
ಚಂದ್ರಪ್ರಭ ಕಠಾರಿ
ಕತೆಗಳನ್ನು ಕೈ ಹಿಡಿದು ನಡೆಸಿದ ಸಹೃದಯ, ಮಹಾನುಭಾವ ಶ್ರೀನಿವಾಸ ವೈದ್ಯ.
ನನಗೆ ಶ್ರೀನಿವಾಸ ವೈದ್ಯರ ಪರಿಚಯವಾಗಿದ್ದು ಬಹಳ ಆಕಸ್ಮಿಕ. ೨೦೧೨ರ ಮಾತು. ನನ್ನ ಮೊದಲ ಕಥಾಸಂಕಲನ ‘ಕಠಾರಿ ಕತೆಗಳು’ ಪುಸ್ತಕಕ್ಕೆ ಮುನ್ನುಡಿಗಾಗಿ ಸರಿಸುಮಾರು ಹದಿನೈದು ಸಾಹಿತಿಗಳಲ್ಲಿ ಕೇಳಿಕೊಂಡು, ಯಾರೂ ಮುನ್ನುಡಿ ಬರೆದು ಕೊಡಲು ತಯಾರಿರಲಿಲ್ಲ. ಮುನ್ನುಡಿ ಯಾಕೆ ಬೇಕು, ಹಾಗೆ ಪ್ರಕಟಿಸು ಎಂದು ಕೆಲ ಗೆಳೆಯರು ಸಲಹೆ ಇತ್ತಾದರೂ, ಮುನ್ನುಡಿಯಿಂದ ಕತೆಗಳ ಬಗ್ಗೆ ನಾಲ್ಕು ಮಾತು ಅಭಿಪ್ರಾಯ ಸಿಗುತ್ತದೆ ಎಂಬ ಆಸೆ ನನ್ನದಾಗಿತ್ತು. ಈಗ ಮತ್ಯಾರಲ್ಲಿ ಕೇಳಿಕೊಳ್ಳುವುದೆಂದು ಹೈರಾಣಾಗಿ ಕೂತವನಿಗೆ, ವೈದ್ಯರ ಮನೆಯ ಹತ್ತಿರ ಇರುವ ನನ್ನ ಸಂಬಂಧಿಕರೊಬ್ಬರು ಅವರಲ್ಲಿ ಒಮ್ಮೆ ಕೇಳಿಕೊಳ್ಳಲು ಸಲಹೆ ಇತ್ತರು. ಕೇಂದ್ರ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದ ಶ್ರೀನಿವಾಸ ವೈದ್ಯರಂತ ಹಿರಿಯರಲ್ಲಿ ಕೇಳಬಹುದೇ ಎಂಬ ಅಳುಕಿನಿಂದಲೇ ಅವರ ಮನೆಗೆ ಹೋದೆ.
ಬಾಗಿಲು ಬಡಿದಾಗ ಅವರ ಶ್ರೀಮತಿಯವರು ಕುಳ್ಳಿರಲು ಹೇಳಿ ಹೊರಟರು. ಮಹಡಿ ಇಳಿದು ಬಂದ ವೈದ್ಯರಲ್ಲಿ ಹಸ್ತಪ್ರತಿಯನ್ನಿಟ್ಟು ಮುನ್ನುಡಿಗಾಗಿ ಕೇಳಿಕೊಂಡೆ. ಅವರು ಬಹಳ ಅಕ್ಕರೆಯಿಂದ ನನ್ನ ಬಗ್ಗೆ ವಿಚಾರಿಸಿದರು. ವೃತ್ತಿಯಲ್ಲಿ ನಾನು ಸಿವಿಲ್ ಇಂಜಿನಿಯರ್ ಅಂದಾಗ ಅವರು ಕುತೂಹಲಗೊಂಡರು. ಅವರ ಮುಖವರಳಿದ್ದನ್ನು ನೋಡಿದ ನನಗೆ ಇನ್ನು ಮುನ್ನುಡಿ ಗ್ಯಾರಂಟಿ ಸಿಗುತ್ತದೆ ಎನಿಸಿತು. ಆದರೆ, ಹೊರಟು ಮುಂಬಾಗಿಲಿನ ಬಳಿ ಬಂದಾಗ “ಮತ್ತೆ ಮನೆಗೆ ಬರುವ ತೊಂದರೆ ತಗೋಬೇಡಿ. ನಾನೇ ಫೋನು ಮಾಡುತ್ತೇನೆ” ಎಂದು ಬಾಂಬು ಸಿಡಿಸಿದರು.

ಒಂದು ವಾರ ಕಳೆದಿರಬಹುದು. ಮನೆಗೆ ಬರಲು ವೈದ್ಯರಿಂದ ಫೋನು ಕರೆ ಬಂತು. ಮುದುಡಿ ಕೂತವನ ಹೆಗಲಿಗೆ ಕೈ ಹಾಕಿ “ನಾನು, ನೀನು ಒಂದೇ ದೋಣಿಯ ಪಯಣಿಗರು” ಎಂದಾಗ ಎದೆ ತುಂಬಿ ಬಂತು. “ಕನ್ನಡ ಸಾಹಿತ್ಯದಲ್ಲಿ ಮೇಷ್ಟ್ರುಗಳೇ ಬರೆದದ್ದು ಹೆಚ್ಚು. ನಾನು, ನೀನು ಸಾಹಿತ್ಯ ವಿದ್ಯಾರ್ಥಿಗಳಲ್ಲ. ನೀನು, ನಿನ್ನ ವೃತ್ತಿಗೆ ಸಂಬಂಧಿಸಿದ ಕತೆಗಳನ್ನು ಬರೆದಿದ್ದೀಯ. ಇದು ಕನ್ನಡಕ್ಕೆ ಹೊಸತು. ಕನ್ನಡ ಸಾಹಿತ್ಯ ಇಂಥ ಅನುಭವಗಳಿಂದ ವಿಸ್ತಾರಗೊಳ್ಳಬೇಕು” ಎಂದರು. ಅವರಿಗೆ ನನ್ನ ಕತೆಗಳು ಇಷ್ಟವಾಗಲು ಮತ್ತೊಂದು ಕಾರಣ – ಬೆಂಗಳೂರು ನಗರ, ಅದರಲ್ಲೂ ಗಾಂಧಿನಗರದ ಸುತ್ತಮುತ್ತಲಿನ ಪರಿಸರದಲ್ಲಿ ಕತೆಗಳು ರೂಪಗೊಂಡದ್ದು.
ಧಾರವಾಡದಿಂದ ಬಂದು ಇಲ್ಲೇ ಉಳಿದು ಬೆಂಗಳೂರಿಗರಾದ ಅವರಿಗೆ ಎಪ್ಪತ್ತು ಎಂಭತ್ತು ದಶಕದ ಪ್ರಶಾಂತ ಬೆಂಗಳೂರು, ಕಾಲ ಕಳೆದಂತೆ ಅದು ಕಾಂಕ್ರೀಟ್ ಕಾಡಾದ ಬಗ್ಗೆ, ರಿಯಲ್ ಎಸ್ಟೇಟ್ ಉದ್ಯಮವಾಗಿ ನರಳಿದ ಬಗ್ಗೆ ಅವರಿಗೆ ವಿಷಾದವಿತ್ತು. ಹಾಗಾಗಿ – ಅವರು ಕಂಡ, ಕತೆಗಳಲ್ಲಿ ಬರುವ ಕಾಂಗ್ರೆಸ್ ವಸ್ತುಪ್ರದರ್ಶನ, ಧರ್ಮಾಂಬುದಿ ಕೆರೆಯ ಬಸ್ ನಿಲ್ದಾಣ, ಹಿರಣ್ಣಯ್ಯ ನಾಟಕ ಮಿತ್ರ ಮಂಡಳಿಯನ್ನು ಗುರುತಿಸಿದ್ದರು ಮತ್ತು ಬಹುವಾಗಿ ಮೆಚ್ಚಿಕೊಂಡಿದ್ದರು. ಹಾಗೆ ಅರ್ಥಪೂರ್ಣ ಮುನ್ನುಡಿಯನ್ನು ಬರೆದುಕೊಟ್ಟರು. ಆ ಭೇಟಿ ನನ್ನ ಕಣ್ಮುಂದೆಯೇ ಇದೆ. ಮತ್ತೆ ಹೆಗಲ ಮೇಲೆ ಕೈಹಾಕಿ “ನೋಡು ನಿನಗೆ ಸಂಗೀತ ಪ್ರಾಥಮಿಕ ಪಾಠ ಗೊತ್ತಿಲ್ಲ. ಆದರೆ, ನಿನ್ನ ಶಾರೀರ ಚೆನ್ನಾಗಿದೆ” ಎಂದು, ಮುನ್ನುಡಿಯ ಆಚೆ ಒಂದೊಂದು ಕತೆಗಳ ಬಗ್ಗೆ ಯಾವ ತಿದ್ದುಪಡಿ ಮಾಡಬಹುದಿತ್ತು ಎಂದು ವಿಸ್ತಾರವಾಗಿ ಮನದಟ್ಟು ಮಾಡಿದರು. ಓದಲೇ ಬೇಕಾದ ಒಂದಷ್ಟು ಪುಸ್ತಕಗಳ ಪಟ್ಟಿಯನ್ನು ಕೊಟ್ಟರು. ತಿಂಗಳಾನುಗಟ್ಟಲೆ ಮುನ್ನುಡಿಗಾಗಿ ಅಲೆದು ಭ್ರಮನಿರಸನಗೊಂಡಿದ್ದಕ್ಕೊ, ಗೆಳೆಯನಂತೆ ಶೀನಿವಾಸ ವೈದ್ಯರು ಆತ್ಮೀಯವಾಗಿ ನಡೆದುಕೊಂಡಿದ್ದಕ್ಕೊ ಅವರ ಕಾಲಿಗೆ ನಮಸ್ಕರಿಸಿ ಹೊರ ಬಂದಾಗ ಕಣ್ಣಾಲಿ ತುಂಬಿಕೊಂಡಿತ್ತು.

ಕತೆ ಇಲ್ಲಿಗೆ ಮುಗಿಯಲಿಲ್ಲ. ಮುಂದೆ ಪುಸ್ತಕ ಲೋಕಾರ್ಪಣೆ ಮಾಡಬೇಕೆಂದು ಅಂದುಕೊಂಡಾಗ, ಮತ್ತೆ ಅವರಲ್ಲಿಗೆ ತೆರಳಿ ಕಾರ್ಯಕ್ರಮವನ್ನು ರೂಪಿಸಿಕೊಂಡಿರೆಂದು ದುಂಬಾಲು ಬಿದ್ದೆ. ಅದನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟರು. ಆದರೆ, ಕನ್ನಡದ ಪ್ರಖ್ಯಾತ, ಹಿರಿಯ ಸಾಹಿತಿಯೊಬ್ಬರು ಮೊದಲಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ಒಪ್ಪಿ, ಕೊನೆಯ ಗಳಿಗೆಯಲ್ಲಿ ನಿರಾಕರಿದಾಗ ಏನೂ ತೋಚದೆ ತಲೆ ಮೇಲೆ ಕೈಹೊತ್ತು ಕೂತೆ. ಈಗಾಗಲೇ ಸುಮಾರು ಸರ್ತಿ ಭೇಟಿಯಾದ ಅಲ್ಪ ಸಲಿಗೆಯಿಂದ ಮತ್ತೆ ಶ್ರೀನಿವಾಸವೈದ್ಯರಲ್ಲಿ ತಾವೇ ಅಧ್ಯಕ್ಷರಾಗಿ ಕಾರ್ಯಕ್ರಮ ನಡೆಸಿಕೊಂಡಬೇಕೆಂದು ಕೇಳಿದೆ. ಬಹಳ ಸಂತೋಷದಿಂದ ಒಪ್ಪಿಕೊಂಡರು. ಅಧ್ಯಕ್ಷ ಭಾಷಣ ಮಾಡುವಾಗ, ನನ್ನ ಭೇಟಿಯ ಅನೇಕ ಸಂದರ್ಭಗಳನ್ನು ವಿನೋದಮಯವಾಗಿ ಹೇಳುತ್ತ “ಕಠಾರಿ…ಒಳ್ಳೇ ಎಲ್ ಐಸಿ ಎಜೆಂಟ್ ಇದ್ದ ಹಾಗೆ. ಪ್ರತಿ ಬಾರಿಯು ಹಣ್ಣನ್ನು ಹಿಡಿದುಕೊಂಡು ಬಂದು ಒಂದೊಂದು ಕೆಲಸವನ್ನು ಹಚ್ಚುತ್ತಾನೆ” ಎಂದಾಗ ಇಡೀ ಸಭಾಂಗಣ ಗೊಳ್ಳೆಂದು ನಕ್ಕಿತ್ತು. ತಮ್ಮ ಮಾತಿನ ಕೊನೆಯಲ್ಲಿ “ಇದು ಕಠಾರಿ ಪುಸ್ತಕವಲ್ಲ. ನನ್ನ ಪುಸ್ತಕ” ಎಂದು ಅವರಾಡಿದ ಮಾತು ನನ್ನ ಕಿವಿಯಲ್ಲಿ ಈಗಲೂ ಗುಂಯ್ ಗುಟ್ಟುತ್ತದೆ.
ಈ ಬೆಳಿಗ್ಗೆ ಅವರು ನಮ್ಮನ್ನು ಬಿಟ್ಟು ಹೋದ ಸುದ್ದಿ ತಿಳಿದು ಬಹಳ ನೋವಾಯಿತು. ಹಳೆಯ ನೆನಪುಗಳ ಒಂದೊಂದೇ ಪುಟಗಳು ತೆರೆದುಕೊಂಡವು. ನನ್ನ ಅವರ ಒಡನಾಟ ಅತ್ಯಲ್ಪ ಕಾಲದ್ದೇ ಆದರೂ, ಜೀವನವಿಡಿ ಮರೆಯಲಾಗದ್ದು. ನನ್ನಂತ ಆರಕ್ಕೆ ಏರದ ಮೂರಕ್ಕೆ ಇಳಿಯದ ಲೇಖಕನಲ್ಲಿ ಅವರು ತೋರಿದ ಸಹೃದಯತೆ, ಆತ್ಮೀಯತೆ ಅನನ್ಯವಾದದ್ದು.

ಕೊನೆಯ ಬಾರಿ ಅವರನ್ನು ಕಂಡು ಮಾತಾಡಿಸಿದ್ದು ಗಿರೀಶ್ ಕಾರ್ನಾಡರ ನುಡಿನಮನ ಕಾರ್ಯಕ್ರಮದಲ್ಲಿ. ಮತ್ತೆ ಕೊರೊನಾ ಕಾಲದಲ್ಲಿ ಪುಸ್ತಕಗಳ ಲೋಕಾರ್ಪಣೆಗೊಂಡಾಗ, ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಬೇಕೆಂದು ಕೊಂಡವನು, ಅವರ ವಯಸ್ಸಿನ ಕಾರಣಕ್ಕೆ ವೈರಸ್ಸು ಪಿಡುಗಿಗೆ ಹೆದರಿ ಅವರಲ್ಲಿಗೆ ಹೋಗಿರಲಿಲ್ಲ.
ಹೋಗಿ ಬನ್ನಿ ಸಾರ್…ನನ್ನ ಕತೆಗಳನ್ನು ಕೈ ಹಿಡಿದು ನಡೆಸಿದ ನಿಮ್ಮ ಸಹೃದಯತೆ, ನಿಮ್ಮ ಆತ್ಮೀಯ ಮಾತುಗಳು ಯಾವತ್ತು ಎದೆಯಲ್ಲಿ ಶಾಶ್ವತವಾಗಿ ಉಳಿಯುವುದು.






0 Comments