು ಹೊರಬರಲು ನನ್ನ ಕಾಲಿಗೆ ಚಪ್ಪಲಿಯನ್ನು ಹಾಕಿದಾಗ ನೋವಿನ ಅನುಭವವಾಯಿತು. ತಕ್ಷಣ ಕಾಲನ್ನು ನೋಡಿಕೊಂಡರೆ ನನ್ನ ಬಲಗಾಲಿನಲ್ಲಿ ಹೊಸ ಚಪ್ಪಲಿಯನ್ನು ಹಾಕಿದ ಕಾರಣ ವ್ರಣವಾಗಿ ಗಾಯವಾಗಿತ್ತು. ನೋವಿನಲ್ಲಿಯೇ ಮನೆಗೆ ಹೋದೆ. ನನ್ನ ಚಪ್ಪಲಿಯನ್ನು ನೋಡಿ ಕೆಲವರು “ಇದೇನಿದು, ಈ ರೀತಿ ಇದೆ. ನಿನಗೆ ಸರಿ ಇಲ್ಲ” ಎಂದರು. ಆದರೆ ಯಾರು ಏನಾದರೂ ಹೇಳಲಿ, ನನಗೆ ಮಾತ್ರ ಇದೇ ಬೇಕು ಎಂದು ಅದನ್ನೆ ಕೆಲವು ದಿನಗಳು ಬಳಸಿದೆ. ಕಿತ್ತುಹೋದ ಮೆಲೆ ಅದನ್ನು ಬಿಸಾಡಿದೆ. ಅದನ್ನು ಧರಿಸುವಾಗ ನಾನು ಸ್ವಲ್ಪ ಎತ್ತರವಾಗಿ ಕಾಣುತ್ತಿದ್ದೆ.

ನಂತರ ಕೆಲವು ದಿನಗಳಲ್ಲಿ ನನ್ನ ಅವಶ್ಯಕತೆಗೆ ಬೇಕಾದ ಹಣವನ್ನು ಕೂಲಿ ಕೆಲಸದಿಂದ ದುಡಿಯುತ್ತಿದ್ದೆ. ಅದರಲ್ಲಿ ಮುಖಕ್ಕೆ ಸ್ನೊ, ಪೌಡರ್‌ಗಳನ್ನು ಖರೀದಿಸುತ್ತಿದ್ದೆ.

‍ಲೇಖಕರು Avadhi

September 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: