ಚಂದ್ರಶೇಖರ ಹೆಗಡೆ
ಹಾಡಾಗಬಲ್ಲೆಯಾ ಬತ್ತಿಹೋಗಿ ಬರಿದಾಗಿರುವ ಬಾನು
ಹುಡುಕುವುದೆಲ್ಲಿ ತುಂಬಿಕೊಂಡಿರುವ ಭಾವಮೋಡ
ಸದ್ದಿಲ್ಲ ಪ್ರತಿಭೆಯ ಗುಡುಗು ಹೊಳೆದಿಲ್ಲ ತಿಳಿವಿನ ಮಿಂಚು
ಅಳಿದಿಲ್ಲ ಬೆಂದು ಕಾಯುವ ಅರ್ದ್ರ ಎದೆಯ ಗೂಡು
ಕಾಲವೊಂದಿದೆ ನಿನಗಾಗಿ ವಿಶಾಖ ಸುಮ್ಮನೆ ಬಿಡದೆ ಕಾಡು
ಬೆಳ್ಳಿಗೆರೆಗಳೇ ಸಾಕು ಹೊರಡುವೆ ಜಾಡು ಹಿಡಿದು
ಬಿಡೆನು ತಿಳಿತಾರೆಯ ಸೆರಗು; ಕುಣಿವೆ ಎನ್ನೆದೆಯೊಳಗೆ ಮುಡಿದು
ದಕ್ಕಿದ ಬೆಳದಿಂಗಳ ಮೊಗೆ ಮೊಗೆದು ಕುಡಿದು
ಹರಿದಾಡಿ ಬೆಳಕಿಗಾಗಿ ಪದಗಳ ದುಡಿದು
ಸಂಭ್ರಮಿಸುವೆ ಸಾಕೆಂದು ಹಾಯಾಗಿ ಮಡಿದು

ಏನಿದೇನಿದು ಬಯಲಾಗುತಿದೆ ಭಾವಾಂತರಂಗದೋಟ
ಬಂದೆರಗಿ ಗುಟುಕು ನೀಡುವ ಬೆಳ್ಳಕ್ಕಿಗಳ ಕೂಟ
ಧನ್ಯನಾದೆ ಕಂಡು ಬಗೆಬಗೆಯ ಪದಾರ್ಥಗಳ ತೋಟ
ನಾನೀಗ ಭಾವಬಿಂದುಗಳ ಹೆಕ್ಕಿಹೀರುವೆ ಬಲು ದಾಹದ ಕೀಟ
ದುಂಬಿಗಳಂತೆ ನನಗಿಲ್ಲ ಶಿರದ ಮೇಲೆ ಮದದ ಮುಕುಟ
ದಿಗಂತದೊಳಗೆ ದೂರ ತೀರದ ಆಲಯದ ಪೀಠ
ತೀರದು ಅಲಂಕರಿಸಿದರೆ ಒಮ್ಮೆ ಹೃದಯದ ಹಠ
ಸ್ಥಾವರವಾಗಬೇಕಿಲ್ಲ ಜ್ಯೋತಿಯಿಂದಲೇ ಕಟ್ಟಿದ ಮಠ
ಸದಾ ಹರಿದು ಬೀರುವ ಬೆಳಕು ಮರೆಯಲಾಗದ ಪಾಠ
ಯಜ್ಞಕುಂಡವಾದ ಹೃದಯಕೆ ಅರ್ಪಿಸುವುದೆಲ್ಲವೂ ರಸ ಗಂಧದ ಕಾಷ್ಠ
ಬೆಚ್ಚಿಬಿದ್ದೆ ಕಂಡು ಬರಿದೆಂದು ತೋರಿದ ಬಾನ ಚೆಲುವಿನ ಮುಖ
ಅನುಭಾವವದು ಇಲ್ಲ ಇಲ್ಲ ಏನಿಲ್ಲಗಳ ಪರಮಸುಖ
ಖಾಲಿಯೆದೆಯೊಳಗೂ ಉಸಿರುಂಟು ಸಾಕು ಚೈತನ್ಯದ ದುಃಖ
ಇರದುದರೆಡೆಗಿನ ಬದುಕೇ ಬಂಧುವಾಯಿತು ಬಾ ವಿಶಾಖ
ಬಿಡಿಸಲಾರೆ ಗುಪ್ತಗಾಮಿನಿ ನಿನ್ನೊಳಗೆ ನಾಡಿಮಿಡಿತದ ಆಲೇಖ






0 Comments