ಕರಡಿ ಕುಣೀತಿರಬೇಕಾದರೆ ಗೂಳಿದ್ದೇನಿದು ಗುಮ್ಮಾಟ?!

ಊರೆಲ್ಲ ದನ-ಎಮ್ಮೆ-ಕೋಣ ಎಂದು ತಲೆ ಕೆಡಿಸಿಕೊಂಡಿರುವಾಗ, ಮೋದಿಯವರ ಮೂರು ವರ್ಷ “ ಫೆಸ್ಟ್” ಆಗಿ ಆಚರಣೆ ಆಗುತ್ತಿರುವಾಗ ಒಂದು ವರ್ಗ ಮಾತ್ರ ಇದ್ಯಾವುದೂ ತಮಗೆ ಸಂಬಂಧವೇ ಇಲ್ಲ ಎಂದುಕೊಂಡು, ತಮ್ಮ ಕಾಸು ಮಾತ್ರ ಉದ್ದಂಡ ಬೆಳೆಯುತ್ತಿರುವುದನ್ನು ಕಂಡು ಬಹಳ ಸಂಭ್ರಮಪಡುತ್ತಿದೆ. ಮಸಣದಲ್ಲಿ ಚಿಗುರುತ್ತಿರುವ ಸ್ಟಾಕ್ ಮಾರ್ಕೆಟ್ಟಿಗೆ ಬಿದ್ದಿರುವ ಗೊಬ್ಬರ ಯಾವುದು- ಬೇವಿನ ರಸ ಸವರಿದ್ದೋ ಅಥವಾ ಗೋಮೂತ್ರದ್ದೋ ಎಂಬುದೇ ಈಗ ಎದುರಿರುವ ಪ್ರಶ್ನೆ.

ಡಿಸೆಂಬರ್ 2016ರ ಹೊತ್ತಿಗೆ ಅಂದಾಜು 7900 ಆಸುಪಾಸು ಇದ್ದ NIFTY  ಸೂಚ್ಯಂಕ ಈವತ್ತು 9600  ಆಸುಪಾಸಿನಲ್ಲಿ ಗೂಳಿಗುಮ್ಮುತ್ತಿದೆ. ಮಾರುಕಟ್ಟೆ ಪರಿಣತರು ಇದು ಹೀಗೇ ಮುಂದುವರಿದು 10,000ದ ಗಡಿ ದಾಟಿದರೂ ಅಚ್ಚರಿ ಇಲ್ಲ ಎಂಬ ನಿರೀಕ್ಷೆಯಲ್ಲಿದ್ದಾರೆ. ಕಳೆದ ಮೂರು ನಾಲ್ಕು ವರ್ಷಗಳಿಂದ (2013ರಿಂದ)  ಸಂಪೂರ್ಣ ಕುಸಿದು, ಸ್ಥಗಿತಗೊಂಡು ಮೂರಾಬಟ್ಟೆ ಆಗಿದ್ದ ಸ್ಟಾಕ್ ಮಾರ್ಕೆಟ್ ಈ ರೀತಿ ಹಟಾತಾಗಿ ಒಂದೇ ಸಮನೆ ಮೇಲೇಳುತ್ತಿರುವುದಕ್ಕೆ ಕಾರಣ ಏನು?

ನವೆಂಬರ್ 08, 2016ರ ನೋಟು ರದ್ಧತಿಯ ಬಳಿಕ ದೇಶದ ಉತ್ಪಾದನೆ, ಮಾರುಕಟ್ಟೆ, ಖರೀದಿ ಸಾಮರ್ಥ್ಯ ಎಲ್ಲವೂ ನೆಲಕಚ್ಚಿರುವ ಬಗ್ಗೆ ಈಗ ಬರುತ್ತಿರುವ ಬಹುತೇಕ ಆರ್ಥಿಕ ವರದಿಗಳೆಲ್ಲವೂ ಚೀರಿ ಚೀರಿ ಹೇಳುತ್ತಿವೆ. ಸ್ವತಃ ರಿಸರ್ವ್ ಬ್ಯಾಂಕೇ ಆಗ ತೊಂದರೆ ಆಗಿತ್ತು ಎಂದು ಒಪ್ಪಿಕೊಂಡಿದೆ. ಆರ್ಥಿಕವಾಗಿ ದೇಶ ಮಹಾ ಹೊಡೆತವನ್ನು ತಿಂದು ಚೇತರಿಸಿಕೊಳ್ಳಲಾರಂಭಿಸಿದೆಯಷ್ಟೇ. ಪರಿಸ್ಥಿತಿ ಹೀಗಿರುವಾಗ, ಅದೇ ಆರ್ಥಿಕತೆಯ ಸೆಕೆಂಡರಿ ಕವಲೊಂದು ಈ ಹೊಡೆತದ ಸಣ್ಣದೊಂದು ಉರಿಯೂ ತಾಗಿಲ್ಲವೆನ್ನುವಂತೆ ಕೊಬ್ಬಿ ಬೆಳೆಯುತ್ತಿದೆ ಎಂಬುದು ಅಚ್ಚರಿಯ ಸಂಗತಿ.

ಇದೆಲ್ಲಕ್ಕೆ ಅಂತಾರಾಷ್ಟ್ರೀಯ ಬೆಳವಣಿಗೆಗಳು ಕಾರಣವೆನ್ನೋಣವೆಂದರೆ, ಟ್ರಂಪೋತ್ತರ ಅಂತಾರಾಷ್ಟ್ರೀಯ ವಿದ್ಯಮಾನಗಳು, ಯುರೋಪಿನಲ್ಲಿ ಬ್ರೆಕ್ಸಿಟ್, ಅಮೆರಿಕದಲ್ಲಿ ಫೆಡರಲ್ ಬ್ಯಾಂಕು ತನ್ನ ಸಾಲದ ಬಡ್ಡಿ ದರವನ್ನು ಹೆಚ್ಚಿಸಿಕೊಂಡಿರುವುದು, ಬಿಗಡಾಯಿಸುತ್ತಿರುವ ಅಮೆರಿಕ-ರಶ್ಯಾ ಸಂಬಂಧ, ಉತ್ತರ ಕೊರಿಯಾ ಕಿರಿಕ್, ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆಗಳು… ಹೀಗೆ ಎಲ್ಲೂ ಯಾವುದೇ ಪೂರಕ ವಾತಾವರಣ ಕಾಣುತ್ತಿಲ್ಲ.

ದೇಶದೊಳಗೆ ಜನವರಿಯಲ್ಲಿ 57  ಡಾಲರ್ ಇದ್ದ ತೈಲಬೆಲೆ ಈಗ 47.50 ಡಾಲರ್ ಆಸುಪಾಸಿನಲ್ಲಿದೆ ಎಂಬುದೊಂದು ಅಂಶ ಬಿಟ್ಟರೆ, ವಿದೇಶೀ ಸಾಂಸ್ಥಿಕ ಹೂಡಿಕೆದಾರರಿಗಾಗಲೀ, ದೇಶೀ ಸಾಂಸ್ಥಿಕ ಹೂಡಿಕೆದಾರರಿಗಾಗಲೀ ಪ್ರೋತ್ಸಾಹಕವಾಗಬಲ್ಲ ಗಟ್ಟಿ ಸಂದೇಶಗಳು ಯಾವುವೂ ಇಲ್ಲ. ಬದಲಾಗಿ ಆಟೊಮೊಬೈಲ್, ರಿಯಲ್ ಎಸ್ಟೇಟ್ ಮಾರುಕಟ್ಟೆಗಳು ಕುಸಿದಿವೆ, ಐಟಿ ಉದ್ದಿಮೆ ತನ್ನ ಕಷ್ಟ ಕಳೆಯಲು ತನ್ನ ಸಿಬ್ಬಂದಿಗಳ ಕತ್ತಿಗೆ ಕೈಯಿಕ್ಕುತ್ತಿದೆ. ಜನೆರಿಕ್ ಔಷಧಿಗಳ ಅಬ್ಬರದಿಂದಾಗಿ ಫಾರ್ಮಾ ಕಂಪನಿಗಳು ಕಂಗೆಟ್ಟಿವೆ. ರೈತ ಆಕಾಶ ನೋಡುತ್ತಿದ್ದಾನೆ. GST ಬರುವ ಕುರಿತು ಮಾರುಕಟ್ಟೆಯಲ್ಲಿ ಎಲ್ಲೆಡೆ ಕಳವಳ ತುಂಬಿದೆ. ರಿಸರ್ವ್ ಬ್ಯಾಂಕು ತನ್ನ ರೆಪೋ ದರ (ಅದು ಬ್ಯಾಂಕುಗಳಿಗೆ ನೀಡುವ ಸಾಲದ ದರ) ಬದಲಾಯಿಸಿಲ್ಲ, ರಿವರ್ಸ್ ರೆಪೋ ದರದಲ್ಲಿ ಸಣ್ಣದೊಂದು ಬದಲಾವಣೆ ಮಾತ್ರ ಮಾಡಿದೆ… ಹೀಗೆ, ಮಾರುಕಟ್ಟೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಹೇಳುವುದಕ್ಕೆ ಸಾಲು ಸಾಲು ಉದಾಹರಣೆಗಳು ಸಿಗುತ್ತಿವೆ.

ಸಧ್ಯಕ್ಕೆ ಕೇಂದ್ರದಲ್ಲಿ ಆಡಳಿತ್ದಲ್ಲಿರುವ ಪಕ್ಷ ಉತ್ತರಪ್ರದೇಶದಲ್ಲಿ ಚುನಾವಣೆ ಗೆದ್ದಿದೆ ಮತ್ತು ಕೇಂದ್ರ  ಸರ್ಕಾರ ಮೂರು ವರ್ಷ ಪೂರೈಸಿದೆ ಎಂಬುದರ ಹೊರತಾಗಿ ಮಾರುಕಟ್ಟೆಯಲ್ಲಿ “ಪೂರಕ ವಾತಾವರಣಕ್ಕೆ ಇದೇ ಕಾರಣ” ಎಂದು ಖಚಿತವಾಗಿ ಹೇಳಬಹುದಾದ ಯಾವುದೇ ಅಂಶ ಕಾಣುತ್ತಿಲ್ಲ. ಆದರೂ ಮಾರುಕಟ್ಟೆ ಬಲಿಯುತ್ತಿದೆ ಯಾಕೆ?

ಪರಿಣತರಲ್ಲಿ ಈ ಬಗ್ಗೆ ಕೇಳಿದಾಗ ಅವರೊಂದು ಅಚ್ಚರಿಯ ಸಂಗತಿ ಹೊರಹಾಕುತ್ತಾರೆ. Q3 ಯಲ್ಲಿ ನೋಟು ರದ್ಧತಿಯ ಕಾರಣದಿಂದಾಗಿ ಎಲ್ಲ ಉದ್ದಿಮೆಗಳೂ ಹೊಡೆತ ತಿಂದಿದ್ದವು. Q4 ವೇಳೆಗೆ ಚೇತರಿಕೆ ಪ್ರಕ್ರಿಯೆ ಆರಂಭಗೊಂಡಿದೆ. Q3 ಗಿಂತ Q4 ಫಲಿತಾಂಶ ಉತ್ತಮವಾಗಿರುವುದರಿಂದ ಮಾರುಕಟ್ಟೆ ಉತ್ತೇಜಿತವಾಗಿದೆ ಎಂಬುದು ಅವರ ಅಭಿಪ್ರಾಯ.

GDP  ಸೇರಿದಂತೆ ಸರಕಾರ ಒದಗಿಸುತ್ತಿರುವ ಅಂಕಿ-ಅಂಶಗಳ ವಿಶ್ವಾಸಾರ್ಹತೆಯ ಮೇಲೆಯೇ ಪ್ರಶ್ನೆಗಳು ಏಳುತ್ತಿರುವಾಗ ಕೇವಲ Q3 ಗಿಂತ Q4 ನಲ್ಲಿ ಚೇತರಿಕೆ ಇದೆ ಎಂಬ ಕಾರಣಕ್ಕೆ ಸ್ಟಾಕ್ ಮಾರುಕಟ್ಟೆ ಹಠಾತ್ತಾಗಿ ಮೇಲೇರುತ್ತಿದೆ ಎಂಬುದನ್ನು ನಂಬುವುದು ಕಷ್ಟ. ಮಧ್ಯಮ ವರ್ಗ ಕೇಂದ್ರಿತ ಸರ್ಕಾರವೊಂದು ತನ್ನ ಬಲವಾಗಿರುವ ಆ ಮಧ್ಯಮ ವರ್ಗವನ್ನು ಸಮಾಧಾನದಲ್ಲಿಟ್ಟುಕೊಳ್ಳುವುದಕ್ಕೆ ಹೂಡಿರಬಹುದಾದ ಯಾವುದೋ ಮಾನಿಪ್ಯುಲೇಟಿವ್ ತಂತ್ರದ ಫಲ ಇದು ಎಂದೇ ಅನ್ನಿಸುತ್ತಿದೆ. ಇದರಿಂದ ಮಧ್ಯಮ ವರ್ಗ ತತ್ಕಾಲಕ್ಕೆ ಸಂಭ್ರಮದ ನಶೆ ಹತ್ತಿಸಿಕೊಳ್ಳಬಹುದು. ಕೂತುಣ್ಣುವವರಿಗೆ ಕುಡಿಕೆ ಹೊನ್ನು ಸಾಲದೆಂಬ ಮಾತೇ ಇದೆ.  ಸರಕಾರ ಮೂಲ ಸೌಕರ್ಯ ಕ್ಷೇತ್ರಗಳಲ್ಲಿ ಕೈಗಾರಿಕೆಗಳಿಗೆ ಅನುಕೂಲಕರ ವಾತಾವರಣ ಒದಗಿಸದಿದ್ದರೆ, ನಾಳೆ ಇಡಿಯ ಆರ್ಥಿಕತೆ ಕುಸಿಯತೊಡಗಿದಾಗ ಹಿಡಿದು ಆಧರಿಸುವುದು ಕಷ್ಟವಾಗಲಿದೆ.

‍ಲೇಖಕರು avadhi

May 29, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: