ಚಂದ್ರಿಕಾ ಹೆಗಡೆ
ಬಹಳಷ್ಟು ಸಲ
ಕನಸೊಂದು ಬೀಳುತ್ತದೆಯಂತೆ ಅಮ್ಮನಿಗೆ
ನೆಲ ಬಿಟ್ಟು ಗಾಳಿಯಲಿ ನಡೆದಂತೆ
ಒಮ್ಮೊಮ್ಮೆ ಹಾರಾಡಿದಂತೆ…
ಹೊಸಿಲ ದಾಟಿ ಹೊರ ನಡೆದದ್ದೇ ಕಡಿಮೆ ಅವಳು
ಬಹಳಷ್ಟು ಸಲ
ಕನಸೊಂದು ಬೀಳುತ್ತದೆಯಂತೆ ಅವಳಿಗೆ
ಹೆದ್ದಾರಿಯಲಿ ಗುಮ್ಮೆಂ…ದು
ಕಾರು ಬೈಕುಗಳ ಓಡಿಸಿದಂತೆ…
ಸೈಕಲ್ ತುಳಿಯಲೂ ಬರುವುದಿಲ್ಲ ಅವಳಿಗೆ
ಇತ್ತೀಚೆಗೆ ಬೀಳುತ್ತಿದೆಯಂತೆ ಕನಸೊಂದು
ಕಂಪ್ಯೂಟರ್ ಮುಂದೆ ಕುಳಿತು
ಟಪಟಪನೆ ಟೈಪ್ ಮಾಡಿದಂತೆ
ಫೇಸ್ ಬುಕ್ಕು ವಾಟ್ಸಾಪಿನಲಿ ತನ್ನ ಮುಖವನು ತಾನೇ ಹುಡುಕಿದಂತೆ…
ಯಾರೂ ಕಲಿಸಿಕೊಡುವವರಿಲ್ಲ ಅವಳಿಗೆ

ಮತ್ತೆ ಮತ್ತೆ ಬೀಳುತ್ತದೆಯಂತೆ
ಕನಸೊಂದು ಅಮ್ಮನಿಗೆ
ಅಕ್ಷರಗಳ ಹಿಡಿದು
ಸ್ಕೂಲು ಕಾಲೇಜಿಗೆ ಹೋದಂತೆ
ಪರೀಕ್ಷೆಗಳ ಪಾಸಾದಂತೆ
ಅವಳು ಕಲಿತಿದ್ದು ಬರೀ ಮೂರನೆಯ ಇಯತ್ತೆ
ಇಂದಿಗೂ ಕಾಡುತ್ತಲೇ ಇದೆಯಂತೆ
ಕನಸೊಂದು ಅಮ್ಮನಿಗೆ
ತಾನೂ ದುಡಿದು ನಾಲ್ಕು ಕಾಸು ಸಂಪಾದಿಸಿದಂತೆ…
ಪೈಸಾ ಬೇಕಾದರೂ ಗಂಡನನ್ನು ಕೇಳಬೇಕು
ಅವಳಿಗೆ ಯಾರೂ ಕೊಡುವುದಿಲ್ಲ ಸಂಬಳ
ಆಕಾಶದ ತುಂಬಾ ಎಳೆ ಹಕ್ಕಿಗಳು
ರೆಕ್ಕೆ ಬಿಚ್ಚಿ ಹಾರುವುದನ್ನು ಕಾಣುತ್ತಿದ್ದಾಳೆ ಅಮ್ಮ
ತನ್ನ ಕನಸುಗಳು ಅಲ್ಲಿ ನನಸಾದ ಸಂಭ್ರಮದಲ್ಲಿ
ಹರಸುತ್ತಾಳೆ…
‘ವಿಸ್ತಾರವಿದೆ ಮುಂದಿನ ದಾರಿ
ರೆಕ್ಕೆಗಳೆಂದಿಗೂ ಸೋಲದಿರಲಿ .






ಚಂದದ ಕವಿತೆ