ಮ ಶ್ರೀ ಮುರಳಿ ಕೃಷ್ಣ
ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲಿ ಆಹಾರದ ಸುತ್ತ ಕ್ಷುದ್ರ ರಾಜಕೀಯವನ್ನು ಸೃಷ್ಟಿಸಿರುವುದು ನಮಗೆ ತಿಳಿದ ಸಂಗತಿಯೇ ಆಗಿದೆ. ಆಹಾರದ ವಿಚಾರದಲ್ಲಿ ಗುಂಪು ಘರ್ಷಣೆ, ಲಿಂಚಿಂಗ್, ಪ್ರಾಣಹಾನಿ, ಅಕ್ರಮಣಗಳು ಇತ್ಯಾದಿ ನಡೆದಿವೆ. ಆದರೆ ಆಹಾರಕ್ಕೆ ಸಾಮಾಜಿಕ, ರಾಜಕೀಯ, ಆರ್ಥಿಕ , ಸಾಂಸ್ಕೃತಿಕ ಮತ್ತು ಜಾತೀಯ ಆಯಾಮಗಳು ಇವೆ. ಇದಕ್ಕೆ ಸಂಬಂಧಿಸಿದಂತೆ ಶುದ್ಧ- ಅಶುದ್ಧ, ಉತ್ಕೃಷ್ಟ-ನಿಕೃಷ್ಟ ಎಂದು ವ್ಯಾಖ್ಯಾನಿಸುವವರು ನಮ್ಮ ನಡುವೆ ಇದ್ದಾರೆ. ಇವುಗಳೆಲ್ಲದರ ಮಧ್ಯೆ ಯಾವ ಆಹಾರವನ್ನು ಸೇವಿಸಬೇಕು ಎಂಬುದು ವೈಯಕ್ತಿಕ ಆಯ್ಕೆ ಎಂಬ ಸಾಮಾನ್ಯ ಪ್ರಜ್ಞೆ (ಕಾಮನ್ ಸೆನ್ಸ್) ಹಳ್ಳ ಹಿಡಿದಿರುವುದಂತೂ ನಿಜ!
ʼಕೋಳಿ ಎಸ್ರು ʼ (90 ನಿಮಿಷಗಳು) ಎಂಬ ಕನ್ನಡ ಸಿನಿಮಾದಲ್ಲಿ ಮಾಂಸಾಹಾರದ ಖಾದ್ಯವೊಂದರ ಸುತ್ತ ಕಥೆಯನ್ನು ಹೆಣೆಯಲ್ಪಟ್ಟಿದ್ದು, ಅದು ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ, ಕೆಲವು ಪ್ರಶಸ್ತಿಗಳನ್ನು ಪಡೆದಿದೆ; ವೀಕ್ಷಕರ ಮತ್ತು ವಿಮರ್ಶಕರ ಗಮನವನ್ನು ಸೆಳೆದಿದೆ. ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಜರುಗಿದ 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇದು ಭಾರತದ ಸಿನಿಮಾ ಸ್ಪರ್ಧಾ ವಿಭಾಗದ ʼಚಿತ್ರಭಾರತಿʼಯಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಗಳಿಸಿತು. ಇದಕ್ಕೆ ಮೊದಲು ಇದು ನಾಟಕವಾಗಿ ಪ್ರದರ್ಶನಗೊಂಡಿತ್ತು.
ಭಾರತದ ಸಿನಿಮಾರಂಗದಲ್ಲಿ ʼ ದಿ ಗ್ರೇಟ್ ಇಂಡಿಯನ್ ಕಿಚನ್ʼ, ʼ ಉಸ್ತಾದ್ ಹೋಟೆಲ್ʼ, ʼ ಸಾಲ್ಟ್ ಎನ್ ಪೆಪ್ಪರ್ʼ(ಮಲಯಾಳಂ), ʼ ಫ್ರೆಂಚ್ ಬಿರಿಯಾನಿʼ, ʼ ಕೋಳಿ ತಾಳ್ ʼ (ಕನ್ನಡ ), ʼ ದಿ ಲಂಚ್ ಬಾಕ್ಸ್ʼ, ʼಸ್ಟಾನ್ಲಿ ಕ ಡಬ್ಬʼ, ʼ ಅಕ್ಸೋನ್ ʼ-ಉಚ್ಚರಣೆ: ಅಖೂನಿ(ಹಿಂದಿ), ʼ ಆಮೀಸ್ ʼ(ಅಸ್ಸಾಮಿ), ʼ ಮಾಚೇರ್ ಜೋಲ್ʼ(ಬಂಗಾಳಿ) ಮುಂತಾದ ಸಿನಿಮಾಗಳು ಪ್ರಧಾನವಾಗಿ ಆಹಾರವನ್ನು ವಸ್ತುವನ್ನಾಗಿ ಹೊಂದಿವೆ; ಗಮನಾರ್ಹವಾಗಿವೆ.
ಚಂಪಾ ಶೆಟ್ಟಿ ಈ ಸಿನಿಮಾದ ನಿರ್ದೇಶಕಿ. ಇವರು ಈಗಾಗಲೇ ರಂಗಭೂಮಿಯಲ್ಲಿ ನಿರ್ದೇಶಕಿಯಾಗಿ ಹೆಸರನ್ನು ಮಾಡಿದ್ದಾರೆ. ʼ ಅಮ್ಮಚ್ಚಿ ಎಂಬ ನೆನಪುʼ ಎಂಬ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆಯನ್ನು ಮಾಡಿದ್ದರು ಚಂಪಾ. ವೈದೇಹಿಯವರ ಮೂರು ಸಣ್ಣ ಕಥೆಗಳನ್ನು ಆಧರಿಸಿತ್ತು ಈ ಸಿನಿಮಾ. ʼಕೋಳಿ ಎಸ್ರುʼ ಸಿನಿಮಾಗೆ ಕಾ ತ ಚಿಕ್ಕಣ್ಣ ಅವರ ಕಥೆಯನ್ನು ಬಳಸಿಕೊಳ್ಳಲಾಗಿದೆ.
ಹುಚ್ಚೀರಿ ಎಂಬ ಗ್ರಾಮೀಣ ಮಹಿಳೆ ತನ್ನ ಕುಡುಕ ಗಂಡ, ವಯಸ್ಸಾದ ಅತ್ತೆ ಮತ್ತು ಹತ್ತು ವರ್ಷದ ಮಗಳೊಡನೆ ಬಾಳನ್ನು ಸಾಗಿಸಲು ನಾನಾ ತೆರನಾದ ಪಡಿಪಾಟಲುಗಳನ್ನು ಎದುರಿಸುತ್ತಿರುತ್ತಾಳೆ; ಬಡತನದ ಬೇಗೆಯಲ್ಲಿ ಬೇಯುತ್ತಿರುತ್ತಾಳೆ. ಆಕೆಗೂ, ಆಕೆಯ ಗಂಡನಿಗೂ ತುಂಬ ವರ್ಷಗಳ ಅಂತರವಿರುತ್ತದೆ. ಆತ ಆಕೆಯ ಮೇಲೆ ಪ್ರಹಾರಗಳನ್ನು ಮಾಡುತ್ತಿರುತ್ತಾನೆ. ಮಲತಾಯಿ ಆಕೆಯನ್ನು ಬಲವಂತವಾಗಿ ಮದುವೆಯನ್ನು ಮಾಡಿರುತ್ತಾಳೆ. ಹುಚ್ಚೀರಿಗೆ ತೌರು ಮನೆಯ ಸಂಬಂಧವೂ ಕಡಿದು ಹೋಗಿರುತ್ತದೆ. ಆಕೆಗೆ ಎಲ್ಲ ತಾಯಂದಿರಂತೆ ಮಗಳನ್ನು ಚೆನ್ನಾಗಿ ಬೆಳಸಬೇಕೆಂಬ ಆಸೆಯಿರುತ್ತದೆ. ಹೀಗಿರುವಾಗ ಒಮ್ಮೆ ಮಗಳು ಒಬ್ಬ ಕೋಳಿ ಎಸರನ್ನು ಮಾಡುತ್ತಿರುವುದಾಗಿ ತಿಳಿಸುತ್ತಾಳೆ. ಅನ್ನ ಮಾಡಿ, ಕೋಳಿ ಎಸರನ್ನು ತುಂಬ ಕಷ್ಟಪಟ್ಟು ಹುಚ್ಚೀರಿ ಪಡೆದುಕೊಳ್ಳುತ್ತಾಳೆ. ಕೊನೆಗೆ ಏನಾಗುತ್ತದೆ ಎಂಬುದನ್ನು ಸಿನಿಮಾ ವೀಕ್ಷಿಸಿದರೇ ಅರಿವಾಗುತ್ತದೆ!
ಇದನ್ನು ʼಪೀರಿಯಡ್ ಸಿನಿಮಾʼ (Period Cinema) ವಿಭಾಗಕ್ಕೆ ಸೇರಿಸಬಹುದು. ಆಧುನಿಕ ಕಾಲದ ಸೌಕರ್ಯಗಳು ಇನ್ನೂ ತಲೆದೋರದ ಕಾಲದಲ್ಲಿ ಇದರ ಕಥನ ಜರಗುತ್ತದೆ ಎಂಬುದಕ್ಕೆ ಹಲವು ದೃಶ್ಯಗಳು ಸಾರಿ ಹೇಳುತ್ತವೆ. ಮನೆಯಲ್ಲೂ ದುಡಿದು, ಹೊರಗೂ ದುಡಿದು, ಒಬ್ಬ ತಾಯಿಯಾಗಿ, ಮಡದಿಯಾಗಿ ಮತ್ತು ಸೊಸೆಯಾಗಿ ಹುಚ್ಚೀರಿ ಸಂಸಾರದ ನೊಗವನ್ನು ಹೊತ್ತಿರುತ್ತಾಳೆ; ಅನೇಕ ಅವಮಾನಕರ ಸಂದರ್ಭಗಳಿಗೆ ಪಕ್ಕಾಗಿರುತ್ತಾಳೆ. ಗಂಡ ಮತ್ತು ಅತ್ತೆಯ ಪಿತೃಪ್ರಧಾನ ನಡವಳಿಕೆಗಳನ್ನು ಸೈರಿಸಬೇಕಾದ ಪರಿಸ್ಥಿತಿ ಇರುತ್ತದೆ. ಕಾಮುಕನೊಬ್ಬನ ಉಪಟಳವನ್ನು ಆಕೆ ಎದುರಿಸಬೇಕಾಗುತ್ತದೆ. ಇವುಗಳನ್ನೆಲ್ಲ ದೃಶ್ಯ ಕಟ್ಟೋಣಗಳ ಮೂಲಕ ಸಮರ್ಥವಾಗಿ ನಿರ್ದೇಶಕಿ ದಾಟಿಸಿದ್ದಾರೆ. ಕೋಳಿ ಎಸ್ರು ವರ್ಗ ವೈರುಧ್ಯದ ಜೊತೆಜೊತೆಗೆ ಸಂಸಾರದ ಭವಿಷ್ಯದ ಆಶಯದ ರೂಪಕವಾಗಿ ಬಳಸಲಾಗಿದೆ ಎಂದೆನಿಸಿತು!
ಈ ಸಿನಿಮಾದಲ್ಲಿ ಹಳೇ ಮೈಸೂರಿನ ನಂಜನಗೂಡು, ಚಾಮರಾಜನಗರ ಮತ್ತು ಕೊಳ್ಳೇಗಾಲ ಪ್ರದೇಶಗಳಲ್ಲಿ ಬಳಸುವ ಕನ್ನಡವನ್ನು ಬಳಸಲಾಗಿದೆ. ಹೀಗೆ ಇದಕ್ಕೆ ʼ ಪ್ರಾಂತೀಯ ಭಾಷೆ ʼಯ ಸೊಗಡಿನ ಆಯಾಮವಿದೆ. ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ʼ ಪಾಲಾರ್ ʼ ಕನ್ನಡ ಸಿನಿಮಾದಲ್ಲಿ ಕೋಲಾರ ಪ್ರದೇಶದ ಕನ್ನಡವನ್ನು ಬಳಸಲಾಗಿತ್ತು. ಕನ್ನಡ ಸಿನಿಮಾರಂಗಕ್ಕೆ ಸಂಬಂಧಿಸಿದಂತೆ ಇಂತಹ ಬಳಕೆ ಸ್ವಾಗತಾರ್ಹ. ಅಲ್ಲದೆ ʼಕೋಳಿ ಎಸ್ರು ʼನಲ್ಲಿ ಪ್ರಾದೇಶಿಕ ಸಂಸ್ಕೃತಿಯನ್ನು ಬಿಂಬಿಸಲಾಗಿದೆ. ಕನ್ನಡ ನಾಡಿನ ಪ್ರಮುಖ ಜಾನಪದ ಕಲಾ ಪ್ರಕಾರಗಳಲ್ಲಿ ಒಂದಾದ, ಮಂಟೇಸ್ವಾಮಿ, ಮಲೆಮಾದೇಶ್ವರ ಮೌಖಿಕ ಕಥನಗಳನ್ನು ಹಾಡುವ ನೀಲಗಾರರ ಮೇಳದ ಹಾಡುಗಳನ್ನು ಬಳಸಿರುವುದು ಈ ಸಿನಿಮಾದ ವಿಶೇಷ ಅಂಶ. ಅಲ್ಲದೆ, ಸೌಂಡ್ ಟ್ರ್ಯಾಕ್ ನಲ್ಲಿ ಕೂಡ ಈ ಹಾಡುಗಳು ರಿಂಗಣಿಸುವುದು ಒಂದು ಭಿನ್ನ ಅನುಭವವನ್ನು ನೀಡುತ್ತದೆ!
ರಾತ್ರಿಯ ನೀರವತೆ, ಮಬ್ಬಮಬ್ಬಾದ ವಾತವರಣ, ಸ್ಥಳೀಯ ಪರಿಸರವನ್ನು ಹಿಡಿದಿಟ್ಟಿರುವ ಕ್ಯಾಮರಾದ ಮೂರನೆಯ ಕಣ್ಣಿನ ಮತ್ತು ಕತ್ತರಿ (ಸಂಕಲನ)ಯ ಕೆಲಸ ಗಮನಿಸುವಂತಿವೆ. ಈಗಾಗಲೇ ರಂಗಭೂಮಿಯಲ್ಲಿ ತಮ್ಮ ನಟನೆಯಿಂದ ಗುರುತಿಸಲ್ಪಟ್ಟಿರುವ ಅಕ್ಷತಾ ಪಾಂಡವಪುರ ಹುಚ್ಚೀರಿಯ ಪಾತ್ರಕ್ಕೆ ಕಸುವನ್ನು ತುಂಬಿ ನ್ಯಾಯವನ್ನು ಒದಗಿಸಿದ್ದಾರೆ. ಕಂಗಳ ಚಲನವಲನ, ಆಂಗಿಕ ಅಭಿನಯ ಮತ್ತು ಸಂಭಾಷಣೆಯ ಪರಿಯ ಮೂಲಕ ತಮ್ಮ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಹುಚ್ಚೀರಿಯ ಗಂಡನಾಗಿ ನಟಿಸಿರುವ ಪ್ರಕಾಶ್ ಶೆಟ್ಟಿ ಮೂಲತಃ ಕರಾವಳಿ ಪ್ರಾಂತ್ಯದವರು. ಆದರೆ ಅವರು ಮೇಲೆ ಪ್ರಸ್ತಾಪಿಸಿರುವ ಪ್ರಾಂತೀಯ ಕನ್ನಡವನ್ನು ಸರಾಗವಾಗಿ ತಮ್ಮ ನಟನೆಯಲ್ಲಿ ಬಳಸಿಕೊಂಡಿದ್ದಾರೆ! ಕೆಲವು ಸ್ಥಳೀಯರೂ ನಟನಾ ವರ್ಗದಲ್ಲಿ ಇದ್ದಾರೆ!
ಮಹಿಳಾ ಸಬಲೀಕರಣವನ್ನು ಎತ್ತಿ ಹಿಡಿಯುವ ಈ ಸಿನಿಮಾಗೆ ಸುಮಾರು 12-15 ಮಂದಿ ಬಂಡವಾಳವನ್ನು ಹೂಡಿರುವುದಾಗಿ ಟೈಟಲ್ ಕಾರ್ಡ್ ತಿಳಿಸುತ್ತದೆ. ಇಂತಹ ಸಿನಿಮಾವನ್ನು ನಿರ್ಮಿಸುವ ಧೈರ್ಯ ಮಾಡಿದ ಇವರು ಮೆಚ್ಚುಗೆಗೆ ಪಾತ್ರವಾಗುತ್ತಾರೆ. ಚಂಪಾ ಶೆಟ್ಟಿ ತಮ್ಮ ಮೊದಲನೆಯ ಸಿನಿಮಾದಿಂದ ಬೆಳೆದಿದ್ದಾರೆ ಎನ್ನುವುದಕ್ಕೆ ಈ ಸಿನಿಮಾದಲ್ಲಿ ಸೂಚನೆಗಳಿವೆ. ಕೆಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ನಿರ್ದೇಶಕ್ಕಾಗಿ ಚಂಪಾ ಶೆಟ್ಟಿ, ನಟನೆಗಾಗಿ ಅಕ್ಷತಾ ಪಾಂಡವಪುರ ಅವರಿಗೆ ಪ್ರಶಸ್ತಿಗಳು ಲಭಿಸಿವೆ. ಅಭಿನಂದನೆಗಳು.
ʼ ಕೋಳಿ ಎಸ್ರುʼ ಸಿನಿಮಾ ಮಂದಿರಗಳಲ್ಲಿ ಆದಷ್ಟು ಬೇಗ ಪ್ರದರ್ಶನಗೊಳ್ಳಲಿ, ಅದಕ್ಕೆ ಸದಭಿರುಚಿ ವೀಕ್ಷಕರ, ಕನ್ನಡಿಗರ ಉತ್ತೇಜನ ದೊರಕಲಿ. ಒಳ್ಳೆಯ ಸಿನಿಮಾ ಸಂಸ್ಕೃತಿ ಬೆಳೆಯಲಿ…
0 ಪ್ರತಿಕ್ರಿಯೆಗಳು