ಗೊರೂರು ಶಿವೇಶ್ ನೋಡಿದ ‘ಸಲಾರ್’

ವಾತ್ಸಲ್ಯದ ಬಂಧನ, ಸ್ನೇಹದ ಸಂಕೋಲೆ ಮತ್ತು ಖಾನ್ಸರ್  ಕೋಟೆ

ಗೊರೂರು ಶಿವೇಶ್

**

ಚುನಾವಣೆ ಮತ್ತು ಕ್ರಿಕೆಟ್ ಇಂದಿನ ದಿನಮಾನಗಳಲ್ಲಿ ಭಾರತೀಯರ  ಆಸಕ್ತಿಗಳು, ಕೆಲವರಿಗಂತು ವ್ಯಸನಗಳು. ಚುನಾವಣೆಯಲ್ಲಿ  ಅದರಲ್ಲೂ ವಿಧಾನಸಭಾ ಚುನಾವಣೆಗಳು  ಘೋಷಣಾರಂಭದಿಂದ ಪಲಿತಾಂಶ  ಬಂದು ಸರ್ಕಾರ ಸ್ಥಾಪಿತವಾಗುವವರೆಗೂ  ಜನರ ಗಮನವೆಲ್ಲ ಅತ್ತ ಕಡೆಯೇ. ಅನೇಕ ಚುನಾವಣೆಗಳ ಫಲಿತಾಂಶಗಳು ನೆಕ್ ಟು ನೆಕ್ ಫೈಟ್ ಆಗಿ ಮತದಾರರ ಕುತೂಹಲವನ್ನು ಗರಿಗೆದರಿಸುವುದರ ಜೊತೆಗೆ ಸರ್ಕಾರ ರಚನೆಯ ಹಿನ್ನೆಲೆಯ ತಂತ್ರಗಳು ಪ್ರತಿ ತಂತ್ರಗಳ ಸುದ್ದಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರಿಸಿ  ಜನಸಾಮಾನ್ಯರನ್ನು ಕೂಡ ರಾಜಕೀಯ ಕಡೆಗೆ ಸೆಳೆವಂತೆ ಮಾಡಿದೆ.

ಇನ್ನು ಮೊನ್ನೆ ಮೊನ್ನೆ ನಡೆದ ಉಪ ಹರಾಜಿನಲ್ಲಿ ಆಸ್ಟ್ರೇಲಿಯಾದ ಆಟಗಾರರು ಐಪಿಎಲ್ ನಲ್ಲಿ  ಬಹುಮಾನದ ಹಣದ ಮೊತ್ತಕ್ಕಿಂತ ಹೆಚ್ಚು  ಹಣಕ್ಕೆ ಹರಾಜ್ ಆಗಿದ್ದು ಸರ್ವ ವಿಧಿತ. ಈ ಎರಡು ಅಂಶಗಳನ್ನು ಭಾರತೀಯರ ಮತ್ತೊಂದು ಕ್ರೇಜ್ ಆದ ಸಿನಿಮಾಗಳಲ್ಲಿ ಮೇಳೈಸಿ ಅದಕ್ಕೆ ಭಾರತೀಯರ ಭಾವನಾತ್ಮಕ ಪ್ರಪಂಚದ  ಮೂಲಸೆಲೆಯಾದ ತಾಯಿ ಪ್ರೇಮ, ಜೊತೆಗೆ ಜೀವದ ಗೆಳೆಯರ  ಸ್ನೇಹ- ದ್ವೇಷದ  ಎಳೆಯನ್ನು ಬೆರೆಸಿ ಅದಕ್ಕೆ ಹೊಡಿ ಬಡಿ ಸಾಹಸ ದೃಶ್ಯಗಳನ್ನು  ಸಿಂಗರಿಸಿ ತಯಾರಾದ ಸಲಾರ್ ಚಿತ್ರ ಬಿಡುಗಡೆಯಾಗಿ ಬಾಕ್ಸಾಫೀಸ್ ನಲ್ಲಿ ದೊಡ್ಡ ಗದ್ದಲ ಉಂಟು ಮಾಡುತ್ತಿದೆ. ಬಿಡುಗಡೆಯಾದ ಎರಡೆ ದಿನಕ್ಕೆ ಹಾಕಿರುವ ಬಂಡವಾಳವನ್ನು ಹಿಂದಿರುಗಿಸಿರುವುದಲ್ಲದೆ ಮತ್ತೊಂದು ಸಹಸ್ರ ಕೋಟಿ ಚಿತ್ರವಾಗುವ ಕಡೆಗೆ ಸಾಗಿದೆ. 

ಪ್ರಶಾಂತ ನೀಲ್ ರವರ ಹಿಂದಿನ ಉಗ್ರಂ, ಕೆಜಿಎಫ್ 1-2 ಚಿತ್ರಗಳನ್ನು ನೋಡಿದವರಿಗೆ ಈ ಚಿತ್ರದಲ್ಲಿ ವಿಶೇಷವೇನು ದಕ್ಕದು. ಲಿಮಿಟೆಡ್ ಬಜೆಟ್ ನ ಹಾಗೂ ಮಾರ್ಕೆಟ್ ನ ಕಾರಣದಿಂದಾಗಿ ಉಗ್ರಂನಲ್ಲಿ ತೋರಿಸಲಾಗುವುದನ್ನು ಇಲ್ಲಿ ವಿಶಾಲವಾದ ಕ್ಯಾನ್ವಾಸ್ ನಲ್ಲಿ ದುಬಾರಿ ಸೆಟ್ಟಿನಲ್ಲಿ ತೋರಿಸಲಾಗಿದೆಯಾದರೂ ಸಲಾರ್ ಭಾಗ ಒಂದರ ಕಥಹಂದರ ಅದೇ. ಆದರೆ ಚಿತ್ರಕಥೆಯನ್ನು ಅವರು ಹೆಣೆದ ರೀತಿ  ಮೆಚ್ಚುಗೆಗೆ ಪಾತ್ರವಾಗುತ್ತದೆ.

ಅಧಿಕಾರದ ಗದ್ದುಗೆಯೇರಲು ಈಗಿನ  ಚುನಾವಣಾ  ಟ್ರೆಂಡಿನಲ್ಲಿ ಯಾವ ಪಕ್ಷ ಎಷ್ಟು ಸೀಟು ಎಂಬುದರ  ಹೊಯ್ದಾಟ ನಿರ್ದೇಶಕರನ್ನು ಆಕರ್ಷಿಸಿರುವಂತಿದೆ  ಹಾಗಾಗಿಯೇ ಮೂರು ಬುಡಕಟ್ಟು ಸಮುದಾಯದ ಕಾಲ್ಪನಿಕ  ಸ್ವಾಯತ್ತ ಸಂಸ್ಥಾನದ ಒಡೆಯನನ್ನು ಚುನಾಯಿಸಲು ನೂರಾಒಂದು ಸದಸ್ಯರು, ಐಪಿಎಲ್ ನಂತೆ  ಇಲ್ಲಿ ಹೋರಾಟದ ಕದನ ಕಣಕ್ಕಿಳಿಯುವ ದೇಶ ವಿದೇಶಗಳ  ಇಂಗ್ಲಿಷ್ ಟೈಟಲ್ ಗಳ ತಂಡಗಳ ಪರಿಚಯವನ್ನು ಅಷ್ಟೇ ಮಾಡಿದ್ದು ಹಣಾಹಣಿಯನ್ನು ನೋಡಲು ಭಾಗ ಎರಡನ್ನು ಕಾಯಬೇಕಾಗಿದೆ. 

ತನ್ನ ತಾಯಿಯ ಅಂತ್ಯಸಂಸ್ಕಾರಕ್ಕಾಗಿ ವಿದೇಶದಿಂದ ಬಂದಿಳಿಯುವ ನಾಯಕಿಗೆ ಆರಂಭದಲ್ಲೇ ವೈರಿಗಳಿಂದ ಆತಂಕ. ಅವಳನ್ನು ಬೇಟೆಯಾಡಲು ವ್ಯೂಹ ರಚಿಸಿರುವ ಶತ್ರುಪಡೆಯಿಂದ ರಕ್ಷಿಸಲು  ಇರುವ ಏಕೈಕ ವ್ಯಕ್ತಿ ಯ  ಬಳಿ  ಆಕೆಯ ತಂದೆಯ ನಿರ್ದೇಶನದಂತೆ ಕರೆದೊಯ್ಯುವಾಗ ಹೀರೋ ಯಾರು ಏನು ಏಕೆ ಹೇಗೆ ಎಂಬ  ಆಕೆಯ ಪ್ರಶ್ನೆಗಳಿಗೆ ಉತ್ತರದ  ರೂಪದಲ್ಲಿ ಚಿತ್ರ ತೆರೆಯುತ್ತಾ ಹೋಗುತ್ತದೆ .

ಸ್ವಾಯತ್ತ ಪ್ರಾಂತ್ಯ ಖಾನ್ಸಾರ್‌ನಲ್ಲಿ  ಇರುವ  ಮೂರು ಬುಡಕಟ್ಟು ಜನಾಂಗ, ಅದರ ವಂಶವಾರು ಅಧಿಪತಿಗಳು, ಪ್ರಾಂತ್ಯದ  ಆಡಳಿತದ ವಿಧಿ ವಿಧಾನಗಳನ್ನು ತಿಳಿಸುವ ಸಂವಿಧಾನ,  ಅಧಿಕಾರ ಏರುವ ಹಾಗೂ ಆಳ್ವಿಕೆಗಾಗಿ  ತಡೆಯುಡ್ಡುವ  ಹುನ್ನಾರಗಳು ಹೀಗೆ ಅದರ ಸಾವಿರ ವರ್ಷಗಳ ಇತಿಹಾಸ ಹೇಳುತ್ತಾ ಸಾಗಿ ಪ್ರಸ್ತುತ  ಘಟ್ಟದಲ್ಲಿ ಕದನ ವಿರಾಮ ವಿದ್ದು ಅದನ್ನು ಮುರಿಯಲು ಈಗ 21 ದಿನಗಳ  ಗಡುವು. ಆ  ಗಡುವಿನ ದಿನ   ಸಮೀಪಿಸುತ್ತಿದ್ದಂತೆ ಮೂರು ತಂಡಗಳ 101  ಸದಸ್ಯರನ್ನು ಸೆಳೆಯಲು ಹೆಣೆಯುವ ತಂತ್ರಗಳನ್ನು ಕುತೂಹಲಕರವಾಗಿ ನಿರೂಪಿಸುತ್ತಾ ಕ್ಲೈಮ್ಯಾಕ್ಸ್ ಅನ್ನು ತಲುಪುತ್ತದೆ. ಚಿತ್ರದ ಅಂತ್ಯದಲ್ಲಿ ಆತ್ಮೀಯ ಸ್ನೇಹಿತರು ಕಡು ವೈರಿಗಳಾಗುವ  ಸಂದರ್ಭ ಸೃಷ್ಟಿಸಿ  ಅವರಿಬ್ಬರ ಹೋರಾಟವು ಚಿತ್ರದ ಎರಡನೇ ಭಾಗ ಶೌರ್ಯಂಗ ಪರ್ವದಲ್ಲಿ ಮುಂದುವರಿಯಲಿದೆ.

ಜಾನಪದ ಶೈಲಿಯ ಈ ದೀರ್ಘ ಕಥಾನಕವನ್ನು ಹೀರೋಯಿನ್ ಗೆ ತನ್ಮೂಲಕ ಪ್ರೇಕ್ಷಕರಿಗೆ ಚಕಚಕನೆ ಹೇಳುವ ನಿರ್ದೇಶಕರು ಕೆಲವು ಮಹತ್ವದ ಸನ್ನಿವೇಶಗಳನ್ನು  ವೇಗವಾಗಿ ಹೇಳಿ ಸಾಹಸ ದೃಶ್ಯಗಳಿಗೆ ಹೆಚ್ಚು ಒತ್ತು ನೀಡಿರುವುದರಿಂದ ಚಿತ್ರದ ಕಥಾ ಸುಂದರವನ್ನು ನೀವು ತಿಳಿಯಬೇಕೆಂದರೆ ಮತ್ತೊಮ್ಮೆ ಸಿನಿಮಾ ನೋಡಬೇಕು, ಇಲ್ಲವೇ ಚಿತ್ರ ಓಟಿಟಿಯಲ್ಲಿ ಬಿಡುಗಡೆಯಾಗುವುದನ್ನು ಕಾಯಬೇಕು. ಚಿತ್ರ ತಾಂತ್ರಿಕತೆಯಲ್ಲಿ ಆಧುನಿಕವಾದರೂ ಬಳಸಿರುವ ಆಯುಧಗಳು ಮಚ್ಚು, ಕತ್ತಿ, ಕೊಡಲಿ, ಹಾರೆ, ಪಿಕಾಶಿ ಮುಂತಾಗಿ ಶಿಲಾಯುಗದ ಆಯುಧಗಳು. ಹಾಗಾಗಿ ಸೀಳುವ, ಸಿಗಿಯುವ ,ಕೊಚ್ಚುವ ದೃಶ್ಯಗಳು ಸಾಕಷ್ಟಿವೆ. 

ಪ್ರಮುಖ ಹೀರೋಗಳದ ಪ್ರಭಾಸ್ ಮತ್ತು ಪೃಥ್ವಿರಾಜ್ ತೆಲುಗು ಮಲಯಾಳಂನವರಾದರೆ ಉಳಿದಂತೆ ತಾಂತ್ರಿಕ ತಂಡ, ಛಾಯಾಗ್ರಹಕ ಭುವನ ಗೌಡ ಹಾಗೂ ಸಂಗೀತ ನಿರ್ದೇಶಕರ ರವಿ ಬಸ್ರೂರು ಹಾಗೂ ಸಹನಟರಲ್ಲಿ  ರವಿ ಭಟ್, ನವೀನ್, ಶಂಕರ್, ಗರುಡಾರಾಮ್, ದೇವರಾಜ್  ಮುಂತಾಗಿ ಅನೇಕರು ಕನ್ನಡಿಗರು. ಕೆಜಿಎಫ್ ನಲ್ಲಿರುವಂತೆ ಇಲ್ಲಿಯೂ ಕರಾಳ ಕಪ್ಪು ಹಿನ್ನೆಲೆಯಲ್ಲಿ ಚಿತ್ರ ಹಿನ್ನೆಲೆಯಲ್ಲಿ ಛಾಯಾಗ್ರಹಕ ಭುವನ್ ಗೌಡರ ಕೈಚಳಕ ಮೆಚ್ಚುಗೆಗೆ ಪಾತ್ರವಾದರೆ ಸಾಧಾರಣ ಸನ್ನಿವೇಶಕ್ಕೆ ಎದೆ ನಡುಗಿಸುವ ಸದ್ದು ನೀಡಿ ಆಗಾಗ  ಬೆಚ್ಚಿ ಬೀಳಿಸುವ ರವಿ ಬಸ್ರೂರು ಗಮನಸೆಳೆಯುತ್ತಾರೆ. 

‍ಲೇಖಕರು avadhi

December 26, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: