ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೌರವಧನ ದೊರೆತಾಗ ಸ್ವೀಕರಿಸಿ ತೆಪ್ಪಗಿರಬೇಕು..!!

ಸತ್ಯಕಾಮ ಶರ್ಮಾ ಕಾಸರಗೋಡು

( ಇದು ಸಂವರ್ತ ಸಾಹಿಲ್ ಬರೆದ ‘ಐವತ್ತು ರೂಪಾಯಿಗೆ ವೋಡ್ಕಾ ಕೂಡ ಬರ್ಲಿಲ್ಲ ‘ ಲೇಖನಕ್ಕೆ ಪ್ರತಿಕ್ರಿಯೆ)

ಗೌರವ ಧನ ( ಅಥವಾ ಸಂಭಾವನೆ) ಅನ್ನುವುದು ಇಂಗ್ಲಿಶ್ ನ hon·o·rar·i·um ಎಂಬ ಪದಕ್ಕೆ ಪರ್ಯಾಯವಾಗಿ ಕನ್ನಡದಲ್ಲಿ ಬಳಸುತ್ತಾ ಬಂದಿರುವ ಪದ.

ಇದು ಶುಲ್ಕ, ಮಜೂರಿ, ಕೂಲಿ ಅಥವಾ ವೇತನ ಅಲ್ಲ. ಅನರೇರಿಯಮ್ ಅಂದರೆ, ನಿಘಂಟು ಪ್ರಕಾರ A payment given to a professional person for services for which fees are not legally or traditionally required. ಅಂದರೆ ‘ಕಾನೂನಿನಂತೆ ಅಥವಾ ಪದ್ಧತಿಯಂತೆ ಈ ಶುಲ್ಕವನ್ನು ನೀಡುವ ಅಗತ್ಯವಿಲ್ಲ’ ಅಂದಂತಾಯಿತು.

ಆದುದರಿಂದ ಗೌರವಧನ ದೊರೆತಾಗ ಅದನ್ನು ಸ್ವೀಕರಿಸಿ ತೆಪ್ಪಗಿರಬೇಕು. ಸಿಗಲಿಲ್ಲ ಎಂದು ವರಾತ ತೆಗೆಯುವ ಹಕ್ಕು ಕೂಡಾ ನಮಗಿಲ್ಲ. ಇನ್ನು ‘ಬರಹಗಾರರೆಲ್ಲಾ ಹೋರಾಟಗಾರರಾಗಿರಬೇಕು’ ಎಂಬ ಅಲಿಖಿತ ನಿಯಮವನ್ನು ಪಾಲಿಸುವವರು ಗೌರವ ಧನಕ್ಕಾಗಿಯೂ ಹೋರಾಟಕ್ಕೆ ಸಜ್ಜಾದರೆ ತಪ್ಪೇನಿಲ್ಲ. ಆದರೆ ಈ ಹೋರಾಟ ಮೊದಲು ಪ್ರಾರಂಭವಾಗಬೇಕಾದ್ದು ಬರಹಗಾರರಿಂದಲ್ಲ-ಹೋಟೆಲ್ ಮಾಣಿಗಳಿಂದ, ಇಂತಿಷ್ಟು ಸೇವೆಗೆ ಇಂತಿಷ್ಟು ‘ಟಿಪ್ಸ್’ ಎಂದು!.

ಭಾಷಾಂತರ, ಟೈಪಿಂಗ್, ಜಾಹೀರಾತು/ ಚಲನ ಚಿತ್ರ ಟಿವಿ ಸೀರಿಯಲ್ ಗಳ ಸಂಭಾಷಣೆ ಬರಹ, ಗೀತ ರಚನೆ ಮಾಡಿ ಹೊಟ್ಟೆ ಹೊರೆಯುವವರು ಸಾಕಷ್ಟು ಮಂದಿ ಇದ್ದಾರೆ. ನೀವು ಹೇಳಿದ ರೀತಿ ಚೌಕಾಶಿ ಮಾಡುವ ಹಕ್ಕು ಇರುವುದು ಅವರಿಗೆ. ಸುಮಾರು ಎರಡು ಮೂರು ವರ್ಷಗಳ ಹಿಂದೆ ನನ್ನ ಕವಿತೆಯನ್ನು ಪ್ರಕಟಿಸಿದ ‘ಕನ್ನಡ’ ದಿನ ಪತ್ರಿಕೆಯೊಂದು ನನಗೆ ಯಾವ ಗೌರವ ಧನವನ್ನೂ ನೀಡಲಿಲ್ಲ.

ಪರವಾಗಿಲ್ಲ, ಆ ಕವಿತೆಯ ಮೌಲ್ಯ ಮಾಪನವನ್ನು ಅವರು ಮಾಡಿದ್ದಾರೆ ಅಂದುಕೊಂಡು ನಾನು ಸುಮ್ಮನಾದೆ. ದಶಕಗಳ ಹಿಂದೆ ನನ್ನ ಕವಿತೆಗಳನ್ನು ಪ್ರಕಟಿಸಿ ತಲಾ ರೂ 75 ನೀಡುತ್ತಿದ್ದ ದಕ್ಷಿಣ ಕನ್ನಡದ ಪತ್ರಿಕಾ ಸಮೂಹ, 2016 ರಲ್ಲಿ ನನ್ನ ಒಂದು ಲೇಖನಕ್ಕೆ ರೂ ೧೦೦೦ ಗೌರವಧನ ನೀಡಿದಾಗ ‘ಕನ್ನಡ ಪತ್ರಿಕೆಗಳು ನಿಜಕ್ಕೂ ಆರ್ಥಿಕವಾಗಿ ಇಷ್ಟು ಸಧೃಢವಾಗಿವೆಯೇ?’ ಎಂದು ಅಚ್ಚರಿಪಟ್ಟೆ. ( ಅದೇ ಪತ್ರಿಕೆ ಇತ್ತೀಚೆಗೆ ನೀಡಿದ ಗೌರವ ಧನ ರೂ 1200 ).

ಅಂದ ಹಾಗೆ ಈ ಪತ್ರಿಕಾ ಸಮೂಹ ಮುದ್ರಣದ ಗುಣಮಟ್ಟದಲ್ಲಿ ಮುಂದೆ ಇದೆಯೇ ಹೊರತು, ಪ್ರಸಾರದಲ್ಲಿ ಅಲ್ಲ! ಅಷ್ಟಕ್ಕೂ ಗೌರವ ಧನಕ್ಕೆ ಹೋರಾಡುವ ಹಂತಕ್ಕೆ ಲೇಖಕ/ಕಿ ಬರುವುದು ಪತ್ರಿಕೆಯೊಂದು ತಾನಾಗಿ ಲೇಖನ ಇತ್ಯಾದಿ ಬರೆದು ಕೊಡಿ ಎಂದು ವಿನಂತಿಸಿದಾಗ.

ಆ ಹಂತ ತಲುಪುವವರು ಮೊದಲ ಹಂತದಲ್ಲಿ ತಮ್ಮ ಕಾಯಕದಲ್ಲೆ ಮಗ್ನರಾಗಿರುತ್ತಾರೆ, ಗೌರವ ಧನ ಅವರಿಗೆ ಗೌಣವೆನಿಸಿರುತ್ತದೆ.

‍ಲೇಖಕರು Avadhi GK

24 March, 2018

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading