ಸುಬ್ರಾಯ ಚೊಕ್ಕಾಡಿ
**
ಕವಿ ಗೋಪಾಲ ತ್ರಾಸಿ ಅವರ ಹೊಸ ಕವನ ಸಂಕಲನ ಬಿಡುಗಡೆಯಾಗಿದೆ.
ಈ ಕೃತಿಗೆ ಖ್ಯಾತ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರು ಬರೆದ ಮುನ್ನುಡಿ ಇಲ್ಲಿದೆ.
**
ಚಿಟ್ಟೆಗಳ ಬೆನ್ನು ಹತ್ತಿದ ಕವಿ: ಗೋಪಾಲ ತ್ರಾಸಿ
**
ಕವಿತೆ ಅನ್ನುವುದು ನಮ್ಮ ಸುತ್ತಲೇ ಹಾರಾಡುವ ಬಣ್ಣದ ಚಿಟ್ಟೆಯ ಹಾಗೆ! ಚಿಟ್ಟೆ ನಮ್ಮ ಸಮೀಪವೇ ಹಾರಾಡುತ್ತಿರುತ್ತದೆ.ಹಿಡಿಯಹೋದರೆ ದೂರ ಹಾರಿ ಹೋಗುತ್ತದೆ.ಬಿಟ್ಟರೆ ನಮ್ಮ ಹೆಗಲ ಮೇಲೋ,ಶರಟಿನ ಮೇಲೋ ಕುಳಿತುಕೊಳ್ಳುತ್ತದೆ ಕಷ್ಟ ಪಟ್ಟು ಹಿಡಿದರೆ ನಮ್ಮ ಮುಷ್ಠಿಯೊಳಗೆ ಸಿಲುಕಿ ರೆಕ್ಕೆ ಕಳೆದುಕೊಂಡೋ ಅಪ್ಪಚ್ಚಿಯಾಗಿಯೋ ಗತಪ್ರಾಣವಾಗುತ್ತದೆ.ಅಪರೂಪಕ್ಕೆ ನಮ್ಮ ಬೊಗಸೆಯೊಳಗೆ ಸುರಕ್ಷಿತವಾಗಿ ಸಿಕ್ಕಿ ರೆಕ್ಕೆ ಫಡಫಡಿಸುತ್ತದೆ! ತನ್ನ ರೆಕ್ಕೆಯ ಬಣ್ಣವನ್ನು ವೈಯಾರದಿಂದ ನಮ್ಮ ಮನಸ್ಸಿನ ಮೇಲೂ ಎರಚುತ್ತದೆ! ಕವಿ ಮಿತ್ರ ಗೋಪಾಲ ತ್ರಾಸಿಯವರೂ ಹೀಗೆ ಕವಿತೆಯೆನ್ನುವ ಬಣ್ಣದ ಚಿಟ್ಟೆಯ ಬೆನ್ನು ಹತ್ತಿದವರು. ಹಾಗೆ ದಕ್ಕಿದ 37 ಕವಿತೆಗಳೆನ್ನುವ ಚಿಟ್ಟೆಗಳು ಈ ಸಂಕಲನದಲ್ಲಿವೆ. ಕವಿತೆಯ ಕುರಿತು ಗೋಪಾಲ್ ಅವರ ಚಿಂತನೆಯನ್ನು ಇಲ್ಲಿರುವ ಕೆಲವು ಕವಿತೆಗಳ ಸಾಲುಗಳು ಸೂಚಿಸುತ್ತವೆ:
ನವುರಾಗಿ ಬಿರಿವ ನಗೆ ಎಸಳು
ಕಣ್ಣಂಚಿನಲಿ ತೇಲುವ ಒಲವು ನೋಟ
ಎದೆಯಾಳಕ್ಕಿಳಿದು ಫಳಫಳಾಯಿಸುವ
ಮಾತಿನ ಹರಳು
ಇಡೀ ಬ್ರಹ್ಮಾಂಡದಲ್ಲೊಂದು
ಹಿಡಿಯಷ್ಟು ಭರವಸೆ ಕಿಟಕಿ
ಸಾಕಲ್ಲ ಉಸಿರಾಡಲು
ಹೊಸತೇ ಆದೊಂದು ಕವಿತೆ.
(ಹೊಸತು)
× × × × ×
ಶಬ್ದ ನಿಶ್ಶಬ್ದ
ಸಾಂಗತ್ಯದೊಳಗಣ
ಧ್ಯಾನಸ್ಥ ದಿವ್ಯ
(ಕವಿತೆ)
× × × × ×
ಊಹೆಗಿಂತ ಅನುಭವ
ಕವಿಗಿಂತ
ಕವಿಯ ಹಂಗು ತೊರೆದ ಕವಿತೆ
ಮಿಗಿಲು ದಿಗಿಲು
(ಮೋಡರ್ನ್ ಕವಿತೆಯೊಂದಿಗೆ…)
ಗೋಪಾಲ್ ಅವರು ಮೂಲತಃ ಚಿಂತನಶೀಲ ಕವಿ. ಕವಿತಾ ರಚನೆಗೆ ಒಂದು ಧ್ಯಾನಸ್ಥ ಮನೋಸ್ಥಿತಿ ಅವಶ್ಯವೆಂದು ಗೋಪಾಲರ ನಂಬಿಕೆಗೆ
ಅನುಗುಣವಾದ ಅನೇಕ ಕವಿತೆಗಳು ಇಲ್ಲಿವೆ. ಅವು ತನ್ನ ಸುತ್ತಲಿನ ಪ್ರಕೃತಿ ಹಾಗೂ ಪರಿಸರವನ್ನು ಧ್ಯಾನಿಸಿದ, ಅನುಭವಿಸಿದ ಒಂದು ಬಗೆಯ
ಆಧ್ಯಾತ್ಮಿಕ ಅನುಭೂತಿಯತ್ತ ಚಲಿಸಿದ ಫಲವಾಗಿ ಹುಟ್ಟಿದ ಕವಿತೆಗಳು. ‘ಬೊಗಸೆಯೊಡ್ಡುವ’, ‘ವೃತ್ತದಿಂದಾಚೆ’, ‘ಶರಾವತಿ’, ‘ಚಿತ್ರ ಚೌಕಟ್ಟಿನಾಚೆ’, ‘ಲೋಕಲ್ ರೈಲಿನೊಳಗಣ’, ‘ಬಣ್ಣಗಳು’, ಮೊದಲಾದ ಕವಿತೆಗಳು ಅವರ ಚಿಂತನಶೀಲತೆಯ ಸ್ವರೂಪವನ್ನು ಸ್ಪಷ್ಟ ಪಡಿಸುತ್ತವೆ.’ ಕವಿಯ ಮನದಾಳದಲ್ಲಿ ಹುಟ್ಟಿದ ಈ ಕವಿತೆಗಳೊಂದಿಗೆ ಕಟ್ಟಿದ, ಲಘು ವಿಡಂಬನೆಯ ಸರಳ ಕವಿತೆಗಳೂ ಇಲ್ಲಿವೆ. ‘ಬೇಕಿತ್ತಾ ಈ ಅಧ್ಯಕ್ಷಗಿರಿ’, ‘ಅಭಗ್ನ’ ಮೊದಲಾದವು ಈ ಬಗೆಯ ಹೊರಮೈಯ ರಚನೆಗಳು. ಆದರೆ ಇಂಥವುಗಳ ಸಂಖ್ಯೆ ಈ ಸಂಕಲನದಲ್ಲಿ ತುಂಬಾ ಕಡಿಮೆ.
ನಾನು ಮೊದಲೇ ಹೇಳಿದಂತೆ ಚಿಟ್ಟೆಗಳನ್ನು ಬೆಂಬತ್ತಿದ ಗೋಪಾಲರಿಗೆ ಕೆಲವು ಚಿಟ್ಟೆಗಳು ಅವರ ಬೊಗಸೆಯಲ್ಲಿ ಜೀವಂತವಾಗಿ ರೆಕ್ಕೆ ಬಡಿಯುತ್ತಾ ಕಂಗೊಳಿಸುತ್ತಾ ಇವೆ. ಇನ್ನು ಕೆಲವು ಹಿಡಿಯುವ ರಭಸದಲ್ಲಿ ಕೈಗೆ ಸಿಕ್ಕಿ ಗತಪ್ರಾಣವಾಗಿವೆ. ಕೆಲವುಗಳ ರೆಕ್ಕೆಯ ಚೂರು, ಹಳದಿ ಬಣ್ಣವಷ್ಟೇ ದಕ್ಕಿದರೆ, ಉಳಿದಂತೆ ಬೊಗಸೆಗೆ ದಕ್ಕದೆ ಕವಿಯನ್ನು ಆಟವಾಡಿಸುತ್ತಾ ದೂರ ಮರೆಯಾದವೂ ಇವೆ. ದಕ್ಕಿದಷ್ಟು ಕವಿಯ ಭಾಗ್ಯ ಅಲ್ಲವೇ? ಕವಿತೆಯನ್ನು ವಿವರಿಸಲು ಹೋಗಬಾರದು,ಅದು ಓದುಗನ ಅನುಭವಕ್ಕೆ ದಕ್ಕುವುದೇ ಮುಖ್ಯ ಅನ್ನುವವ ನಾನು.ಗೋಪಾಲರ ಈ ಕವಿತೆಗಳು ಓದುಗನ ಅನುಭವಕ್ಕೆ ದಕ್ಕಲಿ ,ಹಾಗೆ ದಕ್ಕಿದಾಗ ಮಾತ್ರ ಕವಿಯ ಶ್ರಮ ಸಾರ್ಥಕವಾಗುತ್ತದೆ.
ಕವಿ ಗಂಗಾಧರ ಚಿತ್ತಾಲರ ‘ಕವನ’ ಎನ್ನುವ ಕವಿತೆಯೊಂದರ ಸಾಲುಗಳು ಹೀಗಿವೆ:
ಈ ಮುಖೋದ್ಗತ ನಿನ್ನ ಹೃದ್ಗತವೆ ಆದ ದಿನ
ಸುದಿನ.
ಆ ವರೆಗು ಇದು
ತಕ್ಕ ಮಣ್ಣಿನ ತೇವಕಾಗಿ ಕಾದೇ ಇರುವ
ಬೀಜ.
ಆ ಸುದಿನ ಗೋಪಾಲರಿಗೂ ಬರಲಿ ಎಂದು ನಾನು ಹೃತ್ಪೂರ್ವಕವಾಗಿ ಹಾರೈಸುತ್ತೇನೆ.
ಹಿರಿಯರಾದ ಸುಭ್ರಾಯ ಚೊಕ್ಕಾಡಿ ಸರ್ ಅವರಿಗೆ ಗೌರವಪೂರ್ಣ ವಂದನೆಗಳು. ಧನ್ಯವಾದ ಮೋಹನ್ ಮತ್ತವರ ಅವಧಿ ತಂಡಕ್ಕೆ.