ಗಿರಿಜಾ ಶಾಸ್ತ್ರಿ
ಜಂಕ್ಷನ್

ಯಾವುದೋ ಜಂಕ್ಷನ್ನಿನಲ್ಲಿ ನೀನು
ಕಂಡು ಕ್ಷಣ ಕಣ್ಮರೆಯಾದ
ಲೈಟುಕಂಬ ನಾನು
ಮುನಿಸಿಕೊಳ್ಳಲು ನನಗಾವ ಹಕ್ಕಿದೆ
ಸವಾಲೆಸೆಯಲು
ಗೋತ ಹೊಡೆದ ಗಾಳಿಪಟಕ್ಕೆ
ದಾರದ ಹಂಗೆಲ್ಲಿದೆ
ನಿಂತಲ್ಲೆ ನಿಂತಿರುವೆ ತುಕ್ಕುಹಿಡಿದು
ರೈಲುಗಳೆಷ್ಟೋ ಹರಿದು ಹೋಗಿವೆ
ನನ್ನಣಕಿಸುತ್ತಾ ಸೀಟಿಹೊಡೆದು
ಹಳದಿ ಹಸಿರು ಕೆಂಪು
ಕಣ್ ಪಿಳಕಿಸುತ್ತಾ
ಹಳಿಗಳ ಬೆಂಗಾವಲಿಗೆ
ಕಾಯುತ್ತಾ ಇದ್ದೇನೆ ಆ ಗಾಡಿಗೆ..
***
ಎರೆಹುಳು
ಅತೃಪ್ತಿ ಎಂಥದೋ
ಒದ್ದುಕೊಂಡು ಬರುತ್ತದೆ ಒಳಗಿನಿಂದ
ಕೂತಲ್ಲಿ ನಿಂತಲ್ಲಿ ಕಡೆಗೆ ಕನಸಿನಲ್ಲೂ
ಸೂಜಿ ಮೊನೆ ಚುಚ್ಚುತ್ತದೆ ಸದಾ
ಮದ್ದು ಹಚ್ಚುವುದೆಲ್ಲಿಗೆ
ಕಣ್ಣಿಗೇ ಕಾಣದ ಬೆನ್ನು ಫಣಿಗೆ
ಮುದ್ದಾದ ಮಕ್ಕಳೆರಡು
ಅವರ ಪಾಡಿಗೆ ಅವು
‘ಬೆಚ್ಚನೆಯ ಮನೆ’ ‘ವೆಚ್ಚಕ್ಕೆ ಹೊನ್ನು’
ಇಚ್ಛೆಗೆ ಎಂದೂ ಇದಿರಾಡದ ಪತಿ
ಎಲ್ಲ ಇದ್ದೂ………….
ಬುಳ ಬುಳ ಹರಿದಾಡುತ್ತದೆ ಎರೆಹುಳ
ಮಳೆಗಾಲದ ಬಚ್ಚಲಲ್ಲಿ ವಿಲವಿಲ
ರಟ್ಟೆ ಮುರಿಯುವವರೆಗೆ ಪಾಚಿ ತಿಕ್ಕಿದರೂ
ಹೋಗದು ಇದು
ಎಷ್ಟು ಉಪ್ಪು ಸುರಿದರೂ ಸಾಯದು







Dear sir, thanks for publishing my poem
I liked the simple but meaningful poem.
ಗಿರಿಜಾ ಶಾಸ್ತ್ರಿಯವರೇ , ಮಳೆಗಾಲದ ಬಚ್ಚಲಲ್ಲಿ ಹರಿದಾಡುವುದು ಎರೆಹುಳ ಅಲ್ಲ. ಯಾವುದೋ ಕೆಲಸಕ್ಕೆ ಬಾರದ ರೋಗ ತರುವ ಕೆಟ್ಟ ಹುಳ.ಕಸ ಕಡ್ಡಿಗಳನ್ನು ತಿಂದು ರಸಸಾರಗಳ ನೀಡಿ , ಭೂಮಿ ತಾಯಿ ಯನ್ನು ಇನ್ನೂ ಕಾಪಾಡುತ್ತಿರುವ ಎರೆ ಹುಳುವನ್ನು ಅಷ್ಟು ನಿಕೃಷ್ಟವಾಗಿ ಕಾಣ ಬೇಡಿ.
ಅದೇನ್ ಚೆನ್ನಾಗಿ ಬರಿತೀರಿ ಮೇಡಂ ನೀವು !
erehulu roopaka sariyenisalilla.erehulu jeevavirodhiyalla.
yes ur right It should “Bachchala huLa”
ಚೆನ್ನಾಗಿದೆ..