
ಬಿ ಎಂ ಬಷೀರ್
ಗೋವನ್ನು ಮುಸ್ಲಿಮರು ಆಹಾರವಾಗಿ ತಿನ್ನುತ್ತಾರೆಯೇ ಹೊರತು ಅದು ಅವರ ಧಾರ್ಮಿಕ ವಿಷಯ ಅಲ್ಲ. ಕಡಿಮೆ ದರ, ಹೆಚ್ಚು ಮಾಂಸ ಎಂಬ ಕಾರಣಕ್ಕಾಗಿ ಮುಸ್ಲಿಮರಲ್ಲಿ ಬಡವರು ಗೋಮಾಂಸವನ್ನು ಹೆಚ್ಚು ಬಳಕೆ ಮಾಡುತ್ತಾರೆ. ರುಚಿ ಪೌಷ್ಟಿಕಾಂಶದಲ್ಲೂ ಗೋಮಾಂಸ ಮಿಗಿಲು ಎನ್ನುವ ಕಾರಣಕ್ಕೆ ತಿನ್ನುತ್ತಾರೆ.
ಅಪೌಷ್ಟಿಕತೆಯಿಂದ ನರಳುವ ದೇಶದ ಬಹು ಸಂಖ್ಯೆಯ ಬಾಯಿಯಿಂದ ದೊಡ್ಡ ಪ್ರಮಾಣದ ಆಹಾರವನ್ನು ಸರಕಾರ ಕಿತ್ತುಕೊಂಡಿದೆ. ಆದುದರಿಂದ ಮುಸ್ಲಿಮರಿಗೆ ಸರಕಾರ ಬಿಸಿ ಮುಟ್ಟಿಸಿದೆ ಎಂದು ಸಂಭ್ರಮಿಸುವ ಮೋದಿ ಭಕ್ತರು ಅನುಕಂಪಕ್ಕಷ್ಟೇ ಅರ್ಹರು.
ಗೋಮಾಂಸ ನಿಷೇಧ ಮುಸ್ಲಿಮರ ಸಮಸ್ಯೆ ಅಲ್ಲ. ಆಡು, ಕುರಿ, ಕೋಳಿ ಮೊಟ್ಟೆ, ಯಥೇಚ್ಛ ಇರೋದರಿಂದ ತಲೆ ಬಿಸಿಯೂ ಇಲ್ಲ. ಮುಸ್ಲಿಮರಂತೂ ಗೋವುಗಳನ್ನು ಸಾಕೋದಿಲ್ಲ. ರೈತರಿಗೆ ಬೇಡವಾದ ಗೋವುಗಳ ಮಾರಾಟಕ್ಕೆ ಅಷ್ಟೇ ಸಹಕರಿಸುತ್ತಿದ್ದರು. ಅದು ಹೈನೋದ್ಯಮದ ಭಾಗ ಅಷ್ಟೇ.
ಆದರೆ ಈ ದೇಶದ ಗೋ ಸಾಕುವ ರೈತರಂತೂ ಸಮಸ್ಯೆಯಲ್ಲಿ ಸಿಕ್ಕಿ ಹಾಕಿ ಕೊಳ್ಳುತ್ತಾರೆ. ಆರ್ಥಿಕವಾಗಿ ನಷ್ಟಕ್ಕೆ ಒಳಗಾಗುತ್ತಾರೆ. ಗೋ ಸಾಕಣೆ ನಿಧಾನಕ್ಕೆ ಇನ್ನೊಂದು ಐದು ವರ್ಷದೊಳಗೆ ಶೇಕಡಾ ೫೦ ಕ್ಕಿಂತ ಕೆಳಗೆ ಇಳಿಯಲಿದೆ. ಈಗಾಗಲೇ ಜನರು ಗೋ ಸಾಕಾಣೆ ನಿಲ್ಲಿಸುತ್ತಿದ್ದಾರೆ. ಇನ್ನೊಂದು ಹತ್ತು ವರ್ಷದಲ್ಲಿ ಪೂಜಿಸಲು ಕೂಡ ಗೋವುಗಳ ಕೊರತೆ ಬೀಳಲಿದೆ.
ಮಗ ಸತ್ತರೂ ಪರವಾಗಿಲ್ಲ, ಸೊಸೆ ಮುಂ …. ಆಗಬೇಕು ಎನ್ನುವ ಗಾದೆ ಹುಟ್ಟಿಕೊಂಡದ್ದು ಇಂತಹ ಸರಕಾರವನ್ನು ಉದ್ದೇಶಿಸಿಯೇ ಇರಬೇಕು. ಸಂಸ್ಕ್ರುತವನ್ನು ದೇವಭಾಷೆ ಎಂದು ಕರೆದು ಶೂದ್ರರು ಬಳಸೋದಕ್ಕೆ ನಿಷೇಧ ಹೇರಿ ಸಾಯಿಸಿದರು. ಗೋವನ್ನು ಈಗ ತಾಯಿ, ದೇವರು ಎಂದು ಕರೆದು ಅದರ ಸಂತಾನ ಅಳಿಸೋದಕ್ಕೆ ಹೊರಟಿದ್ದಾರೆ.

ಗಣೇಶ ಯಾಜಿ
ಹವ್ಯಕರು ಮೂಲತಃ ಕೃಷಿಕರು. ಹಳ್ಳಿಯಲ್ಲಿ ಕೊಟ್ಟಿಗೆ ಇಲ್ಲದ ಹವ್ಯಕರ ಮನೆ ಕಾಣಲು ಸಿಗಲಿಕ್ಕಿಲ್ಲ. ಆದರೆ ಪ್ರತಿಯೊಬ್ಬರ ಮನೆಯಲ್ಲೂ ಆಕಳು, ಎಮ್ಮೆ ಸಾಕುತ್ತಿದ್ದರು. ಆಕಳು ಕರು ಹಾಕಿ ಅದು ಹೆಂಗರ ಆಗಿದ್ದರೆ ಮನೆಯಲ್ಲಿ ಸಂತಸದ ಕ್ಷಣವಿರುತ್ತಿತ್ತು. ಕೊಟ್ಟಿಗೆಯಲ್ಲಿ ಹಾಲು ಕೊಡುವ ಎಮ್ಮೆ, ಆಕಳಿಗೆ ವಿಶೇಷ ಸತ್ಕಾರ. ಹಸಿಹುಲ್ಲು ತಂದು ಅವಕ್ಕೆ ಆರೈಕೆ ಮಾಡಲಾಗುತ್ತಿತ್ತು.
ನಾವು ಚಿಕ್ಕವರಿದ್ದಾಗ ಆಕಳು ಕರು ಹಾಕಿದೆ ಎಂದರೆ ಗಿಣ್ಣದ ಹಾಲು ಮತ್ತಿತರ ಸಿಹಿ ತಿಂಡಿಗಾಗಿ ಕಾಯುತ್ತಿದ್ದೆವು. ಕೊಟ್ಟಿಗೆ ಚಿಕ್ಕದಿರುವ ಹಲವು ಮನೆಗಳಲ್ಲಿ ಕರುವಿಗೆ ಪಕ್ಕದ ಆಕಳಿಂದ ತೊಂದರೆ ಆಗಬಾರದೆಂದು ತಿಂಗಳುಗಟ್ಟಲೆ ಅದನ್ನು ರಾತ್ರಿ ಹೊತ್ತು ಮನೆಯ ವರಾಂಡದಲ್ಲಿ ಕಟ್ಟುತ್ತಿದ್ದರು. ಗಂಜಲು, ಸಗಣಿಯ ಗಮಲಿನ ನಡುವೆಯೇ ಬದಕನ್ನು ಕೃಷಿಕರು ಕಟ್ಟಿಕೊಂಡರು. ಹಾಸಲು ಮಳೆಗಾಲದಲ್ಲಿ ಸೊಪ್ಪಿನ ಬೆಟ್ಟದಿಂದ ಸೊಪ್ಪು ತಂದು ರಾಸುಗಳ ಕೆಳಗೆ ಹರಡಲಾಗುತ್ತಿತ್ತು.
ಬೇಸಿಗೆಯಲ್ಲಿ ಉದುರಿದ ಒಣ ಎಲೆಗಳನ್ನು ಒಟ್ಟುಗೂಡಿಸಿ ತಂದು ಕೊಟ್ಟಿಗೆಗೆ ಹಾಕಲಾಗುತ್ತಿತ್ತು. ವಾರಕ್ಕೊಮ್ಮೆ ಕೊಟ್ಟಿಗೆಯ ಪಕ್ಕದಲ್ಲಿರುವ ಗೊಬ್ಬರದ ಗುಂಡಿಗೆ ಕೊಟ್ಟಿಗೆಯಲ್ಲಿ ಗೊಬ್ಬರವಾಗಿದ್ದುದನ್ನು ಗುಂಡಿಗೆ ಎಳೆದು ತಂದು ತುಂಬಲಾಗುತ್ತಿತ್ತು(ಈಗಲೂ ಇದೇ ಪದ್ಧತಿ ಹಳ್ಳಿಗಳಲ್ಲಿದೆ). ನಂತರ ಮತ್ತೆ ಕೊಟ್ಟಿಗೆಯ ತುಂಬ ಈ ಹಿಂದೆ ಸಂಗ್ರಹಿಸಿಟ್ಟಿದ್ದ ಸೊಪ್ಪು ಅಥವಾ ದರಕನ್ನು ಹಾಸಲಾಗುತ್ತಿತ್ತು.
ಮುದಿ ದನಗಳನ್ನು ಎಮ್ಮೆಗಳನ್ನು ಕೂಡಾ ಕೊಟ್ಟಿಗೆಯಲ್ಲಿಟ್ಟೆ ಸಾಕಲಾಗುತ್ತಿತ್ತು. ತೀರಾ ಪರಿಚಯಸ್ಥರ ಮುಖಾಂತರ ಖರೀದಿದಾರರು ಬಂದರೆ ಮುದಿ ಹಸುಗಳನ್ನು ಸಾಗಹಾಕುತ್ತಿದ್ದರು. ಹಸು ಅಥವಾ ಎಮ್ಮೆ ಸತ್ತರೆ ಅವನ್ನು ನಾಲ್ಕೈದು ಜನ ಸೇರಿ ಗುಡ್ಡಕ್ಕೆ ಅಥವಾ ಮನೆಯ ಹತ್ತಿರವಿದ್ದ ಹಳ್ಳಕ್ಕೆ ಎಳೆದು ಹಾಕುತಿದ್ದರು. ರಣಹದ್ದುಗಳು ಬಂದು ಅವುಗಳನ್ನು ತಿಂದು ಹೋಗುತ್ತಿದ್ದವು. ಊರಿನಲ್ಲಿದ್ದ ಕುಟುಂಬವೊಂದು ಬಂದು ಅದರ ಮಾಂಸವನ್ನು ತೆಗೆದು ಚರ್ಮವನ್ನು ಸಂಗ್ರಹಿಸುತ್ತಿದ್ದರು.
ಚಿಕ್ಕವರಾದ ನಮಗೆ ಕುತೂಹಲ. ಅವರು ಅದನ್ನು ಏನು ಮಾಡುತ್ತಾರೆ? ಅದನ್ನು ಯಾಕೆ ಉಪಯೋಗಿಸುತ್ತಾರೆ ಎಂಬುದು ತಿಳಿಯದ ವಯಸ್ಸಿನವರಾದ ನಮಗೆ ಕದ್ದು ಮುಚ್ಚಿ ಹೋಗಿ ಗಮನಿಸುತ್ತಿದ್ದೆವು. ಮನೆಯವರ ಕಣ್ತಪ್ಪಿಸಿ ನೋಡುವುದು ನಮಗೆ ಕರಗತವಾಗಿತ್ತು(ಊರಲ್ಲಿ ಹೆಚ್ಚು ವರ್ಷ ಇರದಿದ್ದರೂ ಇದ್ದಷ್ಟು ವರ್ಷ ಕಂಡುಂಡ ಅನುಭವದ ಹಿನ್ನೆಲೆಯಲ್ಲಿ).
ತಂದೆಯವರ ಅಕಾಲ ಮರಣ, ಮನೆಯ ಸಮಸ್ಯೆ, ಓದು ಹೀಗೆ ನಾನಾ ಕಾರಣಗಳಿಂದ ಊರುಬಿಟ್ಟು ತಾಯಿಮನೆ ಸೇರಿಕೊಂಡೆ. ಆಗಾಗ ಊರಿಗೆ ಹೋದಾಗ ಕೊಟ್ಟಿಗೆಯ ಕೆಲಸದಲ್ಲಿ ಅಮ್ಮನಿಗೆ ಸಹಾಯ ಮಾಡುತ್ತಿದ್ದೆ.
ನಿನ್ನೆಯಿಂದ ಈ ಘಟನೆಗಳೆಲ್ಲ ಗಿರಕಿ ಹೊಡೆಯಲಾರಂಭಿಸಿವೆ. “ಗೋ ಹತ್ಯೆ ನಿಷೇಧ” ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಹಾಗಾದರೆ ಮುದಿ ಹಸುಗಳು, ಎಮ್ಮೆಗಳು ಮತ್ತು ಎತ್ತುಗಳನ್ನು ಏನು ಮಾಡಬೇಕು. ಮೊದಲಾದರೆ ಮುದಿಯಾಯಿತೆಂದು ಹಲವರಿಗೆ ಮಾರಾಟ ಮಾಡುತ್ತಿದ್ದರು. ಹಳ್ಳಿಯಲ್ಲಿದ್ದವರಿಗೆ ಅದನ್ನು ಖರೀದಿಸಿದವರು ಏನು ಮಾಡುತ್ತಾರೆಂದು ತಿಳಿಯದೇ ಮಾರಾಟ ಮಾಡುತ್ತಿದ್ದರು. ಆದರೆ ಇನ್ನು ಮುಂದೆ ಮುದಿ ಹಸುಗಳನ್ನು ಮಾರುವ ಹಾಗಿಲ್ಲ ಎಂದರೆ ಅದಕ್ಕೆ ಮೇವು ಹುಲ್ಲು ಹಾಕಿ ಕಟ್ಟಿ ಸಾಕಲು ಎಲ್ಲ ಕೃಷಿಕರು, ರೈತರಿಗೆ ಆಗದ ಮಾತು.
ಸರ್ಕಾರ ಅಂತಹ ಹಸು ಮತ್ತು ಎಮ್ಮೆಗಳನ್ನು ಖರೀದಿಸಿ, ಅದಕ್ಕೆ ಮೇವು ಒದಗಿಸಿ ಕಾಪಾಡಿದರೆ ಒಳಿತು. ಸರ್ಕಾರ ಇತ್ತ ಗಮನ ಹರಿಸಿ ಮುದಿ ಹಸುಗಳನ್ನು ಕಾಪಾಡಲಿ ಎಂದು ಆಶಿಸುವೆ. ಅಥವಾ ಲೈಸನ್ಸ್ ಇದ್ದವರಿಗೆ ಖರೀದಿಸಲು ಅವಕಾಶ ಕಲ್ಪಿಸಲಿ.
ಇದು ಬರಿ votebank ರಾಜಕೀಯವಾಗದೇ ಮಾನವೀಯತೆಯ ದೃಷ್ಟಿಯಿಂದ ಪಕ್ಷ ಭೇದ ಮರೆತು ಕೈಗೊಳ್ಳಲಿ ಎಂದು ಆಶಿಸುವೆ.





0 Comments