ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಿಕಾ ಹೆಗಡೆ ಅವರ ಕವಿತೆ – ಕೌದಿ ಮತ್ತು ಕವಿತೆ…

ಚಂದ್ರಿಕಾ ಹೆಗಡೆ

ಎಷ್ಟೋ ದಿನಗಳಿಂದ ಒಟ್ಟು ಮಾಡಿಕೊಂಡಿರುವ
ಬಣ್ಣಬಣ್ಣದ ಬಟ್ಟೆ ಚೂರುಗಳು
ಜೊತೆಗಷ್ಟು ಗಟ್ಟಿದಾರ …. ಸೂಜಿ
ಪುರಸೊತ್ತಾದಾಗ ಹೊಲೆಯಬೇಕಿದೆ ಒಂದು ಕೌದಿ.
ಗಾಢ ವರ್ಣದ ಬಟ್ಟೆಯ ಒಳಗೆ
ಮಾಸಲು ಬಣ್ಣಗಳ ಹುದುಗಿಸಿ
ಹರಕು ಕಾಣದಂತೆ ಮೇಲೆ ಹೊಲಿಗೆಗಳ ಜೋಡಿಸಿ
ಸುತ್ತ ನೀಟಾಗಿ ಅಂಚುಕಟ್ಟಿ
ಒಟ್ಟಿನಲ್ಲಿ ಚಂದ ಕಾಣಬೇಕು ಕೌದಿ.

ಒಂದಷ್ಟು ಕಾಡುವ ಭಾವಗಳು
ನರಳುವ ಅಕ್ಷರಗಳು
ನಿಟ್ಟುಸಿರಿಡುವ ಶಬ್ದಗಳು
ಆರ್ದ್ರ ಸಾಲುಗಳು
ಕಾಯುತ್ತಲೇ ಇವೆ ಕವಿತೆಯಾಗಲು
ಒತ್ತಿ ತುಂಬಿ ಬಾಗಿಲ ಜಡಿದರೂ
ಮತ್ತೆ ಮತ್ತೆ ಹೊರಗಿಣುಕುವಂತೆ.

ಕೌದಿ ಹೊಲೆಯಲೋ
ಕವಿತೆ ಬರೆಯಲೋ !

ನನ್ನನ್ನು ಹೊಲಿ , ಬೆಚ್ಚಗೆ ಹೊಚ್ಚುತ್ತೇನೆ
ಹೇಳಿತು ಕೌದಿ
ನನ್ನನ್ನು ಬರಿ, ಹೊಚ್ಚಿ ಮುಚ್ಚಿಟ್ಟದ್ದನ್ನು ತೆರೆಯುತ್ತೇನೆ
ಕಣ್ಣು ಮಿಟುಕಿಸಿತು ಕವಿತೆ.

ರಾತ್ರಿ ನಿದ್ದೆಗೆ ಜಾರುವ ಹೊತ್ತಲ್ಲೂ ಕವಿತೆ ಎಚ್ಚರವಿತ್ತು
ತಟ್ಟಿ ಎಬ್ಬಿಸಿ ಮೆಲ್ಲನೆ ಪಿಸುಗುಟ್ಟಿತು’ ನಾನೀಗ ಬರಲೇ ?,
‘ಬೇಡ ಸುಮ್ಮನೆ ಮಲಗು’ ಬೆಚ್ಚಗೆ ಹೊಚ್ಚಿಕೊಳ್ಳುತ್ತಾ ಗದರಿದೆ.
ಕೌದಿಯೊಳಗೆ ಕಣ್ಣುಮುಚ್ಚಿತು ಕವಿತೆ.

ಕನಸಿನಲ್ಲೂ ಕಾಡುತ್ತಾ ಗೊಣಗುತ್ತಿತ್ತು ಕವಿತೆ
‘ಎಷ್ಟು ಕಾಲ ಹೀಗೆ ಹೊಚ್ಚಿ ಮುಚ್ಚಿಡುತ್ತಿ ನನ್ನ
ಒಳಗೇ
ಧಗೆ ತಡೆಯಲಾರದೇ
ಹಚ್ಚಡ ಬಿಸುಟು ಬೆವರುವಾಗೊಮ್ಮೆ
ಹೊರ ಬೀಳುವುದಿಲ್ಲವೇ ನಾನು’ !

‍ಲೇಖಕರು avadhi

27 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading