
ಲಾವಣ್ಯ ಸಿದ್ದೇಶ್ವರ್
ಕತ್ತಲೊಳಗಿನ ಕಾಡು, ಮಬ್ಬಿನೊಳಗಿನ ಮೋಡ
ಅದೃಶ್ಯ ಜೀವಿಗಳ ಚೀತ್ಕಾರ ಕಿವಿಯೊಳಗೆ
ಕೇಳಿಸಿದರು ಕೇಳದಂತ
ನೀರವತೆಯಲ್ಲಿ ಮಸಣ ಮೌನ
ಸುತ್ತಮುತ್ತ ಬರಿಯ ಗೋರಿಗಳೇ
ಜೀವವಿಲ್ಲದಾತ್ಮದ ಮನೆಗಳು
ಗುಂಪುಗೂಡಿವೆ ಒಂದಷ್ಟು ಸತ್ತ ಭಾವನೆಗಳು
ಕೇಳುತ್ತಿದೆ ಅವುಗಳದೇ ಅತೃಪ್ತ ನರಳಾಟ
ಮತ್ತದೇ ನೀರವತೆಯೊಳಗೆ ಮಸಣ ಮೌನ

ಹತ್ತಿ ಉರಿವ ಚಿತೆಯ ಬೆಂಕಿ
ಭೂದಿ ಭಸ್ಮದೊಳಗೊಂದು ಗಾಥೆ
ಕೇಳಲಾಗದ ಕವಿತೆ
ದ್ವಿಗುಣಗೊಂಡ ನೋವಿರುವ
ಗೋರಿಯ ಮೇಲೊಂದು ಪ್ರಣತೆ
ಅದರ ಬೆಳಕಿನಲ್ಲಿ ಮಸಣ ಮೌನ
ಕೇಳುವವರ್ಯಾರು ಗೋರಿಯೊಳಗಿನ ಕೂಗ
ಬದುಕಿದ್ದಾಗ ಇನ್ನಿಲ್ಲದಂತೆ ಹಪಹಪಿಸಿ
ಇರುವುದ ಬಿಟ್ಟು ಇಲ್ಲದರೆಡೆ ಕೈ ಚಾಚಿ
ಪುಣ್ಯ ಪಾಪಗಳ ಬೆಂಕಿಗೆ ಹೆದರಿ
ನ್ಯಾಯ ಅನ್ಯಾಯದ ತೂಗುಕತ್ತಿಗೆ
ಕೊರಳನೊಡ್ಡಿದ ಆತ್ಮಗಳ
ಚಿರನಿದ್ರೆಯೇ ಮಸಣ ಮೌನ….

ಹಸಿವು ನೀರಡಿಕೆಗಳ ಆಚೆಗಿನ ಬದುಕು
ಶೂನ್ಯ ಲೋಕದೊಳಗಿನ ಕತ್ತಲು
ಕೆಲವು ನಿಷ್ಚಿಂತೆಯ ಸುಖ ನಿದ್ರೆ
ಕೆಲವು ದ್ವೇಷ ಜ್ವಾಲೆಗಳ ಬೆಂಕಿ
ಬಿಡುಗಡೆಯಿಲ್ಲದ ಬಂಧನದೊಳು
ಬಂಧಿಯಾದ ಭಾವವೇ ಮಸಣ ಮೌನ…






0 Comments