ಭುವನಾ
ಸುಮ್ಮನೆ ಹನಿಗಳಿವು
ಕನಸ ತೊಳೆಯಲು
ಬೆಳಗು ಮೇಲೊ ಕನಸು ಮೇಲೊಕೆಂಡದ ಮೇಲಾಡುವ ಬೂದಿ
ಬೂದಿಮುಚ್ಚಿದ ಕೆಂಡಗಳ
ಚಂದ್ರಕೋಲಾಟ
ಬೇಲಿಯಿಲ್ಲದ ಮನಸಗಲ
ಮೇರೆಮೀರದ ಕನಸ ಸಜ್ಜಿಕೆಯಲಿ ಕುಣಿದ ಪಾತ್ರಗಳ
ಬಣ್ಣ ತೊಳೆಯಲು
ಸುಮ್ಮನೆ ಹನಿಗಳಿವು
ಸಮಾಂತರತೆ ಮರೆತು
ಹಳಿತಪ್ಪುವ ಎಚ್ಚರಿಕೆಯ
ಗಲಗ ಬರವಣಿಗೆಯ ಅಳಿಸಿ
ತನ್ನೊಳಗೆ ಮುಳುಗಿಸುವ
ಹುನ್ನಾರ ಹೆಣೆದು
ಉದುರುವ ಹನಿಗಳಿವು

ನೆಲದ ಮೋಹ…
ಮೌನ ಜೋತುಬಿದ್ದಿದೆ
ಸುಖದ ಗೋಡೆಯ ತುಂಬ
ಕಣ್ಣಿಲ್ಲದ ಬಾವಲಿಯಂತೆ
ಧ್ವನಿಯ ಸುಳಿವು ನೀಡಲಾರೆ
ಅಸ್ಮಿತೆ ತೋಳ ಚಾಚಿದೆ
ನಿನಗಿಂತ ಬಲವಾಗಿ ಸೆಳೆದಿದೆ
ಹಮ್ಮ ನೆರಳ ತಬ್ಬುವ ಯತ್ನದಲ್ಲಿ
ಅನಂತ ಸೋಲುಗಳಾಗಿವೆ
ಮರಳ ಹೊದಿಕೆ ಮಡಿಚುವ
ಅವಸರದಲ್ಲಿ ಕೊಚ್ಚಿಹೋಗಿವೆ
ಗೀಚಿಸಿಕೊಳ್ಳದ ಸಾಲುಗಳು
ಬಿಡದ ನೆಲದ ಮೋಹ
ಹೆಜ್ಜೆ ನೆರಳು ಬೆಳಕುಗಳೆಲ್ಲ
ನೆಲದ ಪಾಲು





0 Comments